samachara
www.samachara.com
7 ದಿನಗಳ ಹಾರಾಟ; 15 ಗಂಟೆ 10 ನಿಮಿಷ ಕಲಾಪ; ಶುಕ್ರವಾರ ಖಾಲಿಯಾದ ವಿಧಾನಸೌಧ!
ರಾಜ್ಯ

7 ದಿನಗಳ ಹಾರಾಟ; 15 ಗಂಟೆ 10 ನಿಮಿಷ ಕಲಾಪ; ಶುಕ್ರವಾರ ಖಾಲಿಯಾದ ವಿಧಾನಸೌಧ!

ಸರಕಾರ ಏನೋ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಆದರೆ ಜನರ ಹಣದಲ್ಲಿ ನಡೆದ ಸದಸನ ಕಾರ್ಯಕ್ಷಮತೆ ನೋಡಿದರೆ ಹೇಸಿಗೆ ಹುಟ್ಟಿಸುತ್ತದೆ.

ಕಳೆದ ಎರಡು ವಾರಗಳಿಂದ ‘ಆಪರೇಷನ್ ಕಮಲ’, ಆಡಿಯೋ ವಿವಾದ, ಬಜೆಟ್ ಮಂಡನೆಗೆ ಅಡ್ಡಿ ಹೀಗೆ ಒಂದಿಲ್ಲೊಂದು ವಿವಾದಗಳಿಂದಾಗಿ ರಾಜ್ಯದ ಸುದ್ದಿಕೇಂದ್ರದಲ್ಲಿದ್ದ ವಿಧಾನಸೌಧ ಶುಕ್ರವಾರ ಖಾಲಿಖಾಲಿ, ಶಕ್ತಿಸೌಧದ ಕಾರಿಡಾರುಗಳಲ್ಲಿ ನೀರವ ಮೌನ!

ಜಮ್ಮು & ಕಾಶ್ಮೀರದ ಪುಲ್ವಾಮಾದ ಆವಂತಿಪುರದಲ್ಲಿ ಗುರುವಾರ ನಡೆದ ಭಯೋತ್ಪಾದನಾ ದಾಳಿ ಶುಕ್ರವಾರದ ಮುಂಜಾನೆಯಿಂದಲೇ ರಾಜಕೀಯವೂ ಸೇರಿದಂತೆ ಸಾಮಾಜಿಕ ಚರ್ಚೆಯ ಜಾಗವನ್ನು ಆಕ್ರಮಿಸಿದೆ. ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಬಹುತೇಕ ಮಾಧ್ಯಮಗಳು ಇದೊಂದೇ ಸುದ್ದಿಯ ಬೆನ್ನು ಬಿದ್ದಿವೆ. ಪ್ರತೀಕಾರ ಯಾವಾಗ? ಎಂದು ಪ್ರಶ್ನಿಸುತ್ತಿವೆ. ಕಳೆದ ಒಂದು ವಾರದಿಂದ ಕ್ಯಾಮೆರಾಗಳಿಗೆ ಆಹಾರವಾಗಿದ್ದ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರನ್ನು ಅವು ಮರೆತು ಬಿಟ್ಟಿವೆ.

ಸಹಜವಾಗಿಯೇ ರಾಜ್ಯದ ಜನಪ್ರತಿನಿಧಿಗಳು ಮಾಧ್ಯಮಗಳ ‘ಫೋಕಸ್ ಶಿಫ್ಟ್’ ಆಗುತ್ತಿದ್ದಂತೆ ರಜೆಯ ಮೂಡಿಗೆ ಬಂದಂತೆ ಕಾಣಿಸುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಶುಕ್ರವಾರ ವಿಧಾನಸೌಧದ ಆವರಣ ಬಿಕೋ ಎನ್ನುತ್ತಿತ್ತು. ಮುಖ್ಯಮಂತ್ರಿ ಕಚೇರಿ ಸೇರಿದಂತೆ ಸಚಿವರು, ವಿರೋಧ ಪಕ್ಷದ ನಾಯಕರ ಕೊಠಡಿಗಳು ಖಾಲಿ ಹೊಡೆಯುತ್ತಿದ್ದವು.

ಪಕ್ಕದಲ್ಲಿರುವ ವಿಕಾಸ ಸೌಧ ಕೂಡ ಅವಹಾಲು ಸಲ್ಲಿಸಲು ಬರುವ ಜನರಿಲ್ಲದೆ ನಿರ್ಜನವಾಗಿತ್ತು. “ಧನ ವಿನಿಯೋಗ ಮಸೂದೆ ಮಂಡನೆ ಪಡೆದುಕೊಂಡ ಹಿನ್ನೆಲೆಯಲ್ಲಿ ಸರಕಾರ ನಡೆಸುವವರಿಗೆ ತಲೆ ಬಿಸಿ ಕಡಿಮೆಯಾಗಿದೆ. ಹೊಸ ಸಮಸ್ಯೆ ಎದುರಾಗಲ್ಲ ಎಂದರೆ ಸದ್ಯಕ್ಕೆ ಆಳುವವರು ನಿರಾಳ,’’ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

ಬಜೆಟ್ ಮಂಡನೆಗೂ ಮುನ್ನವೇ ಅತೃಪ್ತ ಶಾಸಕರು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದರಿಂದ `ಧನವಿನಿಯೋಗ ಮಸೂದೆ’ ಅನುಮೋದನೆ ಪಡೆದುಕೊಳ್ಳುವುದು ಕಷ್ಟ ಎನ್ನಿಸಿತ್ತು. ಆದರೆ ದೇವದುರ್ಗ ರಹಸ್ಯದ ಆಡಿಯೋವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡುತ್ತಿದ್ದಂತೆ, ‘ಆಪರೇಷನ್ ಕಮಲ’ ಯೋಜನೆ ಜಾರಿಗೆ ಹೊರಟಿದ್ದ ವಿರೋಧ ಪಕ್ಷ ಬಿಜೆಪಿ ನಾಯಕರು ತಣ್ಣಗಾದರು. ಹೀಗಾಗಿ ಬಜೆಟ್ ಮಂಡನೆ ಹಾಗೂ ನಂತರ ಅದನ್ನು ಅಂಗೀಕರಿಸುವ ಪ್ರಕ್ರಿಯೆ ಮುಗಿದು ಸರಕಾರ ನಡೆಸಲು ತಾಂತ್ರಿಕ ಸಮಸ್ಯೆ ಇಲ್ಲದಂತಾಗಿದೆ. ಖರ್ಚು ವೆಚ್ಚಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೂ ಇಲ್ಲವಾಗಿದೆ.

ವಿವಾದದಲ್ಲೇ ಮುಗಿದ ಸದನ:

ಸದ್ಯಕ್ಕೆ ಸರಕಾರ ಏನೋ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಆದರೆ ಜನರ ಹಣದಲ್ಲಿ ನಡೆದ ಸದಸನ ಕಾರ್ಯಕ್ಷಮತೆ ನೋಡಿದರೆ ಹೇಸಿಗೆ ಹುಟ್ಟಿಸುತ್ತದೆ. ಈ ಬಾರಿಯ ಬಜೆಟ್ ಅವೇಶನದಲ್ಲಿ ಯಾವುದೇ ಪ್ರಮುಖ ವಿಷಯಗಳು ಚರ್ಚೆಯಾಗಲಿಲ್ಲ. ಕೇವಲ ಟೀಕೆ, ಆರೋಪ, ಪ್ರತ್ಯಾರೋಪಗಳಿಗೆ ಕಲಾಪದ ಸಮಯವನ್ನು ಹೊಣೆಗಾರಿಕೆ ಮರೆತ ಜನಪ್ರತಿನಿಧಿಗಳು ಮೀಸಲಿಟ್ಟರು.

ಜ. 6 ರಂದು ಜಂಟಿ ಅಧಿವೇಶನ ಆರಂಭವಾದಾಗಿನಿಂದಲೂ ಬಿಜೆಪಿ ಸದಸ್ಯರು ಸದನದಲ್ಲಿ ಧರಣಿ ನಡೆಸಿದರು. ಮೊದಲ ದಿನ ಬಿಜೆಪಿ ಸದಸ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯಪಾಲರ ಭಾಷಣ ಅರ್ಧಕ್ಕೆ ಮೊಟಕುಗೊಂಡಿತ್ತು. ಆ ನಂತರ ಫೆ. 8 ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಪರೇಷನ್ ಆಡಿಯೋ ಬಾಂಬ್ ಸಿಡಿಸಿದ್ದರು. ಆಪರೇಷನ್ ಅಡಿಯೋ ವಿಚಾರವಾಗಿ ಆಡಳಿತ ಪಕ್ಷಗಳು ಮತ್ತು ವಿಪಕ್ಷದ ಸದಸ್ಯರ ನಡುವೆ ಚರ್ಚೆ, ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಈ ಅಧಿವೇಶನದಲ್ಲಿ ಸುಗಮ ಕಲಾಪ ನಡೆಯಲಿಲ್ಲ.

ಇದೇ ಮೊದಲ ಬಾರಿಗೆ ಬಜೆಟ್ ಮೇಲೆ ಯಾವುದೇ ಚರ್ಚೆ ನಡೆಯದೆ ವಿಧಾನಸಭೆ ಮತ್ತು ವಿಧಾನ ಪರಿಷತ್‍ನಲ್ಲಿ ಧನ ವಿನಿಯೋಗ ಮಸೂದೆ ಅನುಮೋದನೆಗೊಂಡಿದೆ. ಜತೆಗೆ ಕೆಳಮನೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯವನ್ನೂ ಸಲ್ಲಿಸಿಲ್ಲ ಮತ್ತು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆದಿಲ್ಲ.

ಒಟ್ಟು 7 ದಿನಗಳ ಬಜೆಟ್ ಅಧಿವೇಶನ ನಡೆಯಿತಾದರೂ, ಕಲಾಪ ಅಂತ ನಡೆದಿದ್ದು 15 ಗಂಟೆ 10 ನಿಮಿಷಗಳು ಮಾತ್ರ. ದಿನದ ಸರಾಸರಿಯಲ್ಲಿ ನೋಡಿದರೆ ಸುಮಾರು 2 ಗಂಟೆ ಚರ್ಚೆ, ಪ್ರಶ್ನೋತ್ತರಗಳು ನಡೆದಿವೆ. ಅದರಲ್ಲಿ ಮೂರೂವರೆ ಗಂಟೆ ಮುಖ್ಯಮಂತ್ರಿಗಳ ಭಾಷಣವೇ ನಡೆದಿದೆ. ಉಳಿದ ಸಮಯ ವಿರೋಧ ಪಕ್ಷಗಳ ಸದಸ್ಯರು ಸೇರಿದಂತೆ ಸದಸ್ಯರುಗಳ ಪ್ರತಿಕ್ರಿಯೆಗೆ, ಅಭಿಪ್ರಾಯ ಹಂಚಿಕೆಗೆ ಖರ್ಚಾಗಿದೆ.

ಹಣಕಾಸು ಮಸೂದೆ ಸೇರಿದಂತೆ ಒಟ್ಟು 9 ಮಸೂದೆಗಳು ಈ ಗದ್ದಲಗಳ ನಡುವೆಯೇ ಅನುಮೋದನೆಯಾದವು. ಆದರೆ ಅವುಗಳ ಮೇಲೆ ಚರ್ಚೆಗಳಾಗಿಲ್ಲ. ಸದಸ್ಯರುಗಳು ಕೇಳಿದ ಅಷ್ಟೂ ಪ್ರಶ್ನೆಗಳಿಗೆ ಉತ್ತರವೂ ಸಿಗಲಿಲ್ಲ. ಲಿಖಿತ ರೂಪದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರಾದರೂ, ಜನರಿಗೆ ತಮ್ಮ ಪ್ರತಿನಿಧಿಗಳು ಕೇಳಿದ ಪ್ರಶ್ನೆ ಯಾವುದು, ಅದಕ್ಕೆ ಸಿಕ್ಕ ಉತ್ತರ ಏನೆಂದು ತಿಳಿಯಲಿಲ್ಲ.

“ವಿಧಾನ ಮಂಡಲದ ಉಭಯ ಸದನಗಳಲ್ಲಿ ಜನಪ್ರತಿನಿಧಿಗಳು ನಡೆದುಕೊಳ್ಳುವ ರೀತಿ ಬೇಸರ ತರಿಸುತ್ತದೆ. ಇದು ನಮ್ಮ ಪ್ರಜಾಪ್ರಭುತ್ವವನ್ನು ಮತ್ತು ಸಂವಿಧಾನವನ್ನು ಕಡೆಗಣಿಸಿದಂತೆ. ಸರಕಾರ ರಾಜ್ಯದ ಸಮಸ್ಯೆಗಳು ಮತ್ತು ಅಗತ್ಯಗಳ ಕುರಿತು ಚರ್ಚೆ ಮಾಡುವುದರಲ್ಲಿ ಒಲವು ಹೊಂದಿತ್ತು. ಆದರೆ ಪ್ರತಿಪಕ್ಷವಾದ ಬಿಜೆಪಿ ಸರ್ಕಾರವನ್ನು ಅಸಂವಿಧಾನಿಕ ಮಾರ್ಗಗಳ ಮೂಲಕ ಅಸ್ಥಿರಗೊಳಿಸಲು ನೋಡುತ್ತಿದ್ದು, ಯಾವುದರ ಬಗ್ಗೆಯೂ ಚರ್ಚೆ ಮಾಡಲು ಒಲವು ಹೊಂದಿಲ್ಲ,” ಎಂದು ಬಿಜೆಪಿಯ ಮೇಲೆ ಬೆರಳು ತೋರಿಸಿ ಹೇಳುತ್ತಾರೆ ಕೆಪಿಸಿಸಿ ಅಧ್ಯಕ್ಷರೂ ಆದ ಶಾಸಕ ದಿನೇಶ್ ಗುಂಡೂರಾವ್.

“ರಾಜ್ಯದ ಪ್ರಗತಿ ಬಗ್ಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಬಜೆಟ್ ಅಧಿವೇಶನ ಅರ್ಥಬದ್ಧವಾಗಿ ನಡೆಯಬೇಕು. ಸರಕಾರ ನಮ್ಮನ್ನು ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಡೆಸಿಕೊಳ್ಳಲಿಲ್ಲ,” ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಆರೋಪಿಸಿದರು.

ಸದನದ ಒಳಗೆ ಮಾತ್ರ ಅಲ್ಲ, ಹೊರಗೂ ಕೂಡ ಆರೋಪ- ಪ್ರತ್ಯಾರೋಗಳಷ್ಟೆ ಕೇಳಿ ಬಂದವೇ ಹೊರತು, ಪ್ರಾಮಾಣಿಕವಾದ ಆತ್ಮಾವಲೋಕನ ಕಾಣಲಿಲ್ಲ. ಜನರ ತೆರಿಗೆ ಹಣಕ್ಕೆ ಉತ್ತರಾಯಿತ್ವ ಹೊಂದಿದ್ದಾರೆ ಎಂಬ ವಿಶ್ವಾಸ ಯಾವ ನಾಯಕರ ನಡವಳಿಕೆಯಲ್ಲಿ ಕಾಣಲಿಲ್ಲ.

ಈ ನಡುವೆ ಎಸ್‌ಐಟಿ ರಚನೆ ಸುತ್ತ ಗೊಂದಲ ಮುಂದುವರಿದಿದೆ. ಎಡಿಜಿಪಿ ದರ್ಜೆಯ ಅಧಿಕಾರಿಗಳು ಎಸ್‌ಐಟಿ ಮುಂದಾಳತ್ವ ವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿ ಇದೆ. ಒಂದು ವೇಳೆ ಇದು ನಿಜವೇ ಆದರೆ, ಕಲಾಪದ ಸಮಯದಲ್ಲಿ ಎಸ್‌ಐಟಿಗಾಗಿ ಪಟ್ಟು, ಹೊರಗೆ ಪೆಟ್ಟು ತಿಂದ ಘಟನೆಗಳ ಫಲ ಆದರೂ ಏನು? ಎಂಬ ಪ್ರಶ್ನೆ ಏಳುತ್ತದೆ. ಅಂದಹಾಗೆ, ಇಂತವಕ್ಕೆಲ್ಲಾ ಉತ್ತರ ಬಯಸುವ ಬದಲು, ವಿಧಾನಸೌಧ ಶುಕ್ರವಾರ ನಿರಾಳವಾಗಿತ್ತು ಎಂದಷ್ಟೆ ಹೇಳಿ ಮುಗಿಸುವುದು ಸೂಕ್ತ.

(ಚಿತ್ರ ಸಾಂದರ್ಭಿಕ)