samachara
www.samachara.com
 ಅಖಾಡದಲ್ಲಿ ಐಟಿ: ದಳಪತಿಗಳ ‘ಚುನಾವಣಾ ಆರ್ಥಿಕತೆ’ ಮೇಲೆ ಮುಂದುವರಿದ ದಾಳಿ
ರಾಜ್ಯ

ಅಖಾಡದಲ್ಲಿ ಐಟಿ: ದಳಪತಿಗಳ ‘ಚುನಾವಣಾ ಆರ್ಥಿಕತೆ’ ಮೇಲೆ ಮುಂದುವರಿದ ದಾಳಿ

ದಾಳಿಗೆ ಒಳಗಾದವರು ಬಹುತೇಕ ಎಲ್ಲರೂ ರೇವಣ್ಣನವರ ಒಡನಾಡಿಗಳು ಹಾಗೂ ಜೆಡಿಎಸ್ ಜೊತೆ ಗುರುತಿಸಿಕೊಂಡವರಾಗಿದ್ದಾರೆ.

Team Samachara

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಎರಡು ದಿನಗಳು ಬಾಕಿ ಇದೆ. ಬಹಿರಂಗ ಪ್ರಚಾರ ಮಂಗಳವಾರ ಸಂಜೆ ಅಂತ್ಯವಾಗಲಿದೆ. ಆದರೆ, ಚುನಾವಣೆ ಘೋಷಣೆಗೂ ಮುನ್ನ ಆರಂಭವಾದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಸದ್ದು ಕಡಿಮೆಯಾಗುವ ಹಾಗೆ ಕಾಣಿಸುತ್ತಿಲ್ಲ. ಹಾಸನ ಮತ್ತು ಮಂಡ್ಯದಲ್ಲಿ ಮಂಗಳವಾರವೂ ದಾಳಿ ನಡೆಸುವ ಮೂಲಕ ಜೆಡಿಎಸ್‌ ನಾಯಕರ ‘ಚುನಾವಣಾ ಆರ್ಥಿಕತೆ’ ತಡೆಯೊಡ್ಡುವ ಪ್ರಯತ್ನ ಮುಂದುವರಿದಿದೆ.

ಹಾಸನದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಆಪ್ತರು ಹಾಗೂ ಮಂಡ್ಯದಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಸಂಬಂಧಿಕರು ಮತ್ತು ಬೆಂಬಲಿಗರ ಮೇಲೆ ಐಟಿ ತಂಡ ಮುಗಿಬಿದ್ದಿದೆ. ಇವರುಗಳ ಮನೆ ಮತ್ತು ಕಚೇರಿಯಲ್ಲಿದ್ದ ದಾಖಲೆ ಪತ್ರಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದೆ.

ಆದಾಯ ತೆರಿಗೆ ಇಲಾಖೆ ಕೇವಲ ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಮತ್ತೆ ಮತ್ತೆ ಕಾಂಗ್ರೆಸ್‌-ಜೆಡಿಎಸ್‌ ನಾಯಕರನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಲೇ ಇವೆ.

ರೇವಣ್ಣ ಆಪ್ತರಿಗೆ ಐಟಿ ಬಿಸಿ:

ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವ, ಲೋಕೋಪಯೋಗಿ ಮಂತ್ರಿ ಎಚ್.ಡಿ. ರೇವಣ್ಣ ಆಪ್ತರ ಮೇಲೆ ಒಟ್ಟು ಆರು ಕಡೆ ದಾಳಿ ನಡೆಸಲಾಗಿದೆ. ಗೋವಾ ಮತ್ತು ಕರ್ನಾಟಕದ ಜಂಟಿ ತನಿಖಾ ತಂಡ ಏಕಕಾಲಕ್ಕೆ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಹೊಳೆನರಸೀಪುರದ ತಾ.ಪಂ. ಮಾಜಿ ಅಧ್ಯಕ್ಷ ನ್ಯಾಮನಹಳ್ಳಿ ಅನಂತ್‍ಕುಮಾರ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಂಬಂಧಿ ಹಾಗೂ ಜಿ.ಪಂ. ಮಾಜಿ ಸದಸ್ಯ ಹರದನಹಳ್ಳಿಯ ಪಾಪಣ್ಣಿ, ರೇವಣ್ಣ ಆಪ್ತ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ, ಗುತ್ತಿಗೆದಾರ ಕಾರ್ಲೆ ಇಂದ್ರೇಶ್, ವಿಧಾನಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ ಅವರ ನಿವಾಸದ ಮೇಲೆ ದಾಳಿ ನಡೆದಿದೆ.

ಕೆಲವು ಕಾಮಗಾರಿಗಳು ಪೂರ್ಣಗೊಳ್ಳುವ ಮೊದಲೇ ಗುತ್ತಿಗೆದಾರರಿಗೆ ಮುಂಗಡವಾಗಿಯೇ ಹಣ ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಹಾಸನ, ಮಂಡ್ಯ ಮತ್ತು ಮೈಸೂರಿನಲ್ಲಿ ಜೆಡಿಎಸ್ ಜತೆ ಗುರುತಿಸಿಕೊಂಡಿರುವ ಈ ಗುತ್ತಿಗೆದಾರರು ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಐಟಿ ತಂಡ ಇವರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.

ದಾಳಿಗೆ ಒಳಗಾದವರು ಬಹುತೇಕ ಎಲ್ಲರೂ ರೇವಣ್ಣನವರ ಒಡನಾಡಿಗಳು ಹಾಗೂ ಜೆಡಿಎಸ್ ಜೊತೆ ಗುರುತಿಸಿಕೊಂಡವರಾಗಿದ್ದಾರೆ.

ಮಂಡ್ಯದಲ್ಲಿ ಐಟಿ ಸಂಚಲನ:

ಹಾಸನದಲ್ಲಿ ದಾಳಿ ನಡೆದಿರುವ ಬೆನ್ನಲ್ಲೇ ಸಕ್ಕರೆ ಜಿಲ್ಲೆ ಮಂಡ್ಯದಲ್ಲೂ ದಾಳಿಯಾಗಿದೆ. ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಬೆಂಬಲಿಗರು ಮತ್ತು ಆಪ್ತರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಪಾಂಡವಪುರದಲ್ಲಿರುವ ಪುಟ್ಟರಾಜು ಆಪ್ತ ತಿಮ್ಮೇಗೌಡ ಎಂಬುವರ ಮನೆ, ಪೆಟ್ರೋಲ್ ಬಂಕ್, ಕಚೇರಿ ಸೇರಿದಂತೆ ಮತ್ತಿತರ ಕಡೆ ದಾಳಿ ಮಾಡಲಾಗಿದೆ.

ಮದ್ದೂರಿನಲ್ಲಿ ಜಿ.ಪಂ. ಅಧ್ಯಕ್ಷೆ ನಾಗರತ್ನ ಅವರ ಪತಿ, ಶ್ರೀನಿಧಿ ಪ್ರತಿಷ್ಠಾನ ಅಧ್ಯಕ್ಷ ಎಸ್.ಪಿ. ಸ್ವಾಮಿ ಅವರ ಸೋಮನಹಳ್ಳಿಯಲ್ಲಿರುವ ಕೈಗಾರಿಕಾ ಪ್ರದೇಶದ ಮನೆಗೂ ಬೆಳಗಿನ ಜಾವ 5.30ರ ಸುಮಾರಿಗೆ ದಾಳಿ ನಡೆಸಲಾಗಿದೆ.

ಮಂಡ್ಯದಲ್ಲಿ ಮತದಾನಕ್ಕೂ ಎರಡು ದಿನ ಮುನ್ನ ಭಾರೀ ಪ್ರಮಾಣದ ಹಣದ ವಹಿವಾಟು ನಡೆಯಲಿದೆ ಎಂಬ ಗಾಳಿ ಸುದ್ದಿಗಳು ಓಡಾಡುತ್ತಿದ್ದವು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಮತ್ತು ಅವರ ಎದುರಾಳಿ ಅಭ್ಯರ್ಥಿಯಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕಣಕ್ಕಿಳಿದಿರುವುದರಿಂದ ಈ ಜಿಲ್ಲೆ ರಾಜ್ಯದಲ್ಲೇ ಅತ್ಯಂತ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಜತೆಗೆ ಈ ಕ್ಷೇತ್ರವನ್ನು ಸೂಕ್ಷ್ಮ ಕ್ಷೇತ್ರಗಳ ಪಟ್ಟಿಗೆ ಚುನಾವಣಾ ಆಯೋಗ ಸೇರಿಸಿದೆ.

ಇತ್ತೀಚೆಗೆ ಹಾಲಿ ಸಂಸದ ಶಿವರಾಮೇಗೌಡ ಮತ್ತು ಅವರ ಆಪ್ತರೊಬ್ಬರು ನಡೆಸಿದ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರತಿ ಬೂತ್‍ಗೂ 5 ಲಕ್ಷ, ತಲಾ ಒಬ್ಬೊಬ್ಬರಿಗೆ 500 ರೂ. ಹಂಚಲಾಗುತ್ತದೆ ಎಂಬ ಸಂಭಾಷಣೆ ನಡೆದಿತ್ತು. ಮತ್ತೊಂದೆಡೆ ಶಿವರಾಮೇಗೌಡ ಪುತ್ರ ಚೇತನ್‍ಗೌಡ ಹಾಗೂ ಟಿ.ರಮೇಶ್ ಎಂಬುವರು ಮಂಡ್ಯದಲ್ಲಿ 150 ಕೋಟಿ ಖರ್ಚು ಮಾಡಿಯಾದರೂ ಗೆದ್ದುಕೊಂಡು ಬರುತ್ತೇವೆ ಎಂದು ಸಂಭಾಷಣೆ ನಡೆಸಿದ್ದರು.

ಹಾಸನದಲ್ಲೂ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಅವರ ಎದುರಾಳಿಯಾಗಿ ಬಿಜೆಪಿಯಿಂದ ಎ. ಮಂಜು ಕಣಕ್ಕಿಳಿದಿರುವುದರಿಂದ ಇದೂ ಕೂಡ ಜಿದ್ದಾ ಜಿದ್ದಿನ ಕ್ಷೇತ್ರವಾಗಿದೆ. ಇಲ್ಲೂ ಮತದಾರರಿಗೆ ಆಮಿಷವೊಡ್ಡಲು ಭಾರೀ ಪ್ರಮಾಣದ ಹಣವನ್ನು ಹಂಚಲಾಗುತ್ತಿದೆ ಎಂಬ ಸುದ್ದಿಗಳು ಚುನಾವಣಾ ಆಯೋಗದ ಬಾಗಿಲು ಬಡಿಯುತ್ತಿವೆ. ಇದರ ನಡುವೆ ಐಟಿ ದಾಳಿ ನಡೆದಿದೆ.

ಮತ್ತೆ ಮತ್ತೆ ಮೈತ್ರಿ ನಾಯಕರೇ ಟಾರ್ಗೆಟ್‌:

ಕೆಲ ದಿನಗಳ ಹಿಂದೆ ಮಂಡ್ಯ, ಹಾಸನ ಹಾಗೂ ಮೈಸೂರಿನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದನ್ನು ವಿರೋಧಿಸಿ ದೋಸ್ತಿ ಪಕ್ಷಗಳ ಮುಖಂಡರು ಬೀದಿಗಿಳಿದಿದ್ದರು. ಬೆಂಗಳೂರಿನ ಐಟಿ ಕಚೇರಿ ಮುಂದೆ ಉಭಯ ಪಕ್ಷಗಳ ಮುಖಂಡರು ಕರ್ನಾಟಕ-ಗೋವಾ ಐಟಿ ವಿಭಾಗದ ಪ್ರಧಾನ ನಿರ್ದೇಶಕ ಬಾಲಕೃಷ್ಣ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದರು.

ಇದರ ಬೆನ್ನಲ್ಲೇ ಐಟಿ ಇಲಾಖೆಯವರು ಚುನಾವಣಾ ಆಯೋಗಕ್ಕೆ ದೂರು ನೀಡಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಕೆ. ಶಿವಕುಮಾರ್ ಸೇರಿದಂತೆ ಮತ್ತಿತರ ವಿರುದ್ಧ ತನಿಖೆ ನಡೆಸುವಂತೆ ಕೋರಿದ್ದರು.

ಇದೀಗ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ಇವರೆಲ್ಲರಿಗೂ ನೋಟೀಸ್ ಜಾರಿ ಮಾಡಿದೆ. ಇವೆಲ್ಲದರ ನಡುವೆ ಮತ್ತೆ ಮತ್ತೆ ಮೈತ್ರಿ ಸರಕಾರದ ನಾಯಕರನ್ನು ಗುರಿಯಾಗಿಸಿ ಐಟಿ ದಾಳಿ ಮುಂದುವರಿದಿದೆ.

Also read: ಮುಂದುವರಿದ ಐಟಿ ದಾಳಿ; ರಿಜ್ವಾನ್‌ ಅರ್ಷದ್ ಆಪ್ತರ ಮನೆಗಳಲ್ಲಿ ಪರಿಶೀಲನೆ

Also read: ಲೋಕಸಭಾ ಚುನಾವಣೆಗೂ ಮುನ್ನ ಐಟಿ ದಾಳಿ; ಮೈತ್ರಿ ಪಕ್ಷಗಳ ಸಚಿವರು, ನಾಯಕರ ಮನೆಗಳಲ್ಲಿ ತಲಾಶ್