samachara
www.samachara.com
ಮೂರು ದಿನಕ್ಕೆ 'ಮೂವತ್ತಾರು ಥಿಯರಿ': ಗೌರಿ ಲಂಕೇಶ್ ಹತ್ಯೆ ಪ್ರಕರಣ ಇನ್ನೂ ಮಿಸ್ಟರಿ!
GAURI LANKESH FILES

ಮೂರು ದಿನಕ್ಕೆ 'ಮೂವತ್ತಾರು ಥಿಯರಿ': ಗೌರಿ ಲಂಕೇಶ್ ಹತ್ಯೆ ಪ್ರಕರಣ ಇನ್ನೂ ಮಿಸ್ಟರಿ!

ಮಂಜುನಾಥ ಎಂ. ಆನೇಕಲ್

ಮಂಜುನಾಥ ಎಂ. ಆನೇಕಲ್

ರಾಜ್ಯದ

ರಾಜಧಾನಿಯಲ್ಲಿ ನಡೆದ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ದಿನ ಕಳೆದಂತೆ ನಿಗೂಢತೆಗೆ ಹೆಚ್ಚು ಸುತ್ತಿಕೊಳ್ಳುತ್ತಿದೆ.

13 ದಿನಗಳ ಹಿಂದೆ ರಾಜರಾಜೇಶ್ವರಿನಗರದ ತಮ್ಮ ಮನೆಯ ಮುಂದೆ ಗೌರಿ ಗುಂಡೇಟಿಗೆ ಬಲಿಯಾಗಿದ್ದರು. ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ರಾಜ್ಯ ಸರಕಾರ ಕುಟುಂಬದವರ ಒತ್ತಾಯದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿತ್ತು. ಸುಮಾರು 100 ಜನರ ತಂಡ ಕಳೆದ 12 ದಿನಗಳಲ್ಲಿ ನಾನಾ ಜಾಡು ಹಿಡಿದು ತನಿಖೆ ನಡೆಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೆನ್ಸೇಷನ್ ಹುಟ್ಟುಹಾಕಿರುವ, ನ್ಯೂಸ್‌ ಹಬ್‌ ಎನ್ನಿಸಿಕೊಂಡಿರುವ ಬೆಂಗಳೂರು ಮೂಲದ ಪ್ರಕರಣ ಇದು. ಸದ್ಯ ದೇಶದಲ್ಲಿ ಸೃಷ್ಟಿಯಾಗಿರುವ ಸೌದ್ಧಾಂತಿಕ ದೃವಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಗೌರಿ ಹತ್ಯೆ ಕೂಡ ರಾಜಕೀಯ ಆಯಾಮವನ್ನು ಪಡೆದುಕೊಂಡಿದೆ. ಪ್ರಕರಣದಲ್ಲಿ ಹಂತಕನಿಗಿದ್ದ ಉದ್ದೇಶಗಳ ಕಡೆಗೆ ಸಹಜ ಆಸಕ್ತಿಯೂ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳೂ ಕೂಡ ತಮ್ಮ ಓದುಗರಿಗೆ, ವೀಕ್ಷಕರಿಗೆ ಪ್ರಕರಣದ ಕುರಿತು ಅಪ್‌ಡೇಟ್‌ ನೀಡುವ ಒತ್ತಡದಲ್ಲಿರುವಂತೆ ಕಾಣಿಸುತ್ತಿದೆ.

ಪ್ರಕರಣದಲ್ಲಿ ಮಾಧ್ಯಮಗಳ ಕವರೇಜ್‌ ಕುರಿತು 'ಅವಧಿ ಮ್ಯಾಗ್‌'ಗೆ ಬರೆದ

ದಲ್ಲಿ ಡಿಜಿಟಲ್ ಭಾಷಾ ತಜ್ಞ ರಾಜಾರಾಮ್‌ ತಲ್ಲೂರು, "ಗೌರಿ ಪ್ರಕರಣಕ್ಕೆ ಒಂದು ಪೂರ್ವ ಚರಿತ್ರೆ ಇತ್ತು. ಎಂ.ಎಂ. ಕಲ್ಬುರ್ಗಿ ಅವರ ಕಗ್ಗೊಲೆ, ಅದಕ್ಕಿಂತ ಮೊದಲು ಮಹಾರಾಷ್ಟ್ರದಲ್ಲಿ ದಾಬೋಲ್ಕರ್, ಪನ್ಸಾರೆ ಅವರ ಕಗ್ಗೊಲೆಗಳು ಇವೆಲ್ಲ ಬಹುತೇಕ ಒಂದೇ ರೀತಿಯ ಕಾರಣಕ್ಕಾಗಿ ನಡೆದವು ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದ್ದುದರಿಂದ, ಅದೇ ಹಾದಿಯಲ್ಲಿ ಗೌರಿ ಪ್ರಕರಣವೂ ಇರಬಹುದೆಂಬ ಶಂಕೆಗೆ ಮೊದಲ ಒತ್ತು ಕೊಟ್ಟದ್ದು, ಕೊಲೆ ನಡೆದ ವಿಧಾನ. ಹಾಗಾಗಿ ಗೌರಿ ಕೊಲೆಯಲ್ಲಿ, ಕೊಲೆ ಆಗಿದೆ ಎಂಬ ದಿಗ್ಭ್ರಾಂತಿಗಿಂತ, ಒಹ್! ಇಂತಹದೊಂದು ಕೃತ್ಯ ನಮ್ಮ ಮನೆ ಬಾಗಿಲಿಗೇ ಬಂದು ಬಿಟ್ಟಿದೆಯಲ್ಲ ಎಂಬ ಆತಂಕ ಹೆಚ್ಚು ವೇಗ ಪಡೆದಿತ್ತು. ಸೆಪ್ಟಂಬರ್ ಐದರ ರಾತ್ರಿಯೇ ಗೌರಿ ಕೊಲೆಗೆ ಸಾರ್ವಜನಿಕ ಪ್ರತಿಭಟನೆ ವ್ಯಕ್ತವಾದದ್ದರ ಹಿಂದೆ ಇದ್ದುದು ಈ ರೀತಿಯ ಮಾನವ ಸಹಜ ಆತಂಕ ಮತ್ತು ಹತಾಶೆ. ಈ ಹಠಾತ್ ಪ್ರತಿಕ್ರಿಯೆಯನ್ನು ಮಾಧ್ಯಮಗಳು ತಪ್ಪಾಗಿ ಗ್ರಹಿಸಿದ ಬೆನ್ನಿಗೇ ಇಡಿಯ ಪ್ರಕರಣ ‘ಫಾಸ್ಟ್ ಫಾರ್ವರ್ಡ್’ ಆಗತೊಡಗಿತು..." ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಾನಾ ಥಿಯರಿಗಳು:

ಗೌರಿ ಲಂಕೇಶ್ ಸುದ್ದಿ ಬಹಿರಂಗವಾಗುತ್ತಿದ್ದಂತೆ ಘಟನಾ ಸ್ಥಳದಲ್ಲಿ ಅವರ ಹಿತೈಷಿಗಳು ಅಂದೇ ಸೇರತೊಡಗಿದರು. ಮಾರನೇ ದಿನ ಬೆಳಗ್ಗೆಯೇ ಕನ್ನಡದ ದಿನ ಪತ್ರಿಕೆಯೊಂದು 'ಹತ್ಯೆ ಹಿಂದೆ ಎಡಪಂಥೀಯರ ಕೈವಾಡ?" ಎಂಬ ಶಂಕೆಯ ಸುದ್ದಿಯೊಂದನ್ನು ಮುಖಪುಟದಲ್ಲಿ ಪ್ರಕಟಿಸಿತ್ತು. ಇದಕ್ಕೆ ಅವರ ಕೊನೆಯ ಟ್ವೀಟ್‌ (ಈ ಕುರಿತು 'ಸಮಾಚಾರ'ದ ಹಿಂದಿನ ವರದಿಗಳನ್ನು ಗಮನಿಸಿ) ಗಳನ್ನು ಆಧಾರವಾಗಿ ಇಟ್ಟುಕೊಳ್ಳಲಾಗಿತ್ತು. ಮುಂದಿನ ಒಂದು ವಾರದಲ್ಲಿ ನಕ್ಸಲ್‌ ಚಳವಳಿಯ ವಿಕ್ರಂ ಗೌಡ ಎಂಬುವವರ ಹೆಸರನ್ನು ತೇಲಿ ಬಿಡುವ ಪ್ರಯತ್ನ ನಡೆಯಿತು. ಕಳೆದ ವೀಕೆಂಡ್ ಹೊತ್ತಿಗೆ, ಗೌರಿ ಲಂಕೇಶ್ ಪ್ರಕರಣದ ಶಂಕೆಗಳು ಸನಾತನ ಸಂಸ್ಥೆ ಮತ್ತು ರುದ್ರ ಪಾಟೀಲ್ ಎಂಬುವವರ ಕಡೆಗೆ ನೆಟ್ಟಿವೆ. "ಮುಂದಿನ ದಿನಗಳಲ್ಲಿ ಇದು ಮಂಗಳೂರಿಗೂ ಹೋಗಿ ನಿಲ್ಲುವ ಸಾಧ್ಯತೆಗಳಿವೆ.'' ಎನ್ನುತ್ತಾರೆ ಮಾಜಿ ಎಫ್‌ಎಸ್‌ಎಲ್‌ ಅಧಿಕಾರಿಯೊಬ್ಬರು.

"ಇವೆಲ್ಲವೂ ಊಹಾಪೋಹಗಳು ಅಷ್ಟೆ,'' ಎನ್ನುವ ಅವರ ಗೌರಿ ಲಂಕೇಶ್ ಹತ್ಯೆಗೂ ಎರಡು ವರ್ಷಗಳ ಹಿಂದೆ ನಡೆದ ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೂ ಸಾಮ್ಯತೆ ಇದೆ,'' ಎನ್ನುತ್ತಾರೆ. ಅದಕ್ಕೆ ಘಟನಾ ಸ್ಥಳದಲ್ಲಿ ಸಿಕ್ಕಿರುವ ಕಾಡತೂಸುಗಳೇ ಸಾಕ್ಷಿ ಎನ್ನುತ್ತಾರೆ. ಈ ಕುರಿತು ಸರಕಾರಕ್ಕೆ ವರದಿಯೂ ಸಲ್ಲಿಕೆಯಾಗಿದೆ. ಹೀಗಿರುವಾಗಲೇ ರಾಷ್ಟ್ರೀಯ ಪತ್ರಿಕೆಗಳು, 'ಗೌರಿ ಲಂಕೇಶ್ ಹಾಗೂ ಸಂಶೋಧಕ ಕಲ್ಬುರ್ಗಿ ಹತ್ಯೆಗಳಿಗೆ ಬಳಸಿದ ಪಿಸ್ತೂಲು ಒಂದೇ' ಎಂದು ವರದಿಗಳನ್ನು ಪ್ರಕಟಿಸಿದವು.

ಇಂತಹ ಬಹುತೇಕ ವರದಿಗಳ ಹಿಂದಿರುವುದು 'ತನಿಖಾಧಿಕಾರಿ' ಎಂಬ ಮೂಲ ನೀಡುರುವ ಮಾಹಿತಿ. ಸರಕಾರ ರಚಿಸಿರುವ 'ಎಸ್‌ಐಟಿ' ನಾನಾ ವಿಭಾಗಾಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ವಿಭಾಗಕ್ಕೂ ಅದರದ್ದೇ ಆದ ಮಾಹಿತಿ ಇರುತ್ತದೆ ಮತ್ತು ಪಕ್ಕದ ವಿಭಾಗದಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿಯೂ ಇರುವುದಿಲ್ಲ. ಹೀಗಿದ್ದೂ ಪ್ರಕರಣದ ವಿಚಾರಣಾ ವಿಭಾಗದಿಂದ ಮಾತ್ರ ಸುದ್ದಿಗಳು ಹೆಚ್ಚು ಲಭ್ಯವಾಗುತ್ತಿದೆ. ಕುಣಿಗಲ್ ಗಿರಿ ಎಂಬ ರೌಡಿಯ ಆಯಾಮ ಕೂಡ ಇದೇ ಕಾರಣಕ್ಕೆ ಹೊರಬಂತು'' ಎನ್ನುತ್ತಾರೆ ದಿನ ಪತ್ರಿಕೆಯೊಂದರ ಅಪರಾಧ ವಿಭಾಗದ ವರದಿಗಾರರೊಬ್ಬರು. ಇದನ್ನೂ ಮೀರಿಯೂ ನಾನಾ ಮೂಲಗಳು ಸುದ್ದಿಗಳು ಗೌರಿ ಲಂಕೇಶ್ ಹತ್ಯೆ ಪ್ರಕರಣದ ವರದಿಗಳಲ್ಲಿ ದಾಖಲಾಗಿವೆ.

ಇದರ ನಡುವೆ, ಗೌರಿ ಲಂಕೇಶ್ ಹತ್ಯೆ ದಿನ ಕಚೇರಿಯಲ್ಲಿ 'ಪಾರ್ಟಿ ಮಾಡಿದ್ದರು' ಎಂಬಂತಹ ದುರುದ್ದೇಶಪೂರ್ವಕ, ಮಾನಹಾನಿ ವರದಿಗಳು ಪ್ರಕಟಗೊಂಡವು. "ಈ ಪ್ರಕರಣದ ಎಷ್ಟರ ಮಟ್ಟಿಗೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ ಎಂದರೆ ಎಸ್‌ಐಟಿ ತನಿಖೆ ಜತೆಗೆ ನಾನಾ ತನಿಖೆಗಳು ನಡೆಯುತ್ತಿವೆ,'' ಎಂದು ತಮಾಷೆಯಾಗಿ ಹೇಳುತ್ತಾರೆ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು. ಒಟ್ಟಾರೆ, ಕಳೆದ 13 ದಿನಗಳಲ್ಲಿ, ಅದರಲ್ಲೂ ವಿಶೇ‍ಷವಾಗಿ ಕಳೆದ ಮೂರು ದಿನಗಳಲ್ಲಿ ದೊಡ್ಡ ಸಂಖ್ಯೆಯ ಥಿಯರಿಗಳು ಗೌರಿ ಹತ್ಯೆ ಸುತ್ತ ಹುಟ್ಟಿಕೊಂಡಿವೆ. ಆದರೆ ಪ್ರಕರಣ ಮಾತ್ರ ನಿಗೂಢವಾಗುತ್ತಲೇ ಹೋಗುತ್ತಿದೆ.

ಗೃಹ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಸಂಜೆ 5 ಗಂಟೆಗೆ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಆದರೆ ಇಲ್ಲಿಯೂ ಕೂಡ ಗೌರಿ ಹತ್ಯೆ ಸುತ್ತ ಪ್ರತಿಕ್ರಿಯೆಗಳು ಲಭ್ಯವಾಗುವುದು ಕಷ್ಟ ಎನ್ನುತ್ತವೆ ಸರಕಾರದ ಉನ್ನತ ಮೂಲಗಳು.

ಸಿಬಿಐ ಸಮಸ್ಯೆ:

ಗೌರಿ ಲಂಕೇಶ್ ಸೈದ್ಧಾಂತಿಕ ರಾಜಕೀಯಕ್ಕೆ ಇಳಿದ ಆರಂಭದ ದಿನಗಳಲ್ಲಿ ನಡೆದ ಪ್ರಮುಖ ಘಟನೆ ನಕ್ಸಲ್‌ ನಾಯಕ ಸಾಕೇತ್ ರಾಜನ್‌ ಹತ್ಯೆ ಪ್ರಕರಣ. ಈ ಸಮಯದಲ್ಲಿ ಗೌರಿ ಲಂಕೇಶ್, ಆಂಧ್ರ ಮೂಲದ ಕ್ರಾಂತಿಕಾರಿ ಹೋರಾಟಗಾರ ಗದ್ದರ್ ಮತ್ತಿತರು ಅಂದಿನ ಧರ್ಮಸಿಂಗ್ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಸಾಕೇತ್ ಹತ್ಯೆ 'ನಕಲಿ ಎನ್‌ಕೌಂಟರ್‌' ಎಂದು ಆರೋಪಿಸಿದ್ದರು. ಹೀಗಾಗಿ ಸರಕಾರ ಹಿರಿಯ ಅಧಿಕಾರಿ ಚಿರಂಜೀವಿ ಸಿಂಗ್ ನೇತೃತ್ವದಲ್ಲಿ ತನಿಖೆ ನಡೆಸಿತ್ತು. ಸಿಂಗ್‌, ನಕಲಿ ಎನ್‌ಕೌಂಟರ್ ಅಲ್ಲ ಎಂದು ವರದಿ ನೀಡಿದ್ದವರು.

ಇವತ್ತು ನಿವೃತ್ತರಾಗಿರುವ ಸಿಂಗ್‌ರನ್ನು 'ಸಮಾಚಾರ' ಸಂಪರ್ಕಿಸಿದಾಗ, "ನನಗೆ ಗೌರಿ ತಂದೆ ಲಂಕೇಶರು 1974ರಿಂದ ಸ್ನೇಹಿತರು. ಈಕೆಯನ್ನು ಚಿಕ್ಕವಯಸ್ಸಿನಿಂದ ನೋಡಿದ್ದೇನೆ. ಆಕೆ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವುದು ಸೂಕ್ತ,'' ಎಂದರು. ಇಂತಹ ಪ್ರಕರಣಗಳ ತನಿಖೆಗಳಲ್ಲಿ ಸಿಬಿಐ ಹೊಂದಿರುವ ಉತ್ತಮ ಟ್ರ್ಯಾಕ್‌ ರೆಕಾರ್ಡ್‌ ಅದಕ್ಕೆ ಕಾರಣ ಎನ್ನುತ್ತಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರ ರಚನೆಗೊಂಡ ನಂತರ ಸಿಬಿಐ ತನಿಖೆಗೆ ಆಗ್ರಹಗಳು ಆಗಾಗೆ ಕೇಳಿಬಂದಿವೆ. ಡಿ. ಕೆ. ರವಿ ಪ್ರಕರಣದಲ್ಲಿ ಸಿಬಿಐ ತನಿಖೆಗೆ ದೊಡ್ಡ ಮಟ್ಟದದಲ್ಲಿ ರಾಜಕೀಯ ಒತ್ತಡ ಬಂದಿತ್ತು.

ಇದೀಗ, ಗೌರಿ ಹತ್ಯೆ ಪ್ರಕರಣದಲ್ಲಿ ಅವರ ಕುಟುಂಬದವರೇ ಸಿಬಿಐ ತನಿಖೆಯನ್ನು ನಿರಾಕರಿಸಿದ್ದಾರೆ. "ಸರಕಾರ ಕೂಡ ಸಿಬಿಐ ತನಿಖೆಗೆ ಕೊಡಲು ಸಿದ್ಧವಿತ್ತು. ಮೊದಲ ದಿನವೇ ಸಿಬಿಐಗೆ ನೀಡಲು ಸಿಎಂ ಹಾಗೂ ಗೃಹ ಸಚಿವರು ಸಿದ್ಧರಿದ್ದರು. ಆದರೆ ಗೌರಿ ಲಂಕೇಶ್ ಹತ್ಯೆ ಕೂಡ ಪನ್ಸಾರೆ, ದಾಭೋಲ್ಕರ್ ಹಾಗೂ ಕಲ್ಬರ್ಗಿ ಹತ್ಯೆಗಳ ಜಾಡಿನಲ್ಲಿ ಸಾಗುತ್ತಿರುವುದರಿಂದ ಹಿಂದೇಟು ಹಾಕುತ್ತಿದ್ದೇವೆ. ವಿಚಾರವಾದಿಗಳ ಹತ್ಯೆ ಪ್ರಕರಣಗಳಲ್ಲಿ ಸಿಬಿಐ ಏನು ಮಾಡಿದೆ ಎಂಬುದು ಕಣ್ಮುಂದೆ ಇದೆ,'' ಎನ್ನುತ್ತಾರೆ ಗೃಹ ಇಲಾಖೆಯ ಉನ್ನತ ಮೂಲಗಳು.

ಒಟ್ಟಾರೆ, ಗೌರಿ ಲಂಕೇಶ್ ಹತ್ಯೆ ನಡೆದು 13 ದಿನಗಳು ಕಳೆಯುತ್ತಿವೆ. ನಿಗೂಢತೆ ಹೆಚ್ಚಾಗುತ್ತಿದೆ. ಇವೆಲ್ಲವಕ್ಕೂ ತನಿಖೆಯ ಹೊಣೆ ಹೊತ್ತಿರುವ ಎಸ್‌ಐಟಿ ಶೀಘ್ರ ಪೂರ್ಣವಿರಾಮವೊಂದನ್ನು ಇಡಬೇಕಿದೆ.

ಚಿತ್ರ ಕೃಪೆ:

ಐಇ.