ಕೆಂಪು, ಬಿಳಿ ನಂತರ ಇದೀಗ ಜಗತ್ತಿನ ಮೊದಲ ನೀಲಿ ವೈನ್ ಮಾರುಕಟ್ಟೆಗೆ ಬಂತು!
ಸಮಾಚಾರ

ಕೆಂಪು, ಬಿಳಿ ನಂತರ ಇದೀಗ ಜಗತ್ತಿನ ಮೊದಲ ನೀಲಿ ವೈನ್ ಮಾರುಕಟ್ಟೆಗೆ ಬಂತು!

ವೈನ್

ಅಂದಾಕ್ಷಣ ಕಣ್ಮುಂದೆ ಬರುವುದು ಕೆಂಪು ಅಥವಾ ಬಿಳಿ ಬಣ್ಣದ ನಶೆ ಬೆರೆತ ದ್ರವ ರೂಪ. ಆದರೆ, ಸ್ಪಾನಿಶ್ ಕಂಪನಿಯೊಂದು ವೈನ್ ತಯಾರಿಕೆಯಲ್ಲಿ ಹೊಸತನವನ್ನು ಪರಿಚಯಿಸಿದೆ. ಇನ್ನು ಮುಂದೆ, ನೀಲಿ ಬಣ್ಣದಲ್ಲಿಯೂ ವೈನ್ ಲಭ್ಯವಾಗಲಿದೆ. ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ನೀಲಿ ಬಣ್ಣದ ವೈನ್ ಚಳಿಗಾಲದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಗೀಕ್ ವೈನ್ ಎಂದು ಕರೆಯುತ್ತಿರುವ ಈ ನೀಲಿ ಬಣ್ಣದ ವೈನ್ ಹುಟ್ಟಿನ ಹಿಂದೆ ಒಂದು ಕುತೂಹಲಕಾರಿ ಕತೆ ಇದೆ. "ಗೀಕ್ (ನೀಲಿ ವೈನ್ ಬ್ರಾಂಡ್) ಹುಟ್ಟಿದ್ದೇ ಒಂದು ತಮಾಷೆಯಾಗಿ. ವೈನ್ ಮಾರುಕಟ್ಟೆಯಲ್ಲಿ ಹೊಸತನವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಹೀಗೊಂದು ಆಲೋಚನೆಯನ್ನು ಕಾರ್ಯರೂಪಕ್ಕೆ ತಂದೆವು,'' ಎನ್ನುತ್ತಾರೆ ನೀಲಿ ವೈನ್ ಕಂಪನಿಯ ಸಂಚಾಲಕ ಆರಿಟ್ಜ್ ಲೋಪೆಝ್. ಇದಕ್ಕಾಗಿ ಅವರು ಬಾಸ್ಕ್ ಯೂನಿವರ್ಸಿಟಿಯ ರಾಸಾಯನ ಶಾಸ್ತ್ರದ ಪರಿಣಿತರನ್ನು ಸಂಪರ್ಕಿಸಿ, ನೀಲಿ ಬಣ್ಣದ ವೈನ್ ತಯಾರಿಕೆಯನ್ನು ಶುರು ಮಾಡಲಾಯಿತು ಎಂದು ಮಾಹಿತಿ ನೀಡುತ್ತಾರೆ.

ಗೀಕ್ ವೈನ್ ತಯಾರಿಕೆ ವೇಳೆ ಕೆಂಪು ಮತ್ತು ಬಿಳಿ ಬಣ್ಣದ ದ್ರಾಕ್ಷಾರಸವನ್ನು ನೀಲಿ ಬಣ್ಣಕ್ಕೆ ತಿರುಗಿಸಲು ಜೈವಿಕ ರಾಸಾಯನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಾಮಾನ್ಯವಾಗಿ ಆಹಾರದ ಬಣ್ಣಗಳನ್ನು ನಿರ್ಧರಿಸಲು ಇವುಗಳನ್ನು ಹಿಂದೆ ಬಳಸಲಾಗುತ್ತಿತ್ತು ಎಂದು ಕಂಪನಿ ಮಾಹಿತಿ ನೀಡುತ್ತದೆ.

"ಮೊದಲು ಜನ ನಾವು ನೀಲಿ ಬಣ್ಣದ ವೈನ್ ಮಾರಾಟ ಮಾಡಿತ್ತೀವಿ ಅಂದಾಗ ನಂಬಲಿಲ್ಲ. ಒಮ್ಮೆ ಅವರೇ ವೈನ್ ಸೇವಿಸಿದ ನಂತರ ಇಷ್ಟಪಟ್ಟರು,'' ಎಂದು ಸ್ಪಾನಿಶ್ ರೆಸ್ಟೋರೆಂಟ್ ಮಾಲೀಕ ಎನ್ರಿಕ್ಕಿ ತಿಳಿಸುತ್ತಾರೆ.

ಹಾಗಂತ ಇದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಅಂತಲ್ಲ. ನೀಲಿ ವೈನ್, ವೈನ್ ಸಂಸ್ಕೃತಿಗೆ ವಿರುದ್ಧವಾಗಿದ್ದು ಎಂಬ ಮಾತುಗಳೀ ಕೇಳಿ ಬರುತ್ತಿವೆ. ಸಾಮಾನ್ಯವಾಗಿ ವೈನ್ ಕೆಂಪು ಬಣ್ಣದಲ್ಲಿ ಇರುತ್ತದೆ ಎಂಬ ನಂಬಿಕೆ ಗಾಢವಾಗಿದೆ. ಸ್ಪಾರ್ಕ್ಲಿಂಗ್ ವೈನ್ ಹೆಸರಿನಲ್ಲಿ ನೀರಿನ ಬಣ್ಣದ ವೈನ್ ಕೂಡ ನಂತರ ದಿನಗಳಲ್ಲಿ ಮಾರುಕಟ್ಟೆಗೆ ಬಂದಿತ್ತು.

ಈ ಹಿಂದೆ ಉತ್ತರ ಕೋರಿಯಾ ಹ್ಯಾಂಗೋವರ್ ಇಲ್ಲದ ಮದ್ಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಮದ್ಯಪಾನದ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದಿಲ್ಲೊಂದು ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಇದೀಗ ನೀಲಿ ವೈನ್ ಸದ್ದು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿಯೂ ನೀಲಿ ವೈನ್ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆ.