samachara
www.samachara.com
ಸೆಲ್ಫಿಗಾಗಿ ಪರದಾಡಿದ್ದ ಯುವಕ; ಅರ್ಧ ಕೋಟಿ ರೂಪಾಯಿ ಮತ್ತು ಸೈಕೋ ಅನಾಲಿಸಿಸ್!
ಸಮಾಚಾರ

ಸೆಲ್ಫಿಗಾಗಿ ಪರದಾಡಿದ್ದ ಯುವಕ; ಅರ್ಧ ಕೋಟಿ ರೂಪಾಯಿ ಮತ್ತು ಸೈಕೋ ಅನಾಲಿಸಿಸ್!

"Reality TV is set up to make people entertaining. A good person with values and principles is not good television"

-Ronda Rousey

ಅಂದುಕೊಂಡಿದ್ದಕ್ಕಿಂತ

 14 ದಿನಗಳ ಕಾಲ ಮುಂದಕ್ಕೆ ಹೋದ 'ಬಿಗ್ ಬಾಸ್ ಕನ್ನಡ' ಟಿವಿ ರಿಯಾಲಿಟಿ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಚರ್ಚೆಯನ್ನು ಹುಟ್ಟುಹಾಕಿದೆ. ಅಂತಿಮ ಗೆಲುವು ನಿರೀಕ್ಷಿತವೇ ಆದರೂ, ಅದರ ಕ್ಲೈಮ್ಯಾಕ್ಸ್ ತೆಗೆದುಕೊಂಡ ತಿರುವು ಇದಕ್ಕೆ ಕಾರಣ.

ಆರಂಭದಿಂದಲೂ 'ಬಿಗ್ ಬಾಸ್ ಕನ್ನಡ' ಎಂಬ ರಿಯಾಲಿಟಿ ಶೋ ಸಮ ಪ್ರಮಾಣದಲ್ಲಿ ಗಣನೆಗೂ, ಅವಜ್ಞೆಗೂ ಪಾತ್ರವಾದ ಕಾರ್ಯಕ್ರಮ. ಕಳೆದ ನಾಲ್ಕು ವರ್ಷಗಳ ಅಂತರದಲ್ಲಿ ಪ್ರತಿ ಬಾರಿಯೂ ಬಿಗ್ ಬಾಸ್ ಸೀಸನ್ ಆರಂಭವಾಗುತ್ತಿದ್ದಂತೆ ಸುದ್ದಿ ಮಾಧ್ಯಮಗಳಲ್ಲಿ ಈ ಕಾರ್ಯಕ್ರಮ ಜಾಗ ಪಡೆದುಕೊಳ್ಳುತ್ತ ಬಂದಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಯಾರ್ಯಾರು ಹೋಗುತ್ತಾರೆ ಎಂಬಲ್ಲಿಂದ ಆರಂಭವಾಗಿ, ಯಾರು ವಿಜೇತರಾದರು ಎಂಬಲ್ಲಿವರೆಗೆ ವರದಿಗಳ ಸರಮಾಲೆ ಜನರೆದುರು ಕಟ್ಟಲ್ಪಡುತ್ತದೆ.

ಕಳೆದ ಬಾರಿ, ಅದಕ್ಕೂ ಹಿಂದಿನ ಬಾರಿ, ಮತ್ತು ಅದರ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಹೇಳಿಕೊಳ್ಳುವಂತಹ ಆರಂಭವನ್ನೇನು ಪಡೆದುಕೊಂಡಿರಲಿಲ್ಲ. 'ಕಲರ್ಸ್ ಕನ್ನಡ' ಎಂಬ ದೇಶದ ಶ್ರೀಮಂತ ಉದ್ಯಮಿಯ ಒಡೆತನದ ವಾಹಿನಿಯ ಮಾರುಕಟ್ಟೆಯ ತಂತ್ರಗಳಾಚೆಗೆ 'ಬಿಗ್ ಬಾಸ್' ಸದ್ದು ಮಾಡುವ ಸಾಧ್ಯತೆಗಳು ಕಡಿಮೆ ಇದ್ದವು. ಆದರೆ, ಮೊದಲ ದಿನದಿಂದಲೂ ಬಿಗ್ ಬಾಸ್ ಕಾರ್ಯಕ್ರಮವನ್ನು ಜನ ನೋಡುವಂತೆ ಮಾಡಿದ್ದು ಚಾಮರಾಜನಗರದ ಜಿಲ್ಲೆಯಿಂದ ಬಂದು ಸಿನೆಮಾ ರಂಗದಲ್ಲಿ ಬದುಕನ್ನು ಅರಸುತ್ತಿದ್ದ ಪ್ರಥಮ್. ಒಂದು ಕಾಲದಲ್ಲಿ ಗಾಂಧಿ ನಗರದ ಸೆಲೆಬ್ರೆಟಿಗಳ ಜತೆ ಸೆಲ್ಫಿಗಾಗಿ ಆತ ಪರದಾಡುತ್ತಿದ್ದ. ತನ್ನನ್ನೂ ಜನ ಗುರುತಿಸಬೇಕು ಎಂದು ಹವಣಿಸುತ್ತಿದ್ದ. ಇವತ್ತು ಪ್ರಥಮ್ ಯಾರು ಎಂದು ಒಂದು ವರ್ಗದ ಜನರಿಗೆ ಸ್ಪಷ್ಟವಾಗಿ ಅರ್ಥವಾಗಿದೆ, ಅದರಲ್ಲಿ ದೊಡ್ಡ ಸಮುದಾಯ ಆತನನ್ನು ಬೆಂಬಲಿಸಿದೆ; ಪರೋಕ್ಷವಾಗಿ ಅವರೇ 'ಬಿಗ್ ಬಾಸ್' ಕಾರ್ಯಕ್ರಮವನ್ನು ಯಶಸ್ಸಿನ ದಡ ಮುಟ್ಟಿಸಿದ್ದಾರೆ.

ಹಲವು ವಿರೋಧಾಭಾಸಗಳ ಆಚೆಗೂ ಈ ಬಾರಿಯ 'ಬಿಗ್ ಬಾಸ್ ಕನ್ನಡ'ದ ವಿನ್ನರ್ ಆಗಿ ಹೊರಹೊಮ್ಮಿರುವ ಪ್ರಥಮ್ ಯಾಕೆ ಜನರ ಮೆಚ್ಚುಗೆಗೆ, ಅವರ ಬೆಂಬಲಕ್ಕೆ ಪಾತ್ರನಾದ ಎಂಬುದು ಒಂದು ಕುತೂಲಕಾರಿಯಾದ 'ಸಮಾಜ ವಿಜ್ಞಾನ'ದ ಅಧ್ಯಯನ ವಸ್ತು. ಮನಶಾಸ್ತ್ರದ ನೆಲೆಯಲ್ಲಿ ಮರುಪರಿಶೀಲನೆಗೆ ಒಳಗಾಗಬೇಕಾದ ವಿದ್ಯಮಾನ.

ವಿರೋಧಾಭಾಸಗಳು:

'ಪ್ರಥಮ್ ಗೆಲುವು ಸಮಾಜ ಸಾಗುತ್ತಿರುವ ಹಾದಿಗೆ ಹಿಡಿದ ಕನ್ನಡಿ' ಎನ್ನುತ್ತಾರೆ ಕೆಲವರು. "ಆತನ ವಿಲಕ್ಷಣ ನಡವಳಿಕೆಗಳೇ ಆತನ ಮನೋರಂಜನೆ ಪರಿಕರಗಳು. ಅಂತಹ ಕೆಟ್ಟ ಅಭಿರುಚಿಯ ಮನೋರಂಜನೆಯನ್ನು ದೊಡ್ಡ ಸಂಖ್ಯೆಯಲ್ಲಿ ಜನ ಇಷ್ಟಪಟ್ಟಿದ್ದಾರೆ ಎಂದರೆ, ಸಾಮಾಜಿಕ ಮನಸ್ಥಿತಿ ಎತ್ತ ಸಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು,'' ಎನ್ನುತ್ತಾರೆ ಬೆಂಗಳೂರಿನ ಅಕ್ಷತಾ. ಅವರು ಒಂದು ದಿನವೂ 'ಬಿಗ್ ಬಾಸ್' ಕಾರ್ಯಕ್ರಮವನ್ನು ನೋಡಿಲ್ಲ ಮತ್ತು 10 ವರ್ಷದ ಮಗನನ್ನೂ ನೋಡಲು ಬಿಟ್ಟಿಲ್ಲ ಎಂದು ಹೇಳುತ್ತಾರೆ.

"ಮನೋರಂಜನೆ ಬೇಕು. ಹಾಗಂತ ಅದಕ್ಕೊಂದು ಮಾನದಂಡ ಇರುತ್ತೆ ಅಲ್ವಾ?. ಇನ್ನೊಬ್ಬರ ಮೇಲೆ ಏರಿ ಹೋಗುವುದು, ಬೈಯುವುದು, ಕೆಟ್ಟ ಭಾ‍ಷೆಗಳ ಮೂಲಕ ಆಕ್ರೋಶಗಳನ್ನು ಹೊರಹಾಕುವುದು ಮನೋರಂಜನೆ ಹೇಗಾಗುತ್ತದೆ?'' ಎಂದವರು ಪ್ರಶ್ನಿಸುತ್ತಾರೆ.

ಇದಕ್ಕೆ ಪೂರಕ ಎಂಬಂತೆ ಈ ಬಾರಿಯ 'ಬಿಗ್ ಬಾಸ್'ನಲ್ಲಿ ಸ್ಪರ್ಧಿಗಳಾಗಿದ್ದ ಬಹುತೇಕರದ್ದೂ ಇಂತಹದ್ದೇ ತಕರಾರುಗಳಿದ್ದವು. ವಿಶೇಷವಾಗಿ, ನಟನೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಾಳವಿಕಾ, "ಪ್ರಥಮ್ ಗೆಲುವು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೊಸ ಮಾನದಂಡವನ್ನು ಸೃಷ್ಟಿಸುವ ಅಪಾಯವಿದೆ,'' ಎಂದು ಆತಂಕವನ್ನು ವ್ಯಕ್ತಪಡಿಸಿದ್ದರು. ಅವರೂ ಕೂಡ ಒಬ್ಬರು ಸ್ಪರ್ಧಿಯಾದ ಹಿನ್ನೆಲೆಯಲ್ಲಿ ಇಂತಹ ಹೇಳಿಕೆಗಳು ಮಹತ್ವ ಪಡೆದುಕೊಳ್ಳದಿರಬಹುದು. ಆದರೆ, ಪ್ರಥಮ್ ನಡವಳಿಕೆ 'ಹೊಸ ಮಾನದಂಡ'ವನ್ನು ಸೃಷ್ಟಿಸುವ ಸಾಧ್ಯತೆಗಳನ್ನು ಅವರು ಗುರುತಿಸಿರುವುದನ್ನು ಗಮನಿಸಬೇಕಿದೆ.

ಜನರ ಬೆಂಬಲ ಯಾಕೆ?:

ಸೆಲ್ಫಿಗಾಗಿ ಪರದಾಡಿದ್ದ ಯುವಕ; ಅರ್ಧ ಕೋಟಿ ರೂಪಾಯಿ ಮತ್ತು ಸೈಕೋ ಅನಾಲಿಸಿಸ್!

ಇಷ್ಟೆಲ್ಲಾ ಇದ್ದರೂ ಜನ ಯಾಕೆ ಪ್ರಥಮ್ ಬೆನ್ನಿಗೆ ನಿಂತರು? ಅವರೇಕೆ ತಮ್ಮ ಜೇಬಿನ ಹಣ ಖರ್ಚು ಮಾಡಿಕೊಂಡು ಆತನಿಗಾಗಿ ಎಸ್ಎಂಎಸ್ ಕಳುಹಿಸಿದರು? ಅದು ಅಧ್ಯಯನಕ್ಕೆ ಒಳಗಾಗಬೇಕಾದ ಪ್ರಶ್ನೆಗಳು.

ಚೆನ್ನೈ ಮೂಲದ ಮನಶಾಸ್ತ್ರಜ್ಞ ಡಾ. ಕರುಣಾಕರನ್ ಇದಕ್ಕೆ ಬೇರೆಯದೇ ಒಳನೋಟಗಳನ್ನು ನೀಡುತ್ತಾರೆ. "ನಾನು ಬಿಗ್ ಬಾಸ್ ಕನ್ನಡ ಕಾರ್ಯಕ್ರಮವನ್ನು ನೋಡಿಲ್ಲ. ಆದರೆ ನನ್ನ ಕ್ಷೇತ್ರದ ಕನ್ನಡದ ಗೆಳೆಯರು ಕಳೆದ ಹಲವು ತಿಂಗಳುಗಳಿಂದ ಪ್ರಥಮ್ ಎಂಬ ಯುವಕನ ಬಗ್ಗೆ ಮಾತನಾಡುತ್ತಿದ್ದರು. ಹೀಗಾಗಿ ಆತನ ಒಂದಷ್ಟು ವಿಡಿಯೋಗಳನ್ನು ನೋಡಿದೆ,'' ಎಂದವರು ಪ್ರಥಮ್ ಬಗ್ಗೆ ತಮ್ಮ ಅನಿಸಿಕೆಗಳಿಗೆ ಪೀಠಿಕೆ ಹಾಕುತ್ತಾರೆ.

"ಪ್ರಥಮ್ ಇನ್ನೂ ಯುವಕ. ಮದುವೆ ಆಗಿಲ್ಲ ಅನ್ನಿಸುತ್ತದೆ. ಜತೆಗೆ ಯಾವ ಸೆಲೆಬ್ರಿಟಿ ಹಿನ್ನೆಯೂ ಇಲ್ಲದೆ ಬಿಗ್ ಬಾಸ್ ಮನೆಗೆ ಬಂದವನು ಎನ್ನುತ್ತಾರೆ. ಹೀಗಾಗಿ ಅವನು- ಅವನಿಗೆ ಬೇಕೋ ಬೇಡವೋ- ಈ ಸಮಾಜದಲ್ಲಿ ಅಪಾರ ಕನಸುಗಳನ್ನು ಹೊಂದಿರುವ ಸಾಮಾನ್ಯ ಯುವ ಸಮುದಾಯವನ್ನು ಪ್ರತಿನಿಧಿಸಿದ್ದಾನೆ. ಜನರಿಗೆ ಸೆಲೆಬ್ರಿಟಿಗಳ ಬದುಕಿನ ಬಗ್ಗೆ ಕುತೂಹಲ ಇರುತ್ತದೆ ನಿಜ. ಅದೇ ವೇಳೆ, ಅವರಿಗೆ ಸೆಲೆಬ್ರಿಟಿಗಳ ಬಗ್ಗೆ ತಣ್ಣನೆಯ ಆಕ್ರೋಶಗಳೂ ಇರುತ್ತವೆ ಎಂಬುದನ್ನು ಗಮನಿಸಬೇಕು. ಅಂತಹ ಸಮಾಜದಲ್ಲಿ ಹೆಸರು ಮಾಡಿದವರಿಂದ ಅವಜ್ಞೆಗೆ ಪ್ರಥಮ್ ಗುರಿಯಾಗುತ್ತಿದ್ದಂತೆ, ಜನರಿಗೆ ಆತನಲ್ಲಿ ತಾವು ನಿತ್ಯ ಬದುಕಿನಲ್ಲಿ ಒಳಗಾಗುವ ಅವಮಾನಗಳು ಕಾಣಿಸಿರಲಿಕ್ಕೆ ಸಾಕು,'' ಎನ್ನುತ್ತಾರೆ ಡಾ. ಕರುಣಾಕರನ್.

ಇವರು ಗಮನಿಸಿದ ಹಾಗೆಯೇ, "ಮನೆಯ ಉಳಿದ ಸ್ಪರ್ಧಿಗಳು ಪ್ರಥಮ್ನನ್ನು ದೂರ ಮಾಡಿದ್ದೇ ಅವನ ಗೆಲುವಿಗೆ ಕಾರಣವಾಯಿತು. ಅವನ ನಡವಳಿಕೆ ಕೆಲವೊಮ್ಮೆ ಹುಚ್ಚಾಟ ಅಂತ ಅನ್ನಿಸಿತಾದರೂ, ತಪ್ಪೇ ಮಾಡದಿದ್ದ ಸಮಯದಲ್ಲಿ ಆರೋಪಗಳು ಬಂದಾಗ ಅವನನ್ನು ಅವನು ಸಮರ್ಥಿಸಿಕೊಂಡ. ಅದರಲ್ಲಿ ತಪ್ಪೇನು ಇಲ್ಲ,'' ಎನ್ನುತ್ತಾರೆ ನ್ಯೂಸ್ ಚಾನಲ್ ಒಂದರ ಯುವ ಪತ್ರಕರ್ತ ಸೀನಪ್ಪ. ಅವರು ಕಳೆದ ಮೂರು ತಿಂಗಳ ಅಂತರದಲ್ಲಿ ಪ್ರತಿನಿತ್ಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ಜತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಥಮ್ ಬೆಂಬಲಿಸಿ ಅಭಿಪ್ರಾಯಗಳನ್ನು ಹೊಂಚಿಕೊಂಡಿದ್ದಾರೆ.

"ಮನೋರಂಜನೆ ಬರೀ ಮನೋರಂಜನೆ ಎಂದು ಮೇಲ್ನೋಟಕ್ಕೆ ಬಿಂಬಿತವಾಗಿದೆ. ಆದರೆ ಮನೋರಂಜನೆ ಜತೆಗೆ ಜನ ಸಾಮಾಜಿಕ ಪರಿಸ್ಥಿತಿಯನ್ನೂ ತಾಳೆ ಮಾಡಿ ನೋಡುತ್ತಾರೆ. ಪ್ರಥಮ್ ವಿಚಾರದಲ್ಲಿ ಇದನ್ನು ಗಮನಿಸಬಹುದು. ಆತ ಆಟದ ವಿಚಾರದಲ್ಲಿ ಮನೋರಂಜನೆ ನೀಡಿದ್ದು ಮಾತ್ರವೇ ಆತನ ಬೆಂಬಲಕ್ಕೆ ಕಾರಣವಾಗಿದ್ದಲ್ಲ. ಅದರ ಜತೆಗೆ, ಆತನ ಸಾಮಾಜಿಕ ಹಿನ್ನೆಲೆ, ದೊಡ್ಡವರ ನಡುವೆ ಬಡಿದಾಡುವ ಗುಣ, ಅಮಾಯಕತೆ, ದಡ್ಡತನ, ಬುದ್ಧಿವಂತಿಕೆ ಹೀಗೆ ಆತನ ಎಲ್ಲಾ ಗುಣಗಳನ್ನೂ ಅಳೆದ ನಂತರವೇ ಜನ ಬೆಂಬಲಕ್ಕೆ ಬಂದಿರಬಹುದು,'' ಎನ್ನುತ್ತಾರೆ ಕರುಣಾಕರನ್.

ಕ್ಲೈಮ್ಯಾಕ್ಸ್ ಟ್ವಿಸ್ಟ್:

ಇಷ್ಟೆ ಆಗಿದ್ದರೆ ಪ್ರಥಮ್ ಎಂಬ ಪಾತ್ರ ಬಿಗ್ ಬಾಸ್ ಮನೆಗೆ ಸೀಮಿತವಾಗಿ, ಅದರ ಗೆಲುವಿನೊಂದಿಗೆ ಮರೆಯಾಗಿ ಬಿಡುತ್ತಿತ್ತು. ಆದರೆ, ತನ್ನ ಗೆಲುವನ್ನು ಸಂಭ್ರಮಿಸಿದ ಪ್ರಥಮ್ ಹಾಗೂ ಆತನ ತಂದೆ ಕೊನೆಯ ಕ್ಷಣದಲ್ಲಿ ಬಹುಮಾನದ ಅಷ್ಟೂ ಮೊತ್ತವನ್ನು ಸಾಮಾಜಿಕ ಕೆಲಸಗಳಿಗೆ ವಿನಿಯೋಗಿಸುವುದಾಗಿ ಪ್ರಕಟಿಸಿದ್ದು ಅಚ್ಚರಿಗೆ ಕಾರಣವಾಗಿದೆ.

'ಇದು ಗೆಲುವಿನ ಉದ್ವೇಗದಲ್ಲಿ ಹೊರಬಂದ ತೀರ್ಮಾನ' ಎಂದು ಒಂದಷ್ಟು ಜನರಿಗೆ ಅನ್ನಿಸಿದೆ. ಅದೇ ವೇಳೆ, 'ಇಷ್ಟು ದೊಡ್ಡ ಮೊತ್ತವನ್ನು ಏಕಾಏಕಿ ನಮ್ಮದ್ದಲ್ಲ ಎಂದು ಹೇಳುವುದು ಸುಲಭವೂ ಅಲ್ಲ' ಎಂಬ ಅಭಿಪ್ರಾಯಗಳಿವೆ. ಇದರಲ್ಲಿ ಯಾವುದು ಸತ್ಯ ಎಂಬುದಕ್ಕಿಂತ, ಹಾಗೊಂದು ನಿರ್ಧಾರ ತೆಗೆದುಕೊಳ್ಳುವ ಮೂಲಕ ಮನೋರಂಜನಾ ಕಾರ್ಯಕ್ರಮದ ಸ್ಪರ್ಧಿಗಳಿಗೆ ಕೇವಲ ಮನೋರಂಜನೆ ಮಾತ್ರವೇ ಆದ್ಯತೆಯಲ್ಲ, ಅದರ ಜತೆಗೆ ಸಾಮಾಜಿಕ ಬದ್ಧತೆಯೂ ಇರಬೇಕು ಎಂಬ ಮಾನದಂಡವನ್ನು ಅವರು ನಿರ್ಮಿಸಿದ್ದಾರೆ.

ಟಿವಿಗಳ ರಿಯಾಲಿಟಿ ಶೋಗಳು ಒಂದು ರೀತಿಯ ಭ್ರಮಾತ್ಮಕ ಭಾವನೆಗಳನ್ನು ಜನರಲ್ಲಿ ಹುಟ್ಟು ಹಾಕುತ್ತವೆ. ಅವುಗಳಿಗೆ ಗಟ್ಟಿಯಾದ ನೆಲೆ ಇಲ್ಲವಾದ ಹಿನ್ನೆಲೆಯಲ್ಲಿ ಒಂದಷ್ಟು ಕಾಲದ ನಂತರ ಜನರ ಮನಸ್ಸಿನಿಂದ ಮರೆಯಾಗುತ್ತವೆ. ಆದರೆ, ಈ ಬಾರಿಯ ಬಿಗ್ ಬಾಸ್ ಅಂತಿಮ ಘಟ್ಟದಲ್ಲಿ ನಿಂತ ಈ ಇಬ್ಬರು ಸ್ಪರ್ಧಿಗಳು ಕಾರ್ಯಕ್ರಮದ ಆಚೆಗೂ ಸಮಾಜದಲ್ಲಿ ಸುದ್ದಿಯ ಕೇಂದ್ರವಾಗುವ ಸಾಧ್ಯತೆಗಳನ್ನು ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರು ತೆಗೆದುಕೊಳ್ಳುವ ವೈಯಕ್ತಿಕ ತೀರ್ಮಾನಗಳು 'ನಿಜಕ್ಕೂ ಅವರೇನು?' ಎಂಬುದನ್ನು ತೀರ್ಮಾನಿಸಲಿವೆ.