ರೈಲ್ವೆ ಕೂಲಿಗೆ ಟಾಂಗ್ ಕೊಟ್ಟ ಟ್ರಾಲಿ: ಸಿಟಿ ರೈಲ್ವೆ ಸ್ಟೇಷನ್ ಕೂಲಿಗಳ ಬಗ್ಗೆ ನಿಮಗೆಷ್ಟು ಗೊತ್ತು?
ಸಮಾಚಾರ

ರೈಲ್ವೆ ಕೂಲಿಗೆ ಟಾಂಗ್ ಕೊಟ್ಟ ಟ್ರಾಲಿ: ಸಿಟಿ ರೈಲ್ವೆ ಸ್ಟೇಷನ್ ಕೂಲಿಗಳ ಬಗ್ಗೆ ನಿಮಗೆಷ್ಟು ಗೊತ್ತು?

Summarytoggle summary

ಬೃಹತ್ ನಗರವಾಗಿ ಬೆಳೆದಿರುವ ಬೆಂಗಳೂರು ನಾನಾ ಧರ್ಮ, ಭಾಷೆ, ಸಂಸ್ಕೃತಿ ಹಾಗೂ ಪ್ರದೇಶಗಳ ಜನರಿಗೆ ಇಂದು ನೆಲೆ ನೀಡಿದೆ. ಕೋಟಿ ಮೀರಿರುವ ಇಲ್ಲಿನ ಜನರಿಗೆ ತಮ್ಮ ಬೇರುಗಳಿಗೆ ಮರಳಲು, ಹೊಸ ಬದುಕು ಹುಡುಕಿಕೊಂಡು ಇಲ್ಲಿಗೆ ಬರುವವರಿಗೆ ಜಂಕ್ಷನ್ ಪಾಯಿಂಟ್‌ನಂತೆ ಇರುವುದು ಇಲ್ಲಿನ ಸಿಟಿ ರೈಲ್ವೆ ನಿಲ್ದಾಣ.

“ಬೆಂಗಳೂರಿಗೆ ಬಂದು ಹೋಗುವ ರೈಲುಗಳ ಸಂಖ್ಯೆ ಹೆಚ್ಚಾಗಿವೆ. ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಜೊತೆಗೆ ರೈಲ್ವೆ ವಿಭಾಗದ ಆದಾಯ ಹೆಚ್ಚಾಗಿದೆ. ಹೀಗಾಗಿ ನಮ್ಮ ಕೆಲಸವೂ ಹೆಚ್ಚಾಗಿ, ಆದಾಯವೂ ಹೆಚ್ಚಾಗಿರಬೇಕು ಅಂದುಕೊಳ್ಳಬೇಡಿ. ನಮ್ಮ ಆದಾಯ ಮೊದಲಿಗಿಂತಲೂ ಈಗ ಕಡಿಮೆ ಆಗಿದೆ,” 
-ಪೆದ್ದಣ್ಣ, ರೈಲ್ವೆ ಕೂಲಿ

ನೀವು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದರೆ, ಕೆಂಪು ಅಂಗಿ, ತೋಳಿನಲ್ಲೊಂದು ಹಿತ್ತಾಳೆ ಬ್ಯಾಡ್ಜ್‌ ಧರಿಸಿದ, ಸಾಮಾನ್ಯವಾಗಿ 'ಕೂಲಿ'ಯವರು ಎಂದು ಕರೆಸಿಕೊಳ್ಳುವ ಜನರ ಸಿಗುತ್ತಾರೆ. ಇದು ಅವರದ್ದೇ ಕತೆ.ಇವರು ಸೂರ್ಯ ಉದಯಿಸುವುದಕ್ಕಿಂತ ಮೊದಲೇ ರೈಲ್ವೆ ನಿಲ್ದಾಣಕ್ಕೆ ಬಂದು ತಮ್ಮ ಕೆಲಸ ಪ್ರಾರಂಭಿಸುತ್ತಾರೆ. ಹೆಚ್ಚಿನ ಲಗೇಜ್ ಇರುವವರು ಮತ್ತು ಅಶಕ್ತರು ತಮ್ಮ ಲಗೇಜ್ ಸಾಗಿಸಲು ಈ ಕೂಲಿಗಳನ್ನು ಅಲಂಭಿಸಿರುತ್ತಾರೆ.

ಪ್ರಯಾಣಿಕರ ಲಗೇಜ್‌ನ್ನು ಅವರು ಹೇಳಿದ ಜಾಗಕ್ಕೆ ಹೊತ್ತುಕೊಂಡು ಹೋಗುವುದೇ ಕೂಲಿಗಳ ದಿನಿತ್ಯದ ಕೆಲಸ. ಈ ಶ್ರಮಕ್ಕೆ ಪ್ರಯಾಣಿಕರು ಹಣ ಕೊಡುತ್ತಾರೆ. ಹೀಗೆ ದುಡಿಯಲು ದೈಹಿಕವಾಗಿ ದಷ್ಟಪುಷ್ಟವಾಗಿರಬೇಕು. ಭಾರವಾದ ಲಗೇಜನ್ನು ಹೊರುವ ಸಾಮರ್ಥ್ಯ ಇದ್ದವರೇ ಇಲ್ಲಿ ಉಳಿಯುತ್ತಾರೆ.ಹಾಗೆ ಉಳಿದುಕೊಂಡವರಲ್ಲಿ ಪೆದ್ದಣ್ಣ ಕೂಡ ಒಬ್ಬರು. ಹತ್ತನೇ ತರಗತಿ ಫೇಲಾಗಿ ಕೂಲಿ ಕೆಲಸಕ್ಕೆ ಬಂದ ಪೆದ್ದಣ, ನಾನಾ ಭಾಷೆಗಳನ್ನು ಕಲಿತಿದ್ದಾರೆ. ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಸೇರಿದಂತೆ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ.

“ಪ್ರಯಾಣಿಕರು ಕನ್ನಡದವರು ಎಂದು ಕಂಡು ಬಂದರೆ ಮೊದಲು ಕನ್ನಡದಲ್ಲಿಯೇ ವ್ಯವಹರಿಸುತ್ತೇವೆ. ಇಲ್ಲವೇ ಅವರು ಅನ್ಯಭಾಷಿಕರು ಎಂದು ಗೊತ್ತಾದರೆ ಅವರದೇ ಭಾಷೆಯಲ್ಲಿ ವ್ಯವಹರಿಸುತ್ತೇವೆ. ಆದರೂ ಮಾತೃಭಾಷೆ ಕನ್ನಡಕ್ಕೆ ನಮ್ಮ ಆದ್ಯತೆ,” 
-ಪೆದ್ದಣ್ಣ, ಕೂಲಿ 
“ಆರು ವರ್ಷದಿಂದ ನಾನಿಲ್ಲಿ ಕೆಲಸ ಮಾಡ್ತಾ ಇದೀನಿ. ಕೆಲಸ ಮಾಡುವಾಗ ಅನೇಕ ಅನುಭವಗಳಾಗಿವೆ. ನಾವು ಪ್ರಯಾಣಿಕರ ಲಗೇಜನ್ನು ಹೊತ್ತುಕೊಂಡು ಹೋಗಿ ಸುರಕ್ಷಿತವಾಗಿ ಅವರು ಹೇಳಿದ ಜಾಗಕ್ಕೆ ತಲುಪಿಸಿದಾಗ, ನಿಗದಿತ ದರಕ್ಕಿಂತಲೂ ಹೆಚ್ಚಿನ ಹಣ ಕೊಟ್ಟು ನಮ್ಮ ಕೆಲಸಕ್ಕೆ ಅಭಿನಂದನೆ ಹೇಳಿ ಹೋಗ್ತಾರೆ. ಇಂತಹ ಘಟನೆಗಳಾದಾಗ ಭಾವುಕರಾಗ್ತೀವಿ. ಮತ್ತೆ ಕೆಲವರು ಹೆಚ್ಚಿನ ಲಗೇಜನ್ನು ನಮ್ಮ ಮೇಲೆ ಹೊರಿಸಿ, ಕೊನೆಗೆ ಹಣ ಕೊಡುವಾಗ ಕಿರಿಕಿರಿ ಮಾಡ್ತಾರೆ. ನಿಗದಿ ಪಡಿಸಿದ್ದಕ್ಕಿಂತ ಕಡಿಮೆ ಕೊಡ್ತಾರೆ. ಇಂತಹ ಸಂದರ್ಭದಲ್ಲಿ ವಾಗ್ವಾದಗಳೂ ಆಗಿವೆ. ಎಲ್ಲ ರೀತಿಯ ಜನರೂ ಸಿಕ್ತಾರೆ. ಕೆಲವರು ಜಗಳಾಡ್ತಾರೆ. ಕೆಲವರು ಅಭಿನಂದಿಸ್ತಾರೆ,” 
-ರಮೇಶ್, ಮತ್ತೊಬ್ಬ ರೈಲ್ವೆ ಕೂಲಿ

ರೈಲ್ವೆ ಇಲಾಖೆಯು ಲಗೇಜ್ ಸಾಗಣೆಗೆ ದರ ನಿಗದಿ ಮಾಡಿದ್ದರೂ ಕೂಲಿಗಳು ಅದಕ್ಕಿಂತಲೂ ಹೆಚ್ಚಿನ ಹಣ ಪಡೆಯುತ್ತಾರೆ ಎಂಬ ಆರೋಪ ಅವರ ಮೇಲಿದೆ. ಹೀಗಾಗಿ ಕೂಲಿಗಳಿಗೆ ರೈಲ್ವೆ ಟ್ಯಾಗ್‌ ನೀಡಿದ್ದಾರೆ. ಟ್ಯಾಗ್‌ನ ಒಂದು ಬದಿಯಲ್ಲಿ ರೈಲ್ವೆ ಕೂಲಿಯ ನೋಂದಣಿ ಸಂಖ್ಯೆ, ವಿಳಾಸ, ಫೋಟೊ, ಮತ್ತಿತರೆ ಮಾಹಿತಿ ಇದ್ದರೆ, ಮತ್ತೊಂದು ಬದಿಯಲ್ಲಿ ಎಷ್ಟು ತೂಕದ ಲಗೇಜ್‌ಗೆ ಎಷ್ಟು ದರ ನೀಡಬೇಕು ಎನ್ನುವುದರ ಮಾಹಿತಿ ಇದೆ.

ಪ್ರತಿ ರೈಲ್ವೆ ಕೂಲಿಯೂ ಈ ಟ್ಯಾಗನ್ನು ಕಡ್ಡಾಯವಾಗಿ ಧರಿಸಲೇಬೇಕು ಎಂದು ಸೂಚಿಸಲಾಗಿದೆ. ಪ್ರಯಾಣಿಕರು ಟ್ಯಾಗ್ ಗಮನಿಸಿ ಅದರಲ್ಲಿ ಎಷ್ಟು ನಮೂದಿಸಿರುತ್ತಾರೋ ಅಷ್ಟೇ ದರ ನೀಡಬೇಕು ಎನ್ನುವುದು ಇದರ ಉದ್ದೇಶವಾಗಿದೆ. ಕನಿಷ್ಠ 30ರೂ.ನಿಂದ ಗರಿಷ್ಠ 60 ರೂ. ಕೂಲಿದರ ನಿಗದಿ ಮಾಡಲಾಗಿದೆ.

“ಬೆಂಗಳೂರು ಸಿಟಿ ನಿಲ್ದಾಣದಲ್ಲಿ ಒಟ್ಟು 332 ಜನ ನೋಂದಾಯಿತ ರೈಲ್ವೆ ಕೂಲಿಗಳಿದ್ದಾರೆ. ಕೆಲವರು ಕೆಂಪು ಅಂಗಿ ಧರಿಸಿ ರೈಲ್ವೆ ಕೂಲಿಗಳು ಎಂದು ಹೇಳಿಕೊಳ್ಳುತ್ತಾರೆ. ಆದ್ದರಿಂದ ನೋಂದಾಯಿತ ಕೂಲಿಗಳಿಗೆ ಮಾತ್ರ ಟ್ಯಾಗ್ ವಿತರಿಸಲಾಗಿದೆ. ಪ್ರಯಾಣಿಕರು ಟ್ಯಾಗ್ ಇರುವಂತಹ ಕೂಲಿಗಳಿಗೆ ನಿಶ್ಚಿಂತರಾಗಿ ತಮ್ಮ ಲಗೇಜ್‌ಗಳನ್ನು ನೀಡಬಹುದು. ಟ್ಯಾಗ್‌ಗಳಲ್ಲಿಯೇ ದರಪಟ್ಟಿಯೂ ಇರುತ್ತದೆ. ಅಲ್ಲಿ ಎಷ್ಟು ನಮೂದಾಗಿರುತ್ತದೋ ಅಷ್ಟನ್ನು ಮಾತ್ರ ನೀಡಬೇಕು. ಸದ್ಯಕ್ಕೆ ಸಿಟಿ ನಿಲ್ದಾಣದಲ್ಲಿ ಮಾತ್ರ ಇದನ್ನು ಕಡ್ಡಾಯ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ನಿಲ್ದಾಣಗಳ ಕೂಲಿಗಳಿಗೂ ಇಂತಹ ಟ್ಯಾಗ್‌ಗಳನ್ನು ವಿತರಿಸಲಾಗುವುದು,”
-ಛಲವಾದಿ ನಾರಾಯಣಸ್ವಾಮಿ, ಪ್ರಯಾಣಿಕರ ಮೂಲಸೌಕರ್ಯ ಸಮಿತಿ ಅಧ್ಯಕ್ಷ

ಕೂಲಿಗೆ ಟಾಂಗ್ ಕೊಟ್ಟ ಟ್ರಾಲಿ:

ರೈಲ್ವೆ ಕೂಲಿಗಳ ಜೀವನಶೈಲಿ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿದೆ. ಪ್ರಯಾಣಿಕರು ಈಗ ಹೆಚ್ಚಾಗಿ ಟ್ರಾಲಿ ಬ್ಯಾಗ್‌ಗಳನ್ನು ಬಳಸಲು ಶುರುಮಾಡಿದ್ದಾರೆ. ಮನುಷ್ಯನ ಪ್ರಯಾಣಕ್ಕೆ ಅನುಕೂಲವಾಗಲೆಂದು ಕಂಡುಕೊಂಡ ಆವಿಷ್ಕಾರವೇ ರೈಲ್ವೆ ಕೂಲಿಗಳ ದುಡಿಮೆ ಕತ್ತರಿ ಹಾಕಿದೆ.

“ಬ್ಯಾಗ್‌ಗಳಿಗೆ ವ್ಹೀಲ್ ಬಂದಿವೆ. ಅದನ್ನು ಒಂದು ಮಗೂ ಕೂಡ ಎಳೆದುಕೊಂಡು ಹೋಗುತ್ತದೆ. ನಾವು ಕೂಲಿ ಕೊಡಿ ಎಂದು ಕೇಳಿದಾಗ ಪ್ರಯಾಣಿಕರು ಬ್ಯಾಗ್‌ಗಳಿಗೆ ವ್ಹೀಲ್ಸ್ ಇವೆ. ನಾವೇ ಎಳೆದುಕೊಂಡು ಹೋಗ್ತೀವಿ ಬಿಡಿ ಅಂತಾರೆ,” ಎಂದು ಪೆದ್ದಣ್ಣ ತಮ್ಮ ಕೂಲಿ ಆದಾಯ ಕಡಿಮೆಯಾದುದರ ಹಿಂದಿನ ಕತೆ ಹೇಳಿಕೊಂಡರು.

ಪ್ರಯಾಣಿಕರ ಅನುಕೂಲಕ್ಕೆ ರೈಲ್ವೆ ಇಲಾಖೆ ಉತ್ತಮ ದರ್ಜೆಯ ಪ್ಲಾಟ್‌ಫಾರ್ಮ ನಿರ್ಮಿಸಿದೆ. ಎಸ್ಕಲೇಟರ್ ಮತ್ತು ಲಿಫ್ಟ್‌ನಂತಹ ಆಧುನಿಕ ಸೌಲಭ್ಯವನ್ನೂ ಒದಗಿಸಿಕೊಟ್ಟಿದೆ. ಇದರಿಂದ ಪ್ರಯಾಣಿಕರು ತಮ್ಮ ಲಗೇಜನ್ನು ತಾವೇ ತೆಗೆದುಕೊಂಡು ಹೋಗಲು ಅನುಕೂಲವಾಗಿದೆ. ಇದೇ ಕಾರಣಕ್ಕೆ ಕೂಲಿ ದುಡಿಮೆ ಕಡಿಮೆಯಾಗಿದೆ ಎನ್ನುತ್ತಾರೆ ಇಲ್ಲಿ ಕೆಲಸ ಮಾಡುವ ಬಹುತೇಕ ಕೂಲಿಗಳು.

ಲೋನ್ ಸಮಸ್ಯೆ:

ಇಲ್ಲಿ ಕೆಲಸ ಮಾಡುವವರಿಗೆ ಕೆಲವೊಮ್ಮೆ ಭರ್ಜರಿ ದುಡಿಮೆ ಸಿಗುತ್ತದೆ. ಕೆಲವೊಮ್ಮೆ ಕಡಿಮೆ ಕೂಲಿ ಸಿಗುತ್ತದೆ. ಅಂದಿನ ಶ್ರಮದ ಆದಾಯವನ್ನು ಅಂದೇ ಎಣಿಸಿದರೂ, ಇವರು ನಿತ್ಯ ಜೀವನಕ್ಕೆ ಕಷ್ಟ ಪಡುತ್ತಿದ್ದಾರೆ. ಬೆಂಗಳೂರಿನಂತ ದುಬಾರಿ ನಗರದಲ್ಲಿ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ ಮತ್ತು ಮನೆ ಖರ್ಚು ಇವೆಲ್ಲದಕ್ಕೂ ಹಣ ಹೊಂದಿಸುವ ವೇಳೆಗೆ ಹೈರಾಣಾಗುತ್ತಿದ್ದಾರೆ.

“ಈ ಆರ್ಥಿಕ ಸಮಸ್ಯೆಯಿಂದ ಪಾರಾಗಲು ಎಲ್ಲಾದರೂ ಲೋನ್ ಪಡೆಯಬೇಕೆಂದರೆ, ‘ಸ್ಯಾಲರಿ ಸ್ಲಿಪ್’ ಕೇಳ್ತಾರೆ. ಹಾಗಾಗಿ ನಮಗೆ ಎಲ್ಲಿಯೂ ಲೋನ್ ಕೂಡ ಸಿಗಲ್ಲ,” ಎಂದು ತಮ್ಮ ಸಮಸ್ಯೆಯ ಕುರಿತು ಬೇಸರ ವ್ಯಕ್ತಪಡಿಸುತ್ತಾರೆ ಶ್ರೀರಾಮಪುರದ ಶಿವಕುಮಾರ್. ಇವರು ಸುಮಾರು 6 ವರ್ಷಗಳಿಂದ ಸಿಟಿ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಸ್ಯಾಲರಿ ಸ್ಲಿಪ್ ಎಂಬ ಒಂದು ಚೀಟಿಯಲ್ಲಿನ ಮೊಹರು ಇವರಿಗೆ ಸಿಗುತ್ತಿಲ್ಲ.

ಕೂಲಿಯಾದ ಕ್ರೀಟಾಪಟು:

7.2 ಅಡಿ ಎತ್ತರದ ರೈಲ್ವೆ ಕೂಲಿ ಸೆಲ್ವ ಕುಮಾರ್ 
7.2 ಅಡಿ ಎತ್ತರದ ರೈಲ್ವೆ ಕೂಲಿ ಸೆಲ್ವ ಕುಮಾರ್ 

ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುವ ಕೂಲಿಗಳ ಪ್ರತಿಯೊಬ್ಬರ ಹಿಂದೆಯೂ ಒಂದೊಂದು ಕಥೆಯಿದೆ. ತಮ್ಮ ಜೀವನದಲ್ಲಿ ಏನೂ ಕೆಲಸ ಸಿಗದೇ ಇದ್ದಾಗ, ಯಾವುದೇ ಬಂಡವಾಳವಿಲ್ಲದೇ ಮಾಡುವ ಈ ಕೆಲಸಕ್ಕೆ ಸೇರಿದವರು ಇಲ್ಲಿದ್ದಾರೆ. ಅಂದಿನ ಶ್ರಮದ ದುಡಿಮೆಯನ್ನು ಅಂದೇ ಪಡೆಯಬಹುದು ಎಂಬ ಕಾರಣಕ್ಕೂ ಅನೇಕರಿಗೆ ಈ ಕೆಲಸ ಆಸರೆಯಾಗಿದೆ.

ಇದರಲ್ಲಿ ಬಾಸ್ಕೆಟ್ ಬಾಲ್ ಕ್ರೀಟಾಪಟುವೊಬ್ಬ ಸುಮಾರು 20 ವರ್ಷಗಳಿಂದ ಕೂಲಿಯಾಗಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಸರು ಸೆಲ್ವ ಕುಮಾರ್. ಸರಿಯಾಗಿ 7.2 ಫೂಟ್ ಎತ್ತರದ ದಢೂತಿ ದೇಹದ ಅವರನ್ನು ಬಚ್ಚನ್ (ಅಮಿತಾಬ್ ಬಚ್ಚನ್) ಎಂದೇ ಎಲ್ಲರೂ ಕರೆಯುತ್ತಾರೆ. ಅವರ ರೈಲ್ವೆ ಕೂಲಿ ನೋಂದಣಿ ಸಂಖ್ಯೆ 230.

ತಮಿಳುನಾಡು ಮೂಲದ ಸೆಲ್ವ ಕುಮಾರ್ ಬಾಸ್ಕೆಟ್ ಬಾಲ್ ಕ್ರೀಡಾಪಟು. ಉತ್ತರ ಪ್ರದೇಶ ಕ್ಲಬ್ ವತಿಯಿಂದ ಎರಡು ಬಾರಿ ಬಾಸ್ಕೆಟ್ ಬಾಲ್ ಟೂರ್ನಾಮೆಂಟ್ ಆಟವಾಡಿದ್ದ ಈತ ಅದಕ್ಕೆ ಹಣ ಪಡೆದಿರಲಿಲ್ಲ. ತನ್ನ ಅಣ್ಣ ಆರೋಗ್ಯದಲ್ಲಿ ಏರುಪೇರಾಗಿ ಸರ್ಜರಿಗೆ ಹಣ ಬೇಕಾದಾಗ ಆರ್ಥಿಕ ಸಹಾಯಕ್ಕಾಗಿ ತಾನು ಯಾವ ಕ್ಲಬ್‌ ಆಶ್ರಯದಲ್ಲಿ ಟೂರ್ನಾಮೆಂಟ್ ಆಡಿದ್ದರೋ ಅದರ ಬಾಗಿಲು ತಟ್ಟಿದ್ದರು. ಆದರೆ ಆ ಕಡೆಯಿಂದ ಯಾವುದೇ ಆರ್ಥಿಕ ಸಹಾಯವಾಗದೇ ತನ್ನ ಸಹೋದರನ್ನು ಕಳೆದುಕೊಂಡರು.

ಹಣದ ಸಮಸ್ಯೆಯೇ ಇದಕ್ಕೆಲ್ಲ ಕಾರಣವಾಯಿತು ಎಂದು ಬಾಸ್ಕೆಟ್ ಬಾಲ್ ಬಿಟ್ಟು ತಲೆ ಮೇಲೆ ಲಗೇಜ್ ಹೊರುವ ಕೆಲಸಕ್ಕೆ ಬಂದವರು ಸೆಲ್ವ ಕುಮಾರ್. ಸುಮಾರು 40ರ ಆಸುಪಾಸಿನ ಸೆಲ್ವ ಬದುಕಿನ ಇನ್ನೊಂದು ಆಯಾಮವನ್ನು ತೆರೆದಿಟ್ಟರು.

“ನಾನು ಮೊದಲಿಗೆ ಈ ಕೆಲಸಕ್ಕೆ ಬಂದಾಗ ಉತ್ತಮ ಕೂಲಿ ಸಿಗ್ತಾ ಇತ್ತು. ಈಗ ಕೂಲಿ ಕಡಿಮೆ ಆಗಿದೆ. ತುಂಬ ಸಮಸ್ಯೆಯಾಗಿದೆ. ಒಮ್ಮೆಮ್ಮೆ 100 ರೂ ಕೂಡ ದುಡಿಮೆಯಾಗುವುದಿಲ್ಲ. ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ಮತ್ತು ಎಸ್ಕಲೇಟರ್ಬಂದಿರೋದ್ರಿಂದ ಕೂಲಿ ಯಾಕೆ ಕೊಡಬೇಕು ಅಂತಾರೆ ಜನ. ಲಗೇಜ್ ಹೊತ್ತೊಯ್ಯಲು ಇನ್ಮೇಲೆ ಬ್ಯಾಟರಿ ಚಾಲಿತ ಗಾಡಿಯೂ ಬರುತ್ತೆ ಅಂತಿದ್ದಾರೆ. ಅದು ಬಂದರೆ ನಮ್ಮ ಕೆಲಸಕ್ಕೆ ಕುತ್ತು ಬಂದಂತೆ. ಇಲ್ಲಿನ ಅಧಿಕಾರಿಗಳು ಕೂಲಿಗಳ ಕಷ್ಟವನ್ನೇ ಆಲಿಸುವುದಿಲ್ಲ,”
-ಸೆಲ್ವ ಕುಮಾರ್, ತಮಿಳು ನಾಡು ಮೂಲದವರು

ಲಾಲೂ ಪ್ರಸಾದ್ ರೈಲ್ವೆ ಮಂತ್ರಿಯಾಗಿದ್ದಾಗ ರೈಲ್ವೆ ನಿಲ್ದಾಣದಲ್ಲಿ ಕೂಲಿ ಮಾಡುತ್ತಿದ್ದವರನ್ನು 'ಡಿ' ಗ್ರೂಪ್‌ ಅಡಿಯಲ್ಲಿ ಗ್ಯಾಂಗ್‌ ಮ್ಯಾನ್ ಮತ್ತಿತರೆ ಕೆಲಸಕ್ಕೆ ತೆಗೆದುಕೊಂಡಿದ್ದನ್ನು ಇವತ್ತಿಗೂ ಬಹುತೇಕ ಕೂಲಿಗಳು ನೆನಪಿಸಿಕೊಳ್ಳುತ್ತಾರೆ. ಲಾಲೂ ನಂತರ ಬಂದ ಯಾವುದೇ ರೈಲ್ವೇ ಮಂತ್ರಿಯೂ ಇವರ ಬಾಳಲ್ಲಿ ಆಶಾಕಿರಣ ಮೂಡಿಸಲಿಲ್ಲ ಎಂದು ಸೆಲ್ವ ಕುಮಾರ್ ಹೇಳಿಕೊಳ್ಳುತ್ತಾರೆ.

ಆದರೂ ಇವತ್ತಿಗೂ ಅನೇಕ ಕೂಲಿಗಳು ತಮಗೂ ಸೆಂಟ್ರಲ್ ಗವರ್ನ್‌ಮೆಂಟ್ ಕೆಲಸ ಸಿಗಬಹುದು ಎಂಬ ಕನಸು ಉಳಿಸಿಕೊಂಡಿದ್ದಾರೆ.  ಅದೇ ಅವರ ಪ್ರತಿದಿನದ ಶ್ರಮದ ದುಡಿಮೆಗೆ ಪ್ರೇರಣೆಯಾಗಿದೆ.