samachara
www.samachara.com
ತಿನ್ನುವ ಆಹಾರವೇ ವಿಷವಾದಾಗ, ವಿಷಾಹಾರವನ್ನೇ ಭೂಜನ ಮಾಡಿಕೊಂಡರು!
ಸಮಾಚಾರ

ತಿನ್ನುವ ಆಹಾರವೇ ವಿಷವಾದಾಗ, ವಿಷಾಹಾರವನ್ನೇ ಭೂಜನ ಮಾಡಿಕೊಂಡರು!

ಶತಮಾನಗಳಷ್ಟು ಹಿಂದಿನ ಕಥೆಯಿದು. ವಾಷಿಂಗ್ಟನ್ ನ ಸರಕಾರಿ ಕಟ್ಟಡದ ನೆಲ ಮಹಡಿಯಲ್ಲಿ ಸುಮಾರು 12 ಜನ ಒಟ್ಟಾಗಿದ್ದರು. ಅಲ್ಲಿ ಅವರಿಗಾಗಿ ಭೂರೀ ಭೋಜನ ಕಾದಿತ್ತು. ನಾನಾ ರೀತಿಯ ಮಾಂಸದ ಖಾದ್ಯಗಳು, ಬಿಸಿಬಿಸಿ ತಿಂಡಿ ಹಾಗೂ ಹಣ್ಣುಗಳು ಅಲ್ಲಿ ಸಿದ್ದವಾಗಿತ್ತು. ಖಾದ್ಯಗಳ ಪೈಕಿ ಒಂದರಲ್ಲಿ ವಿಷವಿತ್ತು. ಈ ಸಂಗತಿ ಅವರಿಗೆ ಗೊತ್ತಿಲ್ಲದೆ ಇರಲಿಲ್ಲ. ಹಾಗಿದ್ದರೂ ಅವರೆಲ್ಲಾ ಆ ಭೋಜನಕೂಟದಲ್ಲಿ ಸ್ವಯಂ ಸೇವಕರಾಗಿ ಪಾಲ್ಗೊಂಡಿದ್ದರು.

ಈ ಡಿನ್ನರ್ ಏರ್ಪಡಿಸಿದವರು ಹಾರ್ವೇ ವಾಶೀಂಗ್ಟನ್ ವಿಲೇ. ವಿಷಾಹಾರದ ಭೋಜನ ಆಯೋಜಿಸಿದ್ದ ಈತನ ಉದ್ದೇಶ ಕೆಟ್ಟದಾಗಿರಲಿಲ್ಲ.  ಆಹಾರಗಳ ಮೇಲಿನ ಪ್ರಯೋಗಗಳಿಗೆ ಈ ಮನುಷ್ಯ ಅತ್ಯಂತ ಹೆಸರುವಾಸಿ. ಆಹಾರ ಮತ್ತು ಔಷಧ ಆಡಳಿತದ ಜನಕ ಎಂದು ಈತನನ್ನು ಕರೆಯಲಾಗುತ್ತೆ. ರಾಸಾಯನಿಕಗಳಿಂದ ಸಂರಕ್ಷಿದ ಆಹಾರಗಳು ಮನುಷ್ಯರ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತವೆ ಎಂದುದನ್ನು ಪ್ರಯೋಗದ ಮೂಲಕವೇ ಸರಕಾರಕ್ಕೆ ತಿಳಿಸಿಕೊಡಲು ಬಯಸಿದ್ದರು ವಾಶಿಂಗ್ಟನ್ ವಾಲೇ.

ಆ ಸಮಯದಲ್ಲಿ ವಾಶಿಂಗ್ಟನ್ ತುಂಬ ಆಹಾರ ಕಲಬೆರಕೆ ಜಾಲ ಹರಡಿಕೊಂಡಿತ್ತು. ಯಾವುದೇ ವಸ್ತುಗಳನ್ನು ಕೊಂಡರೂ ಅದರಲ್ಲಿ ನಕಲಿ ವಸ್ತುಗಳ ಕಲಬೆರಕೆಯಾಗಿರುತ್ತಿತ್ತು. ಮಕ್ಕಳ ಆಹಾರವೇ ಆಗಿರಲಿ, ಜೇನು ಮುಂತಾದ ನೈಸರ್ಗಿಕ ಆಹಾರಗಳೇ ಆಗಿರಲಿ ಎಲ್ಲವೂ ನಕಲಿ. ಇದು ಎಷ್ಟರ ಮಟ್ಟಿಗೆ ತಾರಕ್ಕೇರಿತ್ತು ಎಂದರೆ, ಗೊತ್ತಿದ್ದೂ ಸರಕಾರ ಏನೂ ಮಾಡದ ಸ್ಥಿತಿ ತಲುಪಿತ್ತು.

1880 ಮತ್ತು 1890 ರ ದಶಕದಲ್ಲಿ ಹಲವು ಕಾಯ್ದೆಗಳನ್ನು ಸರಕಾರದ ಪ್ರತಿನಿಧಿಗಳ ಸಭೆ ಹೊರ ತಂದಿತಾದರೂ, ಆಹಾರ ಕಾಳಸಂತೆಯನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಇದರ ವಿರುದ್ಧ ಹೋರಾಟಕ್ಕಾಗಿಯೇ ವಾಶಿಂಗ್ಟನ್ ವಿಲೇ ಸಂಘಟನೆಯೊಂದನ್ನು ಆರಂಭಿಸಿದರು. ಅದಕ್ಕೆ ಇಟ್ಟ ಹೆಸರು 'ಪಾಯಿಸನ್ ಸ್ಕ್ವಾಡ್' (ವಿಷ ದಳ). ಆರೋಗ್ಯವಂತ ಯುವಕರು ಇದರಲ್ಲಿ ಸ್ವಯಂ ಸೇವಕರಾಗಿದ್ದರು.

ವಿಷಾಹಾರ ಭೋಜನವನ್ನು ದಳದ ಸ್ವಯಂ ಸೇವಕರು ಶುರು ಮಾಡಿದರು. ಆರು ತಿಂಗಳುಗಳ ಕಾಲ ನಿರಂತರವಾಗಿ ಈ ಹೋರಾಟ ಮುಂದುವರಿಯಿತು. ಕೊನೆಗೊಂದು ದಿನ ನಿರೀಕ್ಷೆಯಂತೆಯೇ ಅವರೆಲ್ಲಾ ಕಾಯಿಲೆ ಬಿದ್ದರು. ಇದು ನಗರದಾದ್ಯಂತ ದೊಡ್ಡ ಸಂಚಲನವನ್ನೇ ಹುಟ್ಟು ಹಾಕಿತು.

ಇದರಿಂದಾಗಿ ಸರಕಾರ ಅನಿವಾರ್ಯವಾಗಿ, ಜೂನ್ 30, 1906 ರಂದು 'ಶುದ್ಧ ಆಹಾರ ಮತ್ತು ಔಷಧ' ಕಾಯ್ದೆ ಜಾರಿಗೆ ತಂದಿತು. ನಿಧಾನವಾಗಿ ಕಲಬೆರಕೆ ಆಹಾರದ ಬಗ್ಗೆ ಜನರೂ ದನಿ ಎತ್ತಿದರು. ರಾಸಾಯನಿಕ ಮಿಶ್ರಿತ ಆಹಾರಕ್ಕೆ ಬೇಡಿಕೆ ಕಡಿಮೆಯಾಯಿತು. ಇದೇ ವೇಳೆ, ಹೊಸ ಕಾನೂನು ಕಾಳಸಂತೆಕೋರರನ್ನು ಬಗ್ಗು ಬಡಿಯಲು ನಿಂತಿತು. ಪರಿಸ್ಥಿತಿ ಸುಧಾರಣೆಯಾಗತೊಡಗಿತು. ಹೋರಾಟಕ್ಕೆ ಹಲವು ಮುಖಗಳಿರುತ್ತವೆ. ವಿಲೇ ಭೂಜನಕೂಟಗಳೂ ಅಂತಹ ಒಂದು ಅಭಿವ್ಯಕ್ತಿಯೇ.

ವಾಶಿಂಗ್ಟನ್ ನಗರದಲ್ಲಿದ್ದ ಪರಿಸ್ಥಿತಿಗೂ, ನಾವಿರುವ ಇಂದಿನ ಪರಿಸ್ಥಿತಿಗೂ ಯಾವ ವ್ಯತ್ಯಾಸವೂ ಕಾಣಿಸುತ್ತಿಲ್ಲ. ಆದರೆ ಹಾರ್ವೇ ವಾಶಿಂಗ್ಟನ್ ವಿಲೇ ತರಹದ ಆಹಾರ ತಜ್ಞರ ಕೊರತೆ ಮಾತ್ರ ಇದೆ.