samachara
www.samachara.com
ಈದ್ಗಾ ನೆತ್ತರು, ಮಹದಾಯಿ ನೀರು: ಸಮೀಕ್ಷೆಗಳಿಗೆ ನಿಲುಕದ ಹುಬ್ಬಳ್ಳಿ- ಧಾರವಾಡ ರಾಜಕಾರಣ
ರಾಜ್ಯ

ಈದ್ಗಾ ನೆತ್ತರು, ಮಹದಾಯಿ ನೀರು: ಸಮೀಕ್ಷೆಗಳಿಗೆ ನಿಲುಕದ ಹುಬ್ಬಳ್ಳಿ- ಧಾರವಾಡ ರಾಜಕಾರಣ

ಕಳಸ-ಬಂಡೂರಿ ವಿವಾದ ಬಿಜೆಪಿಗೆ ದೊಡ್ಡ ಹೊಡೆತ ಕೊಡಲಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೂ ಬಿಜೆಪಿ ಹುಬ್ಬಳ್ಳಿ-ಧಾರವಾಡದಲ್ಲಿ ಗರಿಷ್ಠ ಸ್ಥಾನಗಳನ್ನೇ ಗಳಿಸಿ ಎಲ್ಲಾ ರಾಜಕೀಯ ವ್ಯಾಖ್ಯಾನಗಳನ್ನು ಸುಳ್ಳು ಮಾಡಿ ತೋರಿಸಿತ್ತು.

Team Samachara

ಹುಬ್ಬಳ್ಳಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಧಾಟಿ ಮುಂದೆ ಸಾಗಿದರೆ ಅಣತಿ ದೂರದಲ್ಲಿದೆ ಈದ್ಗಾ ಮೈದಾನ. ಈ ಮೈದಾನದ ಉಲ್ಲೇಖವಿಲ್ಲದೆ ಭಾಗಶಃ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ರಾಜಕೀಯ ಇತಿಹಾಸವನ್ನು ಯಾರೆಂದರೆ ಯಾರೂ ವಿಶ್ಲೇಷಿಸಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಈದ್ಗಾ ಮೈದಾನ ಇಲ್ಲಿನ ರಾಜಕೀಯದೊಟ್ಟಿಗೆ ಬೆಸೆದುಬಿಟ್ಟಿದೆ.

ಅದು 1992 ಡಿಸೆಂಬರ್ 6. ಇಡೀ ಭಾರತದ ಮೂಲೆ ಮೂಲೆಯಿಂದ ಉತ್ತರಪ್ರದೇಶದ ಅಯೋಧ್ಯೆಗೆ ಬಂದು ಸೇರಿದ್ದ ರಾಮಜನ್ಮಭೂಮಿ ಕರಸೇವಕರು ನೋಡನೋಡುತ್ತಿದ್ದಂತೆಯೇ ಆಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಿ ಹಾಕಿದ್ದರು.

ಇದೇ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ಅದರಲ್ಲೂ ಪ್ರಮುಖವಾಗಿ ಕರ್ನಾಟಕದಲ್ಲಿ ದಕ್ಷಿಣದ ಆಯೋಧ್ಯೆಯಂತಹ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣ ಮಾಡಲು ಬಿಜೆಪಿ ಕಣ್ಣಿಟ್ಟು ಕಾರ್ಯರೂಪಕ್ಕೆ ತಂದ ಸ್ಥಳಗಳೆಂದರೆ ಚಿಕ್ಕಮಗಳೂರಿನ ಬಾಬಬುಡನ್‌ ಗಿರಿ ಹಾಗೂ ಹುಬ್ಬಳ್ಳಿಯ ಈದ್ಗಾ ಮೈದಾನ.

ಹುಬ್ಬಳ್ಳಿಯ ಈದ್ಲಾ ಮೈದಾನ ಮೂಲತಃ ನಗರದ ಇಸ್ಲಾಂ ಸಮುದಾಯದವರಿಗೆ ಸೇರಿದ್ದ ಸ್ವತ್ತು. 200 ವರ್ಷಗಳಿಂದ ಇಲ್ಲಿ ಮುಸ್ಲಿಂರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಆದರೆ, ಇಲ್ಲಿ ತ್ರಿವರ್ಣ ಧ್ವಜ ಹಾರಿಸುವ ಪರಿಪಾಠ ಇರಲಿಲ್ಲ. ಹೀಗಾಗಿ 1992ರಲ್ಲಿ ಉತ್ತರಪ್ರದೇಶದ ಆಯೋಧ್ಯೆಯಲ್ಲಿ ಬಾಬರಿ ಮಸೀದಿ ಕುರಿತ ವಿವಾದ ಭುಗಿಲೆದ್ದ ಅದೇ ವರ್ಷ ಆಗಸ್ಟ್ 13 ರಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಪಕ್ಷದ ಮುಖಂಡ ಶ್ರೀನಿವಾಸ ಕಟ್ಟಿ ಎಂಬವರು ಮೊದಲ ಬಾರಿಗೆ ಈ ಮೈದಾನದಲ್ಲಿ ಭಾರತ ಧ್ವಜ ಹಾರಿಸಲು ಪ್ರಯತ್ನಿಸಿದ್ದರು. ಇದಕ್ಕೆ ಮುಸ್ಲಿಂ ಸಮುದಾಯದವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಪೊಲೀಸ್ ಬಂದೋಬಸ್ತ್ ನಡುವೆಯೂ 1500ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಮೈದಾನಕ್ಕೆ ಆಗಮಿಸಿದ ಹಿನ್ನೆಲೆ ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು. ಕೊನೆಗೆ ಬಿಜೆಪಿ ಕಾರ್ಯಕರ್ತರನ್ನು ಸುತ್ತುವರೆದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಈ ಘಟನೆ ನಡೆದ ನಂತರ 1994ರವರೆಗೆ ಪ್ರತಿ ಆಗಸ್ಟ್ 15 ಹಾಗೂ ಜನವರಿ 26 ಗಣರಾಜ್ಯೋತ್ಸವದಂದು ಬಿಜೆಪಿ ಕಾರ್ಯಕರ್ತರು ಮುಸ್ಲಿಂರ ಪ್ರತಿರೋಧ ಹಾಗೂ ಪೊಲೀಸರ ಎಚ್ಚರಿಕೆಯನ್ನು ಲೆಕ್ಕಿಸದೆ ತ್ರಿವರ್ಣ ಧ್ವಜ ಹಾರಿಸಲು ಅಲ್ಲಿಗೆ ಬರುವುದು ವಾಡಿಕೆಯಾಗಿತ್ತು. ಆದರೆ, ಅಂದು ಮಾತ್ರ ನಡೆಯಬಾರದ ಅಹಿತಕರ ಘಟನೆಗೆ ಈದ್ಗಾ ಮೈದಾನ ಸಾಕ್ಷಿಯಾಗಿಬಿಟ್ಟಿತ್ತು. ಮುಸ್ಲಿಂರು ಪ್ರಾರ್ಥನೆ ಸಲ್ಲಿಸುವ ಈದ್ಗಾ ಮೈದಾನದಲ್ಲಿ ಮೊದಲ ಬಾರಿಗೆ 5 ಜನರ ರಕ್ತದ ರುಚಿ ಕಂಡಿತ್ತು.

ರಕ್ತಪಾತ ಮತ್ತು ಬಿಜೆಪಿ ಅಭಿವೃದ್ಧಿ

ಈದ್ಗಾ ಮೈದಾನದ ಪಕ್ಕದಲ್ಲಿರುವ ಹುಬ್ಬಳ್ಳಿ ಚನ್ನಮ್ಮ ಸರ್ಕಲ್‌ನಲ್ಲಿ ಬಿಜೆಪಿ ಧುರೀಣರು.
ಈದ್ಗಾ ಮೈದಾನದ ಪಕ್ಕದಲ್ಲಿರುವ ಹುಬ್ಬಳ್ಳಿ ಚನ್ನಮ್ಮ ಸರ್ಕಲ್‌ನಲ್ಲಿ ಬಿಜೆಪಿ ಧುರೀಣರು.

ಅದು 1994 ಆಗಸ್ಟ್ ತಿಂಗಳು. ಎಂದಿನಂತೆ ಆಗಸ್ಟ್ 15ರಂದು ಈದ್ಗಾ ಮೈದಾನದಲ್ಲಿ ನಡೆಯಬಹುದಾದ ಬಿಜೆಪಿಗರ ಪ್ರತಿಭಟನೆಯನ್ನು ಮನಗಂಡಿದ್ದ ಅಂದಿನ ರಾಜ್ಯದ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ “ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ಮತ್ತೊಂದು ಆಯೋಧ್ಯೆಯನ್ನಾಗಿ ಮಾಡಲು ರಾಜ್ಯ ಸರಕಾರ ಅವಕಾಶ ನೀಡುವುದಿಲ್ಲ. ಹೀಗಾಗಿ ಬಿಜೆಪಿಗರು ಈದ್ಗಾ ಮೈದಾನದಲ್ಲಿ ಬಾವುಟ ಹಾರಿಸುವ ಪ್ರಯತ್ನವನ್ನು ಕೈಬಿಟ್ಟು ಶಾಂತಿ ಕಾಪಾಡಬೇಕು” ಎಂದು ಆಗಸ್ಟ್ 9, 1994ರಲ್ಲಿ ಮನವಿ ಮಾಡಿದ್ದರು.

1994 ಆಗಸ್ಟ್ 15ರಂದು ಬಿಜೆಪಿ ಮಾಜಿ ಸಚಿವೆ ಉಮಾ ಭಾರತಿ ನೇತೃತ್ವದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಈದ್ಗಾ ಮೈದಾನ ಪ್ರವೇಶಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಕೊನೆಗೂ ಪರಿಸ್ಥಿತಿಯನ್ನು ಹತೋಟಿಗೆ ತರಲು ಅನಿವಾರ್ಯವಾಗಿ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಗುಂಡು ಹಾರಿಸಿದರು. ಪರಿಣಾಮ 5 ಜನ ಪ್ರಾಣ ಕಳೆದುಕೊಂಡರು. ನಗರದಾದ್ಯಂತ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಮುಸ್ಲಿಂ ಸಮುದಾಯದವರು ವಾಸಿಸುವ ಕಾಲೋನಿಗಳಿಗೆ ಹೆಚ್ಚುವರಿ ಪೊಲೀಸ್ ರಕ್ಷಣೆ ನೀಡಲಾಗಿತ್ತು. ಅಲ್ಲದೆ 57 ಗಂಟೆ ನಗರದಲ್ಲಿ ಕರ್ಪ್ಯೂ ವಿಧಿಸಲಾಗಿತ್ತು.

ಶತಮಾನಗಳ ಕಾಲ ಅಣ್ಣ-ತಮ್ಮಂದಿರಂತೆ ಹುಬ್ಬಳ್ಳಿ ಧಾರವಾಡ ನಗರದಲ್ಲಿ ಜೀವನ ಸಾಗಿಸುತ್ತಿದ್ದ ಹಿಂದೂ ಮುಸ್ಲಿಂ ಸಮುದಾಯದ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿತ್ತು. ಮುಂದಿನ ದಿನಗಳಲ್ಲಿ ಬಿಜೆಪಿ ಇದರ ರಾಜಕೀಯ ಫಲವನ್ನು ಇಲ್ಲಿ ಪಡೆದುಕೊಂಡು ಬಂತು.

ಉತ್ತರ ಕರ್ನಾಟಕದ ರಾಜಧಾನಿ ಎಂದೇ ಬಣ್ಣಿಸಲಾಗುವ ಹುಬ್ಬಳ್ಳಿ-ಧಾರವಾಡದಲ್ಲಿ ಖಾತೆ ತೆರೆಯುವ ಬಿಜೆಪಿ ಕನಸು ನನಸಾಗಿತ್ತು. ಈ ಈದ್ಗಾ ಗಲಾಟೆಯನ್ನೇ ಆಧಾರವಾಗಿಟ್ಟುಕೊಂಡು ಜಿಲ್ಲೆಯಲ್ಲಿ ಬೆಳೆದ ನಾಯಕರೆ ಇಂದಿನ ಹಾಲಿ ಸಂಸದ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇತ್ಯಾದಿ.

ಈದ್ಗಾ ಗಲಾಟೆಯ ನಂತರ ದಶಕಗಳಿಂದ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುತ್ತ ಕಟು ಹಿಂದುತ್ವ ಭೋಧನೆಯ ಜೊತೆಗೆ ಪಕ್ಷವನ್ನೂ ಸಂಘಟಿಸುತ್ತಾ ಇಂದು ಇಡೀ ಜಿಲ್ಲೆಯನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 1952 ರಿಂದ 1991ರ ವರೆಗೆ ನಡೆ ಎಲ್ಲಾ ಲೋಕಸಭಾ ಚುನಾವಣೆಯಲ್ಲೂ ಈ ಭಾಗದಲ್ಲಿ ಕಾಂಗ್ರೆಸ್ ತನ್ನ ಪಾರುಪತ್ಯ ಸಾಧಿಸಿತ್ತು. ಆದರೆ, 1996 ರಲ್ಲಿ ಉದ್ಯಮಿ ವಿಜಯ ಸಂಕೇಶ್ವರ್ ಮೊದಲ ಬಾರಿಗೆ ಬಿಜೆಪಿಯಿಂದ ಇಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1998 ಹಾಗೂ 1999 ರಲ್ಲೂ ಮರು ಆಯ್ಕೆಯಾಗಿದ್ದರು.

ಆದರೆ, ಬಿಜೆಪಿಯ ಜೊತೆಗೆ ಮುನಿಸಿಕೊಂಡು ಕನ್ನಡ ನಾಡು ಪಕ್ಷ ಕಟ್ಟುವ ಮೂಲಕ ಸಂಕೇಶ್ವರ್ ಪಕ್ಷ ತೊರೆದಿದ್ದರು. ಪರಿಣಾಮ ಸಂಕೇಶ್ವರ್‌ರಿಂದ ತೆರವಾದ ಸ್ಥಾನಕ್ಕೆ 2004ರಿಂದ ಸತತವಾಗಿ ಸ್ಪರ್ಧಿಸುತ್ತಿರುವ ಹಾಲಿ ಸಂಸದ ಪ್ರಹ್ಲಾದ್ ಜೋಶಿ ಈವರೆಗೆ ಮೂರು ಬಾರಿ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ. ಅಲ್ಲದೆ ಪ್ರಸ್ತುತ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ 6 ಜನ ಬಿಜೆಪಿ ಪಕ್ಷದವರೇ ಇರುವುದು ಉಲ್ಲೇಖಾರ್ಹ.

ಆದರೆ, ಪ್ರಸ್ತುತ ಪರಿಸ್ಥಿತಿ ಬದಲಾಗಿದೆ. ಕಳೆದ 25 ವರ್ಷಗಳಿಂದ ಜಾತಿ ಮತ್ತು ಧರ್ಮದ ಆಧಾರದಲ್ಲಿ ನಿರ್ಣಯವಾಗುತ್ತಿದ್ದ ಇಲ್ಲಿನ ಚುನಾವಣಾ ಕಣ 2 ದಶಕಗಳ ನಂತರ ಮೊದಲ ಬಾರಿಗೆ ಜನಸಾಮಾನ್ಯರು ಪ್ರತಿನಿಧಿಗಳ ಮುಂದೆ ಜಿಲ್ಲೆಯ ಅಭಿವೃದ್ಧಿ ಕುರಿತ ಮೂಲಭೂತ ಪ್ರಶ್ನೆಗಳನ್ನಿಡುತ್ತಿದ್ದಾರೆ.

ಇದು ಸಾಮಾನ್ಯವಾಗಿ ಬಿಜೆಪಿ ಪಾಳಯ ಹಾಗೂ ಸ್ವತಃ ಪ್ರಹ್ಲಾದ್ ಜೋಶಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮೊದಲ ಬಾರಿಗೆ ಬಿಜೆಪಿಯ ಭದ್ರಕೋಟೆ ಹುಬ್ಬಳ್ಳಿ ಧಾರವಾಡದಲ್ಲಿ ಕೇಸರಿ ಪಾಳಯದಲ್ಲಿ ನಡುಕ ಸೃಷ್ಟಿಯಾಗಿದೆ.

ಅಸಲಿಗೆ ಜನಸಾಮಾನ್ಯರು ಬಿಜೆಪಿಯ ಮುಂದಿಡುತ್ತಿರುವ ಪ್ರಮುಖ ಪ್ರಶ್ನೆಗಳು ಹೀಗಿವೆ:

ಬಿಜೆಪಿಯ ವಿರುದ್ಧ ಕೆಂಡವಾಗಿರುವ ಧಾರವಾಡ

ಹುಬ್ಬಳ್ಳಿ-ಧಾರವಾಡದಲ್ಲಿ ಆಯೋಜಿಸಲಾಗಿದ್ದ ಮಹದಾಯಿ ಹೋರಾಟದಲ್ಲಿ ಕನ್ನಡ ಚಲನಚಿತ್ರ ನಟರು.
ಹುಬ್ಬಳ್ಳಿ-ಧಾರವಾಡದಲ್ಲಿ ಆಯೋಜಿಸಲಾಗಿದ್ದ ಮಹದಾಯಿ ಹೋರಾಟದಲ್ಲಿ ಕನ್ನಡ ಚಲನಚಿತ್ರ ನಟರು.
/ಉದಯವಾಣಿ.

ಕಳೆದ ನಾಲ್ಕು ವರ್ಷಗಳಿಂದ ಉತ್ತರ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಸುದ್ದಿಯಾದ ವಿಚಾರವೆಂದರೆ ಮಹದಾಯಿ ನದಿ ನೀರು ಹಂಚಿಕೆ ಅಥವಾ ಕಳಸ-ಬಂಡೂರಿ ನಾಲಾ ವಿವಾದ. ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟದ ನಾಳೆಯಲ್ಲಿ ಹುಟ್ಟುವ ಮಹದಾಯಿ ನದಿ ರಾಜ್ಯದಲ್ಲಿ 35 ಕಿಮೀ ಹಾಗೂ ಗೋವಾದಲ್ಲಿ 45 ಕಿಮೀ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಅನಾಮತ್ತಾಗಿ 156.07 ಟಿಎಂಸಿ ನೀರು ಸಮುದ್ರದ ಪಾಲಾಗುತ್ತಿದೆ ಎಂಬುದು ಕರ್ನಾಟಕದ ಅಂಬೋಣ.

ಈ ನದಿಗಳ ಅನೇಕ ಉಪನದಿಗಳ ಪೈಕಿ ಕರ್ನಾಟಕದಲ್ಲೇ ಹುಟ್ಟುವ ಕಳಸ-ಬಂಡೂರಿಯೂ ಒಂದು. ಕಣಕುಂಬಿಯಲ್ಲಿ ಈ ಎರಡೂ ಉಪ ನದಿಗಳಿಗೆ ಚಿಕ್ಕ ಅಣೆಕಟ್ಟು ಕಟ್ಟಿ ನೀರನ್ನು ಎತ್ತಿ ಕಾಲುವೆ ಮೂಲಕ ಸವದತ್ತಿ ಬಳಿಯ ಮಲಪ್ರಭಾ ನದಿಯ ರೇಣುಕಾ ಸಾಗರ ಜಲಾಶಯಕ್ಕೆ ಹರಿಸಿದರೆ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 7.56 ಟಿಎಂಸಿ ನೀರು ಲಭ್ಯವಾಗುತ್ತದೆ. ಇದನ್ನು ಬಳಸಿಕೊಂಡು ಗದಗ ಜಿಲ್ಲೆಯ ನರಗುಂದ, ರೋಣ, ಧಾರವಾಡ ಜಿಲ್ಲೆಯ ನವಲಗುಂದ, ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿ, ಬೈಲಹೊಂಗಲ ತಾಲೂಕುಗಳಿಗೆ ಹಾಗೂ ಹುಬ್ಬಳ್ಳಿ ಧಾರವಾಡದ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಸಬಹುದು ಎಂಬುದು ಮಹದಾಯಿ ಯೋಜನೆಯ ಉದ್ದೇಶ.

1978 ರಲ್ಲೇ ಈ ಯೋಜನೆ ಸಿದ್ದವಾಗಿದ್ದರೂ, ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯನ್ನು ಕೈಗೊಳ್ಳುವ ಕುರಿತು 2002ರಲ್ಲಿ ಕೇಂದ್ರ ಒಪ್ಪಿಗೆ ಪಡೆಯಲಾಯಿತು. ಆದರೆ, ಅಂದು ಗೋವಾದಲ್ಲಿ ಆಡಳಿತದಲ್ಲಿ ಬಿಜೆಪಿ ಪಕ್ಷ ಹಾಗೂ ಗೋವಾ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಈ ಯೋಜನೆಯಿಂದ ಗೋವಾದ ಸಸ್ಯ ಹಾಗೂ ಪ್ರಾಣಿ ಸಂಕುಲಕ್ಕೆ ಹಾನಿಯಾಗುತ್ತದೆ ಎಂದು ಆಕ್ಷೇಪಣೆ ಸಲ್ಲಿಸಿದ್ದರು. ಪರಿಣಾಮ ಅಂದು ಅಧಿಕಾರದಲ್ಲಿದ್ದ ಪ್ರಧಾನಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಯೋಜನೆ ಕುರಿತು ರಾಜ್ಯಕ್ಕೆ ನೀಡಿದ್ದ ಅನುಮೋದನೆಯನ್ನು ತಡೆಹಿಡಿದಿತ್ತು.

ಕಳೆದ 17 ವರ್ಷಗಳಿಂದ ಈ ಯೋಜನೆಯನ್ನು ಕೈಗೊಳ್ಳುವಂತೆ ಇಲ್ಲಿನ ಜನಸಮುದಾಯ ಸರಕಾರವನ್ನು ಒತ್ತಾಯಿಸುತ್ತಿದೆಯಾದರು ಹೋರಾಟಕ್ಕೆ ದೊಡ್ಡ ಮಟ್ಟದ ದನಿಗೂಡಿರಲಿಲ್ಲ. ಆದರೆ, ಕಳೆದ ಐದು ವರ್ಷಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕ ಬರಗಾಲ ಆವರಿಸಿದೆ. ಜನರಿಗೆ ಕುಡಿಯುವ ಹನಿ ನೀರಿಗೂ ಅಕ್ಷರಶಃ ಆಹಾಕಾರ ಶುರುವಾಗಿದೆ. ಪರಿಣಾಮ ಮಹದಾಯಿ ಹೋರಾಟ ದೊಡ್ಡ ಚಳುವಳಿಯಾಗಿ ರೂಪುಗೊಂಡಿದೆ. ರಾಜ್ಯದ ಸಂಸದರು ಕೇಂದ್ರದ ಮನವೋಲಿಸಿ ಈ ಯೋಜನೆಗೆ ಒಪ್ಪಿಗೆ ಪಡೆಯಬೇಕು ಎಂದು ಜನ ಒತ್ತಾಯಿಸುತ್ತಲೇ ಬಂದಿದ್ದರು ಜನರ ಇಂತಹ ಒತ್ತಾಯಕ್ಕೆ ಬಿಜೆಪಿಗರ ಉತ್ತರ ಕೇವಲ ಮೌನವಷ್ಟೆ.

ನಾಲ್ಕು ಜಿಲ್ಲೆ, ಹದಿಮೂರು ತಾಲೂಕಿನ ಜನರ ಭಾವನಾತ್ಮಕ ವಿಚಾರವಾದ ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ನಿಭಾಯಿಸುವುದರಲ್ಲಿ ಬಿಜೆಪಿ ಎಡವಿರುವುದು ಸ್ಪಷ್ಟ. ಮಹದಾಯಿ ವಿವಾದ ತಣ್ಣಗಾದರೂ ಬಿಜೆಪಿ ತೋರಿದ ನಿರ್ಲಕ್ಷ್ಯ ಧೋರಣೆ ಜನರ ಮನಸ್ಸಿನಿಂದ ಇನ್ನು ಮಾಸಿಲ್ಲ. ಹಾಗೆ ನೋಡಿದರೆ ವಿವಾದ ಸಂಬಂಧ ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ತೆರನಾಗಿ ನಡೆದುಕೊಂಡಿದ್ದವು. ಅಧಿಕಾರದಲ್ಲಿದ್ದ ಕಾರಣಕ್ಕೆ ಬಿಜೆಪಿ ನೈತಿಕ ಹೊಣೆ ಹೊರಬೇಕಾಯಿತಷ್ಟೆ.

ಮಹದಾಯಿ ಹೋರಾಟದ ಸಂದರ್ಭದಲ್ಲಿ ಸಂಸದ ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿ ನಾಯಕರು ತಳೆದ ತಟಸ್ಥ ನಿಲುವು ರೈತರನ್ನು ಕೆರಳಿಸಿತ್ತು. ನವಲಗುಂದದಲ್ಲಿ ನಡೆದ ಸರಕಾರಿ ಕಾರ್ಯಕ್ರಮವೊಂದರಲ್ಲಿ ಮುತ್ತಿಗೆ ಹಾಕಿದ್ದ ರೈತರಿಂದ ತಪ್ಪಿಸಿಕೊಳ್ಳಲು ಸ್ವತಃ ಪ್ರಹ್ಲಾದ್ ಜೋಶಿ ನ್ಯಾಯಾಧೀಶರೊಬ್ಬರ ಕಾರೇರಬೇಕಾಯಿತು. ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಹದಾಯಿ ಹೋರಾಟದ ಪ್ರದೇಶಗಳಲ್ಲಿ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ನುಣುಚಿಕೊಂಡಿದ್ದನ್ನು ರೈತರು ಇನ್ನು ಮರೆತಿಲ್ಲ.

ಇದೀಗ ಲೋಕಸಭೆ ಚುನಾವಣೆ ಹಿನ್ನೆಲೆಯ್ಲಲಿ ಮತ್ತೊಮ್ಮೆ ಮಹದಾಯಿ ನದಿ ನೀರಿನ ವಿಚಾರ ದೊಡ್ಡ ಮಟ್ಟದ ಚರ್ಚೆಯ ಮುನ್ನೆಲೆಗೆ ಬರುತ್ತಿದೆ. ಇವನ್ನೆಲ್ಲ ಗಮನಿಸಿದರೆ ಪ್ರಸ್ತುತ ಸಂದರ್ಭ ಜೋಶಿಯವರಿಗೆ ಅನುಕೂಲಕರವಾಗಿಲ್ಲ. ಈ ವಿಚಾರವೇ ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿಯ ಸೋಲಿಗೂ ಕಾರಣವಾಗಬಹುದು ಎಂದೇ ಹೇಳಲಾಗುತ್ತಿದೆ.

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಹೀಗೊಂದು ವಾದ ಬಲವಾಗಿ ಕೇಳಿಬಂದಿತ್ತು. ಕಳಸ-ಬಂಡೂರಿ ವಿವಾದ ಈ ಬಾರಿ ಉತ್ತರದಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಕೊಡಲಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೂ ಬಿಜೆಪಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರದಲ್ಲಿ ಗರಿಷ್ಠ ಸ್ಥಾನಗಳನ್ನೇ ಗಳಿಸಿ ಎಲ್ಲಾ ರಾಜಕೀಯ ವ್ಯಾಖ್ಯಾನಗಳನ್ನು ಸುಳ್ಳು ಮಾಡಿ ತೋರಿಸಿತ್ತು. ಈಗಲೂ ಬಿಜೆಪಿ ಅಂತಹದ್ದೇ ಒಂದು ಫಲಿತಾಂಶದ ನಿರೀಕ್ಷೆಯಲ್ಲಿದೆ.

ಆದರೂ, ಇವೆಲ್ಲ ಹೋರಾಟಗಳನ್ನು ರಾಜಕೀಯ ವಿಶ್ಲೇಷಣೆಗಳನ್ನು ಬದಿಗಿರಿಸಿ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕುರಿತು ಚರ್ಚೆ ಮಾಡಿದರೆ, ಕಳೆದ 15 ವರ್ಷದ ಅವರ ರಿಪೋರ್ಟ್ ಕಾರ್ಡ್ ಕುರಿತು ಕ್ಷೇತ್ರದ ಜನರಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ.

ಜೋಶಿ ರಿಪೋರ್ಟ್ ಕಾರ್ಡ್

ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ.
ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ.
/ಪಬ್ಲಿಕ್ ಟಿವಿ.

ಕೇಂದ್ರ ಸರಕಾರದ ಸಿಆರ್‌ಎಫ್ ಯೋಜನೆಯ ಅಡಿಯಲ್ಲಿ ಜಿಲ್ಲೆಗೆ 6 ಸಾವಿರ ಕೋಟಿ ರೂ. ಅನುದಾನ ತಂದಿರುವ ಜೋಶಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾಗೂ ನಗರ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡದ ಹೊರ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಿ ಭಾರಿ ಸರಕು-ಸಾರಿಗೆ ವಾಹನಗಳು ನಗರ ಪ್ರವೇಶಿಸದಂತೆ ವಾಹನಗಳ ದಟ್ಟಣೆಗೆ ಬ್ರೇಕ್ ಹಾಕಿದ್ದು ಪ್ರಹ್ಲಾದ್ ಜೋಶಿ ಅವರ ಪ್ರಮುಖ ಸಾಧನೆ ಎನ್ನಲಾಗುತ್ತಿದೆ. ಧಾರವಾಡವನ್ನು ಇತರೆ ಜಿಲ್ಲೆಗಳ ಹಾಗೂ ರಾಜ್ಯಗಳ ಜೊತೆಗೆ ಸಂಪರ್ಕಿಸುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ಹಾಗೂ ಹುಬ್ಬಳ್ಳಿ-ಧಾರವಾಡ ನಗರಗಳ ನಡುವಿನ ಓಡಾಟಕ್ಕೆ ಚತುಷ್ಪತ ರಸ್ತೆ ನಿರ್ಮಾಣವಾಗಿದ್ದು ಇವರ ಕಾಲದಲ್ಲೇ.

ಕೇಂದ್ರದಿಂದ ಸ್ಮಾರ್ಟ್ ಸಿಟಿ ಯೋಜನೆ, ಐಐಟಿ ಮತ್ತು ಏಮ್ಸ್ ಆಸ್ಪತ್ರೆಯನ್ನು ಹುಬ್ಬಳ್ಳಿ- ಧಾರವಾಡಕ್ಕೆ ತರುವಲ್ಲಿ ಜೋಶಿ ಮಹತ್ವದ ಪಾತ್ರ ವಹಿಸಿದ್ದಾರೆ. ಇತರೆ ವಾಣಿಜ್ಯ ನಗರಗಳೊಂದಿಗೆ ಹುಬ್ಬಳ್ಳಿಗೆ ಸಂಪರ್ಕಕೊಂಡಿ ಬೆಳೆಸುವ ನಿಟ್ಟಿನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಮೇಲ್ದರ್ಜೆಗೆ ಏರಿಸಲು ಕೇಂದ್ರದಿಂದ ವಿಶೇಷ ಅನುದಾನ ತಂದಿದ್ದಾರೆ.

ಹುಬ್ಬಳ್ಳಿ ರೈಲ್ವೇ ನಿಲ್ದಾಣ ಮತ್ತು ವರ್ಕ್‌ಶಾಪ್ ಅಧುನೀಕರಣ ಹಾಗೂ ಗುಡ್ಶೆಡ್ ನಿರ್ಮಾಣ. ಐವತ್ತು ಹಾಸಿಗೆಗಳ ರಾಜ್ಯ ಕಾರ್ಮಿಕ ವಿಮಾ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಜೋಶಿ ಶ್ರಮಿಸಿದ್ದಾರೆ. ಅಲ್ಲದೆ ಜನರ ಜೊತೆಗೆ ಕಾರ್ಯಕರ್ತರ ಜೊತೆಗೆ ಯಾವಾಗಲೂ ಸಂಪರ್ಕದಲ್ಲಿರುವ ಕ್ಲೀನ್ ಇಮೇಜ್ ಹೊಂದಿರುವ ನಾಯಕ ಎಂಬುದು ಹುಬ್ಬಳ್ಳಿ-ಧಾರವಾಡದ ಕೆಲವು ಸಾಮಾನ್ಯ ಮತದಾರರ ಅಭಿಪ್ರಾಯ.

ಆದರೆ, “ಸ್ಮಾರ್ಟ್ ಸಿಟಿ ಎಂಬುದು ಒಂದು ಭೋಗಸ್ ಯೋಜನೆ. ಕಳೆದ ಐದು ವರ್ಷದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಹೆಸರಲ್ಲಿ ಜಿಲ್ಲೆಯಲ್ಲಿ ಒಂದು ಹುಲ್ಲು ಕಡ್ಡಿಯೂ ಅಲುಗಾಡಿಲ್ಲ. ಇದು ಜನರಿಗೆ ಮಂಕುಬೂದಿ ಎರಚುವ ಕೆಲಸ. ಇನ್ನೂ ಶಿಕ್ಷಣ ಕಾಶಿ ಎಂದೇ ಹೆಸರಾಗಿರುವ ಹುಬ್ಬಳ್ಳಿ-ಧಾರವಾಡದಲ್ಲಿ ನಿರುದ್ಯೋಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇಲ್ಲಿನ ಪದವೀಧರ ವಿದ್ಯಾರ್ಥಿಗಳಿಗೆ ಕೆಲಸವಿಲ್ಲ. ಪರಿಣಾಮ ಚಿಲ್ಲರೆ ಕಾಸಿಗೆ ಬೇರೆ ಬೇರೆ ಬೃಹತ್‌ ನಗರಗಳಿಗೆ ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಇವರಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಕಳೆದ 15 ವರ್ಷದಲ್ಲಿ ಕೇಂದ್ರದ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಒಂದೇ ಒಂದು ಕಾರ್ಖಾನೆ ಅಥವಾ ಪರ್ಯಾಯ ಉದ್ಯಮವನ್ನು ಸ್ಥಾಪಿಸುವ ಕೆಲಸವಾಗಿಲ್ಲ.

ಸಿಆರ್‌ಎಫ್ ಅಡಿಯಲ್ಲಿ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ಬಂದರೂ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ, ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ ರೈತರಿಂದ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ, ರೈತರಿಗೆ ಈವರೆಗೂ ಹೆಚ್ಚುವರಿ ಹಣ ಕೊಡಿಸಿಲ್ಲ. ಸಂಸದರ ಆದರ್ಶ ಗ್ರಾಮ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ.

ಇದೆಲ್ಲಕ್ಕಿಂತ ಮುಖ್ಯವಾಗಿ ಇಂದು ಜಿಲ್ಲೆಯಲ್ಲಿ ಬಿಜೆಪಿಯದ್ದೇ ಪಾರಮ್ಯವಿದೆ. ಕ್ಷೇತ್ರದ ಬಹುತೇಕ ಮಂದಿ ಶಾಸಕರು ಹಾಗೂ ಸಂಸದರು ಬಿಜೆಪಿಯವರೆ. ಆದರೆ, ಕೃಷಿ ಕ್ಷೇತ್ರಕ್ಕೆ ಇವರ ಕೊಡುಗೆ ನಗಣ್ಯ. ಪರಿಣಾಮ ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.

ಈ ನಡುವೆ ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಐತೀರ್ಪು ಬಂದರೂ ಸಹ ಕೇಂದ್ರದಿಂದ ಗೆಜೆಟ್ ಹೊರಡಿಸಲು ಅವರು ಶ್ರಮಿಸಿಲ್ಲ. ಹೀಗೆ ತನ್ನದೇ ಕ್ಷೇತ್ರದ ಜನರಿಗೆ ಕುಡಿಯಲು ಸಹ ನೀರು ಕೊಡಲಾಗದ ಸಂಸದ ನಮಗ್ಯಾಕೆ? ಅಭಿವೃದ್ಧಿ ಎಂದರೆ ಕೇವಲ ರಸ್ತೆ ಕಟ್ಟಡಗಳನ್ನು ನಿರ್ಮಿಸುವುದಲ್ಲ” ಎಂದು ಪ್ರಹ್ಲಾದ್ ಜೋಶಿ ವಿರುದ್ಧ ಗುರುತರ ಆರೋಪಗಳನ್ನು ಮುಂದಿಡುತ್ತಾರೆ ಹುಬ್ಬಳ್ಳಿ ಧಾರವಾಡ ಕಾರ್ಮಿಕ ಸಂಘದ ಅಧ್ಯಕ್ಷ ಅಜಯ್ ಹಿರೇಮಠ್.

ಜೋಶಿ ವಿರುದ್ಧ ಪಕ್ಷದೊಳಗಿದೆ ಅಸಮಾಧಾನ

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಪ್ರಹ್ಲಾದ್ ಜೋಶಿ ಅವರಿಗೆ ಟಿಕೆಟ್ ಕೊಡಬಾರದು ಎಂಬ ಕೂಗು ಸ್ವಪಕ್ಷೀಯರಿಂದಲೇ ಕೇಳಿಬಂದಿತ್ತು. ಆದರೆ, ಸಂಘಪರಿವಾರದ ಹಿನ್ನೆಲೆಯಿರುವ ಜೋಶಿ ಅವರಿಗೆ ಟಿಕೆಟ್ ತಪ್ಪಿಸುವುದು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಕೊನೆಗೂ ಮೋದಿ ಅಲೆಯ ನಡುವೆ ಜೋಶಿ ಗೆದ್ದು ದಡ ಸೇರಿದ್ದರು.

ಈ ಬಾರಿಯೂ ಅಂತಹದ್ದೇ ಕೂಗು ಎದ್ದಿತ್ತಾರೂ ಎಲ್ಲಾ ಹಾಲಿ ಸಂಸದರಿಗೂ ಟಿಕೆಟ್ ನೀಡಲು ಕೇಂದ್ರ ಸೂಚಿಸಿದ ಪರಿಣಾಮ ಪ್ರಹ್ಲಾದ್ ಜೋಶಿಗೆ ಕೊನೆಗೂ ಟಿಕೆಟ್ ದೊರಕಿದೆ. ಆದರೆ, ಈ ಬಾರಿ ಅವರ ಸೋಲಿಗೆ ಸ್ವಪಕ್ಷೀಯರೆ ಶ್ರಮಿಸಲಿದ್ದಾರೆ ಎನ್ನುತ್ತಿವೆ ನಂಬಿಕಾರ್ಹ ಮೂಲಗಳು. ಬಿಜೆಪಿ ಪಕ್ಷದ ಸ್ಥಳೀಯ ನಾಯಕರ ನಡುವಿನ ಭಿನ್ನಾಬಿಪ್ರಾಯಗಳು ಹೀಗೊಂದು ಸಂಶಗಳನ್ನು ಮುಂದಿಡುತ್ತಿವೆ. ಇದಕ್ಕೆ ಕಾರಣಗಳೂ ಇಲ್ಲದೆ ಏನಿಲ್ಲ.

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಕಲಘಟಗಿ ಹಾಗೂ ಕುಂದಗೋಳ ಕ್ಷೇತ್ರದ ಟಿಕೆಟ್‌ಗಾಗಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇತ್ತು. ಕಲಘಟಗಿ ಕ್ಷೇತ್ರದಲ್ಲಿ ಅನಿಲ್ ಲಾಡ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಸೋತಿದ್ದ ಮಾಜಿ ಶಾಸಕ ಸಿ.ಎಂ. ನಿಂಬಣ್ಣನವರ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಮಹೇಶ್ ತೆಂಗಿನಕಾಯಿ ಪರ ಲಾಭಿ ಮಾಡಿದ್ದ ಪ್ರಹ್ಲಾದ್ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಕಾರ್ಯಕರ್ತರ ವಿರೋಧದ ನಡುವೆಯೂ ಮಹೇಶ್‌ಗೆ ಟಿಕೆಟ್‌ ಕೊಡಿಸುವಲ್ಲಿ ಸಫಲರಾಗಿದ್ದರು.

ಆದರೆ, ಯಡಿಯೂರಪ್ಪನವರಿಗೆ ಆಪ್ತ ಎನಿಸಿಕೊಂಡಿದ್ದ ನಿಂಬಣ್ಣನವರ್ ಬೆಂಗಳೂರಿಗೆ ಬಂದು ಬಿಜೆಪಿ ಕಚೇರಿಯಲ್ಲಿ ಪ್ರತಿಭಟನೆ ಹೂಡುವ ಮೂಲಕ ಕೊನೆಗೂ ಟಿಕೆಟ್‌ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿ ಸಂತೋಷ್ ಲಾಡ್‌ ವಿರುದ್ಧ 25 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಸ್ವಾಭಾವಿಕವಾಗಿ ಇದು ಜೋಶಿ ಹಾಗೂ ನಿಂಬಣ್ಣನವರ್ ಅವರ ನಡುವಿನ ವೈಷಮ್ಯಕ್ಕೆ ಕಾರಣವಾಗಿದ್ದು, ಕಲಘಟಗಿ ಕ್ಷೇತ್ರದಲ್ಲಿ ನಿಂಬಣ್ಣನವರ್ ಬೆಂಬಲಿಗರು ಈಗಾಗಲೇ ಜೋಶಿ ವಿರುದ್ಧ ನಿಂತಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಕುಂದಗೋಳ ಕ್ಷೇತ್ರದಲ್ಲಿ ಮಾಜಿ ಶಾಸಕ ಚಿಕ್ಕನಗೌಡ್ರ ಸಿದ್ದನಗೌಡ ಹಾಗೂ ಎಂ.ಆರ್. ಪಾಟೀಲ್ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಈ ಕ್ಷೇತ್ರದಲ್ಲೂ ತಮ್ಮ ಬೆಂಬಲಿಗ ಗಣೇಶ್ ಶೆಟ್ಟರ್ ಪರ ಪ್ರಹ್ಲಾದ್ ಜೋಶಿ ದೊಡ್ಡ ಮಟ್ಟದಲ್ಲಿ ಟಿಕೆಟ್ ಗಾಗಿ ಲಾಭಿ ಮಾಡಿದ್ದರು. ಆದರೆ, ಕೊನೆಗೂ ಬಿಜೆಪಿ ಟಿಕೆಟ್ ಮಾಜಿ ಶಾಸಕ ಚಿಕ್ಕನಗೌಡ್ರ ಸಿದ್ದನಗೌಡ ಅವರಿಗೆ ಲಭಿಸಿತ್ತು. ಇದರಿಂದ ಅತೃಪ್ತರಾಗಿದ್ದ ಶೆಟ್ಟರ್ ಹಾಗೂ ಜೋಶಿ ಕುಂದಗೋಳ ಕ್ಷೇತ್ರದಲ್ಲಿ ಚಿಕ್ಕನಗೌಡ ಸೋಲನ್ನು ಭಯಸಿದ್ದರು ಹಾಗೂ ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದರು ಎನ್ನುವ ಆರೋಪವಿದೆ.

ಕೊನೆಗೂ ಅವರ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಸಿದ್ದನಗೌಡ ಕಾಂಗ್ರೆಸ್ ಪಕ್ಷದ ಸಿ.ಎಸ್. ಶಿವಳ್ಳಿ ವಿರುದ್ಧ ಕೇವಲ 630 ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. ಚುನಾವಣಾ ಫಲಿತಾಶ ಪ್ರಕಟವಾಗುತ್ತಿದ್ದಂತೆ ಫೇಸ್‌ಬುಕ್‌ನಲ್ಲಿ ಜೋಶಿ ವಿರುದ್ಧ ಗುಡುಗಿದ್ದ ಚಿಕ್ಕನಗೌಡ್ರ ಅವರ ಮಗಳು “ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಮಗೆ ನಾವು ಯಾರು ಅಂತ ತೋರಿಸ್ತೀವಿ” ಎಂದು ಬಹಿರಂಗವಾಗಿ ಜೋಶಿ ವಿರುದ್ಧ ಕೆಂಡಕಾರಿದ್ದರು.

ಹೀಗಾಗಿ ಕುಂದಗೋಳದಲ್ಲಿ ಚಿಕ್ಕನಗೌಡ್ರ ಕುಟುಂಬ ಜೋಶಿ ವಿರುದ್ಧ ಕೆಲಸ ಮಾಡಿದರೆ ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಲೀಡ್ ಸಿಗಲಿದೆ. ಇದಲ್ಲದೆ ಕಾಂಗ್ರೆಸ್ ಶಾಸಕ ಸಿ.ಎಸ್. ಶಿವಳ್ಳಿ ಇತ್ತೀಚೆಗೆ ಮೃತಪಟ್ಟಿದ್ದು ಕನಿಕರದ ಅಲೆಯ ಮೇಲೆಯೂ ಈ ಭಾಗದಿಂದ ಕಾಂಗ್ರೆಸ್‌ಗೆ ಒಂದಷ್ಟು ಮತಗಳು ಹರಿದು ಬರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್ & ಜಾತಿ ಲೆಕ್ಕಾಚಾರ

ಕಾಂಗ್ರೆಸ್ ಮಾಜಿ ಶಾಸಕ ವಿನಯ್ ಕುಲಕರ್ಣಿ.
ಕಾಂಗ್ರೆಸ್ ಮಾಜಿ ಶಾಸಕ ವಿನಯ್ ಕುಲಕರ್ಣಿ.
/ಒನ್ ಇಂಡಿಯಾ

ಪ್ರತಿಷ್ಠಿತ ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾಲಿಗೆ ಜನರಿಗೆ ಹತ್ತಿರವಾದ ಅಭ್ಯರ್ಥಿಯೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಕಳೆದ ಚುನಾವಣೆಯಲ್ಲಿ ಪ್ರಹ್ಲಾದ್ ಜೋಶಿ ವಿರುದ್ಧ ಸಮರ್ಥ ಅಭ್ಯರ್ಥಿ ಇಲ್ಲದ ಕಾರಣ ಅಂದಿನ ಸಚಿವ ಪ್ರಬಲ ಲಿಂಗಾಯತ ಸಮುದಾಯದ ವಿನಯ್ ಕುಲಕರ್ಣಿಗೆ ರಾಜಿನಾಮೆ ಕೊಡಿಸಿ ಲೋಕಸಭೆಗೆ ಸ್ಪರ್ಧೆ ಮಾಡಿಸಲಾಗಿತ್ತು.

ಈ ಭಾರಿಯೂ ಕಾಂಗ್ರೆಸ್ ಪರ ವಿನಯ್ ಕುಲಕರ್ಣಿಯೇ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದ ಕುಲಕರ್ಣಿ 2018ರ ವಿಧಾನಸಭೆಯಲ್ಲೂ ಅನಿರೀಕ್ಷಿತವಾಗಿ ಸೋಲನುಭವಿಸಿದ್ದರು. ಹೀಗಾಗಿ 2014ರ ಸೋಲಿಗೆ ಜೋಶಿ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಈ ಬಾರಿ ವಿನಯ್ ಕುಲಕರ್ಣಿ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ತಮ್ಮ ಮನೆಯಲ್ಲೇ ಜಿಲ್ಲೆಯ ಎಲ್ಲಾ ಸಮುದಾಯದ ನಾಯಕರ ಜೊತೆಗೆ ಚರ್ಚೆ ನಡೆಸಿರುವ ವಿನಯ್, ಉತ್ತರ ಕರ್ನಾಟಕದ ಪ್ರಮುಖ ಮಠಗಳ ಸ್ವಾಮೀಜಿಗಳನ್ನು ಮನೆಗೆ ಕರೆಸಿ ಒಂದು ಹಂತದ ಚರ್ಚೆ ಮುಗಿಸಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಚುನಾವಣಾ ಕಣ ಪ್ರವೇಶಿಸಲು ಉತ್ಸುಕತೆಯನ್ನು ತೋರಿದ್ದಾರೆ.

ವಿನಯ್ ಕುಲಕರ್ಣಿ ಒಂದೆಡೆಯಾದರೆ ಹುಬ್ಬಳ್ಳಿ-ಧಾರವಾಡ ಮಾಜಿ ಸಂಸದ ಐ.ಜಿ.ಸನದಿ ಪುತ್ರ ಶಾಕೀರ್ ಸನದಿ ಸಹ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಶೇ.23ರಷ್ಟು ಇದ್ದು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಶಾಕೀರ್‌ಗೆ ಟಿಕೆಟ್ ನೀಡಬೇಕು ಎಂಬ ಕೂಗು ಜಿಲ್ಲೆಯಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಶಾಕೀರ್ ಸನದಿ ಆಪ್ತರಾಗಿದ್ದು ಶಾಕೀರ್‌ಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆಯಾದರೂ ಯಾವುದೂ ಇನ್ನೂ ಸ್ಪಷ್ಟವಾಗಿಲ್ಲ.

ಜಿಲ್ಲೆಯ ಮಟ್ಟಿಗೆ ಶಾಸಕರಾಗಿ ಮಾಜಿ ಸಚಿವರಾಗಿ ವಿನಯ್ ಕುಲಕರ್ಣಿ ನೀಡಿರುವ ಕೊಡುಗೆ ಅಷ್ಟಕಷ್ಟೆ. ಆದರೆ, ಅವರು ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂಬುದೆ ಅವರ ಪರವಾಗಿರುವ ದೊಡ್ಡ ಬಲ. ಅಲ್ಲದೆ 2018ರಲ್ಲಿ ರೂಪುಗೊಂಡ ಲಿಂಗಾಯತ ಸ್ವತಂತ್ರ್ಯ ಧರ್ಮ ಚಳುವಳಿಯಲ್ಲೂ ಅವರು ತಮ್ಮನ್ನು ಗುರುತಿಸಿಕೊಂಡಿದ್ದರು.

ಈ ನಡುವೆ ಜಿಲ್ಲೆಯಲ್ಲಿ ಶೇ.35 ರಷ್ಟಿರುವ ಲಿಂಗಾಯತ ಮತಗಳೇ ನಿರ್ಣಾಯಕ. ಹೀಗಾಗಿ ಕಾಂಗ್ರೆಸ್ ಜಾತಿ ಸಮೀಕರಣಕ್ಕೆ ಮುಂದಾದರೆ ವಿನಯ್ ಕುಲಕರ್ಣಿ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಲಿದೆ. ಕಳೆದ ಎರಡೂ ಚುನಾವಣೆಗಳಲ್ಲಿ ವಿನಯ್ ಸೋತಿರುವುದು ಕ್ಷೇತ್ರದಲ್ಲಿ ಅವರ ವಿರುದ್ಧ ಅನುಕಂಪದ ಅಲೆಯನ್ನು ಸೃಷ್ಟಿಸಿದೆ.

ವಿನಯ್‌ಗೆ ಟಿಕೆಟ್ ನೀಡಿದರೆ ಬೃಹತ್ ಲಿಂಗಾಯತ ಹಾಗೂ ಅಲ್ಪ ಸಂಖ್ಯಾತ ಮತಗಳು ಈ ಬಾರಿ ಕಾಂಗ್ರೆಸ್ ಪರ ಚಲಾವಣೆಯಾಗಲಿದೆ. ಇದಲ್ಲದೆ 1.84 ಲಕ್ಷ ಪರಿಶಿಷ್ಟ ಜಾತಿ ಹಾಗೂ 72,000 ಪರಿಶಿಷ್ಟ ಪಂಗಡ 1.98 ಲಕ್ಷ ಕುರುಬ ಮತಗಳು ಕಾಂಗ್ರೆಸ್ ಕಡೆಗೆ ವಾಲುವ ಸಾಧ್ಯತೆ ಇದ್ದು, ಇದು ಅಲ್ಪ ಸಂಖ್ಯಾತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪ್ರಹ್ಲಾದ್ ಜೋಶಿಗೆ ಕಂಟಕವಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಯಾವ ಚುನಾವಣೆಯಲ್ಲೂ ಇಲ್ಲದಷ್ಟು ಮಟ್ಟಿಗೆ ಈ ಬಾರಿ ಪ್ರಹ್ಲಾದ್ ಜೋಶಿ ಹಾಗೂ ವಿನಯ್ ಕುಲಕರ್ಣಿ ನಡುವೆ ಜಿದ್ದಾಜಿದ್ದಿ ಸಮರಕ್ಕೆ ಹುಬ್ಬಳ್ಳಿ-ಧಾರವಾಡ ಲೋಕಸಭಾ ಚುನಾವಣಾ ಕಣ ಸಿದ್ದವಾಗಿರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಬಿಜೆಪಿ ಪಕ್ಷದೊಳಗಿನ ಕೆಲ ಭಿನ್ನಾಬಿಪ್ರಾಯ ಹಾಗೂ ಆಡಳಿತ ವಿರೋಧಿ ಅಲೆಯ ಲಾಭ ಗಳಿಸಲು ವಿನಯ್ ಕುಲಕರ್ಣಿ ಎಲ್ಲಾ ರೀತಿಯ ತಯಾರಿ ನಡೆಸಿದ್ದಾರೆ. ಅಲ್ಲದೆ ಜನರೂ ಬದಲಾವಣೆ ಬಯಸಿದ್ದಾರೆ.

ಆದರೂ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳು ಚುನಾವಣೆ ನಂತರ ಸುಳ್ಳಾಗಿದೆ ಎಂಬುದೊಂದೆ ಸದ್ಯಕ್ಕೆ ಪ್ರಹ್ಲಾದ್ ಜೋಶಿ ಖುಷಿಗೆ ಕಾರಣವಾಗಬಹುದಾದ ಅಂಶ.