GAURI LANKESH FILES

ಸಾವಿಗೆ ಪ್ರತಿಕ್ರಿಯೆ ಮತ್ತು ಗೌರಿ ಲಂಕೇಶ್ ಹತ್ಯೆಯ 'ಕ್ರೈಂ ಸೀನ್‌' ನೀಡಿದ ಮಹತ್ವದ ಸುಳಿವು

ತಮ್ಮನ್ನು

ತಾವು ಪತ್ರಕರ್ತೆ- ಹೋರಾಟಗಾರ್ತಿ ಎಂದು ಟ್ವಿಟರ್‌ನ ಬಯೋನಲ್ಲಿ ಬರೆದುಕೊಂಡಿದ್ದ ಗೌರಿ ಲಂಕೇಶ್ ಹತ್ಯೆ ನಡೆದು ವಾರ ಕಳೆದಿದೆ. ಈ ಸಮಯದಲ್ಲಿ ಮೊದಲ ಬಾರಿಗೆ ಮಹತ್ವ ಸುಳಿವೊಂದು ಲಭ್ಯವಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.

'ಸಮಾಚಾರ'ಕ್ಕೆ ಲಭ್ಯವಾಗಿರುವ ಖಚಿತ ಮಾಹಿತಿ ಪ್ರಕಾರ, ಘಟನಾ ಸ್ಥಳದಲ್ಲಿ ಪೊಲೀಸರಿಗೆ ಸಿಕ್ಕಿರುವುದು ನಾಲ್ಕು ಕಾಡತೂಸುಗಳು(ಕ್ಯಾಟ್ರಿಡ್ಜ್‌ಗಳು) . ಇವುಗಳನ್ನು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ಕ್ಕೆ ಶನಿವಾರ ಕಳುಹಿಸಲಾಗಿತ್ತು. ಇವೂ ಸೇರಿದಂತೆ ಪ್ರಕರಣದ ಹತ್ಯೆ ನಡೆದ ಸ್ಥಳ, ಸನ್ನಿವೇಶ, ಗುಂಡು ಹಾರಿದ ರೀತಿ, ಅದಕ್ಕೆ ಗೌರಿ ನೀಡದ ಪ್ರತಿಕ್ರಿಯೆ ಎಲ್ಲವುಗಳ ಬಗ್ಗೆಯೂ ಕೂಲಂಕಷವಾಗಿರುವ ತನಿಖೆ ನಡೆದಿದೆ. ಈ ಸಮಯದಲ್ಲಿ ಮಹತ್ವದ ಸುಳಿವೊಂದು ಲಭ್ಯವಾಗಿದೆ. ಅದನ್ನು ಈಗಾಗಲೇ ಎಸ್‌ಐಟಿ ಜತೆ ಎಫ್‌ಎಸ್‌ಎಲ್‌ ತಜ್ಞರು ಹಂಚಿಕೊಂಡಿದ್ದಾರೆ.  ಬುಧವಾರ ಸಂಜೆ ಅಥವಾ ಗುರುವಾರ ಬೆಳಗ್ಗೆ ಅಧಿಕೃತ ವರದಿ ತನಿಖಾ ತಂಡಕ್ಕೆ, ಆ ಮೂಲಕ ಸರಕಾರಕ್ಕೆ ಲಭ್ಯವಾಗಲಿದೆ.

ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿದೆ. ಈ ಕಾರಣಕ್ಕಾಗಿ ಎರಡು ವರ್ಷಗಳ ಹಿಂದೆ ಧಾರವಾಡದ ತಮ್ಮ ಮನೆಯಲ್ಲಿ ಕೊಲೆಯಾದ ಕಲ್ಬುರ್ಗಿ ಪ್ರಕರಣದಲ್ಲಿ ನಡೆಸಿದಂತೆ 'ಕ್ರೈಂ ಸೀನ್' ಮರುಸೃಷ್ಟಿಯ ಅಗತ್ಯ ಬಿದ್ದಿಲ್ಲ ಎಂದು ಮೂಲಗಳು ಹೇಳಿವೆ.

ರಾಜ್ಯ ಸರಕಾರ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಎಸ್‌ಐಟಿ ನೇತೃತ್ವದಲ್ಲಿಯೇ ನಡೆಸುವುದಾಗಿ ಸ್ಪಷ್ಟಪಡಿಸಿದೆ. ಗೌರಿ ತಾಯಿ ಇಂದಿರಾ ಲಂಕೇಶ್ ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಹೇಳಿರುವುದು ಸಮರ್ಥನೆಗೆ ಅವಕಾಶವೊಂದು ಸಿಕ್ಕಂತಾಗಿದೆ. "ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲಿ ಸಿಬಿಐ ರಾಜ್ಯ ಪೊಲೀಸರಿಗೆ ಸಹಕಾರವನ್ನು ನೀಡಿಲ್ಲ. ಇದರಿಂದಾಗಿ ಕರ್ನಾಟಕ ಪೊಲೀಸರಿಗೆ ಹಂತಕರನ್ನು ಬಂಧಿಸಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ,'' ಎನ್ನುತ್ತಾರೆ ದಲಿತ ಸಂಘಟನೆಯ ಹಿರಿಯ ಮುಖಂಡ ಮಾವಳ್ಳಿ ಶಂಕರ್.

ವಿಚಾರಗಳಲ್ಲಿ ಸಾಮ್ಯತೆ

:

ಎರಡು ವರ್ಷಗಳ ಹಿಂದೆ ಧಾರವಾಡದಲ್ಲಿ ಸಂಶೋಧಕ ಎಂ. ಎಂ. ಕಲ್ಬುರ್ಗಿ ಅವರ ಕೊಲೆ ನಡೆದಾಗ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ನಂತರದ ದಿನಗಳಲ್ಲಿ ರಾಜ್ಯ ಎಫ್‌ಎಸ್‌ಎಲ್‌, ಕಲ್ಬುರ್ಗಿ ಅವರ ಹತ್ಯೆಗೂ ಮಹಾರಾಷ್ಟ್ರದಲ್ಲಿ ನಡೆದ ವಿಚಾರವಾದಿಗಳ ಹತ್ಯೆಗಳಿಗೂ ಸಾಮ್ಯತೆ ಇದೆ ಎಂದು ವರದಿ ನೀಡಿತ್ತು. ಈ ವರದಿಯಲ್ಲಿ ಸ್ಕಾಟ್‌ಲ್ಯಾಂಡ್‌ನ ವಿಧಿ ವಿಜ್ಞಾನ ಪ್ರಯೋಗಾಲಯ ಕೂಡ ದೃಢಪಡಿಸಿತ್ತು. "ಅಷ್ಟೆ ಅಲ್ಲ, ಗುಜರಾತ್ ಎಫ್‌ಎಸ್‌ಎಲ್‌ ಕೂಡ ನಮ್ಮ ವರದಿಯನ್ನು ಪ್ರಶಂಸಿತ್ತು,'' ಎನ್ನುತ್ತವೆ ಎಫ್‌ಎಸ್‌ಎಲ್‌ ಮೂಲಗಳು.

ಇದೀಗ, ಗೌರಿ ಹತ್ಯೆ ಘಟನೆಯನ್ನೂ ಕೂಡ ಅದೇ ಮಾದರಿಯಲ್ಲಿ ನಡೆದ ನಾಲ್ಕನೇ ಹತ್ಯೆ ಎಂದು ಕರ್ನಾಟಕದಲ್ಲಿ ಬಲವಾದ ಆರೋಪಗಳು ಕೇಳಿ ಬಂದಿವೆ. ಸೋಮವಾರದ ನಡೆದ ಪ್ರತಿರೋಧದ ಸಮಾವೇಶದಲ್ಲಿಯೂ ಕೂಡ ಹೊರರಾಜ್ಯಗಳ ಹಾಗೂ ರಾಜ್ಯದ ನಾನಾ ರಾಜಕಾರಣಿಗಳು, ಹೋರಾಟಗಾರರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಗೌರಿ ಹತ್ಯೆ ವಿರೋಧಿಸಿ ಸೋಮವಾರ ಸುಮಾರು 7 ಸಾವಿರ ಜನರ ಪ್ರತಿರೋಧದ ಸಮಾವೇಶಕ್ಕೆ ಬೆಂಗಳೂರು ಸಾಕ್ಷಿಯಾಗಿತ್ತು. ಬೆಳಗ್ಗೆ 10 ಗಂಟೆ ಸುಮಾರಿಗೆ ರೈಲ್ವೆ ನಿಲ್ದಾಣದಿಂದ ಹೊರಟ ನಾನಾ ಸಂಘಟನೆಗಳ ಕಾರ್ಯಕರ್ತರು ಹಾಗೂ ಗೌರಿ ಹತ್ಯೆ ವಿರೋಧಿಸಿ ನಾನಾ ರಾಜ್ಯಗಳಿಂದ ಬಂದವರು ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡರು.

ಈ ಸಮಯದಲ್ಲಿ ಮಾತನಾಡಿದ 'ನರ್ಮದಾ ಬಚಾವೋ ಆಂದೋಲನ' ಖ್ಯಾತಿಯ ಹೋರಾಟಗಾರ್ತಿ ಮೇಧಾ ಪಾಟ್ಕರ್, "ಗೋವಿಂದ್ ಪನ್ಸಾರೆ, ನರೇಂದ್ರ ದಾಬೋಲ್ಕರ್ ಹಾಗೂ ಕಲ್ಬುರ್ಗಿ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತ ಸನಾತನ ಸಂಸ್ಥೆ ಇವತ್ತಿಗೂ ಗೋವಾ ಮೂಲಕ ತನ್ನ ಕಾರ್ಯಚರಣೆ ಮುಂದುವರಿಸಿದೆ. ಕರ್ನಾಟಕದ ಸಿದ್ದರಾಮಯ್ಯ ಸರಕಾರ ಕಲ್ಬುರ್ಗಿ ಹತ್ಯೆ ನಡೆದು 2 ವರ್ಷ ಕಳೆಯುತ್ತಿದ್ದರೂ, ಈವರೆಗೆ ಹಂತಕರನ್ನು ಹಾಗೂ ಹತ್ಯೆಗೆ ಕುಮ್ಮಕ್ಕು ನೀಡಿದವರನ್ನು ಬಂಧಿಸುವ ಕೆಲಸ ಮಾಡಲಿಲ್ಲ,'' ಎಂದು ದೂರಿದ್ದರು.

ಇದೀಗ, ರಾಜ್ಯದಲ್ಲಿ ನಡೆಯುತ್ತಿರುವ ಗೌರಿ ಹತ್ಯೆ ಪ್ರಕರಣ ಕೂಡ ಅದೇ ದಿಕ್ಕಿಗೆ ಸಾಗುವ ಸಾಧ್ಯತೆ ಕಾಣಿಸುತ್ತಿದೆ. "ಪ್ರಕರಣದ ತನಿಖೆ ಅಲ್ಲಿಗೆ ಬಂದು ನಿಂತರೆ ಒಂದು ರೀತಿಯ ಡೆಡ್‌ ಎಂಡ್. ಅಷ್ಟೊತ್ತಿಗೆ ಚುನಾವಣೆಯೂ ಹತ್ತಿರ ಬರುತ್ತಿದೆ. ಕಲ್ಬುರ್ಗಿ ಪ್ರಕರಣವನ್ನು ನೋಡಿರುವ ನಮಗೆ ಈ ಪ್ರಕರಣ ಸಾಗುತ್ತಿರುವ ರೀತಿಯ ಬಗ್ಗೆ ಅನುಮಾನ ಮತ್ತು ಆತಂಕ ಇದೆ,'' ಎನ್ನುತ್ತಾರೆ 'ಏನ್ ಸುದ್ದಿ ಡಾಟ್‌ ಕಾಮ್‌'ಸ ಸಂಪಾದಕ ಸುನೀಲ್ ಸಿರಸಂಗಿ.

ಪ್ರತಿರೋಧದ ಸಮಾವೇಶ:

ಬೆಂಗಳೂರಿನಲ್ಲಿ ನಡೆದ 'ಪ್ರತಿರೋಧದ ಸಮಾಸವೇಶ'ದಲ್ಲಿ ಒಂದು ಅಂದಾಜಿನ ಪ್ರಕಾರ ಪಾಲ್ಗೊಂಡವರ ಸಂಖ್ಯೆ ಸುಮಾರು 7 ಸಾವಿರ. ಸ್ಥಳದಲ್ಲಿ ಐದು ಸಾವಿರ ಜನರಿಗೆ ಹಾಕಿದ್ದ ಕುರ್ಚಿಗಳು ಭರ್ತಿಯಾಗಿದ್ದವು. ಸಮಾವೇಶದ ಮಾಹಿತಿಯನ್ನು ಆನ್‌ಲೈನ್‌ ಮೂಲಕ ವೀಕ್ಷಿಸಿದ, ಓದಿದ, ಪ್ರತಿಕ್ರಿಯಿಸಿದ ಜನರ ಸಂಖ್ಯೆ ಸುಮಾರು 1 ಲಕ್ಷ ದಾಟುತ್ತದೆ. "#IamGauri ಎಂಬ ಹ್ಯಾಶ್ ಟ್ಯಾಗ್‌ ಸೋಮವಾರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿನ ಟ್ವಿಟರ್‌ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿತ್ತು. ಫೇಸ್‌ಬುಕ್ ನಿರಂತರ ಲೈವ್‌ ವ್ಯವಸ್ಥೆ ಮಾಡಲಾಗಿತ್ತು. ಯೂ- ಟ್ಯೂಬ್‌ನಲ್ಲಿಯೂ ನೇರ ಪ್ರಸಾರವನ್ನು ವೀಕ್ಷಿಸಲಾಗಿದೆ. ಸಮಾವೇಶದ ಬ್ಲಾಗ್‌ ವಿದೇಶಗಳಿಂದ ಫಾಲೋವರ್‌ಗಳನ್ನು ಹೊಂದಿತ್ತು. ಸಂಜೆ ಹೊತ್ತಿಗೆ ದೇಶದ ಟ್ವಿಟರ್‌ ಟ್ರೆಂಡಿಂಗ್‌ನಲ್ಲಿ ಈ ಹ್ಯಾಶ್‌ಟ್ಯಾಗ್‌ ಇತ್ತು,'' ಎಂದು ಸಮಾರಂಭದ ವೇದಿಕೆಯಲ್ಲಿ ಮಾಹಿತಿ ನೀಡಲಾಗುತ್ತಿತ್ತು.

ಸಮಾವೇಶದ ಹಿನ್ನೆಲೆಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಜನಶಕ್ತಿ, ಸಿಪಿಐ- ಎಂ ಮತ್ತು ಅದರ ಸಾಂಸ್ಕೃತಿ ಸಂಘಟನೆಗಳ ಪಾತ್ರ ಎದ್ದು ಕಾಣಿಸುತ್ತಿತ್ತು. ಹೀಗಾಗಿಯೇ ವೇದಿಕೆ ಕೊಂಚ ಹೆಚ್ಚು 'ಲಾಲ್‌ ಸಲಾಂ' ಕಡೆಗೆ ವಾಲಿದಂತಿತ್ತು. ಇದನ್ನು ಒಪ್ಪಿಕೊಳ್ಳುವ ದಲಿತ ಮುಖಂಡ ವಾವಳ್ಳಿ ಶಂಕರ್, "ಕಮ್ಯುನಿಸ್ಟರ ವಿಜೃಂಭಣೆ ಇತ್ತು. ಆದರೆ ಗೌರಿ ನೆನಪಿಸಿಕೊಂಡು ಬಂದವರು ಎಲ್ಲರೂ ಕಮ್ಯುನಿಸ್ಟರೇನಲ್ಲ. ಗೌರಿ ಕೂಡ ಕಮ್ಯುನಿಸ್ಟರಲ್ಲ. ಆಕೆ ಎಲ್ಲರನ್ನೂ ಒಂದೇ ನೋಟದಲ್ಲಿ ನೋಡುತ್ತಿದ್ದರು. ಕರ್ನಾಟಕದಲ್ಲಿ ಕಮ್ಯುನಿಸ್ಟ್ ಮತ್ತು ದಲಿತ ಚಳುವಳಿಗಳು ಒಂದಾಗಬೇಕು ಎಂದು ಹೇಳುತ್ತಿದ್ದರು. ಆ ಅಭಿಮಾನಕ್ಕೆ ಸೇರಿದ ಜನ ಅವರು,'' ಎನ್ನುತ್ತಾರೆ.

ಸಮಾವೇಶದಲ್ಲಿ ಅತಿ ಹೆಚ್ಚು ಚಪ್ಪಾಳೆಗೆ ಗುರಿಯಾಗಿದ್ದು ಮುಂಡರಗಿಯ ತೋಂಟದಾರ್ಯ ಮಠದ ನಿಜಗುಣ ಪ್ರಭು ಮಹಾಸ್ವಾಮಿಗಳ ಭಾಷಣ. ಅವರೂ ಕೂಡ ಗೌರಿ ಕಮ್ಯುನಿಸ್ಟ್ ಆಗಿದ್ದರು ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. "ಆ ತಾಯಿ ತನ್ನ ಬದುಕಿನ 25 ವರ್ಷಗಳನ್ನು ಹೊರಗೇ ಕಳೆದುಬಿಟ್ಟಿದ್ದಳು. ಒಂದು ಹಂತದಲ್ಲಿ ತಂದೆಯ ಹೊಣೆಗಾರಿಕೆಯನ್ನು ಮುಂದುವರಿಸಿಕೊಂಡು ಹೋಗುವ ಹಾದಿಯಲ್ಲಿ ಸೈದ್ಧಾಂತಿಕವಾಗಿ ಬೆಳೆಯುತ್ತ ಹೋದಳು. ಕೊನೆಗೆ ಆ ಹಾದಿಯಲ್ಲಿಯೇ ಅಂತ್ಯವೂ ಆದಳು. ಆಕೆ ನಾಸ್ತಿಕಳು ಅಂದಾಕ್ಷಣ ದೇವರನ್ನು ನಂಬದವಳು ಅಂತಲ್ಲ. ಜನರಲ್ಲಿಯೇ ದೇವರನ್ನು ಕಂಡವಳು. ಆಕೆಯ ಸಾವಿಗೆ ನೀಡಿದ ಪ್ರತಿರೋಧ ಅವು. ವೇದಿಕೆ ಮೇಲಿದ್ದ ಸುಮಾರು 40 ಜನ ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಂಡು ಬಂದವರಲ್ಲ. ಅವರವರ ವಿಚಾರಗಳನ್ನು ಮಾತನಾಡಿದ್ದೇವೆ. ಜನ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ,'' ಎಂದರು. ಕಮ್ಯುನಿಸ್ಟ್ ಚಳವಳಿಯ ಕುರಿತು ಮಾತನಾಡಿದ ಅವರು, "ನಮ್ಮ ದೇಶಕ್ಕೆ ಮಾರ್ಕ್ಸ್ ಏಂಗೆಲ್ಸ್ ಬರೆದ ಪುಸ್ತಕಗಳು ರೆಫರೆನ್ಸ್‌ ಆಗಬೇಕೇ ಹೊರತು ಪಠ್ಯವಲ್ಲ. ನಮಗೆ ಇವತ್ತು ಪಠ್ಯವಾಗಬೇಕಿರುವುದು ಬುದ್ಧ, ಬಸವ, ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದ,'' ಎಂದರು.

ಕರೆಗೆ ಓಗೊಟ್ಟವರು:

ಹಳೆದ ಒಂದೂವರೆ ದಶಕಗಳಿಂದ ಗೌರಿ ಲಂಕೇಶ್ ಒಡನಾಡಿಯಾಗಿರುವ ಶಿವಸುಂದರ್ ಸಮಾರಂಭದಲ್ಲಿ ಪಾಲ್ಗೊಂಡವರು. "ಗೌರಿ ರಾಜಕೀಯ ಜೀವನ ಬೆಳೆದು ಬಂದ ರೀತಿ ಒಂದು ಅಚ್ಚರಿ. ವಿಶೇಷವಾಗಿ ಮಲೆನಾಡಿನ ಕಾಡುಗಳಿಗೆ ಹೋಗಿ ನಕ್ಸಲೀಯರ ಸಂದರ್ಶನ ನಡೆಸಿ ಬಂದ ಮೇಲೆ ಅವರಲ್ಲಿ ಸಾಕಷ್ಟು ಬದಲಾವಣೆಯಾಗಿತ್ತು. ಎಷ್ಟೋ ಬಾರಿ ಪಾರ್ವತಿ (ನಕ್ಸಲ್‌ ಚಳವಳಿಯಲ್ಲಿ ಎನ್‌ಕೌಂಟರ್‌ಗೆ ಬಲಿಯಾದ ಮಲೆನಾಡ ಮೂಲಕ ಸಾಮಾಜಿಕ ಹೋರಾಟಗಾರ್ತಿ) ನಕ್ಸಲೈಟ್‌ ಆದರೆ ನಾನೂ ಕೂಡ ನಕ್ಸಲೈಟೇ ಎಂದು ಗೌರಿ ಹೇಳುತ್ತಿದ್ದರು. ಹಾಗಂತ ಕಮ್ಯುನಿಸ್ಟ್ ಚಳವಳಿಗಳ ಕುರಿತು ವಿಮರ್ಶೆ ಮಾಡುತ್ತಿರಲಿಲ್ಲ ಅಂತಲ್ಲ. ಇತ್ತೀಚೆಗೆ ದಲಿತ ಮತ್ತು ಕಮ್ಯುನಿಸ್ಟ್ ಚಳವಳಿಗಳು ಒಂದಾಗುವ ಕುರಿತು ಮಾತನಾಡುತ್ತಿದ್ದರು. ಅವರ ಕೊನೆಯ ಟ್ವೀಟ್‌ ಕೂಡ ಅದೇ ಆಗಿತ್ತು. ಅದಕ್ಕಾಗಿ ಹಲವು ವರ್ಷಗಳ ಹಿಂದೆಯೇ ದಲಿತ ನರಮೇಧದ ಕುರಿತು ಖೈರ್ಲಾಂಜಿ ಎಂಬ ಪುಸ್ತಕವನ್ನು ಅವರ ಪ್ರಕಾಶನದಿಂದ ಹೊರತಂದಿದ್ದರು,'' ಎಂದರು. ಶಿವಸುಂದರ್ ಖೈರ್ಲಾಂಜಿ ಪುಸ್ತಕದ ಲೇಖಕರು ಕೂಡ.

"ಸೋಮವಾರ ಸಮಾವೇಶದಲ್ಲಿ ಪಾಲ್ಗೊಂಡ ಜನ, ಗೌರಿಯನ್ನು ಒಂದಿಲ್ಲೊಂದು ಕಾರಣಗಳಿಗಾಗಿ ಹಚ್ಚಿಕೊಂಡವರು. ಇಲ್ಲಿ ಸಂಘಟನೆಗಳ ಪಾತ್ರ ಏನೂ ಇಲ್ಲ. ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡುವಾಗ ಒಂದಷ್ಟು ಲೋಪಗಳು ಆದರೂ ಆಗಬಹುದು. ಆದರೆ ಅಂತರಾಳದಲ್ಲಿ ಗೌರಿ ಆಶಯಗಳನ್ನು ನಾವು ಪ್ರತಿನಿಧಿಸಿದೆವಾ? ಇಲ್ಲವಾ ಎಂಬುದು ಮುಖ್ಯ. ಅಲ್ಲಿಗೆ ಬಂದ ಜನ ಗೌರಿ ಕರೆಗೆ ಓಗೊಟ್ಟವರು,'' ಎನ್ನುತ್ತಾರೆ ಶಿವಸುಂದರ್.

ಸರಕಾರಿ ಪ್ರಾಯೋಜಿತ?:

ಮಾಜಿ ಸಚಿವ, ಬಿಜೆಪಿಯ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಗೌರಿ ಹತ್ಯೆಗೆ ನಡೆದ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದು ಸರಕಾರ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಸಮಾವೇಶದಲ್ಲಿ ಸರಕಾರ ಇಬ್ಬರು ಸಚಿವರು ಕೂಡ ಪಾಲ್ಗೊಂಡಿದ್ದರು. ಒಬ್ಬರು ದಕ್ಷಿಣ ಕನ್ನಡ ಮೂಲಕ ಯು. ಟಿ. ಖಾದರ್. ಮತ್ತೊಬ್ಬರು ಸಾರಿಗೆ ಸಚಿವ ಎಚ್‌. ಎಂ. ರೇವಣ್ಣ. ಖಾದರ್ ಗೌರಿ ಜತೆಗಿನ ವೈಯಕ್ತಿಕ ಒಡನಾಟದ ಕುರಿತು ಮೆಲುಕು ಹಾಕಿದರು. ತಾವು ಇಲ್ಲಿಗೆ ಸಚಿವರಾಗಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಮಾರಂಭದ ಕೊನೆಯಲ್ಲಿ ಆಯೋಜಕರು ತೆಗೆದುಕೊಂಡ ನಿರ್ಣಗಳನ್ನು ಸರಕಾರದ ಪರವಾಗಿ ಎಚ್‌. ಎಂ. ರೇವಣ್ಣ ಸ್ವೀಕರಿಸಿದರು. ನಂತರ ಮಾತನಾಡಿದ ಅವರು, "ಸರಕಾರ ಗೌರಿ ಹತ್ಯೆ ನಡೆಸಿದ ಹಂತಕರನ್ನು ಹಿಡಿಯಲಿದೆ. ಅದಕ್ಕಾಗಿ ಎಸ್‌ಐಟಿ ರಚಿಸಲಾಗಿದೆ,'' ಎಂದು ಹೇಳಿದರು.

ಕಲ್ಬುರ್ಗಿ ಹತ್ಯೆ ಮತ್ತು ನಂತರ ಸ್ಥಳೀಯ ಸರಕಾರ ನಡೆಸಿದ ತನಿಖೆಯನ್ನು ನೋಡಿದ ನಂತರವೂ ಆಯೋಜಕರು ಕೊನೆಯಲ್ಲಿ ಸರಕಾರಕ್ಕೆ ಸಲ್ಲಿಸಿದ ಕೋರಿಕೆಯಲ್ಲಿ, ಗೌರಿ ಹತ್ಯೆ ತನಿಖೆಗೆ 'ನಿರ್ದಿಷ್ಟ ಗಡುವು' ಹಾಕಲಿಲ್ಲ ಎಂಬ ಆರೋಪಗಳು ಈಗ ಕೇಳಿ ಬರುತ್ತಿವೆ.

ಇದಕ್ಕೂ ಮುಂಚೆ ಮಾತನಾಡಿದ 'ದಿ ವೈರ್' ಅಂತರ್ಜಾಲ ಸುದ್ದಿತಾಣದ ಸ್ಥಾಪಕ ಮತ್ತು ಸಂಪಾದಕ ಸಿದ್ದಾರ್ಥ್ ವರದರಾಜನ್‌, "ಇದೊಂದು ಕೊಲೆ ಪ್ರಕರಣ. ಸರಕಾರ ತನಿಖೆ ನಡೆಸಿ ಹಂತಕರನ್ನು ಪತ್ತೆ ಹಚ್ಚಬೇಕು. ಅದಕ್ಕೂ ಮೊದಲೇ ನಾವು ಯಾರ ಮೇಲೂ ಆರೋಪ ಮಾಡಲು ಸಾಧ್ಯವಿಲ್ಲ. ಆದರೆ ಈ ದೇಶದಲ್ಲಿ ಹಂತಕರನ್ನು ಎಲ್ಲಾ ಸರಕಾರಗಳು ರಕ್ಷಿಸಿಕೊಂಡು ಬಂದಿವೆ. ಅದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ವ್ಯತ್ಯಾಸ ಇಲ್ಲ,'' ಎಂದರು.

ಸಮಾರಂಭದ ಹೈಲೈಟ್ಸ್: 

ಇವುಗಳ ಆಚೆಗೆ, ಸಮಾರಂಭದಲ್ಲಿ ಗೌರಿ ಲಂಕೇಶ್ ತಾಯಿ ಇಂದಿರಾ ಲಂಕೇಶ್ ಮಾತುಗಳು ಸ್ಫೂರ್ತಿ ನೀಡುವಂತಿತ್ತು. ಅವರ ಪಾಲ್ಗೊಳ್ಳುವಿಕೆ ಮತ್ತು ಮಗಳ ಸಾವಿನ ದುಃಖವನ್ನು ಹಂಚಿಕೊಳ್ಳುತ್ತಿದ್ದ ರೀತಿ ಮನಕರಗುವಂತಿತ್ತು. ಪತ್ರಕರ್ತೆ ಸಾಗರಿಕ ಘೋಷ್, ಜಿಗ್ನೇಶ್ ಮೆವಾನಿ, ಗಣೇಶ್ ದೇವಿ ಮತ್ತಿತರ ಮಾತುಗಳು ಗಮನಸೆಳೆಯುವಂತಿದ್ದವು. ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ವೇದಿಕೆಯನ್ನು ಕೆಲಕಾಲ ಅಲಂಕರಿಸಿದವರು ಮಧ್ಯದಲ್ಲಿಯೇ ಹೊರಟು ಹೋದರು. ವೇದಿಕೆಯಲ್ಲಿ ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳ ಭಿನ್ನತೆ ಗಮನ ಸೆಳೆಯುವಂತಿತ್ತು.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಿಂದಲೇ ಬುದ್ಧನ ವಿಗ್ರಹವನ್ನು ತೆಗೆದುಕೊಂಡು ಹೋಗಿದ್ದ ಗೌರಿ ಸಾವಿನ ನಂತರವೂ 'ನಾನೂ ಗೌರಿ' ಎಂಬ ಕಹಳೆ ಮೊಳಗಲು ಕಾರಣರಾಗಿದ್ದಾರೆ.