ಸಾಂದರ್ಭಿಕ ಚಿತ್ರ
ಸಮಾಚಾರ

ಇರಾನ್ ಮಹಿಳೆಯರಿಗೆ ಅಧ್ಯಕ್ಷರ ನ್ಯೂ ಇಯರ್ ಗಿಫ್ಟ್‌

ಉಡುಪಿನ ಮೇಲಿದ್ದ ನಿರ್ಬಂಧವನ್ನು ಸಡಲಿಸಿದ ರೌಹಾನಿ

ಇರಾನಿನ ಸುಧಾರಣಾವಾದಿ ಮನಸ್ಥಿತಿಯ ಅಧ್ಯಕ್ಷ ಹಸ್ಸನ್ ರೌಹಾನಿ ಕೈಗೊಂಡಿರುವ ನಿರ್ಧಾರ ವಿಶ್ವದೆಲ್ಲೆಡೆ ಅಚ್ಚರಿ ಕಾರಣವಾಗಿದೆ. ದೇಶದಲ್ಲಿ ಮಹಿಳೆಯರ ಉಡುಪುಗಳ ಮೇಲಿದ್ದ ನಿರ್ಧಾರವನ್ನು ಸಡಿಲಿಸಿರುವ ರೌಹಾನಿ, ಲಿಂಗ ಸಮಾನ ವಸ್ತ್ರ ಸಂಹಿತೆ ಕಡೆಗೆ ಹೆಜ್ಜೆ ಮುಂದಿಟ್ಟಿದ್ದಾರೆ. ಸದ್ಯ ಇರಾನ್‌ ಒಳಗೆ ನಡೆಯುತ್ತಿರುವ ಆಂತರಿಕ ಪ್ರತಿರೋಧ, ಪ್ರತಿಭಟನೆಗಳ ನಡುವೆ, ವರ್ಷದ ಕೊನೆಯಲ್ಲಿ ಅರಬ್‌ ದೇಶವೊಂದರಿಂದ ಸಂತಸದ ಸುದ್ದಿ ಬೀಳಲು ಕಾರಣರಾಗಿದ್ದಾರೆ.

ಇರಾನಿನಲ್ಲಿದ್ದ ವಸ್ತ್ರಸಂಹಿತೆಯ ಪ್ರಕಾರ ಮಹಿಳೆಯರು ಮನೆಯಿಂದ ಹೊರಬರುವ ಮುನ್ನ ‘ರುಸಾರಿ’ ಎಂಬ ಹಿಜಾಬ್ ತರಹದ ಬಟ್ಟೆಯನ್ನು, ‘ಮಂಟಾವು’ ಹೆಸರಿನ ಉದ್ದ ನಿಲುವಂಗಿ ಅಥವಾ ಇದಕ್ಕೆ ಪರ್ಯಾಯವಾಗಿ ‘ಚಾಡೋರ್’ ಎನ್ನುವ ಕಪ್ಪು ವಸ್ತ್ರವನ್ನು ಧರಿಸಬೇಕಾಗಿತ್ತು. ಈ ನೀತಿಯನ್ನು ವಿರೋಧಿಸುವವರನ್ನು ಬಂಧಿಸಿ, ಮನೆಯಿಂದ ಬಟ್ಟೆ ತರಿಸಿ, ‘ಮುಂದೆ ಈ ರೀತಿಯ ತಪ್ಪು ಮಾಡುವುದಿಲ್ಲ’ ಎಂಬ ಮುಚ್ಚಳಿಕೆಗೆ ಸಹಿ ಹಾಕಿಸಿಕೊಂಡ ನಂತರ ಬಿಡಲಾಗುತ್ತಿತ್ತು. ಸತತ 40 ವರ್ಷಗಳಿಂದ ನಡೆದುಕೊಂಡು ಬಂದಿದ್ದ ಇಂತಹ ಸಾಮೂಹಿಕ ವಸ್ತ್ರ ಸಂಹಿತೆಯಿಂದ ಈಗ ಇರಾನಿನ ಮಹಿಳೆಯರು ಮುಕ್ತರಾಗಿದ್ದಾರೆ. ಅದಕ್ಕೆ ಅಧ್ಯಕ್ಷ ರೌಹಾನಿ ನಿರ್ಧಾರ ಕಾರಣವಾಗಿದೆ.

ಶುಕ್ರವಾರ ತಡರಾತ್ರಿ ಪತ್ರಿಕಾ ಹೇಳಿಕೆಯನ್ನು ನೀಡಿದ ತೆಹ್ರಾನ್ ಪೊಲೀಸ್ ಚೀಫ್ ಜೆನರಲ್ ಹುಸೇನ್ ರಹಿಮಿ, “ಇನ್ನು ಮುಂದೆ ತೆಹರಾನ್ ನಗರದಲ್ಲಿ ‘ಇಸ್ಲಾಮಿಕ್ ಕೋಡ್’ ಬಗ್ಗೆ ಆಲಕ್ಷ್ಯತೆ ವ್ಯಕ್ತಪಡಿಸುವ ಮಹಿಳೆಯರನ್ನು ಬಂಧಿಸುವುದಿಲ್ಲ, ಅವರ ಮೇಲೆ ಯಾವುದೇ ಮೊಕದ್ದಮೆಯನ್ನು ಹೂಡುವುದಿಲ್ಲ’’ ಎಂದು ತಿಳಿಸಿದ್ದಾರೆ.ಈ ನಿರ್ಧಾರ ಶಿಯಾ ರಾಜ್ಯದ ಧಾರ್ಮಿಕ ಪರಿಶುದ್ಧರ ಅಸಮಾಧಾನಕ್ಕೆ ಸಹಜವಾಗಿಯೇ ಕಾರಣವಾಗಿದೆ. ಉಡುಪಿನ ಸರಳೀಕರಣವಾಗಿರುವುದು ಇರಾನಿನ ರಾಜಧಾನಿ ತೆಹ್ರಾನ್ ನಗರದಲ್ಲಷ್ಟೇ ಎಂಬ ಮಾತುಗಳು ಸಹ ಹರಿದಾಡುತ್ತಿವೆ. ಪರ- ವಿರೋಧಗಳ ಘರ್ಷಣೆಯ ನಡುವೆ ಸುಧಾರಣಾವಾದಿ ಅಧ್ಯಕ್ಷರ ಈ ನಿಲುವು ಎಷ್ಟು ಗಟ್ಟಿಯಾಗಿ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇರಾನಿನಲ್ಲಿ 1979ರಲ್ಲಿ ರಾಜಪದ್ಧತಿ ಕೊನೆಗೊಂಡು ‘ಇಸ್ಮಾಮಿಕ್ ರಿಪಬ್ಲಿಕ್’ ಸ್ಥಾಪನೆಗೊಂಡ ನಂತರವೂ ಈ ವಸ್ತ್ರ ಸಂಹಿತೆ ಜಾರಿಯಲ್ಲಿತ್ತು. ಅಂದಿನಿಂದಲೂ ವಿಚಾರಾವಾದಿ, ಪ್ರಗತಿಪರರು ಮಹಿಳೆಯರು ಈ ನೀತಿಗಳನ್ನು ವಿರೋಧಿಸುತ್ತಲೇ ಬಂದಿದ್ದರು. ಎಲ್ಲಾ ಕಟ್ಟುಪಾಡುಗಳನ್ನು ತೊರೆದು, ಸಡಿಲವಾದ ಕೈಗವಸುಗಳನ್ನು ಧರಿಸಿ, ತಲೆಗೂದಲನ್ನು ಮುಚ್ಚದೇ, ಉಗುರು ಬಣ್ಣವನ್ನು ಬಳಸುವ ಮೂಲಕ ನೀತಿಗಳನ್ನು ಮುರಿಯುತ್ತಾ ಬಂದಿದ್ದರು.1960ರ ರಾಜ ಪದ್ಧತಿ ಜಾರಿಯಲ್ಲಿದ್ದ ಕಾಲದಲ್ಲೆ ಪ್ರಭುತ್ವದ ವಿರುದ್ಧ ಸೆಣಸಿ, 13-14 ವರ್ಷಕ್ಕಿದ್ದ ಮದುವೆಯ ವಯಸ್ಸನ್ನು 18ಕ್ಕೆ ಏರಿಸಿ ಮಹಿಳಾ ಹೋರಾಟದ ಹಿನ್ನೆಲೆ ಇರಾನ್ ದೇಶದ ಮಹಿಳೆಯರಿಗಿದೆ. ಇಂದು ಅಧ್ಯಕ್ಷರ ನಿರ್ಧಾರವೂ ಸಹ ಮಹಿಳೆಯರ ಸತತ ಪ್ರತಿರೋಧದ ಫಲ.

1979ರ ಕ್ರಾಂತಿಯ ನಂತರ ಮಹಿಳೆಯರಿಗೆ ಅಪಾರವಾದ ಅವಕಾಶಗಳು ದೊರೆತವು. ಆದರೆ ಕೆಲವು ಕ್ಷೇತ್ರಗಳಲ್ಲಿ ಮಹಿಳೆಯರ ಮೇಲೆ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ಹೇರಲಾಯಿತು. ವಿವಾಹೋತ್ತರ ಲೈಂಗಿಕ ಸಂಬಂಧ ಇಟ್ಟುಕೊಂಡ ಮಹಿಳೆಯನ್ನು ಕಲ್ಲಿನಿಂದ ಹೊಡೆದು ಸಾಯಿಸುವ ಪದ್ದತಿಯನ್ನು ಮುಂದುವರೆಸಲಾಯಿತು. ಮಹಿಳೆಯೋರ್ವಳನ್ನು ಕೆಲಸಕ್ಕೆ ಕಳುಹಿಸುವ ಅಥವಾ ಕಳಿಸದಿರುವ ನಿರ್ಧಾರ ಸಂಪೂರ್ಣವಾಗಿ ಗಂಡನದೇ ಆಯಿತು. 47 ಹುದ್ದೆಗಳಲ್ಲಿ 36 ಹುದ್ದೆಗಳು ಗಂಡಸಿಗಷ್ಟೇ ಸೀಮಿತವಾಗಿವೆ. ಉಳಿದ 11 ಸೀಟುಗಳಲ್ಲಿ ಪುರುಷ ಹಾಗು ಮಹಿಳೆಯರಿಬ್ಬರ ಪಾಲು. ವಿಶ್ವಸಂಸ್ಥೆ ಸಿದ್ಧಪಡಿಸಿರುವ ಲಿಂಗ ತಾರತಮ್ಯ ಹೊಂದಿರುವ 148 ದೇಶಗಳ ಪೈಕಿ ಇರಾನ್ 107ನೇ ಸ್ಥಾನವನ್ನು ಪಡೆದುಕೊಂಡಿದೆ.

ಸುಧಾರಿಸಿರುವ ಶಿಕ್ಷಣ ವ್ಯವಸ್ಥೆ ದೇಶದ ಮುಂದಿರುವ ಭರವಸೆಯಾಗಿದ್ದು, ಪದವಿ ವಿದ್ಯಾಭ್ಯಾಸ ನಡೆಸುತ್ತಿರುವ ಶೇ. 100ರಲ್ಲಿ 60 ಜನ ಮಹಿಳೆಯರಿದ್ದಾರೆ. ಶಿಕ್ಷಣದಲ್ಲಿಯೂ ಅಸಮಾನತೆಯನ್ನು ಮೆರೆಯುತ್ತಿರುವ ನೀತಿಗಳು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಕಲಿಯದಂತೆ ಮಹಿಳೆಯರ ಮೇರೆ ನಿಷೇಧವನ್ನು ಹೇರಿದೆ. ಇವೆಲ್ಲವುಗಳಿಂದ ಒಂದೊಂದಾಗಿ ಹೊರಬರುತ್ತಿರುವ ಅರಬ್‌ ರಾಷ್ಟ್ರಗಳ ಪೈಕಿ ಇರಾನ್ ಈ ಹೆಜ್ಜೆ ಗಮನ ಸೆಳೆಯುತ್ತಿದೆ.