samachara
www.samachara.com
ಬೆಂಗಳೂರಿನಲ್ಲೂ ಕೋಲ್ಕತ್ತಾ ಮಾದರಿ ಸಮಾವೇಶ, ಮಹಾಘಟಬಂಧನ್‌ ವೇದಿಕೆಗೆ ಜೆಡಿಎಸ್‌ ಬಲ
ರಾಜ್ಯ

ಬೆಂಗಳೂರಿನಲ್ಲೂ ಕೋಲ್ಕತ್ತಾ ಮಾದರಿ ಸಮಾವೇಶ, ಮಹಾಘಟಬಂಧನ್‌ ವೇದಿಕೆಗೆ ಜೆಡಿಎಸ್‌ ಬಲ

ಕರ್ನಾಟಕ ರಾಜಧಾನಿಯಲ್ಲಿಯೂ ಬೃಹತ್‌ ಸಮಾವೇಶ ನಡೆಸಲು ಉದ್ದೇಶಿಸಿರುವ ದೇವೇಗೌಡರು ಈ ವೇದಿಕೆ ಮೂಲಕ ಸಮ್ಮಿಶ್ರ ಸರಕಾರದ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಪ್ರಧಾನಿಗೆ ಎಚ್ಚರಿಕೆಯ ಸಂದೇಶ ರವಾನಿಸಲು ಯೋಚಿಸಿದ್ದಾರೆ.

Team Samachara

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ಕಳೆದ ಶನಿವಾರ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ಮಹಾಘಟಬಂಧನ್‌ ರ್ಯಾಲಿ ನಿರೀಕ್ಷೆಯಂತೆ ದೇಶದ ಗಮನ ಸೆಳೆದಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ವಿಪಕ್ಷಗಳ ನಾಯಕರು ತಮ್ಮ ತಮ್ಮ ರಾಜ್ಯಗಳಲ್ಲೂ ಇಂಥಹದ್ದೇ ಬೃಹತ್‌ ಸಮಾವೇಶ ನಡೆಸಲು ಮುಂದಾಗಿದ್ದಾರೆ. ಅದರಲ್ಲಿ ಕರ್ನಾಟಕವೂ ಒಂದು.

ಕೋಲ್ಕತ್ತಾ ಐತಿಹಾಸಿಕ ಸಮಾವೇಶ ಕೇಂದ್ರದ ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆ ಸಂದೇಶ ರವಾನಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಮಹಾಸಮಾವೇಶಕ್ಕೆ ರಾಜ್ಯದಲ್ಲೂ ವೇದಿಕೆ ಸಿದ್ಧವಾಗಿದೆ. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಬೃಹತ್ ಸಮಾವೇಶದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಸಮಾವೇಶ ಸಹಜವಾಗಿಯೇ ವಿಶೇಷ ಗಮನ ಸೆಳೆದಿದೆ.

ಕೋಲ್ಕತ್ತಾ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡ ತಮ್ಮ ಪುತ್ರ ಕುಮಾರಸ್ವಾಮಿಯೊಂದಿಗೆ ಭಾಗವಹಿಸಿದ್ದರು. ಅಲ್ಲಿ ಅವರು, “ಕರ್ನಾಟಕ ಸಮ್ಮಿಶ್ರ ಸರಕಾರದ ಪ್ರಮಾಣ ವಚನದ ನಂತರ ಹಮ್ಮಿಕೊಳ್ಳಲಾಗಿರುವ ಮೊದಲ ರ್ಯಾಲಿ ಇದು. ಲೋಕಸಭೆ ಚುನಾವಣೆಗೆ ಹೆಚ್ಚಿನ ಸಮಯವಿಲ್ಲ,” ಎಂದು ಒತ್ತಿ ಹೇಳಿದ್ದರು. ಈ ಮೂಲಕ ಇನ್ನೂ ಇಂಥಹ ಹಲವು ಸಮಾವೇಶಗಳು ನಡೆಯಬೇಕಾಗಿವೆ ಎಂಬ ಸಂದೇಶ ನೀಡಿದ್ದರು.

“ಮೋದಿ ನಂತರ ಯಾರು ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಕೇಳುತ್ತಿದ್ದಾರೆ. ನಾವು ಈ ಸಂದರ್ಭದಲ್ಲಿ ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಬೇಕು,” ಎಂಬ ಕಿವಿಮಾತು ಹೇಳಿದ್ದಲ್ಲದೆ ಮಹಾಮೈತ್ರಿಕೂಟವನ್ನು ಮುಂದೆ ಕೊಂಡೊಯ್ಯಲು ನೀಲನಕ್ಷೆ ಹಾಕಿಕೊಟ್ಟಿದ್ದರು.

“ಎಲ್ಲಾ ಹಿರಿಯ ನಾಯಕರು, ತಜ್ಞರು ಒಟ್ಟು ಗೂಡಿ ನಿಮ್ಮ ಅನುಭವಗಳ ಮೇಲೆ ಪ್ರಣಾಳಿಕೆಯನ್ನು ರಚಿಸಿ. ಹೇಗೆ ಉತ್ತಮ ಸರಕಾರ ನೀಡಬಹುದು ಎಂಬುದನ್ನು ಜನರಿಗೆ ಹೇಳಿ. ಆಗ ಜನರು ನಿಜವಾಗಿಯೂ ಬೆಂಬಲ ನೀಡಲಿದ್ದಾರೆ,” ಎಂದಿದ್ದರು ದೇವೇಗೌಡ. ಈ ಮೂಲಕ ಸಮ್ಮಿಶ್ರ ಸರಕಾರವೂ ಮೋದಿಗೆ ಪರ್ಯಾಯವಾಗಬಲ್ಲುದು ಎಂಬ ಸಂದೇಶವನ್ನು ಜನರಿಗೆ ತಲುಪಿಸುವಂತೆ ಅವರು ಕೋರಿದ್ದರು.

“ಸಮ್ಮಿಶ್ರ ಸರಕಾರದಿಂದಲೂ ಸ್ಥಿರ ಮತ್ತು ಜನಪರ ಆಡಳಿತ ನಡೆಸಲು ಸಾಧ್ಯವಿದೆ. ಇಂದು ಪೂರ್ಣ ಬಹುಮತ ಹೊಂದಿರುವ ಬಿಜೆಪಿಗಿಂತ ಉತ್ತಮ ಆಡಳಿತವನ್ನು ನನ್ನ ಅಧಿಕಾರವಧಿಯಲ್ಲಿ ನೀಡಿದ್ದೇನೆ,” ಎಂಬುದಾಗಿ ಅವರು ಪರ್ಯಾಯದ ಪರಿಕಲ್ಪನೆಯನ್ನು ತೆರೆದಿಟ್ಟಿದ್ದರು.

“ಇವತ್ತು ನಮ್ಮ ಮುಂದೆ ಆಚಾರ್ಯ ಕೃಪಲಾನಿಯೂ ಇಲ್ಲ, ಜಯಪ್ರಕಾಶ್‌ ನಾರಾಯಣ್‌ ಕೂಡ ಇಲ್ಲ. ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮಲ್ಲೇ ಸೀಟು ಹಂಚಿಕೆಗಳನ್ನು ಮಾಡಿಕೊಳ್ಳಬೇಕು. ಇದು ಅಷ್ಟು ಸುಲಭವಿಲ್ಲ. ಆದರೂ ಇದನ್ನು ಸಾಧ್ಯವಾಗಿಸಬೇಕು,” ಎನ್ನುವ ಮೂಲಕ ಪ್ರಾದೇಶಿಕ ನಾಯಕರೇ ತಮ್ಮ ತಮ್ಮ ರಾಜ್ಯಗಳಿಗೆ ಮಹಾಘಟಬಂಧನ್‌ ಕೊಂಡೊಯ್ಯಬೇಕು ಎಂದಿದ್ದರು.

ಸಮಾವೇಶವನ್ನು ಜನರ ಬಳಿಗೆ ಕೊಂಡೊಯ್ಯುವ ಅಗತ್ಯತೆಯನ್ನು ಒತ್ತಿ ಹೇಳಿದ್ದ ದೇವೇಗೌಡರು “ಮೋದಿಗೆ ಉತ್ತರ ನೀಡುವ ವೇದಿಕೆಯನ್ನು ಸೃಷ್ಟಿಸಿದ್ದೀರಿ. ಈಗ ಉಳಿದ ನಾಯಕರು ಜನರಲ್ಲಿ ಮತ್ತು ಮಾಧ್ಯಮಗಳಲ್ಲಿ ಈ ಮಹಾಘಟಬಂಧನ್‌ ಬಗ್ಗೆ ಬಿತ್ತುತ್ತಿರುವ ಅನುಮಾನಗಳಿಗೆ ಉತ್ತರ ನೀಡಬೇಕಾಗಿದೆ," ಎಂದಿದ್ದರು.

ಅದಕ್ಕಾಗಿ ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಅಮರಾವತಿಯಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಂಥದ್ದೇ ಸಭೆ ಆಯೋಜಿಸುವ ಭರವಸೆ ನೀಡಿದ್ದಾರೆ ಎಂದು ವಿವರಿಸಿದ್ದರು. ಇದೀಗ ಈ ಸಾಲಿಗೆ ಅವರು ಬೆಂಗಳೂರನ್ನೂ ಸೇರಿಸಲು ಹೊರಟಿದ್ದಾರೆ.

ಕರ್ನಾಟಕ ರಾಜಧಾನಿಯಲ್ಲಿಯೂ ಬೃಹತ್‌ ಸಮಾವೇಶ ನಡೆಸಲು ಉದ್ದೇಶಿಸಿರುವ ದೇವೇಗೌಡರು ಈ ವೇದಿಕೆ ಮೂಲಕ ಸಮ್ಮಿಶ್ರ ಸರಕಾರದ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಪ್ರಧಾನಿಗೆ ಎಚ್ಚರಿಕೆಯ ಸಂದೇಶ ರವಾನಿಸಲು ಯೋಚಿಸಿದ್ದಾರೆ. ಜತೆಗೆ ತಮ್ಮ ಶಕ್ತಿ ಪ್ರದರ್ಶನಕ್ಕೂ ಇದನ್ನು ವೇದಿಕೆಯಾಗಿಸಲು ಮುಂದಾಗಿದ್ದಾರೆ.

ಕೋಲ್ಕತ್ತಾ ರ್ಯಾಲಿಯಲ್ಲಿ “ಪ್ರಜಾಪ್ರಭುತ್ವ ವಿರೋಧಿ, ಅಸಂವಿಧಾನಿಕ ನಾಯಕರು ನಮ್ಮನ್ನು ಕೇಂದ್ರದಲ್ಲಿ ಆಳುತ್ತಿದ್ದಾರೆ. ಇವರುಗಳು ಜನರ ಭಾವನೆಗಳಿಗೆ ಬೆಲೆ ನೀಡುತ್ತಿಲ್ಲ. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆಗಳನ್ನು ತೋರುತ್ತಿದ್ದಾರೆ. ಇವರು ಸಾಮಾನ್ಯ ಜನರ ಸಮಸ್ಯೆಗಳಿಗೆ ಕುರುಡರಾಗಿದ್ದಾರೆ ಮತ್ತು ಕಿವುಡಾಗಿದ್ದಾರೆ,” ಎಂದು ಮೋದಿ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಬೆಂಗಳೂರಿನಿಂದಲೇ ಮೋದಿ ವಿರುದ್ಧ ರಣಕಹಳೆ ಮೊಳಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

“ಬೆಂಗಳೂರಿನಲ್ಲೂ ಸಮಾವೇಶ ನಡೆಸಿ ಕರ್ನಾಟಕದಿಂದ ದೇಶಕ್ಕೆ ಹೊಸ ಸಂದೇಶ ನೀಡಬೇಕೆಂಬ ಕೂಗು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಇದೇ 30 ರಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದ್ದು, ಸಮಾವೇಶ ನಡೆಸುವ ಬಗ್ಗೆ ತೀರ್ಮಾನವಾಗಲಿದೆ,” ಎಂದು ಜೆಡಿಎಸ್‌ ವಕ್ತಾರ ಟಿ.ಎ. ಶರವಣ ‘ಸಮಾಚಾರ’ಕ್ಕೆ ಮಾಹಿತಿ ನೀಡಿದ್ದಾರೆ.