ಯೂ-ಟ್ಯೂಬ್ ಸರ್ಚ್‌: ವಂದೇ ಮಾತರಂ...’ದೇಶ ಪ್ರೇಮ’ಕ್ಕೆ ಹೀಗೊಂದು ವ್ಯಾಖ್ಯಾನ!
ಸಮಾಚಾರ

ಯೂ-ಟ್ಯೂಬ್ ಸರ್ಚ್‌: ವಂದೇ ಮಾತರಂ...’ದೇಶ ಪ್ರೇಮ’ಕ್ಕೆ ಹೀಗೊಂದು ವ್ಯಾಖ್ಯಾನ!

'ದೇಶ ಪ್ರೇಮ'ಕ್ಕೆ ವ್ಯಾಖ್ಯಾನಗಳನ್ನು ನೀಡಲು ನಾ ಮುಂದೆ, ನೀ ಮುಂದೆ ಎಂದು ಜಂಗುಳಿ ನಿರ್ಮಾಣವಾಗಿರುವ ದಿನಗಳಿವು. ಈ ಸಮಯದಲ್ಲಿ, ಕನ್ನಡ ಸಿನೆಮಾ ಲೋಕದಲ್ಲಿ ಕೃಷಿಯನ್ನು ಆರಂಭಿಸಿರುವ ಯುವಕ, ಭದ್ರಾವತಿ ಮೂಲದ ಚೇತನ್ ಮಂಜುನಾಥ್, ಬಂಕಿಮ ಚಂದ್ರ ಚಟರ್ಜಿ ಅವರ 'ವಂದೇ ಮಾತರಂ' ಗೀತೆಗೆ ದೃಶ್ಯ ಸಂಯೋಜನೆ ಮಾಡಿದ್ದಾರೆ.ಅದೀಗ ಯೂ- ಟ್ಯೂಬ್‌ನಲ್ಲಿ ಲಭ್ಯವಿದೆ. 5 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

'ವಂದೇ ಮಾತರಂ' ಗೀತೆಯನ್ನು ಇಟ್ಟುಕೊಂಡು ದೃಶ್ಯ ಸಂಯೋಜನೆ ಮಾಡಿದ ಹಲವು ವಿಡಿಯೋಗಳು ಯೂ-ಟ್ಯೂಬ್‌ನಲ್ಲಿಯೇ ಲಭ್ಯ ಇವೆ. ಆದರೆ, ಚೇತನ್ ಮಂಜುನಾಥ್ ಎಂಬ ಯುವ ನಿರ್ದೇಶಕ ಹೊರತಂದಿರುವ ಈ ವಿಡಿಯೋ 'ದೇಶ ಪ್ರೇಮ'ಕ್ಕೆ ಸಾಮಾನ್ಯ ಜನರ ದೃಷ್ಟಿಯಲ್ಲಿ ನೀಡಿದ ವ್ಯಾಖ್ಯಾನದಂತಿದೆ.

ಒಬ್ಬ ಕಲಾವಿದ, ಮತ್ತೊಬ್ಬ ರೈತ, ಮತ್ತೊಬ್ಬಳು ತಾಯಿ, ಚಿಂದಿ ಆಯುವ ಮಕ್ಕಳು, ಹೊಲ ಹೂಳುವ ಸೈನಿಕ, ಸಮುದ್ರದ ದಂಡೆಯ ಮೇಲೆ ನಿಂತು ಕನ್ನಡ ಧ್ವಜದ ಬಣ್ಣವನ್ನು ಮೈಗೆ ಬಳಿದುಕೊಂಡು ಭಾರತದ ಬೃಹತ್ ಬಾವುಟವನ್ನು ಬೀಸುವ ಆರೋಗ್ಯವಂತ ಯುವಕನ ದೃಶ್ಯಗಳ ಸಂಯೋಜನೆ 'ವಂದೇ ಮಾತರಂ' ಗೀತೆಗೆ ಬೇರೆಯದೇ ಅರ್ಥವನ್ನು ನೀಡುವ ಪ್ರಯತ್ನ ಮಾಡುತ್ತದೆ.

ಗೀತೆಯನ್ನು ಕನ್ನಡ ಸಿನೆಮಾ ರಂಗದ ಹಿನ್ನೆಲೆ ಗಾಯಕಿ ಕುಂದಾಪುರ ಮೂಲದ ವಿಜೇತ ವಿಶ್ವನಾಥ್ ಹಾಡಿದ್ದಾರೆ. ಪ್ರಯೋಗ್ ಸ್ಟುಡಿಯೋದ ಯುವ ಸಂಗೀತ ನಿರ್ದೇಶಕ ಜತಿನ್ ದರ್ಶನ್ ಸಂಗೀತ ನೀಡಿದ್ದಾರೆ. ಡಿಓಪಿ ಅಶೋಕ್ ನಾಡಿಗ್ ಕ್ಯಾಮೆರಾ ಗಮನ ಸೆಳೆಯುವಂತಿದೆ.ನೀವೊಮ್ಮೆ ನೋಡಿ...