samachara
www.samachara.com
ವೈದ್ಯ ಲೋಕದ ವಿಸ್ಮಯ: ಎರಡು ಬಾರಿ ಭೂಮಿಗೆ ಬಂದ 'ಮೊದಲನೇ ಕಂದ'!
ಸಮಾಚಾರ

ವೈದ್ಯ ಲೋಕದ ವಿಸ್ಮಯ: ಎರಡು ಬಾರಿ ಭೂಮಿಗೆ ಬಂದ 'ಮೊದಲನೇ ಕಂದ'!

ಒಮ್ಮೆ ಹುಟ್ಟಿ ಮತ್ತೆ ಭ್ರೂಣ ಸೇರಿ, ಮತ್ತೊಮ್ಮೆ ಹುಟ್ಟಿದ ಮಗುವಿನ ಕತೆ ಇದು.. ಕನ್ಪೂಸ್ ಮಾಡಿಕೊಳ್ಳಬೇಡಿ. ಆಪರೇಷನ್ನಿಗಾಗಿ ಮಗುವಿನ ಭ್ರೂಣವನ್ನು ತಾಯಿಯ ಹೊಟ್ಟೆಯಿಂದ ಹೊರತೆಗೆದು ನಾರ್ಮಲ್ ಡೆಲಿವರಿಗಾಗಿ ಮತ್ತೆ ಹೊಟ್ಟೆಗೆ ವೈದ್ಯರು ಮರಳಿಸಿದ್ದರು. ನಂತರ ಮಗು ಸರಿಯಾದ ಸಮಯಕ್ಕೆ ನೈಸರ್ಗಿಕವಾಗಿ ಹುಟ್ಟಿದೆ. ಹೀಗೆ ಎರಡು ಬಾರಿ ಈ ಮಗು ಹುಟ್ಟಿದಂತಾಗಿದೆ.

ವೈದ್ಯಲೋಕದ ವಿಸ್ಮಯಗಳ ಸಾಲಿಗೆ ಸೇರುವ ಶಸ್ತ್ರ ಚಿಕಿತ್ಸೆಯೊಂದು ಅಮೆರಿಕಾದ ಟೆಕ್ಸಾಸ್ ನಗರದಲ್ಲಿ ನಡೆದಿದೆ. ಶಸ್ತ್ರಚಿಕಿತ್ಸೆಯ ಕಾರಣಕ್ಕೆ ಮಗುವಿನ ಭ್ರೂಣವನ್ನು ಗರ್ಭಕೋಶದಿಂದ ಹೊರ ತೆಗೆದು ಮತ್ತೆ, ಮರಳಿಸಿದ ಅಪರೂಪದ ಶಸ್ತ್ರ ಚಿಕಿತ್ಸೆ ಇದು; ಮಗುವಿನ ಜೀವ ಉಳಿಸಲು ವೈದ್ಯರು ಇಂಥಹದ್ದೊಂದು ಸಾಹಸಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಈ ಮೂಲಕ ಒಂದೇ ಮಗು ಎರಡು ಬಾರಿ ಹುಟ್ಟಿದಂತಾಗಿದೆ.

ಆಗಿನ್ನೂ ಲೈನ್ಲೀ ಬೂಮೆರ್ಸ್ (ಈಗಷ್ಟೇ ಹೆಸರಿಡಲಾಗಿದೆ) ತಾಯಿ ಮಾರ್ಗರೇಟ್ 16 ವಾರಗಳ ಗರ್ಭಿಣಿ. ವಾಡಿಕೆಯಂತೆ ಮಾರ್ಗರೇಟ್ ಅಲ್ಟ್ರಾ ಸೌಂಡ್ ಸ್ಕಾನಿಂಗ್ಗೆ ಒಳಗಾದಾಗ ಮಗುವಿನ ಮೂಳೆ ತುದಿಯಲ್ಲಿ (sacrococcygeal teratoma) ಟ್ಯೂಮರ್ ಇರುವುದು ಪತ್ತೆಯಾಯಿತು. ಭ್ರೂಣದಲ್ಲಿರುವಾಗಲೇ ಮಗುವಿನಲ್ಲಿ ಬೆಳೆಯುವ ಅಪರೂಪದ ಟ್ಯೂಮರ್ ಇದು. ಆಗಿನ್ನೂ ಲೈನ್ಲೀ 16 ವಾರಗಳ ಭ್ರೂಣದ ಸ್ಥಿತಿಯಲ್ಲಿದ್ದಳು. ವೈದ್ಯರು ಏನೂ ಮಾಡುವಂತಿರಲಿಲ್ಲ. ಈಗ ವೈದ್ಯರಿಗಿದ್ದ ಏಕೈಕ ಮಾರ್ಗ ಒಂದೇ; ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡುವುದು. ಆದರೆ ಇನ್ನೂ ಮಗುವಿನ ಸ್ಥಿತಿಗೂ ಬರದ ಭ್ರೂಣಕ್ಕೆ ಶಸ್ತ್ರ ಚಿಕಿತ್ಸೆ ಮಾಡುವುದು ಸವಾಲಿನ, ಅಷ್ಟೇ ಅಪಾಯದ ಸಂದರ್ಭ ಅದು.

ಅಂತಿಮವಾಗಿ ಮಗುವನ್ನು ಭ್ರೂಣದಿಂದ 20 ನಿಮಿಷಗಳ ಕಾಲ ಹೊರತೆಗೆಯುವುದು. ನಂತರ ಶಸ್ತ್ರ ಚಿಕಿತ್ಸೆ ಮುಗಿಸಿ ಮತ್ತೆ ಭ್ರೂಣಕ್ಕೆ ಮರಳಿಸುವುದು ಎಂಬ 'ಆಪರೇಷನ್ ಪ್ಲಾನ್' ಹಾಕಿಕೊಳ್ಳಲಾಯಿತು.

ಅದರಂತೆ ಶಸ್ತ್ರ ಚಿಕಿತ್ಸೆ ಆರಂಭಿಸಲಾಯಿತು. ಭ್ರೂಣದ ರೂಪದಲ್ಲಿದ್ದ ಮಗುವನ್ನು ಹೊರತೆಗೆದಾಗ ಮಗು 538 ಗ್ರಾಂ ತೂಗುತ್ತಿತ್ತಷ್ಟೇ. ಒಟ್ಟು 20 ನಿಮಿಷಗಳಲ್ಲಿ ಭ್ರೂಣದ ಶಸ್ತ್ರ ಚಿಕಿತ್ಸೆ ಮುಗಿಯಿತು. ಶಸ್ತ್ರ ಚಿಕಿತ್ಸೆ ವೇಳೆ ಒಂದು ಹಂತದಲ್ಲಿ ಮಗುವಿನ ಹೃದಯ ನಿಂತೇ ಹೋಗಿತ್ತು. ಆದರೆ ತಜ್ಞ ವೈದ್ಯರು ಮತ್ತೆ ಹೃದಯ ಬಡಿತವನ್ನು ಆರಂಭಿಸಿದ್ದರು. ಕೊನೆಗೆ ಮತ್ತೆ ಭ್ರೂಣವನ್ನು ಅಮ್ಮನ ಗರ್ಭಕ್ಕೆ ಸೇರಿಸಲಾಯಿತು. ಹೀಗೆ 5 ಗಂಟೆಗಳ ಶಸ್ತ್ರ ಚಿಕಿತ್ಸೆ ಮುಗಿಯಿತು.

ಆಪರೇಷನ್ ನಡೆದ 12 ವಾರಗಳ ನಂತರ ಲೈನ್ಲೀ ಬೂಮೆರ್ಸ್ ಮತ್ತೆ ಹುಟ್ಟಿದಳು. ಹುಟ್ಟಿದಾಗ ಲೆನ್ಲೀ 2.4 ಕೆಜಿ ತೂಗುತ್ತಿದ್ದಳು. ಲೆನ್ಲೀ ಹುಟ್ಟುತ್ತಿದ್ದಂತೆ 8 ದಿನದಲ್ಲಿ ಆಕೆಗೆ ಮತ್ತೊಂದು ಆಪರೇಷನ್ ಮಾಡಲಾಯಿತು. ಆರಂಭದ ಆಪರೇಷನ್ನಿನಲ್ಲಿ ಟ್ಯೂಮರಿನ ಕೆಲವು ಭಾಗಗಳನ್ನು ತೆಗೆಯಲು ಸಾಧ್ಯವಾಗಿರಲಿಲ್ಲ. ಆ ಭಾಗಗಳನ್ನು ಹುಟ್ಟಿದ ನಂತರ ಆಪರೇಷನ್ ಮಾಡಿ ತೆಗೆಯಲಾಯಿತು. ಈಗ ಲೆನ್ಲೀ ಆರೋಗ್ಯವಾಗಿದ್ದಾಳೆ.


       ಲೈನ್ಲೀಯ ಫ್ಯಾಮಿಲಿ ಫೊಟೋ
ಲೈನ್ಲೀಯ ಫ್ಯಾಮಿಲಿ ಫೊಟೋ

ಆರಂಭದಲ್ಲಿ ತಂಥಹದ್ದೊಂದು ಟ್ಯೂಮೆರ್ ಇದೆ ಎಂದು ಗೊತ್ತಾದಾಗ ಲೆನ್ಲೀ ತಾಯಿ ಮಾರ್ಗರೇಟ್ ತೀರಾ ಭಯಭೀತರಾಗಿದ್ದರಂತೆ. ಅವರಿಗೆ sacrococcygeal teratoma ಟ್ಯೂಮರ್ ಅಂದರೇನೆಂದೂ ಗೊತ್ತಿರಲಿಲ್ಲ. ಆದರೆ ಈಗ ಮಗಳು ಆರೋಗ್ಯವಾಗಿ ಹುಟ್ಟಿದ್ದನ್ನು ಕಂಡು ಸಂತಸಗೊಂಡಿದ್ದಾರೆ.

‘ಸಾಕ್ರೆಕೋಸೈಗಿಯಲ್ ಟೆರಟೋಮ’ ಎನ್ನುವ ಟ್ಯೂಮರ್ 35,000 ದಲ್ಲಿ ಒಂದು ಮಗುವಿಗೆ ಬರುತ್ತದೆ. ಆದರೆ ಸಾಮಾನ್ಯವಾಗಿ ಈ ರೀತಿಯ ಟ್ಯೂಮರ್ಗಳನ್ನು ಮಗು ಹುಟ್ಟಿದ ನಂತರ ತೆಗೆಯಲಾಗುತ್ತದೆ. ಆದರೆ ಕೆಲವು ಪ್ರಕರಣದಲ್ಲಿ ರಕ್ತದ ಹರಿಯುವಿಕೆಗೆ ಟ್ಯೂಮರ್ಗಳು ಅಡ್ಡಿಯಾಗಿ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಇರುತ್ತದೆ. ಇದು ಅಂತಹದ್ದೇ ಪ್ರಕರಣದಲ್ಲಿ ಒಂದು. ಹೀಗಾಗಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಗು ಹುಟ್ಟುವ ಮೊದಲೇ ಭ್ರೂಣದಲ್ಲೇ ಟ್ಯೂಮರ್ ತೆಗೆಯಲಾಗಿದೆ.

ಇದೀಗ ಲೆನ್ಲೀ ಜಗತ್ತಿನಲ್ಲೇ ಎರಡು ಬಾರಿ ಜನ್ಮ ತಾಳಿದ ಮೊದಲ ಮಗು ಎಂಬ ವಿಚಿತ್ರ ಶ್ರೇಯಸ್ಸಿಗೆ ಪಾತ್ರಳಾಗಿದ್ದಾಳೆ. ಮಾತ್ರವಲ್ಲ ವೈದ್ಯಲೋಕದ ವಿಸ್ಮಯವೊಂದಕ್ಕೆ ತನಗೆ ಗೊತ್ತೇ ಇಲ್ಲದೆ ಸಾಕ್ಷಿಯಾಗಿದ್ದಾಳೆ.