‘ಮಾದರಿ ತಾಯಿ’: ಮೆಡಿಕಲ್ ಓದಿದ ಮಕ್ಕಳನ್ನು ‘ಹಳ್ಳಿ ಸೇವೆ’ಗೆ ಕರೆತಂದವರು ವಿನ್ನಿ ಸಿಸ್ಟರ್!
ಸಮಾಚಾರ

‘ಮಾದರಿ ತಾಯಿ’: ಮೆಡಿಕಲ್ ಓದಿದ ಮಕ್ಕಳನ್ನು ‘ಹಳ್ಳಿ ಸೇವೆ’ಗೆ ಕರೆತಂದವರು ವಿನ್ನಿ ಸಿಸ್ಟರ್!

ಮಕ್ಕಳು ಚೆನ್ನಾಗಿ ಓದಬೇಕು; ಡಿಗ್ರಿ ಸಂಪಾದಿಸಬೇಕು; ಫಾರಿನ್‌ಗೆ ಹೋಗಬೇಕು; ಕೈ ತುಂಬಾ ಹಣ ದುಡಿಯಬೇಕು... ಇವು ಎಲ್ಲಾ ಕಾಲಕ್ಕೂ ಬಹುತೇಕ ತಂದೆ ತಾಯಿಗಳು ಮಕ್ಕಳ ಎಡೆಗೆ ಕಟ್ಟಿಕೊಂಡಿರುವ ಕನಸುಗಳು.ಆದರೆ, ಕಷ್ಟದಲ್ಲಿಯೇ ಬದುಕು ಕಟ್ಟಿಕೊಂಡು, ಇಬ್ಬರು ಗಂಡು ಮಕ್ಕಳನ್ನು ಮೆಡಿಕಲ್ ಓದಿಸಿ, ಅವರ ಫಾರಿನ್‌ ಕನಸುಗಳನ್ನು ಬದಿಗಿರಿಸಿ, ಹುಟ್ಟಿದ ಊರಿನ ಜನರಿಗೆ ಸೇವೆ ಸಲ್ಲಿಸುವಂತೆ ಹೇಳುವ ತಾಯಂದಿರೂ ಇವತ್ತಿಗೂ ಇದ್ದಾರೆ ಎಂದರೆ ನೀವು ನಂಬುತ್ತೀರಾ? ನಂಬಬೇಕು. ಯಾಕೆಂದರೆ, ಬದುಕಿನ ಬಗ್ಗೆ ಪ್ರೀತಿಯನ್ನು ಹುಟ್ಟಿಸುವಂತಹ ನಿರ್ಧಾರವೊಂದನ್ನು ತೆಗೆದುಕೊಂಡ ತಾಯಿಯೊಬ್ಬರನ್ನು ನಿಮಗೆ ಇಲ್ಲಿ ಪರಿಚಯಿಸುತ್ತಿದ್ದೇವೆ; ಮೀಟ್ ಮಿಸ್ ವಿನ್ನಿ ಡಿಸೋಜಾ.

ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನ ಮಾಸ್ತಿಕಟ್ಟೆಗೆ ಬಂದರೆ ಕೆಪಿಸಿ ಕ್ವಾಟ್ರಸ್‌ ಒಳಗೆ ಪುಟ್ಟದೊಂದು ಮನೆ ಸಿಗುತ್ತದೆ. ಅಲ್ಲಿ ವಿನ್ನಿ ಸಿಸ್ಟರ್ ನಿಮಗೆ ಸಿಗುತ್ತಾರೆ. ದಿನ 24 ಗಂಟೆ ಅವರ ಮನೆ, ಸುತ್ತ ಮುತ್ತಲಿನ ಹಳ್ಳಿಗರ ಪಾಲಿಗೆ ತುರ್ತು ಚಿಕಿತ್ಸಾ ಘಟಕ, ಆಸ್ಪತ್ರೆ, ಆರೈಕೆ ಸಿಗುವ ತಾಣ... ಎಲ್ಲವೂ ಆಗಿ ಬದಲಾಗಿದೆ. ಕಳೆದ 31 ವರ್ಷಗಳಿಂದ ಕೆಪಿಸಿಯ ಆಸ್ಪತ್ರೆ ಮತ್ತು ಸ್ವಂತ ಮನೆಯಲ್ಲಿ ಜನರಿಗೆ ಆರೋಗ್ಯ ಸೇವೆಯನ್ನು ನೀಡುತ್ತಿರುವ ಇವರ ಹಾದಿಗೆ ಇತ್ತೀಚೆಗೆ ಇನ್ನಿಬ್ಬರು ಜತೆಯಾಗಿದ್ದಾರೆ. ಒಬ್ಬರು ಡಾ. ಸುದೀಪ್ ಡಿಮೆಲ್ಲೋ, ಮತ್ತೊಬ್ಬರು ಡಾ. ಪ್ರದೀಪ್ ಡಿಮೆಲ್ಲೊ; ಸನ್ಸ್ ಆಫ್ ವಿನ್ನಿ ಡಿಸೋಜಾ.

'ಲೇಡಿ ಕರ್ಜನ್' ವಿನ್ನಿ:

ಸುತ್ತಮುತ್ತಲಿನ ಜನರಿಂದ ವಿನ್ನಿ ಸಿಸ್ಟರ್ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಇವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಎಂಬ ಪುಟ್ಟ ಊರಿನಲ್ಲಿ. ಮನೆಯಲ್ಲಿ ಹೇಳಿಕೊಳ್ಳುವಂತಹ ಸ್ಥಿತಿವಂತರೇನಲ್ಲ. ಕಷ್ಟಪಟ್ಟು ಬಾಲ್ಯವನ್ನು ಕಳೆದವರು ಬೆಂಗಳೂರಿನ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಆರೋಗ್ಯ ಶುಶ್ರೂಷಕಿ ತರಬೇತಿ ಪಡೆದುಕೊಂಡರು. ಅವರು ಮದುವೆಯಾಗಿದ್ದು ಮಾಸ್ತಿಕಟ್ಟೆ ಸಮೀಪದ ಹುಲಿಕಲ್‌ ಮೂಲದ ಅಲ್ಫೋನ್ಸೊ ಡಿಮೆಲ್ಲೊ ಅವರ ಜತೆಗೆ. ಅವರಾಗ ಕರ್ನಾಟಕ ಪವರ್ ಕಾರ್ಪೊರೇಷನ್‌ (ಕೆಪಿಸಿ)ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದರು. ಸದ್ಯ ಅಲ್ಲಿನ ಕಾರ್ಪೊರೇಟ್ ಕಮ್ಯುನಿಕೇಶನ್ ವಿಭಾಗದ ಅಧ ಮದುವೆಯಾದ ನಂತರ ವಿನ್ನಿ ಕೂಡ ಕೆಪಿಸಿಯಲ್ಲಿ ಆರೋಗ್ಯ ಶುಶ್ರೂಷಕಿ ಕೆಲಸಕ್ಕೆ ಸೇರಿಕೊಂಡರು.

ಮೊದಲ ಎರಡು ವರ್ಷ ಕದ್ರದಲ್ಲಿದ್ದರು ನಂತರ ಮಾಸ್ತಿಕಟ್ಟೆಗೆ ಬಂದರು. ಇಲ್ಲಿನ ಕೆಪಿಸಿ ಆಸ್ಪತ್ರೆಯಲ್ಲಿ ಸೇವೆ ಮುಂದುವರಿಸಿದರು.ಮುಂದೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಹಿರಿಯ ಮಗ ಸುದೀಪ್‌ ಗುಲ್ಬರ್ಗಾದಲ್ಲಿ ಮೆಡಿಕಲ್ ಮುಗಿಸಿದರು. ಎರಡನೇ ಮಗ ಪ್ರದೀಪ್ ಶಿವಮೊಗ್ಗದಲ್ಲಿ ಡೆಂಟಲ್ ಕಲಿತರು. ಡಾ. ಸುದೀಪ್ ಶಿಕ್ಷಣ ಪೂರೈಸಿದ ನಂತರ ಕೆಲ ಕಾಲ ಕೇರಳದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದರು. ಈ ಸಮಯದಲ್ಲಿ ಅವರ ತಿಂಗಳ ವರಮಾನ 1 ಲಕ್ಷ ದಾಟಿತ್ತು. ಆದರೆ ತಾಯಿಯ ಆಸೆ ಬೇರಯದ್ದೇ ಆಗಿತ್ತು.

ಮರಳಿ ಮಣ್ಣಿಗೆ:

"ಅಮ್ಮನ ಆಸೆ ಬೇರೆಯದ್ದೇ ಆಗಿತ್ತು. ಅಣ್ಣ ಕೇರಳದಿಂದ ಬಂದು ಕೆಪಿಸಿಯಲ್ಲಿಯೇ ಕೆಲಸಕ್ಕೆ ಗುತ್ತಿಗೆ ಆಧಾರದ ಮೇಲೆ ಸೇರಿಕೊಂಡ. ಈಗ ಅಮ್ಮನ ಜತೆ ಅಲ್ಲಿಯೇ ಕೆಲಸ ಮಾಡುತ್ತಿದ್ದಾನೆ. ನಾನು ಡೆಂಟಲ್ ಮುಗಿಸಿದ ಮೇಲೆ ಮಾಸ್ತಿಕಟ್ಟೆ ಸಮೀಪದ ನಗರದ ಚಿಕ್ಕಪೇಟೆಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದೇನೆ. ಫಾರಿನ್‌ಗೆ ಹೋಗುವ ಅವಕಾಶ ನನಗೆ ಬಂದಿತ್ತು. ಆದರೆ ಅಮ್ಮ ಬಿಡಲಿಲ್ಲ,'' ಎಂದರು ಡಾ. ಪ್ರದೀಪ್. ಸದ್ಯ ಅವರು ನಗರ ಎಂಬ ಪುಟ್ಟ ಊರಿನಲ್ಲಿ ಡೆಂಟಲ್ ಕ್ಲಿನಿಕ್ ಇಟ್ಟಿಕೊಂಡಿದ್ದಾರೆ. ಶಾಲಾ ಮಕ್ಕಳಿಗೆ ದಂತ ಆರೋಗ್ಯದ ಕುರಿತು ಉಚಿತ ಶಿಬಿರಗಳನ್ನು ನಡೆಸುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಹಳ್ಳಿಗಳಲ್ಲಿ ದಂತ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕೆಲಸ ಇವರಿಂದ ನಡೆಯುತ್ತಿದೆ.

ಹಳ್ಳಿ ಮಕ್ಕಳಿಗೆ ಉಚಿತ ಆರೋಗ್ಯ ಶಿಬಿರಗಳು
ಹಳ್ಳಿ ಮಕ್ಕಳಿಗೆ ಉಚಿತ ಆರೋಗ್ಯ ಶಿಬಿರಗಳು

ಇವತ್ತು ಆರೋಗ್ಯ ಎಂಬುದು ಉದ್ಯಮ, ಪೈವ್ ಸ್ಟಾರ್ ಆಸ್ಪತ್ರೆಗಳಲ್ಲಿ ಸಿಲುಕಿ ನರಳುತ್ತಿರುವ ದೊಡ್ಡ ಜಾಲ. ಇನ್ನೊಂದಡೆ ಹಳ್ಳಿಗಳಿಗೆ ಮೆಡಿಕಲ್ ಓದಿದವರು ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ, ಮಾಸ್ತಿಕಟ್ಟೆಯಲ್ಲಿ ಖಾಲಿ ಉಳಿದಿದ್ದ ಕೆಪಿಸಿ ಆಸ್ಪತ್ರೆಗೆ ಡಾ. ಸುದೀಪ್ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿಕೊಂಡರು. ತಾಯಿ ವಿನ್ನಿ ಡಿಸೋಜಾ ಜತೆ ಸ್ಥಳೀಯ ಜನರ ಆರೋಗ್ಯ ಸೇವೆಗೆ ನಿಂತರು. ಇವತ್ತು ಡಾ. ಸುದೀಪ್ ಕುರಿತು ಸುತ್ತಮುತ್ತ ಒಳ್ಳೆಯ ಮಾತುಗಳಿವೆ. ಕೆಲವು ಸಂಘಟನೆಗಳು ಇವರನ್ನು ಗುರುತಿಸಿ ಸನ್ಮಾನವನ್ನೂ ಮಾಡಿವೆ.

"ಎಲ್ಲದಕ್ಕಿಂತ ಹೆಚ್ಚು ತೃಪ್ತಿ ತರುವುದು ಕೆಲಸ. ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿದ್ದ ಸ್ಥಳೀಯರೊಬ್ಬರ ಹೆರಿಗೆಯನ್ನು ಇಲ್ಲಿಯೇ ಮಾಡಿಸಿದ್ದೆ. ಅವರಿಗೆ ನಾರ್ಮಲ್ ಡೆಲವರಿ ಕಷ್ಟ ಎಂದು ವೈದ್ಯರು ಹೇಳಿದ್ದರು. ಹೆರಿಗೆ ನೋವು ಹೆಚ್ಚಾದ ನಂತರ ನನ್ನ ಬಳಿ ಬಂದರು. ದೇವರ ಮೇಲೆ ಭಾರ ಹಾಕಿ ಇಲ್ಲಿಯೇ ಹೆರಿಗೆ ಮಾಡಿಸಿದೆ. ಆರೋಗ್ಯವಾದ ಮಗು ಅದು. ಇವತ್ತು 8-9 ನೇ ಕ್ಲಾಸಿನಲ್ಲಿದ್ದಾನೆ. ಊರಿಗೆ ಬಂದಾಗ ಬಂದು ಮಾತನಾಡಿಸಿಕೊಂಡು ಹೋಗುತ್ತಾನೆ. ಇಂತಹ ಹಲವು ನೆಮ್ಮದಿ ತರುವಂತಹ ವಿಚಾರಗಳಿವೆ,'' ಎಂದು ತಮ್ಮ 31 ವರ್ಷಗಳ ಬದುಕಿನ ಪಯಣವನ್ನು 'ಸಮಾಚಾರ' ಜತೆ ಮೆಲುಕು ಹಾಕಿದರು ವಿನ್ನಿ ಸಿಸ್ಟರ್.

ತಮ್ಮ ಜಾಗದಲ್ಲಿ ಮಕ್ಕಳಿಬ್ಬರನ್ನೂ ಹಳ್ಳಿ ಜನರ ಸೇವೆಗೆ ಕರೆಸಿಕೊಳ್ಳಲು ಅವರು ತೀರ್ಮಾನದ ಹಿಂದಿರುವುದು 'ಆರೋಗ್ಯವನ್ನು ಸೇವೆ' ಎಂದು ಕಾಣುತ್ತಿರುವ ಅವರ ಗಟ್ಟಿ ಆಲೋಚನೆ. "ಓದಿ ಇವರಿಬ್ಬರು ಹೇರಳವಾಗಿ ಹಣ ಸಂಪಾದಿಸುವುದು ಬೇಡ. ನಮಗೆ ಊಟಕ್ಕೆ ಆಗುವಷ್ಟು ಹಣ ಇದೆ. ಅಷ್ಟರಲ್ಲಿಯೇ ನೆಮ್ಮದಿ ಇದೆ. ಇಷ್ಟು ವರ್ಷಗಳ ನಂತರ ನಿಂತು ನೋಡಿದರೆ ನನಗೆ ಒಂದು ತೃಪ್ತಿ ಇದೆ. ಜನ ನೀಡುತ್ತಿರುವ ಪ್ರೀತಿ ಇದೆ. ಅಷ್ಟು ಸಾಕು,'' ಎನ್ನುತ್ತಾರೆ ವಿನ್ನಿ."ಅಮ್ಮಂಗೆ ಹೋಲಿಸಿದರೆ ನಾವು ಏನೂ ಅಲ್ಲ. ಅವರಿಂದ ನಮಗೆ ಯಾವತ್ತೂ ಅದು ಬೇಕು, ಇದು ಬೇಕು ಎಂಬ ಬೇಡಿಕೆ ಬಂದಿಲ್ಲ. ಅವರಿಂದ ಕಲಿಯುವುದು ತುಂಬಾ ಇದೆ. ಆದರೆ ಅಮ್ಮ ಯಾವತ್ತೂ ಅಂತಹ ವಿಚಾರಗಳಿಗೆ ಪ್ರಾಮುಖ್ಯತೆ ನೀಡಿಲ್ಲ. ಅವರೇ ಎಲ್ಲವನ್ನೂ ಸ್ವಚ್ಚ ಮಾಡಿದ್ದಾರೆ,'' ಎಂದು ಪ್ರದೀಪ್ ಅಮ್ಮ ವಿನ್ನಿ ಡಿಸೋಜಾ ಅವರ ಕೆಲಸದ ವೈಖರಿಯನ್ನು ವಿವರಿಸುತ್ತಾರೆ.

ಹೀಗೆ, ಪಶ್ಚಿಮ ಘಟ್ಟ ಶ್ರೇಣಿಯ ದಟ್ಟ ಕಾಡುಗಳ ನಡುವೆ ವಾಸಿಸುವ ಜನರಿಗೆ ಆರೋಗ್ಯ ಸೇವೆಯನ್ನು ತಾಯಿ ಮತ್ತು ಮಕ್ಕಳಿಬ್ಬರು ನೀಡುತ್ತಿದ್ದಾರೆ. ಇದರ ಜತೆಗೆ. ಡಾ. ಸುದೀಪ್‌ ಸಂಗೀತದ ಕಡೆಗೂ ಆಕರ್ಷಣೆ ಹೊಂದಿದ್ದಾರೆ. ಇತ್ತೀಚೆಗಷ್ಟೆ ಅವರ ಮ್ಯೂಸಿಕ್ ಆಲ್ಬಂ ಒಂದು ಬಿಡುಗಡೆ ಹೊಂದಿದೆ. "ಇವು ಜನ ಸಂಪರ್ಕ ಕಷ್ಟವಾಗಿರುವ ಹಳ್ಳಿಗಳು. ಇಲ್ಲಿಂದ ಸಣ್ಣದೊಂದು ಚಿಕಿತ್ಸೆ ಬೇಕು ಎಂದರೂ 30 ಕಿ.ಮೀ ಹೋಗಬೇಕು. ಹೆರಿಗೆಯಂತಹ ವಿಚಾರಗಳು ಬಂದಾಗ, ಅಪಘಾತಗಳಾದ ಜನ ಕಷ್ಟ ಪಡುತ್ತಾರೆ.

ಹೀಗಾಗಿ ನಾವು ಇಲ್ಲಿ ಇದ್ದು ಸೇವೆ ಮಾಡಲು ತೀರ್ಮಾನ ತೆಗೆದುಕೊಂಡಿದ್ದು,'' ಎನ್ನುತ್ತಾರೆ.ಸ್ಥಳೀಯರ ಪ್ರಕಾರ, ಡಾ. ಪ್ರದೀಪ್ ಮತ್ತು ಡಾ. ಸುದೀಪ್ ಸ್ಥಳೀಯ ಮಟ್ಟದಲ್ಲಿ ಲಭ್ಯ ಇರುವ ಕಾರಣಗಳಿಗಾಗಿಯೇ ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವ ಕೆಲಸ ನಡೆಯುತ್ತಿದೆ. ಜನರಿಗೆ ಆರೋಗ್ಯದ ಕುರಿತು ಜಾಗೃತಿಯೂ ಮೂಡುತ್ತಿದೆ. ಅದಕ್ಕಿಂತ ಹೆಚ್ಚಾಗಿ ಆರೋಗ್ಯ ಎಂಬುದು ದುಬಾರಿಯಲ್ಲ ಎಂಬುದು ಜನರ ಅರಿವಿಗೆ ತಲುಪಿದೆ.ಅಸಹ್ಯ ಮೂಡುವಷ್ಟರ ಮಟ್ಟಿಗೆ ಕುಲಗೆಟ್ಟು ಹೋಗಿರುವ ಮೆಡಿಕಲ್ ಸೈನ್ಸ್ ಕ್ಷೇತ್ರದಲ್ಲಿ ವಿನ್ನಿ ಸಿಸ್ಟರ್ ಕುಟುಂಬ ಮಾದರಿಯಾಗಿ ನಿಲ್ಲುತ್ತಿದೆ. ಇಂತಹ ತಾಯಂದಿರ ಸಂಖ್ಯೆ ಸಾವಿರ ಆಗಲಿ ಎಂದಷ್ಟೆ ಈ ಸಮಯದ ಹಾರೈಕೆ.