ಕಣ್ಣು ಕಳೆದುಕೊಂಡ ಮಗುವಿನ ಚಿತ್ರ ವೈರಲ್; ಸಿರಿಯಾದ ಅಮಾಯಕರ ಬಲಿಗೆ ಕೊನೆ ಎಂದು?
ಸಮಾಚಾರ

ಕಣ್ಣು ಕಳೆದುಕೊಂಡ ಮಗುವಿನ ಚಿತ್ರ ವೈರಲ್; ಸಿರಿಯಾದ ಅಮಾಯಕರ ಬಲಿಗೆ ಕೊನೆ ಎಂದು?

ಸಿರಿಯಾದ ಮಗುವಿನ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾವಿಗೀಡಾದ ತನ್ನ ತಾಯಿ ಮತ್ತುಎಡಗಣ್ಣನ್ನು ಕಳೆದುಕೊಂಡ ಮಗುವಿನ ಚಿತ್ರವು ವಿಶ್ವದಾದ್ಯಂತ ಜನರ ಗಮನವನ್ನು ಸೆಳೆದಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಮಗುವಿನ ಹೆಸರು ಕರೀಮ್. ಕೇವಲ ಮೂರು ತಿಂಗಳ ಈ ಮಗು ತನ್ನ ಎಡಗಣ್ಣನ್ನು ಕಳೆದುಕೊಂಡಿದೆ. ಅಷ್ಟೇ ಅಲ್ಲದೆ ಅದರ ತಲೆ ಬುರುಡೆಗೆ ಗಾಯಗಳಾಗಿವೆ. ಕಳೆದ ತಿಂಗಳು ಡಮಾಸ್ಕಸ್ ಉಪನಗರ ಪೂರ್ವ ಗೌಟಾದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ತಾಯಿ ಸಾವಿಗೀಡಾಗಿದ್ದು ಮಗು ಕಣ್ಣನ್ನು ಕಳೆದುಕೊಂಡಿದೆ.

ಸಿರಿಯಾದ ಕಲಾವಿದನಾದ ಫರೆನ್ ಜಾಸೀಮ್ ಗಾಯಗೊಂಡ ಮಗು ಕರೀಮ್ ನ ಕಪ್ಪು-ಬಿಳುಪು ಚಿತ್ರವೊಂದನ್ನು ಚಿತ್ರಿಸಿದ್ದಾರೆ. ಕರೀಮ್ ಗೆ ಬೆಂಬಲವಾಗಿ ಸಾಮಾಜಿಕ ಕಾರ್ಯಕರ್ತರು ಹ್ಯಾಶ್ ಟ್ಯಾಗ್ ಗಳನ್ನು ಬಳಸಿ ಟ್ವೀಟ್ ಮಾಡುತ್ತಿದ್ದಾರೆ. #SolidarityWithKarim ಮತ್ತು #StandWithKarim ಎಂಬ ಹ್ಯಾಶ್ ಟ್ಯಾಗ್ ಗಳ ಮೂಲಕ ನಡೆಸಲಾಗುತ್ತಿರುವ ಅಭಿಯಾನ ಟ್ವಿಟ್ಟರ್ ನಲ್ಲಿ ಸದ್ದು ಮಾಡುತ್ತಿದೆ.

ಅಭಿಯಾನಕ್ಕೆ ಬೆಂಬಲ ಸೂಚಿಸುವ ಸಂಕೇತವಾಗಿ ಟ್ವೀಟರ್ ಬಳಕೆದಾರರು ಒಂದು ಕಣ್ಣನ್ನು ಮುಚ್ಚಿದ ತಮ್ಮ ಚಿತ್ರವನ್ನು ಪೋಸ್ಟ ಮಾಡುತ್ತಿದ್ದಾರೆ. 2016 ರಲ್ಲಿ ಬಂಡುಕೋರರು ಮತ್ತು ಸರ್ಕಾರಿ ಪಡೆಗಳ ನಡುವಿನ ಹೋರಾಟದ ಸಮಯದಲ್ಲಿ ತನ್ನ ಟ್ವೀಟ್ ಗಳು ಮತ್ತು ವಿಡಿಯೋ ಬ್ಲಾಗುಗಳಿಂದಾಗಿ ಅಂತರರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆದಿದ್ದ ಬಾನಾ ಅಲ್ಬೆದ್ ಎಂಬ ಬಾಲಕಿಯೂ ಈ ಅಭಿಯಾನದಲ್ಲಿ ಭಾಗವಹಿಸಿದ್ದಾಳೆ.

ಸಿರಿಯಾ ಒಳಗೊಂಡಂತೆ ಏಳು ಮುಸ್ಲಿಂ ರಾಷ್ಟ್ರಗಳಿಂದ ವಲಸೆ ಬರುವುದನ್ನು ತಡೆಯುವ ಆದೇಶಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದಾಗ, ಈ ಬಾಲಕಿ (ಬಾನಾ ಅಲ್ಬೆದ್), “ಮಿಸ್ಟರ್ ಟ್ರಂಪ್, ನೀವು ಎಂದಾದರೂ ನೀರು, ಆಹಾರವಿಲ್ಲದೇ 24 ಗಂಟೆ ಬದುಕಿದ್ದೀರಾ? ಹೀಗೆ ಸಿರಿಯಾದ ನಿರಾಶ್ರಿತರ ಹಾಗೂ ಮಕ್ಕಳ ಬಗ್ಗೆ ಸ್ವಲ್ಪ ಚಿಂತಿಸಿ,” ಎಂದು ಫೆಬ್ರುವರಿ 2 ರಂದು ಟ್ವೀಟ್ ಮಾಡಿದ್ದಳು.

ಹೀಗೆ ಬಾನಾ ಅಲ್ಬೆದ್ ಅಲ್ಲದೆ ಬ್ರಿಟಿಷ್ ಪಾರ್ಲಿಮೆಂಟಿನ ಪ್ರತಿನಿಧಿಯಾದ ಮ್ಯಾಥ್ಯೂ ರೆಕ್ರಾಫ್ಟ್ ಕೂಡ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಅವರು ತಮ್ಮ ಒಂದು ಕಣ್ಣನ್ನು ಮುಚ್ಚಿಕೊಂಡ ಚಿತ್ರವನ್ನು ಟ್ಟಿಟ್ಟರ್ ನಲ್ಲಿ ಹಾಕುವ ಮೂಲಕ ಅಭಿಯಾನದ ಬೆಂಬಲಕ್ಕೆ ನಿಂತಿದ್ದಾರೆ. “ಸಿರಿಯಾ ಸರ್ಕಾರದ ಮೇಲೆ ರಷ್ಯಾ ತನ್ನ ಪ್ರಭಾವ ಬಳಸಿ ಪೂರ್ವ ಗೌಟಾಗೆ ಆಹಾರ ಮತ್ತು ಇತರ ಮೂಲಭೂತ ಅಗತ್ಯತೆಗಳನ್ನು ಪೂರೈಸಲು ನೆರವಾಗಬೇಕು. ಗಾಯಗೊಂಡವರನ್ನು ಸ್ಥಳಾಂತರಿಸಬೇಕು. ಪೂರ್ವ ಗೌಟಾದಿಂದ ಡಮಾಸ್ಕಸ್ ತಲುಪಲು ಕೇವಲ ಮೂವತ್ತು ನಿಮಿಷಗಳು ಸಾಕು. ಇದು ಸಾವು ಮತ್ತು ಬದುಕಿನ ಪ್ರಶ್ನೆ” ಎಂದವರು ಹೇಳಿದ್ದರು.

ಟರ್ಕಿಯ ಉಪ ಪ್ರಧಾನ ಮಂತ್ರಿ ಹಕಾನ್ ಕುವಸೊಗ್ಲು ಸಹ ಆಂದೋಲನದಲ್ಲಿ ಭಾಗಿಯಾಗಿದ್ದಾರೆ. ಗಾಯಗೊಂಡ ಮತ್ತು ನಿರಾಶ್ರಿತರ ಪರವಾಗಿ ಅವರು ಮಾತನಾಡಿದ್ದಾರೆ. “ಟರ್ಕಿಯು ಕರೀಮ್ ಮತ್ತು ಗಾಯಗೊಂಡ ಇತರ ಮಕ್ಕಳೊಂದಿಗೆ ಇದ್ದೇನೆ,” ಎಂದರು ತಿಳಿಸಿದ್ದಾರೆ.

ಹಾಗೆ ನೋಡಿದರೆ ಕರೀಂ ಚಿತ್ರ ಸಿರಿಯಾದ ಯುದ್ಧದಲ್ಲಿ ಬಲಿಪಶುವಾದ ಮೊದಲ ಮಗುವಿನ ಚಿತ್ರವೇನಲ್ಲ. ಇಂತಹ ಎಷ್ಟೋ ಮಕ್ಕಳು ಯುದ್ಧದಿಂದ ಬಲಿಪಶುವಾಗಿ ಗಾಯಗೊಂಡಿದ್ದಾರೆ, ಸಾವನ್ನಪ್ಪಿದ್ದಾರೆ. ಆದರೆ ಕರೀಮ್ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ದೇಶದಾಚೆ ಇರುವವರಿಗೂ ಇಲ್ಲಿನ ಯುದ್ಧದ ಭೀಕರತೆ ತಿಳಿಯುವಂತಾಗಿದೆ. ಇದೇ ರೀತಿ ಆಗಸ್ಟ್ 2016ರಲ್ಲಿ, ಅಲೆಪ್ಪೊದಲ್ಲಿ ವಾಯುಪಡೆಯ ದಾಳಿಯ ನಂತರ, ಆಂಬುಲೆನ್ಸ್ ಹಿಂಭಾಗದಲ್ಲಿ ನಿಸ್ತೇಜನಾಗಿ ಕುಳಿತಿದ್ದ ಹುಡುಗನ ಚಿತ್ರವು ವೈರಲ್ ಆಗಿತ್ತು. ಸಿರಿಯನ್ ಸರ್ಕಾರದ ವೈಮಾನಿಕ ಬಾಂಬ್ ದಾಳಿಯ ಕ್ರೂರತೆಯನ್ನು ಈ ಚಿತ್ರ ಬಿಂಬಿಸುತ್ತಿತ್ತು.

ಇತ್ತೀಚಿನ ವರ್ಷಗಳಲ್ಲಿ ಹಲವಾರು ಯುದ್ಧಗಳನ್ನು ಕಂಡಿರುವ ಸಿರಿಯಾ ನಾಗರಿಕರು ಯುದ್ದದ ಬಲಿಪಶುಗಳಾಗುತ್ತಿದ್ದಾರೆ. ಅನೇಕರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಹಲವರು ಮನೆ, ಆಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗುತ್ತಿದ್ದಾರೆ. ಇಲ್ಲಿ ನಡೆಯುವ ಯುದ್ಧಗಳಿಗೆ ಕೊನೆಯೇ ಇಲ್ಲವೇ?

ಕೃಪೆ: ಅಲ್ ಝಜೀರಾ