ಅದಲು ಬದಲಾದ ಎರಡು ಧರ್ಮದ ಮಕ್ಕಳು  
ಸಮಾಚಾರ

ಅದಲು ಬದಲಾದ ಹಿಂದೂ-ಮುಸ್ಲಿಂ ಮಕ್ಕಳು: ‘ಧರ್ಮ’ಕ್ಕಿಂತ ಪ್ರೀತಿ, ವಾತ್ಸಲ್ಯವೇ ದೊಡ್ಡದು ಎಂದ ಕುಟುಂಬಗಳು!

ಇಲ್ಲಿ ಹೇಳಹೊರಟಿರುವುದು ಯಾವುದೋ ಚಿತ್ರದ ಕಥೆಯಲ್ಲ, ಬದಲಿಗೆ ಅಸ್ಸಾಂ ರಾಜ್ಯದಲ್ಲಿ ನಡೆದ ಒಂದು ಕುತೂಹಲಕರ ಘಟನೆ. ಆಸ್ಪತ್ರೆಯೊಂದರ ವಾರ್ಡಿನಲ್ಲಿ ಎರಡು ಗಂಡು ಮಗು ಜನಿಸಿದ್ದವು. ಆದರೆ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯತನದಿಂದ ಈ ಎರಡೂ ಮಕ್ಕಳು ಅದಲು ಬದಲಾಗಿದ್ದವು. ಈ ಅಚಾತುರ್ಯ ನಡೆದಿದ್ದು ಎರಡು ವರ್ಷಗಳ ಹಿಂದೆ. ಮುಂದೇನಾಯಿತು? ಪೋಷಕರಿಗೆ ಈ ವಿಷಯ ತಿಳಿಯಿತೇ? ಮಕ್ಕಳು ಹೇಗೆ ಬೆಳೆದರು? ಎಂಬ ಇಂತಹ ಪ್ರಶ್ನೆಗಳಿಗೆ ಉತ್ತರ ಈ ‘ಸ್ಟೋರಿ’ಯಲ್ಲಿದೆ ನೋಡಿ.

ಶಹಬುದ್ದೀನ್ ಅಹ್ಮದ್ ಅವರು ವೃತ್ತಿಯಿಂದ ಶಿಕ್ಷಕರು. ಇವರ ಪತ್ನಿ ಸಲ್ಮಾ ಪರ್ವಿನ್. ಆವತ್ತು 2015ರ ಮಾರ್ಚ್ 11. ಆ ದಿನ ತಮ್ಮ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ. ಬೆಳಿಗ್ಗೆ 6 ಗಂಟೆಗೆ ಅಸ್ಸಾಂ ರಾಜ್ಯದ ಮಂಗಲ್‌ದಾಯಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಒಂದು ಗಂಟೆಯ ನಂತರ, ಪರ್ವಿನ್ ಜನ್ಮ ನೀಡಿದ್ದು ಮುದ್ದಾದ ಗಂಡು ಮಗುವಿಗೆ.  ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಗೂ ಇದೇ ವಾರ್ಡ್‌ನಲ್ಲಿ ಕೆಲವು ನಿಮಿಷಗಳ ಅಂತರದಲ್ಲಿಯೇ ಗಂಡು ಮಗು ಜನಿಸಿತ್ತು.

ಪರ್ವೀನ್ ಮರುದಿನದವೇ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ.ಆದರೆ ಒಂದು ವಾರದ ನಂತರ, ಸಲ್ಮಾ ಪರ್ವಿನ್ ಅವರಿಗೆ ಮಗುವಿನ ಕುರಿತು ಕೆಲವು ಸಂದೇಹಗಳು ಮೂಡಿದವು. “ಈ ಮಗು ನಮ್ಮದಲ್ಲ, ಈ ಮಗುವಿನ ಮುಖ ನೋಡಿದಾಗ, ಅನುಮಾನ ಮೂಡುತ್ತಿದೆ. ನನ್ನದೇ ಕೋಣೆಯಲ್ಲಿ ದಾಖಲಾಗಿದ್ದ ಇನ್ನೊಬ್ಬ ಮಹಿಳೆಯ ಮುಖವನ್ನು ಈ ಮಗು ಹೋಲುತ್ತದೆ.

ಈ ತರಹದ ಚಿಕ್ಕ ಕಣ್ಣುಗಳೂ ಆ ಬುಡಕಟ್ಟು ಮಹಿಳೆಯ ಕಣ್ಣುಗಳಂತಿವೆ. ಮಗು ಆಸ್ಪತ್ರೆಯಲ್ಲಿ ಅದಲು ಬದಲಾಗಿರಬಹುದು," ಎಂದು ಪರ್ವೀನ್ ತಮ್ಮ ಪತಿಗೆ ಹೇಳುತ್ತಾರೆ.ಹೀಗೆ ಆಸ್ಪತ್ರೆಯಿಂದ ಮನೆಗೆ ಮರಳಿದ ಕೆಲವೇ ದಿನಗಳಲ್ಲಿ ಆ ಮಗು ತಮ್ಮದಲ್ಲ ಎಂಬ ಸಂಶಯ ಇಬ್ಬರಿಗೂ ದಟ್ಟವಾಗುತ್ತದೆ. ಆದರೂ ನವಜಾತ ಶಿಶುವನ್ನು ನೋಡಿ ಅವರು ಸುಮ್ಮನಿರುತ್ತಾರೆ.

ತಮಗೆ ದೊರಕಿದ ಮಗು ತಮ್ಮದೇ ಎನ್ನುವ ರೀತಿಯಲ್ಲಿಯೇ ಅದನ್ನು ಬೆಳೆಸುತ್ತಾರೆ. ಆ ಮಗುವೂ ಕೂಡ ಪರ್ವಿನ್ ಅವರನ್ನೇ ಅಮ್ಮ ಎಂದು ನಂಬಿಕೊಂಡು ಬೆಳೆದು ಬಿಡುತ್ತದೆ. ಹೀಗಾಗಿ ಕಳೆದ ಎರಡು ವರ್ಷಗಳಲ್ಲಿ ದಂಪತಿಗೆ ಮಗುವಿನೊಂದಿಗೆ ಅಪಾರವಾದ ಅನ್ಯೋನ್ಯತೆ, ಮಮತೆ ಮತ್ತು ವಾತ್ಸಲ್ಯ ಉಂಟಾಗುತ್ತದೆ. ಇನ್ನೊಂದು ಕಡೆ ಆ ಮಗುವು ಕೂಡ ಬುಡಕಟ್ಟು ಸಮುದಾಯದಲ್ಲಿ ಬೆಳೆಯತೊಡಗುತ್ತದೆ.

ಆದರೆ ಶಹಾಬುದ್ದೀನ್‌ ಅಹ್ಮದ್‌, ತಮ್ಮ ಮಗು ಆಸ್ಪತ್ರೆಯಲ್ಲಿ ಅದಲು ಬದಲಾಗಿದೆಯೇ ಎಂಬ ಸಂಶಯವನ್ನು ನಿವಾರಿಸಿಕೊಳ್ಳಲು ಬಯಸುತ್ತಾರೆ. ಆರಂಭದಲ್ಲಿ ಅವರಿಗೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದರಾದರೂ, ಅನೇಕ ಸವಾಲುಗಳನ್ನು ಎದುರಿಸಿದರು. ಕೊನೆಗೆ ಅದೇ ಆಸ್ಪತ್ರೆಯಲ್ಲಿ, ತಮ್ಮ ಮಗು ಜನಿಸಿದ ದಿನದಂದೇ ಜನಿಸಿದ ಎಲ್ಲಾ ಶಿಶುಗಳ ವಿವರಗಳನ್ನು ಕೋರಿ, ‘ಮಾಹಿತಿ ಹಕ್ಕು ಖಾಯ್ದೆ’ಯಡಿ ಅರ್ಜಿ ಹಾಕಿದರು. ಅದರಿಂದ ಮಗು ಅದಲು ಬದಲಾಗಿದೆ ಎಂಬುದು ಅವರಿಗೆ ಖಾತರಿಯಾಯಿತು.

“ತಮ್ಮ ಪತ್ನಿಯು ಮಗುವಿಗೆ ಜನ್ಮ ನೀಡಿದ ದಿನವೇ, ಅದೇ ವಾರ್ಡಿನಲ್ಲಿದ್ದ ಬುಡಕಟ್ಟು ಸಮುದಾಯದ ಮಹಿಳೆಗೂ ಗಂಡು ಮಗು ಜನಿಸಿತ್ತು. ಅದೂ ಕೂಡ 3 ಕೆ.ಜಿ ತೂಕವನ್ನೇ ಹೊಂದಿತ್ತು. ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ಎರಡೂ ಮಗು ಅದಲು ಬದಲಾಗಿದ್ದವು,” ಎಂಬ ಮಾಹಿತಿ ಮಗು ಹುಟ್ಟಿದ ಸರಕಾರಿ ಆಸ್ಪತ್ರೆ ಮತ್ತು ಆರೋಗ್ಯ ಇಲಾಖೆಯಿಂದ ಖಚಿತವಾಯಿತು.

ಈ ವಿಷಯ ತಿಳಿದ ನಂತರ, ಬುಡಕಟ್ಟು ಸಮುದಾಯದ ಅನಿಲ್ ಮತ್ತು ಶಿವಾಲಿ ಬೋರೋ ದಂಪತಿ ಭೇಟಿ ಮಾಡಲು ಶಹಾಬುದ್ದೀನ್‌ ಆಲೋಚಿಸಿದರು. ತಮ್ಮ ಮನೆಯಿಂದ ಕೇವಲ 30 ಕಿ.ಮೀ (19 ಮೈಲಿ) ದೂರದಲ್ಲಿ ದಂಪತಿ ಮನೆಯಿತ್ತು. ಶಹಾಬುದ್ದೀನ್‌ ಅವರ ಮನೆಗೆ ತೆರಳಿ ವಿಷಯವನ್ನು ತಿಳಿಸಲು ಯತ್ನಸಿದರೂ, ಸಾಧ್ಯವಾಗದೇ ಕೊನೆಗೆ ಪತ್ರ ಬರೆದರು;

“ನಮ್ಮ ಮಗು ಅದಲು ಬದಲಾಗಿದೆ. ಇದು ಆರ್‌ಟಿಐನಿಂದಲೂ ಖಚಿತವಾಗಿದೆ. ಅದರ ಬಗ್ಗೆ ಹೆಚ್ಚಿನ ವಿವರ ಮತ್ತು ಮಾತುಕತೆಗೆ ಈ ಪತ್ರದ ಕೆಳಭಾಗದಲ್ಲಿ ನನ್ನ ಫೋನ್ ಸಂಖ್ಯೆಯಿದೆ. ಅದಕ್ಕೆ ಕರೆ ಮಾಡಿ ನನ್ನನ್ನು ಸಂಪರ್ಕಿಸಿ,” ಎಂದರು ಶಹಾಬುದ್ದೀನ್‌.ಈ ಪತ್ರವನ್ನು ಓದಿದ ಬೋರೊ ದಂಪತಿಗೆ ಅವರು ಹೇಳಿದ್ದನ್ನು ನಂಬಲಾಗಲಿಲ್ಲ. ಆದರೆ ಬೇಟಿ ಮಾಡಲು ಒಪ್ಪಿಗೆ ನೀಡುತ್ತಾರೆ.

ಆಗ "ನಾನು ಅವನನ್ನು (ಜೋನೇಥ್) ನೋಡಿದ ಮೊದಲ ಬಾರಿಗೆ, ಅವನು ತನ್ನ ತಂದೆಯನ್ನೇ ಹೋಲುತ್ತಿದ್ದನೆಂದು ನಾನು ಅರಿತುಕೊಂಡೆ, ನಾವು ಬೋಡೋ ಬುಡಕಟ್ಟು ಜನರೆಂದರೆ, ಇತರ ಅಸ್ಸಾಮಿ ಅಥವಾ ಮುಸ್ಲಿಮರಂತೆ ಅಲ್ಲ. ನಮ್ಮ ಕಣ್ಣುಗಳು ಭಿನ್ನವಾಗಿರುತ್ತವೆ. ನಾವು ಮಂಗೋಲಿಯನ್ನರ ವೈಶಿಷ್ಟ್ಯಗಳನ್ನು ಹೊಂದಿದ್ದೇವೆ,” ಎಂದು ಶೆವಾಲಿ ಬೋರೋ ಅಭಿಪ್ರಾಯ ಪಡುತ್ತಾರೆ.

ಈ ಮೂಲಕ ಮಕ್ಕಳು ಅದಲು ಬದಲಾಗಿರುವುದು ಅವರಿಗೂ ನಿಜವೆನಿಸುತ್ತದೆ.ಜೊತೆಗೆ, ಸಲ್ಮಾ ಪರ್ಬಿನ್ ಮೊದಲ ಬಾರಿಗೆ ರಿಯಾನ್ (ಬುಡಕಟ್ಟು ಕುಟುಂಬದ ಜೊತೆ ವಾಸಿಸುತ್ತಿದ್ದ ಮಗು) ನೋಡಿದಾಗ, ಅದು ತನ್ನದೇ ಮಗು ಎಂಬು ಅವರಿಗೆ ಅರಿವಾಗುತ್ತದೆ. ಎಷ್ಟೇ ಆದರೂ ತಾಯಿಯ ಕರುಳಲ್ಲವೇ? ತನ್ನ ಮಗುವನ್ನು ಪತ್ತೆ ಹಚ್ಚುವುದು ಅದಕ್ಕೆ ಕಷ್ಟವೇನಲ್ಲ. "ಮಕ್ಕಳನ್ನು ಈಗ ಪರಸ್ಪರ ಬದಲಾಯಿಸಿಕೊಳ್ಳೋಣ," ಎಂದು ಪರ್ವಿನ್ ಮನವಿ ಮಾಡಿಕೊಳ್ಳುತ್ತಾರೆ. ಆದರೆ ಬೋರೊ ಕುಟುಂಬ ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಲು ನಿರಾಕರಿಸುತ್ತದೆ.

ಶಹಾಬುದ್ದೀನ್‌ ಒತ್ತಾಯದ ಮೇಲೆ, ಆಸ್ಪತ್ರೆ ಅಧಿಕಾರಿಗಳು ಮಕ್ಕಳ ಅದಲು-ಬದಲು ಆರೋಪಗಳ ಬಗ್ಗೆ ವಿಚಾರಣೆ ನಡೆಸುತ್ತಾರೆ. ಅದೇ ಜನ್ಮ ದಿನದಂದು ವಾರ್ಡ್‌ನಲ್ಲಿ ಕಾರ್ಯನಿರತರಾಗಿದ್ದ ನರ್ಸ್ ಸಂಪರ್ಕಿಸಿ, ಈ ಕುರಿತು ಎರಡೂ ಕುಟುಂಬಕ್ಕೆ ನಿಜಾಂಶವನ್ನು ತಿಳಿಸುತ್ತಾರೆ. ಕೊನೆಗೆ ಬೋರೋ ದಂಪತಿ ಎರಡೂ ಗಂಡು ಮಕ್ಕಳ ಡಿಎನ್‌ಎ ಪರೀಕ್ಷೆಗೆ ಒಪ್ಪಿಕೊಳ್ಳುತ್ತಾರೆ. ಈ ಪರೀಕ್ಷೆಯಲ್ಲಿಯೂ ಮಕ್ಕಳು ಅದಲು ಬದಲಾದದ್ದು ಖಚಿತವಾಗುತ್ತದೆ.

ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ದಂಪತಿ ಜೋಡಿ ಕೋರ್ಟಿ ಮೆಟ್ಟಿಲೇರುತ್ತಾರೆ.ಆದರೆ, “ಒಂದು ವೇಳೆ ನ್ಯಾಯಾದೀಶರು ಮಕ್ಕಳನ್ನು ಬದಲು ಮಾಡಲು ಒಪ್ಪಿಕೊಂಡರೂ, ನಮಗೆ ಹಾಗೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ನಾವು ವರ್ಷಗಳಿಂದ ಮಗುವನ್ನು ಬೆಳೆಸಿದ್ದೇವೆ,” ಎಂದು ಮಗವಿನೊಂದಿಗಿನ ಭಾಂದವ್ಯವನ್ನು ಭಾವನಾತ್ಮಕವಾಗಿ ಹೇಳುತ್ತಾರೆ ಸಲ್ಮಾ ಪರ್ವೀನ್.

ಜೊತೆಗೆ ಇಬ್ಬರು ಮಕ್ಕಳು ತಮ್ಮನ್ನು ಬೆಳೆಸಿದವರಿಂದ ದೂರ ಹೋಗಲು ನಿರಾಕರಿಸುತ್ತವೆ. ಬೆಳೆಸಿದವರೊಂದಿಗೆಯೇ ಉಳಿಯಲು ಬಯಸುತ್ತವೆ.“ಮಕ್ಕಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಈಗ ಭಾವನಾತ್ಮಕವಾಗಿ ಅವರಿಗೆ ಹಾನಿಯನ್ನುಂಟು ಮಾಡುತ್ತದೆ. ಏಕೆಂದರೆ ಮಕ್ಕಳು ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ತುಂಬಾ ಚಿಕ್ಕವರಾಗಿದ್ದಾರೆ. ಅವರು ತಮ್ಮೊಂದಿಗೆ ವಾಸಿಸುತ್ತಿದ್ದ ಕುಟುಂಬಗಳಿಗೆ ಬಹಳ ಹೊಂದಿಕೊಂಡಿದ್ದಾರೆ. ಹಾಗಾಗಿ ಅವರನ್ನು ವಿನಿಮಯ ಮಾಡುವುದು ಸೂಕ್ತವಲ್ಲ,” ಎಂದು ಬೋರೋ ದಂಪತಿ ಅಭಿಪ್ರಾಯ ಪಡುತ್ತಾರೆ.

ಮುಸ್ಲಿಂ ದಂಪತಿಯ ಮಗಳೂ ಕೂಡ ತಮ್ಮೊಂದಿಗೆ ಬೆಳದ ಮಗು ಜೊನೆಥ್‌ನನ್ನು ಕಳುಹಿಸಲು ಒಪ್ಪುವುದಿಲ್ಲ. ಧಾರ್ಮಿಕ ಭಿನ್ನತೆಗಳು ಮುಂದಿನ ದಿನಗಳಲ್ಲಿ ಸಮಸ್ಯೆ ಆಗಬಹುದು ಎಂದು ಪರ್ವಿನ್ ಹೇಳಿದರೂ, " ಮಗು ದೇವರ ಉಡುಗೊರೆ. ಅದು ಹಿಂದೂ, ಮುಸ್ಲಿಂ ಅಂತ ಅಲ್ಲ. ಪ್ರತಿಯೊಬ್ಬರೂ ಒಂದೇ ಮೂಲದಿಂದ ಬಂದಿದ್ದಾರೆ. ಆದರೆ ಬಂದ ಮೇಲೆ ಧರ್ಮ ಅವರಿಗೆ ಅಂಟಿಕೊಳ್ಳುತ್ತದೆ,” ಎನ್ನುವ ಮೂಲಕ ತಾಯಿಯ ಮನವೊಲಿಸಲು ಪ್ರಯತ್ನಿಸುತ್ತಾಳೆ.

ಎರಡು ಕುಟುಂಬಗಳ ಜೀವನ ಶೈಲಿಗಳು, ಭಾಷೆ, ಸಂಸ್ಕೃತಿ ಮತ್ತು ಆಹಾರ ಪದ್ಧತಿ ತುಂಬಾ ವಿಭಿನ್ನ. ಅವರನ್ನು ಈಗ ಮತ್ತೆ ಬದಲಾಯಿಸಿದರೆ, ಅವರು ಸರಿಯಾಗಿ ಜೀವಿಸಲು ಸಾಧ್ಯವಾಗುವುದಿಲ್ಲ ಎಂದು ಶಹಾಬುದ್ದೀನ್ ತನ್ನ ಪತ್ನಿಗೆ ಹೇಳಿ ಸಮಾಧಾನ ಮಾಡುತ್ತಾರೆ.ಈಗಾಗಲೇ ಇಬ್ಬರೂ ತಾಯಂದಿರಿಗೆ ತಾವು ಬೆಳೆಸಿದ ಬೆಳೆದ ಮಗುವಿನ ಜೊತೆಗೆ ಭಾವನಾತ್ಮಕ ಸಂಬಂಧ ಏರ್ಪಟ್ಟಿದೆ.

ಅದರ ಜೊತೆಗೆ ತಮ್ಮದೇ ಹೊಟ್ಟೆಯಲ್ಲಿ ಹುಟ್ಟಿದ ಮಗುವಿನ ಬಗ್ಗೆಯೂ ಅವರಿಗೆ ಭಾವನಾತ್ಮಕ ಬಂಧವಿದೆ.  ಆದರೆ ಕೊನಗೆ ಎರಡೂ ಕುಟುಂಬಗಳು ನಿಯಮಿತವಾಗಿ ಭೇಟಿಯಾಗುತ್ತ ಇರಬೇಕೆಂದು ಬಯಸಿವೆ. ಜೊತೆಗೆ “ಮಕ್ಕಳು ಬೆಳೆದ ನಂತರ, ಅವರು ಎಲ್ಲಿ ಇರಬೇಕೆಂದು ಅವರೇ ನಿರ್ಧರಿಸಲಿ,” ಎಂದು ಕುಟುಂಬಗಳೆರಡೂ ಒಪ್ಪಿವೆ.

ಹೀಗೆ ಆಸ್ಪತ್ರೆಯಲ್ಲಿನ ಸಿಬ್ಬಂದಿಯ ಮರೆವಿನಿಂದ ಆದ ಅಚಾತುರ್ಯ ಈ ತಿರುವಿಗೆ ಕಾರಣವಾಗಿದೆ. ಎರಡು ಭಿನ್ನ ಧರ್ಮಗಳಿಗೆ ಸೇರಿದ ಕುಟುಂಬಗಳಿಗೆ ಬೆಳೆದ ಮಕ್ಕಳು ಈಗ ಪರಸ್ಪರ ಭಿನ್ನ ಸಂಸ್ಕೃತಿಯಲ್ಲಿ ಬೆಳೆದು ದೊಡ್ಡವರಾಗುತ್ತಾರೆ. ಇಂತಹ ಸಂದರ್ಭದಲ್ಲಿ ಎರಡೂ ಕುಡುಂಬಗಳೂ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹವಾಗಿದೆ. ಮಕ್ಕಳಿಗೆ ಧರ್ಮದ ಚೌಕಟ್ಟಿಗಿಂತ ಪ್ರೀತಿ ವಾತ್ಸಲ್ಯವೇ ಮುಖ್ಯ ಎಂದು ಈ ಮೂಲಕ ಸಾಬೀತಾದಂತಾಗಿದೆ.

ಕೃಪೆ: ಬಿಬಿಸಿ.