samachara
www.samachara.com
ಕಳಚಿದ ಕೊಂಡಿಗೆ ಕಾರಣ ಹುಡುಕಿ; ಅದನ್ನು ಮತ್ತೆ ಜೊಡಿಸುವುದೇ ‘ದಕ್ಷಿಣಾಯಣ’!
ಸಮಾಚಾರ

ಕಳಚಿದ ಕೊಂಡಿಗೆ ಕಾರಣ ಹುಡುಕಿ; ಅದನ್ನು ಮತ್ತೆ ಜೊಡಿಸುವುದೇ ‘ದಕ್ಷಿಣಾಯಣ’!

  • ಡಾ.ಕಿರಣ್. ಎಂ ಗಾಜನೂರು

“ನಮ್ಮ ತಲೆಮಾರಿನ ಕೆಲಸ, ಕಳಚಿರುವ ಕೊಂಡಿಗೆ ಕಾರಣ ಹುಡುಕಿ; ಅದನ್ನು ಮತ್ತೆ ಜೊಡಿಸುವುದು ಅಷ್ಟೆ”

ಎಂಬ ಉಪಮೆಯೊಂದಿಗೆ ನನ್ನ ಅಭಿಪ್ರಾಯ ದಾಖಲಿಸುತ್ತಿದ್ದೇನೆ.

ಕಳೆದ ನಾಲ್ಕೈದು ವರ್ಷಗಳಿಂದ ಸಾಂಸ್ಕೃತಿಕ ಲೋಕದಲ್ಲಿ ಆಗುತ್ತಿರುವ ತಲ್ಲಣಗಳನ್ನು ಸಿಮೀತ ಅರ್ಹತೆಯ ನೆಲೆಯಲ್ಲಿ ನೋಡಲು ಪ್ರಯತ್ನಿಸುತ್ತಿದ್ದೇವೆ. ಇವತ್ತಿನ ಸಮಾಜದಲ್ಲಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಲೋಕದಲ್ಲಿನ ತಲ್ಲಣಗಳು  ಕೇವಲ ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದ ತಲ್ಲಣಗಳು ಮಾತ್ರ ಅಲ್ಲ! ಬದಲಾಗಿ ಇವು ಜನ ಸಾಮಾನ್ಯರು ಎದುರಿಸುತ್ತಿರುವ ತಲ್ಲಣಗಳೂ ಹೌದು ಎಂಬ ಅಭಿಪ್ರಾಯ ಬಲಗೊಂಡಿದೆ.

ನಿಜವಾದ ಅರ್ಥದಲ್ಲಿ ಇಂದು ಸಾಂಸ್ಕೃತಿಕ ಲೋಕ ಮಾತ್ರ ದಾಳಿಗೆ ಒಳಗಾಗುತ್ತಿಲ್ಲ. ಬದಲಾಗಿ ಸಮಾಜದಲ್ಲಿ ತನ್ನ ದೈನಂದಿನ ಬದುಕನ್ನು ತನ್ನದೆ ರೀತಿಯ ಆಹಾರ, ಆಚರಣೆ ಬದುಕುತ್ತಿದ್ದ ಶ್ರೀ ಸಾಮಾನ್ಯನ ಸಹಜ ಬದುಕು ದಾಳಿಗೆ, ನಿರ್ಬಂದಕ್ಕೆ ಒಳಗಾಗುತ್ತಿದೆ.

ಇಂದು ಮನುಷ್ಯನ ಸಹಜ ಬದುಕು ದಾಳಿಗೆ/ಅಪರಾಧಿಕರಣಕ್ಕೆ ಒಳಗಾಗುತ್ತಿದೆ.  ಇದು ಒಂದು ರೀತಿಯ ಅನೈಸರ್ಗಿಕ ಸ್ಥಿತಿ. ಇದನ್ನು ನಾವು ದಾಟಬೇಕಿದೆ. ಹಾಗೆ ದಾಟಲು ಬೇಕಾದ ಯೋಜನೆಗಳೇನು? ಅದನ್ನು ಹೇಗೆ ನಿಭಾಯಿಸಬೇಕು? ಎಂಬಿತ್ಯಾದಿ ಪ್ರಶ್ನೆ ನಮ್ಮನ್ನು ಕಾಡುತ್ತಿದೆ.

ಈ ಪ್ರಶ್ನೆ ಇಷ್ಟು ತೀವ್ರವಾಗಿ ಕಾಡಲು ಕಾರಣ ಈ ಅನೈಸರ್ಗಿಕ ಸ್ಥಿತಿಯನ್ನು ದಾಟಲು ನೆರವಾಗಬಹುದಾದ ಪ್ರಜಾತಾಂತ್ರಿಕ ಮೌಲ್ಯಗಳನ್ನು ಪ್ರತಿಪಾದಿಸುವ ಬರಹಗಾರ, ಹೋರಾಟಗಾರ, ಕಲಾವಿದರು ಇಂದು ವಿಘಟನೆಗೊಂಡಿದ್ದಾರೆ. ಈ ಸ್ಥಿತಿಯಲ್ಲಿ ವಿಘಟನೆಗೊಂಡಿರುವ ಧ್ವನಿಗಳನ್ನು ಒಂದುಗೂಡಿಸಲು ಹುಟ್ಟಿದ್ದೆ “ದಕ್ಷಿಣಾಯಣ”. ಆ ಕಾರಣಕ್ಕೆ ದಕ್ಷಣಾಯಣ ಒಂದು ಸಂಘಟನೆಯಾಗಿಲ್ಲ, ಅದಕ್ಕೆ ಸಂಘಟನಾತ್ಮಕ ಸ್ವರೂಪವೂ ಇಲ್ಲ. ಇದರ ಮೂಲ ಉದ್ದೇಶ ಜನಪರವಾಗಿ ಯೋಚಿಸುವ ಮತ್ತು ಪ್ಯಾಸಿಸ್ಟ್ ಧೋರಣೆಯನ್ನು ವಿರೋಧಿಸುವ ತಿಳಿವುಳ್ಳ ಎಲ್ಲಾ ಮಾದರಿಯ(ಬರಹ, ಭಾಷಣ, ಸಿನಿಮಾ, ಕಲೆ, ನಾಟಕ ಇತ್ಯಾದಿ) ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವ ಒಂದು ವೇದಿಕೆ ಅಷ್ಟೆ.

ಸರಳವಾಗಿ ಹೇಳಬೇಕು ಅಂದರೆ ಈ ದೇಶದ ಬಹುತ್ವದ ಶಕ್ತಿ ಇರುವುದು ಇಲ್ಲಿನ ಜನರ “ಸಹಜ ಬದುಕಿನ” ಭಾಗವಾಗಿಯೇ ಹೊರತು ಪಠ್ಯದಲ್ಲಿ ಅಲ್ಲ! ಇದನ್ನು ಅರಿತ ಪ್ಯಾಸಿಸ್ಟರು ಇಂದು ಜನರ ಬದುಕುಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಮತ್ತು ಆ ದಾಳಿಗಳ ಹೊಣೆಯನ್ನು ಯಾವುದೇ ಮುಜುಗರವಿಲ್ಲದೆ ಸಂಸ್ಕೃತಿ ಮತ್ತು ದೇಶಭಕ್ತಿ ಹೆಸರಿನಲ್ಲಿ ಹೊತ್ತುಕೊಳ್ಳುವ/ಸಮರ್ಥಿಸಿಕೊಳ್ಳುವ ಹಂತಕ್ಕೆ ಇಳಿದಿದ್ದಾರೆ.

ಇದಕ್ಕೆಲ್ಲಾ ಮುಖ್ಯ ಕಾರಣ “ಪ್ರಜಾತಾಂತ್ರಿಕ ಪ್ರತಿರೋಧಕ ಶಕ್ತಿಗಳ” ವಿಘಟನೆ. ಆ ಕಾರಣಕ್ಕೆ ದಕ್ಷಣಾಯನ ಈ ವಿಘಟಿತ ಶಕ್ತಿಗಳನ್ನು ಅವುಗಳ ರಚನೆಗೆ ಭಂಗ ಬಾರದಂತೆ ಒಗ್ಗೂಡಿಸಿ ಪ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಸೆಣಸಲು ಒಂದು ವೇದಿಕೆ ಒದಗಿಸುತ್ತಿದೆ. ಇಲ್ಲಿ ಪ್ರಜಾತಾಂತ್ರಿಕ ಮನಸ್ಸುಳ್ಳ ಮತ್ತು ಪ್ಯಾಸಿಸ್ಟ್ ದಾಳಿಯನ್ನು ವಿರೋಧಿಸುವ ಯಾವುದೇ ವ್ಯಕ್ತಿ ಮತ್ತು ಸಂಘಟನೆ ಭಾಗಿಯಾಗಬಹುದು. ದಕ್ಷಿಣಾಯಣದ ಮೂಲ ಆಶಯ ಈ ದೇಶದ ಆತ್ಮವಾದ ಬಹುತ್ವ ಆಧರಿಸಿದ ಸಹಜ ಬದುಕನ್ನು ಸಮರ್ಥಿಸುವುದು, ಪ್ಯಾಸಿಸ್ಟರ ವಿರುದ್ಧ ನಿರ್ಬಯವಾಗಿ ನಿಲ್ಲುವುದು, ಸಂವಾದ ನಡೆಸುವ ಮೂಲಕ ತಾತ್ವಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಮುಖ್ಯವಾಗಿ ವಿಕೇಂದ್ರಿಕರಣದಲ್ಲಿ ನಂಬಿಕೆ ಇಡುವುದಾಗಿದೆ. ಈ ನಿಟ್ಟಿನಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿ ಪ್ಯಾಸಿಸ್ಟ್ ವಿರೋಧಿ “ಪ್ರಜಾತಾಂತ್ರಿಕ ಪ್ರತಿರೋಧಕ ಶಕ್ತಿಗಳ” ಒಗ್ಗೂಡಿಸುವ ಕೆಲಸ ಆರಂಭವಾಗಿದೆ ಅದರ ಭಾಗವಾಗಿ ದಕ್ಷಣಾಯಣ ಕರ್ನಾಟಕದಲ್ಲೂ ರೂಪುಗೊಂಡಿದೆ.

ದಿನಾಂಕ ೮-೦೪-೨೦೧೭ ರಂದು ಶಿವಮೊಗ್ಗದಲ್ಲಿ ನಡೆದ  “ಅಭಿವ್ಯಕ್ತಿ ಸಮಾವೇಶ” ಈ ಮೂಲ ಆಶಯಕ್ಕೆ ಪೂರಕವಾಗಿ ಕರ್ನಾಟಕದ ಪ್ಯಾಸಿಸ್ಟ್ ವಿರೋಧಿ “ಪ್ರಜಾತಾಂತ್ರಿಕ ಪ್ರತಿರೋಧಕ ಶಕ್ತಿಗಳ” ಸಮ್ಮಿಲನವಾಗಿದೆ. ಆಶ್ಚರ್ಯದ ವಿಷಯ ಎಂದರೆ ಸಮಾವೇಶ ನಿರಿಕ್ಷೇಗೂ ಮಿರಿ ಯಶಸ್ವಿಯಾಗಿದೆ. ಅಷ್ಟು ದೊಡ್ಡ ಮಟ್ಟದಲ್ಲಿ ನಾಡಿನ ಖ್ಯಾತ ಲೇಖಕರು, ಹಿರಿಯರು ಒಂದೆಡೆ ಸೇರಿದ್ದಾರೆ. ಆ ಮೂಲಕ ಜನಪರ ಹೋರಾಟದ ಕಳಚಿರುವ ಕೊಂಡಿಗಳು ಸೇರಿಕೊಳ್ಳುವ ಆಶಾವಾದ ಮೂಡಿದೆ. ಎಲ್ಲಕ್ಕಿಂತಹ ಹೆಚ್ಚಾಗಿ ನಾಡಿನ ಖ್ಯಾತನಾಮ ಲೇಖಕರು ಈ ತಲೆಮಾರಿನ ಹುಡುಗರ ಮಾತಿಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಿವಿಯಾಗಿದ್ದಾರೆ.

ಇದು ಮಹತ್ವದ ಮತ್ತು ಗಮನಿಸಬೇಕಾದ ಅಂಶವಾಗಿದೆ. ಕೇಳಿಸಿಕೊಳ್ಳುವ ತಾಳ್ಮೆ ಮತ್ತು ಹಿರಿಯರು ಮತ್ತು ಕಿರಿಯರ ಅಭಿವ್ಯಕ್ತಿ ಮಾದರಿಗಳು ಒಂದಾಗುವ ಕಾಲ ಇದಾಗಿದೆ. ಆ ನಿಟ್ಟಿನಲ್ಲಿ ದಕ್ಷಣಾಯಣ ಅಭಿವ್ಯಕ್ತಿ ಸಮಾವೇಶ ಒಂದು ಹೆಜ್ಜೆ ಗುರುತನ್ನು ಮೂಡಿಸಿದೆ ಎಂದರೆ ತಪ್ಪಾಗಲಾರದು. ಅದರಾಚೆಗೆ ಗೋಷ್ಟಿಗಳ ರೂಪುಗೊಳಿಸುವಿಕೆಯಲ್ಲಿ, ಅವುಗಳನ್ನು ಜಾರಿಗೊಳಿಸುವ ಮಾದರಿಯಲ್ಲಿನ ಕೆಲವು ಮಿತಿಗಳ ಕುರಿತು ನಾವು ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಖಂಡಿತಾ ಬದಲಾವಣೆ ಆಗುತ್ತವೆ.

ಇನ್ನು ಮುಖ್ಯ ವಿಷಯಕ್ಕೆ ಬರುವುದಾದರೆ ಸಮಾಚಾರ.ಕಾಮ್ ದಿನಾಂಕ ೮-೦೪-೨೦೧೭ ರಂದು “ದಕ್ಷಿಣಾಯಣ;  ಚರ್ವಿತ ಚರ್ವಣ ಮತ್ತು ವಿಚಾರ ಕ್ರಾಂತಿಗೆ 'ನೀಡದ’ ಆಹ್ವಾನ” ಎಂಬ ವರದಿ ಪ್ರಕಟಿಸಿತ್ತು. ಈ ವರದಿಯನ್ನು ವೈಯಕ್ತಿಕವಾಗಿ ನಾನು ಮೇಲೆ ತಿಳಿಸಿದ ಮನುಷ್ಯನ ಸಹಜ ಬದುಕಿನ ಮೇಲಿನ ಅನೈಸರ್ಗಿಕ ದಾಳಿಯನ್ನು  ವಿರೋಧಿಸುವ “ಪ್ರಜಾತಾಂತ್ರಿಕ ಪ್ರತಿರೋಧಕ ಶಕ್ತಿಗಳ” ಭಾಗವಾಗಿ  ಸಮಾಚಾರ.ಕಾಮ್  ಅಭಿವ್ಯಕ್ತಿ ಸಮಾವೇಶವನ್ನು ವಿಮರ್ಶಿಸಿದೆ ಎಂದು ಗುರುತಿಸುತ್ತೇನೆ ಮತ್ತು ಅದನ್ನು ಗೌರಸುತ್ತೇನೆ.

ಅದರ ಜೊತೆ ಜೊತೆಗೆ ವರದಿಯಲ್ಲಿನ ಕೆಲವು ಅಂಶಗಳ ಕುರಿತು ನನಗೆ ಭಿನ್ನಾಭಿಪ್ರಾಯವಿದೆ. ಅದಕ್ಕೆ ಕಾರಣ ಒಂದು ಸಮಾವೇಶದ ಮೂಲ ಉದ್ದೇಶವನ್ನು ಗ್ರಹಿಸದೆ ವ್ಯಕ್ತಿಗಳ ವೈಯಕ್ತಿಕ ಅಭಿಪ್ರಾಯ ಮತ್ತು ಗೋಷ್ಟಿಗಳಲ್ಲಿ ಚರ್ಚಿತವಾದ ಕೆಲವು ಮಾತುಗಳನ್ನು ಆಧರಿಸಿರುವ ವರದಿ ತನ್ನದೆ ಆದ ಸಂಕುಚಿತ ಅಭಿಪ್ರಾಯದಿಂದ ರೂಪಿಸಿಕೊಂಡಿದೆ ಅನ್ನಿಸುತ್ತದೆ.

ವಿಶಾಲವಾಗಿ ಇದು 'ಸಮಾಚಾರ.ಕಾಮ್' ಒಂದರ ಸಮಸ್ಯೆಯಲ್ಲ. ಬದಲಾಗಿ ಇದನ್ನು ಇಂದಿನ ಬಹುತೇಕ ಮಾಧ್ಯಮಗಳು ಎದುರಿಸುತ್ತಿರುವ ಸಮಸ್ಯೆಯಾಗಿ ನಾನು ಗುರುತಿಸುತ್ತೇನೆ. ಇಂದು ಬದಲಾವಣೆ ಎಂಬುದು ಬೌದ್ಧಿಕತೆ ಪ್ರಕ್ರಿಯೆ ಅದರಿಂದ ಹುಟ್ಟುವ ಚಿಂತನ/ಮಂಥನಗಳ ಅತ್ಯಂತಿಕ ರೂಪವಾಗಿರುತ್ತದೆ ಎಂಬ ಸಂಗತಿ ಬಿಟ್ಟು “ಸಾರಾಂಶ ಕೊಡಿ ಸಾಕು” ಎಂಬ  ಧೋರಣೆ ಮಾಧ್ಯಮಗಳಲ್ಲಿ ಹೆಚ್ಚಾಗಿದೆ. ಬದಲಾವಣೆ ಒಂದು ನಿರತಂತರ ಪ್ರಕ್ರಿಯೆಯ ಪರಿಣಾಮವಾಗಿರುತ್ತದೆ ಎಂಬ ಸರಳ ಸತ್ಯವನ್ನು ಸಮಾವೇಶದ ಕುರಿತ 'ಸಮಾಚಾರ'ದ ವರದಿ ಮರೆತಿರುವುದು ನಿಚ್ಚಳವಾಗಿದೆ.

ಅದರಾಚೆಗೆ ವರದಿಯ ಮುಖ್ಯ ಆಶಯ ದಕ್ಷಿಣಾಯಣ ಸಮಾವೇಶದಲ್ಲಿ ಭಾಗವಹಿಸಿದ ಜನರ ವೈಯಕ್ತಿಕ ಪ್ರಯತ್ನಗಳು ಮಾತ್ರ ಭವಿಷ್ಯದ ಕುರಿತು ಭರವಸೆ ಮೂಡಿಸಬೇಕಿದೆ ಎಂಬುದನ್ನು ನಾನು ಅನುಮೂದಿಸುತ್ತೇನೆ. ದಕ್ಷಣಾಯಣ ಕೂಡಾ ಇದನ್ನೆ ಹೇಳುತ್ತಿದೆ.

ಈ ಕಾಲದಲ್ಲಿ ನಾವು ವ್ಯಕ್ತಿಗತವಾಗಿ ಮಾಡುವ ಪ್ರಯತ್ನಗಳು ಮಾತ್ರವೇ ಮುಖ್ಯ. ಆದರೆ ಅವು ವಿಘಟನೆ ಆಗದಂತೆ ವೈಯಕ್ತಿಕ ಅಭಿಪ್ರಾಯ ಆಗಿ ಕೊನೆಗೊಳ್ಳದಂತೆ ಸಮಾಜದ ಜನರ ಸಹಜ ಬದುಕಿನ ಮೇಲೆ ಹೇರಲ್ಪಡುತ್ತಿರುವ ಪ್ಯಾಸಿಸ್ಟ್ ಧೋರಣೆ ವಿರೋಧಿ ಶಕ್ತಿಯಾಗಿ ಬದಲಾಗಬೇಕಿದೆ. ಅದಕ್ಕೆ 'ದಕ್ಷಿಣಾಯಣ' ಒಂದು ವೇದಿಕೆ ಆಗಲಿದೆ ಅನ್ನಿಸುತ್ತದೆ.

ಲೇಖನದ ಮೂಲ ಸಾಲಿಗೆ ಮರಳುವುದಾದರೆ,  ಇಂದಿನ ನಮ್ಮ ಮುಖ್ಯ ಪ್ರಯತ್ನ ಪ್ರಜಾತಾಂತ್ರಿಕ ಆಶಯವುಳ್ಳ, ನೈಜ ಸ್ವಾತಂತ್ರವನ್ನು ಬಯಸುವ ಜನರ ನಡುವಿನ ಕಳಚಿರುವ ಕೊಂಡಿಗೆ ಕಾರಣ ಹುಡುಕಿ ಅದನ್ನು ಮತ್ತೆ ಜೊಡಿಸುವುದಾಗಿದೆ ಈ ನೆಲೆಯಲ್ಲಿ ದಕ್ಷಿಣಾಯಣ ಭರವಸೆ ಮೂಡಿಸುತ್ತಿದೆ...

ಲೇಖಕರು 'ದಕ್ಷಿಣಾಯಣ' ಸಂಘಟಕರಲ್ಲಿ ಒಬ್ಬರು. ಇಲ್ಲಿರುವುದು ಅವರು ವೈಯಕ್ತಿಕ ಅಭಿಪ್ರಾಯಗಳು.