samachara
www.samachara.com
'ಮನಸ್ಸಿದ್ದರೆ ಮಾರ್ಗ': 8ನೇ ಕ್ಲಾಸ್ ಫೇಲಾಗಿದ್ದ ಈ ಹ್ಯಾಕಿಂಗ್ ಪೋರ!
ಸಮಾಚಾರ

'ಮನಸ್ಸಿದ್ದರೆ ಮಾರ್ಗ': 8ನೇ ಕ್ಲಾಸ್ ಫೇಲಾಗಿದ್ದ ಈ ಹ್ಯಾಕಿಂಗ್ ಪೋರ!

'ಮನಸ್ಸಿದ್ದರೆ ಮಾರ್ಗ'

ಅಂತ ಕನ್ನಡದಲ್ಲಿ ಮಾತಿದೆ. ಇದಕ್ಕೆ ಸರಿ ಹೊಂದುವಂತಿದೆ 21 ವರ್ಷದ ತ್ರಿಶ್‌ನೀತ್ ಅರೋರ ಜೀವನದ ಕತೆ.

ಲೂಧಿಯಾನದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ತ್ರಿಶ್‌ನೀತ್ ಇವತ್ತು ಫಾರ್ಚೂನ್ 500 ಎಂದು ಕರೆಸಿಕೊಳ್ಳುವ ಬೃಹತ್ ಕಾರ್ಪೊರೇಟ್ ಸಂಸ್ಥೆಗಳ ಪೈಕಿ ಕನಿಷ್ಟ 50 ಕಂಪನಿಗಳಿಗೆ ಬೇಕಾಗಿರುವ ಯುವಕ. ಜತೆಗೆ, ಸಿಬಿಐ, ಪಂಜಾಬ್ ಮತ್ತು ಗುಜರಾತ್ ಪೊಲೀಸ್‌ನಂತಹ ತನಿಖಾ ಸಂಸ್ಥೆಗಳಿಗೂ ತ್ರಿಶ್‌ನೀತ್ 'ಬ್ಯೂ ಐಯ್ಡ್ ಬಾಯ್'. ಸದ್ಯ, ದುಬೈ ಸೇರಿದಂತೆ ವಿದೇಶಗಳಲ್ಲಿಯೂ ಕಚೇರಿಗಳನ್ನು ತೆರೆದಿರುವ 'ಟ್ಯಾಕ್ ಸೆಕ್ಯುರಿಟಿ' ಕಂಪನಿಯ ಒಡೆಯನೀತ. ಅಂದಹಾಗೆ, ವಾರ್ಷಿಕ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿರುವ ತ್ರಿಶ್‌ನೀತ್ ಒಂದು ಕಾಲಕ್ಕೆ ತನ್ನ 8ನೇ ಕ್ಲಾಸ್ ಪಾಸು ಮಾಡಿಕೊಳ್ಳಲಾಗದೆ ಎಲ್ಲರ ನಗೆಪಾಟಲಿಗೆ ಈಡಾಗಿದ್ದ ಎಂದರೆ ನೀವು ನಂಬಬೇಕು.

ತ್ರಿಶ್‌ನೀತ್ 8ನೇ ಕ್ಲಾಸ್ ಫೇಲಾಗುತ್ತಿದ್ದಂತೆ ಸ್ನೇಹಿತರು ನಕ್ಕಿದ್ದರು. ಪೋಷಕರು ಸಿಟ್ಟಾಗಿದ್ದರು. ಈ ಸಮಯದಲ್ಲಿ, ಇನ್ನು ಮುಂದೆ 'ಫಾರ್ಮಲ್' ಆಗಿರುವ ಶಿಕ್ಷಣ ಕಲಿಯಲು ಹೋಗುವುದಿಲ್ಲ ಎಂದು ಆತ ಘೋಷಿಸಿದ್ದ. ಇದು ಆತನ ಬಗ್ಗೆ ಅವಜ್ಞೆಗಳು ಇನ್ನಷ್ಟು ಬೆಳೆಯುವಂತೆ ಮಾಡಿದ್ದವು. ಆದರೆ ತ್ರಿಶ್‌ನೀತ್ ಹಾದಿ ಸ್ಪಷ್ಟವಿತ್ತು. ಆತ ಹ್ಯಾಕರ್ ಆಗಿರುವ ಕಡೆಗೆ ಸ್ಪಷ್ಟಚಿತ್ತದಿಂದ ಹೆಜ್ಜೆ ಮುಂದಿಟ್ಟಿದ್ದ.

ದೂರ ಶಿಕ್ಷಣದ ಮೂಲಕ ತನ್ನ ಶಿಕ್ಷಣವನ್ನು ಮುಂದುವರಿಸಿದ ತ್ರಿಶ್‌ನೀತ್ ಹ್ಯಾಕಿಂಗ್ ಜಗತ್ತಿಗೆ ಕಾಲಿಟ್ಟಿದ್ದ. ಚಿಕ್ಕ ವಯಸ್ಸಿನಿಂದಲೂ, ಕಂಪ್ಯೂಟರ್- ಕೋಡಿಂಗ್ ಅಂತ ಹೊರಟಿದ್ದ ಆತ ತನ್ನ ಬದುಕನ್ನು ಆ ಮೂಲಕವೇ ಕಟ್ಟಿಕೊಳ್ಳಲು ನಿರ್ಧರಿಸಿದ್ದ. ಮೊದಲು ಆತ ಹ್ಯಾಕಿಂಗ್ ಕುರಿತು ಮಾತನಾಡಿದರೆ ಜನ ನಗುತ್ತಿದ್ದರು. ಯಾರೂ ಆತ ಹೇಳುತ್ತಿರುವುದ್ದೇನು ಎಂಬುದನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಯಾವಾಗ ರಿಲಯನ್ಸ್, ಅಮೂಲ್ ಸೇರಿದಂತೆ ನಾನಾ ಕಂಪನಿಗಳ ಗೌಪ್ಯ ಮಾಹಿತಿಯನ್ನು ತ್ರಿಶ್‌ನೀತ್ ಕ್ಷಣಾರ್ಧದಲ್ಲಿ ಹೊರಹಾಕಲು ಶುರುಮಾಡಿದನೋ, ನಿಧಾನವಾಗಿ ಎಲ್ಲರೂ ಆತನನ್ನು ಗಂಭೀರವಾಗಿ ತೆಗೆದುಕೊಳ್ಳಲು ಶುರುಮಾಡಿದರು.

ಇವತ್ತು ಹೆಚ್ಚುಕಡಿಮೆ ಜಗತ್ತು ಡಿಜಿಟಲೀಕರಣದ ಕಡೆಗೆ ಸಾಗುತ್ತಿದೆ. ಪ್ರತಿಯೊಂದು 'ಅನ್‌ಲೈನ್' ಮೂಲಕವೇ ಸಾಕಾರಗೊಳ್ಳುತ್ತಿದೆ. ಇದು ತಂತ್ರಜ್ಞಾನ ಸೃಷ್ಟಿಸಿರುವ ಅವಕಾಶ ಕೂಡ. ಅವಕಾಶಗಳ ಜತೆಗೆ ಆಪತ್ತೂ ಕೂಡ ಕಟ್ಟಿಟ್ಟ ಬುತ್ತಿ ಇಲ್ಲಿ. ಸಾವಿರಾರು ಪುಟಗಳ ರಹಸ್ಯ ಮಾಹಿತಿಗಳು ಗೊತ್ತೇ ಆಗದಂತೆ 'ಸರ್ವರ್'ಗಳಿಂದ ಸೋರಿಕೆಯಾಗಿ ಹೋಗುತ್ತವೆ. ಸುಳಿವನ್ನೂ ನೀಡದೆ ಬ್ಯಾಂಕಿನಲ್ಲಿರುವ ಹಣವನ್ನು ಇನ್ನೊಬ್ಬರು ದೋಚುತ್ತಾರೆ. ಈ ಎಲ್ಲಾ ಸವಾಲುಗಳ ಮೂಲ ಇರುವುದು 'ಹ್ಯಾಕಿಂಗ್' ಎಂಬ ವಿಲಕ್ಷಣವಾದ ವಿದ್ಯೆಯಲ್ಲಿ; ಕೌಶಲ್ಯದಲ್ಲಿ.

ಸಾಮಾನ್ಯವಾಗಿ 'ಹ್ಯಾಕಿಂಗ್' ಮಾಡುವವರಲ್ಲಿ ಎರಡು ವಿಧಗಳಿರುತ್ತವೆ. ಒಂದು ಎಥಿಕಲ್ ಹ್ಯಾಕಿಂಗ್. ಇದನ್ನು ಮಾಡುವ ಮೂಲಕ ಅಂತರ್ಜಾಲ ಸೇವೆಗಳಲ್ಲಿ ಇರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು, ಅದನ್ನು ಇನ್ನಷ್ಟು ಬಲಿಷ್ಟವಾಗಿ ಕಟ್ಟುವ ಕೆಲಸ ನಡೆಯುತ್ತದೆ. ಇನ್ನೊಂದು 'ಅನ್ ಎಥಿಕಲ್ ಹ್ಯಾಕಿಂಗ್'. ಇವರು ತಮ್ಮ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ ಇನ್ನೊಬ್ಬರ ಮಾಹಿತಿಯನ್ನು ಕದಿಯುತ್ತಾರೆ ಮತ್ತು ಬಳಸಿಕೊಳ್ಳುತ್ತಾರೆ. ತ್ರಿಶ್‌ನೀತ್ ಎಥಿಕಲ್ ಹ್ಯಾಕಿಂಗ್ ಕಡೆಯಲ್ಲಿ ಬಂದು ನಿಂತಿದ್ದು, ಆತನಿಗೆ ನಾನಾ ಕಾರ್ಪೊರೇಟ್ ಮತ್ತು ತನಿಖಾ ಸಂಸ್ಥೆಗಳು ಮಣೆ ಹಾಕುವಂತೆ ಮಾಡಿತು.

ಹೀಗಾಗಿಯೇ, ಇವತ್ತು 8ನೇ ಕ್ಲಾಸ್ ಪಾಸು ಮಾಡಿಕೊಳ್ಳಲಾಗದ ಯುವಕ ಬೊಟ್ಟು ಮಾಡಿ ತೋರಿಸುವ ಅಂತರ್ಜಾಲ ಸೇವೆಯ ನ್ಯೂನ್ಯತೆಗಳನ್ನು ಕಂಪನಿಗಳು, ತನಿಖಾ ಸಂಸ್ಥೆಗಳು ಗಮನಕ್ಕೆ ತೆಗೆದುಕೊಳ್ಳುತ್ತಿವೆ. ಇದಕ್ಕಾಗಿ ಆತನಿಗೆ ದೊಡ್ಡ ಮಟ್ಟದಲ್ಲಿ ಸಂಭಾವನೆಯನ್ನೂ ಅವು ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಆತ ಶುರುಮಾಡಿದ 'ಟ್ಯಾಕ್ ಸೆಕ್ಯುರಿಟಿ' ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಲಾಭದಾಯಕ ಉದ್ಯಮವಾಗಿ ಬೆಳೆಯುತ್ತಿದೆ.

ಹ್ಯಾಕಿಂಗ್ ಪ್ರಪಂಚದಲ್ಲಿ ತನ್ನ ಅನುಭವಗಳನ್ನೇ ಇಟ್ಟುಕೊಂಡು 22ವರ್ಷದ ತ್ರಿಶ್‌ನೀತ್ ಈವರೆಗೆ ಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾನೆ. ಸಾಮಾನ್ಯವಾಗಿ ಆತನ ವಯಸ್ಸಿನಲ್ಲಿ ಶಿಕ್ಷಣ ಮುಗಿಸಿ ಕೆಲಸ ಅರಸುವವರ ನಡುವೆ ಈತ ಭಿನ್ನವಾಗಿ ನಿಂತಿದ್ದಾನೆ. ಮನಸ್ಸೊಂದಿದ್ದರೆ ಮಾರ್ಗಗಳು ಸೃಷ್ಟಿಯಾಗುತ್ತವೆ. ತಮಗೆ ಖುಷಿಕೊಡುವುದನ್ನು ಮಾಡುತ್ತಾ ಹೋದರೆ, ಮುಂದೊಂದು ದಿನ ಅದು ನಮ್ಮ ಕೈ ಹಿಡಿಯುತ್ತದೆ. ಉದಾಹರಣೆಗೆ ಮತ್ತೊಂದು ಸೇರ್ಪಡೆ ಈ ಪೋರ.