ಸಾಂದರ್ಭಿಕ ಚಿತ್ರ
ಸಮಾಚಾರ

ಲಡ್ಡು ಮಾರಾಟಕ್ಕೆ ಜತೆಯಾದ ಹೈಟೆಕ್‌ ತಂತ್ರಜ್ಞಾನ

ಇದು ತಿರುಪತಿಯ ಲಡ್ಡು ಸ್ಟೋರಿ

Summary

ಮನುಷ್ಯನ ನಾಗರಿಕತೆಯ ಬೆಳವಣಿಗೆಯಲ್ಲಿ ಕಂಡುಕೊಂಡ ಹಲವು ಉದ್ಯಮಗಳಲ್ಲಿ ಆಹಾರ ಕೂಡ ಒಂದು. ಅದೇ ಆಹಾರೋದ್ಯಮಕ್ಕೆ, ಧಾರ್ಮಿಕ ಭಾವನೆಗಳೂ ಬೆರೆತು ಹೋದರೆ ಏನಾಗಬಹುದು? ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರೆ ಇವತ್ತಿನ ತಿರುಪತಿ ಲಡ್ಡು ಮತ್ತು ಅದರ ಹಿಂದಿನ ಕತೆಯನ್ನು ನೋಡಬೇಕಿದೆ.

ತಿರುಪತಿ ಲಡ್ಡು, ಅದರ ಇತಿಹಾಸ, ಇವತ್ತು ಅಗಾಧ ಪ್ರಮಾಣದಲ್ಲಿ ಬೆಳೆದಿರುವ ಮಾರುಕಟ್ಟೆ, ಅದನ್ನು ನಿಭಾಯಿಸಲು ದೇವಸ್ಥಾನ ಮಂಡಳಿ ನಡೆಸುತ್ತಿರುವ ತಂತ್ರಜ್ಞಾನದ ಕಸರತ್ತುಗಳ ಸುತ್ತ ಭಿನ್ನ ಒಳನೋಟಗಳನ್ನು ಇಲ್ಲಿ ಕಟ್ಟಿ ಕೊಡಲಾಗಿದೆ.

ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಭಾರತದಲ್ಲೇ ಜನಪ್ರಿಯ. ಇದರ ರುಚಿಗೆ ಮರುಳಾಗದವರಿಲ್ಲ. ದೇವಸ್ಥಾನದತ್ತ ತಲೆ ಹಾಕಿಯೂ ಮಲಗದ ನಾಸ್ತಿಕರೂ ಕೂಡಾ ಈ ಲಡ್ಡುವಿನ ರುಚಿಗೆ ಮಾತ್ರ ಬಾಯಿ ಚಪ್ಪರಿಸುತ್ತಾರೆ. ಆಂಧ್ರಪ್ರದೇಶದಲ್ಲಿರುವ ತಿರುಮಲ ತಿರುಪತಿ ದೇವಸ್ಥಾನದಲ್ಲಿ 10 ರೂಪಾಯಿಗೆ ರಿಯಾಯಿತಿ ದರದಲ್ಲಿ ಒಬ್ಬರಿಗೆ ಎರಡು ಲಡ್ಡು ನೀಡುತ್ತಾರೆ. ಇನ್ನು ಭಕ್ತರಿಗೆ ಹೆಚ್ಚಿಗೆ ಬೇಕೆಂದರೆ 25 ರೂಪಾಯಿ ದರದಲ್ಲಿ ಇನ್ನೆರಡು ಲಡ್ಡು ಖರೀದಿಸಲು ಅವಕಾಶವಿದೆ. ಇದಕ್ಕಿಂತ ಹೆಚ್ಚಿಗೆ ಲಡ್ಡು ಪಡೆದುಕೊಳ್ಳಲು ಯಾರಿಗೂ ಅವಕಾಶವಿಲ್ಲ. ಈ ಲಡ್ಡು ಪಡೆದುಕೊಳ್ಳಬೇಕೆಂದರೆ ರೈಲಿನಂತೆ ಉದ್ದವಾಗಿರುವ ಸರದಿ ಸಾಲಿನಲ್ಲಿ ನಿಲ್ಲಬೇಕು. ಲಡ್ಡು ವಿತರಣೆಗೆ ಹೈಟೆಕ್ ಕೂಪನಿನ ವ್ಯವಸ್ಥೆಗಳನ್ನು ದೇವಸ್ಥಾನ ಮಂಡಳಿ ಮಾಡಿದೆ. ಈ ಕೂಪನಿನಲ್ಲಿ ಸೆಕ್ಯುರಿಟಿ ಕೋಡುಗಳಿರುತ್ತವೆ. ಜೊತೆಗೆ ಲಡ್ಡು ಪಡೆಯಲು ಫೇಸ್ ಡಿಟೆಕ್ಷನ್ ಟೆಸ್ಟಿಗೂ ಒಳಗಾಗಬೇಕು. ಕೌಂಟರ್ಗಳಲ್ಲಿರುವ ಸಿಬ್ಬಂದಿಗಳು, ಟಿಕೆಟನ್ನು ಪರಿಶೀಲಿಸಿ, ಫೇಸ್ ಡಿಟೆಕ್ಷನ್ ನಡೆಸಿ ನಿಮ್ಮ ಕೈಗೆ ಲಡ್ಡು ಇಡುತ್ತಾರೆ. ಯಾರೂ ಹೆಚ್ಚಿಗೆ ಲಡ್ಡು ಪಡೆಯಬಾರದು ಎಂಬ ಕಾರಣಕ್ಕೆ ಈ ಮಟ್ಟಕ್ಕೆ ಹೈಟೆಕ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಲ್ಲಿನ ಲಡ್ಡುಗಳಿಗೆ ಯಾವ ಮಟ್ಟಕ್ಕೆ ಬೇಡಿಕೆ ಇದೆ ಅಂದರೆ, ಇದನ್ನು ಕದ್ದು ಮಾರಾಟ ಮಾಡುತ್ತಾರೇನೋ ಎನ್ನುವ ಭಯ ಇಲ್ಲಿನ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿಗಿದೆ. ಈ ಕಾರಣಕ್ಕೆ ಅದು ಫೇಸ್ ಡಿಟೆಕ್ಷನ್ ಮಾಡಿ ಲಡ್ಡು ವಿತರಿಸುತ್ತದೆ. ತಿರುಪತಿಯ ಲಡ್ಡಿಗೆ ದನದ ತುಪ್ಪ (ನಂದಿನಿ ತುಪ್ಪ), ಗೋಡಂಬಿ, ಒಣ ದ್ರಾಕ್ಷಿ, ಏಲಕ್ಕಿ, ಸಕ್ಕರೆ ಮತ್ತು ಕಡಲೆ ಹಿಟ್ಟು ಬಳಸುತ್ತಾರೆ.

ಇಲ್ಲಿನ ಲಡ್ಡು ತಯಾರಿಯ ಗುಟ್ಟನ್ನು ಎಲ್ಲರಿಂದಲೂ ಮುಚ್ಚಿಡಲಾಗಿದೆ. ಕಳೆದ 300 ವರ್ಷಗಳಿಂದ ಇದು ಗುಪ್ತವಾಗಿದೆ. ಕೆಲವೇ ಕೆಲವು ಅಡುಗೆ ತಯಾರಕರಿಗೆ ಮಾತ್ರ ಇಲ್ಲಿನ ಲಡ್ಡು ತಯಾರಿಸುವ ಗೌರವ ಮತ್ತು ಜವಾಬ್ದಾರಿ ನೀಡಲಾಗುತ್ತದೆ. ಅವರಿಗಷ್ಟೇ ಈ ಲಡ್ಡು ಹಿಂದಿನ ಸೀಕ್ರೆಟ್ ಗೊತ್ತಿದೆ. ಇಲ್ಲಿ ಎಲ್ಲ ಅಡುಗೆಯವರಿಗೂ ಲಡ್ಡು ತಯಾರಿಸಲು ಅವಕಾಶವಿಲ್ಲ. ಇಲ್ಲಿನ ಅಡುಗೆ ಮನೆಯನ್ನು ‘ಪೊಟು’ ಎಂದು ಕರೆಯುತ್ತಾರೆ. ಇದರಲ್ಲಿ ಪ್ರತಿನಿತ್ಯ ತಯಾರಾಗುವ ಲಾಡುಗಳ ಸಂಖ್ಯೆ 3,00,000. 2014ರಲ್ಲಿ ತಿರುಪತಿಯಲ್ಲಿ ಮಾರಾಟವಾದ ಲಡ್ಡುಗಳ ಸಂಖ್ಯೆ ಬರೋಬ್ಬರಿ 604 ಕೋಟಿ. ಇಲ್ಲಿನ ಎಲ್ಲಾ ಲಡ್ಡುಗಳೂ ಒಂದೇ ಆಕಾರದಲ್ಲಿಯೂ, ಒಂದೇ ತೂಕದಲ್ಲಿಯೂ ಇರುವುದು ವಿಶೇಷ. ಎಲ್ಲಾ ಲಡ್ಡಗಳೂ ಸುಮಾರು 300 ಗ್ರಾಂ ತೂಗುತ್ತವೆ.

ವಿಶ್ವದ ಅತೀ ದೊಡ್ಡ ಅಡುಗೆ ಮನೆ

2009ರಲ್ಲಿ ತಿರುಪತಿ ಲಡ್ಡು ಜೀಯೋಗ್ರಾಫಿಕಲ್ ಇಂಡಿಕೇಟರ್ (ಜಿಐ) ಟ್ಯಾಗ್ ಪಡೆಯಿತು. ಅಂದರೆ ಇದೇ ರೀತಿಯ ಲಡ್ಡನ್ನು ಬೇರೆಯವರು ಉತ್ಪಾದಿಸಿ ಮಾರಾಟ ಮಾಡುವುದಾಗಲಿ, ತಿರುಪತಿ ಲಡ್ಡು ಎಂದು ಹೆಸರಿನಿಂದ ಮಾರಲು ಸಾಧ್ಯವಿಲ್ಲ. ಇಂತಹದ್ದೊಂದು ಪೇಟೆಂಟನ್ನು ಈ ಲಡ್ಡು ಪಡೆದುಕೊಂಡಿದೆ. ಒಂದೊಮ್ಮೆ ಯಾರಾದರೂ ಕದ್ದು ಮಾರಾಟ ಮಾಡುವ ಪ್ರಯತ್ನ ಮಾಡಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ತಿರುಪತಿಯಲ್ಲಿ ಲಡ್ಡು ಮಾತ್ರ ಸಿಗುವುದಿಲ್ಲ. ವಿಶ್ವದ ಅತೀ ದೊಡ್ಡ ಅಡಿಗೆ ಮನೆಗಳಲ್ಲಿ ಇಲ್ಲಿನ ಅಡುಗೆ ಮನೆಯೂ ಒಂದು. ಇಲ್ಲಿ ಸರಾಸರಿ ದಿನವೊಂದಕ್ಕೆ 1,20,000 ಜನ ಊಟ ಮಾಡುತ್ತಾರೆ. ಸೌರ ಶಕ್ತಿಯನ್ನು ಉಪಯೋಗಿಸಿ ಅಡುಗೆ ಮಾಡುವ ಇಲ್ಲಿನ ಅಡುಗೆ ಮನೆಯಲ್ಲಿ ಪ್ರತಿನಿತ್ಯ 1,100 ಸಿಬ್ಬಂದಿಗಳು ಕೆಲಸ ಮಾಡುತ್ತಾರೆ. ಇವರು ಇಲ್ಲಿನ ಬರುವ ಭಕ್ತಾದಿಗಳಿಗೆ ದಿನನಿತ್ಯದ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಹಾಗೂ ರಾತ್ರಿ ಊಟ ಸಿದ್ಧಪಡಿಸುತ್ತಾರೆ. ಬೃಹತ್ ಗಾತ್ರದ ಪಾತ್ರೆಗಳ ಭಂಡಾರವೇ ಇಲ್ಲಿನ ಅಡುಗೆ ಮನೆಗಳಲ್ಲಿದೆ. ಇಲ್ಲಿನ ಬಾಣಲೆಯಲ್ಲಿ ನೂರಾರು ಕೆಜಿ ತರಕಾರಿಗಳನ್ನು ಏಕಕಾಲದಲ್ಲಿ ಹುರಿಯಬಹುದು. ಒಂದೊಂದು ಪಾತ್ರೆಯಲ್ಲಿ ಒಮ್ಮೆಗೆ ಒಂದು ಸಾವಿರ ಲೀಟರ್ ಸಾಂಬಾರು ತಯಾರಿಸಬಹುದು. ಸುಮಾರು 600 ಕೋಟಿಗಳವರೆಗೆ ಪ್ರತಿ ವರ್ಷ ದೇಣಿಗೆ ಪಡೆಯುವ ಇಲ್ಲಿನ ದೇವಸ್ಥಾನದ ಅಡುಗೆಮನೆ ಟ್ರಸ್ಟ್ ಕಳೆದ ಮೂವತ್ತು ವರ್ಷಗಳಿಂದ ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ.ಎಲ್ಲಾ ದೇವಸ್ಥಾನಗಳಲಂತೆ ಇಲ್ಲಯೂ ಭಕ್ತಾದಿಗಳಿಗೆ ಊಟ ಮಾಡಿದರೆ ತಮ್ಮ ಯಾತ್ರೆ ಸಾರ್ಥಕವಾಗುತ್ತದೆ ಎಂಬ ಭಾವವಿದೆ. ಹಾಗಾಗಿ ಬಂದವರು ಊಟ ಮಾಡಿಯೇ ತೆರಳುತ್ತಾರೆ.

ಕೃಪೆ: ಬಿಬಿಸಿ