ಬದುಕಿನ ಎಲ್ಲಾ ಆಯಾಮಗಳಲ್ಲಿ ‘ಕುಸ್ತಿ’ ಮಾಡುತ್ತಲೇ ಸಮಸ್ಯೆಗಳನ್ನು ಮೆಟ್ಟಿ ನಿಂತಾಕೆ ಸರ್ಕಾರ್!
ಸಮಾಚಾರ

ಬದುಕಿನ ಎಲ್ಲಾ ಆಯಾಮಗಳಲ್ಲಿ ‘ಕುಸ್ತಿ’ ಮಾಡುತ್ತಲೇ ಸಮಸ್ಯೆಗಳನ್ನು ಮೆಟ್ಟಿ ನಿಂತಾಕೆ ಸರ್ಕಾರ್!

ಆಕೆಗೆ ಆಗ ಹದಿನೈದು ವರ್ಷ. ಆ ಪುಟ್ಟ ವಯಸ್ಸನಲ್ಲಿ ಆಕೆ ಎರಡೆರಡು ಮದುವೆಗಳನ್ನು ನೋಡಬೇಕಾಯಿತು. ಮಾತ್ರವಲ್ಲ ಆ ವಯಸ್ಸಿಗಾಗಲೇ ಆಕೆ ಎರಡು ಮಕ್ಕಳನ್ನು ಹೆತ್ತಿದ್ದರಿಂದ ಅವರನ್ನು ಸಾಕುವ ಜವಾಬ್ದಾರಿಯೂ ಆಕೆಯ ಹೆಗಲೇರಿತ್ತು. ಅಷ್ಟಾಗಿದ್ದರೆ ಇಲ್ಲಿ ನಾವಿವತ್ತು ಈ ಸ್ಟೋರಿಯನ್ನು ನಿಮ್ಮ ಮುಂದಿಡಲು ಕಾರಣಗಳೇ ಇರುತ್ತಿರಲಿಲ್ಲ.

ಆ ಛಲಗಾತಿ ಬಳಿಕ ತೆಗೆದುಕೊಂಡ ನಿರ್ಧಾರ ಹಾಗೂ ನಂತರ ಸಾಧಿಸಿದ ಮೈಲಿಗಲ್ಲು ಬಾಕ್ಸಿಂಗ್ ಲೋಕದ 'ದಿ ಗ್ರೆಟೆಸ್ಟ್' ಮಹಮದ್ ಅಲಿ ನಮ್ಮನ್ನಗಲಿದ ಈ ಸಮಯದಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳುವಂತದ್ದು.ಆಕೆಯ ಹೆಸರು ನೀತು ಸರ್ಕಾರ್. ಊರು ಹರ್ಯಾಣದ ಭಿವಾನಿ. ತನ್ನ ಹದಿಮೂರು ವಯಸ್ಸಿನಲ್ಲಿ ಹೆತ್ತವರ ಒತ್ತಡಕ್ಕೆ ಬಿದ್ದು ಮೂವತ್ತು ವರ್ಷದ ವಿಕಲಚೇತನನ್ನು ಮದುವೆಯಾದಳು. ಆದರೆ ಈ ಸಂಬಂಧ ಒಂದು ವರ್ಷವೂ ಮುಂದುವರೆದಿರಲಿಲ್ಲ. ಹೀಗಾಗಿ ಹದಿನಾಲ್ಕನೇ ವಯಸ್ಸಿಗಾಗುವ ವೇಳೆ ಇನ್ನೊಂದು ಮದುವೆಯಾಗಬೇಕಾದ ಅನಿವಾರ್ಯತೆ ಎದುರಾಯಿತು. ಗಂಡನೂ ನಿರುದ್ಯೋಗಿಯಾಗಿದ್ದರಿಂದ ಎರಡನೆ ಮದುವೆಯಾದರೂ ನೀತುವಿನ ಜೀವನದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ.

ಆದರೆ 2010 ರ ಕಾಮನ್ವೆಲ್ತ್ ಗೇಮ್ಸ್ ನೀತು ಜೀವನಕ್ಕೆ ಹೊಸ ತಿರುವು ನೀಡಿತ್ತು.ಮನೆಯಲ್ಲೇ ಟಿವಿ ನೋಡುತ್ತಿದ್ದ ನೀತು ಅಚಾನಕ್ ಆಗಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕುಸ್ತಿ ಆಡುತ್ತಿದ್ದದನ್ನು ಗಮನಿಸಿದಳು. ತಕ್ಷಣ ತನ್ನ ಬಾಲ್ಯ ಜೀವನದಲ್ಲಿ ಕುಸ್ತಿ ಆಡುತ್ತಿದ್ದ ಕ್ಷಣಗಳು ನೀತುವಿನ ಕಣ್ಮುಂದೆ ಬಂದವು. ತಾನೂ ಕೂಡ ಯಾಕೆ ಮತ್ತೆ ಕುಸ್ತಿಯನ್ನು ಅಭ್ಯಾಸ ಮಾಡಿ ಸಾಧನೆ ಮಾಡಬಾರದು ಎಂಬ ಯೋಚನೆ ಅದಾಗಲೇ ಹರಿದಾಡಿಯಾಗಿತ್ತು. ಯಾವಾಗ ಈ ರೀತಿಯ ಯೋಚನೆ ಮನದಲ್ಲಿ ಮೂಡಿತೋ ನೀತು ಒಂದರೆ ಕ್ಷಣವೂ ತಡಮಾಡಲಿಲ್ಲ. ತನಗಾಗಿ ಮತ್ತು ತನ್ನ ದೇಶಕ್ಕಾಗಿ ಇದರಲ್ಲೇ ನಾನು ಸಾಧನೆ ಮಾಡುತ್ತೇನೆ ಎಂದು ನಿರ್ಧಾರ ಮಾಡಿದಳು.

ಆದರೆ ನೀತುವಿನ ಆ ನಿರ್ಧಾರವನ್ನು ಕಾರ್ಯರೂಪಕ್ಕೆ ಇಳಿಸುವುದು ಅಷ್ಟೊಂದು ಸುಲಭವಾಗಿರಿಲಿಲ್ಲ. ಆದಕ್ಕೆ ಕಾರಣ ಅದಾಗಲೇ ಎರಡು ಮಕ್ಕಳಿಗೆ ಜನ್ಮ ನೀಡಿದ್ದ ನೀತು ತೂಕ 80 ಕೆಜಿಯಷ್ಟಾಗಿತ್ತು.ಕುಸ್ತಿಯಲ್ಲಿ ಮುಂದುವರಿಯಬೇಕಾದರೆ ಮೂವತ್ತು ಕೆಜಿಯಷ್ಟು ತೂಕವನ್ನು ಕಡಿಮೆ ಮಾಡಿಕೊಳ್ಳಬೇಕಾಗಿತ್ತು. ಹೀಗಾಗಿ ನಿತ್ಯವೂ ದೇಹವನ್ನು ಕರಗಿಸಲು ನೀತು ಸುಮಾರು 2-3 ಗಂಟೆಗಳ ಕಾಲ ವರ್ಕೌಟ್ ಮಾಡಬೇಕಿತ್ತು. ಇದರ ಪ್ರತಿಫಲ ಅಂದರೆ 2011ರಲ್ಲಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ, ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಬೆಳ್ಳಿ ಪದಕ, ಅಲ್ಲದೆ ಹಲವಾರು ರಾಷ್ಟ್ರೀಯ ಕ್ರೀಡಾ ಕೂಟಗಳಲ್ಲೂ ಪದಕಗಳ ಸರಮಾಲೆ. ಮಾತ್ರವಲ್ಲ ಬ್ರೆಜಿಲ್ನಲ್ಲಿ ನಡೆದ ಅಂತಾರಾಷ್ಟ್ರೀಯ ಕುಸ್ತಿ ಸ್ಫರ್ಧೆಯಲ್ಲೂ ಭಾರತವನ್ನು ನೀತು ಸರ್ಕಾರ್ ಪ್ರತಿನಿಧಿಸಿದ್ದಳು.

ಬಾಲ್ಯವಿವಾಹದ ಸಂಕೋಲೆಯಲ್ಲಿ ಸಿಲುಕಿಕೊಂಡರೂ ಆಕೆಯ ಛಲ ಆಕೆಯನ್ನು ಕೈ ಬಿಡಲಿಲ್ಲ. ದುರಾದೃಷ್ಟವಶಾತ್ ಭಾರತದಲ್ಲಿ ಬಾಲ್ಯ ವಿವಾಹ ಕಾನೂನು ಕಠಿಣವಾಗಿದ್ದರೂ ಕೂಡ ಅದೆಲ್ಲವನ್ನೂ ಗಾಳಿಗೆ ತೂರಿ ಬಾಲ್ಯ ವಿವಾಹಗಳು ನಡಿಯುತ್ತಲೇ ಇದೆ. ದಾಖಲೆಗಳ ಪ್ರಕಾರ ಭಾರತದಲ್ಲಿ ಶೇಕಡಾ 18 ರಷ್ಟು ಬಾಲಕಿಯರು 15 ವರ್ಷದೊಳಗೇ ಮದುವೆಯಾಗುತ್ತಾರೆ. ಮತ್ತು 47 ಶೇಕಡಾದಷ್ಟು ಮಂದಿ ಬಾಲಕಿಯರು 18 ವರ್ಷವಾಗುವ ಮುನ್ನವೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ಇದರಲ್ಲೂ ಬಹುಸಂಖ್ಯಾತರು ತಮಗೆ ಇಷ್ಟವಿಲ್ಲದೆ ಮನೆಯವರ ಬಲವಂತಕ್ಕಾಗಿ ಮದುವೆಯಾಗುವವರು ಎಂಬುದು ಮತ್ತೊಂದು ಆತಂಕಕಾರಿ ವಿಚಾರ.ಆದರೆ ಈ ಎಲ್ಲಾ ಯುವತಿಯರು ನೀತು ಆಗೋಕೆ ಸಾಧ್ಯನಾ.? ತನ್ನ ಮನೆಯವರು, ಕುಟುಂಬಸ್ಥರೆಲ್ಲಾ ನೀತು ಕುಸ್ತಿ ಪಟು ಆಗ್ತೀನಿ ಅಂದಾಗ ವಿರೋಧಿಸಿದ್ದರು. ಆದರೆ ಅದನ್ನೆಲ್ಲಾ ಮೆಟ್ಟಿ ನಿಂತು ಸಾಧಿಸಿ ತೋರಿಸಿದರು ನೀತು. ಈ ಧೈರ್ಯ ಎಲ್ಲರಲ್ಲೂ ಬರಲು ಸಾಧ್ಯವಿಲ್ಲ. ಆದರೆ ಈಗ ತನ್ನಂತೇ ನೋವನುಭವಿಸುತ್ತಿರುವ ಎಷ್ಟೋ ಮಂದಿಗೆ ನೀತು ಒಂದಿಲ್ಲೊಂದು ರೀತಿಯಲ್ಲಿ ಮಾದರಿ.