samachara
www.samachara.com
ಕಾಶ್ಮೀರದಲ್ಲಿ 'ಪೆಲೆಟ್ ಗನ್' ಸೃಷ್ಟಿಸಿರುವ ಅಂಧಕಾರ; ನಿಲ್ಲದ ಹಿಂಸಾಚಾರ
ಸಮಾಚಾರ

ಕಾಶ್ಮೀರದಲ್ಲಿ 'ಪೆಲೆಟ್ ಗನ್' ಸೃಷ್ಟಿಸಿರುವ ಅಂಧಕಾರ; ನಿಲ್ಲದ ಹಿಂಸಾಚಾರ

ಪ್ರತ್ಯೇಕತಾವಾದಿ

ಸಂಘಟನೆ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವನಿ ಸಾವಿನ ಬೆನ್ನಿಗೆ ಹತ್ತಿಕೊಂಡು ಬೆಂಕಿ ಕಾಶ್ಮೀರದ ಕಣಿವೆಯಲ್ಲಿ ಆರುವ ಲಕ್ಷಣಗಳು ಕಾಣಿಸುತ್ತಿಲ್ಲ.

ಕಳೆದ 11 ದಿನಗಳಲ್ಲಿ ಕಾಶ್ಮೀರದಲ್ಲಿ ಬದುಕು ಮೂರಾಬಟ್ಟೆಯಾಗಿದೆ. 40 ಜನ ಜೀವ ಕಳೆದುಕೊಂಡಿದ್ದರೆ ಕಣ್ಣು, ಕೈ, ಕಾಲು ಕಳೆದುಕೊಂಡವರಿಗೆ ಲೆಕ್ಕವೇ ಇಲ್ಲ. ಸೈನಿಕರ ಪೆಲೆಟ್ ಗನ್ನಿಗೆ ಕಣ್ಣು ಕಳೆದುಕೊಂಡವರು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ರುದ್ರತಾಂಡವದ ಹಿಂದಿನ ಕಥೆಯನ್ನು ಬಿಚ್ಚಿಡುವ ವರದಿ ಇಲ್ಲಿದೆ.

ಇನ್ಶಾ ಮುಸ್ತಾಕ್..

14 ವರ್ಷದ ತರುಣಿ; ದಕ್ಷಿಣ ಕಾಶ್ಮಿರದವಳು. ಸದ್ಯ ಈಕೆ ಶ್ರೀನಗರದ ಆಸ್ಪತ್ರೆಯ ಐಸಿಯು ಕೊಠಡಿಯ ಬೆಡ್ ಮೇಲೆ ಮಲಗಿದ್ದಾಳೆ. ಪಕ್ಕದಲ್ಲಿ ಕುಳಿತ ಆಕೆಯ ತಾಯಿ ರಜಿಯಾ ಬೇಗಂ ಅಸಾಹಾಯಕಳಾಗಿ ಮಗಳನ್ನೇ ದಿಟ್ಟಿಸುತ್ತಿದ್ದಾರೆ.

ಆಕೆಯ ಸುಂದರ ಮುಖ ವಿರೂಪಗೊಂಡಿದೆ. ಗುರುತೂ ಹಿಡಿಯಲಾರದಷ್ಟು ಚಹರೆ ಬದಲಾದವಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

ಮುಶ್ತಾಕ್ ಪೆಲೆಟ್ ಗನ್ ದಾಳಿಗೆ ಗುರಿಯಾಗಿದ್ದಳು.

ಗುಂಡಿನ ದಾಳಿಗೆ ಒಳಗಾಗುವ ದಿನ ಆಕೆ ತನ್ನ ಮನೆಯವರೊಂದಿಗೆ ಮೊದಲ ಮಹಡಿಯಲ್ಲಿದ್ದ ತನ್ನ ಮನೆಯಲ್ಲಿದ್ದಳು. ಆಕೆಯ ತಂದೆ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಹೊಗಿದ್ದರು. ಮಸೀದಿಗೆ ಹೊರಟ ಅಪ್ಪನ ದಾರಿಯನ್ನು ಕೊನೆಯವರೆಗೆ ಕಿಟಕಿಯಲ್ಲಿ ನಿಂತ ಮಗಳು ನೋಡುತ್ತಿದ್ದಳು. ತೀರಾ ಹತ್ತಿರದಿಂದ ಸಿಆರ್ಪಿಎಫ್ ಯೋಧನೊಬ್ಬ ಟ್ರಿಗರ್ ಒತ್ತಿದ್ದ. ಸಮರೋಪಾದಿಯಲ್ಲಿ ಪೆಲ್ಲೆಟ್ಗಳು ಬಂದು ಆಕೆಯ ಮುಖಕ್ಕೆ ಅಪ್ಪಳಿಸಿದ್ದವು. ಪ್ರಜ್ಞೆ ಬಂದಾಗ ಆಕೆ ಆಸ್ಪತ್ರೆಯ ಐಸಿಯುನಲ್ಲಿ ಮಲಗಿದ್ದಾಳೆ. ತಾನೆಲ್ಲಿದ್ದೇನೆ ಆಕೆಗೆ ಕಾಣಿಸುತ್ತಿಲ್ಲ. ಆಕೆಯ ಕಣ್ಣುಗಳನ್ನು ಬ್ಯಾಂಡೇಜ್ನಿಂದ ಮುಚ್ಚಲಾಗಿದೆ. ಆಕೆಯ ಮುಖದ ಬಗ್ಗೆಯೂ ಆಕೆಗೆ ಗೊತ್ತಿಲ್ಲ. ಆದರೆ ಅಪ್ಪ ಅಮ್ಮ ಮುಖ ನೋಡುತ್ತಿದ್ದಾರೆ; ಮಗಳ ಮುಖ ಗುರುತೂ ಹಿಡಿಯಲಾರದಷ್ಟು ಬದಲಾಗಿ ಹೋಗಿದೆ; ಕಾಶ್ಮೀರಾದಂತೆ.

“ಆಕೆಯ ಕಣ್ಣುಗಳಿಗೆ ತೀವ್ರ ಹಾನಿಯಾಗಿದೆ. ದೃಷ್ಟಿ ಬರುವುದು ಕಷ್ಟ,” ಎನ್ನುತ್ತಾರೆ ಆಕೆಯನ್ನು ನೋಡಿಕೊಳ್ಳುತ್ತಿರುವ ವೈದ್ಯ ತಾರಿಕ್ ಖುರೇಶಿ.

ಅವರಿಗೆ ಈವರೆಗೆ ಇಂತಹದ್ದೇ 117 ಪ್ರಕರಣಗಳು ಬಂದಿವೆಯಂತೆ. ಇವರಲ್ಲಿ ಪೆಲ್ಲೆಟುಗಳಿಂದಾಗಿ ಏಳು ಜನರು ಕುರುಡಾಗಿದ್ದರೆ, 40 ಜನರಿಗೆ ಸಾಧಾರಣ ಗಾಯಗಳಾಗಿವೆ. ಇನ್ನುಳಿದವರು ಒಂದು ಕಣ್ಣು ಕಳೆದುಕೊಂಡಿದ್ದಾರೆ.

‘ಪೆಲ್ಲೆಟುಗಳು ಚೂಪಾಗಿದ್ದು,ನಿರ್ಧಿಷ್ಟ ಆಕಾರಕ್ಕಿಂತ ಭಿನ್ನವಾಗಿವೆ ಅಂತ’ ಪೆಲ್ಲೆಟು ಗನ್ನುಗಳಿಂದಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು 'ಇಂಡಿಯನ್ ಎಕ್ಸ್ಪ್ರೆಸ್'ಗೆ ತಿಳಿಸಿದ್ದಾರೆ. ಇದರಿಂದಾಗಿ ಈ ಬಾರಿ ಹೆಚ್ಚಿನ ಹಾನಿಯಾಗಿದೆ ಎಂಬುದಾಗಿ ಅವರು ಮಾಹಿತಿ ನೀಡುತ್ತಾರೆ.

ಈ ಬಾರಿ ಕಣವೆ ರಾಜ್ಯದಲ್ಲಿ ಹಿಂಸಾಚಾರಕ್ಕೆ 40ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಗಾಯಗೊಂಡವರ ಸಂಖ್ಯೆ 1800 ದಾಟಿದೆ. ಸರಕಾರ ಹೆಚ್ಚಿನ ಕಡೆಗಳಲ್ಲಿ ಕಟ್ಟು ನಿಟ್ಟಿನ ಕರ್ಫ್ಯೂ ವಿಧಿಸಿದೆ. ಹೀಗಿದ್ದೂ ಯುವಕರು ದೊಡ್ಡ ದೊಡ್ಡ ಗುಂಪುಗಳಲ್ಲಿ ಬೀದಿಗೆ ಬಂದು ಸೇನೆಯ ಈ ಹೊಸ ವಿಧಾನದ ಗುಂಡುಗಳಿಗೆ ದೇಹವನ್ನು ಒಡ್ಡುತ್ತಿದ್ದಾರೆ. ಅವು ಸಿಡುತ್ತಿವೆ, ಇವರು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ.

ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಬಳಸಿಕೊಳ್ಳಲಾಗುತ್ತಿದೆ, ಎಂಬ ವಿಚಾರದ ಬಗ್ಗೆ ಕಾಶ್ಮೀರ ಸರಕಾರ ತನಿಖೆಗೆ ಆದೇಶ ನೀಡಿದೆ.

ಸೇನಾಪಡೆಗಳು ಪ್ರತಿಭಟನಾಕಾರರ ಮೇಲೆ ಅಶ್ರುವಾಯು, ಪೆಪ್ಪರ್ ಗ್ಯಾಸ್, ಬುಲೆಟ್ ಜೊತೆಗೆ ‘ಮಾರಣಾಂತಿಕವಲ್ಲದ’ ಪೆಲ್ಲೆಟುಗಳನ್ನು ಸಿಡಿಸುತ್ತಿವೆ.

ಅದೆಂತಹ ಬರ್ಭರ ಸನ್ನಿವೇಶವನ್ನು ಎದುರಿಸುತ್ತಿರುವ ದೇಶವಾಧರೂ, ನಾಗರೀಕರು ನಡೆಸುವ ಪ್ರತಿಭಟನೆ ಹತ್ತಕ್ಕುವ ಸಮಯದಲ್ಲಿ ಸೇನೆ ನಿರ್ಧಿಷ್ಟ ಮಾನದಂಡಗಳನ್ನು (ಎಸ್ಒಪಿ) ಪಾಲಿಸಬೇಕು. ಅದರಂತೆ ತೀರಾ ಗಂಭೀರ ಪರಿಸ್ಥಿಗಳಲ್ಲಿ ಮಾತ್ರ ಕಾಲಿಗೆ ಗುರಿಯಾಗಿಸಿ ಗುಂಡಿನ ದಾಳಿ ನಡೆಸಬೇಕು ಎಂಬ ನಿಯಮ ಇದೆ. ಸದ್ಯ ಕಾಶ್ಮೀರಾದಲ್ಲಿ ಸೇನೆಯ ಗುಂಡುಗಳಿಗೆ ಗಾಯಗೊಂಡ 90 ಶೇಕಡಾಕ್ಕಿಂತ ಹೆಚ್ಚಿನವರು ಗಾಯಗಳು ಸೊಂಟದ ಭಾಗಕ್ಕಿಂತ ಮೇಲಿವೆ.

ಸಿಆರ್ಪಿಎಫ್ ವಕ್ತಾರ ರಾಜೇಶ್ ಯಾದವ್, "ಪ್ರತಿಭಟನಾಕಾರರನ್ನು ಎದುರಿಸುವಾಗ ಸೇನೆ ಸ್ವ ನಿಯಂತ್ರಣ ಹೇರಿಕೊಂಡಿದೆ," ಎಂದು ಹೇಳುತ್ತಿದ್ದಾರೆ. ನಾವು ವಿಶೇಷ ಕ್ಯಾಡ್ರಿಜ್ ಗಳನ್ನು ಬಳಸುತ್ತೇವೆ, ಅವುಗಳು ಕಡಿಮೆ ಪರಿಣಾಮ ಬೀರುತ್ತವೆ ಮತ್ತು ಅವು ಮಾರಣಾಂತಿಕವಲ್ಲ ಎನ್ನುವುದು ಅವರ ವಾದ.

ಆದರೆ ಸ್ಥಳೀಯ ಪರಿಸ್ಥಿತಿಗಳ ಜತೆ ಈ ಹೇಳಿಕೆ ತಾಳೆಯಾಗುತ್ತಿಲ್ಲ.

ಪೆಲೆಟ್ ಗನ್ ಎಂದರೇನು?


       ವಿಭಿನ್ನ ಆಕಾರದ ಪೆಲ್ಲೆಟ್ಟುಗಳು
ವಿಭಿನ್ನ ಆಕಾರದ ಪೆಲ್ಲೆಟ್ಟುಗಳು

ಬುರ್ಹಾನ್ ವನಿ ಸಾವಿನ ನಂತರ ಉದ್ವಿಘ್ನವಾಗಿರುವ ಕಾಶ್ಮೀರದ ಪ್ರತಿಭಟನೆ ಹತ್ತಿಕ್ಕಲು ಭಾರತೀಯ ಸೇನೆ ಈ ಪೆಲ್ಲೆಟ್ ಗನ್ನುಗಳ ಮೊರೆ ಹೋಗಿದೆ. ಇದು ಕರಾವಳಿ ಮತ್ತು ಮಲೆನಾಡಿನಲ್ಲಿ ಮಂಗಗಳನ್ನು ಓಡಿಸಲು ಬಳಸುವ ಏರ್ ಗನ್ನುಗಳ ಸುಧಾರಿತ ಮಾದರಿ. ಏರ್ ಗನ್ನುಗಳಲ್ಲಿ ಏಕಕಾಲಕ್ಕೆ ಒಂದು ಬುಲೆಟ್ ತೂರಿ ಹೋದರೆ ಇಲ್ಲಿ ಪೊಟ್ಟಣ ರೂಪದ ಬುಲೆಟ್ಟುಗಳ ಗುಚ್ಛ (ಕ್ಯಾಡ್ರಿಡ್ಜ್) ವನ್ನು ಸ್ಪೋಟಿಸಲಾಗುತ್ತದೆ. ಇದರಲ್ಲಿ 500 ಗುಂಡುಗಳಿರುತ್ತವೆ.

ಮಾರಣಾಂತಿಕವಲ್ಲ ಎನ್ನುವ ಕಾರಣಕ್ಕೆ 2010ರಲ್ಲಿ ಕಾಶ್ಮೀರ ಪೊಲೀಸರು ಮೊದಲ ಬಾರಿಗೆ ಇದರ ಬಳಕೆ ಆರಂಭಿಸಿದರು.

 

ಯುದ್ಧದ ಪರಿಸ್ಥಿತಿ: 

“ಸೇನೆ ಬೇಕೆಂದೇ ಎದೆ ಮತ್ತು ತಲೆ ಭಾಗವನ್ನು ಗುರಿಯಾಗಿಸಿ ದಾಳಿ ನಡೆಸುತ್ತದೆ. ಕೊಲ್ಲುವುದೇ ಅವರ ಉದ್ದೇಶ,” ಎಂದು ಆಪಾದಿಸುತ್ತಾರೆ ರೋಗಿಗಳನ್ನು ಶುಶ್ರೂಷೆ ಮಾಡುವ ವೈದ್ಯರು.

ಕಾಶ್ಮೀರದಲ್ಲಿ 'ಪೆಲೆಟ್ ಗನ್' ಸೃಷ್ಟಿಸಿರುವ ಅಂಧಕಾರ; ನಿಲ್ಲದ ಹಿಂಸಾಚಾರ

ಶ್ರೀನಗರದ ಆಸ್ಪತ್ರೆಯಲ್ಲಿ ಕುಳಿತುಕೊಂಡರೆ ನೋವಿನ ಆಕ್ರಂದನ, ಪರಿಸ್ಥಿತಿಯ ತೀವ್ರತೆ ಅರ್ಥವಾಗುತ್ತದೆ. ಇಲ್ಲಿ ದೃಷ್ಠಿ ಕಳೆದುಕೊಳ್ಳಲು ಸಿದ್ಧವಾದ, ದೃಷ್ಠಿಯನ್ನು ಕಳೆದುಕೊಂಡ ಹಲವರಿದ್ದಾರೆ. ಶಬ್ಬೀರ್ ಅಹಮದ್ ದಾರ್ ಎಂಬ 17 ವರ್ಷದ ಬಾಲಕ ಕಣ್ಣು ಕಳೆದುಕೊಳ್ಳುವ ಹಾದಿಯಲ್ಲಿದ್ದಾನೆ. ಆತನ ಕಣ್ಣಗೆ ತೀವ್ರ ಸ್ವರೂಪದ ಗಾಯವಾಗಿದೆ. “ನಾನು ನನ್ನ ಗೆಳೆಯನ ಮನೆಗೆ ಹೊರಟಿದ್ದೆ. ಆಗ ಯಾವುದೋ ಗಟ್ಟಿಯಾದ ವಸ್ತು ಬಂದು ನನ್ನ ಕಣ್ಣಿಗೆ ಬಿತ್ತು,” ಎನ್ನುತ್ತಾನೆ ಶಬ್ಬೀರ್. ಪಕ್ಕದ ಬೆಡ್ಡಿನಲ್ಲಿ ಮಲಗಿರುವ 16 ವರ್ಷದ ಆಮಿರ್ ಫಯಾಜ್ ಗನೈ. ಆದರೆ ಗನೈ ಅದೃಷ್ಟಶಾಲಿ; “ಆತನ ಕಣ್ಣಿಗೆ ಏನೂ ಆಗಿಲ್ಲ, ಸರಿಯಾಗುತ್ತದೆ,” ಎನ್ನುತ್ತಿದ್ದಾರೆ ವೈದ್ಯರು.

ಕಣ್ಣಿನ ಸಮಸ್ಯೆಯ ಆಘಾತಕಾರಿ ಸ್ಥಿತಿಯಿಂದಾಗಿ ದೆಹಲಿಯ ಭಾರತೀಯ ವೈದ್ಯಕೀಯ ಮಹಾವಿದ್ಯಾಲಯದ (ಎಐಐಎಮ್ಎಸ್) ಮೂವರು ಕಣ್ಣಿನ ತಜ್ಞರನ್ನು ಶ್ರೀನಗರಕ್ಕೆ ಕರೆಸಿಕೊಳ್ಳಲಾಗಿದೆ.

ತಂಡವನ್ನು ಮುನ್ನಡೆಸುತ್ತಿರುವ ಡಾ. ಸುದರ್ಶನ್ ಕುಮಾರ್, “ಕಣ್ಣಿನ ಗಾಯಗಳು ತೀವ್ರ ಸ್ವರೂಪದ್ದಾಗಿವೆ,” ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಇದು ಯುದ್ಧದ ರೀತಿಯ ಪರಿಸ್ಥಿತಿ ಎಂಬುದು ಅವರ ಅಭಿಪ್ರಾಯ.

ಕಣ್ಣು ಕಳೆದುಕೊಂಡು, ಕಣ್ಣಿನ ಗಾಯದೊಂದಿಗೆ ಬದುಕಬೇಕಾದವರು ಎದುರಿಸುವ ಸಮಸ್ಯೆಗಳು ನೂರಾರು. ಆರ್ಥಿಕ ಸಮಸ್ಯೆಗಳ ಜೊತೆಗೆ ಆಘಾತ, ಖಿನ್ನತೆಯಿಂದ ಬಳಲುವವರೇ ಜಾಸ್ತಿ. ಹೆಚ್ಚಿನ ಜನ ಇವತ್ತು ಕಾಶ್ಮೀರದ ಹೊರಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಚಿಕಿತ್ಸೆಯ ವೆಚ್ಚ ಭರಿಸುವ ಶಕ್ತಿ ಅವರಿಗಿಲ್ಲ. ಜೊತೆಗೆ ಕಳೆದುಕೊಂಡ ದೃಷ್ಟಿಯನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ.

ಆಬಿದ್ ಮಿರ್ ಎಂಬ 15 ವರ್ಷದ ಬಾಲಕನ ಚಿಕಿತ್ಸೆಯನ್ನು ಪಂಜಾಬಿನ ಅಮೃತಸರದಲ್ಲಿ ಕೊಡಿಸಲಾಗುತ್ತಿದೆ. ಆತ ಬಂಡುಕೋರ ವನಿಯ ಅಂತಿಮ ಯಾತ್ರೆಯಿಂದ ಮನೆಗೆ ಮರಳುತ್ತಿದ್ದಾಗ ಪೆಲ್ಲೆಟ್ ದಾಳಿಗೆ ಗುರಿಯಾದ ಹುಡುಗ. ಇದೀಗ ಆತನ ಚಿಕಿತ್ಸೆಗಾಗಿ ಮನೆಯವರು ಬೇಡುವ ಪರಿಸ್ಥಿತಿ ಬಂದಿದೆ. ಆತನ ಚಿಕಿತ್ಸೆಗೆ 2 ಲಕ್ಷ ವೆಚ್ಚವಾಗಲಿದೆಯಂತೆ.

ಹಯಾತ್ ದರ್ ಎಂಬ ಇನ್ನೊಬ್ಬ 2013ರಲ್ಲಿ ಪದವಿ ಅಂತಿಮ ವರ್ಷದಲ್ಲಿದ್ದಾಗ ಈ ರೀತಿ ಪೆಲ್ಲೆಟ್ ದಾಳಿಗೆ ಗುರಿಯಾಗಿದ್ದಾತ. “ಇದಾದ ನಂತರ ನಾನು ಐದು ವಿವಿಧ ಶಸ್ತ್ರ ಚಿಕಿತ್ಸೆಗಳಿಗೆ ಗುರಿಯಾಗಬೇಕಾಯಿತು,” ಎನ್ನುತ್ತಾನೆ ಆತ. “ನನ್ನ ಎಡಗಣ್ಣಿನಲ್ಲಿ ಸ್ವಲ್ಪ ದೃಷ್ಟಿ ಬರುವವರೆಗೆ, ನಾನು ಸುಮಾರು ಒಂದು ವರ್ಷದವರೆಗೆ ಪೂರ್ತಿ ಕುರುಡಾಗಿಯೇ ಇರಬೇಕಾಯಿತು. ನಾನು ದೇವರ ಬಳಿ ಕೇಳುವುದು ಇಷ್ಟೇ. ಈ ರೀತಿ ನರಕದಲ್ಲಿ ಬದುಕುವುದಕ್ಕಿಂತ ಸಾಯುವುದೇ ಮೇಲು”.

ಕೃಪೆ: ಬಿಬಿಸಿ