ಸಮಾಚಾರ

‘ನೋ ಸ್ಮೋಕಿಂಗ್ ಡೇ’: ಧೂಮಪಾನಕ್ಕಿಂತ ವಾಯು ಮಾಲಿನ್ಯವೇ ಕ್ಯಾನ್ಸರ್‌ ತರುತ್ತಿದೆ!

ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ದೇಶದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ವಾಯುಮಾಲಿನ್ಯವೇ ಇದಕ್ಕೆ ಪ್ರಮುಖ ಕಾರಣ. ಅದರಲ್ಲಿಯೂ ವಿಶೇಷವಾಗಿ ಧೂಮಪಾನ ಮಾಡದಿರುವ ಯುವಜನತೆ ಮತ್ತು ಮಹಿಳೆಯರಲ್ಲಿಯೂ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ.

‘ಯಾರು ಧೂಮಪಾನ ಮಾಡುತ್ತಾರೆಯೋ ಅವರಿಗೆ ಮಾತ್ರ ಶ್ವಾಸಕೋಶದ ಕ್ಯಾನ್ಸರ್ ಖಾಯಿಲೆ ಬರುತ್ತದೆ’ ಎಂಬ ಅಭಿಪ್ರಾಯ ಅನೇಕರಲ್ಲಿತ್ತು. ಆದರೆ ಈ ಅಭಿಪ್ರಾಯವನ್ನೇ ತಲೆಕೆಳಗೆ ಮಾಡುವಂತಹ ಆತಂಕಕಾರಿ ಅಂಶಗಳು ಹೊರಬಿದ್ದಿವೆ. ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ದೇಶದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ವಾಯುಮಾಲಿನ್ಯವೇ ಇದಕ್ಕೆ ಪ್ರಮುಖ ಕಾರಣ. ಅದರಲ್ಲಿಯೂ ವಿಶೇಷವಾಗಿ ಧೂಮಪಾನ ಮಾಡದಿರುವ ಯುವಜನತೆ ಮತ್ತು ಮಹಿಳೆಯರಲ್ಲಿಯೂ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ ಎಂದು ಅಧ್ಯಯನದ ವರದಿಗಳು ಹೇಳುತ್ತಿವೆ.

“ಧೂಮಪಾನ ಮಾಡದವರಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್ ಖಾಯಿಲೆ ಕಾಣಿಸಿಕೊಳ್ಳುತ್ತಿರುವುದು ಶೇ.30ರಿಂದ 40ರಷ್ಟು ಹೆಚ್ಚಾಗುತ್ತಿದೆ. ವಾಯಮಾಲಿನ್ಯ ಹಾಗೂ ಶ್ವಾಸಕೋಶದ ಕ್ಯಾನ್ಸರ್‌ ನಡುವೆ ಸಂಬಂಧವಿದೆ. ಕಳೆದ 10 ವರ್ಷಗಳಲ್ಲಿ ಲೆಕ್ಕ ಹಾಕಿದರೆ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿವೆ,” ಎಂಬುದು ದೇಶದ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳ ಅಧ್ಯಯನದ ಮೂಲಕ ತಿಳಿದು ಬಂದಿದೆ.

ಶ್ವಾಸಕೋಶದ ಕ್ಯಾನ್ಸರ್ ಎಂದರೆ ಶ್ವಾಸಕೋಶದ ಅಂಗಾಂಶಗಳಲ್ಲಿನ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆ. ಈ ಬೆಳವಣಿಗೆಯು ಪಕ್ಕದ ಅಂಗಾಂಶದ ಮೇಲೆ ಆಕ್ರಮಣ ಮಾಡಬಹುದು ಮತ್ತು ಶ್ವಾಸಕೋಶಗಳಿಂದ ಆಚೆಗಿನ ಭಾಗಗಳಿಗೂ ವ್ಯಾಪಿಸಿ ಆ ಭಾಗಗಳನ್ನು ಹಾನಿ ಮಾಡಬಹುದು.

ಅಧ್ಯಯನದ ವರದಿಗಳು ಹೇಳುವುದೇನು?

‘ದೆಹಲಿಯ ಅಂಕಿ ಅಂಶಗಳನ್ನು ಗಮನಿಸಿದರೆ, 2013-14ರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 940. ಆದರೆ 2015-16ರಲ್ಲಿ ಇದು 2,082ಕ್ಕೆ ಬಂದು ನಿಂತಿತು. ಹೀಗೆ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗುವವರ ಸಂಖ್ಯೆ ದೆಹಲಿಯಲ್ಲಿ ದ್ವಿಗುಣಗೊಂಡಿತು’ ಎನ್ನುತ್ತದೆ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್).

‘ಜಗತ್ತಿನಾದ್ಯಂತ 1.59 ಮಿಲಿಯನ್ ಜನರು ಪ್ರತಿ ವರ್ಷ ಶ್ವಾಸಕೋಶದ ಕ್ಯಾನ್ಸರಿಗೆ ಬಲಿಯಾಗುತ್ತಾರೆ’ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ ವರದಿ. ಇದರ ಪ್ರಕಾರ, ಪ್ರತಿ ವರ್ಷ 63,000 ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗುತ್ತವೆ. ಪ್ರತಿ 1000 ಜನರಲ್ಲಿ ಸುಮಾರು 6.8 ಜನರು ಶ್ವಾಸಕೋಶದ ಕ್ಯಾನ್ಸರಿನಿಂದ ಸಾವಿಗೀಡಾಗುತ್ತಾರೆ ಎಂಬ ಆತಂಕಾರಿ ಮಾಹಿತಿಯನ್ನು ಅದು ಹೊರಹಾಕುತ್ತದೆ.

ಅಲ್ಲದೇ, ಜಗತ್ತಿನಾದ್ಯಂತ 3.2 ಮಿಲಿಯನ್ ಜನ ವಾಯುಮಾಲಿನ್ಯದ ಕಾರಣದಿಂದ ಸಾವಿಗೀಡಾಗುತ್ತಿದ್ದಾರೆ. ಅದರಲ್ಲಿ 2,23,000 ಜನರು ಶ್ವಾಸಕೋಶದ ಕ್ಯಾನ್ಸರಿನಿಂದ ಸಾವನ್ನಪ್ಪುತ್ತಿದ್ದಾರೆ ಎನ್ನುತ್ತದೆ 2010ರ ದಿ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಪ್ರಾಜೆಕ್ಟ್ ಸಲ್ಲಿಸಿದ ವರದಿ.

ವಾಯು ಮಾಲಿನ್ಯ ಕಾರಣ:

ಅತಿಯಾದ ಮಾಯುಮಾಲಿನ್ಯದ ನಗರಗಳಲ್ಲಿ ವಾಸಿಸುತ್ತಿರುವ ಜನರು ತಮ್ಮ ಶ್ವಾಸಕೋಶದ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಶ್ವಾಸಕೋಶ ವ್ಯವಸ್ಥೆಯ ಮೇಲೆ ವಾಯುಮಾಲಿನ್ಯದ ವಿಷಕಾರಿ ಅನಿಲವು ಉಂಟುಮಾಡುವ ಪರಿಣಾಮಗಳ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ವಾಯು ಮಾಲಿನ್ಯದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಿರುವ ಮಹಿಳೆಯರು (ಚಿತ್ರಕೃಪೆ: ದಿ ಪ್ರಿಂಟ್)

ಕಳೆದ ಕೆಲವು ವರ್ಷಗಳಲ್ಲಿ ವಾತಾವರಣದ ವಿಷಕಾರಿ ಅಂಶಗಳು ಶ್ವಾಸಕೋಶದ ಕ್ಯಾನ್ಸರ್‌ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಸಸ್ಪೆಂಡೆಡ್ ಪಾರ್ಟಿಕ್ಯುಲೇಟ್, ನೈಟ್ರೋಜನ್ ಡೈಯಾಕ್ಸೈಡ್, ಸಲ್ಫರ್ ಡೈಯಾಕ್ಸೈಡ್, ಕಾರ್ಬನ್ ಡೈಯಾಕ್ಸೈಡ್ ಮತ್ತು ಪೊಲಿಸೈಕ್ಲಿಕ್ ಅರೊಮ್ಯಾಟಿಕ್ ಹೈಡ್ರೊಕಾರ್ಬನ್ ನಂತಹ ವಿಷಕಾರಿ ಅಂಶಗಳು ಗಾಳಿಯಲ್ಲಿ ಸೇರಿಕೊಂಡಿದ್ದರಿಂದ, ಇವು ದೇಹದ ಅಂಗಾಂಶಗಳನ್ನು ನಾಶಗೊಳಿಸಿ ಕ್ಯಾನ್ಸರಿಗೆ ಕಾರಣವಾಗುತ್ತವೆ. ಅಂತಿಮವಾಗಿ ಬಾಯಿ ಮತ್ತು ಗಂಟಲು ಕ್ಯಾನ್ಸರ್‌ಗಳಿಗೆ ಪ್ರಮುಖ ಕಾರಣವೇ ವಾಯುಮಾಲಿನ್ಯ ಎನ್ನುತ್ತಾರೆ ಡಾ ಎಂ.ಎಸ್. ಕನ್ವಾರ್. ಇವರು ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ಉಸಿರಾಟದ ಔಷಧ ಮತ್ತು ಪಲ್ಮೊನಾಲಜಿ ಹಿರಿಯ ಸಲಹೆಗಾರರು.

“ಹೆಚ್ಚು ಕಲುಷಿತ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಶ್ವಾಸಕೋಶದ ಸಾಮರ್ಥ್ಯವು ಶೇ.5ರಷ್ಟು ಕಡಿಮೆ ಆಗುತ್ತದೆ . ಧೂಮಪಾನಿಗಳಲ್ಲದವರಲ್ಲಿ ಮಾಲಿನ್ಯವನ್ನು ಹೊರತುಪಡಿಸಿ ಬೇರೆ ಯಾವುದೇ ಅಂಶವೂ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಿಲ್ಲ ಎನ್ನುತ್ತಾರೆ ಡಾ ಎಸ್.ಕೆ. ಚಬ್ರಾ. ಇವರು ದೆಹಲಿಯ ಪ್ರೈಮಸ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಪಲ್ಮನರಿ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್ ಇಲಾಖೆಯ ಮುಖ್ಯಸ್ಥರು. ಅವರು, 1998 ರಿಂದ ಶ್ವಾಸಕೋಶದ ಕ್ಯಾನ್ಸರ್ ಬದಲಾಗುತ್ತಿರುವ ಸ್ವರೂಪದ ಅಧ್ಯಯನ ಮಾಡುತ್ತಿದ್ದಾರೆ.

‘ಹೊರಾಂಗಣ ಮತ್ತು ಒಳಾಂಗಣ ವಾಯುಮಾಲಿನ್ಯವು ಶ್ವಾಸಕೋಶದ ಕ್ಯಾನ್ಸರ್‌ಗಳಿಗೆ ಸಮಾನ ಕಾರಣ. ಎರಡೂ ರೀತಿಯ ಮಾಲಿನ್ಯವೂ ಒಂದೇ ಬಗೆಯ ಶ್ವಾಸಕೋಶದ ಕ್ಯಾನ್ಸರ್ ತರುತ್ತದೆ’ ಎಂದು ಡಾ. ರಾಜಿಂದರ್ ಪ್ರಸಾದ್ ಹೇಳುತ್ತಾರೆ. ಇವರು ದಕ್ಷಿಣ ಏಷ್ಯಾ ಅಸೋಸಿಯೇಷನ್ ಆಫ್ ಅಲರ್ಜಿ, ಆಸ್ತಮಾ ಮತ್ತು ಅಪ್ಲೈಡ್ ಇಮ್ಯುನೊಲಾಜಿ ಮತ್ತು ಭಾರತೀಯ ಸೊಸೈಟಿ ಫಾರ್ ಸ್ಟಡಿ ಆಫ್ ಲಂಗ್ ಕ್ಯಾನ್ಸರ್ ಸಂಸ್ಥಾಪಕರು.

ನಗರ ಮತ್ತು ಗ್ರಾಮೀಣ ಭಾಗದಲ್ಲಿಯೂ ಹೆಚ್ಚಳ:

ಶ್ವಾಸಕೋಶ ಕ್ಯಾನ್ಸರ್ ಹೆಚ್ಚಳವು ಕೇವಲ ದೆಹಲಿಯಲ್ಲಷ್ಟೇ ಅಲ್ಲದೇ ದೇಶದ ಇತರ ನಗರಗಳಲ್ಲಿಯೂ ಕಂಡು ಬಂದಿದೆ. ಮುಂಬೈಯ ಟಾಟಾ ಮೆಮೋರಿಯಲ್ ಆಸ್ಪತ್ರೆಯ 2012ರ ಅಧ್ಯಯನವು, ‘ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಲ್ಲಿ ಶೇ.52.1ರಷ್ಟು ಜನರು ಧೂಮಪಾನದ ಅಭ್ಯಾಸವನ್ನು ಹೊಂದಿಲ್ಲ’ ಎಂದು ಹೇಳುತ್ತದೆ. ಅಷ್ಟೇ ಅಲ್ಲದೇ, ‘ಧೂಮಪಾನ ಮಾಡದಿದ್ದರೂ, ಶ್ವಾಸಕೋಶದ ಕ್ಯಾನ್ಸರ್‌ಗೆ ಶೇ.41.8ರಷ್ಟು ಪುರುಷರು ತುತ್ತಾದರೆ, ಶೇ.88ರಷ್ಟು ಮಹಿಳೆಯರು ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ’ ಎನ್ನುವ ಮಾಹಿತಿಯನ್ನು ಹೊರಹಾಕಿದೆ.

ಜನವರಿ 2017ರಲ್ಲಿ, ಭುವನೇಶ್ವರ ಎಐಐಎಂಎಸ್ ಸಂಶೋಧಕರ ಪ್ರಕಾರ, ಶೇ.48ರಷ್ಟು ರೋಗಿಗಳು ಧೂಮಪಾನ ಮಾಡದವರೇ ಶ್ವಾಸಕೋಶದ ಕ್ಯಾನ್ಸರ್‌ ಖಾಯಿಲೆಗೆ ತುತ್ತಾಗಿದ್ದಾರೆ. ಮಹಿಳೆಯರಲ್ಲಿ ದೂಮಪಾನ ಮಾಡದ ಶೇ.89ರಷ್ಟು ಮಹಿಳೆಯರು ಶ್ವಾಸಕೋಶ ಕ್ಯಾನ್ಸರ್ ಪೀಡಿತರಾಗಿದ್ದಾರೆ. ಹೀಗೆ ಎರಡೂ ಸಂಶೋಧನೆಗಳ ಅಂಶಗಳು ಬಹುತೇಕ ಸರಿಸಮವಾದ ಮಾಹಿತಿಯನ್ನು ಹೊರಹಾಕುತ್ತವೆ.

ಔರಂಗಬಾದಿನ ಯುನೈಟೆಡ್ ಸಿಐಜಿಜಿಎಂಎ ಆಸ್ಪತ್ರೆಯು 2017ರ ಜನವರಿಯಲ್ಲಿ ಒಂದು ವರದಿಯನ್ನು ಪ್ರಕಟಿಸಿತು. ಅದು ಧೂಮಪಾನಿಗಳ ಮತ್ತು ಧೂಮಪಾನ ಮಾಡದವರ ನಡುವೆ ಶ್ವಾಸಕೋಶದ ಕ್ಯಾನ್ಸರ್ ಕ್ಲಿನಿಕಲ್-ರೋಗಲಕ್ಷಣಗಳ ಪ್ರೊಫೈಲ್ ಬಹಿರಂಗಪಡಿಸಿತು. ಶ್ವಾಸಕೋಶದ ಕ್ಯಾನ್ಸರ್ ರೋಗಿಗಳ ಪೈಕಿ 10 ರಿಂದ 25ರಷ್ಟು ಪ್ರತಿಶತದವರೆಗೆ ಎಂದಿಗೂ ಧೂಮಪಾನ ಮಾಡದವರೇ ಶ್ವಾಸಕೋಶದ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿದ್ದಾರೆ ಮತ್ತು ಅವರ ಸಂಖ್ಯೆಯು ಹೆಚ್ಚುತ್ತಿದೆ ಎಂದು ತಿಳಿಸಿದೆ.

ಇನ್ನು ಗ್ರಾಮೀಣ ಭಾಗಕ್ಕೆ ಬಂದರೆ, ಗ್ರಾಮೀಣ ಭಾಗವೂ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಾಧಿಸುತ್ತಿದೆ. ಮನೆ ಒಳಗಿನ ಮಾಲಿನ್ಯಕಾರಕಗಳಾದ ಅಡುಗೆ ಎಣ್ಣೆಯ ಹೊಗೆ, ಕಟ್ಟಿಗೆ ಬಳಸುವ ಒಲೆಯ ಹೊಗೆಯು ಇತ್ಯಾದಿ ಶ್ವಾಸಕೋಶದ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂಬ ಅಂಶವನ್ನು ಟಾಟಾ ಸ್ಮಾರಕದ 2012ರ ಅಧ್ಯಯನವು ಹೇಳುತ್ತದೆ. ಧೂಮಪಾನ ಮಾಡದ ಮಹಿಳೆಯರು ಶ್ವಾಸಕೋಶದ ಖಾಯಿಲೆಗೆ ತುತ್ತಾಗಲು ಮನೆಯಲ್ಲಿನ ಈ ಹೊಗೆಯೇ ಪ್ರಮುಖ ಕಾರಣ ಎನ್ನುತ್ತದೆ ಈ ಅಧ್ಯಯನ.

ಟಾಟಾ ಮೆಮೋರಿಯಲ್ ಆಸ್ಪತ್ರೆಯ ಅಧ್ಯಯನ- 2012

ಗ್ರಾಮೀಣ ಭಾಗದ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ.42.55ರಷ್ಟು ಜನರು ಧೂಮಪಾನ ಮಾಡದವರು ಎಂದು ಅಧ್ಯಯನವು ಹೇಳುತ್ತದೆ. ಇದರಲ್ಲಿ ಎಷ್ಟೋ ರೋಗಿಗಳು ತಮ್ಮ ಖಾಯಿಲೆಯ ಕೊನೆಯ ಹಂತದಲ್ಲಿದಾಗಲೇ ತಿಳಿದುಕೊಂಡು ಚಿಕಿತ್ಸೆಗೆ ಹೋಗುತ್ತಾರೆ ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿರುತ್ತದೆ.

ಶ್ವಾಸಕೋಶದ ಕ್ಯಾನ್ಸರ್‌‌ ಸೂಚಿಸುವ ರೋಗಲಕ್ಷಣಗಳು:

  • ಕಟ್ಟುಸಿರು (ಉಸಿರಿನ ಅಲ್ಪತೆ)
  • ಹಿಮೋಪ್ಟೈಸಿಸ್‌ (ರಕ್ತದ ಕೆಮ್ಮುವಿಕೆ)
  • ದೀರ್ಘಕಾಲದ ಕೆಮ್ಮುವಿಕೆ,
  • ಕೆಮ್ಮುವಿಕೆಯ ನಿಯತವಾದ ಮಾದರಿಯಲ್ಲಿನ ಬದಲಾವಣೆ
  • ಉಬ್ಬಸಪಡುವಿಕೆ
  • ಎದೆ ನೋವು ಅಥವಾ ಕಿಬ್ಬೊಟ್ಟೆಯಲ್ಲಿನ ನೋವು
  • ಸೊರಗಿ ಹೋಗುವುದು (ತೂಕದ ನಷ್ಟ),
  • ಬಳಲಿಕೆ, ಮತ್ತು ಹಸಿವಿನ ನಷ್ಟ
  • ಡಿಸ್ಫೋನಿಯಾ (ಒರಟೊರಟಾದ ಧ್ವನಿ)
  • ಬೆರಳ ಉಗುರುಗಳ ಒಂದುಗೂಡುವಿಕೆ (ವಿರಳವಾದುದು)
  • ಡಿಸ್‌ಫ್ಯಾಜಿಯಾ (ನುಂಗುವಿಕೆಯಲ್ಲಿನ ತೊಡಕು)

ಭಾರತದಲ್ಲಿ ಧೂಮಪಾನಿಗಳಲ್ಲದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ತುಂಬಾ ಕಡಿಮೆ ತಿಳುವಳಿಕೆಯಿದೆ ಎಂದು ಸಂಶೋಧನೆಯ ಮಾಹಿತಿಯಿಂದ ತಿಳಿದು ಬರುತ್ತದೆ. ಶ್ವಾಸಕೋಶ ಕ್ಯಾನ್ಸರ್ ಅಪಾಯ ಎಷ್ಟೆಂದು ಜನರಿಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಹೆಚ್ಚಿನ ರೋಗಿಗಳು ಶ್ವಾಸಕೋಶದ ಕ್ಯಾನ್ಸರ್ ಖಾಯಿಲೆ ಮುಂದುವರಿದ ಹಂತಗಳಲ್ಲಿ ಅಂದರೆ 3 ಅಥವಾ 4ನೇ ಹಂತದಲ್ಲಿ ಗಮನಕ್ಕೆ ತಂದುಕೊಂಡಿದ್ದಾರೆ. ಈ ಹಂತದಲ್ಲಿ ಚಿಕಿತ್ಸೆಯು ಕಷ್ಟವಾಗಿದ್ದು, ಇದು ಮರಣವನ್ನೇ ತರುವ ಸಾಧ್ಯತೆಗಳು ಹೆಚ್ಚಿವೆ ಎನ್ನುತ್ತದೆ ಔರಂಗಾಬಾದ್ ಕ್ಯಾನ್ಸರ್ ಅಧ್ಯಯನ ಕೇಂದ್ರ.

ಆರಂಭಿಕ ರೋಗಲಕ್ಷಣಗಳು ಕಂಡು ಬಂದಾಗಲೇ ರೋಗಿಗಳಿಗೆ ಹೆಚ್ಚಿನ ಮಾಹಿತಿಯ ಅರಿವು ಅಗತ್ಯವಿರುತ್ತದೆ. ಅಥವಾ ರೋಗ ಬರುವುದಕ್ಕಿಂತ ಮೊದಲೇ ಅವರಿಗೆ ಶ್ವಾಸಕೋಶ ಕ್ಯಾನ್ಸರ್‌ ರೋಗ ಬರುವ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿರಬೇಕಾಗಿರುತ್ತದೆ. ನಿರಂತರ ಕೆಮ್ಮು, ಕೆಮ್ಮಿನೊಂದಿಗೆ ರಕ್ತ ಕಾರುವುದು, ಆಳವಾದ ಉಸಿರಾಟ ಮಾಡಲು ಸಾಧ್ಯವಾಗದೇ ಇರುವುದು, ಎದೆ ನೋವು, ತೂಕ / ಹಸಿವು ಕಡಿಮೆ ಆಗುವುದು ಮತ್ತು ಉಸಿರಾಟದಲ್ಲಿ ವಿವಿಧ ರೀತಿಯ ತೊಂದರೆ ಕಂಡು ಬಂದರೆ ಆ ವ್ಯಕ್ತಿಯ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇದನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತವೆ ವೈದ್ಯಕೀಯ ವರದಿಯ ಅಂಶಗಳು.

ಧೂಮಪಾನಿಗಳಲ್ಲಿ ಕಂಡುಬರುವ ಶ್ವಾಸಕೋಶದ ಕ್ಯಾನ್ಸರ್ ಹಾಗೂ ಧೂಪಾನಿಗಳಲ್ಲದವರ ಶ್ವಾಸಕೋಶದ ಕ್ಯಾನ್ಸರ್ ಎರಡೂ ಭಿನ್ನವಾಗಿದೆ. ಧೂಮಪಾನಿಗಳಲ್ಲಿ ಯಾವಾಗಲೂ 'Small cell lung cancers' ರೀತಿಯ ಖಾಯಿಲೆ ಸಂಭವಿಸುತ್ತದೆ, ಆದರೆ ಧೂಮಪಾನಿಗಳಲ್ಲದವರಲ್ಲಿ 'non-small cell lung cancers' ಕಂಡು ಬರುತ್ತದೆ. ‘adenocarcinoma’ ಎನ್ನುವುದು ಬೇರೆ ರೀತಿಯ ಶ್ವಾಸಕೋಶ ಕ್ಯಾನ್ಸರ್ ಖಾಯಿಲೆ. ಇದು ವಿಶ್ವದ ಬೇರೆ ಭಾಗದಲ್ಲಿ ಕಂಡು ಬರುತ್ತದೆ. ಆದರೆ ಭಾರತದಲ್ಲಿ ಈ ಬಗೆಯ ಕ್ಯಾನ್ಸರ್ ಹೆಚ್ಚಿಗೆ ಕಂಡು ಬಂದಿಲ್ಲ.

ಜಗತ್ತಿನಾದ್ಯಂತ ಮತ್ತು ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರಿನ ರೋಗಿಗಳು ಬದುಕುಳಿಯುವ ಸಾಧ್ಯತೆ ಕಡಿಮೆ. ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ಕೇಸುಗಳು ಹೆಚ್ಚುತ್ತಿವೆ. ಇದಕ್ಕೆ ಪರಿಹಾರ ಎಂದರೆ ಮಲಿನ ಗಾಳಿಗೆ ಒಡ್ಡಿಕೊಳ್ಳುವುದನ್ನು ಜನರು ಕಡಿಮೆ ಮಾಡಬೇಕು. ರಸ್ತೆಯಲ್ಲಿ ಸಂಚರಿಸುವಾಗ ಅಪಾಯಕಾರಿ ರಾಸಾಯನಿಕಗಳು ಉಸಿರಿನಲ್ಲಿ ಪ್ರವೇಶಿಸದಂತೆ ಮಾಸ್ಕ್ ಧರಿಸಬೇಕು. ವಾಕಿಂಗ್ ಮತ್ತು ವ್ಯಾಯಾಮ ಮಾಡಲು ಮುಂಜಾವಿನ ಸಮಯವನ್ನು ಆಯ್ದುಕೊಳ್ಳಬೇಕು ಉತ್ತಮ ಎನ್ನುತ್ತಾರೆ ತಜ್ಞರು.