ಚಟ್ಟ ಹೊರೋಕೆ ಯಾರಿದ್ದರೇನು?; ಬದುಕು ನೀಗೋಕೆ ಈ ಮೂವರಿದ್ದರೆ ಸಾಕು!
ಸಮಾಚಾರ

ಚಟ್ಟ ಹೊರೋಕೆ ಯಾರಿದ್ದರೇನು?; ಬದುಕು ನೀಗೋಕೆ ಈ ಮೂವರಿದ್ದರೆ ಸಾಕು!

"ನಿಮಗೆ ಸ್ನೇಹಿತರೆಷ್ಟಿದ್ದಾರೆ?"

"5000 ಫೇಸ್ ಬುಕ್ಕಿನಲ್ಲಿ... ಹೊರಗೆ ಒಂದಷ್ಟು ಜನರಿರಬಹುದು..."ಇಂತಹ ಸಂಭಾಷಣೆಗಳು ಸಾಮಾನ್ಯ ಎಂಬಂತಾಗಿರುವ ಕಾಲದಲ್ಲಿ ಸಂಬಂಧಗಳನ್ನು ವ್ಯಾಖ್ಯಾನಿಸುವುದು ಮತ್ತು ಅವುಗಳನ್ನು ಅರ್ಥ ಮಾಡಕೊಳ್ಳುವುದು ದೊಡ್ಡ ಸವಾಲು. ಮನುಷ್ಯ ಎಷ್ಟೇ ಅಂತಮುರ್ಖಿ, ಸ್ವಾರ್ಥಿ ಅನ್ನಿಸಿಕೊಂಡರೂ, ಆಕೆ ಅಥವಾ ಆತ ಸಂಘ ಜೀವಿ.

ಸಂಬಂಧಗಳು ಮನುಷ್ಯನನ್ನು ಇನ್ನಷ್ಟು ಆಳಕ್ಕೆ, ವಿಸ್ತಾರದ ನೆಲೆಗೆ ಕೊಂಡೊಯ್ಯುತ್ತವೆ. ಎಲ್ಲಾ ಸಂಬಂಧಗಳು ಬದುಕನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ. ಕೆಲವು ಸಂಬಂಧಗಳು ಮಾತ್ರ ವಿಶೇಷ ಸ್ಥಾನಗಳನ್ನು ಪಡೆದುಕೊಳ್ಳುತ್ತವೆ. ನಿಮಗೆ ಎಷ್ಟೇ ರಕ್ತ ಸಂಬಂಧಗಳಿರಲಿ, ಸ್ನೇಹ ಬಂಧಗಳಿರಲಿ, ಈ ಕೆಳಗಿನ ಮೂರು ಕೆಟಗರಿಯ ಸಂಬಂಧಗಳು ನಿಮ್ಮನ್ನು ನೀವಾಗಿಸುತ್ತವೆ ಮತ್ತು ನಿಮ್ಮ ಬದುಕಿಗೆ ಹೊಸ ಅರ್ಥವನ್ನು ಕಲ್ಪಿಸುವಂತೆ ಮಾಡಿರುತ್ತವೆ.

ಮೊದಲನೆಯ ಕೆಟಗರಿ ಆತ್ಮ ಸಂಗಾತಿಗಳು. ಇಂತಹದೊಂದು ಸಂಬಂಧದ ಅನುಭವ ವಯಸ್ಕರಾದ ಎಲ್ಲರಿಗೂ ಆಗಿರುತ್ತದೆ. ತೀರಾ ಬೆರಳೆಣಿಕೆಯ ಸಂಖ್ಯೆಯಲ್ಲಿ ಸಿಗುವ ಈ ಆತ್ಮ ಸಂಗಾತಿಗಳ ಜತೆ ಇರುವಾಗ ಸುರಕ್ಷಿತ ಭಾವವೊಂದು ಮೂಡುತ್ತದೆ. ಇವರ ಜತೆ ಜಗಳ, ಗಲಾಟೆಗಳಾದರೂ, ಸಂಬಂಧದ ತಿರುವಿನಲ್ಲಿ ಎಲ್ಲವೂ ನಗಣ್ಯ ಅನ್ನಿಸಿ ಬಿಡುತ್ತದೆ.

ಇವರಿಂದ ನೀವು ಎಷ್ಟು ದಿನ ದೂರವಿದ್ದರೂ, ಮತ್ತೆ ಭೇಟಿಯಾದಾಗ ಎಲ್ಲವನ್ನೂ ಮರೆತು ಒಂದಾಗುತ್ತಾರೆ. ಅದಕ್ಕಿಂತ ಹೆಚ್ಚಾಗಿ ನಿಮ್ಮದೇ ಆಲೋಚನೆಯನ್ನು ಅವರೂ ಹಂಚಿಕೊಂಡಿದ್ದಾರೇನೋ ಅನ್ನಿಸಿ ಬಿಡುತ್ತಾರೆ. ಅಂತಹ ಸಂಬಂಧಗಳಲ್ಲಿ ಲಿಂಗ ಬೇಧ ಕೂಡ ಇರುವುದಿಲ್ಲ. ತಾಯಿ, ತಂಗಿ, ಅಣ್ಣ, ಗೆಳೆಯ, ಗೆಳತಿ ಹೀಗೆ ಯಾರು ಬೇಕಾದರೂ ಆಗಬಹುದು. ಎಲ್ಲಾ ಸಂಬಂಧಗಳು ಕೈಕೊಟ್ಟಾಗ ನೆನಪಿಸಿಕೊಳ್ಳುವ ಸಂಬಂಧಗಳನ್ನು ನೀವು ಆತ್ಮ ಸಂಗಾತಿಗಳು ಎಂದು ಕರೆಯಬಹುದು.

ಎರಡನೇಯ ತರಹದ ಸಂಬಂಧಗಳು ನಿಮ್ಮದೇ ಪ್ರತಿಬಿಂಬದಂತೆ ಕೆಲಸ ಮಾಡುತ್ತವೆ. ನಿಮ್ಮ ತಪ್ಪು, ಒಪ್ಪುಗಳನ್ನು ಮುಖಕ್ಕೆ ಹೊಡೆದ ಹಾಗೆ ಹೇಳುವ ಮೂಲಕ ನಿಮ್ಮ ಹಾದಿಯನ್ನು ಸರಿದಾರಿಯಲ್ಲಿ ನಡೆಸಲು ಇವು ಸಹಾಯಕ ಮಾಡುತ್ತಿರುತ್ತವೆ. ಇವುಗಳನ್ನು ಬಿಂಬಗಳು ಎಂದು ಕರೆಯಬಹುದು. ಇವರ ಜತೆ ಹೆಚ್ಚು ವಾದ ವಿವಾದಗಳು ನಡೆಯುತ್ತಿದ್ದರೂ, ಆಳದಲ್ಲಿ ಕಾಳಜಿ ಮಾತ್ರವೇ ಕೆಲಸ ಮಾಡುತ್ತಿರುತ್ತದೆ. ಒಮ್ಮೊಮ್ಮೆ ಕರ್ಮ, ಇವರ ಸಹವಾಸ ಸಾಕು ಅನ್ನಿಸಿದರೂ ಮತ್ತೆ ಒಟ್ಟಾಗುವ ಈ ಸಂಬಂಧಗಳು ಎಲ್ಲರ ಬದುಕಿನಲ್ಲಿ ಅತ್ಯಗತ್ಯ. ಸಾಕ್ಷಿ ಪ್ರಜ್ಞೆಯಂತೆ ಇರುವ ಸಂಬಂಧಗಳನ್ನು ಉಳಿಸಿಕೊಳ್ಳುವುದು ಸವಾಲು ಮತ್ತು ಅಗತ್ಯ.

ಮೂರನೇ ವಿಭಾಗ ಪೋಷಕ ಪಾತ್ರಗಳದ್ದು. ಪೋಷಕರು ಎಂದರೆ ತಂದೆ ತಾಯಿಯೇ ಆಗಬೇಕು ಅಂತೇನಿಲ್ಲ. ಇವರು ನಿಮ್ಮ ಜತೆ ಎಲ್ಲಾ ಕಾಲಕ್ಕೂ ಮಾರ್ಗದರ್ಶಕರಾಗಿ ಇರುತ್ತಾರೆ. ಅವರು ತೋರಿಸುವ ಹಾದಿಯಲ್ಲಿ ಪ್ರಾಮಾಣಿಕತೆ ಇರುತ್ತದೆ. ನಿಮ್ಮ ಬೆಳವಣಿಗೆಯ ಹಂತಗಳಲ್ಲಿ ಬೆನ್ನು ತಟ್ಟುವ ಮೂಲಕ ಪ್ರೋತ್ಸಾಹಗಳನ್ನು ನೀಡುತ್ತಿರುತ್ತಾರೆ. ಇಂತವರಿದ್ದರೆ, ಸಂಕಷ್ಟಗಳು ಎದುರಾದಾಗ ನಿರಾಯಾಸವಾಗಿ ದಾಟಿಕೊಳ್ಳಬಹುದು ಎಂಬ ಭಾವವನ್ನು ಬೆಳೆಸಿರುತ್ತಾರೆ. ಸ್ಫೂರ್ತಿಗೆ, ಮಾರ್ಗದರ್ಶನಕ್ಕೆ, ತಾಯಿತನಕ್ಕೆ ಹಾಗೂ ಕಣ್ಣೀರು ಒರೆಸಲು ಇಂತಹ ಸಂಬಂಧಗಳು ಇದ್ದರೆ ಬದುಕು ನೀಗುವುದು ಸುಲಭವಾಗುತ್ತದೆ.

ಇವುಗಳ ಚೌಕಟ್ಟಿನಲ್ಲಿಯೇ ಬದುಕಿನ ಎಲ್ಲಾ ಸಂಬಂಧಗಳು ಕೆಲಸ ಮಾಡುತ್ತವೆ. ಇದರ ಆಚೆಗೂ ಕೆಲವು ಸಂಬಂಧಗಳು ಹುಟ್ಟಿಕೊಳ್ಳಬಹುದು, ಬೆಳೆಯಬಹುದು. ಆದರೆ, ಅಂತಿಮವಾಗಿ ಅವು ಮೂರರಲ್ಲಿ ಒಂದು ಅಥವಾ ಮೂರೂ ಆಗಿ ಪರ್ಯಾವಸನಗೊಳ್ಳುತ್ತವೆ.ಈಗ ಹೇಳಿ, ನಿಮಗಿರುವ ಸಂಬಂಧಗಳಲ್ಲಿ ಈ ಮೂರು ವಿಭಾಗಗಳ ಸಂಬಂಧಗಳು ಇವೆಯಾ ಅಂತ. ಇದ್ದರೆ ಉಳಿಸಿಕೊಳ್ಳಿ, ಇಲ್ಲದಿದ್ದರೆ ಬೆಳೆಸಿಕೊಳ್ಳಿ...