samachara
www.samachara.com
ಸೇನಾಧಿಕಾರಿಗೆ ಕಾಶ್ಮೀರಿ ಯುವಕನ ಪ್ರತ್ಯುತ್ತರ: ‘ಮಕ್ಕಳನ್ನು ಕೊಲ್ಲುವುದು ದೇಶಭಕ್ತಿ ಅಲ್ಲ’!
ಸಮಾಚಾರ

ಸೇನಾಧಿಕಾರಿಗೆ ಕಾಶ್ಮೀರಿ ಯುವಕನ ಪ್ರತ್ಯುತ್ತರ: ‘ಮಕ್ಕಳನ್ನು ಕೊಲ್ಲುವುದು ದೇಶಭಕ್ತಿ ಅಲ್ಲ’!

samachara

samachara

ಕಾಶ್ಮೀರದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ವನಿಯನ್ನು ಸೇನಾಪಡೆಗಳು ಹತ್ಯೆ ಮಾಡಿದ ನಂತರ ಕಣಿವೆಯಲ್ಲಿ ಮತ್ತೆ ಹಿಂಸೆ ಭುಗಿಲೆದ್ದಿದೆ. ಈ ಸಂದರ್ಭದಲ್ಲಿ ನಿವೃತ್ತ ಸೇನಾಧಿಕಾರಿ ಮೇಜರ್ ಗೌರವ್ ಆರ್ಯ ಅವರು ಸತ್ತ ಬುರ್ಹನ್ ವನಿ ಅವರಿಗೆ ಒಂದು ಪತ್ರ ಬರೆದಿದ್ದರು. ಅದು ಅನೇಕರ ಪ್ರಶಂಸೆಗೆ ಒಳಗಾಗಿತ್ತು. ಈ ಪತ್ರವನ್ನು ಓದಿದ್ದ ಮುಂಬೈನಲ್ಲಿ ವಾಸಿಸುವ ಕಾಶ್ಮೀರಿ ಯುವಕ ವಸೀಂ ಖಾನ್ ಪತ್ರ ಬರೆದಿದ್ದ ಅಧಿಕಾರಿಗೆ ಒಂದು ಬಹಿರಂಗ ಪತ್ರ ಬರೆದಿದ್ದಾನೆ. ಅದರ ಪೂರ್ಣಪಾಠದ ಕನ್ನಡಾನುವಾದ ಇಲ್ಲಿದೆ...

ಕನ್ನಡಕ್ಕೆ: ಹರ್ಷಕುಮಾರ್ ಕುಗ್ವೆ

ಪ್ರಿಯ ಮೇಜರ್ ಗೌರವ್ ಆರ್ಯ,

ನಿಮ್ಮ ಪತ್ರವನ್ನು ನೋಡಿದಾಗ ನಾನು ಫ್ಲೈಟ್ ಹತ್ತಿ ಹೊರಡುವುದರಲ್ಲಿದ್ದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಆ ಪತ್ರವನ್ನು ಓದಲೇಬಾರದಿತ್ತು ಎಂದು ಈಗ ಅನಿಸುತ್ತದೆ. ಆದರೆ ನೀವು ಅದರ ಮೂಲಕ ಏನು ಹೇಳಲು ಬಯಸಿದ್ದೀರಿ ಎಂದು ಅರ್ಥಮಾಡಿಕೊಳ್ಳುವ ಸಲುವಾಗಿ ಅದನ್ನು ಓದಿದೆ. ಅದರಲ್ಲಿನ ನಿಮ್ಮ ಮಾತುಗಳು ಮುಂದಿನ ಎರಡು ತಾಸು ಮನಸ್ಸಿನಲ್ಲಿ ಕೊರೆಯುತ್ತಿದ್ದವು. ನೀವು ತಿಳಿಸಿರುವ ಕೆಲವು ವಿಷಯಗಳ ಬಗ್ಗೆಯೇ ಆಲೋಚಿಸುತ್ತಿದ್ದೆ. ಸಮಯ ಸರಿದ ಹಾಗೆಲ್ಲಾ ನಿಮ್ಮ ಮಾತುಗಳ ಅರ್ಥಗಳು ನನ್ನ ಮನಸ್ಸನ್ನು ಒಂದು ಬಗೆಯಲ್ಲಿ ಭಯ ವಿಹ್ವಲಗೊಳಿಸಿವೆ. ನೀವು ಹೇಳಿರುವ ಪ್ರತಿ ವಿಷಯದ ಬಗೆಗೂ ನಾನು ಈಗ ಮಾತಾಡಬಹುದಾಗಿದ್ದರೂ; ಇಲ್ಲಿ ತಪ್ಪಿಹೋಗಿರುವ ಮಹತ್ತರ ವಿಷಯವಿದೆ. ನಾನು ಈಗ ಆ ಕುರಿತು ಮಾತಾಡಲು ಬಯಸಿದ್ದೇನೆ. ಯಾಕೆಂದರೆ ಭಾರತದಲ್ಲಿರುವ ನನ್ನ ಸ್ನೇಹಿತರು ಈಗ ಕಾಶ್ಮೀರದಲ್ಲಿ ನಡೆಯುತ್ತಿರುವುದರ ಬಗ್ಗೆ ಹೆಮ್ಮೆ ಪಡಬೇಕೆಂದು ನಾನು ಬಯಸುವುದಿಲ್ಲ. ಅವರು ಸತ್ಯ ಏನೆಂದು ತಿಳಿಯಬೇಕೆಂದು ಬಯಸುತ್ತೇನೆ. ಈ ಸತ್ಯ ನಿಮ್ಮ

ಪೂರ್ತಿಯಾಗಿ ಪ್ರತಿಫಲಿಸುವುದಿಲ್ಲ. ಹಾಗಾಗಿ ಈ ಪತ್ರ.

ನೀವು ಉಲ್ಲೇಖಿಸಿರುವ ವಿಷಯಕ್ಕೇ ನೇರವಾಗಿ ಬರುತ್ತೇನೆ. ಬುರ್ಹಾನ್ ವನಿ ಹಿಜ್ಬುಲ್ ಕಮಾಂಡರ್ ಆಗಿದ್ದ. ಅವನು ಭಾರತದ ಸೈನ್ಯಕ್ಕೆ ಸವಾಲೊಡ್ಡಿದ್ದ ಮತ್ತು ಪರಿಣಾಮವಾಗಿ ಒಂದು ಗತಿ ಕಂಡ. ಅದು ನನಗೆ ಅರ್ಥವಾಗಿದೆ ಹಾಗೂ ಒಬ್ಬ ಸೇನಾಧಿಕಾರಿಯಾಗಿ ನಿಮ್ಮ ದೃಷ್ಟಿಕೋನವನ್ನು ನಾನು ಗೌರವಿಸುತ್ತೇನೆ. ಇದು ಯುದ್ಧ; ಇದರ ಬಗ್ಗೆ ಎರಡು ರೀತಿ ಹೇಳಲು ಬರುವುದಿಲ್ಲ. ಈ ಬಗ್ಗೆ ಗೊಂದಲವಿಲ್ಲ ಹಾಗೂ ಅದು ನಿಮ್ಮ ಕೆಲಸ ಸಹ. ಸೇನೆಯು ಕಾಶ್ಮೀರದಲ್ಲಿ ದಂಗೆಕೋರರನ್ನು ಕಳೆದ ಎರಡೂವರೆ ದಶಕದಿಂದಲೂ ಯಶಸ್ವಿಯಾಗಿ ಹತ್ತಿಕ್ಕುತ್ತಲೇ ಬಂದಿದೆ. ಒಬ್ಬ ಸೇನಾಧಿಕಾರಿಯಾಗಿ ನೀವು ಈ ಬಗ್ಗೆ ಹೆಮ್ಮೆಪಡಲೇಬೇಕು ಹಾಗೆಯೇ ದೇಶದ ಜನರೂ ಸಹ. ನಾನೀಗ ಚರಿತ್ರೆಗೆ ಹೋಗಿ ಈ ದಂಗೆಯೆಲ್ಲಾ ಏಕೆ ಶುರುವಾಗಿತ್ತು ಎಂದು ಹೇಳಲು ಹೋಗುವುದಿಲ್ಲ. ಅದೆಲ್ಲಾ ನಿಮಗೆ ತಿಳಿದಿರುವಂತದ್ದೇ. ತಿಳಿದಿಲ್ಲ ಎಂದರೆ ನಿಮ್ಮ ಅನುಕೂಲಕ್ಕಾಗಿ ಮಾತ್ರ ನೀವು ಅಜ್ಞಾನ ತೋರಿದ್ದೀರಿ ಎಂದರ್ಥವಾಗುತ್ತದೆ.

ಆದರೆ ನನ್ನ ಆತಂಕ ಏನೆಂದರೆ, ನೀವು ಕೇವಲ ಸೇನೆಯ ಸಾಧನೆಗಳಿಗೆ ಹೆಮ್ಮೆಪಟ್ಟುಕೊಂಡು ಈ ಪತ್ರ ಬರೆದಿರಲಿಕ್ಕಿಲ್ಲ ಎಂದೆನಿಸುತ್ತದೆ. ಬದಲಿಗೆ ಈ ಬುರ್ಹಾನಿ ವನಿ ಘಟನೆಯ ನಂತರದಲ್ಲಿ ಕಾಶ್ಮೀರದ ಜನತೆ ತಿರುಗಿ ಬಿದ್ದು ಮತ್ತಷ್ಟು ಸಾವುಗಳು ಸಂಭವಿಸಿದ ಕಾರಣಕ್ಕೆ ನೀವು ಬರೆದಿರುವುದು. ಸಾವುಗಳಾದವು ಎಂದಲ್ಲ ಜನ ತಿರುಗಿ ಬಿದ್ದಿದ್ದಾರೆ ಎಂಬ ಕಾರಣಕ್ಕೆ.ಮೇಜರ್ ಆರ್ಯ ಅವರೇ, ನೀವು ಶಕ್ತಿಶಾಲಿ ಪಡೆಯೊಂದರ ಭಾಗವಾದವರು. ಅದೂ ಜಗತ್ತಿನಲ್ಲೇ ಐದನೆಯ ಬಲಿಷ್ಠ ಸೇನೆ. ಆದರೆ, ಶಕ್ತಿ ಸಾಮರ್ಥ್ಯಕ್ಕಿಂತಲೂ ಮಿಗಿಲಾಗಿ ಜಗತ್ತಿನ ಅತಿಡೊಡ್ಡ ಪ್ರಜಾಪ್ರಭುತ್ವದ ಭಾಗ ನೀವಾಗಿದ್ದೀರಿ ಅನ್ನುವುದನ್ನು ಮರೆತೇಬಿಡುತ್ತೀರಿ. ಜಮ್ಮು ಮತ್ತು ಕಾಶ್ಮೀರಗಳು ಭಾರತದ ಅವಿಭಾಜ್ಯ ಅಂಗ ಎನ್ನುವುದಾದರೆ ಈ ಪ್ರಜಾಪ್ರಭುತ್ವದ ಕಾನೂನುಗಳು ಅಲ್ಲೇಕೆ ಅನ್ವಯವಾಗುವುದಿಲ್ಲ? ಅಂಕಿ ಅಂಶಗಳಲ್ಲಿ ಮಾತ್ರವೇ ಅವು ಅನ್ವಯವಾಗುವುದು. ಇದು ಇಬ್ಬಂದಿತನ ಅನಿಸುವುದಿಲ್ಲವೇ?

ನಿಮ್ಮ ಮಾತಿನ ಪ್ರಕಾರವೇ ಬುರ್ಹಾನ್ 22ನೇ ವಯಸ್ಸಿನಲ್ಲಿ ಬದುಕಿ ಉಳಿದಿದ್ದರೆ ಅವನು 23ಕ್ಕೆ ಸಾಯುತ್ತಿದ್ದ. ಆತ ಯಾರು ಅನ್ನುವ ಬಗ್ಗೆ ನನಗೆ ಮೊನ್ನೆವರೆಗೂ ಗೊತ್ತಿರಲಿಲ್ಲ. ಆತ ಸತ್ತ ನಂತರ ಅವನ ಬಗ್ಗೆ ನಾನು ಗೂಗಲ್ ನಲ್ಲಿ ಹುಡುಕಿದೆ. ಈ ಮೂಲಕವೇ ಅವನು ನನಗೆ ಹಾಗೂ ಭಾರತದಲ್ಲಿರುವ ನನ್ನ ಗೆಳೆಯರಿಗೆ ಸುದ್ದಿ ಆದದ್ದು. ಆತ ಯಾಕೆ ಮಿಲಿಟೆಂಟ್ ಆಗಿದ್ದ ಎಂದರೆ ಅವನ ಕಣ್ಣೆದುರಿಗೇ ಸೈನಿಕರು ಅವನ ಅಣ್ಣನನ್ನು ಪ್ರಜ್ಞೆ ತಪ್ಪುವವರೆಗೆ ಥಳಿಸಿದ್ದರು.

ಇದು ನನಗೆ ಒಂದು ವಿಷಯ ನೆನಪಿಗೆ ತರುತ್ತದೆ. ನನ್ನ ಬಗ್ಗೆಯೇ ಹೇಳುತ್ತೇನೆ ಕೇಳಿ, ನನ್ನನ್ನು ಶ್ರೀನಗರದಲ್ಲಿ ಸೈನಿಕರು ಮೊದಲ ಬಾರಿಗೆ ಥಳಿಸಿದಾಗ ನಾನು ಹತ್ತು ವರ್ಷದ ಹುಡುಗನಾಗಿದ್ದೆ. ನೀವು ಯಾಕೆ ಅಂತ ಕೇಳಿದರೆ ಅದು ನನಗೆ ಗೊತ್ತಿಲ್ಲ. ನಿಜಕ್ಕೂ ನನಗೆ ಗೊತ್ತಿರಲಿಲ್ಲ; ಅವರೇಕೆ ಹೊಡೆದರು ಎಂದು. ಸುಮ್ಮನೇ ರಸ್ತೆಯಲ್ಲಿ ನಡೆಯುತ್ತಿದ್ದೆ; ಇದ್ದಕ್ಕಿದ್ದಂತೆ ಒಬ್ಬ ಸೈನಿಕ ಬಂದು ನನ್ನ ಕೆನ್ನೆಗೆ ಹೊಡೆದ. ತಕ್ಷಣ ಅವನ ಜೊತೆಗಿದ್ದ ಶಕ್ತಿಶಾಲಿ ಕದನಕಲಿಗಳು ನನ್ನನ್ನು ಒದೆಯಲು ಶುರುಮಾಡಿದರು. ಆಗ ಸೋಷಲ್ ಮೀಡಿಯಾ ಇರಲಿಲ್ಲ ಹಾಗೂ ನಾನೇನೂ ಅವರನ್ನು ಬೆದರಿಸಿರಲಿಲ್ಲ. ಕೊನೆಯಲ್ಲಿ ನನಗೆ ನೆನಪಿದ್ದದ್ದು ಏನು ಎಂದರೆ ಒಂದು ಬಿರುಬಿಸಿಲಿನ ದಿನ ನನ್ನ ಮನೆಯ ಎದುರು ನಿಂತಿದ್ದ ಸೈನಿಕನೊಬ್ಬನಿಗೆ ನಾನು ಕುಡಿಯಲು ನೀರು ಕೊಟ್ಟಿದ್ದು ಮಾತ್ರ. ಬಿಎಸ್ಎಫ್ ನಿಂದ ಎರಡನೆಯ ಬಾರಿಗೆ ನಾನು ಹೊಡೆತ ತಿಂದದ್ದು ಸಹ ನಾನು ಹತ್ತನೇ ವಯಸ್ಸಿನಲ್ಲಿದ್ದಾಗಲೇ. ಮೂರನೇ ಸಲ ನಾನು ಹೊಡೆತ ತಿಂದದ್ದು ಸಿಆರ್ ಪಿ ಎಫ್ ನವರಿಂದ. ಅದೂ ನಾನು ಹತ್ತನೇ ವಯಸ್ಸಿನಲ್ಲಿದ್ದಾಗಲೇ. ನಂತರ 15ರಿಂದ 16 ಸಲ ನಾನು ಹೀಗೆ ಥಳಿತಕ್ಕೊಳಗಾದದ್ದೂ ಸಹ ನಾನಿನ್ನೂ ಹತ್ತನೇ ವಯಸ್ಸಿನಲ್ಲಿದ್ದಾಗಲೇ.

ಕೆಲವು ವರ್ಷಗಳ ನಂತರ ನಾನು ಕಾರಿನಲ್ಗಿ ಹೋಗುತ್ತಿದ್ದಾಗ ನನ್ನನ್ನು ಸೈನಿಕರು ಹೊರಕ್ಕೆಳೆದು ಹಾಕಿದ್ದರು. ನಾನು ಅವರಿಗೆ ಸಮಾಧಾನ ಮಾಡಲು ಒಂದು ವಾಕ್ಯ ಹೇಳಿ ಇನ್ನೂ ಮುಗಿಸಿರಲಿಲ್ಲ. ಅಷ್ಟರಲ್ಲಿಯೇ ನನ್ನ ಕುತ್ತಿಗೆ ಮೇಲೆ ಬಂದೂಕಿನ ಬುಡದಿಂದ ಏಟು ಬಿದ್ದಿತ್ತು. ನಾನು ಕೆಳಕ್ಕೆ ಬಿದ್ದಿದ್ದೆ. ಇದು ನಡೆದಿದ್ದು ಹೆದ್ದಾರಿಯ ಮೇಲೆ. ನನಗೆ ಮತ್ತೆ ಪ್ರಜ್ಞೆ ಬಂದಾಗ ಅಲ್ಲಿದ್ದ ಒಬ್ಬ ಅಧಿಕಾರಿಯನ್ನು ಗುರುತಿಸಲು ನನಗೆ ಸಾಧ್ಯವಾಯಿತು. ಅವರ ಬಳಿಗೆ ಹೇಗೋ ಹೋಗಿ ಯಾಕೆ ನನಗೆ ಹೊಡೆದದ್ದು ಎಂದು ತಿಳಿಯಲು ಯತ್ನಿಸಿದೆ. ನಾನಿನ್ನೂ ಅವರ ಹತ್ತಿರ ಹೋಗುವಷ್ಟರಲ್ಲಿ ಅವರು ನನಗೆ ಕೈಸನ್ನೆ ಮಾಡಿ ದೂರದಲ್ಲೇ ನಿಲ್ಲಲು ಸೂಚಿಸಿದರು. “ನಿಮಗೆಲ್ಲಾ ಹೀಗೇ ಮಾಡಬೇಕು, ತೊಲಗೋ ಆಚೆ” ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದರು. ನಂತರ ಅವರು ತಮ್ಮ ಶಕ್ತಿಶಾಲಿ ಪಡೆಯ ಜತೆಯಲ್ಲಿ ತಮ್ಮ ಜಿಪ್ಸಿ ಹತ್ತಿ ಹೊರಟು ಹೋದರು. ನಾನು ಸುಮ್ಮನೇ ನೋಡುತ್ತಾ ನಿಂತುಬಿಟ್ಟೆ, ಅವರು ಕಣ್ಣಿನಿಂದ ಮರೆಯಾಗುವವರೆಗೂ. ನನಗೆ ಏಟಾಗಿತ್ತು. ಆತನ ನಾಮಫಲಕದಲ್ಲಿದ್ದ ಹೆಸರು ನನಗೆ ಓದಲಾಗಲಿಲ್ಲ. ಆ ಅಧಿಕಾರಿ ನೀವಾಗಿರಲಿಕ್ಕಿಲ್ಲ ಎಂದು ಭಾವಿಸಿದ್ದೇನೆ.


       ಸೇನೆಯ ಪೆಲೆಟ್ ಗನ್ ದಾಳಿಗೆ ದೃಷ್ಟಿ ಕಳೆದುಕೊಂಡ ಕಾಶ್ಮೀರಿ ಬಾಲಕ ಹಮಿದ್.
ಸೇನೆಯ ಪೆಲೆಟ್ ಗನ್ ದಾಳಿಗೆ ದೃಷ್ಟಿ ಕಳೆದುಕೊಂಡ ಕಾಶ್ಮೀರಿ ಬಾಲಕ ಹಮಿದ್.

ನನ್ನ ಗೆಳೆಯರಿಗೆ ಯಾರಿಗಾದರೂ ಕೇಳಿ ನೋಡಿ. ಆ ಕೆಟ್ಟ ಅನುಭವವಾಗಲೀ ಅಥವಾ ಅಂತಹ ಇತರ ಅನುಭವಗಳ ಬಗ್ಗೆಯಾಗಲೀ ನಾನು ಅಷ್ಟಾಗಿ ತಲೆಕೆಡಿಸಿಕೊಂಡವನೇ ಅಲ್ಲ ಎಂದು ಅವರು ಹೇಳುತ್ತಾರೆ. ಹೀಗೆ ನನ್ನ ಮೇಲೆ ಹಲ್ಲೆಯಾದ ಮೇಲೆ ನಾನು ಯಾವತ್ತೂ ಹಿಂಸೆಗೂ ಇಳಿಯಲಿಲ್ಲ. ಹಾಗೆ ಹಿಂಸೆಗಿಳಿಯಬೇಕು, ಪ್ರತಿಕಾರ ತೀರಿಸಬೇಕು ಅನ್ನುವ ಆಲೋಚನೆ ಕೆಲವು ಸಲ ನನ್ನ ಮನಸ್ಸಿನಲ್ಲಿ ಸುಳಿದಿದ್ದಿದೆ. ಆದರೆ ಅದು ನನ್ನೊಳಗಿರಲಿಲ್ಲ. ನನ್ನನ್ನು ಸೈನಿಕರು ಅಷ್ಟೊಂದು ಸಲ ಥಳಿಸಿದ್ದು ನಾನು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ ಅನ್ನುವ ಕಾರಣಕ್ಕೆ ಆಗಿರಲೂ ಇಲ್ಲ ಅನ್ನುವ ಅಂಶ ನಿಮಗೆ ತಿಳಿದಿರಲಿ. ಯೂನಿಫಾರಂನಲ್ಲಿದ್ದವರನ್ನು ನೋಡಿದ್ದೇ ಬಹುಶಃ ನಾನು ಅವರಿಗೆ ಮಾಡಿದ ಬೆದರಿಕೆ ಅನ್ನಿಸಿತ್ತೋ ಏನೋ. ಅದಕ್ಕೇ ನನ್ನನ್ನವರು ಥಳಿಸಿದ್ದರು. ನನ್ನನ್ನು ನಂಬಿ ನಾನು ಯಾಕೆ ಅವರ ಕಡೆಗೆ ನೋಡಿದ್ದೆ ಎಂದರೆ ನನಗೆ ಸೈನಿಕರೆಡೆ ಇದ್ದ ಸಹಜ ಕುತೂಹಲಕ್ಕೆ. ಆ ಕುತೂಹಲ ಆ ನಂತರ ನನಗೆ ಉಳಿಯಿತು ಎಂದು ನಾನು ಹೇಳಲಾರೆ.

90ರ ದಶಕದ ಆರಂಭದಲ್ಲಿ ಕಣಿವೆಯಲ್ಲಿದ್ದ ಮಿಲಿಟಂಟ್ ಗಳ ಸಂಖ್ಯೆ 4000ದಷ್ಟಿತ್ತು. ಇದನ್ನು ಬೇಕಾದರೆ ನೀವು HQ XV Corps ನಲ್ಲಿ ವಿಚಾರಿಸಬಹುದು. ಅವರೂ ಒಪ್ಪುತ್ತಾರೆ. ಇವತ್ತು ದಕ್ಷಿಣ ಕಾಶ್ಮೀರದಲ್ಲಿರುವ ಮಿಲಿಟೆಂಟ್ ಗಳ ಸಂಖ್ಯೆ 66 ಹಾಗೂ ಉತ್ತರದ ಮತ್ತು ಉಳಿದ ಕಣಿವೆ ಪ್ರದೇಶದಲ್ಲಿರುವ ಮಿಲಿಟೆಂಟ್ ಗಳ ಸಂಖ್ಯೆ 40. ಆದರೆ 90ರ ದಶಕದ ಆರಂಭದಲ್ಲಿ ಇದ್ದ ಸೈನ್ಯದ ಸಂಖ್ಯೆ 5,00.000 (ಐದು ಲಕ್ಷ) ಮತ್ತು ಇಂದು ಅಲ್ಲಿನ ಸೈನ್ಯದ ಸಂಖ್ಯೆ 7,00,000 (ಏಳು ಲಕ್ಷ). ಹಾಗಾದರೆ ಸೈನ್ಯ ಅಷ್ಟೊಂದು ದಂಗೆಕೋರರನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿರುವಾಗ ಈ ಪ್ರಮಾಣದ ಸೈನ್ಯವನ್ನು ಅಲ್ಲಿ ಇರಿಸಿರುವುದಾದರೂ ಯಾಕೆ?

ಈಗ, ಇತ್ತೀಚೆಗೆ ಸಂಭವಿಸಿರುವ ಸಾವುಗಳ ಬಗ್ಗೆ ನೋಡೋಣ. ಇದು ನನ್ನನ್ನು ಈ ಕಾಶ್ಮೀರ ವಿವಾದ ಅಥವಾ ದ್ವಿಪಕ್ಷೀಯ, ತ್ರಿಪಕ್ಷೀಯ ಮಾತುಕತೆಗಳಿಗಿಂತ ಹೆಚ್ಚಾಗಿ ಕಾಡುತ್ತಿರುವಂತದ್ದು. ನಾನು ನಿಮಗೆ ಈ ಮರುಪತ್ರವನ್ನ ಬರೆಯಲು ಕಾರಣವೇ ಇದು. ನೀವು ಸೇನೆಗೆ ಸೇರಿದಾಗ ನೀವೊಬ್ಬರು ಪದವೀಧರರಾಗಿದ್ದಿರಿ. ನಂತರ ನೀವು ಪ್ರತಿಷ್ಠಿತ ಇಂಡಿಯನ್ ಮಿಲಿಟರಿ ಅಕಾಡೆಮಿ ಸೇರಿಕೊಂಡು ಅಧಿಕಾರಿಯಾಗಿ ಪಾಲಿಶ್ ಆದಿರಿ. ನಾನೂ ಸಹ IMAಗೆ ಭೇಟಿ ನೀಡಿದ್ದೇನೆ. ಅಲ್ಲಿನ ವಾತಾವರಣದಿಂದ ಇಂಪ್ರೆಸ್ ಆಗಿದ್ದೇನೆ. ಸೈನ್ಯದಲ್ಲಿ ಹತ್ತಕ್ಕಿಂತ ಹೆಚ್ಚು ಜನ ನನ್ನ ಗೆಳೆಯರಿದ್ದಾರೆ. ನನ್ನ ಗೆಳಯರಲ್ಲಿ ಹಲವರು ಸೇನಾಧಿಕಾರಿಗಳ ಮಕ್ಕಳಿದ್ದಾರೆ. ಅವರೆಲ್ಲಾ ಸೈನ್ಯದ ಅಧಿಕಾರಿಗಳ ಮಕ್ಕಳಾಗಿದ್ದರೂ ಅವರೆಲ್ಲಾ ಯಾಕೆ ಸೈನ್ಯವನ್ನು ಸೇರುವುದಿಲ್ಲ ಎಂಬ ಯೋಚನೆಯೂ ನನ್ನ ಮನಸ್ಸಿನಲ್ಲಿ ಬಂದಿರಲಿಲ್ಲ. ಇದನ್ನೆಲ್ಲಾ ನಾನು ನಿಮಗೆ ಯಾಕೆ ಹೇಳುತ್ತಿದ್ದೀನೆಂದರೆ ಗಿಲಾನಿ ಅಥವಾ ಮಿರ್ವೇಜ್ ಓಮರ್ ಅವರ ಕುಟುಂಬ ಯಾಕೆ ಹೊರದೇಶದಲ್ಲಿದ್ದಾರೆ ಎಂಬ ಬಗ್ಗೆ ನಮಗೆ ಗೊಂದಲವುಂಟಾಗಿಲ್ಲ. ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎನ್ನುವುದು ಪ್ರಸ್ತುತವೋ ಅಲ್ಲವೋ? ಈ ಹತ್ಯೆಗಳನ್ನು ತಡೆಯಲು ಅವರು ಏನಾದರೂ ಮಾಡಬಹುದು ಅಥವಾ ಮಾಡಿರಬಹುದಿತ್ತು ಎಂದು ನಿಜಕ್ಕೂ ನಿಮಗೆ ಅನಿಸುತ್ತದೆಯಾ? ಈ ಹುರಿಯತ್, ಜಿಹಾದ್ ಮತ್ತು ಅಲ್ಲಾಹ್ ಮುಂತಾದ ಶಬ್ದಗಳನ್ನು ಈ ಚರ್ಚೆಯಲ್ಲಿ ಬಿಟ್ಟಾಕಿ ನಾನಿಲ್ಲಿ ಗಮನ ಸೆಳೆಯಲು ಬಯಸುತ್ತಿರುವುದು ಬಲಿಷ್ಟವಾದ ಸೈನ್ಯವು ಚಿಕ್ಕ ಮಕ್ಕಳ ಮೇಲೆ ಬಪಪ್ರಯೋಗ ಮಾಡುತ್ತಿರುವುದರಿಂದ ಸಾವುಗಳಾಗುತ್ತಿವೆಯಲ್ಲಾ ಅದರ ಬಗೆಗೆ ಮಾತ್ರ.


       ಕಾಶ್ಮೀರಿ ಯುವಕನ ಶಾಂತಿಯುತ ಪ್ರತಿಭಟನೆ.
ಕಾಶ್ಮೀರಿ ಯುವಕನ ಶಾಂತಿಯುತ ಪ್ರತಿಭಟನೆ.

ಒಂದು ವೇಳೆ ದೆಹಲಿಯಲ್ಲಿ ನಾನು ಪ್ರತಿಭಟನೆ ನಡೆಸಿದೆ ಎಂದಾದರೆ ನನ್ನನ್ನು ಶೂಟ್ ಮಾಡಲಾಗುತ್ತದೆಯಾ? ಭದ್ರತಾ ಪಡೆಗಳು ಆಗ ನನ್ನ ಮೇಲೆ ಪ್ರಯೋಗಿಸುವ ಬಲ ಯಾವ ಬಗೆಯದು? ಬಹುಶಃ ಜಲಫಿರಂಗಿಗಳು ಅಲ್ಲವೇ? ಒಂದು ವೇಳೆ ನಾನು ತಾಳ್ಮೆ ಕಳೆದುಕೊಂಡು ಭದ್ರತಾ ಪಡೆಗಳ ಮೇಲೆ ಕೈ ಮಾಡಿದೆ ಎಂದೇ ಇಟ್ಟುಕೊಳ್ಳಿ. ಆಗ ಅವರು ಯಾವ ಬಲವನ್ನು ನನ್ನ ಮೆಲೆ ಪ್ರಯೋಗಿಸುತ್ತಾರೆ? ಪ್ರಾಯಶಃ ಲಾಠಿಗಳು. ಇನ್ನು ನಾನು ಕಲ್ಲುಗಳನ್ನು ಪಡೆಗಳ ಮೇಲೆ ಎಸೆದೆ ಎಂದರೆ ಆಗ? ಬಹುಶಃ ಟಿಯರ್ ಗ್ಯಾಸ್ ಅಲ್ಲವೇ? ಅಂತಿಮವಾಗಿ ನನ್ನ ಮೇಲೆ ದಮನವಾಗುತ್ತಿದೆ ಎಂದು ಭಾವಿಸಿ ನಾನೊಬ್ಬ ಹುಚ್ಚನಂತೆ ವರ್ತಿಸಿದರೆ ಆಗಲಾದರೂ ನನ್ನನ್ನು ಗುಂಡು ಹೊಡೆದು ಕೊಲ್ಲಲಾಗುತ್ತದೆಯೇ? ದೆಹಲಿಯಲ್ಲಿ ಅಥವಾ ಮುಂಬಯಿಯಲ್ಲಿ? ಇಲ್ಲ . ಕಾಶ್ಮೀರದಲ್ಲಿಯಾದರೆ- ಹೌದು.

ನಾನು ಬಲ ಅಥವಾ ಸಾಮರ್ಥ್ಯದ ಬಗ್ಗೆ ವಾದಿಸಬಯಸುವುದಿಲ್ಲ. ಸರಿಯೋ ತಪ್ಪೋ ಎಂದೂ ಚರ್ಚಿಸಬಯಸುವುದಿಲ್ಲ. ನೀವು ಬಳಸಿದ್ದೀರಲ್ಲಾ “ನಾವು ನಿಮ್ಮನ್ನು ಗುಂಡಿಕ್ಕಿ ಕೊಲ್ಲುತ್ತೇವೆ” ಈ ಪದಗಳು ನನ್ನ ತಲೆಯಲ್ಲಿ ತಿರುಗುತ್ತಿವೆ ಮತ್ತದು ಭಯ ಹುಟ್ಟಿಸುವಂತಿದೆ. ಯಾಕೆ ಭಯಹುಟ್ಟಿಸಿದೆ ಎಂದರೆ ಆ ಪದಗಳು ಕೇವಲ ದಂಗೆಕೋರರಿಗೆ ಅಥವಾ ಉಗ್ರರಿಗೆ ಸೀಮಿತವಾಗಿಲ್ಲ. ನಾನು ನಿಮಗೆ ಯಾವ ಬೆದರಿಕೆಯನ್ನೂ ಒಡ್ಡಿಲ್ಲ ಆದರೂ ನೀವು ನಮ್ಮೆಲ್ಲರನ್ನೂ ಭಯಪಡಿಸುತ್ತಿದ್ದೀರಿ.ಇದೇ ಸಂದರ್ಭದಲ್ಲಿ ಮತ್ತೊಂದು ವಿಷಯ. ಮನೋಗತಿ ಮತ್ತೊಂದು ದಿಕ್ಕಿನಲ್ಲೂ ಓಡುತ್ತಿದೆ. ಪ್ರಿಯ ಮೇಜರ್ ಆರ್ಯ ಅವರೇ ಹತ್ತು ವರ್ಷದ ಮಕ್ಕಳನ್ನು ಕುರುಡರಾಗಿಸುವುದರಲ್ಲಿ ಯಾವ ಶಕ್ತಿಸಾಮರ್ಥ್ಯ ಇದೆ? ಆ ಮಕ್ಕಳ ಕೈಕಾಲು ಆಡದಂತೆ ಮಾಡುವುದರಲ್ಲಿ ಯಾವ ಶಕ್ತಿಪ್ರದರ್ಶನವೂ ಇಲ್ಲ. ಅವರನ್ನು ಕೊಂದುಹಾಕುವುದರಲ್ಲಿಯಂತೂ ಯಾವ ಶಕ್ತಿ ಸಾಮರ್ಥ್ಯವೂ ತೋರಿದಂತಾಗುವುದಿಲ್ಲ.

ನಮ್ಮ ಎತ್ತರದ ಕುದುರೆಗಳಿಂದ ನೆಲಕ್ಕಿಳಿದು ಇದನ್ನೆಲ್ಲಾ ಮನುಷ್ಯರಾಗಿ ಚಿಂತಿಸೋಣ.

ಈ ಪತ್ರ ನಿಮ್ಮನ್ನು ಸ್ವಲ್ಪ ಹಿಂದಕ್ಕೆಳೆದು ವಿಷಯಗಳನ್ನು ಕೊಂಚ ಸರಳವಾಗಿ ನೋಡಲು ಸಾಧ್ಯಗೊಳಿಸುತ್ತದೆ ಎಂದು ಆಶಿಸುತ್ತೇನೆ. ಇದನ್ನು ಓದಿ ನೀವು ನನ್ನೆದುರು ಕುಳಿತುಕೊಂಡು ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ ಏನಾದರೂ ತೋಳ್ಬಲವಿದೆಯೇ ಅಥವಾ ಒಳ್ಳೆಯತನವಿದೇ ಎಂದು ನೋಡುತ್ತೀರಿ ಎಂದು ಆಶಿಸುತ್ತೇನೆ. ಇತ್ತೀಚೆಗೆ ನಿಮ್ಮ ಸೈನ್ಯದ ಒಬ್ಬ ಶಕ್ತಿಶಾಲಿ ಸೈನಿಕನೊಬ್ಬನಿಗೆ ಅವನ ಜಾತಿಯ ಕಾರಣಕ್ಕೆ ಶವಸಂಸ್ಕಾರಕ್ಕೆ ಅವಕಾಶ ನಿರಾಕರಿಸಿಲಾಯಿತು. ಆ ಸೈನಿಕನ ಸಾಮರ್ಥ್ಯಪೂರ್ಣ ತ್ಯಾಗಕ್ಕೆ ಏನು ನೀಡಿದಂತಾಯ್ತು?

ನೀವೊಬ್ಬರು ಸೇನಾಧಿಕಾರಿ. ನಾನು ಒಬ್ಬ ನಾಗರಿಕ. ನಾವಿಬ್ಬರೂ ರಾಜಕಾರಣಿಗಳಲ್ಲ. ನಮಗೆ ಯಾರ ಓಟೂ ಬೇಕಿಲ್ಲ. ನಾವು ಪ್ರಾಮಾಣಿಕರಾಗಿರೋಣ ನಮಗೆ ಸಾಧ್ಯವಾಗುವವರನ್ನು ಬದುಕಿಸೋಣ.

ಕೊನೆಯಲ್ಲಿ, ನನ್ನ ಮಾತುಗಳನ್ನು ಅನ್ಯಥಾ ಭಾವಿಸಬೇಡಿ. ನಿಮ್ಮ ಪತ್ರವನ್ನು ಓದಿದ ಮೇಲೂ ಸಹ ದೇಶಭಕ್ತಿ, ರಾಷ್ಟ್ರವಾದಗಳ ಹೆಸರಿನಲ್ಲಿ ಮತ್ತೊಂದು ಮಗುವೊಂದನ್ನು ಗುಂಡಿಟ್ಟು ಕೊಂದರೆ ನೀವು ಒಳಿತು ಮಾಡಿದ್ದಕ್ಕಿಂದ ಕೆಟ್ಟದ್ದು ಮಾಡಿದಂತೆಯೇ ಆಗುತ್ತದೆ ಎಂದು ಭಾವಿಸುತ್ತೇನೆ.

ಚಿತ್ರ: ಬಿಬಿಸಿ