'ನಾನೂ ಗೌರಿ'ಯಿಂದ 'OUR GAURI'ವರೆಗೆ: ಪ್ರತಿರೋಧಗಳ ವರಸೆ; ತನಿಖೆ ಮೂಡಿಸದ ಭರವಸೆ
GAURI LANKESH FILES

'ನಾನೂ ಗೌರಿ'ಯಿಂದ 'OUR GAURI'ವರೆಗೆ: ಪ್ರತಿರೋಧಗಳ ವರಸೆ; ತನಿಖೆ ಮೂಡಿಸದ ಭರವಸೆ

'ಗಾಂಧಿಯನ್ನು ಕೊಂದವರೇ ಗೌರಿಯನ್ನೂ ಕೊಂದರು.'

ಹೀಗೊಂದು ಹೇಳಿಕೆ ಗಾಂಧಿ ಜಯಂತಿಯ ದಿನವಾದ ಇಂದು ದೇಶದ ನಾನಾ ಕಡೆಗಳಲ್ಲಿ ಮೊಳಗಿದೆ. ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ನಡೆದು ಅಕ್ಟೋಬರ್‌ 5ಕ್ಕೆ ಒಂದು ತಿಂಗಳು ತುಂಬುತ್ತದೆ. ಅದು ರಾಜಧಾನಿ ಬೆಂಗಳೂರಿನಲ್ಲಿ ನಡೆದ ಪತ್ರಕರ್ತೆಯೊಬ್ಬರ ಮೊದಲ ಹತ್ಯೆ ಮತ್ತು ಕರ್ನಾಟಕ ಎರಡು ವರ್ಷಗಳ ಹಿಂದೊಮ್ಮೆ ಕಂಡ ಸಂಶೋಧಕ ಎಂ. ಎಂ. ಕಲ್ಬುರ್ಗಿ ಅವರ ಹತ್ಯೆಗೆ ಸಾಮ್ಯತೆ ಇದ್ದ ಸರಣಿಯ ಮುಂದುವರಿದ ಭಾಗ. ಗೌರಿ ಹತ್ಯೆ ಹಿನ್ನೆಲೆಯಲ್ಲಿ ಈವರೆಗೆ ನಡೆದ ಘಟನಾವಳಿಗಳನ್ನು ಗಮನಿಸಿದರೆ, ಎರಡು ಪ್ರತ್ಯೇಕ ಕವಲುಗಳಲ್ಲಿ ಪ್ರಕರಣ ಸಾಗಿ ಬಂದ ಬಗೆ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ಒಂದು ಹತ್ಯೆ ಮತ್ತು ನಂತರದ ರಾಜಕೀಯ ಸಂಘರ್ಷ. ಮತ್ತೊಂದು ಹತ್ಯೆ ತನಿಖೆಯನ್ನು ಸ್ಥಳೀಯ ಸರಕಾರವೇ ವಹಿಸಿಕೊಂಡು ನಿರ್ವಹಿಸುತ್ತಿರುವ ಬಗೆ.

ಕೊಂದವರು ಯಾರು?: 

ದೇಶದಲ್ಲಿ ನಡೆದ ವಿಚಾರವಾದಿಗಳ ಸರಣಿ ಹತ್ಯೆ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಗುಂಡೇಟಿಗೆ ಬಲಿಯಾಗುತ್ತಿದ್ದಂತೆ ದಟ್ಟ ಅನುಮಾನಗಳು ಬಲಪಂಥೀಯರ ಕಡೆಗೆ ಹೊರಳಿಕೊಂಡಿದ್ದವು. ಸೆ. 5ರಂದು ರಾತ್ರಿಯೇ ಕರ್ನಾಟಕದ ನಾನಾ ಕಡೆಗಳಲ್ಲಿ ಜನ ಪ್ರತಿಭಟನೆಗೆ ಇಳಿದರು. ಮಾರನೇ ದಿನ ಸೆ. 6ನೇ ತಾರೀಖು ಸರಕಾರ 'ವಿಶೇಷ ತನಿಖಾ ತಂಡ'ವನ್ನು ರಚಿಸಿ, ತನಿಖೆ ಆರಂಭಿಸಿತು. ಈ ಸಮಯದಲ್ಲಿ ಸಿಬಿಐಗೆ ತನಿಖೆವಹಿಸುವ ವಿಚಾರ ಕೇಳಿಬಂತಾದರೂ, ಗೌರಿ ಕುಟುಂಬ ಸದಸ್ಯರ ಮನವಿ ಮೇರೆಗೆ ಸಿಎಂ ಸಿದ್ದರಾಮಯ್ಯ ಎಸ್‌ಐಟಿ ತನಿಖೆ ಆರಂಭಿಸುತ್ತಿರುವುದಾಗಿ ತಿಳಿಸಿದ್ದರು.

ನಂತರ ದಿನಗಳಲ್ಲಿ ಗೌರಿ ಹತ್ಯೆ ಸುತ್ತ ಶಂಕೆಗಳು ದೊಡ್ಡ ಪ್ರಮಾಣದಲ್ಲಿ ವ್ಯಕ್ತವಾಗಲು ಶುರುಮಾಡಿದವು. ಕರ್ನಾಟಕದ ಮಾವೋವಾದಿ ಚಳುವಳಿಯಲ್ಲಿದ್ದ ಹಲವರನ್ನು ಮುಖ್ಯವಾಹಿನಿಗೆ ಗೌರಿ ತರಲು ಪ್ರಯತ್ನಿಸಿದ್ದು ಹತ್ಯೆಗೆ ಹೊಸ ಆಯಾಮ ನೀಡಲು ಪೂರಕವಾಗಿತ್ತು. ಹೀಗಾಗಿ, ನಕ್ಸಲೀಯರೇ ಗೌರಿಯನ್ನು ಕೊಂದಿರುವ ಸಾಧ್ಯತೆಯನ್ನು ಮಾಧ್ಯಮಗಳೂ ಸೇರಿದಂತೆ, ಒಂದು ವರ್ಗ ಮುಂದಿಟ್ಟವು. ಕೊನೆಗೆ ಮಾವೋವಾದಿ ಪಕ್ಷ ಬಹಿರಂಗ ಹೇಳಿಕೆ ನೀಡುವ ಮೂಲಕ ಈ ಅನುಮಾನಕ್ಕೆ ತೆರೆ ಎಳೆಯಿತು.

ಗೌರಿ ತಮ್ಮ ಪತ್ರಿಕೋದ್ಯಮ ಹಾಗೂ ಹೋರಾಟವನ್ನು ಬಲಪಂಥೀಯರ ವಿರುದ್ಧ ಮುನ್ನಡೆಸಿಕೊಂಡು ಬಂದ ಹಿನ್ನೆಲೆಯನ್ನು ಹೊಂದಿದ್ದವರು. ಜತೆಗೆ, ಮಹಾರಾಷ್ಟ್ರದಲ್ಲಿ ನಡೆದ ಗೋವಿಂದ್ ಪನ್ಸಾರೆ, ನರೇಂದ್ರ ದಾಭೋಲ್ಕರ್ ಹಾಗೂ ಕರ್ನಾಟಕದಲ್ಲಿ ನಡೆದ ಸಂಶೋಧಕ ಎಂ. ಎಂ. ಕಲ್ಬುರ್ಗಿ ಅವರ ಹತ್ಯೆ ಹಿನ್ನೆಲೆಯಲ್ಲಿ ಗೌರಿ ಹತ್ಯೆಯನ್ನೂ ಬಲಪಂಥೀಯ ಹಿನ್ನೆಲೆಯ ಸಂಘಟನೆಯೇ ನಡೆಸಿರುವ ಸಾಧ್ಯತೆಯನ್ನು 'ಗೌರಿ ಲಂಕೇಶ್ ಹತ್ಯೆ ವಿರೋಧಿ ವೇದಿಕೆ' ಮುಂದಿಟ್ಟಿತು.

"ಘಟನೆ ನಡೆದಾಗಲೇ (ಗೌರಿ ಹತ್ಯೆ) ಹಂತಕರು ಅಷ್ಟು ಸುಲಭಕ್ಕೆ ಸಿಗುವುದಿಲ್ಲ ಎಂಬುದು ಸ್ಪಷ್ಟವಿತ್ತು. ಈ ಹಿಂದೆ ನಡೆದ ವಿಚಾರವಾಧಿಗಳ ಹತ್ಯೆಗಳಲ್ಲೂ ಇದು ಎದ್ದು ಕಾಣಿಸುತ್ತಿತ್ತು. ಸಿಬಿಐ ಕೂಡ ಈವರೆಗೆ ಪನ್ಸಾರೆ ಮತ್ತು ದಾಭೋಲ್ಕರ್ ಹಂತಕರನ್ನು ಬಂಧಿಸಲು ವಿಫಲವಾಗಿರುವುದು ನಮ್ಮ ಮುಂದಿತ್ತು. ಇದು ಯಾರೋ ಭಾವನಾತ್ಮಕ ನೆಲೆಯಲ್ಲಿ ನಡೆಸಿದ ಕೃತ್ಯವಲ್ಲ; ಬದಲಿಗೆ ವ್ಯವಸ್ಥಿತ ಸಂಚಿನ ಭಾಗವಾಗಿ ನಡೆದ ಕೊಲೆ ಎಂಬುದು ಎಲ್ಲರಿಗೂ ಅರ್ಥವಾಗಿತ್ತು. ಇಂತಹ ಸಮಯದಲ್ಲಿ ಹಂತಕರು ಯಾರು ಎಂದು ಹೇಳುವ ಕೆಲಸವನ್ನು ಗೌರಿ ಒಡನಾಡಿಗಳು ಶುರುಮಾಡಿದೆವು,'' ಎನ್ನುತ್ತಾರೆ ನೂರ್ ಶ್ರೀಧರ್.

ಗೌರಿ ಹತ್ಯೆ ವಿರೋಧಿ ವೇದಿಕೆಯನ್ನು ಸಂಘಟಿಸಿರುವ ಅವರು, ಈ ಹಿಂದೆ ನಕ್ಸಲೀಯ ಚಳುವಳಿಯನ್ನು ತೊರೆದು ಮುಖ್ಯವಾಹಿನಿಯ ಹೋರಾಟಕ್ಕೆ ಬಂದವರು. ಅವರು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬರಲು ನೆರವಾಗಿದ್ದು ಗೌರಿ ಲಂಕೇಶ್.

"ಗೌರಿ ಹತ್ಯೆಗೂ ಹಿಂದೆ ನಡೆದ ವಿಚಾರವಾದಿಗಳ ಹತ್ಯೆಗಳಿಗೂ ಸಾಮ್ಯತೆ ಎದ್ದು ಕಾಣಿಸುತ್ತಿದೆ. ಮತ್ತು ಈ ದೇಶದಲ್ಲಿ ಸಂಘಪರಿವಾರದ ಟ್ರ್ಯಾಕ್ ರೆಕಾರ್ಡ್‌ ತೆಗೆದು ನೋಡಿದರೆ ಇಂತಹ ಹತ್ಯೆಗಳು ಅವರಿಂದಲೇ ನಡೆದಿರುವುದು ಸಾಮಾನ್ಯರಿಗೂ ಗೊತ್ತಿದೆ. ಗಾಂಧಿಯನ್ನು ಕೊಂದವರು ಅವರು. ಆದರೆ ಅವರು ಎಲ್ಲಿಯೂ ಹತ್ಯೆ ಮಾಡಿದ್ದನ್ನು ಒಪ್ಪಿಕೊಂಡಿರುವ ಇತಿಹಾಸ ಇಲ್ಲ. ಈ ಕಾರಣಕ್ಕಾಗಿಯೇ ಗೌರಿ ಒಡನಾಡಿಗಳು ಗಾಂಧಿಯನ್ನು ಕೊಂದವರೇ ಗೌರಿಯನ್ನೂ ಕೊಂದಿದ್ದಾರೆ ಎಂದು ಜನರಿಗೆ ಅರ್ಥ ಪಡಿಸಲು ಹೊರಟಿದ್ದಾರೆ,'' ಎನ್ನುತ್ತಾರೆ ನೂರ್ ಶ್ರೀಧರ್.

ಆದರೆ, ಗೌರಿ ಹತ್ಯೆ ಹಿನ್ನೆಲೆಯಲ್ಲಿ ಬಲಪಂಥೀಯ ಸಂಘಟನೆಗಳು ಹತ್ಯೆಗೂ ನಮಗೂ ಸಂಬಂಧ ಇಲ್ಲ ಎಂದು ಹಿಂದೆ ಎಂದೂ ಹೇಳದಷ್ಟು ಗಟ್ಟಿ ದನಿಯಲ್ಲಿ ಹೇಳುತ್ತಿವೆ. ಸೆ. 5ರಂದು ಹತ್ಯೆ ನಡೆದ ದಿನವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪತ್ರಿಕಾ ಹೇಳಿಕೆ ನೀಡುವ ಮೂಲಕ ಸಂತಾಪ ವ್ಯಕ್ತಪಡಿಸಿತ್ತು. ಇತ್ತೀಚೆಗೆ ಗೋವಾ ಮೂಲದ ಸನಾತನ ಸಂಸ್ಥೆ (ಪನ್ಸಾರೆ, ಕಲ್ಬುರ್ಗಿ ಹತ್ಯೆ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿರುವ ಹಿಂದುತ್ವವಾದಿ ಸಂಘಟನೆ ಇದು) ಕೂಡ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಗೌರಿ ಹತ್ಯೆಗೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ತನಿಖೆ:

ಒಂದು ಕಡೆ ಗೌರಿ ಸಾವಿನ ನಂತರ ರಾಜಕೀಯ ಸಂಘರ್ಷಗಳು ಆರಂಭವಾಗಿದ್ದರೆ ಹತ್ಯೆ ತನಿಖೆ ಕುಂಟುತ್ತಾ ಸಾಗಿದೆ. ಈವರೆಗೂ ಸರಕಾರವಾಗಲೀ, ಎಸ್‌ಐಟಿ ಆಗಲೀ ಹತ್ಯೆ ತನಿಖೆಯ ಕುರಿತು ಅಧಿಕೃತ ಮಾಹಿತಿಯನ್ನು ನೀಡಲು ಹೋಗಿಲ್ಲ ಎಂಬುದು ಗಮನಾರ್ಹ. "ಹತ್ಯೆಯನ್ನು ಯಾರು ಮಾಡಿದ್ದಾರೆ ಎಂಬುದು ಗೊತ್ತಾಗಬೇಕಾದರೆ, ಸರಕಾರ ಹಂತಕರನ್ನು ಬಂಧಿಸಬೇಕಿದೆ. ಅದನ್ನು ಬಿಟ್ಟು ಅನುಮಾನ ವ್ಯಕ್ತಪಡಿಸುತ್ತಾ ಕೂರುವುದು ಯಾರಿಗೂ ಒಳ್ಳೆಯದಲ್ಲ. ನಾವು ಹತ್ಯೆ ತನಿಖೆಗೆ ಪೂರ್ಣ ಸಹಕಾರ ನೀಡಲು ಸಿದ್ಧರಿದ್ದೇವೆ,'' ಎನ್ನುತ್ತಾರೆ ಆರ್‌ಎಸ್‌ಎಸ್‌ನ ರಾಜ್ಯ ನಾಯಕರೊಬ್ಬರು.

"ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಗೌರಿ ಹತ್ಯೆಯನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನದಲ್ಲಿದೆ. ಹತ್ಯೆ ನಡೆದ ದಿನದಿಂದಲೇ ಬಲಪಂಥೀಯರನ್ನು ಹಣಿಯಲು ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ. ಚುನಾವಣೆಯೂ ಹತ್ತಿರದಲ್ಲಿರುವುದರಿಂದ ಲಾಭ ಪಡೆಯುವ ಯತ್ನಗಳು ಇವು,'' ಎನ್ನುತ್ತಾರೆ ಅವರು.

ಎಸ್‌ಐಟಿ ತನಿಖೆ ಆರಂಭಗೊಂಡು ಹೆಚ್ಚು ಕಡಿಮೆ ತಿಂಗಳು ಕಳೆಯುತ್ತಿದೆ. ವಿಧಿ ವಿಜ್ಞಾನ ಪ್ರಯೋಗಾಯಲದ ವರದಿ, ಮರಣೋತ್ತರ ಪರೀಕ್ಷೆಗಳ ವರದಿಗಳು ತನಿಖಾ ತಂಡಕ್ಕೆ ಲಭ್ಯವಾಗಿವೆ. ಸಾಲು ಸಾಲು ವಿಚಾರಣೆಗಳು ಸಾಗುತ್ತಿವೆಯಾದರೂ, ಗೌರಿ ಹತ್ಯೆ ನಡೆಸಿದ ಹಂತಕರ ಕುರಿತು ಮಹತ್ವದ ಸುಳಿವುಗಳು ಲಭ್ಯವಾದಂತೆ ಕಂಡು ಬರುತ್ತಿಲ್ಲ. ಒಂದಷ್ಟು ಊಹಾಪೋಹಗಳ ಆಚೆಗೆ ನಿರ್ದಿಷ್ಟವಾಗಿ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಈವರೆಗೂ ಮಾಹಿತಿ ನೀಡುವ ಗೋಜಿಗೆ ಎಸ್‌ಐಟಿಯಾಗಲಿ, ಸರಕಾರವಾಗಲಿ ಹೋಗಿಲ್ಲ.

ಹೀಗಿರುವಾಗಲೇ ಗೌರಿ ಹತ್ಯೆಯ ವಿರೋಧಕ್ಕೆ ರಾಷ್ಟ್ರೀಯ ಆಯಾಮವೂ ದೊರಕುತ್ತಿದೆ. ಸೆ. 5ರಂದು ದಿಲ್ಲಿಯಲ್ಲಿ ಪ್ರತಿರೋಧ ಸಮಾವೇಶವೊಂದು ಆಯೋಜನೆಗೊಂಡಿದೆ. ಕರ್ನಾಟಕದಲ್ಲಿಯೂ ಡಿಡಿಎಸ್‌ಎಚ್‌ಎಸ್‌ ಮತ್ತಿತರ ಸಂಘಟನೆಗಳು ಗೌರಿ ಸಾವಿಗೆ ಕಾವ್ಯದ ಮೂಲಕ ಪ್ರತಿರೋಧ ನೀಡುತ್ತಿವೆ. ಹತ್ಯೆ ನಂತರ ರಾಜಕೀಯ ಸಂಘರ್ಷಗಳ ಆಚೆಗೆ, ಪ್ರಕರಣದ ತನಿಖೆಯನ್ನು ಸರಕಾರ ಆದಷ್ಟು ಬೇಗ ಮುಗಿಸಬೇಕಿದೆ. ಅದರಿಂದ ಮಾತ್ರವೇ ಗೌರಿ ಸಾವಿಗೆ ನಿಜವಾದ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ.