ದೇಶ ಸುತ್ತಿ, ಕೋಶ ಬರೆಯಲು ಹೊರಟ ಈತ ಕಾಲಿಗೇ ಚಕ್ರ ಕಟ್ಟಿಕೊಂಡಿದ್ದ!
ಸಮಾಚಾರ

ದೇಶ ಸುತ್ತಿ, ಕೋಶ ಬರೆಯಲು ಹೊರಟ ಈತ ಕಾಲಿಗೇ ಚಕ್ರ ಕಟ್ಟಿಕೊಂಡಿದ್ದ!

ಇದು ಸೈಕಲ್‌ ಸವಾರನೊಬ್ಬನ ಕತೆ.

ಮೈಕ್ ಬೋಲ್ಸ್ ನ ಈ ಸಾಹಸವನ್ನು ಹುಚ್ಚಾಟ ಅನ್ನಬೇಕೋ ಸಾಧನೆ ಅನ್ನಬೇಕೋ ತಿಳಿಯದು. ಯಾಕೆಂದರೆ ತನ್ನಷ್ಟಕ್ಕೆ ತಾನು ದುಡಿಯುತ್ತಾ ಬೇಕಾದಷ್ಟು ಹಣವನ್ನು ಸಂಪಾದಿಸ್ತಾ ಇದ್ದಾತನಿಗೆ ಇದ್ದಕ್ಕಿದ್ದಂತೆ ಇದೆಲ್ಲದರ ಮೇಲೆ ಬೇಸರವುಂಟಾಗಲು ಆರಂಭಿಸಿತು. ಸುಂದರವಾದ ಬದುಕನ್ನು ಕೇವಲ ಹಣವನ್ನು ಸಂಪಾದನೆ ಮಾಡೋದಿಕ್ಕಾಗಿ ಮಾತ್ರ ವ್ಯಯಿಸುತ್ತಿದ್ದೇನೆ ಎಂದು ಅನ್ನಿಸತೊಡಗಿತು. ಹೀಗೆ ಅನ್ನಿಸಲು ಆರಂಭಿಸಿದ್ದೇ ತಡ. ಬೋಲ್ಸ್ ತನ್ನ ಅಂತರಂಗಕ್ಕೆ ಮೋಸ ಮಾಡಲು ತಯಾರಿರಲಿಲ್ಲ. ತನ್ನ ಸೈಕಲ್ ಏರಿ ಪ್ರಯಾಣ ಆರಂಭಿಸಿದ.

ಆತನ ಪ್ರಯಾಣ ಅಂದರೆ ಅಂತಿಂತದ್ದಲ್ಲ. ಅದು ಸೈಕಲ್ನಲ್ಲಿ ಪ್ರಪಂಚ ಪರ್ಯಟನೆ. ಆರಂಭಿಸಿದ ಪ್ರಯಾಣ ನಿಲ್ಲಿಸಲಿಲ್ಲ. ಆರು ವರ್ಷ, ಆರು ತಿಂಗಳು. 60000 ಸಾವಿರ ಕಿಲೋ ಮೀಟರ್. 38 ರಾಷ್ಟ್ರಗಳು. ಇಷ್ಟನ್ನು ಸುತ್ತಿಬಂದಿರುವ ಬೋಲ್ಸ್ ತನ್ನ ಪ್ರಯಾಣದ ಪ್ರತಿ ಅನುಭವಕ್ಕೂ ಅಕ್ಷರ ರೂಪಕೊಡಲು ಈಗ ಮನೆ ಸೇರಿಕೊಂಡಿದ್ದಾನೆ.

2009 ರ ಜೂನ್ ತಿಂಗಳು ಅದು. ವಿಶ್ವಕ್ಕೆ ವಿಶ್ವವೇ ಆರ್ಥಿಕ ಹಿಂಜರಿತಕ್ಕೆ ಸಿಲುಕಿ ನಲಗಿ ಹೋಗಿತ್ತು, ಆದರೆ ಬೋಲ್ಸ್ ಮಾತ್ರ ಇದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಹೊರಟು ಬಿಟ್ಟಿದ್ದ. ತನ್ನ ಪರ್ಯಟನೆಗೆ ಕೆನಡಾದ ತನ್ನ ಹುಟ್ಟೂರು ರೆಜಿನಾವನ್ನು ಆರಿಸಿಕೊಳ್ಳುವ ಬದಲು ಅಲ್ಲಿಂದ ಸುಮಾರು ನೂರ ಇಪ್ಪತ್ತು ಮೈಲಿ ದೂರದ ಆರ್ಕ್ಟಿಕ್ ಸರ್ಕಲನ್ನು ಆರಿಸಿದ. ಆರಂಭವಾಯಿತು ಮೈಕ್ ಬೋಲ್ಸ್ನ ಮಹಾಯಾತ್ರೆ.

ಕೆನಡಾದ ಅಲಸ್ಕಾ ಸಮುದ್ರ ತೀರದಲ್ಲಿ ಬೋನ್ಸ್ ಪ್ರಯಾಣ ಮುಂದುವರಿಯಿತು. ಕೆನಡಾ ಪೂರ್ತಿ ಸುತ್ತಲು ಆತನಿಗೆ ನಾಲ್ಕು ತಿಂಗಳು ಬೇಕಾಯಿತು. ಆತನ ಮುಂದಿನ ಗುರಿ ಇದ್ದದ್ದು ಯೂರೋಪ್. ಸುಮಾರು 25 ದಿನಗಳ ಸಮುದ್ರಯಾನದ ಮೂಲಕ ಬೋನ್ಸ್ ನೆದರ್ಲ್ಯಾಂಡ್‌ನ ರೋಟರ್ಡ್ಯಾಂ ಮೂಲಕ ಯೂರೋಪ್ ಪ್ರವಾಸ ಆರಂಭಿಸಿದ. ಬಳಿಕ ಫ್ರಾನ್ಸ್, ಪೋರ್ಚುಗಲ್, ಸ್ಪೇನ್ ಅನ್ನುತ್ತಾ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಸುತ್ತಾಡುತ್ತಾ ಏಷ್ಯಾ, ಹಾಗೂ ಅಲ್ಲಿಂದ ಆಸ್ಟ್ರೇಲಿಯಾ ಹಾಗೂ 2015 ರ ಸಪ್ಟೆಂಬರ್ ವೇಳೆಗೆ ನ್ಯೂಜಿಲ್ಯಾಂಡ್ ಪ್ರವಾಸವನ್ನೂ ಬೋಲ್ಸ್ ಮುಗಿಸಿದ್ದ. ನ್ಯೂಜಿಲ್ಯಾಂಡ್ ನ ಆಕ್ಲೆಂಡ್ ನಿಂದ ಸ್ಯಾನ್ ಪ್ರಾನ್ಸಿಸ್ಕೋ ಗೆ ಕಡೆಯ ಪ್ರಯಾಣವನ್ನು ಮಾಡಿದ.

ಹೀಗೇ ಪ್ರಪಂಚವನ್ನು ಸುತ್ತುವ ಕನಸನ್ನು ಮೈಕ್ ಬೋಲ್ಸ್ ನಿಜಕ್ಕೂ ಪೂರೈಸಿದ್ದ, ಆದರೆ ಆತನ ಪ್ರಯಾಣದಲ್ಲಿ ಆತ ಹಿಮ್ಮೆಟ್ಟಲು ನೂರಾರು ಕಾರಣಗಳು ಇದ್ದವು. ಅದೆಲ್ಲವನ್ನೂ ತನ್ನ ಛಲದಿಂದಲೇ ಬೋಲ್ಸ್ ಎದುರಿಸಿದ್ದ ಎಂದರೆ ನಂಬಲೇ ಬೇಕು.

ದೇಶ ಸುತ್ತಿ, ಕೋಶ ಬರೆಯಲು ಹೊರಟ ಈತ ಕಾಲಿಗೇ ಚಕ್ರ ಕಟ್ಟಿಕೊಂಡಿದ್ದ!

ವಿಶ್ವವನ್ನು ಬೈಕ್ ನಲ್ಲಿ ಸುತ್ತಬೇಕೆಂಬ ಆತನ ಸುಂದರ ಕನಸು ನನಸಾಗಬೇಕಾದರೆ ಆತ ಅನೇಕ ಬಾರಿ ಅಕ್ಷರಶಃ ಸಾವಿನ ಕದ ತಟ್ಟಿದ್ದ. 13 ಬಾರಿ ಅಪಘಾತಗಳಾಗಿ ಗಂಭೀರನಾಗಿ ಗಾಯಗೊಂಡಿದ್ದ. ಬೋಸ್ನಿಯಾದ 43 ಡಿಗ್ರಿ ಸೆಲ್ಸಿಯಸ್ ನಷ್ಟು ರಣ ಬಿಸಿಲಿನಿಂದ ಹಿಡಿದು ಚೀನಾದ ಮೈನಸ್ 16 ಡಿಗ್ರಿ ಸೆಲ್ಸಿಯಸ್ ನಷ್ಟು ಚಳಿಗೂ ಹಿಮ್ಮೆಟ್ಟಲಿಲ್ಲ. ಇಂಡೋನೇಶಿಯಾದಲ್ಲಿ ಪ್ರಯಾಣಿಸುವಾಗ ಬಾಧಿಸಿದ ಡೆಂಗ್ಯೂ ಜ್ವರ ಹಿಂಡಿ ಹಿಪ್ಪೆ ಮಾಡಿದ್ರೂ ಅಂಜಲಿಲ್ಲ. ಉಜ್ಬೇಕಿಸ್ತಾನದಲ್ಲಿ ಕಳ್ಳತನವಾದ್ರೂ ಎದೆಗುಂದಲಿಲ್ಲ. ಕಡೆಗೆ ಆಸ್ಟ್ರೇಲಿಯಾದಲ್ಲಿ ಐರ್ ಪೆನಿನ್ಸುಲಾ ಸಾಗರದಲ್ಲಿ ಎದ್ದ ಚಂಡಮಾರುತದ ವಿರುದ್ಧವೂ ಗೆದ್ದು ಬಂದಿದ್ದ ಮೈಕ್ ಬೋಲ್ಸ್.

ಹೀಗೇ ಸಾಲು ಸಾಲು ಸವಾಲುಗಳು ಅಡೆತಡೆಗಳು ಮೈಕ್ ಬೋಲ್ಸ್ ಮುಂದಿದ್ದವು. ಆದರೆ ಪ್ರತೀ ಬಾರಿಯೂ ಆತನನ್ನು ಗೆಲ್ಲಿಸಿದ್ದು ಆತನ ಇಚ್ಛಾ ಶಕ್ತಿ, ಹಾಗೂ ಆತನ ದೃಢತೆ. ಅಂದುಕೊಂಡ ಅಂತಿಮ ಗುರಿಯನ್ನು ತಲುಪಿದ ನಂತರವೇ ಮನೆಗೆ ಹಿಂದಿರುಗುತ್ತೇನೆಂಬ ಛಲ ಸದೃಢವಾಗಿ ಆತನ ಮನಸ್ಸಿನಲ್ಲಿ ಮೂಡಿ ಆಗಿತ್ತು. ಕಡೆಗೂ ಆತ ಗೆದ್ದು ಬಿಟ್ಟ. ಜಗತ್ತನ್ನು ಮಾತ್ರವಲ್ಲ. ಬದುಕನ್ನು ಕೂಡ...