samachara
www.samachara.com
ಪಾಕಿಸ್ತಾನದಲ್ಲೊಂದು ಪಾರ್ಕ್ ಶಾಲೆ ಮತ್ತು ಅಪರೂಪದ ಆಯೂಬ್ ಮೇಸ್ಟ್ರು!
ಸಮಾಚಾರ

ಪಾಕಿಸ್ತಾನದಲ್ಲೊಂದು ಪಾರ್ಕ್ ಶಾಲೆ ಮತ್ತು ಅಪರೂಪದ ಆಯೂಬ್ ಮೇಸ್ಟ್ರು!

ಹನಿ ಉಜಿರೆ

ಪ್ರತಿ ನಿತ್ಯ ಮಧ್ಯಾಹ್ನ 3 ಗಂಟೆ ಆಯ್ತು ಅಂದ್ರೆ ಸಾಕು ಆ ವ್ಯಕ್ತಿ ತನ್ನ ಸೈಕಲ್ ಏರಿ ಹೊರಟು ಬಿಡ್ತಾರೆ. ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿರುವ ಪಾರ್ಲಿಮೆಂಟ್ ಭವನದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಪಾರ್ಕ್ ಕಡೆಗೆ ಅವರ ಪಯಣ. ಆ ಪಾರ್ಕ್ ನಲ್ಲಿ ಇನ್ನೂರಕ್ಕೂ ಹೆಚ್ಚು ಮಕ್ಕಳು ಈ ಹಿರಿ ಜೀವದ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಪುಸ್ತಕ ಹಿಡಿದುಕೊಂಡು.. ಭವಿಷ್ಯದ ಕನಸುಗಳನ್ನು ತಮ್ಮೊಳಗೆ ಅದುಮಿಟ್ಟುಕೊಂಡು.. ಆ ಪುಟಾಣಿ ಮಕ್ಕಳಿಗೆಲ್ಲಾ ಮೊಹಮ್ಮದ್ ಅಯೂಬ್ ಅಂದ್ರೆ ಗೊತ್ತಾಗಲ್ಲ. ಅವರಿಗೆ ಗೊತ್ತಿರೋದು ಮಾಸ್ಟರ್ ಅಯೂಬ್ ಮಾತ್ರ.

ಹೌದು ಮೊಹಮ್ಮದ್ ಅಯೂಬ್ ಅವರ ಪಾಲಿಗೆ ಪ್ರೀತಿಯ ಮಾಸ್ಟರ್ ಅಯೂಬ್. ನೀನೇನು ಆಗ್ತೀಯ ಅಂತ ಕೇಳಿದ್ರೆ ಆ ಮಕ್ಕಳೆಲ್ಲಾ ಹೇಳೋದು ಒಂದೇ ಉತ್ತರ, "ನಾನು ಕೂಡ ಆಯೂಬ್ ಮಾಸ್ಟರ್ ತರ ಆಗ್ತೀನಿ," ಅಂತ. ಅವರೆಲ್ಲಾ ಬಡ ಕುಟುಂಬದ ಮಕ್ಕಳು. ಇಸ್ಲಮಾಬಾದ್ ನ ಸಮೀಪದಲ್ಲಿರುವ ಸ್ಲಂನಿಂದ ಬಂದವರು. ಇವರ ಹೆತ್ತವರಿಗೆ ತುತ್ತಿನ ಚಿಂತೆ. ಹಾಗಿರುವಾಗ ಈ ಮಕ್ಕಳನ್ನು ಶಾಲೆಗೆ ಕಳುಹಿಸುವ ಯೋಚನೆ ಮಾಡಲು ಸಾಧ್ಯನಾ..? ಹೀಗಿರುವಾಗಲೇ ಮೂರು ದಶಕಗಳ ಹಿಂದೆ ಇಲ್ಲಿನ ಮಕ್ಕಳ ಬದುಕು ಬದಲಿಸುವ ಕೆಲಸಕ್ಕೆ ಕೈ ಹಾಕಿದ್ದು ಇದೇ ಮೇಸ್ಟ್ರು ಆಯೂಬ್.

ಬಹುಶಃ ಆ ಕಾರಣಕ್ಕೆ ಇವತ್ತು ಅವರು ಪಾಕಿಸ್ತಾನದ ಆಂತರಿಕ ಸ್ಥಿತಿಗತಿಗಳನ್ನೂ ಮೀರಿ ಅಂತರಾಷ್ಟ್ರೀಯ ಸುದ್ದಿ ಕೇಂದ್ರಕ್ಕೆ ಬಂದು ನಿಂತಿದ್ಧಾರೆ.ಮೊಹಮ್ಮದ್ ಅಯೂಬ್ ಅವರು ಅಗ್ನಿ ಶಾಮಕ ದಳದಲ್ಲಿ ಕಾರ್ಯ ನಿರ್ವಹಿಸ್ತಿದ್ದಾರೆ. ಆದರೆ ವಿದ್ಯೆಯಿಂದ ವಂಚಿತರಾದ ಮಕ್ಕಳಿಗೆ ತನ್ನ ಕೈಲಾದ ಸಹಾಯವನ್ನು ಮಾಡ್ಬೇಕೆಂದು ಕಳೆದ ಮೂವತ್ತು ವರ್ಷಗಳಿಂದ ಶ್ರಮವಹಿಸ್ತಿದ್ದಾರೆ. ಅದಕ್ಕಾಗಿ ಯಾರ ಸಹಾಯವನ್ನೂ ಕೇಳದೆ, ತಾವು ದುಡಿಯುವ ಹಣದಿಂದ ಮಕ್ಕಳ ಶಿಕ್ಷಣಕ್ಕೆ ಹಣವನ್ನು ಹೊಂದಿಸಿಕೊಳ್ತಾರೆ.

ಪಾಕಿಸ್ತಾನದಲ್ಲೊಂದು ಪಾರ್ಕ್ ಶಾಲೆ ಮತ್ತು ಅಪರೂಪದ ಆಯೂಬ್ ಮೇಸ್ಟ್ರು!

ಇನ್ನು ಆಯೂಬ್ ಮಾಸ್ಟರ್ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇ ಒಂದು ವಿಚಿತ್ರ ಕತೆ. ಸುಮಾರು ಮೂವತ್ತು ವರ್ಷಗಳಷ್ಟು ಹಿಂದೆ ಒಬ್ಬ ಸಣ್ಣ ಹುಡುಗ ಕಾರ್ ತೊಳೆಯುತ್ತಿದ್ದದನ್ನು ಮಾಸ್ಟರ್ ನೋಡಿದ್ರಂತೆ. ಆ ಪುಟಾಣಿ ಕಷ್ಟಪಡುತ್ತಿರುವುದನ್ನು ನೋಡಿದ ಆಯೂಬ್ ಅವರು ‘ಶಾಲೆ ಹೋಗಲ್ವಾ’ ಎಂದು ವಿಚಾರಿಸಿದ್ರು. ಅದಕ್ಕೆ ಆ ಬಾಲಕ ‘ನನ್ನ ಹೆತ್ತವರು ಬಡವರು. ಅದ್ಕೆ ನಾನು ಕೆಲಸ ಮಾಡ್ತೀನಿ ಎಂದ. ನಿಂಗೆ ನಾನು ಓದಿಸ್ತೀನಿ, ಓತ್ತೀಯಾ? ಅಂತ ಕೇಳಿದ್ರೆ ಆ ಬಾಲಕ ಖುಷಿಯಿಂದಲೇ ತಲೆ ಆಡಿಸಿದ್ದ.

ಹೀಗೆ ಅಂದು ಹೋದ ಪುಟ್ಟ ಬಾಲಕ ಮರು ದಿನ ಒಬ್ಬನೇ ಬಂದಿರ್ಲಿಲ್ಲ. ತನ್ನ ತನ್ನ ಗೆಳೆಯನನ್ನೂ ಕರೆದುಕೊಂಡು ಬಂದಿದ್ದ. ಹೀಗೇ ಈ ಸಂಖ್ಯೆ ಹೆಚ್ಚಾಗ್ತಾ ಆಗ್ತಾ ಆಯೂಬ್ ಮಾಸ್ಟರ್ ಬಳಿ ಬಂದವರ ಸಂಖ್ಯೆ ಬರೊಬ್ಬರಿ 50 ಜನ. ಅವರ್ಯಾರಿಗೂ ಮಾಸ್ಟರ್ ಇಲ್ಲ ಅನ್ನದೆ, ತಮ್ಮ ಸ್ವಂತ ದುಡ್ಡಿನಲ್ಲಿ ಪುಸ್ತಕ ಕೊಡಿಸಿ, ವಿದ್ಯಾದಾನ ಶುರುಮಾಡಿದ್ರು. ಹೇಗೆ ಆರಂಭವಾದ ಆಯೂಬ್ ಅವರ ಶಿಕ್ಷಣ ಸೇವೆ ಮೂವತ್ತು ವರ್ಷಗಳನ್ನು ಪೂರೈಸಿದೆ.

ಆಯೂಬ್ ಮಾಸ್ಟರ್ ಅವರ ಶಿಕ್ಷಣ ಸೇವೆಗೆ ಈಗ ಮತ್ತಷ್ಟು ಬಲ ಬಂದಿದೆ. ಅವರಿಂದ ವಿದ್ಯೆ ಕಲಿತ ಕೆಲ ವಿದ್ಯಾರ್ಥಿಗಳು ಈಗ ಅವರ ಜತೆ ಕೈ ಜೋಡಿಸಿದ್ದಾರೆ. ಹೀಗಾಗಿ, ಈ ಪಾರ್ಕ್ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಸದ್ಯ ಸುಮಾರು 200 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.'ತಾನು ನಡೆಸುತ್ತಿರುವ ಪಾರ್ಕ್ ಶಾಲೆಗೆ, ಒಂದು ನೈಜ ಶಾಲೆಯ ಸ್ವರೂಪವನ್ನು ನೀಡ್ಬೇಕು ಎಂಬುದು' ಆಯೂಬ್ ಅವರ ಕನಸು. ಇವರ ಕನಸನ್ನು ಸಾಕಾರಗೊಳಿಸಲು ಅವರ ವಿದ್ಯಾರ್ಥಿಗಳೇ ಪಣತೊಟ್ಟಿದ್ದಾರೆ.

ನಿತ್ಯ ಶಾಲೆ ಆರಂಭವಾಗುವುದಕ್ಕೆ ಮುನ್ನ ವಿದ್ಯಾರ್ಥಿಗಳು ಶಾಲೆಯ ನಿರ್ಮಾಣಕ್ಕೆ ಕಲ್ಲುಗಳನ್ನು ಸಂಗ್ರಹಿಸುತ್ತಿದ್ದಾರೆ.ಇಸ್ಲಾಮಾಬಾದ್ ನ ಪುಟ್ಟ ಪಾರ್ಕ್ ನಲ್ಲಿ ನಿಜಕ್ಕೂ ಏನು ನಡೀತಿದೆ ಎಂಬುದು ಅಲ್ಲಿನ ಎಷ್ಟೋ ನಿವಾಸಿಗಳಿಗೆ ಗೊತ್ತೇ ಇಲ್ಲ. ಹಾಗಿದ್ರೂ ಮೂರು ದಶಕಗಳಿಂದ ಆಯೂಬ್ ಮಾಸ್ಟರ್ ಮಾಡುತ್ತಿರುವ ಶಿಕ್ಷಣ ಸೇವೆ ಈಗ ಒಂದು ಸಂಸ್ಥೆಯ ಮಟ್ಟಕ್ಕೆ ಬೆಳೆದಿದೆ ಅಂದರೆ ಅದು ಅವರ ನಿಸ್ವಾರ್ಥ ಸೇವೆಗಿರುವ ಶಕ್ತಿಯಿಂದಾಗಿ ಎಂಬುದೆ ಸತ್ಯ.

ಮಾಸ್ಟರ್ ಆಯೂಬ್ ಗೆ ಈಗ 58 ವರ್ಷ. ಅಗ್ನಿಶಾಮಕದಳದಲ್ಲಿ ಅವರ ಸೇವೆ ಇನ್ನು ಉಳಿದಿರೋದು ಕೆಲವೇ ವರ್ಷ. ಆದರೆ ಮಾಸ್ಟರ್ ಆಯೂಬ್ ಗಮನ, ಈಗ ಪಾರ್ಕ್ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ನಿಜವಾದ ಶಾಲೆಯಲ್ಲಿ ವಿದ್ಯೆ ಕೊಡಿಸ್ಬೇಕು ಎಂಬುದರ ಮೇಲಿದೆ. ಸುಸಜ್ಜಿತ ಕಟ್ಟಡ, ತರಗತಿ, ಕಂಪ್ಯೂಟರ್ಗಳು ಈ ಮಕ್ಕಳಿಗೂ ಲಭ್ಯವಾಗಬೇಕು ಎಂಬುದು ಅವರ ಕನಸು.ನಿಜವಾದ 'ಉತ್ತಮ ಸಮಾಜ'ದ ಕನಸು ಕಾಣುವವರು, ಅದಕ್ಕಾಗಿ ದುಡಿಯುತ್ತಿರುವವರು ಜಗತ್ತಿನ ಎಲ್ಲಾ ಕಡೆಗಳಲ್ಲೂ ಇರುತ್ತಾರೆ. ಅದಕ್ಕೆ ಪಾಕಿಸ್ತಾನ ಕೂಡ ಹೊರತಲ್ಲ ಎಂಬದಕ್ಕೆ ಸಾಕ್ಷಿ ಆಯೂಬ್ ಮೇಸ್ಟ್ರು.

(ಕೃಪೆ: ಆಲ್ ಜಝೀರಾ)