samachara
www.samachara.com
ಹೆಸರಿಗೆ ಬೆಂಗಳೂರು ಉತ್ತರ; ಆದರೆ ನೀರಿಗೂ ತತ್ವಾರ: ಜಾತಿ ಸಮೀಕರಣವೇ ಗೆಲುವಿಗೆ ಸಾಕಾರ
ನ್ಯೂಸ್ 18 ಕನ್ನಡ. 
ರಾಜ್ಯ

ಹೆಸರಿಗೆ ಬೆಂಗಳೂರು ಉತ್ತರ; ಆದರೆ ನೀರಿಗೂ ತತ್ವಾರ: ಜಾತಿ ಸಮೀಕರಣವೇ ಗೆಲುವಿಗೆ ಸಾಕಾರ

ಮೈತ್ರಿಯಿಂದಾಗಿ ಇಷ್ಟು ವರ್ಷ ಎದುರಾಕಿಕೊಂಡಿದ್ದ ಜೆಡಿಎಸ್ ನಾಯಕರ ಜೊತೆಗೆ ಒಟ್ಟಾಗಿ ಕೆಲಸ ಮಾಡಬೇಕಾಗಿರುವುದಕ್ಕೆ ಸ್ವತಃ ಕಾಂಗ್ರೆಸ್ ಶಾಸಕರೆ ಕಸಿವಿಸಿಗೊಂಡಿದ್ದಾರೆ. ಇದೂ ಕೂಡ ಬಿಜೆಪಿಗೆ ಲಾಭವಾದರೆ ಅಚ್ಚರಿ ಇಲ್ಲ.

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

ರಾಜ್ಯದ ಪ್ರತಿಷ್ಠೆಯ ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರವೂ ಒಂದು. ಅರ್ಧ ನಗರದ ಭಾಗ, ಇನ್ನರ್ಧ ಗ್ರಾಮೀಣ ಪ್ರದೇಶ. ರಾಜಧಾನಿ ಬೆಂಗಳೂರಿನ ಭಾಗವೇ ಆಗಿದ್ದರೂ ಇದೊಂದು ರೀತಿಯಲ್ಲಿ ನತದೃಷ್ಟ ಕ್ಷೇತ್ರ.

ಕೆ. ಆರ್. ಪುರಂ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ ಹಾಗೂ ಪುಲಕೇಶಿ ನಗರ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಬೆಂಗಳೂರು ಉತ್ತರದಲ್ಲಿನ ಸಮಸ್ಯೆಗಳನ್ನು ಲೆಕ್ಕ ಹಾಕಲು ಮುಂದಾದರೆ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ. ಅಷ್ಟು ಸಮಸ್ಯೆಗಳು ಹಾಸು ಹೊದ್ದು ಮಲಗಿವೆ ಇಲ್ಲಿ.

ಇಲ್ಲಿನ ಜನರ ತತ್ವಾರಗಳ ಪೈಕಿ ಪ್ರಮುಖವಾದದ್ದೆಂದರೆ ಕುಡಿಯುವ ನೀರಿನ ಸಮಸ್ಯೆ. ನಗರದ ಪ್ರಮುಖ ವಾರ್ಡ್‌ಗಳಿಗೆ ಕಾವೇರಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ದಾಸರಹಳ್ಳಿ, ಬ್ಯಾಟರಾಯನಪುರ, ಪುಲಿಕೇಶಿ ನಗರ ಹಾಗೂ ಯಶವಂತಪುರದ ಹಲವು ವಾರ್ಡ್‌ಗಳಿಗೆ ಈವರೆಗೆ ಸಮರ್ಪಕವಾದ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿಲ್ಲ. ಪರಿಣಾಮ ಈಗಲೂ ಜನ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಇದೆ.

ಅದರಲ್ಲೂ ಬೇಸಿಗೆ ಬಂತೆಂದರೆ, “ಇಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟ,” ಎನ್ನುತ್ತಾರೆ ಸ್ವತಃ ಯಶವಂತಪುರ ಕಾಂಗ್ರೆಸ್ ಶಾಸಕರಾಗಿರುವ ಎಸ್‌. ಟಿ. ಸೋಮಶೇಖರ್.

ಈ ಭಾಗಗಳಲ್ಲಿ ಶೇ.70 ರಷ್ಟು ನೀರನ್ನು ಈಗಲೂ ಟ್ಯಾಂಕರ್ ಮೂಲಕವೇ ಪೂರೈಸಲಾಗುತ್ತದೆ. ಇದಲ್ಲದೆ ಯಶವಂತಪುರದಲ್ಲಿ ಉಲ್ಬಣಿಸಿರುವ ಕಸದ ಸಮಸ್ಯೆ, ರಸ್ತೆ ಸಮಸ್ಯೆ, ಪುಲಿಕೇಶಿ ನಗರ, ಬ್ಯಾಟರಾಯನಪುರ ಹಾಗೂ ಮಲ್ಲೇಶ್ವರಂನ ಸ್ಲಂಗಳಲ್ಲಿ ವಾಸವಾಗಿರುವ ಜನರ ಹಕ್ಕುಪತ್ರ ಸೇರಿದಂತೆ ಈ ಕ್ಷೇತ್ರದಲ್ಲಿ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ.

ಇಂತಹ ಹಿನ್ನೆಲೆ ಇರುವ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ನಿಂತು 2.3 ಲಕ್ಷ ದಾಖಲೆ ಮತಗಳ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸಿದವರು ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ.

ಒಕ್ಕಲಿಗ ಮತಗಳೇ ನಿರ್ಣಾಯಕವಾಗಿರುವ ಈ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ ಮೋದಿ ಅಲೆ ಕೆಲಸ ಮಾಡಿದೆ. ಆದರೆ, ಕಳೆದ ಚುನಾವಣೆಯ ಪ್ರಚಾರದ ವೇಳೆ ಈ ಕ್ಷೇತ್ರಕ್ಕೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಆಶ್ವಾಸನೆ ನೀಡಿದ್ದ ಸದಾನಂದಗೌಡರು ನಂತರ ಸುಮ್ಮನಾಗಿದ್ದರು. ಆದರೆ, ಕ್ಷೇತ್ರದ ಮತದಾರ ಈಗ ಪ್ರಶ್ನೆ ಮಾಡುತ್ತಿದ್ದಾನೆ/ಳೆ.

ಕೊಟ್ಟ ಮಾತು ತಪ್ಪಿದ ಗೌಡರು:

ಯಶವಂತಪುರದ ಮಾರುತಿ ನಗರದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟಿಸುತ್ತಿರುವ ಮಹಿಳೆಯರು.
ಯಶವಂತಪುರದ ಮಾರುತಿ ನಗರದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟಿಸುತ್ತಿರುವ ಮಹಿಳೆಯರು.

“ಮನೆಯಲ್ಲಿ ಐದು ಮಂದಿ ಇದ್ದೇವೆ, ಬೆಳಗ್ಗೆ ಮಕ್ಕಳು ಎದ್ದು ರೆಡಿಯಾಗಿ ಸ್ಕೂಲಿಗೆ ಹೋಗ್ಬೇಕು. ಉಳಿದವರು ಕೆಲಸಕ್ಕೆ ಹೊರಡಬೇಕು. ಸಮಯಕ್ಕೆ ಸರಿಯಾಗಿ ಎಲ್ಲರೂ ರೆಡಿಯಾಗೋಕೆ ನೀರುಬೇಕು. ಆದರೆ, ಇಲ್ಲಿ ನೀರಿನದ್ದೆ ದೊಡ್ಡ ಸಮಸ್ಯೆ. ನಮ್ಮ ಕ್ಷೇತ್ರದಲ್ಲಿ ಎಂಎಲ್‌ಎ ಎಲೆಕ್ಷನ್ ಆದ್ರೂ, ಎಂಪಿ ಎಲೆಕ್ಷನ್ ಆದ್ರೂ ಓಟ್ ಕೇಳಕ್ ಬರೋರು ಮಾತ್ರ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡ್ತೀವಿ. 24 ತಾಸು ನೀರು ಕೋಡ್ತೀವಿ ಅಂತಾರೆ. ಆದರೆ ಯಾರೂ ಈವರೆಗೆ ಸಮಸ್ಯೆಯನ್ನು ಪರಿಹರಿಸಿಲ್ಲ. ಕುಡಿಯುವ ನೀರನ್ನೇನೊ ಕ್ಯಾನ್‌ಗೆ 40 ರೂ ಕೊಟ್ಟು ಖರೀದಿ ಮಾಡ್ತೀವಿ. ಆದರೆ, ಸ್ನಾನಕ್ಕೆ ಮಾತ್ರ ಎರಡು ಮೂರು ದಿನಕ್ಕೊಮ್ಮೆ ಬರುವ ಟ್ಯಾಂಕ್ ನೀರೆ ಗತಿ” ಎಂದು ನೀರಿನ ಸಮಸ್ಯೆ ಕುರಿತ ತಮ್ಮ ಅಳಲನ್ನು ವ್ಯಕ್ತಪಡಿಸುತ್ತಾರೆ ಯಶವಂತಪುರ ಕ್ಷೇತ್ರದಲ್ಲಿ ವಾಸವಾಗಿರುವ ಗೃಹಿಣಿಯೊಬ್ಬರು.

ಇದು ಕೇವಲ ಯಶವಂತಪುರದ ಓರ್ವ ಗೃಹಿಣಿಯ ಸಮಸ್ಯೆಯಲ್ಲ. ಬದಲಾಗಿ ಬೆಂಗಳೂರು ನಗರ ಭಾಗದಿಂದ ಹೊರಗಿರುವ ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಪುಲಿಕೇಶಿ ನಗರ, ಹೆಬ್ಬಾಳ ಹಾಗೂ ಬ್ಯಾಟರಾಯನಪುರದ ಅನೇಕ ವಾರ್ಡ್‌ಗಳಲ್ಲಿ ಇಂತಹ ಹತ್ತಾರು ಸಮಸ್ಯೆಗಳಿವೆ.

2014ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಸದಾನಂದ ಗೌಡರು ಸ್ಥಳೀಯ ಸಮಸ್ಯೆಗಳನ್ನು ಉಲ್ಲೇಖಿಸಿದ್ದರು. ಅಲ್ಲದೆ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆಗೆ ತುರ್ತಾಗಿ ಶಾಶ್ವತ ಪರಿಹಾರ ನೀಡುವ ಭರವಸೆಯನ್ನೂ ನೀಡಿದ್ದರು.

ಆದರೆ, “ಗೆದ್ದು ಸಂಸತ್ ಪ್ರವೇಶಿಸಿದ ನಂತರ ಸಮಸ್ಯೆಗಳಿಗೆ ಪರಿಹಾರ ನೀಡುವುದಿರಲಿ ಚುನಾವಣೆಯ ನಂತರ ನಾವು ಮತ್ತೆ ಅವರನ್ನು ಕ್ಷೇತ್ರದಲ್ಲಿ ನೋಡೆ ಇಲ್ಲ” ಎಂದು ಆರೋಪಿಸುತ್ತಿದ್ದಾರೆ ಸ್ಥಳೀಯ ಮತದಾರರು.

ಇನ್ನು ಬ್ಯಾಟರಾಯನಪುರ ಹಾಗೂ ಎಸ್‌ಸಿ ಮೀಸಲು ಕ್ಷೇತ್ರವಾದ ಪುಲಿಕೇಶಿ ನಗರದ ಕೆಲವು ವಾರ್ಡ್‌ಗಳಲ್ಲಿ ಈಗಲೂ ಮತದಾರರಿಗೆ ಸದಾನಂದ ಗೌಡ ಎಂದರೆ ಯಾರೆಂದೆ ಗೊತ್ತಿಲ್ಲದ ಪರಿಸ್ಥಿತಿ ಇದೆ.

ಗೌಡರನ್ನು ಗೆಲ್ಲಿಸಿದ್ದ ಮೋದಿ ಅಲೆ

2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಗೆಲುವಿನ ನಗೆ ಬೀರಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ.
2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಗೆಲುವಿನ ನಗೆ ಬೀರಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ.
/ಒನ್ ಇಂಡಿಯಾ.

ಒಂದು ಕಾಲದಲ್ಲಿ ಬೆಂಗಳೂರು ಉತ್ತರ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. 1951 ರಿಂದ 2004ರ ವರೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ ಗೆಲುವಿನ ನಗೆ ಬೀರಿತ್ತು. 1996ರಲ್ಲಿ ಮಾತ್ರ ಒಮ್ಮೆ ಜನತಾದಳ ಅಭ್ಯರ್ಥಿ ಸಿ. ನಾರಾಯಣ ಸ್ವಾಮಿ ಇಲ್ಲಿ ಗೆಲುವು ದಾಖಲಿಸಿದ್ದರು. ನಂತರ ಅವರೂ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತ 7 ಬಾರಿ ಸಂಸತ್‌ಗೆ ಚುನಾಯಿತರಾಗಿ ದಿವಂಗತ ಸಿ. ಕೆ. ಜಾಫರ್ ಶರೀಫ್ ದಾಖಲೆ ಬರೆದಿದ್ದಾರೆ. ಈ ಭಾಗದ ಜನಪ್ರಿಯ ರಾಜಕೀಯ ಮುಖಂಡರ ಪೈಕಿ ಜಾಫರ್ ಶರೀಫ್‌ಗೆ ಅಗ್ರಸ್ಥಾನ. ಕೇಂದ್ರ ಸಂಪುಟದಲ್ಲಿ ಸಚಿವರಾಗಿ ಹಲವಾರು ಖಾತೆಗಳನ್ನು ನಿಭಾಯಿಸಿದ್ದ ಅವರು, 2004ರಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಎಚ್‌. ಟಿ. ಸಾಂಗ್ಲಿಯಾನ ವಿರುದ್ಧ ಸೋಲುವ ಮೂಲಕ ಈ ಕ್ಷೇತ್ರ ಬಿಜೆಪಿ ತೆಕ್ಕೆಗೆ ಜಾರಿತ್ತು.

ಆದರೆ, ಬಿಜೆಪಿಯಿಂದ ಗೆದ್ದ ಎಚ್‌. ಟಿ. ಸಾಂಗ್ಲಿಯಾನ ನಂತರ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದರು. ಪರಿಣಾಮ 2009ರ ಲೋಕಸಭಾ ಚುನಾವಣೆಯಲ್ಲಿ ಸಾಂಗ್ಲಿಯಾನರನ್ನು ಬೆಂಗಳೂರು ಕೇಂದ್ರದಿಂದ ಕಣಕ್ಕಿಳಿಸಿದ್ದ ಕಾಂಗ್ರೆಸ್, ಬೆಂಗಳೂರು ಉತ್ತರದಿಂದ ಮತ್ತೆ ಜಾಫರ್ ಶರೀಫ್ ಅವರನ್ನೇ ಕಣಕ್ಕಿಳಿಸಿತ್ತು. ಬಿಜೆಪಿಯಿಂದ ಹಿರಿಯ ರಾಜಕಾರಣಿ ಡಿ. ಬಿ. ಚಂದ್ರೇಗೌಡ ಕಣಕ್ಕಿಳಿದಿದ್ದರು. ಆದರೆ, ಅಂದು ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರಕಾರದ ಪ್ರಭಾವ ಹಾಗೂ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಅಲೆ ಮತ್ತೆ ಬಿಜೆಪಿ ಗೆಲುವಿನ ನಗೆ ಬೀರುವಂತೆ ಮಾಡಿತ್ತು.

ಜಾಫರ್ ಶರೀಫ್ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ ಚಂದ್ರೇಗೌಡ ಪಾರ್ಕಿನ್ಸನ್‌ ಕಾಯಿಲೆ ಹಿನ್ನೆಲೆಯಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದರು. ಪರಿಣಾಮ ಅದೇ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸದಾನಂದ ಗೌಡರನ್ನು 2014ರ ಚುನಾವಣೆಯಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು.

“ಈ ಚುನಾವಣೆಯವರೆಗೆ ಕ್ಷೇತ್ರದ ಜನರಿಗೆ ಸದಾನಂದ ಗೌಡರ ಪರಿಚಯವೇ ಇರಲಿಲ್ಲ. ಆದರೆ, ಮೋದಿ ಅಲೆ ಮಾತ್ರ ವಿಪರೀತವಾಗಿತ್ತು ಎಂಬುದು ಸತ್ಯ. 2009ರಲ್ಲಿ ಯಡಿಯೂರಪ್ಪನವರ ಅಲೆ ಚಂದ್ರೇಗೌಡರನ್ನು ಗೆಲುವಿನ ದಡ ಸೇರಿಸಿದಂತೆ, 2014ರಲ್ಲಿ ಸದಾನಂದ ಗೌಡ ಗೆಲ್ಲಲು ಮೋದಿ ಅಲೆ ಕಾರಣವಾಗಿತ್ತು. ಆದರೆ, ಈಗಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ” ಎನ್ನುತ್ತಾರೆ ಈ ಭಾಗದ ಜೆಡಿಎಸ್ ಮುಖಂಡ ಸೋಮಣ್ಣ.

ಒಕ್ಕಲಿಗರ ಮತಗಳೇ ನಿರ್ಣಾಯಕ

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ತಕ್ಕ ಮಟ್ಟಿಗೆ ಒಕ್ಕಲಿಗರ ಮತಗಳೇ ನಿರ್ಣಾಯಕ. ಬೆಂಗಳೂರು ನಗರ ಹಾಗೂ ಗ್ರಾಮೀಣ ಎರಡೂ ಭಾಗಗಳನ್ನು ಒಳಗೊಂಡಿರುವ ಪರಿಣಾಮ ಗ್ರಾಮೀಣ ಭಾಗದಲ್ಲಿ ಒಕ್ಕಲಿಗ ಮತದಾರರೇ ಅಧಿಕ ಎನ್ನುತ್ತಿವೆ ಅಂಕಿಅಂಶಗಳು.

ಈ ಕ್ಷೇತ್ರದಲ್ಲಿ ಒಟ್ಟು 27.3 ಲಕ್ಷ ಮತದಾರರಿದ್ದಾರೆ. ಈ ಪೈಕಿ ಸುಮಾರು 6 ಲಕ್ಷ ಒಕ್ಕಲಿಗ ಮತದಾರರಿದ್ದರೆ, 4 ಲಕ್ಷ ಮತದಾರರನ್ನು ಹೊಂದಿರುವ ಮುಸ್ಲಿಂರು ಎರಡನೇ ಸ್ಥಾನದಲ್ಲಿದ್ದಾರೆ. ಇನ್ನೂ ತಲಾ 3 ಲಕ್ಷ ಮತದಾರರನ್ನು ಹೊಂದಿರುವ ಲಿಂಗಾಯಿತ ಹಾಗೂ ದಲಿತ ಮತಗಳೂ ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದಲ್ಲದೆ 1.5 ಲಕ್ಷ ಕ್ರೈಸ್ತರಿದ್ದರೆ, ಯಾದವ, ಕುರುಬ, ಬ್ರಾಹ್ಮಣ, ದೇವಾಂಗ ಹಾಗೂ ಇತರೆ ಸಮುದಾಯದವರು ಗಮನಾರ್ಹ ಪ್ರಮಾಣದಲ್ಲಿದ್ದಾರೆ.

1998ರ ಚುನಾವಣೆಯಲ್ಲಿ ಬೆಂಗಳೂರು ಉತ್ತರದಿಂದ ಕೊನೆಯ ಬಾರಿಗೆ ಗೆಲುವಿನ ನಗೆ ಬೀರಿದ್ದ ಸಿ.ಕೆ. ಜಾಫರ್ ಶರೀಫ್.
1998ರ ಚುನಾವಣೆಯಲ್ಲಿ ಬೆಂಗಳೂರು ಉತ್ತರದಿಂದ ಕೊನೆಯ ಬಾರಿಗೆ ಗೆಲುವಿನ ನಗೆ ಬೀರಿದ್ದ ಸಿ.ಕೆ. ಜಾಫರ್ ಶರೀಫ್.
/ಡೈಜಿ ವರ್ಲ್ಡ್.

ಆದರೆ, ಎಲ್ಲಾ ಚುನಾವಣೆಗಳಲ್ಲೂ 6 ಲಕ್ಷ ಮತದಾರರನ್ನು ಹೊಂದಿರುವ ದೊಡ್ಡ ಸಮುದಾಯವಾದ ಒಕ್ಕಲಿಗರೇ ಇಲ್ಲಿ ನಿರ್ಣಾಯಕ. ಸಿ. ಕೆ. ಜಾಫರ್ ಶರೀಫ್ ಅವರನ್ನು ಧರ್ಮದ ಆಚೆಗೂ ತಮ್ಮವರೆ ಎಂದು ಒಪ್ಪಿಕೊಂಡಿದ್ದ ಇಲ್ಲಿನ ಒಕ್ಕಲಿಗ ಸಮುದಾಯ ದಶಕಗಳ ಕಾಲ ಅವರ ಹಾಗೂ ಕಾಂಗ್ರೆಸ್ ಪಕ್ಷದ ಜೊತೆಗಿತ್ತು. ಆದರೆ 2009 ರ ಚುನಾವಣೆಯಲ್ಲಿ ಈ ಸೂತ್ರವನ್ನು ತಲೆಕೆಳಗೆ ಮಾಡಿತ್ತು ಬಿಜೆಪಿ.

ಬಿಜೆಪಿಯ ಜಾತಿ ಸಮೀಕರಣ

ಈ ಭಾಗದಲ್ಲಿ ಬಹುಸಂಖ್ಯಾತರಾಗಿರುವ ಒಕ್ಕಲಿಗ ಹಾಗೂ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ 2009ರಲ್ಲಿ ಒಕ್ಕಲಿಗ ಸಮುದಾಯದವರೇ ಆದ ಚಿಕ್ಕಮಗಳೂರು ಭಾಗದ ಹಿರಿಯ ಹಾಗೂ ಪ್ರಭಾವಿ ನಾಯಕ ಡಿ. ಬಿ. ಚಂದ್ರೇಗೌಡ ಅವರನ್ನು ಕಣಕ್ಕಿಳಿಸಿತ್ತು. ಆ ಮೂಲಕ ಬಿಜೆಪಿ ಮೊದಲ ಬಾರಿಗೆ ಈ ಭಾಗದಲ್ಲಿ ಜಾತಿ ರಾಜಕಾರಣ ಸಮೀಕರಣಕ್ಕೆ ಅಂಕಿತ ಹಾಕಿತ್ತು.

2004ರಲ್ಲೂ ಇದೇ ಜಾತಿ ಸಮೀಕರಣವನ್ನು ಪಾಲಿಸಿದ್ದ ಬಿಜೆಪಿ ಒಕ್ಕಲಿಗ ಸಮುದಾಯದವರೇ ಆದ ಉಡುಪಿ ಮೂಲದ ಸದಾನಂದ ಗೌಡರನ್ನು ಕಣಕ್ಕಿಳಿಸಿತ್ತು. ಈ ಬಾರಿ ಒಕ್ಕಲಿಗ-ಲಿಂಗಾಯತ ಸಮೀಕರಣದ ಜೊತೆಗೆ ಮೋದಿ ಅಲೆ ಕೆಲಸ ಮಾಡಿತ್ತು. ಪರಿಣಾಮ ಸದಾನಂದ ಗೌಡರು ಸಹ ಗೆಲುವಿನ ನಗೆ ಬೀರಿದ್ದರು.

ಈ ಬಾರಿಯೂ ಗೌಡರು ಇಂತಹದ್ದೇ ಫಲಿತಾಂಶದ ಪುನರಾವರ್ತನೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಕ್ಷೇತ್ರದಲ್ಲಿ ಜನರ ಅಭಿಪ್ರಾಯ ಒಂದು ವೇಳೆ ಒಳ್ಳೆಯ ಆಯ್ಕೆಯನ್ನು ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮುಂದಿಟ್ಟರೆ ಮಾತ್ರ ಬೇರೇಯದೇ ಆಗಲಿದೆ.

ಕ್ಷೇತ್ರವಾರು ಮತಗಣನೆ

ಮೋದಿ ಅಲೆ ಹಾಗೂ ಜಾತಿ ಸಮೀಕರಣದ ಸಹಾಯದಿಂದಾಗಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಿ. ನಾರಾಯಣ ಸ್ವಾಮಿ ವಿರುದ್ಧ, ಡಿ. ವಿ. ಸದಾನಂದ ಗೌಡ 2.3 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಪೈಕಿ ಮಲ್ಲೇಶ್ವರಂ ಕ್ಷೇತ್ರದಿಂದ 45 ಸಾವಿರ, ದಾಸರಹಳ್ಳಿಯಿಂದ 25 ಸಾವಿರ, ಮಹಾಲಕ್ಷ್ಮೀ ಲೇಔಟ್‌ನಿಂದ 45 ಸಾವಿರ, ಕೆ.ಆರ್. ಪುರಂನಿಂದ 35 ಸಾವಿರ, ಬ್ಯಾಟರಾಯನಪುರದಿಂದ 20 ಸಾವಿರ, ಹೆಬ್ಬಾಳದಿಂದ 30 ಸಾವಿರ ಹಾಗೂ ಯಶವಂತಪುರದಿಂದ 34 ಸಾವಿರ ಮತಗಳ ಲೀಡ್ ಸಾಧಿಸಿದ್ದರು. ಬೆಂಗಳೂರು ಉತ್ತರ ಲೋಕಸಭೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು

ಆದರೆ, ಕಾಂಗ್ರೆಸ್ ಕೇವಲ ಪುಲಿಕೇಶಿನಗರದಿಂದ ಮಾತ್ರ ಸುಮಾರು 50 ಸಾವಿರ ಮತಗಳ ಮುನ್ನಡೆ ಸಾಧಿಸಿತ್ತು. ಪರಿಣಾಮ ಸದಾನಂದ ಗೌಡರು ಅಖಂಡ ಗೆಲುವು ಸಾಧಿಸಿದ್ದರು. ಆದರೆ, ಈಗ ಎಲ್ಲಾ ಸಮೀಕರಣಗಳು ಬದಲಾಗಿವೆ.

ಪ್ರಸ್ತುತ ಬೆಂಗಳೂರು ಉತ್ತರದ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, 2 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಶಾಸಕರಿದ್ದಾರೆ. ಉಳಿದಂತೆ ಮಲ್ಲೇಶ್ವರಂ ನಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ಥ ನಾರಾಯಣ ಅವರಿಗೆ ಕ್ಷೇತ್ರದ ಮೇಲೆ ಹಿಡಿತವಿದೆ.

ಹೀಗಾಗಿ ಈ ಕ್ಷೇತ್ರದಿಂದ ಬಿಜೆಪಿ ಮತ್ತೆ ಅಧಿಕ ಮತ ಗಳಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು. ಆದರೆ, ಬೇರೆ ಕ್ಷೇತ್ರಗಳ ಪರಿಸ್ಥಿತಿ ಕಳೆದ ಚುನಾವಣೆಯಂತಿಲ್ಲ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ.
/ವಿಜಯ ಕರ್ನಾಟಕ.

“ದಾಸರಹಳ್ಳಿ, ಮಹಾಲಕ್ಮೀ ಲೇಔಟ್, ಯಶವಂತಪುರ, ಕೆ.ಆರ್ ಪುರಂ ಹಾಗೂ ಹೆಬ್ಬಾಳದಲ್ಲಿ ಒಕ್ಕಲಿಗ ಹಾಗೂ ಮುಸ್ಲಿಂ ಮತಗಳು ನಿರ್ಣಾಯಕ. ಈ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರೇ ಇದ್ದು ಈ ಮತಗಳ ಮೇಲೆ ಕಣ್ಣಿಟ್ಟಿರುವ ಮೈತ್ರಿ ಸರಕಾರ ಈಗಾಗಲೇ ಚುನಾವಣಾ ರಣತಂತ್ರಕ್ಕೆ ನೀಲಿನಕ್ಷೆ ಸಿದ್ದಪಡಿಸಿದೆ. ಅಲ್ಲದೆ ಜೆಡಿಎಸ್ ಪಕ್ಷ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾರಣ ಒಕ್ಕಲಿಗ ಮತಗಳು ಈ ಬಾರಿ ಅಪಾರ ಪ್ರಮಾಣದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗೆ ಹರಿದು ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಕೆ. ಆರ್. ಪುರಂ ಕಾಂಗ್ರೆಸ್ ಶಾಸಕ ಬಿ. ಎ. ಬಸವರಾಜ್.

ಇದಲ್ಲದೆ “ಬ್ಯಾಟರಾಯನಪುರ ಹಾಗೂ ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ಪುಲಿಕೇಶಿ ನಗರದಲ್ಲಿ ಸುಮಾರು 16ಕ್ಕೂ ಹೆಚ್ಚು ಸ್ಲಂಗಳಿವೆ, ದಲಿತರು ಮುಸ್ಲಿಂರು ಹಾಗೂ ತಮಿಳು, ತೆಲುಗು ಭಾಷಿಕರು ಹೆಚ್ಚು ವಾಸಿಸುವ ಇಲ್ಲಿನ ಮತಗಳ ಮೇಲೆ ಕಾಂಗ್ರೆಸ್‌ಗೆ ದಶಕಗಳ ಕಾಲ ಹಿಡಿತವಿದ್ದು, ಈ ಎರಡೂ ಕ್ಷೇತ್ರದಲ್ಲಿ ಅಪಾರ ಮುನ್ನಡೆ ಸಾಧಿಸುವ ವಿಶ್ವಾಸವಿದೆ” ಎನ್ನುತ್ತಾರೆ ಈ ಭಾಗದ ಕಾಂಗ್ರೆಸ್ ಮುಖಂಡ ಟಿ. ಪಿ. ನಾರಾಯಣಪ್ಪ.

ಇವರ ಅಭಿಪ್ರಾಯದಂತೆ, ದಾಸರಹಳ್ಳಿ, ಮಹಾಲಕ್ಮೀ ಲೇಔಟ್, ಯಶವಂತಪುರ, ಕೆ.ಆರ್ ಪುರಂ ಹೆಬ್ಬಾಳದ ಒಕ್ಕಲಿಗ-ಲಿಂಗಾಯತ ಮತಗಳು ಹಾಗೂ ಬ್ಯಾಟರಾಯನಪುರ, ಪುಲಿಕೇಶಿ ನಗರದ ದಲಿತ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಮತಗಳು ಈ ಬಾರಿ ಮೈತ್ರಿ ಸರಕಾರದ ಪರ ಮತ ಚಲಾಯಿಸಿದರೆ ಮೈತ್ರಿ ಪಕ್ಷದ ಅಭ್ಯರ್ಥಿ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಅದರಲ್ಲೂ ಒಂದು ಸಮಸ್ಯೆ ಇದೆ.

ಮೈತ್ರಿ ಪಕ್ಷಕ್ಕೆ ಅಭ್ಯರ್ಥಿಯ ಆಯ್ಕೆಯದ್ದೆ ಗೊಂದಲ

ಹೆಸರಿಗೆ ಬೆಂಗಳೂರು ಉತ್ತರ; ಆದರೆ ನೀರಿಗೂ ತತ್ವಾರ: ಜಾತಿ ಸಮೀಕರಣವೇ ಗೆಲುವಿಗೆ ಸಾಕಾರ

ಪ್ರಸ್ತುತ ಕ್ಷೇತ್ರದ ಮನಸ್ಥಿತಿಯ ಕಡೆಗೆ ಒಮ್ಮೆ ಕಣ್ಣಾಡಿಸಿದರೆ, ಮತದಾರರಿಗೆ ಈ ಬಾರಿ ಸದಾನಂದ ಗೌಡರ ಮೇಲೆ ಅಷ್ಟು ಒಲವಿಲ್ಲ. ಇನ್ನೂ ಕಳೆದ ಚುನಾವಣೆಯಲ್ಲಿ ಪ್ರಭಾವ ಬೀರಿದ ಮೋದಿ ಅಲೆಗೂ ಈಗ ನೆಲೆ ಇಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಇದು ಪೂರಕವಾಗಲಿದೆ. ಆದರೆ, ಇದನ್ನು ಬಳಸಿಕೊಳ್ಳುವಲ್ಲಿ ಮೈತ್ರಿ ಸರಕಾರ ವಿಫಲವಾಗಿರುವುದು ಎದ್ದು ಕಾಣಿಸುತ್ತಿದೆ. ಅಲ್ಲದೆ ಇದು ಕ್ಷೇತ್ರದಲ್ಲಿ ಉಬಯ ಪಕ್ಷಗಳ ಕಾರ್ಯಕರ್ತರ ಗೊಂದಲಕ್ಕೂ ಕಾರಣವಾಗಿದೆ.

ಬಿಜೆಪಿ ಈಗಾಗಲೇ ಬೆಂಗಳೂರು ಉತ್ತರಕ್ಕೆ ಸದಾನಂದ ಗೌಡರ ಹೆಸರನ್ನು ಘೋಷಿಸಿದೆ. ಮಲ್ಲೇಶ್ವರಂ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಅವರಿಗೆ ಚುನಾವಣಾ ಹೊಣೆಯನ್ನು ವಹಿಸಲಾಗಿದೆ. ಈಗಾಗಲೇ ಚುನಾವಣಾ ಪ್ರಚಾರದ ನೀಲಿನಕ್ಷೆ ಸಿದ್ದಪಡಿಸಲಾಗಿದ್ದು, ಅದರಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರು ಪ್ರತಿದಿನ ಐದು ಬೂತ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಜನರ ಜತೆ ಬೆರೆಯುತ್ತಿದ್ದಾರೆ. ಆ ಮೂಲಕ ಚುನಾವಣಾ ಪ್ರಚಾರವನ್ನು ಭರ್ಜರಿಯಾಗಿಯೇ ಆರಂಭಿಸಿದ್ದಾರೆ.

ಒಂದೆಡೆ ಬಿಜೆಪಿ ಬಿರುಸಿನ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದರೆ, ಮತ್ತೊಂದೆಡೆ ಮೈತ್ರಿ ಪಕ್ಷಗಳಿಗೆ ಅಭ್ಯರ್ಥಿಯ ಆಯ್ಕೆಯಲ್ಲಿ ಹುಟ್ಟಿರುವ ಗೊಂದಲ ಪರಿಹಾರವಾಗುವ ಯಾವುದೇ ಲಕ್ಷಣಗಳೂ ಗೋಚರಿಸುತ್ತಿಲ್ಲ. ಮೈತ್ರಿ ಸೂತ್ರದಂತೆ ಈಗಾಗಲೇ ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಜೆಡಿಎಸ್ ಪಾಲಿಗೆ ಬಿಟ್ಟುಕೊಟ್ಟಿದೆ.

ಈವರೆಗೆ ಜೆಡಿಎಸ್‌ನಿಂದ ಮಾಜಿ ಪ್ರಧಾನಿ ಹೆಚ್‌. ಡಿ. ದೇವೇಗೌಡ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿತ್ತು. ಆದರೆ, ದೇವೇಗೌಡ ತುಮಕೂರಿನಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಜೆಡಿಎಸ್‌ನಲ್ಲಿ ದಿನಕ್ಕೊಬ್ಬರ ಹೆಸರು ಚಾಲ್ತಿಗೆ ಬರುತ್ತಿದ್ದು, ಪ್ರಚಾರ ಕಾರ್ಯದ ಕುರಿತಾಗಿ ಉಬಯ ಪಕ್ಷಗಳ ಕಾರ್ಯಕರ್ತರಲ್ಲೂ ಗೊಂದಲ ಮನೆ ಮಾಡಿದೆ.

ಇದಲ್ಲದೆ ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕಡೆ ಕಾಂಗ್ರೆಸ್ ಶಾಸಕರೇ ಇದ್ದು, ಉಬಯ ಪಕ್ಷಗಳ ಮೈತ್ರಿಯಿಂದಾಗಿ ಇಷ್ಟು ವರ್ಷ ಎದುರುಹಾಕಿಕೊಂಡಿದ್ದ ಜೆಡಿಎಸ್ ನಾಯಕರ ಹಾಗೂ ಕಾರ್ಯಕರ್ತರ ಜೊತೆಗೆ ಒಟ್ಟಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿಗೆ ಒಳಗಾಗಿರುವುದರಿಂದ ಸ್ವತಃ ಕಾಂಗ್ರೆಸ್ ಶಾಸಕರೆ ಕಸಿವಿಸಿಗೆ ಒಳಗಾಗಿರುವುದು ಕಂಡುಬರುತ್ತಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಲಾಭವಾದರೂ ಅಚ್ಚರಿ ಇಲ್ಲ.

ಒಟ್ಟಾರೆ ಬೆಂಗಳೂರು ಉತ್ತರ ಕ್ಷೇತ್ರವನ್ನು ತಕ್ಕಮಟ್ಟಿಗೆ ಈಗಾಗಲೆ ಬಿಜೆಪಿ ರಣತಂತ್ರದೊಂದಿಗೆ ಪ್ರಚಾರ ಕಾರ್ಯಕ್ಕೆ ಧುಮುಕಿದೆ. ಆದರೆ, ಮೈತ್ರಿ ಪಕ್ಷಗಳ ಪಾಲಿಗೆ ಪ್ರಬಲ ಹಾಗೂ ಜನಕ್ಕೆ ಪರಿಚಯವಿರುವ ವ್ಯಕ್ತಿಯನ್ನು ಕಣಕ್ಕಿಳಿಸಿದರೆ ಮಾತ್ರ ಪ್ರಬಲ ಪೈಪೋಟಿ ನೀಡಲು ಸಾಧ್ಯ ಎನ್ನುವ ವಾತಾವರಣವೂ ಕ್ಷೇತ್ರದಲ್ಲಿದೆ.