GAURI LANKESH FILES

ಗೌರಿ ಹತ್ಯೆ ಪ್ರಕರಣದಲ್ಲಿ 'ತಿಪ್ಪೆ ಸಾರಿಸಿದ' ಎಸ್‌ಐಟಿ: ಇಬ್ಬರು ಶಂಕಿತರ ಮೂರು ರೇಖಾಚಿತ್ರ ಬಿಡುಗಡೆ!

ಬೆಂಗಳೂರಿನಲ್ಲಿ

ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ನಡೆದು 40 ದಿನಗಳ ನಂತರ ಇಬ್ಬರು ಶಂಕಿತರ ಮೂರು ರೇಖಾಚಿತ್ರಗಳನ್ನು ಎಸ್‌ಐಟಿ ಶನಿವಾರ ಬಿಡುಗಡೆ ಮಾಡಿದೆ; ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ ಪ್ರಕರಣದಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡಿದೆ.

ತನಿಖಾ ತಂಡಕ್ಕೆ ಲಭ್ಯವಾಗಿದ್ದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆ ಸಿಕ್ಕ ಶಂಕಿತರ ಚಹರೆಯನ್ನು ಆಧರಿಸಿ ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಮೇರೆಗೆ ಕಲಾವಿದರು ರೇಕಾಚಿತ್ರಗಳನ್ನು ಬಿಡಿಸಿದ್ದಾರೆ. "ಇದರಲ್ಲಿ ಇರಡು ರೇಖಾಚಿತ್ರಗಳು ನಿಖರವಾಗಿದ್ದು, ಇನ್ನೊಂದು ಚಿತ್ರ ಸಾಮ್ಯತೆಯ ಸಮೀಪದಲ್ಲಿದೆ,'' ಎಂದು ಎಸ್‌ಐಟಿ ಮೇಲ್ವಿಚಾರಕ ಬಿ. ಕೆ. ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರೇಖಾಚಿತ್ರಗಳ ಜತೆಗೆ, ಎಸ್‌ಐಟಿ ಸಿಸಿಟಿವಿಯ ಎರಡು ಪ್ರತ್ಯೇಕ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದೆ. ನಾಲ್ಕು ಸೆಕೆಂಡುಗಳಷ್ಟಿರುವ ಮೊದಲ ದೃಶ್ಯದಲ್ಲಿ ಕೆಂಪು ಬಣ್ಣದ ಪಲ್ಸರ್‌ ಬೈಕ್‌ನಲ್ಲಿ, ಹೆಲ್ಮೆಟ್‌ ಧರಿಸಿದ ಶಂಕಿತನೊಬ್ಬ ರಸ್ತೆಯಲ್ಲಿ ಹಾದು ಹೋಗುತ್ತಾನೆ. ಇನ್ನೊಂದು ತುಣಕಿನಲ್ಲಿ ವ್ಯಕ್ತಿಯೊಬ್ಬ ಬೈಕ್‌ ಮೇಲೆ ಕುಳಿತುಕೊಂಡು ಕಾಯುತ್ತಿರುವ ದೃಶ್ಯ ಹಿಂಭಾಗದಿಂದ ಸೆರೆ ಸಿಕ್ಕಿದೆ. ಈ ಎರಡೂ ದೃಶ್ಯಗಳಲ್ಲಿ ವ್ಯಕ್ತಿಗಳ ಚಹರೆ ನಿಖರವಾಗಿ ಕಾಣಿಸುವುದಿಲ್ಲ.

ಇವುಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಎಸ್‌ಐಟಿಯ ಅಧಿಕಾರಿಗಳು, "ನಮ್ಮ ಬಳಿ ಶಂಕಿತರ ಬಗ್ಗೆ ಮಾಹಿತಿ ಇದೆ,'' ಎಂದರು. ಅದೇ ವೇಳೆ ಎಸ್‌ಐಟಿ ನೀಡಿದ ಪತ್ರಿಕಾ ಹೇಳಿಕೆಯಲ್ಲಿ, ಸಾರ್ವಜನಿಕರಿಂದ ಮಾಹಿತಿಯನ್ನು ಕೋರಿದ್ದಾರೆ.

"ಕಳೆದ 40 ದಿನಗಳ ಅಂತರದಲ್ಲಿ ಸುಮಾರು 600 ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖಾ ತಂಡ ಸಂಗ್ರಹಿಸಿದೆ. ಇದರ ಪ್ರಮಾಣವೇ ಸುಮಾರು 75 ಟೆರಾಬೈಟ್‌ನಷ್ಟಿದೆ. ಜತೆಗೆ, 6 ಟೆರಾಬೈಟ್‌ನಷ್ಟು ಮೊಬೈಲ್‌ ಕರೆಗಳ ವಿವರ (ಸಿಡಿಆರ್‌) ಗಳನ್ನು ಸಂಗ್ರಹಿಸಲಾಗಿದೆ. ಪ್ರಕರಣದಲ್ಲಿ ಮೂರು ಪ್ರಮುಖ ಆಯಾಮಗಳಿದ್ದವು. ಗೌರಿ ಲಂಕೇಶ್ ಅವರ ವೃತ್ತಿ ಬದುಕು, ವೈಯಕ್ತಿಕ ಬದುಕು ಹಾಗೂ ಅವರು ಆಕ್ಟಿವಿಸ್ಟ್ ಕೂಡ ಆಗಿದ್ದರಿಂದ ಹೋರಾಟ ಬದುಕಿನ ಆಯಾಮಗಳನ್ನು ತನಿಖೆ ನಡೆಲಾಗಿದೆ. ಇದರಲ್ಲಿ ಅವರ ಪತ್ರಿಕೋದ್ಯಮದ ವೃತ್ತಿ ಬದುಕಿನ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಸಾಧ್ಯತೆ ಇಲ್ಲ,'' ಎಂದು ಬಿ. ಕೆ. ಸಿಂಗ್‌ ಸ್ಪಷ್ಟಪಡಿಸಿದರು.

"ಹತ್ಯೆ ಮಾಡಿದವರು ಕನಿಷ್ಟ ಒಂದು ವಾರದ ಮುಂಚೆಯೇ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು ಎಂಬ ಮಾಹಿತಿ ತನಿಖಾ ತಂಡಕ್ಕಿದೆ. ಅದಕ್ಕೂ ಮೊದಲೇ ಅವರು ಬಂದು ಹತ್ಯೆ ನಡೆಸಲು ಯೋಜನೆ ರೂಪಿಸಿರಬಹುದು,'' ಎಂದು ಸಿಂಗ್ ಅಸ್ಪಷ್ಟವಾಗಿ ಮಾಹಿತಿ ನೀಡಿದರು.

ಗೌರಿ ಲಂಕೇಶ್ ಹತ್ಯೆ ಹಾಗೂ ಧಾರವಾಡದಲ್ಲಿ ನಡೆದ ಸಂಶೋಧಕ ಎಂ. ಎಂ. ಕಲ್ಬುರ್ಗಿ ಹತ್ಯೆಗೆ ಬಳಸಿದ್ದು ಒಂದೇ ಗನ್‌ ಎಂದು ವರದಿಯಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಅವರು, "ತನಿಖಾ ತಂಡಕ್ಕೆ ಕಲ್ಬರ್ಗಿ ಹತ್ಯೆಗೆ ಬಳಸಿದ ಗನ್‌ ಇನ್ನೂ ಸಿಕ್ಕಿಲ್ಲ. ಹಾಗಾಗಿ, ಆ ಕುರಿತು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ,'' ಎನ್ನುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದರು.

ಯಾವ ಸೀಮೆ ತನಿಖೆ?:

ಸೆ. 5ರಂದು ರಾತ್ರಿ 8 ಗಂಟೆ ಸುಮಾರಿಗೆ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ರಾಜರಾಜೇಶ್ವರಿ ನಗರದ ತಮ್ಮ ಮನೆಯ ಮುಂದೆಯೇ ಗುಂಡೇಟಿಗೆ ಬಲಿಯಾಗಿದ್ದರು. ರಾಜ್ಯ ಸರಕಾರ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ತಕ್ಷಣವೇ ರಚಿಸಿತ್ತು. 'ಗೌರಿ ಹತ್ಯೆ ವಿರೋಧಿ ವೇದಿಕೆ' ಹೆಸರಿನಲ್ಲಿ ಪ್ರತಿರೋಧಕ್ಕೆ ಇಳಿದ ಗೌರಿಯ ಒಡನಾಡಿಗಳೂ ಕೂಡ, ಪ್ರಕರಣದ ತನಿಖೆ ರಾಜ್ಯ ಸರಕಾರದ ಅಡಿಯಲ್ಲಿಯೇ ನಡೆಯಬೇಕು ಎಂದು ಒತ್ತಾಯಿಸಿದ್ದರು. ಸುಮಾರು ನೂರು ಜನರ ತಂಡವಾಗಿ ಬೆಳೆದ ಎಸ್‌ಐಟಿ ಸುಮಾರು 40 ದಿನಗಳ ತನಿಖೆ ನಂತರ ಇಬ್ಬರ ಶಂಕಿತರ ಮೂರು ರೇಖಾಚಿತ್ರಗಳು ಹಾಗೂ ಕೆಲಸಕ್ಕೆ ಬಾರದ ಎರಡು ಸಿಸಿಟಿವಿ ದೃಶ್ಯಾವಳಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಮೂಲಕ ತನ್ನ ಕ್ಷಮತೆಯನ್ನು ತೋರಿಸಿದೆ.

ಟ್ವಿಟರ್‌ ಟ್ರೆಂಡಿಂಗ್‌: 

ಗೌರಿ ಲಂಕೇಶ್ ಪ್ರಕರಣದಲ್ಲಿ ಎಸ್‌ಐಟಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಂತೆ ಸಾಮಾಜಿಕ ಜಾಲಾತಾಣ ಟ್ವಿಟರ್‌ನಲ್ಲಿ #GauriLankesh ಹ್ಯಾಶ್‌ಟ್ಯಾಗ್‌ ಟ್ರೆಂಡಿಂಗ್‌ನಲ್ಲಿದೆ. ಯಥಾಪ್ರಕಾರ ಎಡ ಮತ್ತು ಬಲದ ಪರವಿರೋಧದ ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಅಭಿಪ್ರಾಯಗಳು ಇದ್ಭಾಗವಾಗಿವೆ. ಇದರ ನಡುವೆಯೇ, ಒಂದಷ್ಟು ಮಂದಿ ಎಸ್‌ಐಟಿಯ ತನಿಖೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

"ಗೌರಿ ಲಂಕೇಶ್ ಹತ್ಯೆ ಮಾಡಿದವರ ಕುರಿತು ಸ್ಪಷ್ಟ ಸುಳಿವು ಲಭ್ಯವಾಗಿದೆ. ನಾವೀಗ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದೇವೆ,'' ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಕಳೆದ ಒಂದು ತಿಂಗಳ ಅಂತರದಲ್ಲಿ ಗೃಹಸಚಿವರು ಈ ಪ್ರಕರಣದ ಕುರಿತು ನೀಡಿದ ಹೇಳಿಕೆಗಳನ್ನು ಗಮನಿಸಿದರೆ, 'ಸುಳಿವು ಸಿಕ್ಕಿದೆ' ಎಂಬುದು ಅನೇಕ ಬಾರಿ ಪುನರಾವರ್ತನೆಯಾಗಿದೆ. ಅಲ್ಲಿಂದ ಆಚೆಗೆ, ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಸಾಧನೆ ಏನಿದೆ ಎಂಬುದು ಇವತ್ತಿನ ಪತ್ರಿಕಾಗೋಷ್ಠಿ ಸ್ಪಷ್ಟಪಡಿಸಿದೆ.

ಗೌರಿ ಹತ್ಯೆ ಎಡ ಮತ್ತು ಬಲದ ರಾಜಕೀಯ ಆಯಾಮವನ್ನು ಮೊದಲ ದಿನದಿಂದಲೇ ಪಡೆದುಕೊಂಡಿತ್ತು. ಅದರ ಆಚೆಗೆ, ವಿಶೇಷ ತನಿಖಾ ತಂಡದ ತನಿಖೆ ಮಾತ್ರವೇ ಸಾವಿಗೆ ನ್ಯಾಯ ಒದಗಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಇವತ್ತಿನ ಪತ್ರಿಕಾಗೋಷ್ಠಿ ಅದನ್ನು ಹುಸಿಯಾಗಿಸಿದೆ. 'ಗೌರಿ ಲಂಕೇಶ್ ಹತ್ಯೆ ವಿರೋಧಿ ವೇದಿಕೆ' ಹೆಸರಿನಲ್ಲಿ ಪತ್ರಕರ್ತೆ, ಹೋರಾಟಗಾರ್ತಿಯ ಸಾವಿಗೆ ನ್ಯಾಯ ಒದಗಿಸಲು ಹೊರಟ ಅವರ ಒಡನಾಡಿಗಳು ಇನ್ನೂ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ತನಿಖೆಯಲ್ಲಿ ನಂಬಿಕೆ ಉಳಿಸಿಕೊಂಡಿದ್ದರೆ; ಅದಕ್ಕಿಂತ ವ್ಯಂಗ್ಯ ಮತ್ತೊಂದಿಲ್ಲ.