samachara
www.samachara.com
ಹಾವೇರಿ- ಗದಗ ಲೋಕಸಭಾ ಕ್ಷೇತ್ರ: ಹೊಸತನಕ್ಕೆ ಮತದಾರ ಮನಸ್ಸು ಮಾಡಬೇಕಷ್ಟೆ...
ರಾಜ್ಯ

ಹಾವೇರಿ- ಗದಗ ಲೋಕಸಭಾ ಕ್ಷೇತ್ರ: ಹೊಸತನಕ್ಕೆ ಮತದಾರ ಮನಸ್ಸು ಮಾಡಬೇಕಷ್ಟೆ...

ಉತ್ತರ ಕರ್ನಾಟಕದಲ್ಲೇ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ನಂತರ ಅತಿಹೆಚ್ಚು ರೈತರ ಗುಳೆ ಪ್ರಕರಣಗಳು ದಾಖಲಾಗಿರುವುದು ಇದೇ ಹಾವೇರಿ-ಗದಗ ಜಿಲ್ಲೆಯಲ್ಲಿ ಎಂಬುದು ಉಲ್ಲೇಖಾರ್ಹ.

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

ಉತ್ತರ ಕರ್ನಾಟಕ ಭಾಗದ ಪ್ರವೇಶಕ್ಕೆ ದ್ವಾರಬಾಗಿಲು ಎನಿಸಿಕೊಳ್ಳುವ ಗದಗ-ಹಾವೇರಿ ಮೂಲತಃ ಅವಳಿ ಜಿಲ್ಲೆಗಳು. ಈ ಜಿಲ್ಲೆಗಳ ತಟದಲ್ಲಿರುವ ತುಂಗಾ ಭದ್ರ ಹಾಗೂ ವರದಾ ನದಿಗಳು ವರ್ಷಪೂರ್ತಿ ತುಂಬಿ ಹರಿಯುತ್ತವೆ. ಆದರೆ, ಪ್ರಯೋಜನವಾದರು ಏನು? ಇಲ್ಲಿನ ಕೃಷಿಭೂಮಿಗಳು ಮಾತ್ರ ಈವರೆಗೆ ಈ ನದಿ ನೀರಿನ ರುಚಿ ಕಂಡಿಲ್ಲ.

ದಶಕಗಳಿಂದ ಹತ್ತಾರು ನೀರಾವರಿ ಯೋಜನೆಗಳು ಸರಕಾರಿ ನಕ್ಷೆಯಲ್ಲೇ ಉಳಿಬಿಟ್ಟ ಪರಿಣಾಮ ಶೇ.72 ರಷ್ಟು ಕೃಷಿಕರನ್ನೇ ಹೊಂದಿರುವ ಈ ಜಿಲ್ಲೆಯನ್ನು ಗುಳೆ ಎಂಬ ಪಿಡುಗು ಬೆಂಬಿಡದೆ ಕಾಡುತ್ತಿದೆ.

ಕೃಷಿಗೆ ನೀರಿಲ್ಲ. ಮಳೆ ಬಂದರೆ ಉಂಟು ಇಲ್ಲದಿದ್ದರೆ ಅದೂ ಇಲ್ಲ. ಸರಿ ಕೆಲಸವಾದರೂ ಗಿಟ್ಟೀತೆ ಎಂದರೆ ಈ ಅವಳಿ ಜಿಲ್ಲೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಒಂದೇ ಒಂದು ಕಾರ್ಖಾನೆಯನ್ನೂ ಅಭಿವೃದ್ಧಿಪಡಿಸಿಲ್ಲ. ಪರಿಣಾಮ ಮಳೆಗಾಲದಲ್ಲಿ ಕೃಷಿ ಮಾಡುವ ಇಲ್ಲಿನ ರೈತ ಉಳಿದ ದಿನಗಳಲ್ಲಿ ಬೆಂಗಳೂರು, ಹುಬ್ಬಳ್ಳಿ, ಮುಂಬೈನಂತಹ ಬೃಹತ್ ನಗರಗಳ ಕಡೆಗೆ ಗುಳೆ ಹೊರಡುತ್ತಾನೆ. ನಗರಗಳಲ್ಲಿ ವಾಚ್‌ಮನ್, ರಸ್ತೆ ಕೆಲಸ ಹಾಗೂ ಗಾರ್ಮೆಂಟ್ಸ್‌ ಸೇರಿದಂತೆ ಸಿಕ್ಕಸಿಕ್ಕ ಕೂಲಿ ಕೆಲಸ ಮಾಡಿಯೇ ಜೀವನ ಹೊರೆಯಬೇಕು. ಹೀಗಿದೆ ಗದಗ-ಹಾವೇರಿ ಜಿಲ್ಲೆಯ ಪರಿಸ್ಥಿತಿ.

ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ನಂತರ ರಾಜ್ಯದಲ್ಲಿ ಅತಿಹೆಚ್ಚು ರೈತರ ಗುಳೆ ಪ್ರಕರಣಗಳು ದಾಖಲಾಗಿರುವುದು ಇದೇ ಹಾವೇರಿ-ಗದಗ ಜಿಲ್ಲೆಯಲ್ಲಿ ಎಂಬುದು ಉಲ್ಲೇಖಾರ್ಹ.

“2014ರ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಪಕ್ಕದ ಕೊಪ್ಪಳ ಜಿಲ್ಲೆಗೆ ನರೇಂದ್ರ ಮೋದಿ ಬಂದು ಹೋಗಿದ್ದರು. ನಮ್ಮೂರಿನಿಂದಲೂ ಒಂದು ಗಾಡಿ ಮಾಡಿಸಿ ಬಿಜೆಪಿ ನಾಯಕರು ನಮ್ಮನ್ನು ಕರೆದುಕೊಂಡು ಹೋಗಿದ್ದರು. ಮೋದಿ ಭಾಷಣಕ್ಕೆ ಬೆಪ್ಪಾಗಿದ್ದ ನಾವು ಅವರ ಹೆಸರಿಗೆ ಮತ ಹಾಕಿದ್ದೆವು. ಆದರೆ, ಈಗ ಪದವಿ ಮುಗಿಸಿ ನಾಲ್ಕು ವರ್ಷವಾದರೂ ಕೆಲಸವಿಲ್ಲದೆ ಖಾಲಿ ಕೂತಿದ್ದೇನೆ. ಕೆಲಸ ಹುಡುಕಿ ಬೆಂಗಳೂರಿಗೆ ಹೋಗಿ ಪ್ರತಿದಿನ ಪರಿತಪಿಸುತ್ತಿರುವ ನನ್ನ ಗೆಳೆಯರದ್ದೂ ಇದೆ ಪರಿಸ್ಥಿತಿ,” ಎಂದು ಜಿಲ್ಲೆಯ ನಿರುದ್ಯೋಗದ ಸಮಸ್ಯೆಯನ್ನು ಮುಂದಿಡುತ್ತಾರೆ ಹಿಂದುಳಿದ ಸಮುದಾಯದ ಪದವೀಧರ ನಿರುದ್ಯೋಗಿ ಮಂಜ್ಯಾನಾಯ್ಕ್.

ಉದ್ಯೋಗ ಮಾತ್ರ ಅಲ್ಲ, ಹತ್ತಾರು ಸಮಸ್ಯೆಗಳು ಜೀವಂತವಾಗಿರುವ ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬಿಜೆಪಿ ಪಕ್ಷದ ಶಿವಕುಮಾರ ಚನ್ನಬಸಪ್ಪ ಉದಾಸಿ. ಈ ಬಾರಿಯೂ ಅವರಿಗೆ ಗೆಲ್ಲುವ ನಿರೀಕ್ಷೆಯೇನೋ ಇದೆ. ಆದರೆ, ಅದು ಅಷ್ಟು ಸುಲಭವಲ್ಲ ಎಂಬ ಸಂದೇಶವನ್ನು ಸ್ವತಃ ಬಿಜೆಪಿ ಕಾರ್ಯಕರ್ತರೇ ಹೊರ ಹಾಕಿದ್ದಾರೆ. ಇನ್ನು ಇಲ್ಲಿನ ಮತದಾರ ಮನಸ್ಥಿತಿಯೂ ಹಾಗೆ ಇದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ದಶಕಗಳ ಹಿಂದೆ ರೂಪಗೊಂಡ ಲೋಕಸಭಾ ಕ್ಷೇತ್ರ

ಸ್ವಾತಂತ್ರ್ಯಾ ನಂತರ 1952ರಲ್ಲಿ ರಚನೆಗೊಂಡ ಧಾರವಾಡ ಉತ್ತರ ಮತ್ತು ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರಗಳು ಅಸ್ತಿತ್ವದಲ್ಲಿದ್ದವು. 2009ರ ಪೂರ್ವದಲ್ಲಿ ನಡೆದ ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ ಹುಬ್ಬಳ್ಳಿ-ಧಾರವಾಡ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಇದರ ಜತೆಗೆ ರೂಪುಗೊಂಡ ಇನ್ನೊಂದು ನೂತನ ಲೋಕಸಭಾ ಕ್ಷೇತ್ರವೇ ಹಾವೇರಿ-ಗದಗ ಕ್ಷೇತ್ರ.

ಗದಗ ಜಿಲ್ಲೆಯ ರೋಣ, ಶಿರಹಟ್ಟಿ, ಗದಗ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು, ರಾಣಿಬೆನ್ನೂರು, ಹಾವೇರಿ, ಬ್ಯಾಡಗಿ, ಹಾಗೂ ಹಾನಗಲ್ಲ ಸೇರಿದಂತೆ ಒಟ್ಟು 8 ವಿಧಾನ ಸಭಾ ಕ್ಷೇತ್ರಗಳನ್ನು ಒಟ್ಟಾಗಿಸಿ ಈ ಲೋಕಸಭಾ ಕ್ಷೇತ್ರವನ್ನು ಸೃಷ್ಟಿಸಲಾಯಿತು.

ಹಾವೇರಿ-ಗದಗ ಲೋಕಸಭಾ ಕ್ಷೇತ್ರ.
ಹಾವೇರಿ-ಗದಗ ಲೋಕಸಭಾ ಕ್ಷೇತ್ರ.
/ಒನ್‌ಇಂಡಿಯಾ

ಹಾವೇರಿ-ಗದಗ ಕ್ಷೇತ್ರ ರೂಪುಗೊಳ್ಳುವವರೆಗೆ ಇದರ ಭಾಗವಾಗಿದ್ದ ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷದ ಹೆಬ್ಬಾಗಿಲು ಎಂದೇ ಕರೆಯಲಾಗುತ್ತಿತ್ತು. ಈ ಭಾಗಗಳಲ್ಲಿ ದಶಕಗಳಿಂದ ಕಾಂಗ್ರೆಸ್ ಅಧಿಕಾರದ ರುಚಿ ಉಂಡಿತ್ತು. ಆದರೆ 2009ರ ಲೋಕಸಭಾ ಚುನಾವಣೆಯಲ್ಲಿ ಈ ಕೋಟೆಯನ್ನು ಕೆಡವುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.

2009 ಮತ್ತು 20104ರ ಚುನಾವಣೆಯಲ್ಲಿ ಸತತ ಎರಡು ಬಾರಿ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ಎಸ್‌.ಸಿ. ಉದಾಸಿ ಎರಡು ಬಾರಿಯೂ ಸುಮಾರು 1 ಲಕ್ಷಗಳಿಗಿಂತ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಅಲ್ಲದೆ ಈ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಸದ್ಯ 6 ರಲ್ಲಿ ಬಿಜೆಪಿ ಶಾಸಕರೇ ಇರುವುದು ಪಕ್ಷಕ್ಕೆ ಮತ್ತಷ್ಟು ಬಲ ತಂದಿದೆ.

ಜಾತಿವಾರು ಲೆಕ್ಕಾಚಾರ:

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಂತೆ ಗದಗ-ಹಾವೇರಿ ಜಿಲ್ಲೆಯಲ್ಲೂ ಲಿಂಗಾಯತ ಮತಗಳೇ ನಿರ್ಣಾಯಕ. ಇವರ ನಂತರದ ಸ್ಥಾನದಲ್ಲಿ ಕ್ರಮವಾಗಿ ಕುರುಬರು ಹಾಗೂ ಅಲ್ಪ ಸಂಖ್ಯಾತರಿದ್ದಾರೆ.

ಈ ಕ್ಷೇತ್ರದ ಜನಸಂಖ್ಯೆ 21.44 ಲಕ್ಷ. ಒಟ್ಟು ಮತದಾರರ ಸಂಖ್ಯೆ 15.59 ಲಕ್ಷ. ಈ ಪೈಕಿ ಕ್ಷೇತ್ರದ ಗೆಲ್ಲುವ ಅಭ್ಯರ್ಥಿ ಯಾರು? ಎಂದು ನಿರ್ಣಯಿಸುವುದು ಸುಮಾರು 5.5 ಲಕ್ಷ ಮತದಾರರನ್ನು ಹೊಂದಿರುವ ಬೃಹತ್ ಸಮುದಾಯವಾದ ಲಿಂಗಾಯಿತರೇ.

2.5 ಲಕ್ಷ ಮತದಾರರನ್ನು ಹೊಂದಿರುವ ಕುರುಬ ಹಾಗೂ 2.3 ಲಕ್ಷ ಮತದಾರರನ್ನು ಹೊಂದಿರುವ ಮುಸ್ಲಿಂ ಸಮುದಾಯಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. ಕ್ಷೇತ್ರದಲ್ಲಿ 2 ಲಕ್ಷ ದಲಿತ ಮತಗಳಿದ್ದರೆ, ಇನ್ನುಳಿದ ಹಿಂದುಳಿದ ಮತದಾರರ ಸಂಖ್ಯೆಯೂ 3 ಲಕ್ಷದಷ್ಟು ಇದೆ ಎನ್ನುತ್ತಿವೆ ಅಂಕಿ ಅಂಶಗಳು.

ಜಾತಿ ಅಲೆಯಲ್ಲಿ ಗೆದ್ದ ಉದಾಸಿ:

ಅವಳಿ ಜಿಲ್ಲೆಯ ಚುನಾವಣಾ ಇತಿಹಾಸದ ಕಡೆಗೆ ಒಮ್ಮೆ ಗಮನ ಹರಿಸಿದರೆ ಕಳೆದ ಎರಡೂ ಚುನಾವಣೆಗಳಲ್ಲಿ ಶಿವಕುಮಾರ್‌ ಉದಾಸಿ ಗೆಲ್ಲಲು ಜಾತಿ ಲೆಕ್ಕಾಚಾರ ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ ಎಂಬುದು ತಿಳಿಯುತ್ತದೆ.

ಕ್ಷೇತ್ರ ಪುನರ್ವಿಂಗಡಣೆಯಾಗುವ ಮುಂಚೆ ಹಾವೇರಿ-ಗದಗ ಸೇರಿದಂತೆ ಶೇ. 40ಕ್ಕೂ ಅಧಿಕ ಮುಸ್ಲಿಂ ಮತದಾರರನ್ನು ಹೊಂದಿದ್ದ ಸವಣೂರು ಹಾಗೂ ಶಿಗ್ಗಾವ್‌ ವಿಧಾನಸಭಾ ಕ್ಷೇತ್ರಗಳು ಧಾರವಾಡ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ವ್ಯಾಪ್ತಿಗೆ ಒಳಪಟ್ಟಿದ್ದವು. ಇವು ಸಾಮಾನ್ಯವಾಗಿ ಕಾಂಗ್ರೆಸ್‌ನ ಪಾರಂಪರಿಕ ಮತಗಳಾದ ಕಾರಣ ಇಲ್ಲಿ ದಶಕಗಳ ಕಾಲ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು.

ಆದರೆ, ಗದಗ-ಹಾವೇರಿ ಕ್ಷೇತ್ರ ವಿಂಗಡನೆಯಾದ ನಂತರ ಅಲ್ಪಸಂಖ್ಯಾತ ಮತಗಳನ್ನು ಹೊಂದಿದ್ದ ಸವಣೂರು ಹಾಗೂ ಶಿಗ್ಗಾವ್‌ ಧಾರವಾಡಕ್ಕೆ ಸೇರಿತು. ಪರಿಣಾಮ ಈ ಅವಳಿ ಜಿಲ್ಲೆಯಲ್ಲಿ ಪ್ರಸ್ತುತ ಬಹುಸಂಖ್ಯಾತರಾದ ಲಿಂಗಾಯತರು ಎಲ್ಲಾ ಚುನಾವಣೆಗಳಲ್ಲೂ ನಿರ್ಣಾಯಕರಾಗಿ ಬದಲಾಗಿದ್ದಾರೆ.

ಈ ಕ್ಷೇತ್ರದಲ್ಲಿ ನಡೆದ ಮೊದಲ ಚುನಾವಣೆಯಲ್ಲೇ ಲೆಕ್ಕ ತಪ್ಪಿದ್ದ ಕಾಂಗ್ರೆಸ್ 2009ರಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಲೀಂ ಅಹಮದ್ ಅವರನ್ನು ಕಣಕ್ಕಿಳಿಸಿತ್ತು. (ಇಂದಿರಾ ಗಾಂಧಿ ಕಾಲದಿಂದ ಸಲೀಂ ಅಹಮದ್ ಕುಟುಂಬಕ್ಕೆ ಗಾಂಧಿ ಕುಟುಂಬದ ಜತೆಗೆ ಹತ್ತಿರದ ನಂಟಿದೆ. ಇದೆ ಕಾರಣಕ್ಕೆ ಅವರಿಗೆ ಟಿಕೆಟ್ ನೀಡಲಾಗಿತ್ತು ಎಂಬ ವಾದವೂ ಜಿಲ್ಲೆಯಲ್ಲಿದೆ).

ಆದರೆ, ಬಿಜೆಪಿ ಲಿಂಗಾಯತ ಸಮುದಾಯದ ಉಪಜಾತಿಗಳಲ್ಲಿ ಒಂದಾದ ಬಣಜಿಗ ಸಮಾಜಕ್ಕೆ ಸೇರಿದ ಶಿವಕುಮಾರ್‌ ಉದಾಸಿಯವರನ್ನು ಕಣಕ್ಕಿಳಿಸಿತ್ತು. ಇಲ್ಲಿನ ಲಿಂಗಾಯತ ಮತದಾರರು ಉದಾಸಿಯನ್ನು ನಮ್ಮವ ಎಂದು ಬಿಗಿದಪ್ಪಿದರು. ಪರಿಣಾಮ 1.1 ಲಕ್ಷ ಮತಗಳ ಅಂತರದಲ್ಲಿ ಮೊದಲ ಬಾರಿಗೆ ಅವಳಿ ಜಿಲ್ಲೆಯಲ್ಲಿ ಕಮಲ ಅರಳಿತ್ತು.

2014ರ ಚುನಾವಣೆಯಲ್ಲೂ ಕಾಂಗ್ರೆಸ್‌ನಿಂದ ಸಲೀಂ ಅಹಮದ್ ಹಾಗೂ ಬಿಜೆಪಿಯಿಂದ ಉದಾಸಿ ಸ್ಫರ್ಧಿಸಿದ್ದರು. ಆದರೆ, ಈ ಬಾರಿ ನರೇಂದ್ರ ಮೋದಿ ಅಲೆಯಿಂದಾಗಿ ಉದಾಸಿ ಈ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದರು. 2019ರ ಲೋಕಸಭಾ ಚುನಾವಣೆಗೆ ಈಗಾಗಲೇ ಬಿಜೆಪಿ ಪಕ್ಷ ಬಿಡುಗಡೆ ಮಾಡಿರುವ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಉದಾಸಿ ಹೆಸರನ್ನು ಘೋಷಿಸಲಾಗಿದೆ.

ಉದಾಸಿ ಮುಂದಿದೆ ಕಠಿಣ ಸ್ಪರ್ಧೆ:

ಕಳೆದ ಎರಡೂ ಚುನಾವಣೆಗಳಲ್ಲಿ ಜಾತಿ ಮತಗಳ ಸಹಾಯದಿಂದ ಗೆದ್ದ ಉದಾಸಿಗೆ ಈ ಬಾರಿ ಗೆಲುವು ಅಷ್ಟು ಸುಲಭವಲ್ಲ. ಕಾರಣ ಈ ಬಾರಿ ಉದಾಸಿಯನ್ನು ಸೋಲಿಸಲೇಬೇಕು ಎಂದು ಪಟ್ಟು ಹಿಡಿದಿರುವ ಕಾಂಗ್ರೆಸ್ ಪ್ರಬಲ ಲಿಂಗಾಯತ ರೆಡ್ಡಿ ಸಮುದಾಯಕ್ಕೆ ಸೇರಿದ ಡಿ.ಆರ್. ಪಾಟೀಲ್ ಅವರನ್ನು ಕಣಕ್ಕಿಳಿಸುತ್ತಿದೆ.

ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌. ಪಾಟೀಲ್.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌. ಪಾಟೀಲ್.

ದಶಕಗಳ ಕಾಲ ಗದಗ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಡಿ.ಆರ್. ಪಾಟೀಲ್ ಗದಗ ಕ್ಷೇತ್ರದ ಹಾಲಿ ಶಾಸಕ ಮಾಜಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಹೆಚ್‌.ಕೆ. ಪಾಟೀಲ್ ಅವರ ಖಾಸಾ ಸಹೋದರ ಎಂಬುದು ಉಲ್ಲೇಖಾರ್ಹ.

“ಗದಗ ವಿಧಾನಸಭಾ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿ ಶಾಸಕರಾಗಿಯೂ ಕೆಲಸ ಮಾಡಿದ್ದ ಡಿ.ಆರ್. ಪಾಟೀಲ್ ತಮ್ಮ ಸಹೋದರ ಹೆಚ್‌.ಕೆ. ಪಾಟೀಲ್ ಅವರಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆದಿದ್ದರು. ಆದರೆ, ಪ್ರಸ್ತುತ ಜಿಲ್ಲೆಯಲ್ಲಿ ಹಾಲಿ ಸಂಸದ ಉದಾಸಿಯನ್ನು ಎದುರಿಸುವ ಸಮರ್ಥ ನಾಯಕ ಕಾಂಗ್ರೆಸ್ ಪಕ್ಷದಲ್ಲಿಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಡಿ.ಆರ್. ಪಾಟೀಲ್ ಅವರನ್ನು ಮತ್ತೆ ಚುನಾವಣಾ ಕಣಕ್ಕಿಳಿಸುವ ಯೋಚನೆ ಮಾಡಿದೆ. ಅಲ್ಲದೆ ಅಭಿಮಾನಿಗಳೇ ಒತ್ತಾಯಿಸಿ ಅವರನ್ನು ಮತ್ತೆ ಚುನಾವಣಾ ಕಣಕ್ಕಿಳಿಸುತ್ತಿದ್ದಾರೆ.

ಕಳೆದ ಎರಡೂ ಚುನಾವಣೆಯಲ್ಲಿ ಲಿಂಗಾಯತ ಮತಗಳು ಒಂದೇ ಪಕ್ಷದ ಪರ ಬಿದ್ದಿದ್ದರಿಂದ ಉದಾಸಿ ಸುಲಭವಾಗಿ ಜಯ ಗಳಿಸಿದರು. ಆದರೆ, “ಈ ಬಾರಿ ಅವರಿಗೆ ಪ್ರಬಲ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರೇ ಎದುರಾಗಿರುವ ಕಾರಣ ಗೆಲುವು ಅಷ್ಟು ಸುಲಭವಲ್ಲ” ಎನ್ನುತ್ತಾರೆ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಮಂದಾಲಿ.

ಆದರೆ, “ಪ್ರಸ್ತುತ ಕಾಂಗ್ರೆಸ್ ಹುರಿಯಾಳಾಗಿರುವ ಡಿ.ಆರ್. ಪಾಟೀಲ್ ದಶಕಗಳಿಂದ ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಪಕ್ಷ ಸಂಘಟನೆ ಮಾಡುತ್ತಾ ಅವರು ಜನರ ಸಂಪರ್ಕದಿಂದಲೇ ದೂರವಾಗಿದ್ದಾರೆ. ಈಗ ದಶಕಗಳ ನಂತರ ಮತ್ತೆ ಜನರ ಎದುರು ಬಂದರೆ ಅವರು ಮತ ಹಾಕುತ್ತಾರೆ ಎಂದು ನಂಬುವುದು ಕಷ್ಟ” ಎಂದು ಪ್ರಸ್ತುತ ಚುನಾವಣಾ ಸನ್ನಿವೇಶವನ್ನು ನಮ್ಮ ಮುಂದಿಡುತ್ತಾರೆ ಕನ್ನಡ ಪ್ರಭ ಪತ್ರಿಕೆಯ ಸ್ಥಳೀಯ ವರದಿಗಾರ ಶಿವಕುಮಾರ ಕುಷ್ಟಗಿ.

ಉದಾಸಿ ವಿರುದ್ಧ ಆಕ್ರೋಶದ ಅಲೆ:

ಹಾಲಿ ಸಂಸದ ಉದಾಸಿ ವಿರುದ್ಧ ಪ್ರಬಲ ಲಿಂಗಾಯತ ಸಮುದಾಯದವರೇ ಆದ ಡಿ.ಆರ್. ಪಾಟೀಲ್ ಸ್ಪರ್ಧಿಸುತ್ತಿರುವುದು ಒಂದೆಡೆಯಾದರೆ, ಕ್ಷೇತ್ರದಲ್ಲಿ ಅವರ ವಿರುದ್ಧ ಎದ್ದಿರುವ ಮತದಾರರ ಆಕ್ರೋಶದ ಅಲೆ ಮತ್ತೊಂದು ಕಡೆಗಿದೆ. ಇದು ಅವರಿಗೆ ಸೋಲಿನ ಪಾಶವಾಗಿ ಕಾಡುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.

ಕ್ಷೇತ್ರದಲ್ಲಿ ಸಂಸದ ಉದಾಸಿ ವಿರುದ್ಧ ಹಲವಾರು ಅರೋಪಗಳಿವೆ. ಸಂಸದರ ನಿಧಿಯನ್ನು ಅವರು ಸರಿಯಾಗಿ ಬಳಕೆ ಮಾಡಿಲ್ಲ. ಜಿಲ್ಲೆಗೆ ಕೇಂದ್ರದಿಂದ ಯಾವುದೇ ಹೊಸ ಯೋಜನೆಗಳನ್ನು ತಂದಿಲ್ಲ. ಕಳೆದ ಚುನಾವಣಾ ಪ್ರಚಾರದ ವೇಳೆ ಜಿಲ್ಲೆಗೆ ಹೊಸ ರೈಲ್ವೆ ಯೋಜನೆ ತರುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಈವರೆಗೆ ಅದು ಸಾಧ್ಯವಾಗಿಲ್ಲ. ವರದಾ ಹಾಗೂ ತುಂಗಭದ್ರಾ ನದಿಗಳಿಂದ ಕೃಷಿ ಭೂಮಿಗಳಿಗೆ ನೀರು ಹರಿಸುವ ಯೋಜನೆ ಸಾಕಾರವಾಗಿಲ್ಲ. ಅಲ್ಲದೆ ಗೆದ್ದ ನಂತರ ಉದಾಸಿ ಜನರ ಕೈಗೆ ಸಿಗುವುದೇ ಇಲ್ಲ ಎಂಬುದು ಅವರ ವಿರುದ್ಧ ಕೇಳಿ ಬರುತ್ತಿರುವ ಪ್ರಮುಖ ಆರೋಪಗಳು.

“ಕಳೆದ ಎರಡೂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯನ್ನು ಭೇದಿಸಿ ಗೆಲುವು ಸಾಧಿಸಿರುವ ಶಿವಕುಮಾರ ಉದಾಸಿ ಕ್ಷೇತ್ರವನ್ನು ಮರೆತು ಬಿಟ್ಟಿದ್ದಾರೆ. ಕಾರ್ಯಕರ್ತರನ್ನೇ ಕಡೆಗಣಿಸುತ್ತಿರುವುದು ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಸಂಸದರಾಗಿ ಹತ್ತು ವರ್ಷ‌ ಕಳೆದರೂ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತ ಕೆಲಸ ಮಾಡಿಲ್ಲ. ಇನ್ನು ಉದಾಸಿ ಹಾಗೂ ಜಿಲ್ಲಾ ಬಿಜಿಪಿ ಅಧ್ಯಕ್ಷ, ಶಾಸಕ ನೆಹರೂ ಓಲೇಕಾರ ನಡುವಿನ ಬಹಿರಂಗ ಸಮರ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಅಲ್ಲದೆ ಕಾಂಗ್ರೆಸ್ ಈಗಾಗಲೆ ಪ್ರಬಲ ಅಭ್ಯರ್ಥಿಯಾದ ಡಿ.ಆರ್. ಪಾಟೀಲ್ ಹೆಸರನ್ನು ಘೋಷಿಸಿರುವುದು ಪಕ್ಷದೊಳಗೆ ತಳಮಳಕ್ಕೆ ಕಾರಣವಾಗಿದೆ,” ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಬಿಜೆಪಿ ಪಕ್ಷದ ಸ್ಥಳೀಯ ಮಾಜಿ ಕಾರ್ಯಕರ್ತರೊಬ್ಬರು.

ಆದರೆ, ಇಂತಹ ಗುರುತರ ಆರೋಪಗಳ ನಡುವೆಯೂ ಮೋದಿ ಅಲೆ ಹಾಗೂ ವ್ಯವಸ್ಥಿತ ಪಕ್ಷ ಸಂಘಟನೆ ತಮ್ಮನ್ನು ಗೆಲ್ಲಿಸುತ್ತದೆ ಎಂಬ ಅದಮ್ಯ ವಿಶ್ವಾಸದಲ್ಲಿದ್ದಾರೆ ಹಾಲಿ ಸಂಸದ ಉದಾಸಿ. ಹಾಗಾದರೆ ಜಿಲ್ಲೆಯಲ್ಲಿ ಇನ್ನೂ ಇದೆಯಾ ಮೋದಿ ಅಲೆ?

ಮೋದಿ ಅಲೆ ವರ್ಸಸ್ ಮೈತ್ರಿ ಸರಕಾರ:

ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸಾಧಿಸಿದೆ. ಮೈತ್ರಿ ಸೂತ್ರದ ಅನ್ವಯ ಗದಗ-ಹಾವೇರಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದೆ. ಆದರೆ, ಈ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ಹೇಳಿಕೊಳ್ಳುವಂತಹ ಮತಬ್ಯಾಂಕ್ ಆಗಲಿ ಪಕ್ಷದ ಸಂಘಟನೆಯಾಗಲಿ ಇಲ್ಲ.

ಆದರೆ, 2009ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿದ್ದಲಿಂಗಗೌಡ ಪಾಟೀಲ ಸುಮಾರು 45 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಇನ್ನೂ ಇಲ್ಲಿನ 8 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಣಿಬೆನ್ನೂರು, ರೋಣ, ಗದಗ ಹಾಗೂ ಹಾವೇರಿಯಲ್ಲಿ ಜೆಡಿಎಸ್ ಪಕ್ಷಕ್ಕೆ ತಕ್ಕ ಮಟ್ಟಿಗೆ ನೆಲೆ ಇದೆ. ಪಕ್ಷ ಸಂಘಟನೆ ಇದೆ. ಇದು ಮೈತ್ರಿ ಪಕ್ಷಗಳಿಗೆ ಒಂದಷ್ಟು ಮತಗಳನ್ನು ಹರಿಸಬಹುದು. ಅಲ್ಲದೆ ಎಚ್‌.ಕೆ. ಪಾಟೀಲ್ ಅವರಂತಹ ಹಿರಿಯ ನಾಯಕರ ವರ್ಚಸ್ಸು ಕಾಂಗ್ರೆಸ್ ಪಕ್ಷಕ್ಕೆ ಒಂದಷ್ಟು ಶಾಶ್ವತ ಮತಬ್ಯಾಂಕ್ ಸೃಷ್ಟಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ, “ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ವಿಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗಿಂತ ಬಿಜೆಪಿ ಮುಂದಿದೆ. ಕಳೆದ 10 ವರ್ಷದಲ್ಲಿ ಬಿಜೆಪಿ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಪಕ್ಷವನ್ನು ಸಂಘಟಿಸಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕಾರ್ಯಕರ್ತರನ್ನು ಹೊಂದಿದೆ. ಅಲ್ಲದೆ ಅತಿ ಹೆಚ್ಚು ಗ್ರಾಮೀಣ ಭಾಗಗಳಿಂದ ಕೂಡಿದ ಹಾವೇರಿ-ಗದಗ ಜಿಲ್ಲೆಯಲ್ಲಿ ಈಗಲೂ ಮೋದಿ ಅಲೆ ಇದೆ. ಈ ಅಲೆ ಮತ್ತೊಮ್ಮೆ ಜಿಲ್ಲೆಯಲ್ಲಿ ಕಮಲವನ್ನು ಅರಳಿಸುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕರಾದ ವಿನಾಯಕ್.

ಒಟ್ಟಾರೆ ಲಿಂಗಾಯತ ಮತಗಳನ್ನೇ ಅಧಿಕ ಹೊಂದಿರುವ ಈ ಅವಳಿ ಕ್ಷೇತ್ರದಲ್ಲಿ ಅಭಿವೃದ್ಧಿಗಿಂತ ಜಾತಿ ಲೆಕ್ಕಾಚಾರವೇ ಗೆಲುವಿಗೆ ನಿರ್ಣಾಯಕ ಎಂಬುದು ಈ ಹಿಂದಿನ ಎಲ್ಲಾ ಚುನಾವಣೆಯಲ್ಲೂ ಸಾಬೀತಾಗಿದೆ.

ಕೊನೆಗೆ ಕಾಂಗ್ರೆಸ್‌ ಕೂಡ ಈ ಜಾತಿ ಸಮೀಕರಣಕ್ಕೆ ತಲೆಬಾಗಿ ಪ್ರಬಲ ಲಿಂಗಾಯತ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಆದರೆ, ಅಭಿವೃದ್ಧಿ ಮರೆತ ಉದಾಸಿ ಮೋದಿ ಅಲೆಯಲ್ಲಿ ಮತ್ತೆ ಗೆಲುವು ಸಾಧಿಸುವ ತವಕದಲ್ಲಿದ್ದಾರೆ. ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸಿದರೆ ಮೋದಿ ಅಲೆ ತಣ್ಣಗಾಗುವುದು ಮಾತ್ರ ಖಚಿತ ಎನ್ನುತ್ತಿವೆ ಸ್ಥಳೀಯ ಸಮೀಕ್ಷೆಗಳು.

ಚಿತ್ರ ಕೃಪೆ: ಸುವರ್ಣ ‌ನ್ಯೂಸ್