ಕೊರೆಗಾಂವ್ ದಲಿತ ಯೋಧರ ಹೋರಾಟಕ್ಕೆ 2 ಶತಮಾನ 
ಸಮಾಚಾರ

ಕೊರೆಗಾಂವ್ ದಲಿತ ಯೋಧರ ಹೋರಾಟಕ್ಕೆ 2 ಶತಮಾನ 

ನರಬಲಿಯೊಂದಿಗೆ ಅಂತ್ಯಗೊಂಡ ವಿಜಯೋತ್ಸವ.

ಭೀಮಾ ಕೋರೆಂಗಾವ್ ಯುದ್ಧಕ್ಕೆ 200 ವರ್ಷಗಳಾದ ಸ್ಮರಣಾರ್ಥ, ಲಕ್ಷಾಂತರ ಜನ ದಲಿತರು ನಿನ್ನೆ ಕೋರೆಂಗಾವ್‌ನಲ್ಲಿ ವಿಜಯೋತ್ಸವ ಆಚರಿಸುತ್ತಿದ್ದಾಗ, ದಲಿತರ ಮೇಲೆ ಮರಾಠಾ ಗುಂಪುಗಳು ದಾಳಿ ನಡೆಸಿದದ್ದು, ರಾಹುಲ್ ಎಂಬ 28 ವರ್ಷವ ಯುವಕನನ್ನು ಈ ಗಲಭೆ ಬಲಿ ತೆಗೆದುಕೊಂಡಿದೆ. ಹಲವಾರು ಜನ ಗಾಯಗೊಂಡಿದ್ದಾರೆ. ದುಷ್ಕರ್ಮಿಗಳು ನಡೆಸಿದ ಕಲ್ಲು ತೂರಾಟಕ್ಕೆ ಸುಮಾರು 50 ವಾಹನಗಳು ಜಖಂಗೊಂಡಿದ್ದು, ಈ ಬಾರಿ ವಿಜಯ ದಿವಸದ ಆಚರಣೆಯು ಕಿಡಿಗೇಡಿಗಳ ಅಟ್ಟಹಾಸದಿಂದ ನರಬಲಿಯಲ್ಲಿ ಅವಸಾನಗೊಂಡಿದೆ.

ಸ್ಥಳೀಯ ಪೊಲೀಸರು ಹೇಳುವಂತೆ ಕೊರೆಗಾಂವ್ ನಗರದಲ್ಲಿ ಸ್ಥಾಪಿಸಲಾಗಿರುವ ಜಯ ಸ್ತಂಭದ ಬಳಿ ವಾತಾವರಣ ಶಾಂತಿಯುತವಾಗಿಯೇ ಇತ್ತು. ಆದರೆ ಕೆಸರಿ ಬಾವುಟಗಳನ್ನು ಹಿಡಿದು ಬಂದ ಕೆಲವು ವ್ಯಕ್ತಿಗಳಿಂದ ಗಲಭೆ ಆರಂಭವಾಗಿದೆ. ಕಳೆದ ವಾರ ಹತ್ತಿರದ ಹಳ್ಳಿಯೊಂದರಲ್ಲಿ ಮೇಲ್ಜಾತಿ ಎನಿಸಿಕೊಂಡಿರುವ ಮರಾಠಾ ಸಮುದಾಯದವರ ಮೇಲೆ ಕೇಸು ದಾಖಾಲಾಗಿತ್ತು. ಈ ಹಿಂಸಾ ಕೃತ್ಯಕ್ಕೆ ಅದೇ ಕಾರಣ. ಕೋರೆಂಗಾವ್ ವಿಜಯದ 200ನೇ ಸಂಭ್ರಮಾಚರಣೆಗಾಗಿ 5 ಲಕ್ಷಕ್ಕೂ ಹೆಚ್ಚು ಮಂದಿ ಕೋರೆಂಗಾವ್ ನಲ್ಲಿ ಸೇರಿದ್ದರು. ಕೋರೆಂಗಾವ್ ನಲ್ಲಿ ಪ್ರತಿವರ್ಷ ಜನವರಿ 1ರಂದು ವಿಜಯದ ಸ್ಮರಣಾರ್ಥವಾಗಿ ಮೆರವಣಿಗೆಯನ್ನು ನಡೆಸಲಾಗುತ್ತಿತ್ತು. 2018ಕ್ಕೆ 200 ವರ್ಷಗಳು ತುಂಬುವ ಸಲುವಾಗಿ ಈ ಬಾರಿ ಹೆಚ್ಚಿನ ಜನ ಮೆರವಣಿಗೆಯ ಭಾಗವಾಗಿದ್ದರು. ಇದುವರೆಗೂ ನಡೆದಿರುವ ಮೆರವಣಿಗೆಗಳಲ್ಲಿ ಯಾವುದೇ ಗುಂಪು ಘರ್ಷಣೆಗಳ ವರದಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಇಂತಹ ಒಂದು ಗಲಭೆ ನಡೆದಿದ್ದು, ದಮನಿತರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿದೆ.

ಗಲಭೆಗೆ ಕಾರಣವೇನು?

ಕಳೆದ ವರ್ಷದ ಡಿಸೆಂಬರ್ 29ರಂದು ಕೋರೆಂಗಾಂವ್‌ಗೆ ಕೇವಲ 5 ಕಿಮೀ ದೂರದಲ್ಲಿರುವ ವಧು ಬುಡ್ರಿಕ್ ಎಂಬ ಹಳ್ಳಿಯಲ್ಲಿರುವ ಗೋವಿಂದ ಗೋಪಾಲ ಮಹಾರ್ ಸಮಾಧಿಯ ಮೇಲೆ ಫಲಕ ಪತ್ತೆಯಾಗಿ ‘’ಮಹರರು ಮೊಘಲ್ ದೊರೆ ಔರಂಗಜೇಬನ ಆಜ್ಞೆಗಳನ್ನು ಉಲ್ಲಂಘಿಸಿದ್ದರು. 1689ರಲ್ಲಿ ಮರಾಠ ದೊರೆ ಛತ್ರಪತಿ ಸಾಂಭಾಜಿ ಮಹಾರಾಜರು ಔರಂಗಜೇಬನಿಂದ ಕೊಲ್ಲಲ್ಪಟ್ಟ ನಂತರ ದಲಿತರಾದ ಮಹಾರರು ಮಹಾರಾಜರ ಕೊನೆಯ ವಿಧಿಗಳನ್ನು ಪೂರೈಸಿದರು,’’ ಎಂದು ಬರೆಯಲಾಗಿತ್ತು. ಈ ಬರವಣಿಗೆ ಮರಾಠಾ ಸಮುದಾಯಕ್ಕೆ ಅಸಮಧಾನವನ್ನು ತಂದಿತ್ತು.

ಫಲಕವನ್ನು ಕುರಿತು ಆಕ್ಷೇಪ ವ್ಯಕ್ತಪಡಿಸಿದ ಮರಾಠ ಜನಾಂಗ, ಫಲಕದ ಮೇಲಿದ್ದ ಮಾಹಿತಿಯನ್ನು ಅಲ್ಲಗೆಳೆದಿತ್ತು. ಈ ಸಂಗತಿಯೇ ಮಹರ್ ಹಾಗೂ ಮರಾಠ ಜನಾಂಗಗಳ ನಡುವೆ ಜಗಳಕ್ಕೆ ನಾಂದಿಯಾಗಿತ್ತು. ಅದೇ ದಿನವೇ ದಲಿತ ಹೋರಾಟಗಾರರು ಫಲಕವನ್ನು ಧ್ವಂಸಗೊಳಿಸಿದ್ದಾರೆಂದು, ವಧು ಬುಡ್ರಿಕ್ ಹಳ್ಳಿಯ 49 ವ್ಯಕ್ತಿಗಳ ಮೇಲೆ ಅಟ್ರಾಸಿಟಿ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿದ್ದರು. ವಧು ಬುಡ್ರಿಕ್ ಗ್ರಾಮ ಪಂಚಾಯಿತಿಯೂ ಇದರ ವಿರುದ್ಧ ಕೇಸು ದಾಖಲಿಸಿತ್ತು. ಸ್ಥಳೀಯ ಮುಖಂಡರು ಹಾಗೂ ಪೋಲೀಸರು ಮಧ್ಯವಸ್ಥಿಕೆ ವಹಿಸಿದ ಕಾರಣ, ಎರಡೂ ಸಮುದಾಯಗಳು ತಮ್ಮ ಮೊಕದ್ದಮೆಗಳನ್ನು ಹಿಂಪಡೆದಿದ್ದವು. ಮೆಲ್ನೋಟಕ್ಕೆ ವಾತಾವರಣವು ಶಾಂತವಾಗಿ ಕಂಡರೂ ಬೂದಿ ಮುಚ್ಚಿದ ಕೆಂಡದಂತಿತ್ತು. ಇದೇ ನಿನ್ನೆಯ ವಿಜಯೋತ್ಸವದಲ್ಲಿ ಹೊರಗೆ ಬಂದಿದೆ.

ವಿಜಯ ದಿವಸವೇ ನಡೆದಿರುವ ಈ ಘಟನೆ ಬಗ್ಗೆ ನೆರೆಯ ರಾಜ್ಯಗಳಲ್ಲಿಯೂ ತೀವ್ರ ಖಂಡನೆ ವ್ಯಕ್ತವಾಗಿದೆ. ನಿನ್ನೆ ದಿವದ ಕೋರೆಂಗಾವ್ ವಿಜಯದ ಸುದ್ದಿ ಓದಿ ಹೆಮ್ಮೆ ಪಟ್ಟವರನ್ನು ಕೆಲಹೊತ್ತಿನಲ್ಲೇ ಬಂದ ಈ ಗಲಭೆ ದಂಗು ಬಡಿಸಿದೆ. ಕರ್ನಾಟಕ ದಲಿತ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಬರೆದು ಹಾಕುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಭೀಮಾ ಕೊರೆಂಗಾವ್ ಯುದ್ಧದ ವಿಜಯೋತ್ಸವದ ಕುರಿತು ಮಾಹಿತಿ ಇಲ್ಲಿದೆ ನೋಡಿ.

ದಲಿತ ಯೋಧರ ಈ ಐತಿಹಾಸಿಕ ಹೋರಾಟವನ್ನು ಶೋಧಿಸಿ ಬೆಳಕಿಗೆ ತಂದಿದವರು ಡಾ. ಅಂಬೇಡ್ಕರ್. ಅದರ ಹೆಸರು ‘ಭೀಮಾ ಕೊರೆಂಗಾವ್’ ಯುದ್ಧ. 1818ರ ಜನವರಿ 1ರಂದು ಪೇಶ್ವೆಗಳ ವಿರುದ್ಧ  ಸಿಡಿದೆದ್ದ ಕೊರೆಗಾಂವ್‍ನ ದಲಿತ ಯೋಧರು, ಅಸ್ಪೃಶ್ಯತೆಯ ವಿರುದ್ಧದ ದೊಡ್ಡ ಹೋರಾಟದಲ್ಲಿ ಗೆಲುವು ಸಾಧಿಸಿದ್ದರು. ಈ ಹೋರಾಟಕ್ಕೆ ಇವತ್ತಿಗೆ 200 ವರ್ಷಗಳು.‘ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ’ ಎಂದು ಚಿಂತಕ ಕಾರ್ಲ್ ಮಾರ್ಕ್ಸ್ ಹೇಳುತ್ತಾರೆ. ಆದರೆ ಏನೂ ಇಲ್ಲದವರು ಉಳ್ಳವರ ವಿರುದ್ಧ ನಡೆಸಿದ ಎಷ್ಟೋ ಹೋರಾಟಗಳು ಇತಿಹಾಸದ ಪುಟಗಳಲ್ಲಿ ದಾಖಲಾಗದೆ ಉಳಿದು ಹೋಗಿವೆ. ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಡಿ ಮೃತಪಟ್ಟ ಹಿಂದುಳಿದ ಜಾತಿಗಳ ವೀರಯೋಧರು ಇತಿಹಾಸದ ಕಣ್ಣಲ್ಲಿ ಮುಖ್ಯ ಅಂತ ಅನ್ನಿಸಿರಲಿಲ್ಲ. ಆಸ್ತಿ,ಅಧಿಕಾರ ಯಾವುದೂ ಇಲ್ಲದ ಅಸ್ಪೃಶ್ಯ ಹೋರಾಟಗಳನ್ನು ಮುನ್ನೆಲೆಗೆ ತಂದು ಜಗತ್ತಿಗೆ ಸಾರುವ ಅಗತ್ಯ ಅಧಿಕಾರಶಾಹಿಗಳ ಮರ್ಜಿಯಲ್ಲಿ ಇತಿಹಾಸ ದಾಖಲಿಸುತ್ತಿದ್ದ ಇತಿಹಾಸಕಾರಿಗೆ ಇರಲಿಲ್ಲ ಕೂಡ. ಭಾರತದ ಇತಿಹಾಸದಲ್ಲಿ ಅನೇಕ ರಾಜರು ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ಧಗಳನ್ನು ಮಾಡಿರುವ ಉದಾಹರಣೆಗಳಿವೆ. ಅಧಿಕಾರಶಾಹಿ ಮದದಿಂದ ಕೂಡಿದ ಈ ಯುದ್ಧಗಳ ಕಿವಿ ಗಡಚಿಕ್ಕುವ ಸದ್ದಿನಲ್ಲಿ ಜಾತಿ, ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸಿದ ಬಡವ-ದಲಿತ-ದಮನಿತ-ಶೋಷಿತರು ಕಟ್ಟಿದ ಹೋರಾಟಗಳು ಇವು.

ಹೀಗೆ ಇತಿಹಾಸದಲ್ಲಿ ದಾಖಲಾಗದೇ ಮುಚ್ಚಿ ಹೋದ ಹೋರಾಟಗಳಲ್ಲಿ ಕೊರೆಂಗಾವ್‌ನ ಭೀಮಾ ನದಿ ತೀರದಲ್ಲಿ ಪೇಶ್ವೆ ಮಂತ್ರಿ ಎರಡನೇ ಭಾಜಿರಾಯನ 28000 ಸಂಖ್ಯೆಯ ಸೈನ್ಯವನ್ನು, ಬ್ರೀಟಿಷರ ಸಹಕಾರದಿಂದ ಕೇವಲ 500 ಮಂದಿ ಮಹಾರ್ ಸೈನಿಕರು ಹಿಮ್ಮೆಟ್ಟಿಸಿದ್ದೂ ಒಂದು. ಶೋಷಿತ ಮಹಾರ್ ಜನಾಂಗ ಶೋಷಕರ ವಿರುದ್ಧ ನಡೆಸಿದ ಯುದ್ಧ ಇದಾಗಿತ್ತು. ಅಸ್ಪೃಶ್ಯ ಜಾತಿಗಳಲ್ಲಿ ಒಂದಾಗಿದ್ದ ಮಹಾರ್ ಜನಾಂಗದ ಅಂದಿನ ಸ್ಥಿತಿ, ಹಾಗೂ ಶತಶತಮಾನಗಳಿಂದಲೂ ಒಳಗಿಟ್ಟುಕೊಂಡು ಬಂದಿದ್ದ ಕೋಪ ಬುಗಿಲೆದ್ದು, ಅಂದಿನ ಮರಾಠ ಪೇಶ್ವೆ ಮಂತ್ರಿ ಎರಡನೇ ಭಾಜಿರಾಯನ ವಿರುದ್ಧ ಯುದ್ಧಕ್ಕೆ ದಾರಿ ಮಾಡಿಕೊಟ್ಟಿತ್ತು.

ಅಸ್ಪೃಶ್ಯತೆ ಬೇರುಗಳು ಗಟ್ಟಿಯಾಗಿದ್ದ ಪೇಶ್ವೆಗಳ ಕಾಲದಲ್ಲಿ, ಅಸ್ಪೃಶ್ಯನೊಬ್ಬನ ನೆರಳು ಸರ್ವಣೀಯನೊಬ್ಬನ ಮೇಲೆ ಬೀಳುವಂತಿರಲಿಲ್ಲ. ಹೀಗೆ ಸವರ್ಣೀಯನೊಬ್ಬ ಮಲಿನವಾಗುವುದನ್ನು ತಡೆಗಟ್ಟುವ ಸಲುವಾಗಿ ಅಸ್ಪೃಶ್ಯರಿಗೆ ಸಾರ್ವಜನಿಕ ಬೀದಿಗಳಲ್ಲಿ ಸಂಚರಿಸುವುದಕ್ಕೆ ನಿಷೇಧವನ್ನು ಹೇರಲಾಗಿತ್ತು. ಅಸ್ಪೃಶ್ಯನೊಬ್ಬನನ್ನು ಮುಟ್ಟಿ ಸವರ್ಣೀಯನೊಬ್ಬ ಮಡಿ ಕಳೆದುಕೊಳ್ಳಬಾರದೆಂಬ ಕಾರಣಕ್ಕೆ ಅಸ್ಪೃಶ್ಯನು ತನ್ನ ಮುಂಗೈಗೆ ಅಥವಾ ಕುತ್ತಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬೇಕಿತ್ತು.ಪೇಶ್ವೆಗಳ ರಾಜಧಾನಿಯಾದ ಪೂನಾದಲ್ಲಿ, ಅಸ್ಪಶ್ಯನೋರ್ವ ದಾರಿಯಲ್ಲಿ ನಡೆದರೆ ಅದು ಮಲಿನಗೊಳ್ಳುತ್ತದೆ ಎನ್ನುತ್ತಿದ್ದರು. ಹಾಗಾಗಿಯೇ ಅಸ್ಪಶ್ಯರ ನಡುವಿಗೆ ಹಗ್ಗ ಬಿಗಿದು ಅದಕ್ಕೆ ಕಸಪೊರಕೆಯೊಂದನ್ನು ಕಟ್ಟಲಾಗುತ್ತಿತ್ತು. ಅದೇ ಪೂನಾ ನಗರದಲ್ಲಿ ಅಕಸ್ಮಾತ್ ಅಸ್ಪಶ್ಯನೊಬ್ಬ ದಾರಿಯಲ್ಲಿ ಉಗಿದು, ಆ ಉಗುಳನ್ನು ಹಿಂದೂವೊಬ್ಬ ತುಳಿದು ಆತ ಮಲಿನವಾಗುವುದನ್ನು ತಪ್ಪಿಸಲು, ಅಸ್ಪಶ್ಯನು ತನ್ನ ಕೊರಳಿಗೆ ಮಣ್ಣಿನ ಮಡಕೆಯೊಂದನ್ನು ನೇತು ಹಾಕಿಕೊಳ್ಳಬೇಕಾಗುತ್ತಿತ್ತು ಮತ್ತು ಉಗಿಯಬೇಕೆಂದಾಗ ಆತ ಆ ಮಡಕೆಯಲ್ಲಿ ಉಗಿಯಬೇಕಾಗಿತ್ತು. ಇಂತಹದೇ ಶೋಚನೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದ ಮಾಹರ್ ಜನಾಂಗವು ಈ ಎಲ್ಲಾ ಸಂಕಟಗಳನ್ನು ತನ್ನೊಳಗೆಯೇ ಹುದುಗಿಕೊಂಡೇ ಸಾಗುತ್ತಿತ್ತು.

ಕೋರೆಂಗಾವ್ ಕದನ ಅಸ್ಪಶ್ಯರು ಸವರ್ಣೀಯರ ವಿರುದ್ಧ ಸಾರಿದ್ದೇನಲ್ಲ. ಪೇಶ್ವೆ ವಿರುದ್ಧ ನಿಂತಿದ್ದ ಬ್ರೀಟೀಷರ ಸೈನ್ಯದಲ್ಲಿದ್ದ ಮಹಾರ್ ಸೈನಿಕರು, ಮರಾಠಾ ಸೈನ್ಯದ ವಿರುದ್ಧ ಒಂದು ದಿನ ನಡೆದ ಯುದ್ಧದಲ್ಲಿ ಕಾದಾಡಿ ಮರಾಠ ಸೈನ್ಯವನ್ನು ಹಿಮ್ಮೆಟ್ಟಿಸಿದ್ದು. ಸಾಮ್ರಾಜ್ಯಶಾಹಿಗಳ ನಡುವೆ ಏನೂ ಅಲ್ಲದ ಈ ಯುದ್ಧ, ವರ್ಣವ್ಯವಸ್ಥೆಯ ಭಾರತದಲ್ಲಿ ದೊಡ್ಡ ಕಂಪನಕ್ಕೆ ದಾರಿಯಾಗಿತ್ತು.ಎಫ್.ಎಫ್.ಸ್ಟಾಂಟನ್ ನೇತೃತ್ವದಲ್ಲಿ ಬ್ರಿಟೀಷ್ ರೆಜಿಮೆಂಟಿನಲ್ಲಿದ್ದ 500 ಮಹಾರ್ ಸೈನಿಕರು, ಪೂನಾದ 250 ಅಶ್ವದಳ ಹಾಗೂ ಮದ್ರಾಸಿನ 24 ಗನ್ ಮ್ಯಾನ್ ಗಳು ಪೇಶ್ವೆಯ 20000 ಅಶ್ವದಳ ಹಾಗೂ 8000 ಕಾಲ್ದಳದ ವಿರುದ್ಧ 1818ರ ಜನವರಿ 1ರಂದು ಬೆಳಗ್ಗೆ 9ರಿಂದ ರಾತ್ರಿ 9ವರೆಗೆ ಅನ್ನಾಹಾರ, ವಿಶ್ರಾಂತಿಗಳ ಪರಿವೇ ಇಲ್ಲದೇ 12 ಗಂಟೆಗಳ ಕಾಲ ನಿರಂತರವಾಗಿ ಕಾದಾಡಿದರು. ಇವತ್ತಿಗೆ ಅದನ್ನು ತಿರುಗಿ ನೋಡಿದಾಗ ದಲಿತ ದಮನಿತರ ಆಕ್ರೋಶಕ್ಕೆ ಸಿಕ್ಕ ವಿಜಯದ ಸಂಕೇತವಾಗಿ ಕಾಣುತ್ತಿದೆ.

ಡಿಸೆಂಬರ್ 31ರಂದೇ ಹೊರಟ ಸ್ಟಾಂಟನ್ ಸೇನೆ, ಸಿರೂರಿನಿಂದ ಸುಮಾರು 27 ಕಿ.ಮೀ ನಡೆದು ಬೆಳಗ್ಗೆ ಹೊತ್ತಿಗೆ ಕೋರೆಂಗಾವ್ ಭೀಮಾ ನದಿಯ ಬಳಿ ನಿಲ್ಲುತ್ತದೆ. ಅಲ್ಲಿಯೇ ತಂಗಿದ್ದ ಪೇಶ್ವೆ ಭಾಜಿರಾಯನ ಬೃಹತ್ ಸೈನ್ಯ ಸ್ಟಾಂಟನ್ನ ಈ ಸೈನ್ಯವನ್ನು ಎಲ್ಲಾ ದಿಕ್ಕುಗಳಿಂದಲೂ ಸುತ್ತವರೆದು, ತಪ್ಪಿಸಿಕೊಳ್ಳಲು ಜಾಗವಿಲ್ಲದಂತೆ ಮಾಡುತ್ತದೆ. 20,000 ಬೃಹತ್ ಅಶ್ವದಳದ ಜೊತೆಗ ಪೇಶ್ವೆ ದೊಡ್ಡ ಸೈನ್ಯವನ್ನೂ ಹೊಂದಿರುತ್ತಾನೆ. ಸಂದಿಗ್ಧಕ್ಕೆ ಸಿಲುಕಿದ ಸ್ಟಾಂಟನ್ ಮತ್ತು ಸೈನ್ಯ ಕೋರೆಂಗಾವ್ ಹಳ್ಳಿಯೊಳಗೆ ನುಗ್ಗುತ್ತದೆ. ಹಳ್ಳಿಯೊಳಗೆ ಪ್ರವೇಶಿಸಿದ್ದೇ ತಡ, ಎರಡೂ ಸೈನ್ಯಗಳ ನಡುವೆ ಮಾರಾಮಾರಿ ಆರಂಭವಾಗಿ ಸ್ಟಾಂಟನ್ ಚಿಕ್ಕ ಸೇನೆ ದೊಡ್ಡ ಮಟ್ಟದ ಆಘಾತಕ್ಕೊಳಗಾಗುತ್ತದೆ. “ಕಡೆಯ ಗುಂಡು ಮುಗಿಯುವವರೆಗೂ, ಕಡೆಯ ಸೈನಿಕನಿರುವವರೆಗೂ ಹೋರಾಡುತ್ತಲೇ ಇರಿ’’ ಎಂಬ ಸ್ಟಾಂಟನ್ ಮಾತುಗಳು ಮಹಾರ್ ಸೈನಿಕರನ್ನು ಮತ್ತಷ್ಟು ಹುರಿದುಂಬಿಸುತ್ತವೆ. ಪರಿಣಾಮವಾಗಿ ಮಹಾರ್ ಸೈನಿಕರು ಎಲ್ಲಾ ದುರದೃಷ್ಟಗಳ ನಡುವೆ ಹೋರಾಡುತ್ತ ವೀರಾವೇಶದಿಂದ ಮುನ್ನುಗ್ಗುತ್ತಾರೆ. ಅವರ ಆಕ್ರೋಶಕ್ಕೆ ಬಲಿಯಾದ ಮರಾಠಾ ಸೈನ್ಯ ಅಷ್ಟು ದೊಡ್ಡ ಬಲವಿದ್ದರೂ ರಾತ್ರಿ 9 ಗಂಟೆಗೆ ಸೋತು ಹೈರಾಣಾಗಿ ರಣರಂಗದಿಂದ ಕಾಲ್ಕೀಳುತ್ತದೆ.

ಒಟ್ಟಾರೆ ಅತ್ಯಮೋಘ ಧೈರ್ಯ ಮತ್ತು ಶಿಸ್ತುಬದ್ಧ ಶೌರ್ಯವನ್ನು ಪ್ರದರ್ಶಿಸಿದ ಮಹಾರ್ ಸೈನಿಕರು ಶೋಷಕ ಪೇಶ್ವೆಗಳ ವಿರುದ್ಧ ಅಭೂತಪೂರ್ವ ಜಯ ದಾಖಲಿಸುತ್ತಾರೆ. ಈ ಯುದ್ಧದ ನಂತರ ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತ ಕೊನೆಗೊಳ್ಳುತ್ತದೆ. ಹಾಗೆಯೇ ಅಸ್ಪಶ್ಯರ ದಯನೀಯ ಸ್ಥಿತಿ ಕೂಡ ಸುಧಾರಣೆ ಕಾಣಲು ಆರಂಭಿಸುತ್ತದೆ. ಈ ಯುದ್ಧದಲ್ಲಿ ಜಯ ತಂದುಕೊಟ್ಟು ಮಡಿದ 22 ಮಹಾರ್ ಸೈನಿಕರ ಸ್ಮರಣಾರ್ಥ ಕೊರೇಗಾಂವ್‌ನಲ್ಲಿ ಮಹಾರ್ ಸೈನಿಕರು ಪ್ರಥಮ ಗುಂಡು ಸಿಡಿಸಿದ ಸ್ಥಳದಲ್ಲೇ 65 ಅಡಿ ಎತ್ತರದ ಒಂದು ಶಿಲಾಸ್ಮಾರಕ ಕೂಡ 1821 ಮಾರ್ಚ್ 26ರಂದು ನಿರ್ಮಾಣ ಗೊಳ್ಳುತ್ತದೆ ಹಾಗೂ ಆ ಸ್ಮಾರಕದಲ್ಲಿ ಮಡಿದ 22 ಸೈನಿಕರ ಜೊತೆಗೆ ಗಾಯಗೊಂಡವರ ಹೆಸರನ್ನೂ ಕೆತ್ತಿಸಲಾಗುತ್ತದೆ. ಮಹಾರ್ ಜನಾಂಗದವರೇ ಆಗಿದ್ದ ಅಂಬೇಡ್ಕರ್ ಪ್ರತೀ ವರ್ಷವೂ ಕುಟುಂಬ ಸಮೇತರಾಗಿ ಕೋರೆಂಗಾಂವ್‌ಗೆ ಭೇಟಿ ನೀಡಿ ವಂದನೆಗಳನ್ನು ಸಲ್ಲಿಸಿ ಬರುತ್ತಿದ್ದರು.

ಈ ಯುದ್ಧವು ಒಂದು ಸಾಮ್ರಾಜ್ಯದ ವಿರುದ್ಧವಲ್ಲ; ಮೇಲು-ಕೀಳು ಎಂಬ ವ್ಯವಸ್ಥೆಯ ವಿರುದ್ಧ. ಯಾವ ವ್ಯವಸ್ಥೆ ತಮ್ಮನ್ನು ಕೀಳಾಗಿ ಕಾಣುತ್ತಿತ್ತೋ ಅದರ ವಿರುದ್ಧ. ಯಾರು ಪ್ರಾಣಿಗಳಿಗಿಂತ ಹೀನಾಯವಾಗಿ ದಲಿತ-ದಮನಿತರನ್ನು ನಡೆಸಿಕೊಳ್ಳುತ್ತಿತ್ತೋ ಅಂತಹ ದೌರ್ಜನ್ಯಕೋರ ಸಂಸ್ಕೃತಿಯ ವಿರುದ್ಧ ನಡೆದದ್ದು. ಒಂದು ವೇಳೆ ಕೊರೆಗಾಂವ್ ಯುದ್ಧ ನಡೆಯದಿದ್ದರೆ ಪೇಶ್ವೆಗಳ ಅಟ್ಟಹಾಸ ಇನ್ನೂ ಮುಂದುವರಿದಿರುತ್ತಿತ್ತು. ಅಸ್ಪೃಶ್ಯರ ಸ್ಥಿತಿ ಮತ್ತಷ್ಟು ಚಿಂತಾಜನಕವಾಗುತ್ತಿತ್ತು. ಶೋಷಕ ವರ್ಗ ಶೋಷಣೆ ನಡೆಸುತ್ತಲೇ ಇರುತ್ತಿತ್ತು. ಮರಾಠರ ವಿರುದ್ಧ ಕೇವಲ 500 ಜನ ಮಹಾರ್ ಸೈನಿಕರು ನಡೆಸಿದ ಹೋರಾಟ ಇಡೀ ಮರಾಠ ಸಾಮ್ರಾಜ್ಯವನ್ನೇನು ಬಲಿ ತೆಗೆದುಕೊಳ್ಳದಿದ್ದರೂ, ಚಿಕ್ಕ ಸೈನ್ಯದ ವಿರುದ್ದ ಕಂಡ ಸೋಲು ಮರಾಠರಿಗೆ ನುಂಗಲಾರದ ತುತ್ತಾಗಿತ್ತು. ಹಿಂದಿನಿಂದಲೂ ಶೋಷಣೆಗೆ ಒಳಪಟ್ಟು ಸತ್ತಂತೆ ಬದುಕುತ್ತಿದ್ದ ಸಮುದಾಯಗಳಲ್ಲಿ ಮಿಂಚಿನ ಸಂಚಲನವನ್ನು ಮೂಡಿಸಿತ್ತು. ವ್ಯವಸ್ಥೆಯ ಎದುರು ನಿಲ್ಲಬಲ್ಲ ಆತ್ಮವಿಶ್ವಾಸವನ್ನು ತಂದುಕೊಟ್ಟಿತ್ತು.

ಇಂತಹ ಚಿಕ್ಕಪುಟ್ಟ ಕದನಗಳು ಭಾರತದಲ್ಲಿ ಅದೆಷ್ಟೋ ಘಟಿಸಿವೆ. ಸಹಸ್ರಾರು ಮಂದಿ ಸೈನಿಕರ ರಕ್ತ ಭಾರತದ ಉದ್ದಗಲಕ್ಕೂ ಹರಿದಿದೆ. ಆದರೆ, ಸ್ಪೃಶ್ಯ-ಅಸ್ಪೃಶ್ಯತೆಯ ನಡುವಿನ ಹೋರಾಟವಾಗಿ ರೂಪ ಪಡೆದಿರಲಿಲ್ಲ. ಈ ದೃಷ್ಟಿಕೋನದಿಂದ ನೋಡುವುದಾದರೆ 1818ರ ‘ಭೀಮಾ ಕೋರೆಂಗಾವ್ ಯುದ್ಧ’ ಅನಾದಿಕಾಲದಿಂದಲೂ ಅಸ್ಪೃಶ್ಯರು ವ್ಯವಸ್ಥೆಯ ವಿರುದ್ಧ  ನಡೆಸಿದ ಯುದ್ಧಗಳ ಸಾಲಿನಲ್ಲಿ ಮೈಲಿಗಲ್ಲಾಗಿ ನಿಲ್ಲುತ್ತದೆ. ದಮನಿತ ಸಮುದಾಯಗಳ ಹೋರಾಟಕ್ಕೆ  ಸ್ಫೂರ್ತಿಯ ಚಿಲುಮೆಯಾಗಿದೆ. ಅದರ ನೆನಪಿಗೆ ನಿನ್ನೆಗೆ ಸರಿಯಾಗಿ 200 ವರ್ಷ ತುಂಬಿವೆ.ಇಂತಹ ಹೊತ್ತಿನಲ್ಲಿ ನಡೆದ ಈ ಅಹಿತಕರ ಘಟನೆ ದಲಿತರ ಸ್ವಾಭಿಮಾನ ಮತ್ತು ಅಸ್ಮಿತೆಯನ್ನು ಕೆಣಕಿದೆ. ಸಂವಿಧಾನ ರಚನೆಯಾಗಿ  6 ದಶಕಗಳಿಂತ ಹೆಚ್ಚು ಕಾಲವೇ ಸರಿದರೂ ಕೆಳಜಾತಿಯವರ ಮೇಲೆ ಮೇಲ್ಜಾತಿಯವರ ದೌರ್ಜನ್ಯ ಮತ್ತು ದಬ್ಬಾಳಿಕೆ ಇನ್ನೂ ವಿವಿಧ ರೂಪದಲ್ಲಿ ಮುಂದುವರೆದಿರುವುದು ದುರಂತ.