ಕಾಲೇ ಕಂಬ, ದೇಹವೇ ದೇಗುಲ: ಕುಂಚ ಹಿಡಿದ ಕೈಗೆ ನಗ್ನ ದೇಹವೇ ಇಲ್ಲಿ ಕ್ಯಾನ್ವಾಸ್!
ಸಮಾಚಾರ

ಕಾಲೇ ಕಂಬ, ದೇಹವೇ ದೇಗುಲ: ಕುಂಚ ಹಿಡಿದ ಕೈಗೆ ನಗ್ನ ದೇಹವೇ ಇಲ್ಲಿ ಕ್ಯಾನ್ವಾಸ್!

ದೇಹವನ್ನು ಆರೋಗ್ಯಪೂರ್ಣವಾಗಿ ಹೇಗೆಲ್ಲ ಬಳಸಿಕೊಳ್ಳಬಹುದು? ಈ ಪ್ರಶ್ನೆಗೆ ಆಸ್ಟ್ರಿಯಾ ದೇಶದ ಉತ್ಸವ ‘ಬಾಡೀಸ್ ಆಂಡ್ ಬೀಟ್ಸ್’ನಲ್ಲಿ ಉತ್ತರ ಸಿಗುತ್ತದೆ. ತರುಣಿಯರ ಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸುವ ಜಾಗತಿಕ ಜಾತ್ರೆ ಇದು. ಇಲ್ಲಿ ಕುಂಚ ಹಿಡಿದ ವರ್ಣ ಚಿತ್ರಕಾರರಿಗೆ ಯುವತಿಯರು ದೇಹವೇ ಕ್ಯಾನ್ವಾಸ್.

ಯುರೋಪ್ ಖಂಡದ ಪುಟ್ಟ ರಾಷ್ಟ್ರ ಆಸ್ಟ್ರಿಯಾದಲ್ಲಿ ನಡೆಯುವ ಪ್ರಮುಖ ಹಬ್ಬ ಇದು. ಇಲ್ಲಿನ ಟರ್ಕೋಯಿಸ್ ಕಡಲಿನಿಂದ ಸುತ್ತುವರಿದ ಪೋರ್ಟ್ಸ್ ಚಚ್ ದ್ವೀಪದಲ್ಲಿ ನಡೆಯುವ 6 ದಿನಗಳ ರಂಗಿನ ಹಬ್ಬವಿದು. ಇನ್ನೇನು ಜೂನ್ 28 ರಿಂದ ಜುಲೈ 3ರವರೆಗೆ 19ನೇ ‘ಬಾಡೀಸ್ ಆಂಡ್ ಬೀಟ್ಸ್’ ಉತ್ಸವ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಭರ್ಜರಿ ತಯಾರಿ ಆರಂಭವಾಗಿದೆ. ಇಲ್ಲಿ ಯುವತಿಯರ ದೇಹವೇ ಕಲಾತ್ಮಕತೆಯ ವಸ್ತು.

ಜಗತ್ತಿನಲ್ಲಿ ಬಾಡಿ ಪೇಂಟಿಗ್ ನಡೆಯುವ ನೂರಾರು ಜಾತ್ರೆಗಳು ಜರುಗುತ್ತವೆ. ಆದರೆ ‘ಬಾಡೀಸ್ ಆಂಡ್ ಬೀಟ್ಸ್’ ಹಾಗಲ್ಲ. ಬಾಡಿ ಪೇಂಟಿಂಗ್ನ ಸುತ್ತ ಸಂಕರಗೊಂಡ ಸಂಸ್ಕೃತಿಯ ವಿಶೇಷ ಹಬ್ಬ ಇದು. ಇಲ್ಲಿ ಏನಿದೆ? ಏನಿಲ್ಲ? ಎನ್ನುವಂತಿಲ್ಲ. ನಗ್ನ ಮಾಡೆಲ್ಗಳ ಫೋಟೋ ತೆಗೆಯುವ ಸ್ಪರ್ಧೆಯಿಂದ ಹಿಡಿದು ಹುಡುಗಿಯರ ಮೈ ಮೇಲೆ ಚಿತ್ರ ಬಿಡಿಸುವಾಗ ಯಾವ ರಾಸಾಯನಿಕ ಬಳಸಿದ ಬಣ್ಣಗಳು ಸೂಕ್ತ ಎನ್ನುವ ಸೆಮಿನಾರ್ವರೆಗೆ, ಈ ಹಬ್ಬ ಹರವು ವಿಸ್ತಾರಗೊಂಡಿದೆ.

ಇಲ್ಲಿ ಆರು ದಿನಗಳಲ್ಲಿ 65ಕ್ಕೂ ಮಿಕ್ಕಿ ವರ್ಕ್ ಶಾಪ್ಗಳು, ಸಂವಾದಗಳು, ಪ್ರದರ್ಶನಗಳು ಏರ್ಪಡುತ್ತವೆ. ಎಲ್ಲಾ ವಿಷಯಗಳ ಹಾಟ್ ಟಾಪಿಕ್,ಅದು ಬೆತ್ತಲೆ ದೇಹದ ಮೇಲಿನ ಕಲಾತ್ಮಕತೆ ಅಂತ ಬಿಡಿಸಿ ಹೇಳಬೇಕಾಗಿಲ್ಲ. ಎಲ್ಲರಿಗೂ ಮುಕ್ತ ಪ್ರವೇಶವಿರುವ ಈ ಹಬ್ಬದ ಪಾಸ್ ದರ ಭಾರತೀಯ ಬೆಲೆಯಲ್ಲಿ ಸುಮಾರು ಒಂದೂವರೆ ಸಾವಿರದಿಂದ 32 ಸಾವಿರವರೆಗೆ ಬೆಲೆಬಾಳುತ್ತದೆ. ಕಾಳ ಸಂತೆಯಲ್ಲಿ ಲಕ್ಷ ದಾಟಿದರೂ ಆಶ್ಚರ್ಯವಿಲ್ಲ.

ಇಡೀ ಹಬ್ಬದ ವಿಶೇಷ ಅಂದರೆ ಮುಕ್ತ ವಾತಾವರಣ. ಇಲ್ಲಿ ಯಾರೂ ಬೇಕಾದರೂ ಕುಂಚ ಹಿಡಿಯಬಹುದು. ಇದಕ್ಕಾಗಿ ಮಾಡೆಲ್ಗಳನ್ನು ಅವರೇ ಆರಿಸಿ ಕೊಡುತ್ತಾರೆ. ನೀವು ಹೇಳಿದಷ್ಟು ಈ ಮಾಡೆಲ್ಗಳು ನಗ್ನರಾಗಲು ತಯಾರಾಗೇ ಬಂದಿರುತ್ತಾರೆ. ಆದರೆ ಕುಂಚ ಹಿಡಿದು ಬೆತ್ತಲೆ ಮೈಯಲ್ಲಿ ಚಿತ್ತಾರ ಬಿಡಿಸಬೇಕೆಂದರೆ 22 ಸಾವಿರ ಪಾವತಿಸಬೇಕು. ಮಾಡೆಲ್ಗಳಾಗಿ ಚಿತ್ರಕಾರನಿಗೆ ಕ್ಯಾನ್ವಾಸ್ ಆಗಬೇಕೆಂದರೆ ಅದಕ್ಕೂ ಅವಕಾಶವಿದೆ. ಒಂದೇ ಕಂಡೀಷನ್ ಅಂದರೆ ಆತ ಹೇಳಿದಂತೆ ಬಟ್ಟೆಯ ಹಂಗಿಲ್ಲದೇ ಚಿತ್ತಾರಕ್ಕಾಗಿ ದೇಹದಲ್ಲಿ ಜಾಗ ಮಾಡಿಕೊಂಡಬೇಕು. ದೇಹದ ಮೇಲೆ ಚಿತ್ರ ಬಿಡಿಸಿದವರಿಗಾಗಿ 11 ಪ್ರಶಸ್ತಿಗಳಿವೆ. ಬಿಡಿಸಿದ ಚಿತ್ರವನ್ನೇ ಅಂದವಾಗಿ ಸೆರೆ ಹಿಡಿದ ಫೋಟೋಗ್ರಾಫರ್ಗೆ 2 ಪ್ರಶಸ್ತಿಗಳಿದ್ದರೆ, ಮೈ ಒಪ್ಪಿಸಿ ಚಿತ್ರ ಬಿಡಿಸಿಕೊಂಡವರಿಗೂ ಪ್ರಶಸ್ತಿ ನೀಡುತ್ತಾರೆ. ಇಲ್ಲಿ ಮೈಮೇಲೆ ಬಿಡಿಸಿದ 'ಕಲೆ'ಯನ್ನು ತುಂಬು ತುಳುಕುವ ಜನರ ಮುಂದೆ ಹೋಗಿ ಪ್ರದರ್ಶಿಸಬೇಕು; ನಾಚಿಕೊಳ್ಳುವಂತಿಲ್ಲ. ವಿಶ್ವದರ್ಜೆಯ ಕಲಾವಿದ ತೀರ್ಪುಗಾರರ ತಂಡ ಪ್ರದರ್ಶನ ನೋಡಿ ವಿಜೇತರನ್ನು ಆರಿಸುತ್ತದೆ.

ನಗ್ನ ಛಾಯಾಚಿತ್ರ ಸ್ಪರ್ಧೆ ಇಲ್ಲಿನ ಇನ್ನೊಂದು ವಿಶೇಷ. ಸುಂದರ ಕಲ್ಲು, ಗಿಡ-ಮರಗಳ ಮಧ್ಯೆ ಬೆತ್ತೆಲೆ ಮಾಡೆಲ್ಗಳ ಛಾಯಾಚಿತ್ರ ತೆಗೆಯಬೇಕು. ಯಾರು ಉತ್ತಮ ಚಿತ್ರ ಸೆರೆಹಿಡಿಯುತ್ತಾರೋ ಅವರಿಗೆ ಪ್ರಶಸ್ತಿ. ಇದರಲ್ಲಿ ಭಾಗವಹಿಸಲೂ 22.5 ಸಾವಿರ ಹಣ ಪಾವತಿಸಬೇಕು.

ಇದು ಜಾಗತಿಕ ಹಬ್ಬ. ಇಲ್ಲಿಗೆ 50ಕ್ಕೂ ಹೆಚ್ಚು ದೇಶಗಳ ಮಾಡೆಲ್ಗಳು, ಕಲಾವಿದರು ಆಗಮಿಸ್ತಾರೆ. ಕಲೆಯ ಗಮ್ಮತ್ತು ಹೆಚ್ಚಿಸಲು 50ಕ್ಕೂ ಹೆಚ್ಚು ಅಂತರಾಷ್ಟ್ರೀಯ ಬ್ಯಾಂಡ್ ಗಳು, ಡಿಜೆಗಳು ಹಬ್ಬಕ್ಕೆ ರಂಗು ತುಂಬುತ್ತಾರೆ. 'ಬಾಡೀಸ್ ಆಂಡ್ ಬೀಟ್ಸ್’ ಆಸ್ಟ್ರೀಯಾಗೆ ಪ್ರವಾಸೋದ್ಯಮದಲ್ಲಿ ಭಾರೀ ಆದಾಯ ತರುತ್ತದೆ. ದೇಹದ ಮೇಲೆಯೇ ನಡೆಯುವ ಈ ಹಬ್ಬದಲ್ಲಿ ಲೈಫ್ ಸ್ಟೈಲ್ಗೆ ಸಂಭಂಧಿಸಿದ ಕೋಟ್ಯಾಂತರ ರೂಪಾಯಿಯ ಮಾಲು ಬಿಕರಿಯಾಗುತ್ತದೆ. ಇದಕ್ಕಾಗಿ ಜಾಗತಿಕ ಕಂಪೆನಿಗಳೇ ಈ ಉತ್ಸವವನ್ನು ಆಸೆಗಣ್ಣುಗಳಿಂದ ನೋಡುತ್ತವೆ.

ನಗ್ನ ದೇಹದ ಮಾದಕತೆಗೆ ಕಲೆಯನ್ನು ಬೆರೆಸಿದರೆ ಏನೇನಾಗಬಹುದೋ? ಅವೆಲ್ಲವೂ ಇಲ್ಲಿ ಜರುಗುತ್ತಿವೆ, ಅಷ್ಟೆ.