samachara
www.samachara.com
ಕೊಪ್ಪಳ ಲೋಕಸಭೆ: ಎರಡು ಕುಟುಂಬಗಳ ನಡುವಿನ ಜಿದ್ದಾಜಿದ್ದಿಯೇ ಇಲ್ಲಿ ‘ಪ್ರಜಾಪ್ರಭುತ್ವದ ಹಬ್ಬ’
ರಾಜ್ಯ

ಕೊಪ್ಪಳ ಲೋಕಸಭೆ: ಎರಡು ಕುಟುಂಬಗಳ ನಡುವಿನ ಜಿದ್ದಾಜಿದ್ದಿಯೇ ಇಲ್ಲಿ ‘ಪ್ರಜಾಪ್ರಭುತ್ವದ ಹಬ್ಬ’

ಕೊಪ್ಪಳದ ಮತದಾರರಿಗೆ ಕಾಂಗ್ರೆಸ್‌ನ ಬಸವರಾಜ ಹಿಟ್ನಾಳ್ ಹಾಗೂ ಬಿಜೆಪಿಯ ಕರಡಿ ಸಂಗಣ್ಣ ಕುಟುಂಬದ ಹೊರತಾಗಿ ಬೇರೆ ಆಯ್ಕೆಗಳೆ ಇಲ್ಲದಿರುವುದು ಜಿಲ್ಲೆಯ ಅಭಿವೃದ್ಧಿಗೆ ಉರುಳಾಗಿ ಪರಿಣಮಿಸಿದೆ.

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

ಹೈದ್ರಾಬಾದ್ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಕೊಪ್ಪಳವೂ ಒಂದು. ರಾಯಚೂರು ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದ ಕೊಪ್ಪಳವನ್ನು 1998ರಲ್ಲಿ ಸ್ವತಂತ್ರ್ಯ ಜಿಲ್ಲೆಯಾಗಿ ಘೋಷಿಸಲಾಯಿತು. ಗಂಗಾವತಿ, ಕೊಪ್ಪಳ, ಕುಷ್ಟಗಿ, ಕನಕಗಿರಿ ಹಾಗೂ ಯಲಬುರ್ಗಾ ತಾಲೂಕುಗಳನ್ನು ಒಳಗೊಂಡ ಕೊಪ್ಪಳ ಜಿಲ್ಲೆಯಾಗೇನೋ ಅಸ್ಥಿತ್ವಕ್ಕೆ ಬಂದಿದೆ. ಆದರೆ, ಆಡಳಿತಾತ್ಮಕ ಬದಲಾವಣೆ ಇಲ್ಲಿನ ಸಮಸ್ಯೆಗಳಿಗೆ ಮುಕ್ತಿ ನೀಡಲು ಸೋತು ಹೋಗಿದೆ.

ಶೇ.76ರಷ್ಟು ಮಳೆಯಾಧಾರಿತ ಖುಷ್ಕಿ ಭೂಮಿಯನ್ನು ಹೊಂದಿರುವ ಕೊಪ್ಪಳದ ಕೂಗಳತೆಯ ದೂರದಲ್ಲಿದೆ (ಕೇವಲ 36 ಕಿಮೀ) ಹೊಸಪೇಟೆಯ ತುಂಗಾಭದ್ರ ಅಣೆಕಟ್ಟೆ. ಆದರೆ ಕೊಪ್ಪಳ ಜಿಲ್ಲೆಗೆ ಕೃಷಿ ಮಾಡುವುದಕ್ಕಿರಲಿ ಕುಡಿಯುವುದಕ್ಕೂ ನೀರಿಲ್ಲ. ಈ ಬಾಗದ ಶೇ.90 ರಷ್ಟು ಗ್ರಾಮಗಳಲ್ಲಿ ಈಗಲೂ ಅಪಾಯಕಾರಿ ಆರ್ಸೆನಿಕ್ ಅಂಶವನ್ನು ಒಳಗೊಂಡ ಅಂತರ್ಜಲವೇ ಕುಡಿಯಲು ಆಧಾರ. ಇದೇ ಕಾರಣಕ್ಕೆ ಕೊಪ್ಪಳದ ಬಹುತೇಕ ಜನರು ಎಲುಬು ಸಂಬಂಧಿ ಮಾರಕ ಖಾಯಿಲೆಗೆ ತುತ್ತಾಗುತ್ತಿರುವುದನ್ನು ನಾವಿಲ್ಲಿ ಸ್ಮರಿಸಬಹುದು.

ತುಂಗಭದ್ರಾ ಹಿನ್ನೀರಿನಿಂದ ಏತ ನೀರಾವರಿ ಮೂಲಕ ಕೊಪ್ಪಳದ ಭೂಮಿಗಳಿಗೆ ನೀರು ಹರಿಸುವ ಹತ್ತಾರು ಯೋಜನೆಗಳು ಜಿಲ್ಲೆಯಲ್ಲಿ ಸಿದ್ದವಿದೆ. ಆದರೆ, ಅದನ್ನು ಕಾರ್ಯರೂಪಕ್ಕೆ ತರಲು ರಾಜಕಾರಣಿಗಳಿಗೆ ಇಚ್ಚಾಶಕ್ತಿ ಇಲ್ಲ. ಈ ವಿಚಾರದಲ್ಲಿ ಮಾತ್ರ ಪಕ್ಷಭೇದವಿಲ್ಲದೆ ಎಲ್ಲಾ ನಾಯಕರೂ ಒಂದಾಗಿರುವುದು ವಿಶೇಷ.

ಇದೇ ಕಾರಣಕ್ಕೆ ಮಳೆಗಾಲದ ಹೊರತು ಇತರೆ ತಿಂಗಳುಗಳಲ್ಲಿ ಸಾಮಾನ್ಯವಾಗಿ ಗುಳೆ ಹೋಗುವ ರೈತರನ್ನು ಇಲ್ಲಿ ಕಾಣಬಹುದು. ಇಲ್ಲಿನ ಗಿಣಿಗೆರ, ಕುಷ್ಟಗಿ, ಯಲಬುರ್ಗಾ, ಮಸ್ಕಿ, ಶಿರಗುಪ್ಪದಿಂದ ಜನ ಗುಂಪು ಗುಂಪಾಗಿ ಲಾರಿ ಮಾಡಿಕೊಂಡು ದೊಡ್ಡ ದೊಡ್ಡ ನಗರಗಳಿಗೆ ಗುಳೆ ಹೋಗುತ್ತಾರೆ. ಇವರನ್ನು ಬೆಂಗಳೂರು, ಮುಂಬೈ ನಂತಹ ನಗರಗಳಲ್ಲಿ ಕೂಲಿ ಕೆಲಸಕ್ಕೆ ನೇಮಿಸಲೆಂದೆ ಒಂದಷ್ಟು ಮಧ್ಯವರ್ತಿಗಳೂ ಜಿಲ್ಲೆಯಲ್ಲಿದ್ದಾರೆ.

ಈ ತಿಂಗಳಲ್ಲಿ ಒಮ್ಮೆ ಕೊಪ್ಪಳದ ರೈಲ್ವೆ ನಿಲ್ದಾಣಕ್ಕೆ ಭೇಟಿ ಕೊಟ್ಟರೆ ಕುಟುಂಬ ಸಮೇತರಾಗಿ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ನಗರಗಳಿಗೆ ಗುಳೆ ಹೊರಡುವ ರೈತರ ದೊಡ್ಡ ಬಳಗವನ್ನು ಪ್ರತಿದಿನ ಕಾಣಬಹುದು. ಹೀಗಿದೆ ಉತ್ತರ ಕರ್ನಾಟಕದ ಬಯಲು ಸೀಮೆಯ ರೈತರ ಬದುಕು.

ಇದಲ್ಲದೆ, ನಿರುದ್ಯೋಗ ಮೂಲಭೂತ ಸೌಲಭ್ಯಗಳ ಕೊರತೆ, ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಸೇರಿದಂತೆ ಈ ಜಿಲ್ಲೆಯಲ್ಲಿ ಸಮಸ್ಯೆಗಳಿಗೆ ಕೊರತೆ ಎಂಬುದಿಲ್ಲ. ಆದರೆ, ಈ ಯಾವ ಸಮಸ್ಯೆಗಳು ಇಲ್ಲಿನ ಯಾವ ಚುನಾವಣೆಯಲ್ಲೂ ಮೂಲಭೂತ ಪ್ರಶ್ನೆಯಾಗುವುದೇ ಇಲ್ಲ ಎಂಬುದು ಮಾತ್ರ ವಿಷಾಧಕರ. ಬದಲಿಗೆ ಜಾತಿ ಹಾಗೂ ಎರಡು ಕುಟುಂಬಗಳ ನಡುವಿನ ಪ್ರತಿಷ್ಠೆಯೇ ಈವರೆಗೆ ಈ ಜಿಲ್ಲೆಯ ಚುನಾವಣಾ ಕಣದ ಪ್ರಮುಖ ವಿಚಾರವಾಗಿದೆ. ಜಿಲ್ಲೆ ಹಿಂದುಳಿಯಲು ಇದೂ ಒಂದು ಕಾರಣ.

ಕೊಪ್ಪಳ ಲೋಕಸಭಾ ಕ್ಷೇತ್ರ:

ಕೊಪ್ಪಳ ಲೋಕಸಭೆ: ಎರಡು ಕುಟುಂಬಗಳ ನಡುವಿನ ಜಿದ್ದಾಜಿದ್ದಿಯೇ ಇಲ್ಲಿ ‘ಪ್ರಜಾಪ್ರಭುತ್ವದ ಹಬ್ಬ’

ಕೊಪ್ಪಳ, ಗಂಗಾವತಿ, ಕುಷ್ಟಗಿ, ಕಾರಟಗಿ ಹಾಗೂ ಯಲಬುರ್ಗ ಸೇರಿದಂತೆ ಒಟ್ಟು ಐದು ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ಚಿಕ್ಕ ಜಿಲ್ಲೆ ಕೊಪ್ಪಳ. 2008ರಲ್ಲಿ ಮತಕ್ಷೇತ್ರ ಮರುವಿಂಗಡನೆಯಲ್ಲಿ ಬಳ್ಳಾರಿಯ ಹೊಸಪೇಟೆ ಹಾಗೂ ಗದಗದ ಮುಂಡರಗಿಯನ್ನು ಕೈಬಿಟ್ಟು ರಾಯಚೂರಿನ ಸಿಂಧನೂರು ಮಸ್ಕಿ ಹಾಗೂ ಬಳ್ಳಾರಿಯ ಶಿರಗುಪ್ಪವನ್ನು ಸೇರ್ಪಡೆಗೊಳಿಸಲಾಯಿತು. ಕೊಪ್ಪಳ ಮೂಲತಃ ಐದು ತಾಲೂಕುಗಳನ್ನು ಹೊಂದಿದ್ದರೂ ಲೋಕಸಭೆ ಚುನಾವಣೆಗೆ ಮಾತ್ರ 8 ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ.

ರಾಯಚೂರಿನ ಭಾಗವಾಗಿದ್ದ 1951 ರಿಂದ 1996ರ ವರೆಗಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಈ ಭಾಗದಲ್ಲಿ ಪಾರುಪತ್ಯ ಸಾಧಿಸಿತ್ತು. ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿದ್ದ ಈ ಜಿಲ್ಲೆಯಲ್ಲಿ 1989 ಹಾಗೂ 1996ರಲ್ಲಿ ಎರಡು ಬಾರಿ ಮಾತ್ರ ಜನತಾ ದಳ ಗೆಲುವು ಸಾಧಿಸಿತ್ತು. ಜನತಾ ದಳದಿಂದ ಗೆದ್ದಿದ್ದ ಬಸವರಾಜ ರಾಯರೆಡ್ಡಿ ನಂತರ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಹೊಸ ಜಿಲ್ಲೆಯಾಗಿ ರೂಪಗೊಂಡ ನಂತರವೂ 1998, 1999 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹಿರಿಯ ರಾಜಕಾರಣಿ ಹೆಚ್‌. ಜಿ. ರಾಮುಲು ಗೆಲುವು ಸಾಧಿಸಿದ್ದರೆ, 2004ರಲ್ಲಿ ಕಾಂಗ್ರೆಸ್‌ನ ಮತ್ತೋರ್ವ ಹಿರಿಯ ಕೆ. ವಿರುಪಾಕ್ಷಪ್ಪ ಗೆದ್ದಿದ್ದರು. ಈ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಜನತಾದಳವೇ ನೇರ ಏದುರಾಳಿಯಾಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ 2009ರಿಂದ ಈಚೆಗೆ ಕೊಪ್ಪಳ ಬಿಜೆಪಿ ತೆಕ್ಕೆಗೆ ಜಾರಿದೆ. ಅಲ್ಲದೆ ಜೆಡಿಎಸ್ ತನ್ನ ನೆಲೆಗಳನ್ನು ಕಳೆದುಕೊಂಡಿದೆ.

ಕರಡಿ ವರ್ಸಸ್‌ ಹಿಟ್ನಾಳ್ ಕುಟುಂಬ:

ಕೊಪ್ಪಳ ಲೋಕಸಭೆ: ಎರಡು ಕುಟುಂಬಗಳ ನಡುವಿನ ಜಿದ್ದಾಜಿದ್ದಿಯೇ ಇಲ್ಲಿ ‘ಪ್ರಜಾಪ್ರಭುತ್ವದ ಹಬ್ಬ’

ಕೊಪ್ಪಳ ಜಿಲ್ಲೆ ರಾಜಕಾರಣಕ್ಕೆ ಸಂಬಂಧಿಸಿದಂತೆ ಹಾಲಿ ಬಿಜೆಪಿ ಸಂಸದ ಕರಡಿ ಸಂಗಣ್ಣ ಅಮರಪ್ಪ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಬಸವರಾಜ ಹಿಟ್ನಾಳ್ ಅವರ ಕುಟುಂಬಗಳೆ ನಿರ್ಣಾಯಕ.

ಜಿಲ್ಲೆಯಲ್ಲಿ ನಡೆಯುವ ಯಾವುದೇ ಚುನಾವಣೆಗಳಿರಲಿ ಈ ಎರಡೂ ಕುಟುಂಬಗಳಿಂದಲೇ ಅಭ್ಯರ್ಥಿಗಳು ಸ್ಪರ್ಧಿಸಬೇಕು ಇವರಲ್ಲೇ ಯಾರಾದರೂ ಗೆಲ್ಲಬೇಕು ಎಂಬತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುಟುಂಬಗಳ ಹೊರತಾಗಿ ಜಿಲ್ಲೆಯಲ್ಲಿ ಇತರರು ರಾಜಕೀಯವಾಗಿ ಉನ್ನತಿ ಕಾಣುವುದು ದುಸ್ಸಾಧ್ಯ.

ಈ ಎರಡೂ ಕುಟುಂಬಗಳ ನಡುವಿನ ವೈರತ್ವ ಅಥವಾ ರಾಜಕೀಯ ಜಿದ್ದಾಜಿದ್ದಿ ಇಂದು ನಿನ್ನೆಯದಲ್ಲ. ಇದಕ್ಕೆ ದಶಕಗಳ ಇತಿಹಾಸವಿದೆ. 1994ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂಗಣ್ಣ ಕರಡಿ 7 ಸಾವಿರ ಮತಗಳ ಅಂತರದಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಆದರೆ, 1999ರ ಚುನಾವಣೆಯಲ್ಲಿ ಸಂಗಣ್ಣ ಜೆಡಿಯು ಪಕ್ಷದಿಂದ ಸ್ಪರ್ಧಿಸಿದ್ದರೆ ಅವರ ನೇರ ಎದುರಾಳಿಯಾಗಿ ಸ್ಪರ್ಧಿಸಿದ್ದವರು ಕಾಂಗ್ರೆಸ್ ಪಕ್ಷದ ಬಸವರಾಜ್ ಹಿಟ್ನಾಳ್.

ಕರಡಿ ಸಂಗಣ್ಣ ಹಾಗೂ ಬಸವರಾಜ್ ಹಿಟ್ನಾಳ್ ಮುಖಾಮುಖಿಯಾದ ಮೊದಲ ಚುನಾವಣೆಯಲ್ಲೆ ಸಂಗಣ್ಣ ಸುಮಾರು 21 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ, 2004ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಕರಡಿ ಸಂಗಣ್ಣನನ್ನು ಸೋಲಿಸುವಲ್ಲಿ ಬಸವರಾಜ್ ಹಿಟ್ನಾಳ್ ಮೊದಲ ಬಾರಿಗೆ ಯಶಸ್ವಿಯಾಗಿದ್ದರು.

2008ರಲ್ಲಿ ಮತ್ತೆ ಇವರು ಮುಖಾಮುಖಿಯಾದಾಗ ಸಂಗಣ್ಣ ಕರಡಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2013ರ ಚುನಾವಣೆಯಲ್ಲಿ ಬಸವರಾಜ್ ಹಿಟ್ನಾಳ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದರೆ ಅವರ ಮಗ ರಾಘವೇಂದ್ರ ಹಿಟ್ನಾಳ್ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ವಿಧಾನಸಭೆಗೆ ಸ್ಪರ್ಧಿಸಿ ಸಂಗಣ್ಣನಿಗೆ ಸೋಲುಣಿಸಿದ್ದರು. (2018ರ ವಿಧಾನಸಭಾ ಚುನಾವಣೆಯಲ್ಲಿ ರಾಘವೇಂದ್ರ ಹಿಟ್ನಾಳ್ ವಿರುದ್ಧ ಸಂಗಣ್ಣ ಅವರ ಮಗ ಅಮರೇಶ್ ಸಂಗಣ್ಣ ಕರಡಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದ ರಾಘವೇಂದ್ರ ಹಿಟ್ನಾಳ್ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.)

2013ರ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದ ಕರಡಿ ಸಂಗಣ್ಣ ಬಿಜೆಪಿಯಿಂದ 2014ರ ಲೋಕಸಭೆ ಟಿಕೆಟ್ ಪಡೆದರೆ, 2008ರ ಸೋಲಿಗೆ ಮುಯ್ಯಿ ತೀರಿಸುವ ಸಲುವಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು ಬಸವರಾಜ್ ಹಿಟ್ನಾಳ್. ಆದರೆ, ಈ ಬಾರಿಯೂ ಗೆಲುವು ಸಂಗಣ್ಣನಿಗೆ ಒಲಿದಿತ್ತು.

ಈ ಬಾರಿಯೂ ಬಿಜೆಪಿಯಿಂದ ಮತ್ತೆ ಕರಡಿ ಸಂಗಣ್ಣನಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ರಾಜಕೀಯದಲ್ಲಿ ಅನುಭವಿ ಸಂಗಣ್ಣನ ಎದುರು ಬಸವರಾಜ್ ಹಿಟ್ನಾಳ್ ಅವರ ಕಿರಿಮಗ ರಾಜಶೇಖರ ಹಿಟ್ನಾಳ್ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ. ಒಟ್ಟಾರೆ ಕಳೆದ ಎರಡು ದಶಕಗಳಿಂದ ಈ ಕುಟುಂಬಗಳು ರಾಜಕೀಯವಾಗಿ ಗುದ್ದಾಡುತ್ತಲೇ ಇದ್ದು, ಸೋಲು ಗೆಲುವನ್ನು ಸಮವಾಗಿ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಬಾರಿಯ ಚುನಾವಣೆಯೂ ಎರಡು ಕುಟುಂಬಗಳ ಪ್ರತಿಷ್ಠೆಯ ಕಣವಾಗಿ ಬದಲಾಗಿದೆ.

ಜಿಲ್ಲಾ ಕಾಂಗ್ರೆಸ್‌ನಲ್ಲಿದೆ ಸಮಸ್ಯೆ:

ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು.
ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು.

ಕೊಪ್ಪಳ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಲೋಕಸಭಾ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದರು. ಇದಲ್ಲದೆ 2009ರ ಲೋಕಸಭೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ನಂತರ 2014ರ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿ ಬಿಜೆಪಿ ವಿರುದ್ಧ ಮುನಿಸಿಕೊಂಡು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಶಿವರಾಮಗೌಡ ಸಹ ಟಿಕೆಟ್ ಆಕಾಂಕ್ಷಿ ರೇಸ್‌ನಲ್ಲಿದ್ದರು. ಇವರಿಬ್ಬರು ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂಬುದು ಉಲ್ಲೇಖಾರ್ಹ.

ಇದಲ್ಲದೆ ಯಲಬುರ್ಗದ ಮಾಜಿ ಶಾಸಕ ಬಸವರಾಜ ರಾಯರೆಡ್ಡಿ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿ ಸೋತಿದ್ದ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಸಹ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದರು.

ಇದೇ ವರ್ಷ ಜನವರಿ ತಿಂಗಳಲ್ಲಿ ಗಂಗಾವತಿಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಅನ್ಸಾರಿಗೆ ಲೋಕಸಭಾ ಟಿಕೆಟ್ ನೀಡುವ ಕುರಿತು ಮಾರ್ಮಿಕವಾಗಿ ನುಡಿದಿದ್ದರು. ಹೀಗಾಗಿ ಕೊಪ್ಪಳದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅನ್ಸಾರಿ ಸ್ಪರ್ಧೆ ಖಚಿತ ಎಂದೆ ಭಾವಿಸಲಾಗಿತ್ತು.

ಆದರೆ, ಈ ಎಲ್ಲಾ ಹಿರಿಯ ರಾಜಕಾರಣಿಗಳನ್ನು ಬದಿಗಿರಿಸಿದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಬಸವರಾಜ ಹಿಟ್ನಾಳ್ ತಮ್ಮ ಎರಡನೇ ಮಗನಾದ ರಾಜಶೇಖರ ಹಿಟ್ನಾಳ್‌ಗೆ ಲೋಕಸಭಾ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಸಾಮಾನ್ಯವಾಗಿಯೇ ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ನಲ್ಲಿ ನಾಯಕರ ನಡುವಿನ ಕಚ್ಚಾಟಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಬಸವರಾಜ ಹಿಟ್ನಾಳ್ ಅವರ ಮೊದಲ ಮಗ ರಾಘವೇಂದ್ರ ಹಿಟ್ನಾಳ್ 2001 ರಲ್ಲಿ ಮೊದಲ ಬಾರಿ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿ ಗೆದ್ದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದರು. ಅಲ್ಲದೆ ಅವರಿಗೆ 2003ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಲಾಗಿತ್ತು. ಅದೇ ರೀತಿ ಬಸವರಾಜ ಹಿಟ್ನಾಳ್ ಅವರ ಕಿರಿಯ ಮಗ ರಾಜಶೇಖರ್ ಹಿಟ್ನಾಳ್‌ 2016ರಲ್ಲಿ ಮೊದಲ ಬಾರಿಗೆ ಜಿಲ್ಲಾ ಪಂಚಾಯತ್‌ಗೆ ಸ್ಪರ್ಧಿಸಿ ಗೆದ್ದು ಅವರೂ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದರು. ಇದೀಗ ಅನಿರೀಕ್ಷಿತವಾಗಿ 2019ರ ಲೋಕಸಭೆ ಟಿಕೆಟ್ ಘೋಷಿಸಲಾಗಿದೆ.

ಒಂದರ್ಥದಲ್ಲಿ ರಾಜಕೀಯ ಪ್ರವೇಶದ ವಿಚಾರದಲ್ಲಿ ಅಣ್ಣ-ತಮ್ಮ ಇಬ್ಬರದ್ದೂ ಒಂದೇ ಹಾದಿ ಎಂದು ತಮ್ಮೊಳಗೆ ಪೇಚಾಡಿಕೊಳ್ಳುತ್ತಿದ್ದಾರೆ ಕೊಪ್ಪಳದ ಕಾಂಗ್ರೆಸ್‌ನ ಕಾರ್ಯಕರ್ತರು. ಅಲ್ಲದೆ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕುಟುಂಬ ರಾಜಕಾರಣದ ವಿರುದ್ಧವೂ ಬಂಡೆದಿದ್ದಾರೆ ಎನ್ನಲಾಗುತ್ತಿದೆ.

ಬಸವರಾಜ್ ಹಿಟ್ನಾಲ್ ಕುರುಬ ಸಮಾಜಕ್ಕೆ ಸೇರಿದವರು. ಅಲ್ಲದೆ ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯ ಪಕ್ಷದೊಳಗಿನ ತನ್ನ ಪ್ರಭಾವವನ್ನು ಬಳಸಿ ಬಸವರಾಜ್ ಹಿಟ್ನಾಳ್ ಅವರ ಕಿರಿಯ ಮಗನಿಗೆ ಟಿಕೆಟ್ ಕೊಡಿಸಿದ್ದಾರೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿಬರುತ್ತಿವೆ.

ಕಳೆದ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಬಸವರಾಜ್ ಹಿಟ್ನಾಳ್ ಅವರಿಗೆ ಟಿಕೆಟ್ ಘೋಷಿಸಿದಾಗಲೇ ಪಕ್ಷದೊಳಗೆ ಅಪಸ್ವರ ಕೇಳಿ ಬಂದಿತ್ತು. ಅಂದಿನ ಸಚಿವ ಶಿವರಾಜ ತಂಗಡಗಿ, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಹಾಗೂ ಯಲಬುರ್ಗಾ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಒಳಗೊಳಗೆ ಬಸವರಾಜ್ ಹಿಟ್ನಾಳ್ ಸೋಲಿಗೆ ಕೆಲಸ ಮಾಡಿದ್ದರು ಎಂಬ ವಿಚಾರ ಜಿಲ್ಲೆಯಲ್ಲಿ ಗುಟ್ಟಾಗೇನು ಉಳಿದಿಲ್ಲ.

ಪರಿಣಾಮ ಜಿಲ್ಲೆಯ 8 ವಿಧಾನಸಭೆಗಳ ಪೈಕಿ 6 ಕಡೆ ಕಾಂಗ್ರೆಸ್ ಶಾಸಕರಿದ್ದರು 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಸವರಾಜ್ ಹಿಟ್ನಾಳ್ ಹೀನಾಯವಾಗಿ ಸೋಲನುಭಸಿದ್ದರು.

ಈಗಲೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಒಳಗಿನ ನಾಯಕರ ಕಚ್ಚಾಟ ನಿಂತಿಲ್ಲ. ಕಳೆದ ಬಾರಿಗಿಂತ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಈ ಬಾರಿ ಇನ್ನೂ ದೊಡ್ಡದಿದ್ದು ಟಿಕೆಟ್ ವಂಚಿತರೆಲ್ಲ ಕಾಂಗ್ರೆಸ್ ವಿರುದ್ಧವಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇದಲ್ಲದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಸೋಲಲು ಹಿಟ್ನಾಳ್ ಕುಟುಂಬವೇ ಕಾರಣ ಎನ್ನಲಾಗುತ್ತಿದೆ. ಅನ್ಸಾರಿ ರಾಜಕೀಯ ಏಳಿಗೆ ಸಹಿಸದ ಹಿಟ್ನಾಳ್ ಕುಟುಂಬ ಕುರುಬರ ಮತಗಳು ಅನ್ಸಾರಿಗೆ ಬರದಂತೆ ತಡೆದಿತ್ತು. ಇದೇ ಕಾರಣ ಅವರು ಅಲ್ಪ ಮತಗಳಿಂದ ಸೋತಿದ್ದರು ಎಂಬ ಆರೋಪವಿದೆ. ಹೀಗಾಗಿ ಗಂಗಾವತಿಯಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದರೆ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರ ಹೆಚ್ಚಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಈ ನಡುವೆ ಈ ಬಾರಿ ಕೊಪ್ಪಳದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಇದ್ದು ಇದು ಸಹ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಪ್ರತಿಕೂಲ ವಾತಾವರಣ ನಿರ್ಮಾಣ ಮಾಡಿದೆ.

ಬಿಜೆಪಿಯಲ್ಲೂ ಎಲ್ಲವೂ ಸರಿಯಿಲ್ಲ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೊಪ್ಪಳ ಸಂಸದ ಕರಡಿ ಸಂಗಣ್ಣ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೊಪ್ಪಳ ಸಂಸದ ಕರಡಿ ಸಂಗಣ್ಣ.

ಕೊಪ್ಪಳ ಬಿಜೆಪಿ ತಕ್ಕ ಮಟ್ಟಿಗೆ ಸಂಗಣ್ಣ ಕರಡಿ ಪ್ರಬಲ ನಾಯಕ. ಮೂರು ಬಾರಿ ಶಾಸಕರಾಗಿ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸಂಗಣ್ಣ ಪ್ರಬಲ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರುವುದೇ ಅವರ ಮತ್ತೊಂದು ದೊಡ್ಡ ಬಲ.

ಕೊಪ್ಪಳ ಹೃದಯಭಾಗದಿಂದ ಜಿಲ್ಲೆಯ ವಾಣಿಜ್ಯ ನಗರ ಎಂದು ಕರೆಸಿಕೊಳ್ಳುವ ಭಾಗ್ಯನಗರದ ನಡುವೆ ಒಂದು ರೈಲ್ವೆ ಕ್ರಾಸಿಂಗ್ ಇದೆ. ಒಮ್ಮೆ ಗೇಟ್ ಹಾಕಿದರೆ ಕನಿಷ್ಟ 20 ನಿಮಿಷ ಬಿಸಿಲಲ್ಲಿ ಕಾಯಲೇಬೇಕು. ಹೀಗಾಗಿ ನಗರದಲ್ಲಿ ಟ್ರಾಫಿಕ್ ಕಿರಿಕಿರಿ ದೊಡ್ಡ ಸಮಸ್ಯೆಯಾಗಿತ್ತು. ಹೀಗಾಗಿ ಇಲ್ಲೊಂದು ಮೇಲ್ಸೇತುವೆ ನಿರ್ಮಿಸಬೇಕು ಎಂಬುದು ಕೊಪ್ಪಳ ಜನರ ದಶಕಗಳ ಬೇಡಿಕೆ. ಇದಕ್ಕಾಗಿ ಅನೇಕ ಹೋರಾಟಗಳು ನಡೆದಿದ್ದವು. ಆದರೆ, ಮೇಲ್ಸೇತುವೆ ಮಾತ್ರ ಬಂದಿರಲಿಲ್ಲ.

ಸಂಗಣ್ಣ ಕರಡಿ 2014ರಲ್ಲಿ ಸಂಸದರಾಗಿ ಆಯ್ಕೆಯಾದ ನಂತರ 36 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣವಾಗಿದೆ. ಇದು ಸಾಮಾನ್ಯವಾಗಿ ಕೊಪ್ಪಳ ಜನರ ಖುಷಿಗೆ ಕಾರಣವಾಗಿದೆ ಎಂಬುದನ್ನು ಬಿಟ್ಟರೆ ಉಳಿದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಅವರ ಕೊಡುಗೆ ಏನು? ಎಂಬುದು ಕಾಂಗ್ರೆಸ್ ನಾಯಕರ ಪ್ರಶ್ನೆ.

ಜಿಲ್ಲೆಯಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ರೈತರ ಗುಳೆ ಪ್ರಕರಣ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ಕ್ಷಾಮ ಸೇರಿದಂತೆ ಜಿಲ್ಲೆಯ ಬಹುಪಾಲು ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕೇಂದ್ರದಿಂದ ಜಿಲ್ಲೆಗೆ ಯಾವ ಯೋಜನೆಗಳನ್ನೂ ತರುವಲ್ಲಿ ಅವರು ವಿಫಲವಾಗಿದ್ದಾರೆ. ಹೀಗಾಗಿ ಜಿಲ್ಲೆಯ ಪ್ರಜ್ಞಾವಂತ ಮತದಾರರು ಸಂಗಣ್ಣ ಕರಡಿ ವಿರುದ್ಧ ಮಾತನಾಡುತ್ತಿದ್ದಾರೆ.

ಅಲ್ಲದೆ ಸಂಗಣ್ಣ ಕರಡಿ ಮೂಲತಃ ಸಂಘ ಪರಿವಾರದ ಹಿನ್ನೆಲೆ ಇರುವ ವ್ಯಕ್ತಿಯಲ್ಲ. ಇದೇ ಕಾರಣಕ್ಕೆ ಕೊಪ್ಪಳದ ಭತ್ತದ ಕಣಜ ಗಂಗಾವತಿಯಲ್ಲಿ ಬಲವಾಗಿ ಬೇರೂರಿರುವ ಸಂಘಪರಿವಾರದ ನಾಯಕರು ಸಂಗಣ್ಣನಿಗೆ ಟಿಕೆಟ್ ನೀಡಲು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದಲ್ಲದೆ ಸಂಗಣ್ಣ ಬಿಜೆಪಿ ರಾಜ್ಯ ಮಟ್ಟದ ನಾಯಕರಿಗೆ ಬೆಲೆ ನೀಡುತ್ತಿಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪ್ರಭಾವ ಬಳಸಿ ಹಿಂದಿನ ಬಾಗಿಲಿನಿಂದ ತಮ್ಮ ಮಗನಿಗೆ ವಿಧಾನಸಭಾ ಟಿಕೆಟ್ ಪಡೆದಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ. ಇದೆ ಕಾರಣಕ್ಕೆ ಬಿಜೆಪಿ ನಾಯಕರು ಬೇಕೆಂದೆ ಅವರಿಗೆ ಟಿಕೆಟ್ ಘೋಷಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

“ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ ಪಾಲಿಗೆ ಸಂಗಣ್ಣನಿಗಿಂತ ಸಮರ್ಥ ಅಭ್ಯರ್ಥಿಗಳೇ ಇಲ್ಲ. ಅಲ್ಲದೆ ಅಭಿವೃದ್ಧಿ ಪ್ರಶ್ನೆಗಳ ಹೊರತಾಗಿಯೂ ಸಮಾಜದಲ್ಲಿ ಸಂಗಣ್ಣನಿಗಿರುವ ಒಳ್ಳೆಯ ಇಮೇಜ್ ಹಾಗೂ ಮೋದಿ ಅಲೆ ಈ ಬಾರಿಯೂ ಬಿಜೆಪಿಗೆ ಗೆಲುವು ತಂದುಕೊಡಲಿದೆ. ಅಲ್ಲದೆ ರಾಜಶೇಖರ್ ಹಿಟ್ನಾಳ್ ರಂತಹ ರಾಜಕೀಯ ಎಳಸು ಸಂಗಣ್ಣನಂತಹ ಹಿರಿಯ ರಾಜಕಾರಣಿಗೆ ರಾಜಕೀಯ ಸವಾಲಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಕೊಪ್ಪಳದ ಪ್ರಸ್ತುತ ಪರಿಸ್ಥಿತಿಯನ್ನು ವ್ಯಾಖ್ಯಾನಿಸುತ್ತಾರೆ ಜಿಲ್ಲೆಯ ಉದಯವಾಣಿ ಪತ್ರಿಕೆಯ ಮಾಜಿ ಹಿರಿಯ ವರದಿಗಾರ ಬಸವರಾಜ ಕರುಗಲ್.

ಮೋದಿ ಅಲೆ & ಜಾತಿ ಲೆಕ್ಕಾಚಾರ:

2014 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮೋದಿ ಕೊಪ್ಪಳಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದಾಗ ತೆಗೆದ ಚಿತ್ರ.
2014 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮೋದಿ ಕೊಪ್ಪಳಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದಾಗ ತೆಗೆದ ಚಿತ್ರ.

2014ರ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳದಲ್ಲಿ 15 ಲಕ್ಷ ಜನ ಮತದಾರರಿದ್ದರು. ಆದರೆ, ಈ ಬಾರಿ ಈ ಸಂಖ್ಯೆ 17 ಲಕ್ಷಕ್ಕೆ ಏರಿಕೆಯಾಗಿದೆ. ಈ ಪೈಕಿ ಎರಡು ಲಕ್ಷ ಜನ ಯುವಕರು ಮೊದಲ ಬಾರಿಗೆ ಮತ ಚಲಾಯಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇದನ್ನು ತಮಗೆ ಪೂರಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಮೋದಿ ಪರ ಫೇಸ್‌ಬುಕ್ ಪೇಜ್‌ಗಳು ವಾಟ್ಸಾಪ್‌ ಗ್ರೂಪ್‌ಗಳನ್ನು ಆರಂಭಿಸಿದೆ.

“ಈ ಗ್ರೂಪ್‌ಗಳಲ್ಲಿ ಪ್ರತಿನಿತ್ಯ ದೇಶಭಕ್ತಿಯ ಜೊತೆಗೆ ಮೋದಿಯ ಹೆಸರನ್ನು ತಳುಕು ಹಾಕಿ ಹತ್ತಾರು ಪೋಸ್ಟ್‌ಗಳನ್ನು ಹರಿಯಬಿಡಲಾಗುತ್ತಿದೆ. ಪರಿಣಾಮ ಜಿಲ್ಲೆಯಲ್ಲಿ ಅಭಿವೃದ್ಧಿ ಎಷ್ಟಾಗಿದೆ ಎಂಬ ಪ್ರಶ್ನೆಯನ್ನೇ ಕೇಳಲು ಸಿದ್ಧರಿಲ್ಲದ ಇಲ್ಲಿನ ಯುವಜನ ಬಿಜೆಪಿಯಿಂದ ಯಾರೇ ನಿಂತರು ಅವರಿಗೆ ಮತ ಚಲಾಯಿಸುತ್ತೇವೆ ಎಂಬ ಮಟ್ಟಿಗೆ ಮೋದಿ ಪರ ತಮ್ಮ ಅಂಧಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸುತ್ತಾರೆ ಸಮಾಜಪರ ಹೋರಾಟಗಾರರಾದ ಬಸವರಾಜ ಶೀಲವಂತರ್.

ಮೋದಿ ಅಲೆಯನ್ನು ಪಕ್ಕಕ್ಕಿಟ್ಟು ಜಾತಿವಾರು ಲೆಕ್ಕಹಾಕಿದರೆ ಲಿಂಗಾಯತ ಸಮುದಾಯದವರೇ ಜಿಲ್ಲೆಯಲ್ಲಿ ನಿರ್ಣಾಯಕ. 5 ಲಕ್ಷ ಲಿಂಗಾಯತರ ಮತಗಳು ಎಂದಿನಂತೆ ಈ ಬಾರಿಯೂ ಗೆಲ್ಲುವ ಅಭ್ಯರ್ಥಿಯನ್ನು ನಿಶ್ಚಯಿಸಲಿದೆ ಎನ್ನಲಾಗುತ್ತಿದೆ. ಬಿಜೆಪಿ ಪಕ್ಷದ ಅಭ್ಯರ್ಥಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಬಹುತೇಕ ಈ ಮತಗಳು ಬಿಜೆಪಿ ಪರ ವಾಲುವ ಸಾಧ್ಯತೆ ಇದೆ. ಇದಲ್ಲದೆ 2.5 ಲಕ್ಷ ಕುರುಬರು, 1.8 ಲಕ್ಷ ನಾಯಕರು, 1.6 ಲಕ್ಷ ಅಲ್ಪ ಸಂಖ್ಯಾತರು ಹಾಗೂ 2.5 ಲಕ್ಷ ದಲಿತ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ಅಂಕಿಅಂಶಗಳು ವರದಿಗಳು ಏನೇ ಹೇಳಲಿ. ಕೊಪ್ಪಳದ ಮತದಾರರಿಗೆ ಮಾತ್ರ ಯಾವ ಚುನಾವಣೆಯಲ್ಲೂ ಬಸವರಾಜ ಹಿಟ್ನಾಳ್ ಹಾಗೂ ಕರಡಿ ಸಂಗಣ್ಣ ಕುಟುಂಬದ ಹೊರತಾಗಿ ಬೇರೆ ಆಯ್ಕೆಗಳೆ ಇಲ್ಲ. ಕಳೆದ ಎರಡು ದಶಕಗಳಿಂದ ಈ ಜಿಲ್ಲೆಯಲ್ಲಿ ರಾಜಕೀಯ ಆಳ್ವಿಕೆ ನಡೆಸುತ್ತಿರುವ ಈ ಕುಟುಂಬಗಳು ಜಿಲ್ಲೆಗೆ ನೀಡಿರುವ ಕೊಡುಗೆಗಳ ಕಥೆಯೂ ಅಷ್ಟಕಷ್ಟೆ. ಒಟ್ಟಾರೆ ಇಲ್ಲಿನ ಜನರಿಗೆ ಇವರ ಹೊರತು ಬೇರೆ ಆಯ್ಕೆಗಳೇ ಇಲ್ಲದಿರುವುದೇ ಜಿಲ್ಲೆಯ ಅಭಿವೃದ್ಧಿಗೆ ಉರುಳಾಗಿ ಪರಿಣಮಿಸಿದೆ.