ಬೆಂಗಳೂರಿನಲ್ಲಿ ಮಳೆ: ‘ನೀತಿಗೆಟ್ಟ’ವರಿಗೆ ಹೀಗೊಂದು ಪರ್ಯಾಯ ಇದೆ ಎಂದು ಹೇಳುವವರು ಯಾರು?
ಸಮಾಚಾರ

ಬೆಂಗಳೂರಿನಲ್ಲಿ ಮಳೆ: ‘ನೀತಿಗೆಟ್ಟ’ವರಿಗೆ ಹೀಗೊಂದು ಪರ್ಯಾಯ ಇದೆ ಎಂದು ಹೇಳುವವರು ಯಾರು?

ಭೂಮಿ ಮೇಲೆ ಪ್ರಕೃತಿ ವಿಕೋಪಗಳನ್ನು ತಡೆಯಲು ಸಾಧ್ಯತೆಗಳೂ ಇವೆ ಎಂಬುದನ್ನು ಯಾರಾದರೂ ನಮ್ಮ ಜನಪ್ರತಿನಿಧಿಗಳು ಕೂರಿಸಿಕೊಂಡಿ ಪಾಠ ಮಾಡುವ ವ್ಯವಸ್ಥೆಯಾಗಬೇಕು.

ಮಳೆ, ಪ್ರವಾಹ, ಟ್ರಾಫಿಕ್ ಜಾಂ... ಕೆರೆ ಕಟ್ಟೆ ಒಡೆದು ರಸ್ತೆಗೆ ನುಗ್ಗಿದ ನೀರು, ಮೀನು ಹಿಡಿದ ಜನ...

ಹೀಗೆ ಶುಕ್ರವಾರ ದಿನ ಪೂರ್ತಿ ಬೆಂಗಳೂರಿನಲ್ಲಿ ಮಳೆಯದ್ದೇ ಸದ್ದು. ನಗರದಲ್ಲಿ ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ ಮಳೆಯ ಪ್ರಮಾಣ ಮಾತ್ರ ಚಿಲ್ಲರೆ 2. 47 ಸೆಂಟಿ ಮೀಟರ್ ಎಂಬುದು ಸೋಜಿಗದ ವಿಚಾರ.

ಇಷ್ಟು ಸಣ್ಣ ಮಳೆಗೆ ಬೆಂಗಳೂರು ಹೀಗಾಗಿದ್ದೇಕೆ? ಕಾರಣ ಅವೈಜ್ಞಾನಿಕ 'ನಗರ ಯೋಜನೆ' ನೀತಿಗಳನ್ನು ಬಿಟ್ಟು ಬೇರೇನೂ ಅಲ್ಲ.

ಹಾಗೆ ನೋಡಿದರೆ “ಬೆಂಗಳೂರು ಗುಡ್ಡ ಪ್ರದೇಶದಲ್ಲಿದೆ. ಇಲ್ಲಿ ನೀರು ಗುರುತ್ವಾಕರ್ಷಣ ಬಲದಲ್ಲೇ ಇಳಿದು ಹೋಗಬೇಕು. ಚೆನ್ನೈ, ಮುಂಬೈಗಳಂತೆ ಪಂಪ್ ಮಾಡಿ ನೀರನ್ನು ಹೊರ ಹಾಕಬೇಕಾದ ಪರಿಸ್ಥಿತಿ ಇಲ್ಲಿಲ್ಲ. ಆದರೂ ನೀರು ಹೊರಗೆ ಹೋಗುತ್ತಿಲ್ಲ ಎಂದರೆ ಎಷ್ಟು ಅವೈಜ್ಞಾನಿಕವಾಗಿ ಇವರು ನಗರ ಯೋಜನೆ ಕೈಗೊಂಡಿರಬಹುದು,” ಎನ್ನುತ್ತಾರೆ ಹಿರಿಯ ವೈಜ್ಞಾನಿಕ ಬರಹಗಾರ ನಾಗೇಶ್ ಹೆಗಡೆ.

“ನಗರದ ಎತ್ತರ ಪ್ರದೇಶಗಳು, ತಗ್ಗು ಪ್ರದೇಶಗಳ ‘ಟೋಪೋಗ್ರಫಿಕ್’ ನಕ್ಷೆಯನ್ನು 50 ವರ್ಷ ಹಿಂದೆಯೇ ‘ಸರ್ವೆ ಆಫ್ ಇಂಡಿಯಾ’ ತಯಾರಿಸಿದೆ. ಆದರೆ ಇಲ್ಲಿ ನಿರ್ಮಾಣಗಳನ್ನು ಮಾಡುವವರು ಪ್ರದೇಶಗಳನ್ನೇ ಬದಲಿಸುತ್ತಿದ್ದಾರೆ. ಹಾಗೆ ಬದಲಾದಾಗ ಮ್ಯಾಪ್ ನ್ನು ಪುನರ್ ರಚಿಸಬೇಕು. ಆದರೆ ಆ ಕೆಲಸಗಳು ನಡೆಯುತ್ತಿಲ್ಲ,” ಎಂದು ಅವರು ಸಮಸ್ಯೆಗಳತ್ತ ಬೆಟ್ಟು ಮಾಡುತ್ತಾರೆ.

ಹಾಗೆ ನೋಡಿದರೆ ಇವತ್ತಿನ ಅತ್ಯಾಧುನಿಕ ಉಪಕರಣಗಳಿಂದ ಟೋಪೋಗ್ರಫಿ ಮ್ಯಾಪ್ ತಯಾರಿಸಿ ನಗರ ಯೋಜನೆ ಸಿದ್ಧಪಡಿಸುವುದು ದೊಡ್ಡ ವಿಷಯವೇ ಅಲ್ಲ.

ಆದರೆ ಆ ಇಚ್ಛಾ ಶಕ್ತಿಯನ್ನು ಸರಕಾರ ಪ್ರದರ್ಶಿಸುವುದೇ ಇಲ್ಲ. "ಚೆನ್ನೈನಲ್ಲಿ ಕಳೆದ ವರ್ಷ ಸಂಭವಿಸಿದ ಪ್ರವಾಹ ನಗರಗಳಿಗೆ ದೊಡ್ಡ ಎಚ್ಚರಿಕೆಯ ಗಂಟೆ," ಎನ್ನುತ್ತಾರೆ ನಾಗೇಶ್ ಹೆಗಡೆ. ಆದರೆ ನಮ್ಮ ಸರಕಾರಗಳು ಅದರಿಂದೆಲ್ಲಾ ಎಚ್ಚೆತ್ತುಕೊಂಡ ಯಾವ ಲಕ್ಷಣಗಳೂ ಕಾಣಿಸುವುದಿಲ್ಲ.

ರಾಜಕಾಲುವೆಗಳ ಒತ್ತುವರಿ, ಕೆರೆ ಒತ್ತುವರಿ, ಚರಂಡಿ ತೆಗೆಯುವುದರಲ್ಲೂ ಅಕ್ರಮ ಹೀಗೆ ಬೆಂಗಳೂರು ಅಭಿವೃದ್ಧಿಯ ಸಕಲ ಕರ್ಮಕಾಂಡಗಳೂ ಕಣ್ಣ ಮುಂದೆ ಬರುತ್ತವೆ.

ಹಾಗಾದರೆ ನಮಗೆ ಸುಸ್ಥಿರ ನಗರ ಯೋಜನೆಗೆ ಮಾದರಿ ಯಾವುದು ಅಂತ ಹುಡುಕಿಕೊಂಡು ಹೊರಟರೆ ಮೊದಲಿಗೆ ಸಿಗುವುದು ಅಮೆರಿಕಾದ ಲೂಸಿಯಾನ ರಾಜ್ಯದಲ್ಲಿ ಬರುವ ಕಡಲ ತಡಿಯ ನಗರ ‘ನ್ಯೂ ಒರ್ಲೆನ್ಸ್’.

ಒಂದು ಕಾಲದಲ್ಲಿ ನಮ್ಮ ಬೆಂಗಳೂರಿನಂತೆಯೇ ಪ್ರವಾಹದಲ್ಲಿ ಮಿಂದೇಳುತ್ತಿದ್ದು ನಗರ ಇವತ್ತು ಜಗತ್ತಿನಲ್ಲೇ ಎಲ್ಲೂಇಲ್ಲದಂತ ಸುರಕ್ಷಾ ವಿಧಾನಗಳನ್ನು ಅಳವಡಿಸಿಕೊಂಡು ರೋಲ್ ಮಾಡೆಲ್ ಸ್ಥಾನದಲ್ಲಿ ನಿಂತಿದೆ.

ಚಂಡಮಾರುತಕ್ಕೆ ಛಿದ್ರವಾಗಿದ್ದ ನ್ಯೂ ಒರ್ಲೆನ್ಸ್:

ಬೆಂಗಳೂರಿನಲ್ಲಿ ಮಳೆ: ‘ನೀತಿಗೆಟ್ಟ’ವರಿಗೆ ಹೀಗೊಂದು ಪರ್ಯಾಯ ಇದೆ ಎಂದು ಹೇಳುವವರು ಯಾರು?

2005ರ ಆಗಸ್ಟಿನಲ್ಲಿ ಅಟ್ಲಾಂಟಿಕ್ ಮಹಾಸಾಗರದಲ್ಲಿ ಎದ್ದ ‘ಕತ್ರಿನಾ’ ಚಂಡಮಾರುತ ಅಮೆರಿಕಾ ಕರಾವಳಿಗೆ ಅಪ್ಪಳಿಸಿತು. ಇದರ ಭೀಕರ ಪರಿಣಾಮಗಳು ಲೂಸಿಯಾನ ರಾಜ್ಯಕ್ಕೆ ಸೇರಿದ ಕಡಲತಡಿಯ ನಗರ ‘ನ್ಯೂ ಒರ್ಲೆನ್ಸ್’ನಲ್ಲಿ ಕಂಡು ಬಂತು.

ಕತ್ರಿನಾ ಅಮೆರಿಕಾ ಇತಿಹಾಸದಲ್ಲೇ ಎದ್ದ ಐದನೇ ಭಾರಿ ಸೈಕ್ಲೋನ್; ಹರ್ರಿಕೇನ್ ಕತ್ರಿನಾ ಅಬ್ಬರಕ್ಕೆ ಒಂದು ಕಡೆಯಿಂದ 28 ಅಡಿ ಎತ್ತರದ ಅಲೆಗಳು ಸಮುದ್ರದಿಂದ ಮೇಲೇರಿ ಬರುತ್ತಿದ್ದರೆ, ಇನ್ನೊಂದು ಕಡೆ 61 ಸೆಂಟಿ ಮೀಟರ್ ಮಳೆ ಸುರಿದಿತ್ತು. ಕತ್ರಿನಾ ಇಡೀ ಒರ್ಲೆನ್ಸ್ ನಗರವನ್ನು ಅಡ್ಡಡ್ಡ ಮಲಗಿಸಿತು. ನಗರವೇ ಜಲಾವೃತವಾದ ಘಟನೆಯಲ್ಲಿ 1,245 ಜನ ಸಾವನ್ನಪ್ಪಿದರೆ, ಪ್ರವಾಹದಿಂದ ನಗರ ಬಿಟ್ಟಿದ್ದ ಲಕ್ಷಾಂತರ ಜನ ಮತ್ತೆಂದೂ ಸಿಟಿಗೆ ಮರಳಲೇ ಇಲ್ಲ. ಒಟ್ಟು 4.7 ಲಕ್ಷ ಕೋಟಿ ನಷ್ಟ ಉಂಟಾಯಿತು.

ಅವತ್ತಿಗಾಗಲೇ ನಗರದಲ್ಲಿ ಪ್ರವಾಹ ತಡೆಗಟ್ಟುವ ವ್ಯವಸ್ಥೆಗಳಿದ್ದೂ ಅವೆಲ್ಲಾ ಈ ಪರಿಯ ಚಂಡಮಾರುತದ ಅಬ್ಬರಕ್ಕೆ ತರಗೆಲೆಯಾಗಿದ್ದವು. ಎಲ್ಲರ ನಿರೀಕ್ಷೆಗೂ ಮೀರಿ ಹಾನಿ ಉಂಟು ಮಾಡಿತ್ತು ಕತ್ರೀನಾ.

ಆದರೆ ಅದನ್ನು ನೋಡಿಕೊಂಡು ಅಲ್ಲಿನ ಆಡಳಿತ ಸುಮ್ಮನೆಯಂತೂ ಕುಳಿತುಕೊಳ್ಳಲಿಲ್ಲ.

ಅಭಿವೃದ್ಧಿ ಬಿಟ್ಟು ನಿಸರ್ಗದತ್ತ ಮುಖ ಮಾಡಿದ ಸರಕಾರ:

ಇನ್ನೂ ನಗರಕ್ಕೆ ನುಗ್ಗಿದ್ದ ನೀರು ಪೂರ್ತಿ ಇಳಿದಿರಲಿಲ್ಲ. ಅಷ್ಟೊತ್ತಿಗಾಗಲೇ ವಿಜ್ಞಾನಿಗಳನ್ನೆಲ್ಲಾ ಒಂದು ಕಡೆ ಗುಡ್ಡೆ ಹಾಕಿದ ಸರಕಾರಿ ಅಧಿಕಾರಿಗಳು ಚರ್ಚೆ ಆರಂಭಿಸಿದ್ದರು; ಕತ್ರಿನಾ ರೀತಿಯಾ ಸೈಕ್ಲೋನು ಎದ್ದರೆ ಮುಂದೇನು ಮಾಡಬೇಕು? ಅದು ಅವರ ಚರ್ಚಾ ವಸ್ತುವಾಗಿತ್ತು.

ಶತಶತಮಾನಗಳಿಂದ ಸಾಧಾರಣ ಸೈಕ್ಲೋನುಗಳನ್ನೆಲ್ಲಾ ಎದುರಿಸುತ್ತಾ ಅಲ್ಲಿನ ಭೂಮಿಗೆ ವಿಕೋಪ ಎದುರಿಸುವ ನೈಸರ್ಗಿಕ ಶಕ್ತಿ ಬೆಳೆದು ಬಂದಿತ್ತು. ಆದರೆ ಅಭಿವೃದ್ಧಿಯ ಓಘದಲ್ಲಿ ಅವೆಲ್ಲಾ ಮರೆತೇ ಹೋಗಿತ್ತು. ಇಲ್ಲಿನ ತೇವಾಂಶವುಳ್ಳ ನೆಲ ಸೈಕ್ಲೋನ್ ಬಂದಾಗ ಬಿರುಗಾಳಿಯ ವೇಗವನ್ನು ಕಡಿಮೆ ಮಾಡಿ, ಅಲೆಗಳ ಅಂತರವನ್ನು ಕುಗ್ಗಿಸಿ, ಬಿರುಗಾಳಿಯ ಶಕ್ತಿಯನ್ನು ಕಡಿಮೆ ಮಾಡುತ್ತಿದ್ದುದು ಲೂಸಿಯಾನ ರಾಜ್ಯ ವಿಶ್ವವಿದ್ಯಾಲಯದ ‘ಹರ್ರಿಕೇನ್ ಸೆಂಟರ್’ನ ವಿಜ್ಞಾನಿಗಳಿಗೆ ಮನವರಿಕೆಯಾಯಿತು. ‘ಕತ್ರಿನಾ’ ಸಂದರ್ಭ ಭೂಮಿ ನೀರಿನ ಹರಿವಿನ ವೇಗವನ್ನು ಪ್ರತಿ ಸೆಕೆಂಡಿಗೆ 1 ರಿಂದ 2 ಮೀಟರ್ ಕಡಿಮೆ ಮಾಡುತ್ತಿದ್ದುದನ್ನು ಇವರು ಗುರುತಿಸಿದರು.

ಆದರೆ ಅದಾಗಲೇ 70 ವರ್ಷಗಳ ನಿರಂತರ ಅಭಿವೃದ್ಧಿಯ ನಾಗಾಲೋಟದಲ್ಲಿ ತೇವಯುಕ್ತ ಪ್ರದೇಶಗಳು ಕಣ್ಮರೆಯಾಗಿದ್ದವು. ಆಗ ಪರಿಹಾರ ಸೂಚಿಸಲು ‘ಕೋಸ್ಟಲ್ ಪ್ರೊಟೆಕ್ಷನ್ ಆಂಡ್ ರೆಸ್ಟೋರೇಶನ್ ಅಥಾರಿಟಿ’ ಸ್ಥಾಪನೆ ಮಾಡಿತು. ವರ್ಷದೊಳಗೆ ಪರಿಹಾರ ಕಂಡು ಹುಡುಕಿಕೊಂಡು ಈ ತಂಡ ವಾಪಸ್ಸು ಬಂತು.

ಪೈಪ್ ಲೈನ್ ನಿರ್ಮಾಣದಿಂದಾದ ನೀರಿನ ಹರಿಯುವಿಕೆಗೆ ಉಂಟಾದ ತೊಂದರೆಗಳು, ಕೆಟ್ಟ ನಗರ ಯೋಜನೆ, ಭೂ ಪ್ರದೇಶದ ಕೊರತೆಯನ್ನು ತಂಡ ಗುರುತಿಸಿತು.

ಅದಾದ ಬಳಿಕ ಅಮೆರಿಕಾ ಸೇನೆಯ ಎಂಜಿನಿಯರುಗಳು ಮಿಸಿಸಿಪ್ಪಿ ನದಿಯ ನೀರನ್ನು ನಗರದತ್ತ ಹರಿಸುವ ಯೋಜನೆ ಕೈಗೆತ್ತಿಕೊಂಡರು. ಈ ಮೂಲಕ ನೆಲದ ತೇವಾಂಶ ಉಳಿಸಿಕೊಳ್ಳುವ ಮೊದಲ ಪ್ಲಾನ್ ಕಾರ್ಯರೂಪಕ್ಕೆ ಬಂತು.

ನವ ಪ್ರವಾಹ ರಕ್ಷಣಾ ವ್ಯವಸ್ಥೆ ನಿರ್ಮಾಣ:

ಬೆಂಗಳೂರಿನಲ್ಲಿ ಮಳೆ: ‘ನೀತಿಗೆಟ್ಟ’ವರಿಗೆ ಹೀಗೊಂದು ಪರ್ಯಾಯ ಇದೆ ಎಂದು ಹೇಳುವವರು ಯಾರು?

ಕತ್ರಿನಾ ದಾಳಿಯಾದ ವರ್ಷದ ನಂತರ ‘ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ’ದ ಎಂಜಿನಿಯರುಗಳು ನ್ಯೂ ಒರ್ಲೆನ್ಸ್ ನಗರದಲ್ಲಿ ಅರ್ಧಕ್ಕೆ ನಿಂತಿದ್ದ ಕಾಲುವೆಗಳ ಕಾಮಗಾರಿ, ಪ್ರವಾಹದ ವೇಳೆ ಕೊಚ್ಚಿ ಹೋದ ಕಾಲುವೆಗಳ ಸಮಸ್ಯೆಗಳನ್ನು ಗುರುತಿಸಿತು. ನಗರದೊಳಕ್ಕೆ ಪ್ರವಾಹ ಬಂದಾಗ ಹೊರಕ್ಕೆ ನೀರು ಪಂಪ್ ಮಾಡಬೇಕಾದ ವ್ಯವಸ್ಥೆಗಳು ಕೈಕೊಟ್ಟಿದ್ದನ್ನು ಸೇನೆ ಗುರುತಿಸಿತು. ದೊಡ್ಡ ಮಟ್ಟದ ಪ್ರವಾಹಕ್ಕೆ ಅವೆಲ್ಲಾ ಸಿದ್ಧವಾಗಿರಲೇ ಇಲ್ಲ.

ಎಂಜಿನಿಯರುಗಳು ಪಿಲ್ಲರ್ಸ್ ಹಾಕಿ ಕಾಂಕ್ರೀಟ್ ಗೋಡೆಗಳಿಂದ ಹೊಸದಾಗಿ ಕಾಲುವೆ ನಿರ್ಮಾಣಕ್ಕೆ ಇಳಿದರು. ಹತ್ತಿರದ ತಗ್ಗು ಪ್ರದೇಶಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡಿದರು. ಪಂಪ್ ಸ್ಟೇಷನುಗಳು ಬಿರುಗಾಳಿಗೆ ಬಗ್ಗದಂತೆ ಕಟ್ಟಲಾಯಿತು.

ಇಡೀ ನಗರದಲ್ಲಿ 63 ಸಾವಿರ ಕೋಟಿ ವೆಚ್ಚದಲ್ಲಿ, 563 ಕಿಲೋಮೀಟರ್ ಉದ್ದದ ಕಾಲುವೆಗಳು ಸೇರಿದಂತೆ ಪ್ರವಾಹ ರಕ್ಷಣಾ ಕಾಮಗಾರಿಗಳನ್ನು ನಡೆಸಲಾಯಿತು. ನೂರು ವರ್ಷಗಳವರೆಗೆ ಯಾವ ಸೈಕ್ಲೋನ್ ಬಂದರೂ ಜಗ್ಗದ ಭದ್ರ ವ್ಯವಸ್ಥೆ ಮಾಡಿ ಮುಗಿಸಿದರು.

ಮುಂಜಾಗ್ರತಾ ಕ್ರಮಗಳು:

ಕೇವಲ ಕಾಮಗಾರಿ ಮಾಡಿ ಮುಗಿಸಲಿಲ್ಲ, ಬದಲಿಗೆ ಸಮಗ್ರ ಯೋಜನೆಯನ್ನು ಅಲ್ಲಿ ಜಾರಿಗೆ ತರಲಾಯಿತು.

2005ರಲ್ಲಿ ಕತ್ರೀನಾ ಚಂಡಮಾರುತದ ಸಂದರ್ಭ ಹಾನಿ ತಡೆಗಟ್ಟಬಹುದಾಗಿದ್ದ ಅವಕಾಶಗಳನ್ನು ಕೈಚೆಲ್ಲಿದ ನಿರ್ವಹಣೆಯಲ್ಲಾದ ವೈಫಲ್ಯವನ್ನು ಗುರುತಿಸಲಾಯಿತು. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವಲ್ಲಿ ಸಾರ್ವಜನಿಕ ಸಾರಿಗೆಗಳು ಸೋತಿದ್ದವು. ಕಾರಿನಲ್ಲಿ ಬಂದವರು ಪೆಟ್ರೋಲ್ ಇಲ್ಲದೇ ಅರ್ಧ ರಸ್ತೆಯಲ್ಲಿ ಪರದಾಡಬೇಕಾಯಿತು. ನಗರಾಡಳಿತ, ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಹಾಗೂ ಆಸ್ಪತ್ರೆ, ತಾತ್ಕಾಲಿಕ ಶಿಬಿರಗಳ ನಡುವೆ ಸಮನ್ವಯದ ಕೊರತೆಯಾಗಿದ್ದು ಕಂಡು ಬಂತು. ಪ್ರವಾಹದ ವೇಳೆ ಸ್ಥಳಾಂತರ ಮಾಡಿದ 5 ಲಕ್ಷ ಜನರಿಗೆ ಸರಿಯಾದ ವ್ಯವಸ್ಥೆಗಳೇ ಇರಲಿಲ್ಲ.

ಸಂಪರ್ಕ ವ್ಯವಸ್ಥೆಗಳು ಕೈಕೊಡದಂತೆ ಕಾಪಾಡಿಕೊಳ್ಳುವುದು ಹೇಗೆ ಎನ್ನುವುದನ್ನೂ ನಿರ್ಧರಿಸಲಾಯಿತು. ವಿಶೇಷ ಪ್ರಾಧಿಕಾರ ಸ್ಥಾಪಿಸಿ ಅದರ ಮೂಲಕ ಅವುಗಳಿಗೆ ಬೇಕಾದ ಆರ್ಥಿಕ ಸಹಾಯ ನೀಡಲಾಯಿತು. ತಗ್ಗು ಪ್ರದೇಶಗಳಿಂದ ನಗರವನ್ನು ಸ್ಥಳಾಂತರ ಮಾಡಲು ನೆರವು ನೀಡಲಾಯಿತು.

ರಕ್ಷಣಾ ಕಾರ್ಯಚರಣೆ ವೇಳೆ ಇಂಗ್ಲೀಷ್ ಬರದವರ ಜೊತೆ ಸಂಪರ್ಕ ಸಾಧಿಸುವುದು, ಬುದ್ಧಿ ಮಾಂಧ್ಯರು, ವಿಕಲಚೇತನರಾದರೆ ಮಾಡಬೇಕು, ಸಾಕು ಪ್ರಾಣಿಗಳನ್ನು ಉಳಿಸುವುದು ಹೇಗೆ, ಇದಕ್ಕಾಗಿ ತಂಡಗಳ ರಚನೆ.. ಹೀಗೆ ಎಲ್ಲಾ ವಿಧದಲ್ಲೂ ಸಿದ್ಧವಾಯಿತು ನ್ಯೂ ಒರ್ಲೆನ್ಸ್.

ಕಾಲ ಕಾಲಕ್ಕೆ ಎಚ್ಚರಿಕೆ ನೀಡಲು ಸಂಪರ್ಕ ಸಾಧಿಸಲು ಇಲ್ಲಿನ ಎಲ್ಲಾ ನಿವಾಸಿಗಳ ಈ ಮೇಲ್, ಮೆಸೇಜ್ ಕಳುಹಿಸುವ ಸಂಪರ್ಕ ಜಾಲ ಸಿದ್ಧವಾಗಿಟ್ಟುಕೊಳ್ಳಲಾಯಿತು.

ಇದಾದ ನಂತರ 2008ರಲ್ಲಿ ‘ಹರ್ರಿಕೇನ್ ಗುಸ್ತಾವ’ ಬಂದ ಸಂದರ್ಭ ಶೇಕಡಾ 97 ಜನರನ್ನು ಮೇಯರ್ ಆದೇಶದಂತೆ ಕಡ್ಡಾಯವಾಗಿ ಖಾಲಿ ಮಾಡಿ ಸುರಕ್ಷಾ ವ್ಯವಸ್ಥೆಗಳನ್ನ ಚೆಕ್ ಕೂಡಾ ಮಾಡಲಾಯಿತು. ಹೀಗೆ ಆರು ವರ್ಷಗಳ ನಂತರ 2011ರಲ್ಲಿ ವಿಶ್ವದಲ್ಲಿ ಎಲ್ಲೂ ಇಲ್ಲದಷ್ಟು ಸುಸಜ್ಜಿತ, ಅತ್ಯಾಧುನಿಕ ಪ್ರವಾಹ ಮತ್ತು ಸೈಕ್ಲೋನ್ ಸುರಕ್ಷಾ ವ್ಯವಸ್ಥೆ ನ್ಯೂ ಒರ್ಲೆನ್ಸ್ ನಗರದ್ದಾಗಿತ್ತು.

ಭೂಮಿ ಮೇಲೆ ಇಂತಹ ಸಾಧ್ಯತೆಗಳೂ ಇವೆ ಎಂಬುದನ್ನು ಯಾರಾದರೂ ನಮ್ಮ ಜನಪ್ರತಿನಿಧಿಗಳು ಕೂರಿಸಿಕೊಂಡಿ ಪಾಠ ಮಾಡುವ ವ್ಯವಸ್ಥೆಯಾಗಬೇಕು. ಇಲ್ಲವಾದರೆ, ಪ್ರತಿ ಬಾರಿ ಮಳೆ ಬಂದಾಗಲೂ ಎಲ್ಲೆಲ್ಲಿ ನೀರು ನಿಗ್ಗಿತು ಅಂತ ತೋರಿಸೋದು, ನೀರು ಇಳಿದ ನಂತರ ಮತ್ತೆ ಯಥಾಸ್ಥಿತಿಯಲ್ಲಿ ಮುಂದುವರಿಯುವುದು ನಡೆದುಕೊಂಡು ಬರುತ್ತದೆ. ಬೆಂಗಳೂರು ಅಭಿವೃದ್ಧಿ ಅಂದರೆ 'ರಿಯಲ್ ಎಸ್ಟೇಟ್' ಅಲ್ಲ ಎಂಬುದನ್ನು ಶಕ್ತಿ ಸೌಧದಲ್ಲಿ ಕೂತವರಿಗೆ ಹೇಳುವವರು ಯಾರು?