samachara
www.samachara.com
ಲೋಕಸಭಾ ಚುನಾವಣೆಗೂ ಮುನ್ನ ಐಟಿ ದಾಳಿ; ಮೈತ್ರಿ ಪಕ್ಷಗಳ ಸಚಿವರು, ನಾಯಕರ ಮನೆಗಳಲ್ಲಿ ತಲಾಶ್
ರಾಜ್ಯ

ಲೋಕಸಭಾ ಚುನಾವಣೆಗೂ ಮುನ್ನ ಐಟಿ ದಾಳಿ; ಮೈತ್ರಿ ಪಕ್ಷಗಳ ಸಚಿವರು, ನಾಯಕರ ಮನೆಗಳಲ್ಲಿ ತಲಾಶ್

ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ವಿಧಾನಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಸೇರಿದಂತೆ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಆಪ್ತರು ಹಾಗೂ ಮತ್ತಿತರ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿದೆ.

Team Samachara

ಮೊದಲ ಹಂತದ ಲೋಕಸಭೆ ಚುನಾವಣೆಗೆ ಕೇವಲ 20 ದಿನಗಳು ಬಾಕಿ ಇರುವಾಗ ಕರ್ನಾಟಕದ ಮೈತ್ರಿ ಸರಕಾರಕ್ಕೆ ಆದಾಯ ಇಲಾಖೆ (ಐಟಿ) ಅಧಿಕಾರಿಗಳು ಆಘಾತ ನೀಡಿದ್ದಾರೆ. ಗುರುವಾರ ಐಟಿ ಅಧಿಕಾರಿಗಳು ಸಚಿವರು, ಗುತ್ತಿಗೆದಾರರು ಮತ್ತು ಉದ್ಯಮಿಗಳ ಮನೆ ಹಾಗೂ ಕಚೇರಿಗಳು ಸೇರಿದಂತೆ ಒಟ್ಟು 15 ಕಡೆ ದಾಳಿ ನಡೆಸಿದ್ದಾರೆ. ಲೋಕಸಭೆ ಚುನಾವಣೆಗೆ ಪಕ್ಷಗಳು ಭರ್ಜರಿ ಸಿದ್ದತೆ ನಡೆಸುತ್ತಿರುವ ಬೆನ್ನಲ್ಲೇ ನಡೆದಿರುವ ಈ ದಾಳಿ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ವಿಧಾನಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಸೇರಿದಂತೆ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಆಪ್ತರು ಹಾಗೂ ಮತ್ತಿತರ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿದೆ.

ಎಲ್ಲೆಲ್ಲಿ ದಾಳಿ?:

ರಾಜಧಾನಿ ಬೆಂಗಳೂರು, ಮಂಡ್ಯ, ಹಾಸನ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಕನಕಪುರ ಸೇರಿದಂತೆ 15 ಕ್ಕೂ ಹೆಚ್ಚು ಕಡೆ ದಿಢೀರ್ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಗದು ಮತ್ತು ಕೆಲವು ದಾಖಲೆಗಳನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಒಟ್ಟು ನಾಲ್ಕು ವಾಹನಗಳಲ್ಲಿ ಬಂದ ಐಟಿ ಅಧಿಕಾರಿಗಳು ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್, ಜಯನಗರ, ಬಸವನಗುಡಿ, ಸೌತ್‍ ಎಂಡ್ ಸರ್ಕಲ್ ಮತ್ತಿತರ ಕಡೆ ದಾಳಿ ನಡೆಸಿದ್ದಾರೆ. ಪ್ರಮುಖವಾಗಿ ಸೌತ್ ಎಂಡ್ ಸರ್ಕಲ್ ಬಳಿ ಇರುವ ಜೋಳ ಮತ್ತು ಪಾಪ್‍ಕಾರ್ನ್ ವ್ಯಾಪಾರಿ ಸಿದ್ದಿಕ್ ಸೇಠ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಸಿದ್ಧಿಕ್‌ ಸೇಠ್‌ ಮುಖ್ಯಮಂತ್ರಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರು ಎಂಬುದು ವಿಶೇಷ.

ಪುಟ್ಟರಾಜುಗೆ ಶಾಕ್:

ಇದೇ ಸಿಎಂ ಎಚ್‌ಡಿಕೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇನ್ನೋರ್ವ, ಮಂಡ್ಯ ಜಿಲ್ಲೆ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಅವರ ಅಣ್ಣನ ಮಗನ ಕಚೇರಿ ಮತ್ತು ನಿವಾಸಗಳ ಮೇಲೆಯೂ ಅಧಿಕಾರಿಗಳು ಮುಗಿ ಬಿದ್ದಿದ್ದಾರೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಪುಟ್ಟರಾಜು ಅವರ ಸ್ವಗ್ರಾಮ ಚಿನಕುರುಳಿಯ ನಿವಾಸಕ್ಕೆ ಬೆಳಗ್ಗೆ 5 ಗಂಟೆ ಸುಮಾರಿಗೆ ಸಿಆರ್‌ಪಿಎಫ್‌ ಯೋಧರೊಂದಿಗೆ ಆಗಮಿಸಿದ 8ಕ್ಕೂ ಹೆಚ್ಚು ಮಂದಿ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿರುವ ಸಚಿವ ಸಿ.ಎಸ್‌. ಪುಟ್ಟರಾಜು ನಿವಾಸದ ಮೇಲೆ ಐಟಿ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆದಿದ್ದಾರೆ. ಸ್ಥಳದಲ್ಲಿ ಸಿಆರ್‌ಪಿಎಫ್‌ ಯೋಧರು ಭದ್ರತೆಯ ಹೊಣೆ ಹೊತ್ತಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿರುವ ಸಚಿವ ಸಿ.ಎಸ್‌. ಪುಟ್ಟರಾಜು ನಿವಾಸದ ಮೇಲೆ ಐಟಿ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆದಿದ್ದಾರೆ. ಸ್ಥಳದಲ್ಲಿ ಸಿಆರ್‌ಪಿಎಫ್‌ ಯೋಧರು ಭದ್ರತೆಯ ಹೊಣೆ ಹೊತ್ತಿದ್ದಾರೆ.
/ಎಎನ್‌ಐ

ಪುಟ್ಟರಾಜು ಜೊತೆಗೆ ಅವರ ಅಣ್ಣನ ಮಗ ಮೈಸೂರಿನ ವಿಜಯನಗರದಲ್ಲಿರುವ ಜಿಲ್ಲಾ ಪಂಚಾಯತ್ ಸದಸ್ಯ ಅಶೋಕ್ ಮನೆ ಮೇಲೂ ಐಟಿ ದಾಳಿ ನಡೆದಿದೆ.

ಇತ್ತೀಚೆಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ನಿಖಿಲ್‍ ಕುಮಾರಸ್ವಾಮಿ ಗೆಲುವಿನ ಹೊಣೆಯನ್ನು ಸಿ.ಎಚ್‌. ಪುಟ್ಟರಾಜು ಅವರಿಗೆ ನೀಡಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಇನ್ನು ಐಟಿ ತಂಡ ವಿಧಾನ ಪರಿಷತ್ ಸದಸ್ಯ, ಜೆಡಿಎಸ್‌ ಪಾಲಿನ ಆರ್ಥಿಕ ಶಕ್ತಿ ಉದ್ಯಮಿ ಬಿ.ಎಂ.ಫಾರೂಕ್ ಅವರ ಕಚೇರಿ ಮತ್ತು ನಿವಾಸದ ಮೇಲೂ ದಾಳಿ ನಡೆಸಿದೆ. ಕಾಂಗ್ರೆಸ್‌ ಮಾಜಿ ಶಾಸಕ ಬಿ.ಎಂ. ಮೊಯ್ದೀನ್‌ ಬಾವಾ ಸಹೋದರರೂ ಆಗಿರುವ ಫಾರೂಕ್‌ ಅವರ ಮಂಗಳೂರು ಮತ್ತು ಬೆಂಗಳೂರಿನ ಮನೆ ಸೇರಿದಂತೆ ಅವರ ಸಂಬಂಧಿಕರ ಮನೆ ಮೇಲೂ ದಾಳಿ ಮಾಡಲಾಗಿದೆ. ಫಾರೂಕ್ ಕೂಡ ಸಿಎಂ ಆಪ್ತ ವಲಯದಲ್ಲಿ ಗುರುಸಿಕೊಂಡಿದ್ದರು.

ರೇವಣ್ಣ ಬೆಂಬಲಿಗರ ಮೇಲೆ ದಾಳಿ:

ಇದು ಕುಮಾರಸ್ವಾಮಿ ಆಪ್ತರ ಕತೆಯಾದರೆ, ಸಮ್ಮಿಶ್ರ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ಸಚಿವರೆಂದೇ ಗುರುತಿಸಿಕೊಂಡಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಆಪ್ತರ ಮೇಲೆ ಹಾಸನ ಜಿಲ್ಲೆಯಲ್ಲಿ ಒಟ್ಟು 8 ಕಡೆ ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರೇವಣ್ಣನವರ ಆಪ್ತರು ಹಾಗೂ ಗುತ್ತಿಗೆದಾರರಾದ ರಾಯಿಗೌಡ, ಅಶ್ವಥ್, ನಾರಾಯಣ ರೆಡ್ಡಿ ಮನೆ ಮೇಲೆ ದಾಳಿ ನಡೆಸಲಾಗಿದೆ. ಕಳೆದ ತಿಂಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಅಶ್ವಥ್ ಹಾಗೂ ನಾರಾಯಣ ಗೌಡರ ಮನೆಗೆ ಆಗಮಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದೇ ರೀತಿ ಹಾಸನದ ಆರ್‍ಸಿ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಅವರ ಮಾವ ಜಯರಾಮ್ ಅವರ ಮನೆ ಮೇಲೂ ದಾಳಿ ನಡೆಸಲಾಗಿದೆ.ದಾಳಿ ಸಂದರ್ಭದಲ್ಲಿ ತನಿಖಾಧಿಕಾರಿಗಳು ಹಲವು ವರ್ಷಗಳಿಂದ ನಡೆಸಿರುವ ಗುತ್ತಿಗೆ ಕಾಮಗಾರಿ, ಬಿಲ್‍ಗಳು, ಯಾವ ಯಾವ ಸಂದರ್ಭದಲ್ಲಿ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ, ಹಣದ ವಹಿವಾಟು ಇತ್ಯಾದಿ ಅಂಶಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂಉದ ತಿಳಿದು ಬಂದಿದೆ.

ಇತ್ತ ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಸಿ.ವಿ.ಎನ್.ಎಚ್. ರೆಡ್ಡಿ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ. ಇಲ್ಲಿನ ಚೆನ್ನಾಪುರ ರಸ್ತೆಯಲ್ಲಿರುವ ರೆಡ್ಡಿ ಅವರ ಒಡೆತನಕ್ಕೆ ಸೇರಿದ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ.

ರಾಜ್ಯದಾದ್ಯಂತ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ಆಪ್ತ ಪರಮೇಶ್ವರ್ ಗೌಡ ಅವರ ಮನೆ ಮತ್ತು ಅವರ ಒಡೆತನಕ್ಕೆ ಸೇರಿದ ಶೃತಿ ಮೋಟಾರ್ಸ್ ಕಚೇರಿ ಮೇಲೂ ದಾಳಿ ಮಾಡಿರುವ ಐಟಿ ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಐಟಿ ದಾಳಿಗೆ ಗುರಿಯಾಗಿರುವ ಶಿವಮೊಗ್ಗದ ಶೃತಿ ಮೋಟಾರ್ಸ್‌ ಶೋರೂಂ.
ಐಟಿ ದಾಳಿಗೆ ಗುರಿಯಾಗಿರುವ ಶಿವಮೊಗ್ಗದ ಶೃತಿ ಮೋಟಾರ್ಸ್‌ ಶೋರೂಂ.
/ಎಎನ್‌ಐ

ಇನ್ನೊಂದೆಡೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸ್ವಕ್ಷೇತ್ರ ಕನಕಪುರದ ತಾಲೂಕು ಕಚೇರಿ ಮೇಲೆ ದಾಳಿ ನಡೆದಿದೆ. ಅಲ್ಲದೆ ಅವರ ಸಂಬಂಧಿಕರ ಮನೆಯಲ್ಲೂ ಕಡತಗಳನ್ನು ಪರಿಶೀಲನೆ ನಡೆಸಲಾಗಿದೆ.

ಮೊದಲೇ ಮಾಹಿತಿ!

ವಿಶೇಷವೆಂದರೆ ಐಟಿ ಅಧಿಕಾರಿಗಳು ಹೀಗೊಂದು ದಾಳಿ ನಡೆಸಬಹುದು ಎಂಬ ಮಾಹಿತಿ ಮೊದಲೇ ಗೊತ್ತಾಗಿತ್ತು. ಬುಧವಾರ ರಾತ್ರಿ ಮಾಧ್ಯಮಗಳ ಜತೆ ಮಾತನಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಹೀಗೊಂದು ದಾಳಿ ನಡೆಯಬಹುದು ಎಂದು ಮೈತ್ರಿ ಪಕ್ಷದ ನಾಯಕರಿಗೆ ಮುನ್ನೆಚ್ಚರಿಕೆ ನೀಡಿದ್ದರು..

ತಮ್ಮನ್ನೂ ಸೇರಿದಂತೆ ಜೆಡಿಎಸ್‌ ಕಾಂಗ್ರೆಸ್‌ ಮುಖಂಡರನ್ನು ಗುರಿಯಾಗಿಸಿ ಗುರುವಾರ ದಾಳಿ ನಡೆಸಲು ಸಿದ್ಧತೆ ನಡೆಸಿರುವ ಖಚಿತ ಮಾಹಿತಿ ಸಿಕ್ಕಿದೆ ಎಂದಿದ್ದರು. ಅಲ್ಲದೆ ದಾಳಿ ನಡೆದರೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ರೀತಿಯಲ್ಲಿ ಪ್ರತಿಭಟಿಸುವುದಾಗಿಯೂ ಎಚ್ಚರಿಸಿದ್ದರು.

ಅದರಂತೆ ಈಗ ಐಟಿ ದಾಳಿ ನಡೆದಿರುವುದು ರಾಜಕೀಯ ಕೆಸರೆರಚಾಟಕ್ಕೆ ಎಡೆ ಮಾಡಿಕೊಟ್ಟಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಸೇರಿದಂತೆ ಹಲವರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ.

ವಿರೋಧ ಪಕ್ಷದ ನಾಯಕರ ಮೇಲಿನ ಐಟಿ ದಾಳಿ ಚುನಾವಣಾ ಸಮಯದಲ್ಲಿ ಬೆಂಬಲಿಗರನ್ನು ಹೆದರಿಸುವ ಮತ್ತು ಮನೋ ಬಲ ಕುಗ್ಗಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ಬಿಜೆಪಿ ಇಡೀ ವಿಶ್ವದ ಅತ್ಯಂತ ಹೇಡಿ ಪಕ್ಷ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ಟಿಟ್ಟರ್‌ನಲ್ಲಿ ಕಿಡಿಕಾರಿದ್ದಾರೆ.

"ಐಟಿ ಅಧಿಕಾರಿ ಬಾಲಕೃಷ್ಣ ಅವರಿಗೆ ನೀಡಿರುವ ಸಂವಿಧಾನಾತ್ಮಕ ಹುದ್ದೆ ಪ್ರಧಾನಿಯ ಧ್ವೇಷ ರಾಜಕಾರಣಕ್ಕೆ ದಾಳವಾಗಿದೆ. ಚುನಾವಣಾ ಸಮಯದಲ್ಲಿ ಸರಕಾರಿ ಆಡಳಿತ ಯಂತ್ರ ಮತ್ತು ಭ್ರಷ್ಟ ಅಧಿಕಾರಿಗಳನ್ನು ವಿರೋಧ ಪಕ್ಷಗಳ ವಿರುದ್ಧ ಬಳಸುವ ಪ್ರಯತ್ನ ಖಂಡನೀಯ," ಎಂದಿರುವ ಸಿಎಂ ಕುಮಾರಸ್ವಾಮಿ, ಇದು ಐಟಿ ಇಲಾಖೆ ಮೂಲಕ ಪ್ರಧಾನಿ ನರೇಂದ್ರ ಮೋದಿ ನಡೆಸಿದ ನಿಜವಾದ ಸರ್ಜಿಕಲ್‌ ಸ್ಟ್ರೈಕ್‌ ಎಂದು ವ್ಯಂಗ್ಯವಾಡಿದ್ದಾರೆ.

ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್‌ ಹೇಳಿದ್ದು, ಇದೇ ರೀತಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರ ಮನೆಗಳ ಮೇಲೆ ದಾಳಿ ನಡೆದಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ರಾಜಕೀಯ ಬಣ್ಣ ಬೇಡ- ಯಡಿಯೂರಪ್ಪ:

ಆದರೆ ರಾಜ್ಯದ ವಿವಿಧೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದಕ್ಕೆ ರಾಜಕೀಯ ಬಣ್ಣ ಕಟ್ಟುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ಷೇಪಿಸಿದ್ದಾರೆ. "ಐಟಿ ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡುತ್ತಾರೆ. ಯಾರ ಮೇಲೆ ಅನುಮಾನವಿರುತ್ತದೆಯೋ ಅಂತಹವರ ಮೇಲೆ ದಾಳಿ ಮಾಡಲಾಗುತ್ತದೆ. ತಪ್ಪನ್ನೇ ಮಾಡಿಲ್ಲ ಎಂದಾಗ ಇವರು ಹೆದರುವುದು ಏಕೆ?" ಎಂದು ವಿತಂಡವಾದ ಹೂಡಿದ್ದಾರೆ.

ಆದರೆ ರಾಜಕೀಯ ಲಾಭಕ್ಕಾಗಿ ಈ ದಾಳಿ ನಡೆಸಲಾಗಿದೆ ಎಂದಿರುವ ಪರಮೇಶ್ವರ್‌, "ಐಟಿ ಇಲಾಖೆಗೆ ದಾಳಿ ನಡೆಸುವ ಸ್ವತಂತ್ರ ಇದೆ. ಅದನ್ನು ನಾವು ಪ್ರಶ್ನೆ ಮಾಡುವುದಿಲ್ಲ. ಅದೇ ರೀತಿ ಬಿಜೆಪಿ ನಾಯಕರ ಮನೆ ಮೇಲೂ ಏಕೆ ದಾಳಿಯಾಗುವುದಿಲ್ಲ," ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಿದೆ. ಇದನ್ನು ನಾವು ಜನತಾ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ

‘ಎಷ್ಟೇ ದಾಳಿ ನಡೆಸಿದರೂ ನಾವು ಹೆದರುವುದಿಲ್ಲ. ಕಾರ್ಯಕರ್ತರು, ಮುಖಂಡರು ಇನ್ನಷ್ಟು ಬಲಗೊಳ್ಳುತ್ತಾರೆ. ಜನ ನಮ್ಮ ಪರವಾಗಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ತಕ್ಕ ಪಾಠ ಕಲಿಸುತ್ತಾರೆ’ ಎಂದು ಪರಮೇಶ್ವರ್‌ ಗುಡುಗಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ‘ಐಟಿ ಮುಖ್ಯಸ್ಥರು ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ' ಎಂದು ಹರಿಹಾಯ್ದಿದ್ದು, 'ಐಟಿ ದಾಳಿಯಿಂದ ದೇವೇಗೌಡರನ್ನು ಹೆದರಿಸಬಹುದು ಎಂದು ಬಿಜೆಪಿ ಅಂದುಕೊಂಡಿದ್ದರೆ ಅದು ತಪ್ಪು. ಇಂತಹ ದಾಳಿಗಳಿಗೆ ದೇವೇಗೌಡರ ಕುಟುಂಬ ಯಾವತ್ತಿಗೂ ಹೆದರುವುದಿಲ್ಲ. ಇಂತಹ ಸಾಕಷ್ಟು ದಾಳಿಯನ್ನು ದೇವೇಗೌಡರು ನೋಡಿದ್ದಾರೆ' ಎಂದು ಹೇಳಿದ್ದಾರೆ.

ಈ ದಾಳಿಯಿಂದ ಜೆಡಿಎಸ್‍ಗೆ ಶೇ.10ರಷ್ಟು ಓಟು ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಇಂತಹ ದಾಳಿಗಳಿಂದ ನಾವು ಹೆದರಿ ಮನೆಯಲ್ಲಿ ಕೂರುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಐಟಿ ಕಚೇರಿ ಮುಂದೆ ಪ್ರತಿಭಟನೆ:

ಚುನಾವಣಾ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ನಡೆಸುತ್ತಿರುವ ದಾಳಿಯನ್ನು ವಿರೋಧಿಸಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರು ಆದಾಯ ತೆರಿಗೆ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಚೇರಿ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಮತ್ತೊಂದೆಡೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾದರಿಯಲ್ಲೇ ಧರಣಿ ಕುಳಿತುಕೊಳ್ಳಲು ಕುಮಾರಸ್ವಾಮಿ ಮುಂದಾಗಿದ್ದಾರೆ ಎನ್ನಲಾಗಿದೆ. ‘ಐಟಿ ಕಚೇರಿ ಮುಂದೆ ನಾನು ಧರಣಿ ಕೂರುತ್ತೇನೆ. ಇಡೀ ದೇಶವೇ ನೋಡಲಿ’ ಎಂಬ ಮಾತನ್ನು ಎಚ್‌ಡಿಕೆ ಹೇಳಿದ್ದಾರೆ.