samachara
www.samachara.com
ಬಿಜೆಪಿ ಭದ್ರಕೋಟೆಯಲ್ಲಿ ಹಾಲಿಗಳೇ ಸಮಸ್ಯೆ; ಮೋದಿ ಮೇನಿಯಾ & ಕೇಸರಿ ಪಕ್ಷದ ಭವಿಷ್ಯ
ರಾಜ್ಯ

ಬಿಜೆಪಿ ಭದ್ರಕೋಟೆಯಲ್ಲಿ ಹಾಲಿಗಳೇ ಸಮಸ್ಯೆ; ಮೋದಿ ಮೇನಿಯಾ & ಕೇಸರಿ ಪಕ್ಷದ ಭವಿಷ್ಯ

“ಒಂದೋ ಕೇಸರಿಯನ್ನು ಬೌದ್ಧಿವಾಗಿ ಬೆಳೆಸಿ, ಇಲ್ಲ ಬುದ್ದಿಜೀವಿಗಳನ್ನು ಕೇಸರಿಕರಣ ಮಾಡಿ,’’ ಎಂದವರು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್. ಇದು ಇವತ್ತಿನ ಬಿಜೆಪಿ ಆಲೋಚನೆ ಕೂಡ.

ಅದು ಜುಲೈ 7, 2014; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಅದೇ ವರ್ಷ ಲೋಕಸಭೆಗೆ ಆಯ್ಕೆಯಾದ ಶೋಭಾ ಕರಂದ್ಲಾಜೆ ಸಂಸತ್‌ನಲ್ಲಿ ತಮ್ಮ ಮೊದಲ ಪ್ರಶ್ನೆಯನ್ನು ಕೇಳಿದ ದಿನ.

‘ಅಂಚೆ ಇಲಾಖೆಯಲ್ಲಿ ಪೋಸ್ಟಲ್‌ ಆರ್ಡರ್‌ಗಳ ಬಟಾವಡೆ ಎಷ್ಟಾಗುತ್ತಿದೆ?’ ಎಂಬುದು ಶೋಭಾ ಕೇಳಿದ ಪ್ರಶ್ನೆಯಾಗಿತ್ತು.

ಅಲ್ಲಿಂದ ಇಲ್ಲೀವರೆಗೆ ಶೋಭಾ ಕರಂದ್ಲಾಜೆ ಲೋಕಸಭೆಯಲ್ಲಿ 700ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಾರೆ. ಇವುಗಳಿಗೆ ಕೆಲವಕ್ಕೆ ಸಂಸತ್‌ನಲ್ಲಿಯೇ ಉತ್ತರ ಸಿಕ್ಕಿದೆ. ಇನ್ನು ಕೆಲವಕ್ಕೆ ಲಿಖಿತ ರೂಪದಲ್ಲಿ ಉತ್ತರ ಸಿಕ್ಕಿದೆ.

ಓರ್ವ ಸಂಸದೆಯಾಗಿ ಶೋಭಾ ಅವರಿಗೆ ಇರುವ ಆಸಕ್ತಿಗಳೇನು ಎಂಬುದನ್ನು ಈ ಪ್ರಶ್ನೆಗಳೇ ತಿಳಿಸುತ್ತವೆ. ಡಿಜಿಟಲ್ ಇಂಡಿಯಾದಿಂದ ಆರಂಭವಾಗಿ ರಾಷ್ಟ್ರೀಯ ಹೆದ್ದಾರಿ ಟೋಲ್‌ವರೆಗೆ, ಮೆಟ್ರೋ ರೈಲಿನಿಂದ ಹಿಡಿದು ಬಿಜೆಪಿ ಕಾರ್ಯಕರ್ತರ ಕೊಲೆಗಳವರೆಗೆ ಶೋಭಾ ಅವರ ಪ್ರಶ್ನೆಗಳು ಲೋಕಸಭೆಯಲ್ಲಿ ಪ್ರತಿಧ್ವನಿಸಿವೆ.

ವಿಶೇಷ ಅಂದರೆ, ಅವರದ್ದೇ ಕ್ಷೇತ್ರದಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಮೀನುಗಾರರ ಕುರಿತು, ಅವರ ಸಮಸ್ಯೆಗಳ ಕುರಿತು ಶೋಭಾ ಕೇಳಿದ್ದು ಬೆರಳೆಣಿಕೆಯ ಪ್ರಶ್ನೆಗಳು. 2014ರ ಆಗಸ್ಟ್ 5ರಂದು ‘ಮೀನುಗಾರರ ಬೋಟುಗಳಿಗೆ ಸೌರಶಕ್ತಿ ಅಳವಡಿಸುವ ಯೋಜನೆ ಏನಾದರೂ ಇದೆಯಾ?’ ಎಂಬ ಪ್ರಶ್ನೆಯನ್ನು ಶೋಭಾ ಮುಂದಿಟ್ಟಿದ್ದರು. ಜತೆಗೆ, ಮೀನುಗಾರರಿಗೆ ಇರುವ ಕೇಂದ್ರ ಸರಕಾರದ ಯೋಜನೆಗಳ ಮಾಹಿತಿ ಪಡೆದುಕೊಂಡಿದ್ದರು. ಇದು ಬಿಟ್ಟರೆ ಅವರಿಗೆ ಮೀನುಗಾರರು ನೆನಪಾಗಿದ್ದು ಕೊನೆಯ ಸಂಸತ್‌ ಅಧಿವೇಶನದಲ್ಲಿ. ಅಷ್ಟರ ಮಟ್ಟಿಗೆ ಶೋಭಾ ಸ್ಥಳೀಯ ವಿಚಾರಗಳಿಗಿಂತ ಸಮಾಜದ ನಾನಾ ವಿಚಾರಗಳ ಬಗೆಗೆ ಆಸಕ್ತಿ ತೋರಿಸಿದ್ದೇ ಹೆಚ್ಚು.

ಬಹುಶಃ ಇದೇ ಕಾರಣಕ್ಕೋ ಏನೋ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಅವರ ಮರು ಸ್ಪರ್ಧೆ ಬಗ್ಗೆ ಗೊಂದಲದ ವಾತಾವರಣವೊಂದು ನಿರ್ಮಾಣವಾಗಿದೆ. ಹಾಗಂತ ಇದಕ್ಕೆ ಶೋಭಾ ಅವರ ಆಡಳಿತಾತ್ಮಕ ನಿರ್ಧಾರಗಳು ಮಾತ್ರವೇ ಕಾರಣ ಅನ್ನುವ ಹಾಗೂ ಇಲ್ಲ.

ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ದೊಡ್ಡದಿದೆ. ಯಾರೇ ಬಿಜೆಪಿಯಿಂದ ನಿಂತರೂ ಇಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿರುವುದು ಕೂಡ ಆಕಾಂಕ್ಷಿಗಳ ಪಟ್ಟಿ ಬೆಳೆಯಲು ಕಾರಣ. ಪಕ್ಷ ಬೆಳೆದಿದೆ, ನಾಯಕರ ಪಟ್ಟಿಯೂ ಬೆಳೆಯುತ್ತಿದೆ ಆದರೆ ಸೂಕ್ತ ಸ್ಥಾನಮಾನಗಳ ಸಂಖ್ಯೆ ಹೆಚ್ಚಿಲ್ಲ. ಇದು ಹಿಂದೆ ಕಾಂಗ್ರೆಸ್‌ ಪಕ್ಷ ಪ್ರಬಲವಾಗಿದ್ದ ದಿನಗಳಲ್ಲಿ ಸೃಷ್ಟಿಯಾದ ಬಿಕ್ಕಟ್ಟಿನ ಮುಂದುವರಿದ ರೂಪ. ಸದ್ಯ ಕರಾವಳಿ ಬಿಜೆಪಿಯಲ್ಲಿ ಕಾಣಸಿಗುತ್ತಿದೆ.

ಮೋದಿ ಅಷ್ಟೆ ಮುಖ್ಯ:

ಬಿಜೆಪಿ ಸಾಮಾಜಿಕ ಜಾಲತಾಣಗಳನ್ನು ಕುಂದಾಪುರದಲ್ಲಿ ನಿರ್ವಹಿಸುತ್ತಿರುವ ವಿನೋದ್ ರಾಜ್. 
ಬಿಜೆಪಿ ಸಾಮಾಜಿಕ ಜಾಲತಾಣಗಳನ್ನು ಕುಂದಾಪುರದಲ್ಲಿ ನಿರ್ವಹಿಸುತ್ತಿರುವ ವಿನೋದ್ ರಾಜ್. 
/ಸಮಾಚಾರ. 

ಮೋದಿ ಖುರ್ತಾ ಎಂದೇ ಜನಪ್ರಿಯವಾದ ಖಾದಿ ಅಂಗಿಯೊಂದನ್ನು, ತಿಳಿ ನೀಲಿ ಬಣ್ಣದ ಜೀನ್ಸ್‌ ಹಾಗೂ ಸಾಮಾನ್ಯ ಚಪ್ಪಲಿಯೊಂದನ್ನು ಹಾಕಿಕೊಂಡಿದ್ದ ವಿನೋದ್ ರಾಜ್ ಕುಂದಾಪುರದ ತಾಲೂಕು ಬಿಜೆಪಿ ಕಚೇರಿಗೆ ಕಾಲಿಡುವ ಹೊತ್ತಿಗೆ ಮಧ್ಯಾಹ್ನ ಸಮೀಪಿಸಿತ್ತು. “ನಮ್ಮ ಸೋಷಿಯಲ್ ನೆಟ್ವರ್ಕ್‌ ನೋಡಿಕೊಳ್ಳುವವರು ಇವರು,’’ ಎಂದು ಕಚೇರಿಯಲ್ಲಿದ್ದ ಪದಾಧಿಕಾರಿಗಳು ವಿನೋದ್‌ ಕಡೆ ಕೈ ತೋರಿಸಿದರು.

ಕೈಲೊಂದು ಒಡೆದು ಹೋಗಿದ್ದ ಆಂಡ್ರಾಯ್ಡ್‌ ಮೊಬೈಲ್‌ ಹಿಡಿದುಕೊಂಡಿದ್ದ ವಿನೋದ್ ರಾಜ್‌ ಉಡುಪಿ ಬಿಜೆಪಿ ಘಟಕದ ಸಾಮಾಜಿಕ ಜಾಲತಾಣಗಳನ್ನು ನಿರ್ವಹಣೆ ಮಾಡುವ ‘ಸ್ವಯಂ ಸೇವಕ’.

“ನಾನು ಪರಿವಾರದ ಕಡೆಯಿಂದ ಚುನಾವಣೆಗಾಗಿ ನೇಮಕವಾಗಿದ್ದೀನಿ. ಓದಿದ್ದು ಡಿಪ್ಲೊಮೋ. ಬೇರೆ ಕೆಲಸ ಮಾಡುತ್ತೇನೆ. ಚುನಾವಣೆ ಇರುವುದರಿಂದ ಸದ್ಯ ಈ ಹೊಣೆಗಾರಿಕೆ ಹೊತ್ತುಕೊಂಡಿದ್ದೀನಿ. ಸುಮಾರು 16 ವರ್ಷದಿಂದ ಬಿಜೆಪಿಗೆ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುತ್ತಿದ್ದೀನಿ,’’ ಎಂದ ವಿನೋದ್ ರಾಜ್ ವಯಸ್ಸು 30ರ ಆಸುಪಾಸಿನಲ್ಲಿದೆ.

ವಿನೋದ್ ಜತೆ ಮಾತಿಗಿಳಿದರೆ ಸಾಮಾಜಿಕ ಜಾಲತಾಣಗಳನ್ನು ಬಿಜೆಪಿ ಇಲ್ಲಿ ನಿರ್ವಹಿಸುವ ರೀತಿಯ ಕುರಿತು ಇನ್ನಷ್ಟು ಒಳನೋಟಗಳು ಸಿಗುತ್ತವೆ.

“ಸಾಮಾಜಿಕ ಜಾಲತಾಣ ಎಂದರೆ ಇಲ್ಲಿ ಸದ್ಯಕ್ಕೆ ವಾಟ್ಸಾಪ್‌ ಅಷ್ಟೆ. ಪ್ರತಿ ಶಕ್ತಿ ಕೇಂದ್ರಕ್ಕೊಂದು ಗ್ರೂಪ್ ಮಾಡಲಾಗಿದೆ. ಆ ಗ್ರೂಪ್ ಅಡ್ಮಿನ್‌ಗಳದ್ದು ಪ್ರತ್ಯೇಕ ಗುಂಪು ಮಾಡಲಾಗಿದೆ. ಮೇಲಿಂದ ಬರುವ ಮಾಹಿತಿಯನ್ನು ಅಡ್ಮಿನ್‌ಗಳಿಗೆ ತಲುಪಿಸುತ್ತೇವೆ. ಅವರು ತಮ್ಮ ತಮ್ಮ ಸ್ಥಳೀಯ ಗ್ರೂಪ್‌ಗಳಿಗೆ ಶೇರ್ ಮಾಡುತ್ತಾರೆ,’’ ಎನ್ನುತ್ತಾರೆ ವಿನೋದ್ ರಾಜ್.

ಅಂಜಿಕೆಯಿಂದಲೇ ತಮ್ಮ ವಾಟ್ಸಾಪ್‌ನ್ನು ‘ಸಮಾಚಾರ’ದ ಮುಂದೆ ತೆರೆದಿಟ್ಟ ಅವರು, ಬಿಜೆಪಿ ಹೆಸರಿನಲ್ಲಿ ಹಾಗೂ ಹಿಂದುತ್ವದ ಹೆಸರಿನಲ್ಲಿ ಇರುವ ಹತ್ತಾರು ಗ್ರೂಪ್‌ಗಳನ್ನು ತೋರಿಸಿದರು.

ಆಗಷ್ಟೆ ಭಾರತ ಪಾಕಿಸ್ತಾನದ ಮೇಲೆ ನಡೆಸಿದ ವೈಮಾನಿಕ ದಾಳಿ ಮುಗಿದು ಅಭಿನಂದನ್ ಸೆರೆ ಸಿಕ್ಕಿದ್ದರು. ಹೀಗಾಗಿ ಅವರ ಹೆಚ್ಚಿನ ಪೋಸ್ಟ್‌ಗಳು ಪುಲ್ವಾಮ ಸ್ಫೋಟ, ಪಾಕಿಸ್ತಾನದ ಮೇಲಿನ ವೈಮಾನಿಕ ದಾಳಿ ಇವುಗಳ ಸುತ್ತಲೇ ಇದ್ದವು. ಪ್ರಧಾನಿ ಮೋದಿ ಅವರ ವ್ಯಕ್ತಿತ್ವ ಕಟ್ಟಿಕೊಡುವ ಬರವಣಿಗೆ ಎದ್ದು ಕಾಣಿಸುತ್ತಿತ್ತು.

“ಮೋದಿ ಬಗ್ಗೆ ಇಷ್ಟೆಲ್ಲಾ ಶೇರ್ ಮಾಡ್ತಾ ಇದ್ದೀರಾ. ಯಾಕೆ ನಿಮ್ಮ ಸ್ಥಳೀಯ ಸಂಸದರ ಸಾಧನೆಗಳನ್ನು ಬಿಂಬಿಸುವ ಮಾಹಿತಿ ಇಲ್ಲ?” ಎಂಬ ಪ್ರಶ್ನೆಗೆ, “ನಮಗೆ ಮೋದಿ ಅಷ್ಟೆ ಮುಖ್ಯ. ಜನರಿಗೂ ಬೇಕಿರುವುದು ಇಷ್ಟೆ. ಅದು ಬಿಟ್ಟರೆ ಯಾರೇ ಅಭ್ಯರ್ಥಿ ಆದರೂ ನಮಗೆ ಸಮಸ್ಯೆ ಇಲ್ಲ. ಸ್ಥಳೀಯ ಅಭ್ಯರ್ಥಿಗಳು ನಡೆಸಿದ ಅಭಿವೃದ್ಧಿ ಕೆಲಸ ಜನರ ಮನಸ್ಸಿನಲ್ಲಿ ಇರುತ್ತದೆ ಬಿಡಿ,’’ ಎಂಬ ಉತ್ತರ ಲಭ್ಯವಾಯಿತು. ಅಷ್ಟರ ಮಟ್ಟಿಗೆ ಇಲ್ಲಿ ಬಿಜೆಪಿ ಎಂದರೆ ಮೋದಿ ಮತ್ತು ಮೋದಿ ಎಂದರೆ ಬಿಜೆಪಿ ಅಷ್ಟೆ.

ಬಹುಶಃ ಕರ್ನಾಟಕ ಯಾವ ಲೋಕಸಭಾ ಕ್ಷೇತ್ರಗಳಿಗೆ ಹೋದರೂ ಉಡುಪಿ- ಚಿಕ್ಕಮಗಳೂರು, ಪಕ್ಕದ ಮಂಗಳೂರಿನಷ್ಟು ಪ್ರಶಸ್ತವಾದ ಜಾಗ ಬಿಜೆಪಿಗೆ ಮತ್ತೆಲ್ಲೂ ಸಿಗುವುದು ಅನುಮಾನ. ಅಷ್ಟರ ಮಟ್ಟಿಗೆ ಇಲ್ಲಿ ಚುನಾವಣೆಗೆ ಆಡಳಿತ ಪಕ್ಷ ತಯಾರಾಗಿದೆ. ಮೋದಿ ಅವರನ್ನೇ ಕೇಂದ್ರವಾಗಿಟ್ಟುಕೊಂಡು ಪ್ರಚಾರ ಆರಂಭಿಸಿದೆ.

ವಿಶೇಷ ಎಂದರೆ ಈ ಎರಡೂ ಕ್ಷೇತ್ರಗಳಲ್ಲೂ ಈಗಿರುವ ಬಿಜೆಪಿ ಸಂಸದರ ಬಗ್ಗೆ ಪಕ್ಷದೊಳಗೆ ಅಸಮಾಧಾನ ಎದ್ದು ಕಾಣಿಸುತ್ತದೆ. ಶೋಭಾ ಇರಲಿ ನಳಿನ್ ಕುಮಾರ್ ಕಟೀಲ್ ಇರಲಿ, ‘ಜನರ ಕೈಗೆ ಸಿಗುವುದಿಲ್ಲ, ಕಾರ್ಯಕರ್ತರಿಗೆ ಲಭ್ಯವಾಗುವುದಿಲ್ಲ’ ಎಂಬುದು ಸಾಮಾನ್ಯವಾಗಿ ಎಲ್ಲರ ಬಾಯಲ್ಲಿರುವ ದೂರು.

“ಜನ ಏನಾದರೂ ಸಮಸ್ಯೆಯಾದರೆ ಸಂಸದರೇ ಸ್ಪಂದಿಸಬೇಕು ಎಂದು ಬಯಸುತ್ತಾರೆ. ಪೊಲೀಸ್ ಸ್ಟೇಷನ್ ಇರಲಿ, ತಾಲೂಕು ಕಚೇರಿ ಇರಲಿ ಅವರುಗಳೇ ಕೆಲಸ ಮಾಡಿಕೊಡಬೇಕು ಎನ್ನುತ್ತಾರೆ. ಸಂಸದರಾದ ಮೇಲೆ ಇವೆಲ್ಲಾ ಹೇಗೆ ಸಾಧ್ಯ ಹೇಳಿ?’’ ಎಂದು ಪ್ರಶ್ನಿಸುತ್ತಾರೆ ಪುತ್ತೂರಿನ ಬಿಜೆಪಿ ನಾಯಕರೊಬ್ಬರು.

ಬೌದ್ಧಿಕತೆ ಕಡೆಗೆ:

ಸ್ವತಂತ್ರವಾಗಿ ರಾಜಕೀಯಕ್ಕೆ ಬಂದ ಜಯಪ್ರಕಾಶ್ ಹೆಗ್ಡೆ ಬೌದ್ಧಿಕವಾಗಿಯೂ ಗುರುತಿಸಿಕೊಂಡವರು. ಕರಾವಳಿಯ ಬಿಜೆಪಿಗೆ ಇಂತಹ ನಾಯಕರೊಬ್ಬರ ಅಗತ್ಯ ಈಗ ಹೆಚ್ಚಿದೆ. 
ಸ್ವತಂತ್ರವಾಗಿ ರಾಜಕೀಯಕ್ಕೆ ಬಂದ ಜಯಪ್ರಕಾಶ್ ಹೆಗ್ಡೆ ಬೌದ್ಧಿಕವಾಗಿಯೂ ಗುರುತಿಸಿಕೊಂಡವರು. ಕರಾವಳಿಯ ಬಿಜೆಪಿಗೆ ಇಂತಹ ನಾಯಕರೊಬ್ಬರ ಅಗತ್ಯ ಈಗ ಹೆಚ್ಚಿದೆ. 
/ಕೋಸ್ಟಲ್ ಡೈಜೆಸ್ಟ್. 

ಇದೇ ವೇಳೆಯಲ್ಲಿ ಉಡುಪಿ ಬಿಜೆಪಿ ಇತರೆ ಆಯ್ಕೆಗಳತ್ತಲೂ ಆಲೋಚನೆ ಮಾಡುತ್ತಿದೆ. ವರ್ಷದ ಹಿಂದಷ್ಟೆ ಬಿಜೆಪಿಗೆ ಸೇರ್ಪಡೆಯಾದ ಬ್ರಹ್ಮಾವರ ಮೂಲದ ಜನನಾಯಕ ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ನೀಡಬೇಕು ಎಂಬುದು ಬಿಜೆಪಿಯ ಒಂದು ವರ್ಗದ ಆಲೋಚನೆ. ಇದಕ್ಕೆ ಕೆಲವು ಕಾರಣಗಳಿವೆ.

“ಒಂದೋ ಕೇಸರಿಯನ್ನು ಬೌದ್ಧಿವಾಗಿ ಬೆಳೆಸಿ, ಇಲ್ಲ ಬುದ್ದಿಜೀವಿಗಳನ್ನು ಕೇಸರಿಕರಣ ಮಾಡಿ,’’ ಎಂದವರು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್. ಇದು ಇವತ್ತಿನ ಬಿಜೆಪಿ ಆಲೋಚನೆ ಕೂಡ.

ಅಲ್ಲೀಗ ಅಭ್ಯರ್ಥಿಗಳಿಗೆ, ಆರ್ಥಿಕವಾಗಿ ಬಲವಿದ್ದವರಿಗೆ ಕೊರತೆ ಇಲ್ಲ. ಸಮಸ್ಯೆ ಇರುವುದು ಬೌದ್ಧಿಕವಾಗಿ ಗಟ್ಟಿ ಇರುವ ಅಭ್ಯರ್ಥಿಗಳದ್ದು. ಸಂಸತ್‌ನಲ್ಲಾಗಲೀ, ವಿಧಾನಸಭೆಯಲ್ಲಾಗಲೀ ಅಥವಾ ಮೇಲ್ಮನೆಗಳಲ್ಲಾಗಲೀ ಬಿಜೆಪಿಗೆ ಒಳ್ಳೆಯ ಮಾತುಗಾರರ ಕೊರತೆ ಇದೆ. ಇದು ದೇಶದ ಮಟ್ಟದಲ್ಲೂ, ರಾಜ್ಯದ ಮಟ್ಟದಲ್ಲೂ ಶ್ರೀಮಂತ ಪಕ್ಷ ಎದುಸುತ್ತಿರುವ ಇವತ್ತಿನ ಬಿಕ್ಕಟ್ಟಿನ ಇನ್ನೊಂದು ಸ್ವರೂಪ.

ಇದಕ್ಕಾಗಿಯೇ ಜನತಾ ಪರಿವಾರದ ಹಿನ್ನೆಲೆಯ, ಓದು- ತಿಳಿವಳಿಕೆ- ಮಾತುಗಾರಿಕೆ ವಿಚಾರದಲ್ಲಿ ಮುಂದಿರುವ ಜಯಪ್ರಕಾಶ್ ಹೆಗ್ಡೆ ಅಭ್ಯರ್ಥಿಯಾಗಬೇಕು ಎಂಬ ಬಯಕೆ ಬಿಜೆಪಿ ಸ್ಥಳೀಯ ಪದಾಧಿಕಾರಿಗಳಲ್ಲಿದೆ.

“ಒಂದು ವೇಳೆ ಹೆಗ್ಡೆ ಅವರಿಗೆ ಟಿಕೆಟ್ ಸಿಕ್ಕರೆ ಸಮಸ್ಯೆ ಇಲ್ಲ. ಅವರು ಸಂಸದರಾಗಲು ಯೋಗ್ಯರು,’’ ಎನ್ನುತ್ತಾರೆ ಕುಂದಾಪುರದ ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು.

ಇದರ ಜತೆಗೆ ಮೊಗವೀರ ಹಿನ್ನೆಲೆಯಿಂದ ಬಂದು ಇವತ್ತು ಜಿಲ್ಲೆಯ ತಳಸಮುದಾಯದ ಪ್ರತಿನಿಧಿಯಾಗಿರುವ ಯಶ್‌ಪಾಲ್‌ ಸುವರ್ಣ ಕೂಡ ಬಿಜೆಪಿಯಿಂದಲೇ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಉಡುಪಿ ಜಿಲ್ಲೆಯ ಸಹಕಾರಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷರೂ ಆಗಿರುವ ಇವರ ಬಗ್ಗೆಯೂ ಒಲವು ಇದೆ. ಇಂತಹ ಆಕಾಂಕ್ಷಿಗಳ ನಡುವೆಯೇ ಹಾಲಿ ಸಂಸದೆ ಶೋಭಾ ಟಿಕೆಟ್ ಗಿಟ್ಟಿಸಬೇಕಿದೆ. ಅದಕ್ಕಾಗಿ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಎಲ್ಲಾ ವಿರೋಧಗಳನ್ನು ಎದುರಿಸಿ ಜತೆಗೆ ನಿಲ್ಲುವುದು ಅನಿವಾರ್ಯವಾಗಲಿದೆ.

ಬಿಜೆಪಿ ಸಂಘಟನಾತ್ಮಕವಾಗಿ ಈ ಲೋಕಸಭಾ ಕ್ಷೇತ್ರದಲ್ಲಿ ಗಟ್ಟಿಯಾಗಿ ಬೇರೂರಿದೆ. ಕಾಂಗ್ರೆಸ್, ಜೆಡಿಎಸ್‌ ಪಕ್ಷಗಳಿಗೆ ಹೋಲಿಸಿದರೆ ಜನರ ಮಟ್ಟದಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದೆ. ಆದರೆ ಅಭ್ಯರ್ಥಿ ಯಾರಾಗುತ್ತಾರೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಜರುಗಲಿವೆ. ಸದ್ಯ, ಬಿಸಿಲಿನ ಝಳದಲ್ಲಿಯೂ ಕೇಸರಿ ಪಕ್ಷದ ಕಾರ್ಯಕರ್ತರು ಗೆಲುವಿಗಾಗಿ ಬೆವರು ಹರಿಸುತ್ತಿದ್ದಾರೆ. ಇವರನ್ನು ಸೂಕ್ತ ರೀತಿಯಲ್ಲಿ ಪ್ರತಿನಿಧಿಸುವವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ ಮುಂದಿನ ಒಂದು ದಶಕ ನಿಜವಾಗಿಯೂ ‘ಪರಿವಾರದ ಜಿಲ್ಲೆ’ ಬಿಜೆಪಿ ಭದ್ರಕೋಟೆಯಾಗಿಯೇ ಉಳಿಯಲಿದೆ ಎಂಬುದರಲ್ಲಿ ಯಾವ ಅನುಮಾನಗಳೂ ಬೇಕಿಲ್ಲ.