samachara
www.samachara.com
‘SMOKING KILLS’ ಅಂತ ಗೊತ್ತಿದ್ದೂ ಜನ ಯಾಕೆ ಸಿಗರೇಟು ಸೇದುತ್ತಾರೆ?
ಸಮಾಚಾರ

‘SMOKING KILLS’ ಅಂತ ಗೊತ್ತಿದ್ದೂ ಜನ ಯಾಕೆ ಸಿಗರೇಟು ಸೇದುತ್ತಾರೆ?

samachara

samachara

ಇವತ್ತಿಗೆ ಭಾರತ ಬಿಡಿ, ಇಡೀ ಪ್ರಪಂಚದಾದ್ಯಂತ ಇದೊಂದು ಕ್ಲೀಷೆಯಾಗಿ ಮಾರ್ಪಾಟಾಗಿದೆ. 'ಸ್ಮೋಕಿಂಗ್ ಕಿಲ್ಸ್', 'ಧೂಮಪಾನ ಆರೋಗ್ಯಕ್ಕೆ ಹಾನಿಕರ' ಎಂಬ ಘೋಷಣೆಗಳು, ಜಾಹೀರಾತುಗಳು, ಸೈನ್ ಬೋರ್ಡುಗಳು, ಸೆಲೆಬ್ರಿಟಿಗಳ ಉವಾಚಗಳು ಹೀಗೆ ಕಂಡಕಂಡಲ್ಲಿ ಧೂಮಪಾನದ ವಿರುದ್ಧ ಪ್ರಚಾರ ಕಾರ್ಯ ನಡೆಯುತ್ತಲೇ ಇದೆ. ಮಾಲ್ಗೆ ಹೋಗಿ, ಸಿನಿಮಾ ಥಿಯೇಟಗೆ ಹೋಗಿ, ಇಲ್ಲವೇ ಸಿಗರೇಟು ಪ್ಯಾಕ್ ಒಂದನ್ನು ಕೊಂಡುಕೊಳ್ಳಿ, ಎಲ್ಲಾ ಕಡೆಗಳಲ್ಲೂ 'ಸ್ಮೋಕಿಂಗ್ ಕಿಲ್ಸ್' ಎಂಬ ಕಲುಷಿತಗೊಂಡ ಶ್ವಾಸಕೋಶದ ಚಿತ್ರಗಳು ರಾರಾಜಿಸುತ್ತವೆ. ಹೀಗಿದ್ದೂ, ಒಂದು 1980ರಲ್ಲಿ ಇದ್ದ ಪ್ರಪಂಚದ ಧೂಮಪಾನಿಗಳ ಸಂಖ್ಯೆ 72. 01 ಕೋಟಿಯಿಂದ 2012ರ ಹೊತ್ತಿಗೆ 96. 70 ಕೋಟಿಗೆ ಏರಿಕೆಯಾಗಿದೆ.ಯಾಕೆ ಹೀಗೆ?...

ಸತ್ಯ ಏನು?:

ನಿಜಕ್ಕೂ ಧೂಮಪಾನ ಮನುಷ್ಯನನ್ನು ಕೊಲ್ಲುತ್ತದೆಯಾ? "ಅಯ್ಯೋ ಬಿಡಿ, ಸಿಗರೇಟು ಸೇದದ, ಒಂದೇ ಒಂದು ಕೆಟ್ಟ ಚಟ ಇಲ್ಲದ ನನ್ನ ಸಂಬಂಧಿಕರೊಬ್ಬರು ಮೊನ್ನೆ ಮೊನ್ನೆಯಷ್ಟೆ ಕ್ಯಾನ್ಸರ್ನಿಂದ ಸತ್ತು ಹೋದರು. ಕಳೆದ ಐದು ದಶಕಗಳಿಂದ ಸಿಗರೇಟು ಸೇದುವ ನಮ್ಮ ಅಂಕಲ್ ಇನ್ನೂ ಗಟ್ಟಿ ಮುಟ್ಟಾಗಿದ್ದಾರೆ. ಯಾರು ಹೇಳಿದ್ದು ಸಿಗರೇಟಿನಿಂದಲೇ ಕ್ಯಾನ್ಸರ್ ಬರುತ್ತೆ ಅಂತ?''. ಹೀಗೊಂದು ವಾದವನ್ನು ಸ್ವಲ್ಪ ಹೆಚ್ಚು ಕಡಿಮೆ ಇದೇ ಪದಗಳಲ್ಲಿ, ಇದೇ ವಾಕ್ಯಗಳಲ್ಲಿ ನೀವು ಎದುರಿಸುತ್ತೀರಿ ಅಥವಾ ನೀವೇ ಮಂಡಿಸಿರುತ್ತೀರಿ. ಇದೊಂದು ರೀತಿಯಲ್ಲಿ ನಮಗೇ ಹೊತ್ತಿಲ್ಲದಂತೆ, ಧೂಮಪಾನದಿಂದ ಹೊರಬರಲಾಗದ ಸ್ಥಿತಿಯನ್ನು ಮುಚ್ಚಿಟ್ಟುಕೊಂಡು ಮಂಡಿಸುವ ತರ್ಕ. ಈ ಮೂಲಕ ನಮಗೆ ನಾವೇ ಸಮಾಧಾನ ಹೇಳಿಕೊಳ್ಳುವ ಪ್ರಯತ್ನದ ಭಾಗ ಅಷ್ಟೆ.

ಸಮೀಕ್ಷೆಯೊಂದರ ಪ್ರಕಾರ, ದೇಶದ ನೂರು ಕೋಟಿ ಮೀರಿದ ಜನಸಂಖ್ಯೆಯಲ್ಲಿ ಕನಿಷ್ಟ 10 ಕೋಟಿ ಜನ ಧೂಮಪಾನದ ವ್ಯಸನಿಗಳಾಗಿದ್ದಾರೆ. ಅವರಲ್ಲಿ ವರ್ಷಕ್ಕೆ ಶೇ. 10ರಷ್ಟು ಅಂದರೆ ಸುಮಾರು 10 ಲಕ್ಷ ಜನ ತಂಬಾಕು ಸಂಬಂಧಿತ ಕಾಯಿಲೆಯಿಂದಲೇ ಸಾಯುತ್ತಿದ್ದಾರೆ ಎನ್ನುತ್ತದೆ 'ವಿಶ್ವ ಆರೋಗ್ಯ ಸಂಸ್ಥೆ'ಯ ವರದಿಯೊಂದು (ತಂಬಾಕು ಸಂಬಂಧಿತ ಕಾಯಿಲೆ ಎಂದರೆ ಕ್ಯಾನ್ಸರ್ ಕಾಯಿಲೆಯೇ ಆಗಬೇಕು ಅಂತೇನಿಲ್ಲ ಎಂಬುದನ್ನು ಗಮನಿಸಬೇಕಿದೆ).

ಇಷ್ಟಾದರೂ, ಸಿಗರೇಟು ಸೇದುವವರಿಗೆ 'ಸ್ಮೋಕಿಂಗ್‌ ಕಿಲ್ಸ್' ಎಂಬ ಅತೀ ಕೆಟ್ಟ ರೀತಿಯಲ್ಲಿ ಮೂಡಿ ಬರುವ ಸರಕಾರಿ ಜಾಹೀರಾತುಗಳು ಪರಿಣಾಮ ಬೀರುತ್ತಿಲ್ಲ. ಕಾರಣ, ಸಿಗರೇಟಿನಲ್ಲಿರುವ ನಿಕೋಟಿನ್ ಎಂಬ ಕೆಮಿಕಲ್ ಇತರೆ ಮಾದಕ ಪದಾರ್ಥಗಳಿಗೆ ಹೋಲಿಸಿದರೆ (ಮದ್ಯವೂ ಸೇರಿದಂತೆ) ಹೆಚ್ಚು ಪ್ರಾಣಹಾನಿಯಲ್ಲ. ಬದಲಿಗೆ ಹೆಚ್ಚು ಅಡಿಕ್ಟಿವ್. ಕುಡಿತದಿಂದ ಸಾವು ಖಾಯಂ; ಆದರೆ, ಕುಡಿತವನ್ನು ಬಿಡಿಸುವುದು ಕಷ್ಟವಾಗಲಾದರು. ಇದಕ್ಕೆ ಹೋಲಿಸಿದರೆ ಸಿಗರೇಟು ಪ್ರಾಣಹಾನಿಯಲ್ಲ; ಆದರೆ, ಬಿಡುವುದು ಕಷ್ಟ. ಹೀಗಾಗಿ, ಲಾಜಿಕ್ಕೇ ಇಲ್ಲದ ಧೂಮಪಾನ ವಿರೋಧಿ ಜಾಹೀರಾತುಗಳಿಂದ ಸಿಗರೇಟು ಸೇವನೆ ಯಾವತ್ತಿಗೂ ಕಡಿಮೆಯಾಗುವ ಸಾಧ್ಯತೆಗಳಿಲ್ಲ; ಜಾಗೃತಿ ಮೂಡುವ ಆಶಯಗಳಿಲ್ಲ.

ಪರಿಣಾಮಗಳೇನಿವೆ?:

ಒಂದು ಅಂದಾಜಿನ ಪ್ರಕಾರ, ಪ್ರತಿಯೊಬ್ಬ ಧೂಮಪಾನಿಯೂ ಪ್ರತಿದಿನ ಕನಿಷ್ಟ 50- 60 ರೂಪಾಯಿಗಳನ್ನು ತನ್ನ ಚಟಕ್ಕಾಗಿಯೇ ಖರ್ಚು ಮಾಡುತ್ತಾನೆ ಅಥವಾ ಮಾಡುತ್ತಾಳೆ. ಅಂದರೆ, ತಿಂಗಳಿಗೆ 1, 800 ರಿಂದ 2, 000 ರೂಪಾಯಿಗಳು. ವರ್ಷಕ್ಕೆ ಹೆಚ್ಚು ಕಡಿಮೆ 20 ಸಾವಿರ ರೂಪಾಯಿ. ಹತ್ತು ವರ್ಷಗಳಿಗೆ 2 ಲಕ್ಷ ರೂಪಾಯಿ ಕೇವಲ ಸಿಗರೇಟಿಗಾಗಿಯೇ ಸುಟ್ಟು ಹೋಗುತ್ತದೆ. ಮನುಷ್ಯನಿಗೆ ಇರುವ ನಿಯಮಿತ ಚಟಗಳ ಪೈಕಿ ಸಿಗರೇಟು 'ದುಬಾರಿ ಚಟ' ಎಂದು ಅನ್ನಿಸಿಕೊಳ್ಳುತ್ತಿರುವುದು ಇದೇ ಕಾರಣಕ್ಕೆ.

ಇದನ್ನು ಬಿಡದ ಹೊರತು, ಖರ್ಚು ಕಡಿಮೆ ಮಾಡುವುದು ಕಷ್ಟ ಎಂಬುದನ್ನು ಮೊದಲು ಮನದಟ್ಟು ಮಾಡಿಕೊಳ್ಳಬೇಕಿದೆ.ಇದರ ಜತೆಗೆ, ಆರೋಗ್ಯದ ಮೇಲೆ ಬೀರುವ ದೂರಗಾಮಿ ಪರಿಣಾಮಗಳೂ ದೊಡ್ಡದಿವೆ. ಸಿಗರೇಟು ಸೇವನೆಯ 'ಮೂರನೇ ಹಂತ' (ಈ ಕುರಿತು ಮುಂದಿನ ಪ್ಯಾರಾದಲ್ಲಿ ವಿವರಣೆ ಇದೆ) ದಾಟುತ್ತಿದ್ದಂತೆ ಒಂದು ರೀತಿಯ ಮಂಪರು ಆವರಿಸಿಕೊಳ್ಳಲು ಶುರುಮಾಡುತ್ತದೆ.

ಪಫ್ ಎಳೆಯುವುದರಿಂದ ಯಾವ ಸುಖವೂ ಸಿಗದಿದ್ದರೂ, ಅದೊಂದು ಯಾಂತ್ರಿಕ ಕ್ರಿಯೆಯಾಗಿ ಬದಲಾಗುತ್ತದೆ. ತಿನ್ನುವ ಆಹಾರದ ರುಚಿ ಕಳೆದುಕೊಳ್ಳುತ್ತದೆ. ಹೀಗೆ, ಸಣ್ಣ ಪ್ರಮಾಣದಲ್ಲಿ, ಗಮನಕ್ಕೆ ಬರದಂತಹ ಇಂತಹ ಪರಿಣಾಮಗಳು ಕೊನೆಗೊಂದು ದಿನ ಬೇರೆ ಸ್ವರೂಪದಲ್ಲಿ, ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತವೆ. ಅಷ್ಟೊತ್ತಿಗೆ ವಯಸ್ಸು ಮತ್ತು ಮನಸ್ಸು ಎರಡೂ ಗಡಿಗಳನ್ನು ದಾಟಿ ಹೋಗಿರುತ್ತವೆ. ಒಂದು ಕಡೆ ಹಣವೂ ಸೋರಿ ಹೋಗಿರುತ್ತದೆ. ಮತ್ತೊಂದು ಕಡೆ ಆರೋಗ್ಯವೂ ಕೈಕೊಟ್ಟಿರುತ್ತದೆ. ಇದೊಂದು ರೀತಿಯಲ್ಲಿ ವಿಷಚಕ್ರ, ಹೊರಬರಬೇಕು ಎಂದರೂ ಬರಲಾದರ ಸ್ಥಿತಿಗೆ ದೂಡಿರುತ್ತದೆ.

ಬಿಡೋದು ಹೇಗೆ?:

ಧೂಮಪಾನದಿಂದ ಬಿಡಗಡೆ ಹೇಗೆ? ಎಂಬ ಕುರಿತು ಸಾಕಷ್ಟು ಥಿಯರಿಗಳಿವೆ. ಲಕ್ಷಾಂತರ ವಿಡಿಯೋಗಳು, ಲೇಖನಗಳು ಸಿಗುತ್ತವೆ. ನೂರಾರು ಪರ್ಯಾಯ ಮಾರ್ಗಗಳಿವೆ. ಆದರೆ, ಇವೆಲ್ಲವನ್ನೂ ಅನುಸರಿಸುವ ಮೊದಲು 'ಸಿಗರೇಟು ಬಿಡಬೇಕು' ಎಂಬ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾದವರು ಚಟಕ್ಕೆ ಒಳಗಾದವರು ಎನ್ನುತ್ತಾರೆ ಮಾನಸಿಕ ತಜ್ಞರು.

ಅವರ ಮನಸ್ಸಿನಲ್ಲಿ ಬಾರದೆ, ಯಾವ ಪರ್ಯಾಯ ದಾರಿಗಳೂ ಯಶಸ್ಸಾಗುವುದಿಲ್ಲ ಎಂದು ಅವರು ಹೇಳುತ್ತಾರೆ.ಯಾವುದೇ ಹವ್ಯಾಸ, ಚಟವಾಗಿ ಬದಲಾಗುವ ಸಮಯದಲ್ಲಿ ನಾಲ್ಕು ಹಂತಗಳನ್ನು ದಾಟಿಕೊಂಡು ಬರುತ್ತದೆ ಎನ್ನುತ್ತದೆ ಸೈಕಾಲಜಿ. ಮೊದಲ ಹಂತ, ಸಿಗರೇಟು ಸೇವನೆಗೆ ಪರಿಚಿತರಾಗುವುದು. ಇದು ಸ್ನೇಹಿತರಿಂದಲೋ, ಹತ್ತಿರದವರಿಂದಲೋ ನೋಡಿ, ಒಮ್ಮೆ ಟ್ರೈ ನೋಡೊಣ ಎಂಬ ಹಂತ. ಇದನ್ನು ದಾಟಿ ನಂತರ, ಅದನ್ನು ಪರೀಕ್ಷಿಸಿ ನೋಡುವ ಹಂತ.

ಈ ಸಮಯದಲ್ಲಿ, ಮೊದಲ ಅನುಭವದ ಆಧಾರದ ಮೇಲೆ ಪರೀಕ್ಷಿಸಲು ಹೊರಡುವುದು. ಈ ಹಂತದಲ್ಲಿ ಅದನ್ನು ಕೈ ಬಿಟ್ಟರೆ, ಅದೂ ಧೂಮಪಾನಿಯನ್ನು ಕೈ ಬಿಟ್ಟಂತೆ. ಒಮ್ಮೆ ಈ ಪರೀಕ್ಷೆ ಹಂತವನ್ನು ದಾಟಿದರೆ ಮುಂದಿನದ್ದು ಪ್ರಪಾತದ ಕಡೆಗಿನ ನಡಿಗೆ. ಈ ಹಂತದಲ್ಲಿಯೇ ಮಂಕುತನ, ಮೆಟ್ಟಿಲು ಹತ್ತಲು ಸುಸ್ತು, ಆಹಾರದ ಬಗ್ಗೆ ನಿರಾಸಕ್ತಿ, ರುಚಿ ಕೆಟ್ಟು ಹೋಗುವುದು ಹೀಗೆ ಹಲವು ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಒಮ್ಮೆ ಈ ಹಂತದಲ್ಲಿ 'ಸಿಗರೇಟು ಬಿಡಬೇಕು' ಎನ್ನಿಸಿ ಬಿಡುತ್ತದೆ.ಈ ಸಮಯದಲ್ಲಿ, ವ್ಯರ್ಥ ಕಸರತ್ತುಗಳು ಶುರುವಾಗುತ್ತದೆ. ದಿನಕ್ಕೇ ಮೂರೇ ಸಿಗರೇಟು ಸೇದುವುದು, ಜೇಬಲ್ಲಿ ಇಟ್ಟುಕೊಂಡರೆ ಜಾಸ್ತಿ ಸೇಯುತ್ತೇನೆ; ಹೀಗಾಗಿ ಪ್ರತಿ ಬಾರಿಯೂ ಅಂಗಡಿಗೇ ಹೋಗಿ ಕೊಂಡುಕೊಳ್ಳುತ್ತೇನೆ ಎನ್ನುವುದು, ಸಿಗರೇಟು ಬೇಡ, 'ವೀಡ್' ಸೇದುತ್ತೇನೆ ಎನ್ನುವುದು... ಹೀಗೆ ಒಂದಿಲ್ಲೊಂದು ಕಸರತ್ತುಗಳು ಶುರುವಾಗುತ್ತವೆ.

ಆದರೆ, ಅವೆಲ್ಲವೂ ಖಾತ್ರಿಯಾಗಿ ವಿಫಲವಾಗುತ್ತವೆ. ಅಷ್ಟೊತ್ತಿಗೆ ಚಟ ಎಂಬುದು ಮೂರನೇ ಹಂತದಿಂದ ನಾಲ್ಕನೇ ಹಂತಕ್ಕೆ ಕಾಲಿಟ್ಟಾಗಿರುತ್ತದೆ. ನಾಲ್ಕನೆಯದು ಕೊನೆಯ ಹಂತ. ಧೂಮಪಾನಿಗಳೂ ಒಳಗೊಳಗೇ ಸಾಯುತ್ತಾ, ಸುತ್ತಮುತ್ತಲಿನವರನ್ನೂ ಸಾಯಿಸುತ್ತ ಬದುಕುವ ಹಂತವಿದು. ಈ ಸಮಯದಲ್ಲಿಯೂ ಒಳಮನಸ್ಸು ಗಟ್ಟಿ ಮಾಡಿಕೊಂಡು ನಿಲ್ಲಿಸಿ ಬಿಟ್ಟರೆ ಒಂದು ಮಟ್ಟಿಗಾದರೂ ಭವಿಷ್ಯವನ್ನು ಕಾಪಾಡಿಕೊಂಡಂತೆ ಆಗುತ್ತದೆ. ಅದಾಗದಿದ್ದರೆ, ಧೂಮಪಾನ ಎಂಬುದು ನಿಧಾನವಾಗಿ ಕೊಲ್ಲುತ್ತ ಬರುತ್ತದೆ.

ಈಗಲೂ ಕಾಲ ಮಿಂಚಿಲ್ಲ; ಒಮ್ಮೆ ಸಿಗರೇಟು ಬಿಟ್ಟರೆ ದೇಹದಲ್ಲಿರುವ ನಿಕೋಟಿನ್ ಅಂಶ ಸಂಪೂರ್ಣ ಹೊರಹೋಗಲು 72 ಗಂಟೆಗಳ ಅಗತ್ಯವಿದೆ ಎನ್ನುತ್ತದೆ ವಿಜ್ಞಾನ. ಅಡಿಕ್ಟಿವ್ ಆಗಿರುವ ನಿಕೋಟಿನ್ ಹೊರ ಹೋಗುವವರೆಗೂ ತಡೆದುಕೊಂಡರೆ, ಕನಿಷ್ಟ ಮುಂದಿನ ಕೆಲವು ತಿಂಗಳುಗಳ ಮಟ್ಟಿಗಾದರೂ ಸಿಗರೇಟು ಬೆರಳು ತುದಿಯಿಂದ ಮಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಜತೆಗೆ, ಒಂದಷ್ಟು ವ್ಯಾಯಾಮ, ಪರ್ಯಾಯ ಆಲೋಚನೆಗಳನ್ನು ರೂಢಿಸಿಕೊಂಡರೆ ಸಿಗರೇಟಿನಿಂದ ಶಾಶ್ವತ ಮುಕ್ತಿ ಸಿಕ್ಕರೂ ಸಿಗಬಹುದು. ಏನೇ ಹೇಳಲಿ, ಮೊದಲು ಸಿಗರೇಟು ಬಿಡಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳಬೇಕಾದವರು ಚಟಕ್ಕೆ ಒಳಗಾದವರು. ಭವಿಷ್ಯದ ಚಟ ಮುಕ್ತ ಬದುಕನ್ನು ಶೇ. 50ರಷ್ಟು ಇದೇ ನಿರ್ಧರಿಸುತ್ತದೆ. ಎನಿ ವೇ ಗುಡ್ ಲಕ್...