'ಬೆಂಗಳೂರು ಟು ಆನೇಕಲ್': ಹಾಲಿವುಡ್‌ ಸಿನಿಮಾಗಳ ಹುಸಿ ರೋಚಕತೆ ಮೀರಿಸುವ ನಿತ್ಯ ಪ್ರಯಾಣ!
ಸಮಾಚಾರ

'ಬೆಂಗಳೂರು ಟು ಆನೇಕಲ್': ಹಾಲಿವುಡ್‌ ಸಿನಿಮಾಗಳ ಹುಸಿ ರೋಚಕತೆ ಮೀರಿಸುವ ನಿತ್ಯ ಪ್ರಯಾಣ!

ಬೆಂಗಳೂರಿನ

ಟ್ರಾಫಿಕ್‌ ತಪ್ಪಿಸಿಕೊಂಡು ಕೂಗಳತೆಯಲ್ಲೇ ಇರುವ ಆನೇಕಲ್ಲಿಗೆ ಪ್ರತಿದಿನ ಪ್ರಯಾಣಿಸುವುದು ರೋಚಕ. ಇದು ನನಗೂ ಗೆಳೆಯ ಮುರಳಿ ಕಾಟಿಗೂ ಪ್ರತಿನಿತ್ಯದ ಅನುಭವ. ಹಾಲಿವುಡ್‌ ಸಿನಿಮಾಗಳ ಹುಸಿ ರೋಚಕತೆಯಾಚೆಗೂ, ನಿಮ್ಮ ಕಲ್ಪನಾ ವಿಲಾಸದ‌ ರಮ್ಯತೆಯ ಆಚೆಗೂ,‌ ನಾವು ನಮ್ಮ‌ ಪ್ರಯಾಣದ ಅನುಭವಗಳನ್ನು ದಾಖಲಿಸಿದರೆ ಸಾವಿರಾರು ಪುಟಗಳ ಸಾಹಸ, ಶೋಕ, ಸಂತಸಗಳ, ವಿಷಣ್ಣತೆ, ಅಸಹಾಯಕತೆಗಳಿಗೆ ಸಾಕ್ಷಿಯಾಗುತ್ತದೆ.ಇಲ್ಲವೇ ಜಿಮ್ ಕಾರ್ಬೆಟ್, ಕೆನೆತ್ ಅಂಡರ್ ಸನ್‌ನಂತಹವರ ಬೇಟೆಯ ಪ್ರಪಂಚ ನಿಮ್ಮ ಭಾವ ಕೋಶಗಳನ್ನು ತಲ್ಲಣಿಸಿ ಮುತ್ತಿಕೊಳ್ಳುವಂತೆ; ನಮ್ಮ‌ ಅನುಭವಗಳೂ ನಿಮ್ಮನ್ನು ಮುತ್ತಿಕೊಳ್ಳಲೂಬಹುದು. ಆದರೆ ಸದ್ಯಕ್ಕೆ‌ ಇವತ್ತಿನ ರಸ್ತೆಯ ಮೇಲಿನ ದುರಂತ‌ ಮತ್ತು ಮಾನವೀಯತೆಯನ್ನಷ್ಟೇ ಇಲ್ಲಿ ದಾಖಲಿಸುತ್ತಿದ್ದೇನೆ.

ಬೆಂಗಳೂರಿನ ಟ್ರಾಫಿಕ್ಕು ಪ್ರತಿಯೊಬ್ಬರಲ್ಲೂ ಎಂತಹ ಏಕತಾನತೆಯನ್ನು ಹೇರಬಲ್ಲದು ಎನ್ನುವುದು ಅನುಭವಿಸಿದವರಿಗೆ ಗೊತ್ತು. "ಪ್ರತಿ ಕ್ಷಣವನ್ನು ನಿಮ್ಮ‌ ಜೀವನದ ಕೊನೆ ಕ್ಷಣವೆಂದೇ ಅನುಭವಿಸಿ" ಎನ್ನುತ್ತಾನೇ ಬುದ್ದ. ಆದರೆ ಬೆಂಗಳೂರಿನಲ್ಲಿ ಜೀವಿಸುವ ಎಲ್ಲರ ಬದುಕಿನ ಕ್ಷಣಗಳು, ನಿಮಿಷಗಳು, ಗಂಟೆಗಳು ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ನಿರ್ದಯವಾಗಿ ಕೊಲ್ಲಲ್ಪಡುತ್ತಿದೆ‌, ಜೊತೆಗೆ ಎಷ್ಟೋ ಜನರ ಪ್ರಾಣವೂ ಕೂಡ. ಸತತ 20 ವರ್ಷಗಳ ನಮ್ಮ ಪ್ರತಿ ದಿನದ ಕನಿಷ್ಠ 5 ಗಂಟೆಗಳ ಪ್ರಯಾಣ ಬದುಕಿನ ಅರ್ಧ ಆಯುಷನ್ನೇ ಕೊಂದಿದೆ. ಬೆಂಗಳೂರಿನ ಸುತ್ತಲಿನ ಊರುಗಳಿಂದ ಬದುಕು ಅರಸಿ ದಿನನಿತ್ಯ ಪ್ರಯಾಣ ಮಾಡುವವರ ಹೊಟ್ಟೆಪಾಡಿನ ಅನಿವಾರ್ಯ ಆಯ್ಕೆ.

ಬೆಂಗಳೂರಿನಿಂದ ಬೇಗ ಮನೆ ತಲುಪುವ ದಾವಂತದಲ್ಲಿ ನಾನು ಬೈಕಿನಲ್ಲಿ ಪ್ರಯಾಣ ಬೆಳೆಸಿದ್ದೆ. ಸಂಜೆ ‌6.30ರ ಸುಮಾರಿಗೆ ಬೆಂಗಳೂರಿನಿಂದ ಪ್ರಯಾಣ ಆರಂಭವಾಗಿತ್ತು. ಇಗ್ಗಲೂರಿನ ಕೆರೆಯ ಏರಿಯ ಮೇಲೆ ಬರುವಷ್ಟರಲ್ಲಿ ಕತ್ತಲು. ವಾಹನಗಳ ಕಣ್ಣು ಕೊರೈಸುವ ಬೆಳಕಿನಲ್ಲಿ ನಾಯಿಯೊಂದು ಅಡ್ಡ ಬಂದು, ತಪ್ಪಿಸಲು ಹೋಗಿ ಬೈಕಿನಿಂದ ಬಿದ್ದ ಹದಿಹರೆಯದ ಹುಡುಗ ನನ್ನ ಕಣ್ಣ ಮುಂದಿದ್ದ. ಕಣ್ಣ ಮುಂದೆಯೇ ನಡೆಯುವ ಅಪಘಾತಗಳ‌ನ್ನು ನೀವು ನೋಡಿದ್ದರೆ, ನಿಮ್ಮ ಹೃದಯ ಬಡಿತ ಏರಿಳಿಸಿ, ಭಯದ ಅನುಭವಗಳನ್ನು ಮೂಡಿಸುತ್ತವೆ. ಖಂಡಿತವಾಗಿ ನನಗೂ ಹಾಗೆಯಾಯಿತು. ತಕ್ಷಣ ಗಾಡಿ‌ ನಿಲ್ಲಿಸಿ ಹೋದೆ. ಕೆಳಗೆ ಬಿದ್ದು ಎದ್ದೇಳಲಾಗದೇ ಹುಡುಗ ನಡಗುತ್ತಿದ್ದ. ಆತನ ಹೆಸರು ಅವಿನಾಶ್, ಆನೇಕಲ್ ಹತ್ತಿರವಿರುವ ಹಾರಹದ್ದೆ ಊರಿನವನು ಎಂದು ನಂತರ ಗೊತ್ತಾಯಿತು. ವಾಹನಗಳು ಬೆಂಗಳೂರಿನ ಟ್ರಾಫಿಕ್ಕನ್ನು ಭೇದಿಸಲು ಓಡುತ್ತಲೇ ಇದ್ದವು. ಯಾರಿಗೂ ನಿಲ್ಲಿಸಿ ನೋಡುವ ವ್ಯವಧಾನವಿಲ್ಲ. ಅಷ್ಟರಲ್ಲೆ ಇಬ್ಬರು ಹುಡುಗರು ಗಾಡಿ ನಿಲ್ಲಿಸಿ ಓಡಿ ಬಂದರು. ಮೂವರು ಸೇರಿ ಆ ಹುಡುಗನನ್ನು ಎತ್ತಿಹಿಡಿದು ನಿಂತೆವು. ಸಂಪೂರ್ಣ ಕಾಲಿನ ಪಾದದ ಮೂಳೆ ಮುರಿದಿದ್ದದು, ಮೈ ಕೈಯೆಲ್ಲಾ ಅಲ್ಲಲ್ಲಿ ಪರಂಗಿ ಹಣ್ಣಿನಂತೆ ಜೀಕಿಕೊಂಡು ರಕ್ತ ಜಿನುಗುತ್ತಿದ್ದ ಹುಡುಗನ ಸ್ಥಿತಿಕಂಡು ಮೈಬೆವರಿತ್ತು.

ನಡೆಯಲಾಗದ ಆತನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲು ಯಾವುದೋ ಒಂದು ಕಾರನ್ನು ಅಡ್ಡಗಟ್ಟಿದೆವು. ಆತ ನಿಲ್ಲಿಸದೆ ಮುಂದಕ್ಕೆ ಹೋದ. ಹಾಗೆ ಮೂರು ಕಾರುಗಳು ಮುಂದಕ್ಕೋದ‌ ನಂತರ ಕಾರೊಂದು ನಿಂತಿತು. ಏನು ಯೋಚಿಸದೆ ಮೂವರು ಸೇರಿ ಕಾರಿನಲ್ಲಿ ಕೂರಿಸಿ ಹೈವೆಯಲ್ಲಿದ್ದ ಸ್ಪರ್ಷ‌ ಮೂಳೆ ಆಸ್ಪತ್ರೆಯ ಕಡೆ ಹೊರಟೆವು. ಹೊರಡುವ ಜೊತೆಯಲ್ಲೇ ಹುಡುಗನ ತಾಯಿಗೆ ಪೋನ್ ಮಾಡಿ ವಿಷಯ ತಿಳಿಸಿದೆವು. ಆ ಕಡೆಯಿಂದ ಜೋರಾಗಿ ಕಿರುಚುವ ಮತ್ತು ಅಳುವ ದನಿ ಕಿವಿಗೆ ಅಪ್ಪಳಿಸಿ, ಸಮಾಧಾನಿಸುವಷ್ಟರಲ್ಲಿ ನನಗೆ  ಹೃದಯ ಬಾಯಿಗೆ ಬಂದಿತ್ತು. ಆಸ್ಪತ್ರೆಗೆ ಹೋಗುವಷ್ಟರಲ್ಲೇ ತುರ್ತು ಚಿಕಿತ್ಸಾ ಘಟಕದ ಬಾಗಿಲು ತೆರೆದಿತ್ತು. ಹಾಸಿಗೆಯ ಮೇಲೆ ಮಲಗಿದ ಹುಡುಗ ನೋವಿನಿಂದ‌ ನರಳತೊಡಗಿದ್ದ. ನರಳಾಟದ ನೋವನ್ನು ಸಾವರಿಸಿಕೊಂಡು ಮೂವರು ಹೊರಬಂದು ನಿಂತೆವು. ಹುಡುಗನಿಗೆ ಪ್ರಾಣಪಾಯವೇನಿರಲಿಲ್ಲ.‌ ಆದರೂ ಆತನ ಮುರಿದ ಪಾದದ ಮೂಳೆಯ ಚಿತ್ರ, ನೋವಿನ ನರಳಾಟ ನಮ್ಮನ್ನು ಅಲ್ಲಾಡಿಸಿಬಿಟ್ಟಿತ್ತು. ಮತ್ತೊಮ್ಮೆ ಆತನ ತಾಯಿಗೆ ಕರೆ ಮಾಡಿ ಸಮಾಧಾನದಿಂದ‌ ನಡೆದ ವಿಷಯ ತಿಳಿಸಿ ಆತಂಕ ದೂರ ಮಾಡಿದ್ದೆ. ಮೂವರು ಹೊರಬಂದು, ನನ್ನೆದುರಿಗಿದ್ದವರ ಮುಖಗಳನ್ನು ಪರಸ್ಪರ ನೋಡಿಕೊಂಡು ನಿಂತೆವು. ಪರಿಚಯಿಸಿಕೊಂಡಾಗ ನನ್ನೆದುರಿಗಿದ್ದವರಲ್ಲಿ ಒಬ್ಬಾತ ರಹಮಾನ್, ಮತ್ತೊಬ್ಬಾತ ವಸೀಂ. ನಾನು ಮಂಜು.

ಆಗಷ್ಟೇ ಮದುವೆಯಾಗಿದ್ದ ಗೆಳೆಯನಿಗೆ ಶುಭಕೋರುವ ದಾವಂತದಲ್ಲಿ ಸುಂದರವಾಗಿ ರೆಡಿಯಾಗಿ ಬೆಂಗಳೂರಿನ ಕಡೆ ವೇಗವಾಗಿ ಬೈಕಿನಲ್ಲಿ ಹೊರಟಿದ್ದವರು ಅವರು. ನಾನು ಹೆಂಡತಿ ಮಕ್ಕಳನ್ನು ನೋಡುವ, ಮನೆ ಸೇರುವ ದಾವಂತದಲ್ಲಿ ಆನೇಕಲ್ಲಿನ ಕಡೆ ಬೈಕಿನಲ್ಲಿ ಹೊರಟಿದ್ದವನು. ಅಪಘಾತವಾಗಿದ್ದ ಹುಡುಗನು ಸಹಾ ಯಾವುದೋ ದಾವಂತಕ್ಕೆ ವೇಗವಾಗಿ ಬೈಕಿನಲ್ಲೇ ಹೊರಟಿದ್ದವನು. ಈಗ ಆತನ ತಾಯಿಯೂ ಬೈಕಿನಲ್ಲೆ ಮಗನನ್ನು ನೋಡಲು ಅಷ್ಟೇ ಆತುರ ಮತ್ತು ವೇಗಗಳಲ್ಲಿ ಹೊರಟಿದ್ದವಳು. ಎಲ್ಲರೂ ಬೆಂಗಳೂರೆಂಬ ನಗರದಲ್ಲಿ ವೇಗದ ಮಾಯಾಸೂತ್ರಕ್ಕೆ ಸಿಕ್ಕಿಕೊಂಡಿದ್ದೆವು. ಮೂವರು ಪರಿಚಯ ಮಾಡಿಕೊಳ್ಳುತ್ತಲೇ ನನ್ನ ಜೇಬಿನಲ್ಲಿದ್ದ ಪ್ಲೈವೋವರ್ ಟೋಲ್ ಟಿಕೇಟನ್ನು ಎಸೆಯಹೊರಟಿದ್ದೆ. ರಹಮಾನ್ ತಡೆದು, ಸಾರ್ ನಾವು ಆ ಕಡೆನೇ ಹೊರಟಿದೀವಿ ಎಸಿಬೇಡಿ ಕೊಡಿಯೆಂದ. 25 ರೂಪಾಯಿಯ ಟಿಕೇಟು ವ್ಯರ್ಥವಾಗುವುದಾದರು ಯಾಕೆ? ನಾನು ಅವರ ಕೈಗಿತ್ತೆ.

ದೂರದ ಊರಿಂದ ಬರುವ ಆ ಹುಡುಗನ ತಾಯಿಯ ಬರುವಿಕೆಗೆ ಮೂವರು ಕಾಯುತ್ತ ನಿಂತೆವು. ರೆಹಮಾನ್ ಮತ್ತು ವಸೀಂನ ಬರುವಿಕೆಗಾಗಿ ಪೋನ್ ಮಾಡುತ್ತ ಕಾಯುತ್ತಿದ್ದ ಅವರ ಪ್ರಾಣ ಸ್ನೇಹಿತ ಮದುವೆ ಗಂಡು. ನನ್ನ ಬರುವಿಕೆಗಾಗಿ ಪದೇ ಪದೇ ಪೋನ್ ಮಾಡಿ ಕಾಯುತ್ತಿದ್ದ ನನ್ನ ಹೆಂಡತಿ, ಪೋನ್ ಮಾಡಿ ಆ ಹುಡುಗನ ತಾಯಿಯ ಬರುವಿಕೆಗಾಗಿ ಕಾಯುತ್ತಿದ್ದ ನಾವು ಮೂವರು. ಎಲ್ಲರಿಗೂ ತುರ್ತು. ಆದರೇ ಅಗತ್ಯಗಳು ಬೇರೆ ಬೇರೆ. ಎಲ್ಲರೂ ಕಾಲ ಮತ್ತು ಸಂಬಂಧಗಳ ಸರಪಳಿಯಲ್ಲಿದ್ದೆವು. ನಾನು ಹೀಗೆ ಯೋಚಿಸುವಷ್ಟರಲ್ಲೇ ರಹಮಾನ್, "ಸಾರ್ ಈ ಆಸ್ಪತ್ರೆ ರಕ್ತ ಹೀರುವಂತೆ ಹಣ ಹೀರುತ್ತೆ , ಬಡವರಿಗಲ್ಲ ಇದು," ಅಂದ. ಮೂವರು ಆ ಹುಡುಗನನ್ನು ಉಳಿಸುವ‌‌ ಏಕ ಮಾತ್ರ ಯೋಚನೆಯಲ್ಲಷ್ಟೇ ಸಕಲ‌ ಸೌಲಭ್ಯಗಳ ಹೆದ್ದಾರಿಯ ಅಪಘಾತಗಳ ಚಿಕಿತ್ಸೆಗಾಗಿಯೇ ಮಾಡಿದ್ದ ಸ್ಪರ್ಶ ಆಸ್ಪತ್ರೆಗೆ ಸೇರಿಸಿದ್ದೆವು. ಒಂದು ವೇಳೆ ಬೇರೆ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದ್ದರೂ, ಅವರು ಒಂದಷ್ಟು ಚಿಕಿತ್ಸೆ ಕೊಟ್ಟು, ಹಣಪೀಕಿ ಕೊನೆಗೆ ಇಲ್ಲಿಗೆ ಕಳುಹಿಸುತ್ತಿದಿದ್ದರು ಎಂಬುದು ಮೊದಲೇ ಅರಿತಿದ್ದರಿಂದ; ನೇರವಾಗಿ ಇಲ್ಲಿಗೆ ಬಂದಿದ್ದೆವು.

ಆದರೂ ರಹಮಾನ್ ಹೇಳಿದ ಆಸ್ಪತ್ರೆಯ ದುಬಾರಿತನದಿಂದ‌, ಹುಡುಗನ ಹಿಂದು ಮುಂದು ತಿಳಿದುಕೊಳ್ಳದೆ ನೇರವಾಗಿ ಇಲ್ಲಿಗೆ ಕರೆದುಕೊಂಡು ಬಂದದ್ದು ತಪ್ಪು ಎಂದು ಅನಿಸತೊಡಗಿತು. ಹಾಗೆಂದು ಸದ್ಯಕ್ಕೆ ಇನ್ನೆಲ್ಲೂ ಕರೆದುಕೊಂಡು ಹೋಗುವ ಆಯ್ಕೆಗಳೇನು ನಮಗಿರಲಿಲ್ಲ.  ಆದರೂ ತಪ್ಪು ಮಾಡಿದ ಮನೋಭಾವದಿಂದ ಹುಡುಗನ ಬಳಿ ಓಡಿದೆವು. ನಾನು ಮುಜುಗರದಿಂದಲೇ "ನಿಮ್ಮ ಮನೆ ಕಡೆ ಆರ್ಥಿಕವಾಗಿ ಅನುಕೂಲ ಇದಿಯೇನಪ್ಪ" ಎಂದೆ. ಮೊದಲನೇ ಪಿಯುಸಿ ಓದುತ್ತಿದ್ದ ಹುಡುಗ, ನೋವಿನ ನರಳಾಟದ ಮಧ್ಯೆಯೇ 'ಇದೇ ಸಾರ್, ಹಣಕಾಸಿಂದು ಏನು ತೊಂದರೆ ಇಲ್ಲ; ಥ್ಯಾಂಕ್ಯೂ" ಎಂದ‌. ಮೂವರು ಮುಖ‌ ಮುಖ ನೋಡಿಕೊಂಡೆವು. ನಮಗೆ ಆ ಕ್ಷಣಕ್ಕೆ ಖಂಡಿತ ನಿರಾಳ ಎನಿಸಿ ಹೊರಬಂದು, ಆ ಹುಡುಗನ ತಾಯಿಯ ಬರುವಿಕೆಗೆ ಎದುರು ನೋಡುತ್ತ 40 ನಿಮಿಷ ಕಾಯುತ್ತ ನಿಂತೆವು.  ಅಲ್ಲೇ‌ ಇದ್ದ ಸೆಕ್ಯೂರಿಟಿ ಬಂದು ಮೂವರ ಮುಖ‌ ನೋಡುತ್ತ "ನಾವು ಮಾಡೋ ಒಳ್ಳೇ ಕೆಲಸಗಳು ನಮ್ಮನ್ನು ಕಾಯುತ್ವೇ" ಎಂದ. ಆ ಇಬ್ಬರಿಗೇ ಆ ಕ್ಷಣದಲ್ಲಿ‌ ಈ ಸೆಕ್ಯುರಿಟಿಯಾತನ ಮಾತುಗಳು ಏನನ್ನಿಸಿದವೋ ಗೊತ್ತಿಲ್ಲ. ನನ್ನೊಳಗಂತು ಯಾವ ಭಾವಗಳನ್ನೂ ಸ್ಪುರಿಸಲಿಲ್ಲ. ನಾನೊಬ್ಬ ಮನುಷ್ಯನಾಗಿ ನನ್ನಿಂದಾದ ಪ್ರಯತ್ನ ಮಾಡಿದ್ದೆ. ಒಂದು ವೇಳೆ ನನಗೆ ಈ ರೀತಿಯಾದಾಗ ನಿಜವಾಗಿಯೂ,‌ ಸ್ಪಂದಿಸುವಂತಹ ಗುಣವುಳ್ಳವರೇ ನನಗೆ‌ ಸಿಗಲೂ‌ಬಹುದು, ಅಥವಾ ಸಿಗದೆ‌ ಇರಬಹುದು ಎಂದುಕೊಂಡೆ. ‌ ಆ ಮರುಕ್ಷಣವೇ ಆ ಇಬ್ಬರ‌ ಮುಖ‌ ನೋಡುತ್ತ, ವಿಚಿತ್ರ ಖುಷಿ ಅನುಭವಿಸತೊಡಗಿದೆ.

ಹಿಂದೂ-ಮುಸ್ಲಿಂ, ಮೇಲು ಜಾತಿ - ಕೆಳಜಾತಿ, ಬಡವ -ಶ್ರೀಮಂತ‌ ಎಂದೆಲ್ಲ ನರಳುವ ಈ‌‌‌ ನನ್ನ ಊರು, ಈ ದೇಶ,‌ ಈ ಜಗತ್ತಿನ ಸದ್ಯದ ಪರಿಸ್ಥಿತಿಯಲ್ಲಿ ನಾವು ಮೂವರು‌ ನಿಜವಾಗಿಯೂ ವಿಚಿತ್ರವಾಗಿ ವಿಶೇಷ ಅನಿಸಿತು ನನಗೆ. ನಮ್ಮಂತೆ‌ ಲೆಕ್ಕವಿಲ್ಲದಷ್ಟು ಜನ ಧರ್ಮ, ಜಾತಿ ಎಂದು ಮೃಗಗಳಂತೆ ಕೊಂದುಕೊಳ್ಳದೆ, ಯಾವುದೇ ಧರ್ಮ ಬಣ್ಣಗಳ ಅಮಲೂ ಇಲ್ಲದೆ ಒಬ್ಬರಿಗೊಬ್ಬರು ಹೆಗಲುಕೊಟ್ಟು ತಮ್ಮ ಪಾಡಿಗೆ ತಾವು ಬದುಕಿರುವುದರಿಂದಲೇ ಈ ನೆಲ,‌ ಈ ದೇಶ, ಈ ಜಗತ್ತು ಉಸಿರಾಡುತ್ತಿದೆ‌ಯೇನೋ ಅನ್ನಿಸಿತು‌ ನನಗೆ. ಅಷ್ಟರಲ್ಲೇ ಆ ಹುಡುಗನ ತಾಯಿ, ಕಣ್ಣಲ್ಲಿ ನೀರು ತುಂಬಿಕೊಂಡೆ ಬೈಕಿನ ಹಿಂಬದಿ ಸೀಟು ಇಳಿದು ಓಡಿ ಬಂದಳು. ನಾವು ಮೂವರಿಗೂ ಆಕೆ ಆ ಹುಡುಗನ ತಾಯಿ ಎನ್ನುವುದು ನೋಡುತ್ತಲೇ ಅರಿವಿಗೆ ಬಂದು, ತಕ್ಷಣ ಎಮರ್ಜೆನ್ಸಿ ವಾರ್ಡಿನ ಕಡೆ ಕರೆದುಕೊಂಡು ಹೋಗಿ ನಿಂತೆವು.

ಅತ್ತೂಕರೆದು, "ಹೋಗಬೇಡಾಂದರು ಬಂದೆ,‌ ನೋಡು‌ ಏನ್ಮಾಡ್ಕೊಂಡಿದಿಯ,” ಎಂದು ಗೋಳಾಡುತ್ತಿದ್ದ ತಾಯಿಗೆ; ಮಗನು, "ಇಲ್ಲ ಆರಾಮಿದಿನಿ, ಅಳಬೇಡ," ಎಂದು ಸಮಾಧಾನಿಸುತ್ತಿದ್ದ. ಈ ಅಳುವಿನ ಮಧ್ಯೆಯೆ ಡಾಕ್ಟರ್ ತುರ್ತಾಗಿ ಆಪರೇಷನ್ ಮಾಡಬೇಕು. ಹೋಗಿ ಅಡ್ಮಿಟ್ ಮಾಡಿಸಿ ಬನ್ನಿ ಎನ್ನುತ್ತಿದ್ದರು. ನಾವು ಅವರ ಧನ್ಯವಾದಗಳಿಗೂ ಕಾಯದೆ ಹೊರಬಂದು ನಿಂತೆವು. ಮೂವರಿಗೂ ಹೋಗುವ ತುರ್ತಿನ ಮಧ್ಯೆಯೂ ಒಂದೆರಡು ಕ್ಷಣ ಮಾತಾಡಬೇಕನಿಸಿತು. ನನ್ನ ಜೊತೆ ಟೀ ಕುಡಿಯಬಹುದಾ ಎಂದೆ. ಹೋಗಿ ಟೀ ಕುಡಿಯುತ್ತ, ಪರಸ್ಪರ ಪರಿಚಯಿಸಿಕೊಂಡು ಅವರು ಬೆಂಗಳೂರಿನತ್ತ ಹೊರಟು ನಿಂತರು, ನಾನು ಊರಿನ ಕಡೆ ಹೊರಟೆ. ಕೊನೆಯ ಮಾತಾಗಿ ಮೂವರು ಪರಸ್ಪರ ನಮಗರಿವಿಲ್ಲದಂತೆ "ಹುಷಾರಾಗಿ ಹೋಗಿ" ಎಂದುಕೊಂಡು, ಮತ್ತೆ ಎಂದೋ ಭೇಟಿಯಾಗುವ  ಅಥವಾ ಭೇಟಿಯಾಗದೆಯೂ ಇರುವ ಬದುಕಿನ ಆಕಸ್ಮಿಕಗಳ ಮಧ್ಯೆಯೇ ಪರಸ್ಪರ ವಿದಾಯ ಹೇಳಿ ಹೊರಟೆವು.