samachara
www.samachara.com
‘ಬಿಎಸ್‌ವೈ  ಡೈರಿ’ಯ ಅಸಲಿ ಕತೆ: ಡಿಕೆಶಿ ಮನೆಯಿಂದ ಅರುಣ್‌ ಜೇಟ್ಲಿ ಟೇಬಲ್‌ವರೆಗೆ...
ರಾಜ್ಯ

‘ಬಿಎಸ್‌ವೈ ಡೈರಿ’ಯ ಅಸಲಿ ಕತೆ: ಡಿಕೆಶಿ ಮನೆಯಿಂದ ಅರುಣ್‌ ಜೇಟ್ಲಿ ಟೇಬಲ್‌ವರೆಗೆ...

ವಿಚಿತ್ರವೆಂದರೆ, ಈ ಡೈರಿ ಸಿಕ್ಕಿದ್ದು ಡಿ.ಕೆ. ಶಿವಕುಮಾರ್‌ ಮನೆಯಲ್ಲಿ. 2017ರ ಆಗಸ್ಟ್‌ನಲ್ಲಿ ಶಿವಕುಮಾರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಈ ಡೈರಿ ಪತ್ತೆಯಾಗಿತ್ತು. ಇಷ್ಟಕ್ಕೂ ಬಿಎಸ್‌ವೈ ಯಾಕೆ ಇಂತಹದೊಂದು ಡೈರಿ ಬರೆದರು?

Team Samachara

ಒಂದೊಮ್ಮೆ ಇದೆಲ್ಲಾ ಸತ್ಯವೇ ಆಗಿದ್ದರೆ; ಇದು ಬಿಜೆಪಿ ಪಕ್ಷದ ಮಾಜಿ ಮುಖ್ಯಮಂತ್ರಿಯೊಬ್ಬರ ಜೀವನ ಚರಿತ್ರೆಯ ಕೆಲವು ಪ್ರಮುಖ ಘಟ್ಟಗಳು. ಮಂಡ್ಯದ ಬೂಕನಕೆರೆ ಎಂಬ ಹಳ್ಳಿಯಿಂದ ಬಂದ ವ್ಯಕ್ತಿಯೊಬ್ಬರು ಹೋರಾಟದಲ್ಲಿ ಗುರುತಿಸಿಕೊಳ್ಳುವುದು, ಆ ಮೂಲಕ ರಾಜಕೀಯದ ಪ್ರಮುಖ ಹುದ್ದೆಗಳಿಗೆ ಏರುವುದು, ಕೊನೆಗೊಮ್ಮೆ ಆತ ಮುಖ್ಯಮಂತ್ರಿಯಂತ ಹುದ್ದೆ ಪಡೆದುಕೊಳ್ಳಲು ತನ್ನ ಹೈಕಮಾಂಡ್‌ ನಾಯಕರಿಗೆ ಪಾವತಿಸುವ ಕಪ್ಪವನ್ನು ಡೈರಿಯ ಅಧ್ಯಾಯಗಳು ತೆರೆದಿಡುತ್ತವೆ.

ಜತೆಗೆ, ಅವರನ್ನು ತುಳಿದು ಹಾಕಲು ಹೊರಟ ಸ್ಪಪಕ್ಷೀಯರ ಸಂಚು, ಅದರೊಳಗೆ ವಿರೋಧ ಪಕ್ಷದ ನಾಯಕನನ್ನು ಸೇರಿಸಿಕೊಳ್ಳುವುದು, ಕೊನೆಗೊಂದು ದಿನ ಆತನ ಮನೆಯ ಮೇಲೆ ಐಟಿ ದಾಳಿಯಾಗುವುದು ಇನ್ನೊಂದು ಅಧ್ಯಾಯ.

ಈ ದಾಳಿ ನಡೆಯುವ ಸಂದರ್ಭ ಆತನದೇ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿರುವುದು, ಇಡೀ ತನಿಖೆ ಹಳ್ಳ ಹಿಡಿಯುವುದು, ದಾಳಿ ನಡೆಸಿದ ವ್ಯಕ್ತಿ ಭಡ್ತಿ ಪಡೆಯುವುದು ಇದರ ಮೂರನೇ ಅಧ್ಯಾಯವಾದರೆ, ಮಧ್ಯದಲ್ಲಿ ಗೌಪ್ಯವಾಗಿ ನಡೆಯುವ ಎರಡನೇ ಮದುವೆ ಇದರ ಮಧ್ಯದಲ್ಲಿ ಬರುವ ಇನ್ನೊಂದು ಇಂಟರೆಸ್ಟಿಂಗ್‌ ಎಪಿಸೋಡ್. ಇವೆಲ್ಲದರ ಒಟ್ಟು ಸ್ವರೂಪವೇ ಕ್ಯಾರವಾನ್ ಬಿಚ್ಚಿಟ್ಟ ‘ಬಿಎಸ್‌ವೈ ಡೈರಿ ಸೀಕ್ರೆಟ್ಸ್‌’.

***

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ಅವರ ಕೈ ಬರಹದಲ್ಲಿರುವ ಸ್ಫೋಟಕ ಡೈರಿಯೊಂದು ಆದಾಯ ತೆರಿಗೆ ಇಲಾಖೆ ತಲುಪಿ ಇದೀಗ ಹೊರ ಬಿದ್ದಿರುವುದು ರಾಜಕೀಯ ವಲಯದಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಿದೆ.

ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ ಈ ಡೈರಿಯ ಪುಟಗಳನ್ನು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಆದರೆ ಈ ದಾಖಲೆಗಳ ಮೇಲೆ ಅಕ್ಷರಶಃ ಕಣ್ಣಾಡಿಸಿರುವುದಾಗಿ ಹೇಳಿರುವ 'ದಿ ಕ್ಯಾರವಾನ್‌' ರೋಚಕ ಮಾಹಿತಿಗಳ ಕಣಜವನ್ನೇ ತೆರದಿಟ್ಟಿದೆ. ಅದು ನ್ಯೂಸ್‌ ಪೆಗ್‌ ಆಚೆಗೆ ಇರುವ ಕುತೂಹಲಕಾರಿ ಮಾಹಿತಿ ಗುಚ್ಛ.

ಇದರಲ್ಲಿರುವ ಮಾಹಿತಿಗಳ ಪ್ರಕಾರ ಯಡಿಯೂರಪ್ಪ 2009ರ ಅವಧಿಯಲ್ಲಿ 1,800 ಕೋಟಿ ರೂಪಾಯಿಗಳನ್ನು ಬಿಜೆಪಿ ಕೇಂದ್ರ ನಾಯಕರಿಗೆ, ಕೇಂದ್ರ ಸಮಿತಿಗೆ, ನ್ಯಾಯಮೂರ್ತಿಗಳಿಗೆ ಮತ್ತು ವಕೀಲರಿಗೆ ಪಾವತಿ ಮಾಡಿದ್ದಾರೆ. ಈ ಆರೋಪಿತ ಡೈರಿ 2017ರಿಂದ ಆದಾಯ ತೆರಿಗೆ ಇಲಾಖೆ ಬಳಿಯಲ್ಲಿದ್ದು ಸ್ವತಃ ತಮ್ಮ ಕೈ ಬರಹದಲ್ಲಿ, ಕನ್ನಡದಲ್ಲಿ ಎಲ್ಲಾ ವಿವರಗಳನ್ನು ಯಡಿಯೂರಪ್ಪನವರೇ ದಾಖಲಿಸಿದ್ದಾರೆ.

ಕೇಂದ್ರ ಸಮಿತಿಗೆ 1,000 ಕೋಟಿ ರೂ.!

ಡೈರಿಯಲ್ಲಿರುವ ವಿವರಗಳ ಪ್ರಕಾರ 2009ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಲು ಬಿ.ಎಸ್‌. ಯಡಿಯೂರಪ್ಪ ಬಿಜೆಪಿ ಕೇಂದ್ರ ಸಮಿತಿಗೆ 1,000 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಹಣಕಾಸು ಸಚಿವ ಅರುಣ್‌ ಜೇಟ್ಲಿ, ಸಾರಿಗೆ ಸಚಿವ ನಿತಿನ್‌ ಗಡ್ಕರಿಗೆ ತಲಾ 150 ಕೋಟಿ ರೂಪಾಯಿ ನೀಡಿದ್ದರೆ, ಗೃಹ ಸಚಿವ ರಾಜನಾಥ್‌ ಸಿಂಗ್‌ರಿಗೆ 100 ಕೋಟಿ ರೂ., ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್‌ ಜೋಶಿಗೆ ತಲಾ 50 ಕೋಟಿ ರೂಪಾಯಿ ನೀಡಿರುವುದಾಗಿ ದಾಖಲೆಗಳು ಹೇಳುತ್ತಿವೆ.

ಇನ್ನು ಗಡ್ಕರಿ ಮಗನ ಮದುವೆಗೆ ವಿಶೇಷವಾಗಿ 10 ಕೋಟಿ ರೂಪಾಯಿಗಳನ್ನು ಬಿಎಸ್‌ವೈ ಕಳುಹಿಸಿಕೊಟ್ಟಿದ್ದರೆ, ನ್ಯಾಯಮೂರ್ತಿಗಳು ಮತ್ತು ವಕೀಲರಿಗೆ ಕ್ರಮವಾಗಿ 250 ಕೋಟಿ ರೂ ಮತ್ತು 50 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ ಎಂಬುದಾಗಿ ಡೈರಿ ಹೇಳುತ್ತಿದೆ.

“ಬಿ.ಎಸ್‌. ಯಡಿಯೂರಪ್ಪ ಆದ ನಾನು ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲು ನಾನು ನಾಯಕರಿಗೆ ನೀಡಿದ ಹಣ,” ಎಂಬ ವಿವರವನ್ನೂ ಅವರು ಇದೇ ಪುಟದಲ್ಲಿ ನೀಡಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಉನ್ನತ ನಾಯಕರಿಗೆ ಹಣ ನೀಡಿದ ವಿವರವನ್ನು ದಾಖಲಿಸಿ ಡೈರಿಯ ಪುಟಗಳು. 
ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಉನ್ನತ ನಾಯಕರಿಗೆ ಹಣ ನೀಡಿದ ವಿವರವನ್ನು ದಾಖಲಿಸಿ ಡೈರಿಯ ಪುಟಗಳು. 

ಬಿಜೆಪಿ ನಾಯಕರು, ನ್ಯಾಯಮೂರ್ತಿಗಳು ಮತ್ತು ವಕೀಲರಿಗೆ ನೀಡಿದ ಹಣವನ್ನು 2009ರ ಜನವರಿ 17ನೇ ತಾರೀಕಿನ ಪುಟದಲ್ಲಿ ಬರೆಯಲಾಗಿದ್ದರೆ, ಕೇಂದ್ರ ಸಮಿತಿಗೆ ನೀಡಿದ ಹಣವನ್ನು ಜನವರಿ 18ನೇ ತಾರೀಕಿನ ಪುಟದಲ್ಲಿ ಬರೆಯಲಾಗಿದೆ. ಈ ದಿನಗಳಂದು ಹಣ ನೀಡಲಾಯಿತೇ ಅಥವಾ ಈ ದಿನಗಳಂದು ಡೈರಿಯಲ್ಲಿ ದಾಖಲಿಸಲಾಯಿತೇ ಎಂಬುದು ತಿಳಿದು ಬಂದಿಲ್ಲ. ಅಂದ ಹಾಗೆ ಅವರು ಮೇ 2008ರಿಂದ ಜುಲೈ 2011ರ ವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.

ಆದಾಯ ತೆರಿಗೆ ಇಲಾಖೆಯಲ್ಲಿ ಧೂಳು ಹಿಡಿಯುತ್ತಿರುವ ಡೈರಿ:

‘ದಿ ಕ್ಯಾರವಾನ್‌’ಗೆ ಸಿಕ್ಕಿರುವ ಮಾಹಿತಿಗಳ ಪ್ರಕಾರ 2017ರಿಂದ ಈ ಡೈರಿ ಆದಾಯ ತೆರಿಗೆ ಇಲಾಖೆ ಬಳಿಯಲ್ಲಿದ್ದು ಇಲಾಖೆ ಮತ್ತು ಬಿಜೆಪಿ ಸರಕಾರ ಇದನ್ನು ಧೂಳು ಹಿಡಿಯಲು ಬಿಟ್ಟಿದೆ. ಒಬ್ಬರು ಹಿರಿಯ ಆದಾಯ ತೆರಿಗೆ ಇಲಾಖೆ ಅಧಿಕಾರಿ ಈ ಡೈರಿಯ ಛಾಯಾಪ್ರತಿಯನ್ನು ತೆಗೆದು ಲಕೋಟೆಯೊಂದರಲ್ಲಿ ಹಾಕಿ 2017ರ ಆಗಸ್ಟ್‌ ಹಣಕಾಸು ಸಚಿವ ಅರುಣ್‌ ಜೇಟ್ಲಿ ಮುಂದೆ ಇಟ್ಟಿದ್ದರು. ಇದರ ಜತೆಗೆ ಅವರು, “ಈ ಬಗ್ಗೆ ಜಾರಿ ನಿರ್ದೇಶನಾಲಯದಿಂದ ಹೆಚ್ಚಿನ ತನಿಖೆ ನಡೆಸಬೇಕೇ?” ಎಂಬ ಪ್ರಶ್ನೆ ಇಟ್ಟು ಪತ್ರವನ್ನೂ ಬರೆದಿದ್ದರು.

ಆದರೆ ತಾವೂ 150 ಕೋಟಿ ಸ್ವೀಕರಿಸಿದ್ದೇನೆ ಎನ್ನವ ಮಾಹಿತಿ ಡೈರಿಯಲ್ಲಿ ಉಲ್ಲೇಖವಾಗಿರುವುದರಿಂದ, ಮುಂದುವರಿಯದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಜೇಟ್ಲಿ ಸೂಚಿಸಿದರು ಎಂಬುದು ಈ ಹೊತ್ತಿನಲ್ಲಿ ಸಿಕ್ಕಿರುವ ಮಾಹಿತಿ. 2004ರಿಂದ 2013ರವರೆಗೆ ಅರುಣ್‌ ಜೇಟ್ಲಿ ಕರ್ನಾಟಕ ಬಿಜೆಪಿಯ ಉಸ್ತುವಾರಿಯಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಈ ಸಂಬಂಧ ಕ್ಯಾರವಾನ್‌ ಯಡಿಯೂರಪ್ಪ, ಜೇಟ್ಲಿ, ಗಡ್ಕರಿ, ಸಿಂಗ್‌, ಅಡ್ವಾಣಿ ಮತ್ತು ಜೋಷಿಗೆ ಪ್ರಶ್ನೆಗಳನ್ನು ಕೇಳಿದ್ದು ಈ ವರದಿ ಬರೆಯುವವರೆಗೂ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಶಾಸಕರಿಗೆ ಕೋಟಿ ಕೋಟಿ ಹಣ:

ಕೇಂದ್ರ ನಾಯಕರಿಗೆ ಹಣ ರವಾನಿಸಿರುವುದರ ಜತೆಗೆ ಶಾಸಕರಿಗೆ ಹಣ ನೀಡಿರುವುದರ ವಿವರಗಳೂ ಇದರಲ್ಲಿವೆ. 2008ರ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬಹುಮತಕ್ಕೆ ಮೂರು ಸ್ಥಾನಗಳ ಕೊರತೆ ಅನುಭವಿಸುತ್ತಿತ್ತು. ಈ ಸಂದರ್ಭದಲ್ಲಿ ಗೆದ್ದಿದ್ದ 6 ಜನರಲ್ಲಿ 5 ಜನ ಪಕ್ಷೇತರ ಶಾಸಕರು ಯಡಿಯೂರಪ್ಪ ಬೆನ್ನಿಗೆ ನಿಂತಿದ್ದರು. ಮುಂದೆ ಇವರನ್ನು ಸಚಿವರನ್ನಾಗಿಯೂ ಮಾಡಲಾಗಿತ್ತು. ಹಾಗೆ ನಿಂತವರಿಗೆ ನೀಡಿದ ಹಣದ ವಿವರಗಳು ಡೈರಿಯಲ್ಲಿವೆ.

“ನಾನು ಸಿಎಂ ಆಗಲು ನೇರ ಕಾರಣ ಗಾಲಿ ಜನಾರ್ದನ ರೆಡ್ಡಿ,” ಎಂಬುದಾಗಿ ಬರೆದು ಯಡಿಯೂರಪ್ಪ ಅದರ ಕೆಳಗೆ ಸಹಿ ಹಾಕಿದ್ದಾರೆ. ಅದರಡಿಯಲ್ಲಿ ಶಾಸಕರಿಗೆ ಜನಾರ್ದನ ರೆಡ್ಡಿ ನೀಡಿರುವ ಹಣದ ವಿವರಗಳಿವೆ. ನರೇಂದ್ರ ಸ್ವಾಮಿ, ಡಿ. ಸುಧಾಕರ್‌, ವೆಂಕಟರಮಣಪ್ಪ, ನಾರಾಯಣ ಸ್ವಾಮಿ, ಶಿವನಗೌಡ ನಾಯಕ್‌ಗೆ ತಲಾ 20 ಕೋಟಿ ರೂ. ಹಾಗೂ ಗೂಳಿಹಟ್ಟಿ ಶೇಖರ್‌ಗೆ 10 ಕೋಟಿ ರೂ ನೀಡಿರುವುದಾಗಿ ಡೈರಿ ಹೇಳುತ್ತದೆ. ಜತೆಗೆ ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿದ್ದ ಆನಂದ್‌ ಅಸ್ನೋಟಿಕರ್‌ ಮತ್ತು ಜೆಡಿಎಸ್‌ನಿಂದ ಆಪರೇಷನ್‌ಗೆ ಒಳಗಾಗಿದ್ದ ಬಾಲಚಂದ್ರ ಜಾರಕಿಹೊಳಿಗೆ ತಲಾ 20 ಕೋಟಿ ರೂ. ನೀಡಿರುವ ಉಲ್ಲೇಖ ಡೈರಿಯಲ್ಲಿದೆ. ಈ ಎಂಟೂ ಜನರಿಗೆ ಪ್ರಶ್ನೆಗಳನ್ನು ಕ್ಯಾರವಾನ್‌ ಕಳುಹಿಸಿಕೊಟ್ಟಿದ್ದು ಇದಕ್ಕೂ ಉತ್ತರ ಬಂದಿಲ್ಲ.

2,690 ಕೋಟಿ ರೂ. ಸಂದಾಯ!

1,800 ಕೋಟಿ ರೂಪಾಯಿಗಳನ್ನು ಯಡಿಯೂರಪ್ಪ ಬೇರೆ ಬೇರೆಯವರಿಗೆ ನೀಡಿದ್ದರೆ, ಇದೇ ಅವಧಿಯಲ್ಲಿ 26 ಜನರಿಂದ 2,690 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ ಎಂಬುದನ್ನು ಇದೇ ಡೈರಿ ಬಿಚ್ಚಿಟ್ಟಿದೆ. 5 ಕೋಟಿಯಿಂದ ಆರಂಭಿಸಿ 500 ಕೋಟಿ ರೂಪಾಯಿವರೆಗೆ ಯಡಿಯೂರಪ್ಪನವರಿಗೆ ಹಣ ಸಂದಾಯವಾಗಿದೆ.

ಸಂಗ್ರಹವಾದ ಹಣದ ವಿವರಗಳನ್ನು ಬರೆದಿಟ್ಟುಕೊಂಡಿದ್ದ ಡೈರಿಯ ಪುಟಗಳು. 
ಸಂಗ್ರಹವಾದ ಹಣದ ವಿವರಗಳನ್ನು ಬರೆದಿಟ್ಟುಕೊಂಡಿದ್ದ ಡೈರಿಯ ಪುಟಗಳು. 

“ನನಗೆ ಸಂದಾಯವಾದ ಹಣ,” ಎಂದು ಅವರು ಡೈರಿಯಲ್ಲಿ ಬರೆದುಕೊಂಡಿದ್ದು, ಪಿಇಎಸ್‌ನ ದೊರೈಸ್ವಾಮಿ 100 ಕೋಟಿ ರೂ., ಪ್ರೇರಣಾ ಟ್ರಸ್ಟ್‌ 500 ಕೋಟಿ ರೂ., ಸಿ.ಎಂ. ಉದಾಸಿ 500 ಕೋಟಿ ರೂ., ಮುರುಗೇಶ್‌ ನಿರಾಣಿ, ಬಸವರಾಜ್‌ ಬೊಮ್ಮಾಯಿ, ಗುರುಪಾದಪ್ಪ ನಾಗಪಾರಪಳ್ಳಿ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಲಾ 150 ಕೋಟಿ ರೂ. ಕೃಷ್ಣಯ್ಯ ಶೆಟ್ಟಿ 200 ಕೋಟಿ ರೂ., ಆರ್‌. ಅಶೋಕ್‌ 300 ಕೋಟಿ ರೂ., ಲೆಹರ್‌ ಸಿಂಗ್‌ 250 ಕೋಟಿ ರೂ., ವೈ ನ್ಯಾಗರ್‌ ಬಸವರಾಜಪ್ಪ 100 ಕೋಟಿ ರೂ. ನೀಡಿದ ಪಟ್ಟಿಯನ್ನು ತಮ್ಮ ಸ್ವಂತ ಕೈಬರಹದಲ್ಲಿ ಯಡಿಯೂರಪ್ಪ ಪುಸ್ತಕದ ಮೇಲೆ ಕೆತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ದಿ ಕ್ಯಾರವಾನ್‌ನ ಕರೆಯನ್ನು ಸ್ವೀಕರಿಸಿಲ್ಲ. ಕೆಲವರು ಈ ರೀತಿ ಹಣ ನೀಡೇ ಇಲ್ಲ ಎಂದು ಸರಸಗಟಾಗಿ ತಳ್ಳಿ ಹಾಕಿದ್ದಾರೆ.

ಡಿ.ಕೆ. ಶಿವಕುಮಾರ್‌ ಮನೆಯಲ್ಲಿದ್ದ ಯಡಿಯೂರಪ್ಪ ಡೈರಿ:

ವಿಚಿತ್ರವೆಂದರೆ, ಈ ಡೈರಿ ಸಿಕ್ಕಿದ್ದು ಡಿ.ಕೆ. ಶಿವಕುಮಾರ್‌ ಮನೆಯಲ್ಲಿ. 2017ರ ಆಗಸ್ಟ್‌ನಲ್ಲಿ ಶಿವಕುಮಾರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಈ ಡೈರಿ ಪತ್ತೆಯಾಗಿತ್ತು. ಮೂಲಗಳ ಮೂಲಕ ಕ್ಯಾರವಾನ್‌ ಈ ಮಾಹಿತಿಯನ್ನು ಖಚಿತಪಡಿಸಿಕೊಂಡಿದೆ. ಡಿ.ಕೆ. ಶಿವಕುಮಾರ್ ಕೂಡ ಈ ಡೈರಿಯನ್ನು ತಮ್ಮ ಮನೆಯಿಂದಲೇ ವಶಕ್ಕೆ ಪಡೆಯಲಾಗಿತ್ತು ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ. ಮತ್ತು ಕೈ ಬರಹದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ಇದು 100 ಪರ್ಸೆಂಟ್‌ ಅವರದ್ದೇ (ಯಡಿಯೂರಪ್ಪ). ಇದರಲ್ಲಿ ಯಾವ ಸಂಶಯವೂ ಇಲ್ಲ," ಎಂದಿದ್ದಾರೆ.

ಇನ್ನೂ ಮುಂದುವರಿಯುವುದಾದರೆ ಅರುಣ್‌ ಜೇಟ್ಲಿ ಮುಂದೆ ದಾಖಲೆಗಳನ್ನು ಇಟ್ಟಿದ್ದ ಐಟಿ ಅಧಿಕಾರಿ ಯಡಿಯೂರಪ್ಪ ಸಹಿ ಹಾಕಿದ ಇನ್ನೆರಡು ಪತ್ರಗಳನ್ನೂ ಜತೆಗಿಟ್ಟಿದ್ದರು. ಇದರಲ್ಲಿ ಒಂದು ಪತ್ರವನ್ನು 2017ರ ಜನವರಿಯಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಯ ಮುಖ್ಯಸ್ಥ ಸುಶೀಲ್‌ ಚಂದ್ರರಿಗೆ ಬರೆದ ಪತ್ರವಾಗಿದೆ. ಇನ್ನೊಂದು 2013ರ ಚುನಾವಣೆ ವೇಳೆ ಅವರು ಸಹಿ ಹಾಕಿದ ಅಫಿಡವಿಟ್‌ ಒಳಗೊಂಡಿದೆ. ಯಡಿಯೂರಪ್ಪ ಅವರ ಕೈ ಬರಹವನ್ನು ಹೋಲಿಕೆ ಮಾಡಲು ಅವರು ಈ ಪತ್ರಗಳನ್ನು ಜತೆಗಿಟ್ಟಿದ್ದರು.

ಹೀಗಿದ್ದೂ ಈ ವಿಚಾರದಲ್ಲಿ ತನಿಖೆ ನಡೆಸಲು ಬಿಜೆಪಿ ಮುಂದಡಿ ಇಟ್ಟ ಯಾವ ಸಾಕ್ಷ್ಯಗಳೂ ಇಲ್ಲ. ಈ ವಿಚಾರವಾಗಿ 'ಸಿಬಿಡಿಟಿ'ಯನ್ನೂ ಕ್ಯಾರವಾನ್‌ ಸಂಪರ್ಕಿಸಿದ್ದು ಅಲ್ಲಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಬಿಎಸ್‌ವೈ ಬಂಡಾಯದ ಪರಿಣಾಮ:

ಐಟಿ ಅಧಿಕಾರಿ ಬರೆದ ನೋಟ್‌ ಪ್ರಕಾರ, ಬಿಜೆಪಿಯಿಂದ ಬಂಡಾಯವೆದ್ದು ಯಡಿಯೂರಪ್ಪ ಕೆಜೆಪಿ ಸೇರುವ ಸಂದರ್ಭದಲ್ಲಿ ಈ ಡೈರಿ ಬರೆದಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ಬಿಜೆಪಿ ನಾಯಕರಾದ ಎನ್‌. ಅನಂತ್‌ ಕುಮಾರ್, ಕೆ.ಎಸ್‌. ಈಶ್ವರಪ್ಪ ಮತ್ತು ಆರ್‌. ಅಶೋಕ್‌ ವಿರುದ್ಧ ಯಡಿಯೂರಪ್ಪ ಮುನಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್‌ ಈಶ್ವರಪ್ಪ ಅವರ ಆಪ್ತ ಸಹಾಯಕನನ್ನು ಕಿಡ್ನಾಪ್‌ ಮಾಡಲು ಯತ್ನಿಸಿ ಸುದ್ದಿಯಾಗಿದ್ದರು.

ಈ ಸಂದರ್ಭದಲ್ಲಿ ಯಡಿಯೂರಪ್ಪ ಆಪ್ತನಿಂದ ಈ ಡೈರಿ ಸಿಕ್ಕಿತ್ತು, ಅಲ್ಲಿಂದ ಅದು ಅನಂತ್‌ ಕುಮಾರ್‌ ಕೈ ತಲುಪಿತ್ತು. ಈ ಸಂದರ್ಭದಲ್ಲಿ ಇದರ ಒಂದು ಕಾಪಿಯನ್ನು ಡಿ.ಕೆ. ಶಿವಕುಮಾರ್‌ ಮತ್ತು ಇತರ ನಾಯಕರಿಗೆ ತಲುಪಿಸಲಾಯಿತು. ಸೂಕ್ತ ವೇದಿಕೆಯಲ್ಲಿ ಈ ವಿಚಾರವನ್ನು ಎತ್ತುವಂತೆ ಕೋರಿ ಅವುಗಳನ್ನು ತಲುಪಿಸಲಾಗಿತ್ತು.

ಯಡಿಯೂರಪ್ಪ ಜತೆ ಶಿವಕುಮಾರ್ ಸಂಬಂಧ ಚೆನ್ನಾಗಿದ್ದರಿಂದ ಅವರು ಇದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಿಲ್ಲ ಎಂಬ ವಿವರಗಳನ್ನು ಹಿರಿಯ ಐಟಿ ಅಧಿಕಾರಿ ತಮ್ಮ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

"ಈ ಡೈರಿ ಸಿಕ್ಕಿದ ಸಂಬಂಧ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಲಾಗಿದೆ, ಆದರೆ ಕಾನೂನು ಪ್ರಕಾರ ಡೈರಿಯಲ್ಲಿ ಹೆಸರಿದ್ದವರ ಹೇಳಿಕೆಗಳನ್ನು ಪಡೆದುಕೊಳ್ಳಲು ಅಥವಾ ನೋಟಿಸ್‌ ನೀಡುವ ಮುಂದಿನ ಕ್ರಮಗಳನ್ನು ತೆಗೆದುಕೊಂಡಿಲ್ಲ," ಎಂಬುದಾಗಿ ಹಿರಿಯ ಅಧಿಕಾರಿ ಅರುಣ್‌ ಜೇಟ್ಲಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಐಟಿ ಇಲಾಖೆ, "ಬಿಜೆಪಿ ನಾಯಕರ ಹಿತಾಸಕ್ತಿಯನ್ನು ಕಾಪಾಡಿದೆ. ಈ ವಿಷಯ ಕರ್ನಾಟಕ ಮತ್ತು ದೆಹಲಿಯ ಬಿಜೆಪಿ ನಾಯಕರಿಗೆ ಸಂಬಂಧಿಸಿದ್ದಾದ್ದರಿಂದ ಇಲ್ಲಿಯವರೆಗೆ ಯಾವುದೇ ಹೆಚ್ಚಿನ ತನಿಖೆ ನಡೆಸಿಲ್ಲ."

ಹೀಗೊಂದು ಪತ್ರವನ್ನು ಜೇಟ್ಲಿ ಮುಂದಿಟ್ಟ ಆ ಅಧಿಕಾರಿ, ಡೈರಿಯಲ್ಲಿರುವ ವಿಚಾರಗಳ ಸಂಬಂಧ ಜಾರಿ ನಿರ್ದೇಶನಾಲಯ ಅಥವಾ ಸೂಕ್ತ ಇಲಾಖೆಯಿಂದ ಹೆಚ್ಚಿನ ತನಿಖೆಯಾಗಬೇಕಾದ ಅಗತ್ಯವನ್ನು ವಿವರಿಸಿದ್ದರು. ಜತೆಗೆ ಇಲಾಖೆ ಕಾನೂನು ಅಭಿಪ್ರಾಯ ಕೋರಿರುವುದನ್ನೂ ಪತ್ರದಲ್ಲಿ ಉಲ್ಲೇಖಿಸಿದ್ದರು.

"ಇದೀಗ ಮೂಲ ಡೈರಿಯನ್ನು ಸಂಗ್ರಹಿಸಬೇಕೇ ಮತ್ತು ಈ ಡೈರಿಯನ್ನು ತನಿಖೆಯ ಭಾಗವಾಗಿಸಲು ಜಾರಿ ನಿರ್ದೇಶನಾಲಯ ಅಥವಾ ಈಗಾಗಲೇ ಡಿ.ಕೆ. ಶಿವಕುಮಾರ್‌ ಬಗ್ಗೆ ಇಡಿ ನಡೆಸುತ್ತಿರುವ ತನಿಖೆಯ ಜತೆ ಬೇರೆ ಯಾವುದಾದರೂ ತನಿಖಾ ಸಂಸ್ಥೆಯಿಂದ ಸುಪ್ರಿಂ ಕೋರ್ಟ್‌ಗೆ ಹೆಚ್ಚಿನ ವಿಚಾರಣೆಗೆ ಕೋರಿ ಅರ್ಜಿ ಸಲ್ಲಿಸಬೇಕೇ ಎಂಬುದನ್ನು ಪರಿಶೀಲಿಸಬೇಕಿದೆ. ಆದ್ದರಿಂದ ಡೈರಿಯ ವಿಷಯಗಳನ್ನು ತನಿಖೆಯ ವ್ಯಾಪ್ತಿಗೆ ತರಲು ಈ ವಿಷಯದಲ್ಲಿ ಕಾನೂನು ಅಭಿಪ್ರಾಯವನ್ನು ಕೇಳಲಾಗಿದೆ," ಎಂದಿದ್ದರು.

ಡಿಕೆ ಶಿವಕುಮಾರ್‌ಗೆ ಬಿಜೆಪಿ ಬ್ಲ್ಯಾಕ್‌ಮೇಲ್:

ಇಷ್ಟೇ ಅಲ್ಲದೆ ದಾಳಿ ವಿಚಾರವನ್ನು ಹಿಡಿದುಕೊಂಡು ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರದಿಂದ ಒಡೆದು ಹೊರ ಬಂದು ಬಿಜೆಪಿ ಸೇರುವಂತೆ ಡಿಕೆ ಶಿವಕುಮಾರ್‌ಗೆ ಬಿಜೆಪಿ ನಾಯಕರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎಂಬುದನ್ನೂ ಅಧಿಕಾರಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

"ಸಂಸದೀಯ ಚುನಾವಣೆ ಸಮೀಪಿಸುತ್ತಿರುವುದರಿಂದ ಈಗ ಬಿಜೆಪಿಯ ರಾಷ್ಟ್ರ ನಾಯಕರು ಐಟಿ ಅಧಿಕಾರಿಗಳ ಮೂಲಕ ಮೈತ್ರಿ ಸರಕಾರವನ್ನು ಮುರಿದು ಬಿಜೆಪಿ ಸೇರುವಂತೆ ಸಲಹೆ ನೀಡುತ್ತಿದ್ದಾರೆ," ಎಂಬ ಸಾಲುಗಳು ಅಧಿಕಾರಿಯ ಪತ್ರದಲ್ಲಿದೆ.

ಕೇರಳದಲ್ಲಿ ಬಿಎಸ್‌ವೈ-ಶೋಭಾ ಕಲ್ಯಾಣ:

ಈ ಎಲ್ಲಾ ಗಂಭೀರ ವಿಚಾರಗಳ ನಡುವೆ ಬಿಎಸ್‌ ಯಡಿಯೂರಪ್ಪ ಅವರ ಖಾಸಗಿ ಸಮಾಚಾರಗಳೂ ಡೈರಿಯ ಪುಟಗಳಲ್ಲಿ ದಾಖಲಾಗಿವೆ.

ಡೈರಿಯ ಪುಟವೊಂದರಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪ ಮದುವೆಯ ಬಗ್ಗೆಯೂ ಉಲ್ಲೇಖವಿದ್ದು, “ನನ್ನ ಧರ್ಮಪತ್ನಿ ಮೈತ್ರಿದೇವಿ ಕಾಲವಾದ ನಂತರ ನನಗೆ ಒಂಟಿತನ ಭಯಂಕರ ಕಾಡಲು ಪ್ರಾರಂಭವಾಯಿತು. ಆದುದರಿಂದ ಶೋಭಾ ಕರಂದ್ಲಾಜೆಯನ್ನು ಕೇರಳದ ಚೋಟಣಕೆರೆ (ಚೊಟ್ಟಣಿಕ್ಕಾರ) ಭಗವತಿ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಲಗ್ನ ಮಾಡಿಕೊಂಡು ನನ್ನ ಪತ್ನಿಯಾಗಿ ಕಾಯ-ವಾಚಾ-ಮನಸಾ ಸ್ವೀಕರಿಸುತ್ತೇನೆ. ಇದಕ್ಕೆ ಯಡಿಯೂರು ಸಿದ್ಧಲಿಂಗನೇ ಸಾಕ್ಷಿ," ಎಂದು ಬಿಎಸ್‌ವೈ ಬರೆದಿದ್ದಾರೆ.

ಯಡಿಯೂರಪ್ಪ ಬರೆದಿದ್ದಾರೆ ಎನ್ನಲಾದ ಡೈರಿಯ ಪುಟಗಳು ಖಾಸಗಿ ಸಮಾಚಾರವನ್ನೂ ಮುಂದಿಟ್ಟಿವೆ. 
ಯಡಿಯೂರಪ್ಪ ಬರೆದಿದ್ದಾರೆ ಎನ್ನಲಾದ ಡೈರಿಯ ಪುಟಗಳು ಖಾಸಗಿ ಸಮಾಚಾರವನ್ನೂ ಮುಂದಿಟ್ಟಿವೆ. 

ಹಿಂದೊಮ್ಮೆ ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಶೋಭಾ-ಯಡಿಯೂರಪ್ಪ ಕೇರಳದಲ್ಲಿ ಗೌಪ್ಯವಾಗಿ ಮದುವೆಯಾಗಿರುವುದಾಗಿ ಹೇಳಿದ್ದರು. ಈ ಸಂದರ್ಭ ಅವರ ಮೇಲೆ ಹಲ್ಲೆ ನಡೆದಿತ್ತು. ಇದು ಅಂದು ರಾಜ್ಯದ ಮಾಧ್ಯಮಗಳಲ್ಲಿ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. ಆದರೆ ಈ ಸುದ್ದಿಯನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ; ಹಾಗಂತ ನಿರಾಕರಿಸಿಯೂ ಇಲ್ಲ.

ಈ ಸಂಬಂಧ ವಿವರ ಕೇಳಲು ಪದ್ಮನಾಭ ಪ್ರಸನ್ನ ಕ್ಯಾರವಾನ್‌ಗೆ ಲಭ್ಯರಾಗಿಲ್ಲ. ಫೋನ್‌ಗೆ ಸಿಕ್ಕ ಕರಂದ್ಲಾಜೆ, “ಕೆಲವು ಹುಚ್ಚರು ಮಾತ್ರ ಈ ರೀತಿಯ ಡೈರಿ ಬರೆಯಲು ಸಾಧ್ಯ,” ಎಂದು ಫೋನಿಟ್ಟಿದ್ದಾರೆ. ಮುಂದಿನ ಪ್ರಶ್ನೆಗಳಿಗೆ ಅವರು ಉತ್ತರಿಸುವ ಗೋಜಿಗೆ ಹೋಗಿಲ್ಲ.

ಇವೆಲ್ಲದರ ನಡುವೆ ತುಂಬಾ ವಿಚಿತ್ರವಾಗಿ ಕಾಣುವುದು ಐಆರ್‌ಎಸ್‌ ಅಧಿಕಾರಿ ಸುಶೀಲ್‌ ಚಂದ್ರ.

ಸಿಬಿಡಿಟಿ ಮುಖ್ಯಸ್ಥರಾಗಿದ್ದು ಶಿವಕುಮಾರ್‌ ಮನೆ ಮೇಲಿನ ದಾಳಿಯ ಮುಂದಾಳತ್ವ ವಹಿಸಿದ್ದ ಇದೇ ಸುಶೀಲ್‌ ಚಂದ್ರ ಸದ್ಯ ಭಾರತದ ಚುನಾವಣಾ ಆಯುಕ್ತರಾಗಿದ್ದಾರೆ. ಶಿವಕುಮಾರ್‌ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಯಡಿಯೂರಪ್ಪ ಪತ್ರ ಬರೆದಿದ್ದೂ ಇದೇ ಸುಶೀಲ್‌ ಚಂದ್ರ ಅವರಿಗೆ ಎಂಬುದು ವಿಶೇಷ. ಅಂದುಕೊಂಡಂತೆ ಆಗಿದ್ದರೆ ಅವರು ಇದೇ ವರ್ಷದ ಮೇನಲ್ಲಿ ನಿವೃತ್ತರಾಗಬೇಕಿತ್ತು. ಆದರೆ ಫೆಬ್ರವರಿಯಲ್ಲಿ ಅವರಿಗೆ ಭಡ್ತಿ ನೀಡಿ ಮೋದಿ ಸರಕಾರ ಚುನಾವಣಾ ಆಯೋಗಕ್ಕೆ ಕರೆಸಿಕೊಂಡಿತ್ತು. ಹೀಗೆ ಐಆರ್‌ಎಸ್‌ ಅಧಿಕಾರಿಯೊಬ್ಬರು ಚುನಾವಣಾ ಆಯೋಗಕ್ಕೆ ನೇಮಕಗೊಂಡ ಎರಡನೇ ಅಪರೂಪದ ನಿದರ್ಶನ ಇದು!

ಮೂಲ ವರದಿ: ದಿ ಕ್ಯಾರವಾನ್.