ಗೌರಿ ಹತ್ಯೆಗೈದ ಅನಾಮಧೇಯ ಸಿಂಡಿಕೇಟ್‌: ಆ ಮೂರು ಗುಂಡುಗಳ ಹಿಂದಿತ್ತು 7 ವರ್ಷಗಳ ‘ಸನಾತನ ಷಡ್ಯಂತ್ರ’!
GAURI LANKESH FILES

ಗೌರಿ ಹತ್ಯೆಗೈದ ಅನಾಮಧೇಯ ಸಿಂಡಿಕೇಟ್‌: ಆ ಮೂರು ಗುಂಡುಗಳ ಹಿಂದಿತ್ತು 7 ವರ್ಷಗಳ ‘ಸನಾತನ ಷಡ್ಯಂತ್ರ’!

ಈ ಕ್ಷಣದವರೆಗೂ ಮಾಹಿತಿ ಪ್ರಪಂಚದಿಂದ ದೂರವೇ ಉಳಿದಿರುವ ಗೌರಿ ಹತ್ಯೆ ಪ್ರಕರಣದ ದೋಷಾರೋಪ ಪಟ್ಟಿಯ ವಸ್ತುನಿಷ್ಟ ಮಾಹಿತಿ ಇಲ್ಲಿದೆ.

2017ರ ಸೆಪ್ಟೆಂಬರ್‌ 5ನೇ ತಾರೀಕು. ಬೆಂಗಳೂರಿನ ರಾಜರಾಜರಾಜೇಶ್ವರಿ ನಗರದ ಐಡಿಯಲ್‌ ಟೌನ್‌ಶಿಪ್‌ನಲ್ಲಿ ಗೌರಿ ಲಂಕೇಶ್‌ ಹತ್ಯೆ ನಡೆದು ಹೋಗಿತ್ತು. ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಅವತ್ತೇ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಿತ್ತು. ಸುಮಾರು 100 ಜನ ಅಧಿಕಾರಿಗಳು, ಸಿಬ್ಬಂದಿಗಳ ತಂಡ ಮುಂದಿನ 14 ತಿಂಗಳುಗಳ ಕಾಲ ನಡೆಸಿದ ತನಿಖೆಯ ಫಲಿತಾಂಶವೀಗ ನ್ಯಾಯಾಲಯದ ಮುಂದಿದೆ.

ಸುಮಾರು 2010ರಲ್ಲಿ ಗೋವಾದಲ್ಲಿ ಆರಂಭಗೊಂಡ ‘ಸನಾತನ ಷಡ್ಯಂತ್ರ’ವೊಂದು ಹೇಗೆ ಮತ್ತು ಯಾಕೆ ಗೌರಿಯನ್ನು ಕೊಂದು ಹಾಕಿತು ಎಂಬುದನ್ನು ಈ ಪೊಲೀಸ್‌ ದಾಖಲೆಗಳು ಎಳೆ ಎಳೆಯಾಗಿ ಬಿಚ್ಚಿಟ್ಟಿವೆ. ಜತೆಗೆ, ತನಿಖಾಧಿಕಾರಿಗಳು 1,053 ವಸ್ತು ಹಾಗೂ ವರದಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಪೂರಕವಾಗಿ ನೀಡಿದ್ದಾರೆ. ಒಟ್ಟು 482 ಸಾಕ್ಷಿಗಳನ್ನು ಹೆಸರಿಸಿದ್ದು, ಅವುಗಳನ್ನು ಗೌಪ್ಯವಾಗಿಡಲು ನ್ಯಾಯಾಲಯವನ್ನು ಕೋರಲಾಗಿದೆ.

ಈ ಕ್ಷಣದವರೆಗೂ ಮಾಹಿತಿ ಪ್ರಪಂಚದಿಂದ ದೂರವೇ ಉಳಿದಿರುವ ಗೌರಿ ಹತ್ಯೆ ಪ್ರಕರಣದ ದೋಷಾರೋಪ ಪಟ್ಟಿಯ ವಸ್ತುನಿಷ್ಟ ಮಾಹಿತಿ ಇಲ್ಲಿದೆ.

ಕ್ಷಾತ್ರಧರ್ಮ ಪಾಲನೆ:

ಎಸ್‌ಐಟಿ ಸಲ್ಲಿಸಿರುವ ದೋಷಾರೋಪ ಪಟ್ಟಿಯ ಪ್ರಕಾರ, ‘ಅನಾಮಧೇಯ ಹಾಗೂ ಗೌಪ್ಯ ಸಿಂಡಿಕೇಟ್‌ ಒಂದು ಗೌರಿ ಲಂಕೇಶ್ ಹತ್ಯೆಯನ್ನು ನಡೆಸಿದೆ. ಇದರ ರಚನೆ ಹಿಂದಿರುವುದು ಡಾ. ವೀರೇಂದ್ರ ತಾವಡೆ. 2010ರ ಸುಮಾರಿಗೆ ತಾವಡೆ ನೇತೃತ್ವದಲ್ಲಿ ಸನಾತನ ಸಂಸ್ಥೆಗೆ ಸೇರಿದ ಶಶಿಕಾಂತ್‌ ಸೀತಾರಾಮ ರಾಣೆ ಅಲಿಯಾಸ್‌ ಕಾಕಾ ಮಾರ್ಗದರ್ಶನದಲ್ಲಿ ಈ ಸಿಂಡಿಕೇಟ್‌ ಆರಂಭವಾಯಿತು. ತನ್ನದೇ ಆದ ಆಂತರಿಕವಾಗಿ ‘ತಪ್ಪಿಸಿಕೊಳ್ಳುವ ಮಾರ್ಗ’ಗಳನ್ನು ಕಂಡುಕೊಂಡಿದ್ದ ಸದಸ್ಯರು, ತಮ್ಮ ನೈಜ ಹೆಸರನ್ನು ಬದಲಿಲಾಯಿಸಿಕೊಂಡಿದ್ದರು. ‘ನಿಕ್‌ ನೇಮ್‌’ಗನ್ನೇ ತಮ್ಮ ನಿತ್ಯ ಸಂಭಾಷಣೆಯಲ್ಲಿ ಬಳಸುವ ನಿಯಮ ಸೆರೆ ಸಿಕ್ಕಿರುವ ಆರೋಪಿಗಳು ರೂಢಿಸಿಕೊಂಡಿದ್ದರು’.

‘ಸಿಂಡಿಕೇಟ್‌ನಲ್ಲಿ ಕಾರ್ಯಚಟುವಟಿಕೆಗಳ ಭಾಗವಾಗಿ, ಸದಸ್ಯರ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ವಿಡಿಯೋಗಳನ್ನು ತೋರಿಸಲಾಗುತ್ತಿತ್ತು. ಆಕ್ರಮಣಕಾರಿ ಮನಸ್ಥಿತಿ ಹೊಂದಿರುವವರನ್ನು ಹುಡುಕಿ ಸಿಂಡಿಕೇಟ್‌ಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಇವೆಲ್ಲದಕ್ಕಿಂತ ಹೆಚ್ಚಾಗಿ ಸನಾತನ ಸಂಸ್ಥೆ ಪ್ರಕಟಿಸಿದ ‘ಕ್ಷಾತ್ರಧರ್ಮ ಪಾಲನೆ’ಯನ್ನೇ ತನ್ನ ಮೂಲ ಸೈದ್ಧಾಂತಿಕ ತಳಹದಿಯನ್ನಾಗಿ ಇದು ಎತ್ತಿಕೊಂಡಿಲ್ಲ. ಇದರಲ್ಲಿ ಹೇಳಿದಂತೆ, ತಮ್ಮ ಸನಾತನ ನಂಬಿಕೆಗಳನ್ನು ವಿರೋಧಿಸುವವರನ್ನು ‘ದುರ್ಜನರು’ ಎಂದು ಪರಿಗಣಿಸಿ ಕೊಲ್ಲಲು ಸಂಚು ರೂಪಿಸಲಾಗುತ್ತಿತ್ತು. ಸಿಂಡಿಕೇಟನ್ನು ಭಾಷಾವಾರು, ಪ್ರಾಂತವಾರು ಸಂಚಾಲಕರುಗಳ ಮೂಲಕ ಮುನ್ನಡೆಸಿಕೊಂಡು ಬರಲಾಗುತ್ತಿತ್ತು’ ಎಂದು ದೋಷಾರೋಪ ಪಟ್ಟಿಯ ಸಾರಾಂಶದ ಆರಂಭದ ಸಾಲುಗಳು ಹೇಳುತ್ತವೆ.

ತಾವಡೆ ಅರೆಸ್ಟ್‌:

ಅದು 2016; ಅಷ್ಟೊತ್ತಿಗಾಗಲೇ ನರೇಂದ್ರ ದಾಬೋಲ್ಕರ್‌ ಹತ್ಯೆ ಸದ್ದು ಮಾಡಿತ್ತು. ಪ್ರಕರಣವನ್ನ ಕೈಗೆತ್ತಿಕೊಂಡ ಸಿಬಿಐ ತಾವಡೆಯನ್ನು ಬಂಧಿಸಿತ್ತು. ‘ಇದರಿಂದ ಅಮೋಲ್‌ ಕಾಳೆ ಈ ಅನಾಮಧೇಯ ಸಿಂಡಿಕೇಟ್‌ನ್ನು ಮುಂದುವರಿಸುವ ಹೊಣೆಗಾರಿಕೆ ವಹಿಸಿಕೊಂಡ. ಮೊದಲೇ ಹೇಳಿದಂತೆ ತನ್ನದೇ ಆದ ಆಂತರಿಕ ನಿಯಮಾವಳಿಗಳನ್ನು ರೂಪಿಸಿಕೊಂಡಿದ್ದ ಸಿಂಡಿಕೇಟ್‌ನ ಸದಸ್ಯರು ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದು ನಿಲ್ಲಿಸಿದ್ದರು. ಬೇಸಿಕ್‌ ಹ್ಯಾಂಡ್‌ಸೆಟ್‌ಗಳಿಗೆ ಹೊಸ ಸಿಮ್‌ಗಳನ್ನು ಖರೀದಿಸಿದ್ದರು. ಇದರಲ್ಲಿ ‘ಒನ್‌ ಟು ಒನ್‌’ ಕರೆಗಳನ್ನು ಮಾತ್ರ ಮಾಡಿಕೊಳ್ಳುತ್ತಿದ್ದರು. ಈಗಾಗಲೇ ಹೊರ ಬಿದ್ದಿರುವ ಈ ಕುರಿತಾದ ವರದಿಗಳಲ್ಲಿ ಹೇಳಿದಂತೆ ಸಿಂಡಿಕೇಟ್‌ ಸದಸ್ಯರು ತಮ್ಮ ಗುರಿ ಸಾಧನೆಗಾಗಿ ಪ್ರತ್ಯೇಕ ಕೋಡ್‌ ವರ್ಡ್‌ಗಳನ್ನು ಬಳಸಲು ಆರಂಭಿಸಿದ್ದರು. ಸಾಹಿತ್ಯ ಎಂದರೆ ಪಿಸ್ತೂಲ್‌, ಲಡ್ಡು ಎಂದರೆ ನಾಡ ಬಾಂಬು, ಇವೆಂಟ್‌ ಎಂದರೆ ಕೊಲೆ ಮಾಡುವ ಕೃತ್ಯ ಹೀಗೆ ಹಲವು ಅಗತ್ಯ ಪದಗಳಿಗೆ ತಮ್ಮದೇ ರಹಸ್ಯ ಅನ್ವರ್ಥನಾಮಗಳನ್ನು ಬಳಸುತ್ತಿದ್ದರು’ ಎಂದು ದೋಷಾರೋಪ ಪಟ್ಟಿ ವಿವರಿಸುತ್ತಾ ಸಾಗುತ್ತದೆ.

ದೇಶದ ತುಂಬಾ ತರಬೇತಿ:

2010ರಿಂದ ಆರಂಭಗೊಂಡ ನವೆಂಬರ್‌ 2017ರ ನಡುವೆ ಈ ರಹಸ್ಯ ಸಿಂಡಿಕೇಟ್‌ ದೇಶಾದ್ಯಂತ ಒಟ್ಟು 19 ಪ್ರಮುಖ ತರಬೇತಿ ಕಾರ್ಯಗಾರಗಳನ್ನು ನಡೆಸಿರುವುದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಗೊಂಡಿದೆ. ಮಹಾರಾಷ್ಟ್ರದಿಂದ ಆರಂಭವಾಗಿ ಮಂಗಳೂರಿನ ವೆಲಾತಬೆಟ್ಟ, ಬಿಸಿ ರೋಡ್‌, ಸಂಪಾಜೆ, ಹುಬ್ಬಳ್ಳಿ, ಬೆಳಗಾವಿ, ಕೊಲ್ಲಾಪುರ ಹೀಗೆ ನಾನಾ ಸ್ಥಳಗಳಲ್ಲಿ ತರಬೇತಿ ನಡೆದಿರುವುದನ್ನು ಪಂಚನಾಮೆ, ಸಾಕ್ಷಿ ಸಮೇತ ಎಸ್‌ಐಟಿ ನ್ಯಾಯಾಲಯದ ಮುಂದಿಟ್ಟಿದೆ.

ಈ ತರಬೇತಿ ಕಾರ್ಯಗಾರಗಳಲ್ಲಿ ನಡೆದ ಮಾತುಕತೆಗಳು, ರೂಪಿಸಲಾದ ಸಂಚು, ಹೆಚ್ಚಿಸಿಕೊಂಡ ಕೌಶಲ್ಯ, ಹೀಗೆ ಪ್ರತಿ ವಿವರವನ್ನೂ ತನಿಖಾಧಿಕಾರಿಗಳು ಪಟ್ಟಿ ಮಾಡಿದ್ದಾರೆ. ಕೊನೆಯಲ್ಲಿ, ಗೌರಿ ಹತ್ಯೆಗೂ ಮುನ್ನ ನಡೆದ ಸಂಚಿನ ಟೈಮ್‌ಲೈನ್‌ನ್ನು ದೋಷಾರೋಪ ಪಟ್ಟಿ ಕಟ್ಟಿಕೊಡುತ್ತದೆ.

‘2016ರ ಜೂನ್‌ ತಿಂಗಳಿನಲ್ಲಿ ಬೆಳಗಾವಿಯಲ್ಲಿ ಸೇರಿಕೊಂಡ ಆರೋಪಿಗಳು ಗೌರಿ ಲಂಕೇಶ್‌ ಹಿಂದೂ ಧರ್ಮದ ಕುರಿತು ಮಾತನಾಡಿದ ವಿಡಿಯೋವನ್ನು ಮೊದಲ ಬಾರಿಗೆ ನೋಡುತ್ತಾರೆ. ನಂತರ ಅದೇ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ದಾವಣಗೆರೆಯಲ್ಲಿ ಹೀರೋ ಹೋಂಡಾ ಸ್ಪ್ಲೆಂಡರ್ ಪ್ರೋ ಬೈಕ್‌ನ್ನು ಕದಿಯುತ್ತಾರೆ. 2017ರ ಆರಂಭದಲ್ಲಿ ವಿಜಯನಗರದ ಲೈಬ್ರರಿಯೊಂದರಿಂದ ಗೌರಿ ಲಂಕೇಶ್‌ ಕಚೇರಿ ಹಾಗೂ ಮನೆಯ ವಿಳಾಸವನ್ನು ಪಡೆದುಕೊಳ್ಳುತ್ತಾರೆ. ಮುಂದಿನ ಮೂರು ನಾಲ್ಕು ತಿಂಗಳು ನಾಡ ಬಂದೂಕು, ಜೀವಂತ ಗುಂಡುಗಳು ಹಾಗೂ ಇತರೆ ಪರಿಕರಗಳನ್ನು ಕಲೆ ಹಾಕುತ್ತಾರೆ.’

‘2017ರ ಜುಲೈ ತಿಂಗಳಿನಲ್ಲಿ ಮೊದಲ ಬಾರಿಗೆ ಸೀಗೆಹಳ್ಳಿಯ ಮನೆಗೆ ಬಂದಿಳಿಯುತ್ತಾರೆ. ಅದಾದ ಮೇಲೂ ಬೆಳಗಾವಿಯಲ್ಲಿ ಮೂರು ದಿನ ಅಂತಿಮ ಸಭೆ ನಡೆಸಿ ಗೌರಿ ಕೊಲ್ಲಲು ಸೆಪ್ಟೆಂಬರ್‌ 2ರಂದು ಬೆಂಗಳೂರಿಗೆ ಬರುತ್ತಾರೆ. ಸೆಪ್ಟೆಂಬರ್‌ 4ರ ಸಂಜೆ 7 ಗಂಟೆಗೆ ಗೌರಿಯನ್ನು ಹತ್ಯೆಗೈಯಲು ಮನೆಯ ಬಳಿ ಹೋಗುತ್ತಾರಾದರೂ ಅಷ್ಟೊತ್ತಿಗಾಗಲೇ ಗೌರಿ ಕಾರು ಹೊರಗೆ ನಿಂತಿರುತ್ತದೆ. ಗೌರಿ ಮನೆ ಒಳಗೆ ಇರುತ್ತಾರೆ. ವಿಫಲ ಯತ್ನ ಎಂದುಕೊಂಡು ವಾಪಸ್‌ ಕುಂಬಳಗೋಡಿಗೆ ಮರಳುವ ಹಂತಕರು ಮಾರನೇ ದಿನ ಅಂದರೆ ಸೆಪ್ಟೆಂಬರ್‌ 5, 2017ರ ಸಂಜೆ ಆರು ಗಂಟೆಗೆ ಗೌರಿ ಮನೆಯ ಮುಂದೆ ಸನ್ನದ್ಧರಾಗಿ ಬಂದು ನಿಲ್ಲುತ್ತಾರೆ. ರಾತ್ರಿ 8 ಗಂಟೆ ಸುಮಾರಿಗೆ ಗೌರಿ ಮನೆಯ ಮುಂದೆ ಬಂದು ಕಾರಿಳಿಯುತ್ತಿದ್ದಂತೆ ಮೊದಲ ಗುಂಡು ಹಾರಿದೆ. ಬೆನ್ನಿನ ಬಲಭಾಗದಲ್ಲಿ ಹೊರಬಿದ್ದ ಗುಂಡು ದೇಹವನ್ನು ಛಿದ್ರಗೊಳಿಸಿದೆ. ಎರಡನೇ ಗುಂಡು ಎಡಭಾಗದ ಹೊಟ್ಟೆಯನ್ನು ಸೀಳಿಕೊಂಡು ಹೊರಬಿದ್ದಿದೆ. ಮೂರನೇ ಗುಂಡು ಬಲಭಾಗದ ಹೊಟ್ಟೆಯ ಮೂಲಕ ಹಾದು ದೇಹದಿಂದ ಹೊರ ಹೋಗಿದೆ. ನಾಲ್ಕನೇ ಗುಂಡು ಗುರಿ ತಪ್ಪಿದೆ. ಆದರೆ ಬಿದ್ದ ಮೊದಲ ಮೂರು ಗುಂಡುಗಳು ಗೌರಿ ದೇಹದ ಉಸಿರನ್ನು ಸ್ಥಳದಲ್ಲಿಯೇ ನಿಲ್ಲಿಸಿವೆ’; ದೋಷಾರೋಪ ಪಟ್ಟಿ ವಿವರಿಸುತ್ತದೆ.

ಒಟ್ಟು 15 ಸಂಪುಟಗಳಲ್ಲಿರುವ ಈ ದೋಷಾರೋಪ ಪಟ್ಟಿಯಲ್ಲಿ ಕೆಲವು ಸಾಕ್ಷಿಗಳನ್ನು ಆರೋಪಿಗಳ ಪರ ವಕೀಲರಿಗೂ ನೀಡದಂತೆ ಈಗಾಗಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಜತೆಗೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ, ಹಂತಕರು ಗುಂಡಿಕ್ಕುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕಗೊಳಿಸದಂತೆ ಕಾಪಿಟ್ಟುಕೊಂಡು ಬರಲಾಗುತ್ತಿದೆ. ಕೋಕಾದಂಥಹ ಪ್ರಬಲ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಈ ಪ್ರಕರಣವನ್ನು ಕಾಲಮಿತಿಯಲ್ಲಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಹಾದಿಯಲ್ಲಿ ನ್ಯಾಯಾಂಗದ ಪ್ರಕ್ರಿಯೆಗಳಿವೆ.

ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಸಮಸ್ಯೆಯಾಗುವ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ‘ಸಮಾಚಾರ’ ಲಭ್ಯ ಮಾಹಿತಿಯಲ್ಲಿ ಇಷ್ಟನ್ನು ಮಾತ್ರವೇ ಈ ಹಂತದಲ್ಲಿ ಓದುಗರಿಗೆ ನೀಡುತ್ತಿದೆ.