samachara
www.samachara.com
70ರ ದಶಕದಲ್ಲಿ 'ಬಿಗ್ ಬಿ'ಯನ್ನು ಸರಿಗಟ್ಟುವ ತಾಕತ್ತಿದ್ದ ಏಕೈಕ ನಟ ವಿನೋದ್ ಖನ್ನಾ...
ಸಮಾಚಾರ

70ರ ದಶಕದಲ್ಲಿ 'ಬಿಗ್ ಬಿ'ಯನ್ನು ಸರಿಗಟ್ಟುವ ತಾಕತ್ತಿದ್ದ ಏಕೈಕ ನಟ ವಿನೋದ್ ಖನ್ನಾ...

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

ಮಧು ಚಂದ್ರಪ್ಪ

ಅದು 70ರ ದಶಕ.

ಹಿಂದಿ ಸಿನೆಮಾ ರಂಗದಲ್ಲಿ ಭರವಸೆ ಮೂಡಿದ್ದ ಇಬ್ಬರು ನಟರ ಪೈಕಿ ಒಬ್ಬರು ಅಮಿತಾಬ್ ಬಚ್ಚನ್; ಇನ್ನೊಬ್ಬರು ವಿನೋದ್ ಖನ್ನಾ. ಅವತ್ತಿಗೆ ಅಮಿತಾಬ್‌ ಅವರಿಗೆ ವೃತ್ತಿರಂಗದಲ್ಲಿ ಪೈಪೋಟಿ ನೀಡುವ ಸಾಧ್ಯತೆ ಇದ್ದ ಏಕೈಕ ನಟ ಖನ್ನಾ. ಗಡಸು ದನಿ, ಸುಂದರ ದೇಹ ಸೌಂದರ್ಯ, ನಟನೆಯ ಕೌಶಲ್ಯ ಹೀಗೆ ಒಬ್ಬ ಯಶಸ್ವಿ ನಟನಾಗಲು ಏನೇನು ಬೇಕಿದ್ದವೋ ಎಲ್ಲವೂ ವಿನೋದ್‌ ಖನ್ನಾ ಅವರಿಗಿತ್ತು. ಜನ ಅವರನ್ನು ಮೆಚ್ಚಿಕೊಂಡಿದ್ದರು; ಅದಕ್ಕಿಂತ ಹೆಚ್ಚಾಗಿ ನಿರ್ಮಾಪಕರು ಅವರನ್ನು ಇಷ್ಟ ಪಡುತ್ತಿದ್ದರು. ಆದರೆ, ಕಾಲದ ನಡಿಗೆ ಇತಿಹಾಸವನ್ನು ಬದಲಿಸಿತು. ಅಮಿತಾಬ್‌ ಹಿಟ್ ಚಿತ್ರಗಳ ಮೇಲೆ ಚಿತ್ರಗಳನ್ನು ನೀಡುತ್ತಾ ಹೋದರು. ವಿನೋದ್ ಖನ್ನಾ ಚಿತ್ರರಂಗ, ರಾಜಕೀಯರಂಗಗಳ ನಡುವೆ ತಮ್ಮನ್ನು ತಾವು ಕಂಡುಕೊಂಡರು. ಇನ್ನೊಂದು ಅರ್ಥದಲ್ಲಿ ಕಲಾ ಪ್ರಪಂಚದ ಪಾಲಿಗೆ ಅವರು ಕಳೆದು ಹೋದರು.

2017 ಏಪ್ರಿಲ್ 2ರಂದು ಶ್ರೀ ಹೆಚ್ಎನ್ ರಿಲಾಯನ್ಸ್‌ ಫೌಂಡೇಶನ್ ಆಸ್ಪತ್ರೆಗೆ ದಾಖಲಾದ ಖನ್ನಾ ಮತ್ತೆ ಅಲ್ಲಿಂದ ಜೀವಂತವಾಗಿ ಮರಳಲಿಲ್ಲ. ಬ್ಲಾಡರ್ ಕ್ಯಾನ್ಸರ್ ನಿಂದ ಬಳಲುತಿದ್ದ ಅವರು ಗುರುವಾರ ಸಾವನ್ನಪ್ಪಿದರು. ವಲಸೆ, ವಾಣಿಜ್ಯ ನಗರಿಯ ಬದುಕು, ವಿದ್ಯಾಭ್ಯಾಸ, ನಟನೆ, ಕುಟುಂಬ, ರಾಜಕೀಯ ಹೀಗೆ ಬದುಕಿನ ಹಲವು ಮಜಲುಗಳನ್ನು ಸುಮಾರು 70 ವರ್ಷಗಳ ಕಾಲ ನಿಭಾಯಿಸಿದ ಖನ್ನಾ ಇನ್ನಿಲ್ಲ. 'ಅಮರ್ ಅಕ್ಬರ್ ಆಂಥೋನಿ' ಸಿನೆಮಾದಲ್ಲಿದ್ದ ಪೊಲೀಸ್‌ ಅಧಿಕಾರಿಯ ಪಾತ್ರದ ಅಮಾಯಕ, ದುಃಖಭರಿತ ಭಾವವೊಂದನ್ನು ಹಿಂದೆ ಬಿಟ್ಟು ಹೋಗಿದ್ದಾರೆ.

ವಿನೋದ್ ಖನ್ನಾ ಜನಿಸಿದ್ದು ಬ್ರಿಟಿಷ್ ಆಳ್ವಿಕೆಯ ಇಂಡಿಯಾದಲ್ಲಿ.  1946 ಅಕ್ಟೋಬರ್ 6ನೇ ತಾರೀಖು ಪಂಜಾಬಿನ  ಪೇಶಾವರದಲ್ಲಿ ಕಮಲ ಮತ್ತು ಕ್ರಿಷ್ಣಚಂದ್ರ ಖನ್ನಾ ದಂಪತಿಗಳಿಗೆ ಜನಿಸಿದ ಮುದ್ದಿನ ಮಗ ವಿನೋದ್. ಪೇಶಾವರದಲ್ಲಿಯೇ ಕ್ರಿಷ್ಣಚಂದ್ರ ಖನ್ನಾರ ಕುಟುಂಬ ಆರ್ಥಿಕ ಮತ್ತು ಸಾಮಾಜಿಕವಾಗಿ ಹೆಸರು ಮಾಡಿತ್ತು. ವಸ್ರೋದ್ಯಮ, ಬಟ್ಟೆಗೆ ಬಳಸುವ ಬಣ್ಣಗಳ ತಾಯಾರಿಕೆ ಮತ್ತು ರಸಾಯನಿಕಗಳ ವ್ಯಾಪಾರಕ್ಕೆ ಹೆಸರುವಾಸಿಯಾಗಿದ್ದ ಕುಟುಂಬ ಇವರದ್ದು. ಖನ್ನಾಗಿಂತ ಮೊದಲು ಜನಿಸಿದ ಮೂವರು ಅಕ್ಕಂದಿರು ಮತ್ತು ಓರ್ವ ತಮ್ಮ ಭಾರತ ವಿಭಜನೆಯ ಸಂದರ್ಭದಲ್ಲಿ ಪೇಶಾವರವನ್ನು ಬಿಡಬೇಕಾಯಿತು. ಇವರ ಇಡೀ ಕುಟುಂಬ ಪೇಶಾವರದಿಂದ ನೆಲೆಯನ್ನರಿಸಿ ಬಂದಿದ್ದು ವಾಣಿಜ್ಯ ನಗರಿ ಮುಂಬೈನತ್ತ.

ವಾಣಿಜ್ಯ ವಿಷಯದಲ್ಲಿ ಪದವಿ ಪಡೆದ ವಿನೋದ್ ಖನ್ನಾ ಅವರಿಗೆ, ಕಲಿಕೆಯ ದಿನಗಳಿಂದಲೂ ಮೋಶನ್ ಪಿಕ್ಚರ್‌ಗಳು ಎಂದರೆ ಅಚ್ಚುಮೆಚ್ಚು. ಶಾಲಾದಿನಗಳಲ್ಲಿ ಅವರು ಇಷ್ಟಪಟ್ಟು ನೋಡಿದ  'ಮುಘಲ್- ಎ- ಆಝಮ್' ಮತ್ತು 'ಸೋಲವಾ ಸಾಲ' ಅವರ ಮೇಲೆ ಪರಿಣಾಮ ಬೀರಿದ ಚಿತ್ರಗಳು.

ಖನ್ನಾ ತಮ್ಮ ನಟನೆಯನ್ನು ಆರಂಭಿಸಿದ್ದು 1968ರಲ್ಲಿ. ಮೊದಲ ಬಾರಿಗೆ ಖಳನಾಯಕನ ಪಾತ್ರದಲ್ಲಿ ತೆರೆಯಲ್ಲಿ ಕಾಣಿಸಿಕೊಂಡರು. ಸುನಿಲ್ ದತ್ತರ 'ಮನ್ ಕಾ ಮೀಟ್' ನಲ್ಲಿ ಸೋಮ್ ದತ್ತ ನಾಯಕನ ಪಾತ್ರದಲ್ಲಿದ್ದರೆ, ಖನ್ನಾ ಖಳನಾಯಕರಾಗಿ ಮಿಂಚಿದರು. ಈ ಚಿತ್ರ ತಮಿಳಿನಲ್ಲೂ 'ಕುಮಾರಿ ಪೆನ್ನ' ಹೆಸರಿನಲ್ಲಿ ರಿಮೇಕ್ ಮಾಡಲಾಯಿತು. ವಿನೋದ್ ಖನ್ನಾ ಆರಂಭದ ದಿನಗಳಲ್ಲಿ ಖಳನಾಯಕ ಮತ್ತು ಪೋಷಕ ಪಾತ್ರಗಳನಷ್ಟೇ ಮಾಡುತ್ತಿದ್ದರು.  'ಪೋರಬ್ ಔರ್ ಪಶ್ಚಿಮ್',  'ಸಚ್ಚಾ ಝೋಟಾ',  'ಮೇರಾ ಖೂನ್ ಮೇರಾ ದೇಶ್' ಮತ್ತು 'ಮಸ್ತಾನ'ದಂತಹ ಕೆಲವು ಚಿತ್ರಗಳು ಖನ್ನಾಗೆ ಬಾಲಿವುಡ್‌ ಜಗತ್ತಿನಲ್ಲಿ ಗಟ್ಟಿ ನೆಲೆಯನ್ನು ನೀಡಿದವು.

ಬಾಲಿವುಡ್‌ ಅಂಗಳದಲ್ಲಿ ಖಳನಾಯಕನ ಪಾತ್ರದಿಂದ ನಾಯಕನ ಪಾತ್ರಕ್ಕೆ ಭಡ್ತಿ ಪಡೆದ ಕೆಲವೇ ಕೆಲವು ನಟರಲ್ಲಿ ವಿನೋದ್ ಖನ್ನಾ ಕೂಡಾ ಒಬ್ಬರು. 1971ನೇ ಇಸವಿಯಲ್ಲಿ ತರೆಕಂಡ 'ಹಮ್ ತುಮ್ ಅಔರ್ ವೋ' ಖನ್ನಾರ ಬದುಕಿಗೆ ಮಹತ್ವದ ತಿರುವು ತಂದು ಕೊಟ್ಟ ಅದ್ಭುತ ಚಿತ್ರ. ಈ ಚಿತ್ರದಲ್ಲಿ ವಿನೋದ್ ಒಟ್ಟಿಗೆ ನಟಿಸಿದವರು, ಕನ್ನಡದ ತಾರೆ ಭಾರತಿ ವಿಷ್ಣುವರ್ಧನ್. ಅದೇ ವರ್ಷ ಗುಲ್ಙಾರ್ ನಿರ್ದೇಶನದ 'ಮೇರಾ ಅಪನೆ' ಮತ್ತು  ಕವ್ವಾಸ್ ನನಾವತಿ ಕುರಿತಾದ ಸತ್ಯ ಘಟನೆಯಾಧಾರಿತ ಚಿತ್ರ 'ಅಚಾನಕ್‌' ಚಿತ್ರಗಳಲ್ಲಿ ವಿನೋದ್ ಖನ್ನಾ ಒಳಗಿನ ಒಬ್ಬ ಮನೋಜ್ಞ ನಟನ ಪರಿಚಯವಾಯಿತು.

ಬಾಲಿವುಡ್‌ನ ನಾಯಕಿಯರಾದ ರೇಖಾ, ಸಾಯಿರ ಭಾನು, ಪರವೀನ್ ಬಾಬಿ, ರೀನಾ ರಾಯ್, ಯೋಗಿತಾ ಬಾಲಿ, ಡಿಂಪಲ್ ಕಪಾಡಿಯ ಮುಂತಾದರೊಂದಿಗೆ  ಅನೇಕ ಚಿತ್ರಗಳಲ್ಲಿ ಖನ್ನಾ ನಟಿಸಿದ್ದಾರೆ. 1974- 82 ಆಸುಪಾಸಿನಲ್ಲಿ ಖನ್ನಾ ನಟಿಸುತ್ತಿದ್ದ ಚಿತ್ರಗಳಿಗೆ ಜಿತೇಂದ್ರ, ಅಮಿತಾಬ್ ಬಚ್ಚನ್, ರಜನಿ ಕಾಂತ್, ರಿಷಿ ಕಪೂರ್ ಮತ್ತು ಸಲ್ಮಾನ್ ಖಾನ್ ರಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು ಎಂಬುದನ್ನು ಗಮನಿಸಬೇಕಿದೆ.

1999ರಲ್ಲಿ ಫಿಲ್ಮ್‌ ಫೇರ್  ಜೀವಮಾನದ ಸಾಧನೆ ಪ್ರಶಸ್ತಿಯೂ ಖನ್ನಾ ಪಡೆದುಕೊಂಡರು. ಇತ್ತೀಚೆಗೆ 2010ರಲ್ಲಿ ದಬಾಂಗ್ ಮತ್ತು ಶಾರುಖಾನ್ ಅಭಿನಯದ 'ದಿಲ್ ವಾಲೆ' ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. 2014ರಲ್ಲಿ ಟೆಲಿವಿಷನ್ ಮಾಧ್ಯಮದಲ್ಲೂ ಕಾಣಿಸಿಕೊಂಡ ಖನ್ನಾ, ಇವತ್ತು ಕೇಂದ್ರ ಸಚಿವೆಯಾಗಿರುವ ಸೃತಿ ಇರಾನಿ ನಿರ್ಮಾಣದ 'ಮೇರೆ ಅಪನೆ' ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ವೃತ್ತಿ ಜೀವನ ಉತ್ತುಂಗದ ಜೀವನದಲ್ಲಿ ವೈರಾಗ್ಯ ತಳೆದ ಖನ್ನಾ ಎಲ್ಲವನ್ನೂ ಬಿಟ್ಟು ಓಶೋ ಅನುಯಾಯಿಯಾಗಿದ್ದು ಇನ್ನೊಂದು ದೊಡ್ಡ ಕತೆ. ಈ ಸಮಯದಲ್ಲಿ ಅವರ ಮೊದಲ ಮದುವೆ ಮುರಿದು ಬಿತ್ತು ಕೂಡ. ಆದರೆ ಐದು ವರ್ಷಗಳ ಆಶ್ರಮದ, ಆಧ್ಯಾತ್ಮಕ ಬದುಕು ಮುಗಿಸಿ ಬಂದ ನಂತರ ಸಾಲು ಸಾಲು ಹಿಟ್ ಚಿತ್ರಗಳನ್ನೂ ನೀಡಿದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.

ರಾಜಕೀಯ ಬದುಕು: 

1997ರಲ್ಲಿ ಬಿಜೇಪಿ ಸೇರಿದ ಖನ್ನ ಪಂಜಾಬಿನ ಗುರುದಾಸಪುರ  ಕ್ಷೇತ್ರದಿಂದ ಗೆದ್ದು ಲೋಕಸಭೆಯನ್ನು ಪ್ರತಿನಿಧಿಸಿದರು. 1999 ರಲ್ಲಿ ಇದೇ ಕ್ಷೇತ್ರದಿಂದ ಲೋಕಸಭೆಗೆ ಮರು ಆಯ್ಕೆಯಾದರು. ಮುಂದೆ 2002ರಲ್ಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದರು. 2009ರ ಚುನಾವಣೆಯಲ್ಲಿ ಸೋತ ನಂತರ 2014ರಲ್ಲಿ ಮತ್ತೆ ತಮ್ಮದೇ ಕ್ಷೇತ್ರ ಗುರುದಾಸಪುದಿಂದ ಗೆದ್ದು ತಮ್ಮ ರಾಜಕೀಯ ಭವಿಷ್ಯದಲ್ಲಿ ಇನ್ನೂ ಮುಗಿದಿಲ್ಲ ಎಂಬ ಸಂದೇಶ ನೀಡಿದರು.

ಸದ್ಯ ಖನ್ನಾ ಅವರನ್ನು ಒಬ್ಬ ನಟ ಎಂದು ಜನ ನೆನಪಿಟ್ಟುಕೊಳ್ಳುವುದಕ್ಕಿಂತ ಹೆಚ್ಚಾಗಿ ಗುರುದಾಸ್‌ಪುರ ಕ್ಷೇತ್ರದ ಜನರ ಪಾಲಿಗೆ ಅವರು ತಮ್ಮನ್ನು ಪ್ರತಿನಿಧಿಸುವ ರಾಜಕಾರಣಿ. ಬಹುಶಃ ಚಿತ್ರರಂಗದಲ್ಲಿಯೇ ಮುಂದುವರಿದಿದ್ದರೆ ಇವತ್ತಿಗೆ ಅಮಿತಾಬ್‌ ಬಚ್ಚನ್‌ರನ್ನು ಸರಿಗಟ್ಟುತ್ತಿದ್ದ ನಟ ವಿನೋದ್ ಖನ್ನಾ. ಇವತ್ತಿಗೆ ಅವರ ಇಹಲೋಕದ ಯಾತ್ರೆ ಅಂತ್ಯವಾಗಿದೆ.