ಗುರುವಿಗೇ ತಿರುಮಂತ್ರ: ರಷ್ಯಾದ ಲ್ಯಾಬೊಂದರಿಂದ ರೋಬೊಟ್ ಎಸ್ಕೇಪ್!
ಸಮಾಚಾರ

ಗುರುವಿಗೇ ತಿರುಮಂತ್ರ: ರಷ್ಯಾದ ಲ್ಯಾಬೊಂದರಿಂದ ರೋಬೊಟ್ ಎಸ್ಕೇಪ್!

ನೀವು

ರಜನೀಕಾಂತ್ ಅಭಿನಯ ರೋಬೋ ಚಿತ್ರ ನೋಡಿರಬಹುದು. ರೋಬೋಟ್ ಒಂದನ್ನು ತಯಾರಿಸಿದ ವಿಜ್ಞಾನಿ ಬಳಿಕ ಆ ರೋಬೋಟ್ ತಾಳಕ್ಕೆ ಕುಣಿಯಬೇಕಾದ ಅನಿವಾರ್ಯತೆಯ ಕಥೆಯನ್ನು ಹೊಂದಿರುವ ಚಿತ್ರವದು. ನಿರ್ದೇಶಕನ ಕಲ್ಪನೆಗೆ ಪ್ರೇಕ್ಷಕರು ಸಂಪೂರ್ಣ ತಲೆಬಾಗಿದ್ದರು. ಆದರೆ ಅಂದು ಕಲ್ಪನೆ ಅಂದುಕೊಂಡಿದ್ದು ಇಂದು ವಾಸ್ತವದಲ್ಲಿ ನಿಜವಾಗಿದೆ. ರಷ್ಯಾದ ಲ್ಯಾಬೊಂದರಿಂದ ರೋಬೋಟ್ ಒಂದು ತಪ್ಪಿಸಿಕೊಂಡಿದೆ. ಘಟನೆ ಸುದ್ದಿಯಾಗುತ್ತಿದ್ದಂತೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಘಟನೆ ಏನಪ್ಪ ಅಂದರೆ, ರಷ್ಯಾದ ಪ್ರೊಮೊ ಬೋಟ್ ಎಂಬ ಕಂಪನಿ ಅತೀ ಬುದ್ಧವಂತ ರೋಬೊಟ್ ಒಂದನ್ನು ನಿರ್ಮಿಸುವ ಯೋಜನೆ ಕೈಗೆತ್ತಿಕೊಂಡಿತ್ತು. ಶಾಪಿಂಗ್ ಮಾಲ್ಗಳಲ್ಲಿ, ಅಂಗಡಿ ಮಳಿಗೆಗಳಲ್ಲಿ ಗ್ರಾಹಕರಿ ಕೇಳುವ ತರಹೇವಾರಿ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಹೊಂದಿರುವ ರೋಬೊಟ್ ಇನ್ನೂ ಮಾರುಕಟ್ಟೆಗೆ ಬಿಡುವ ಮುನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಮಯದಲ್ಲಿ ಒಂದು ಯಂತ್ರ ಮಾನವ ತನ್ನ ತರಬೇತುದಾರ ಆಚೆ ಹೋಗಿದ್ದಾಗ ಸೀದಾ ಲ್ಯಾಬ್ ಗೇಟು ದಾಟಿ ಹೊರಬಂದಿದೆ. ವಾಹನಗಳು ಹರಿದಾಡುವ ರಸ್ತೆ ಮಧ್ಯೆ ಬರುತ್ತಿದ್ದಂತೆ ಅದರ ಬ್ಯಾಟೆರಿ ಖಾಲಿಯಾಗಿ ನಿಂತುಕೊಂಡಿದೆ.

ರಸ್ತೆ ನಡುವೆ ನಿಂತ ಈ ರೋಬೊಟ್ ನೋಡಿದ ಜನ ಒಂದು ಕ್ಷಣ ಅಚ್ಚರಿಯಿಂದ ವಾಹನಗಳನ್ನು ನಿಲ್ಲಿಸಿ ನೋಡಲು ಶುರುಮಾಡಿದರು. ಕೊನೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಪೊಲೀಸ್ ಸಿಬ್ಬಂದಿಯೊಬ್ಬರು ಬಂದು ರೋಬೊಟ್ ಅನ್ನು ಪಕ್ಕಕ್ಕೆ ಸರಿಸಿ ದಾರಿ ಮಾಡಿಕೊಟ್ಟರು. ಇಷ್ಟೊತ್ತಿಗೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಲ್ಯಾಬರೋಟರಿ ಕಡೆಯವರು ತಮ್ಮ ಯಂತ್ರಮಾನವನನ್ನು ಮರಳಿ ಗೂಡಿಗೆ ಕರೆದುಕೊಂಡು ಹೋದರು.

ಇದು ಸಲ್ಲಿನ ಮಾಧ್ಯಮಗಳ ಮೂಲಕ ಸುದ್ದಿಯಾಗುತ್ತಿದ್ದಂತೆ ಜನ  ಹೀಗೂ ನಡೆಯುತ್ತಾ ಎಂದು ಅಚ್ಚರಿ ವ್ಯಕ್ತಪಡಿಸಿದರು. ಸಾಮಾಜಿಕ ಜಾಲ ತಾಣಗಳಲ್ಲಿ ಈ ಕುರಿತು ಸ್ವಾರಸ್ಯಕರ ಚರ್ಚೆಗಳು ನಡೆದವು. ಕಂಪನಿ ತನ್ನ ಪ್ರಚಾರಕ್ಕಾಗಿ ಹೀಗೆ ಮಾಡಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದವು.

ಇದು ಪ್ರಚಾರದ ಹಿನ್ನೆಲೆಯಲ್ಲಿ ಹುಟ್ಟಿದ ಸುದ್ದಿನಾ? ಅಥವಾ ಮುಂದೊಂದು ದಿನ ರೋಬೊಟ್ ಪ್ರಪಂಚ ನಮ್ಮನ್ನು ತೆಕ್ಕೆಗೆ ತೆಗೆದುಕೊಳ್ಳುವ ಮುನ್ಸೂಚನೆಯಾ? ಕಾಲವೇ ಹೇಳಬೇಕಿದೆ.