samachara
www.samachara.com
‘ಬಸವಲಿಂಗಪ್ಪರ ಮೊಮ್ಮಗ’ ಬಂದರು ದಾರಿ ಬಿಡಿ; ತಾತನ ವೈಚಾರಿಕತೆಗೆ ಕೊಳ್ಳಿ  ಇಡಿ!
ರಾಜ್ಯ

‘ಬಸವಲಿಂಗಪ್ಪರ ಮೊಮ್ಮಗ’ ಬಂದರು ದಾರಿ ಬಿಡಿ; ತಾತನ ವೈಚಾರಿಕತೆಗೆ ಕೊಳ್ಳಿ ಇಡಿ!

ತಾತನ ಹೆಸರು, ಮಾವನ ಪ್ರಭಾವ ಬಳಸಿಕೊಂಡು ರಾಜಕಾರಣಕ್ಕೆ ಬಂದ ನಂಜನಗೂಡು ಶಾಸಕ ಬಿ. ಹರ್ಷವರ್ಧನ ದಲಿತ ರಾಜಕಾರಣದ ಸಿದ್ಧಾಂತಗಳಿಗೆ ತರ್ಪಣ ಬಿಟ್ಟಿದ್ದಾರೆ; ಹಾಗಂತ ಸ್ಥಳೀಯ ಭಾವನೆಯೊಂದು ಗಟ್ಟಿಯಾಗಿ ಬೆಳೆದು ನಿಂತಿದೆ. ಕಾರಣ? 

Team Samachara

“ಹಿಂದೂ ದೇವತೆಗಳ ಚಿತ್ರಪಟಗಳನ್ನು ಗಟಾರಕ್ಕೆ ಎಸೆಯಿರಿ”

- ಕರ್ನಾಟಕದಲ್ಲಿ ದಲಿತ ಚಳವಳಿಯನ್ನು ಬೆಳೆಸಿದ ಹಾಗೂ ದಲಿತ ಸಿದ್ಧಾಂತಗಳ ನೆರಳಲ್ಲೇ ರಾಜಕಾರಣವನ್ನೂ ನಡೆಸಿದ ಬಿ. ಬಸವಲಿಂಗಪ್ಪ ಹೇಳಿದ್ದ ಮಾತಿದು. ಬಸವಲಿಂಗಪ್ಪರ ಈ ಹೇಳಿಕೆ ಹಾಗೂ ಕನ್ನಡ ಸಾಹಿತ್ಯ ಬೂಸಾ ಎಂಬ ಮಾತುಗಳು ಭಾರೀ ಗದ್ದಲ ಎಬ್ಬಿಸಿದ್ದವು. ಅವರ ರಾಜೀನಾಮೆಗೂ ಕಾರಣವಾಗಿತ್ತು. ಆದರೆ ಸಾಮಾಜಿಕವಾಗಿ ರಾಜ್ಯದಲ್ಲಿ ದಲಿತ ಚಳವಳಿ ಇನ್ನಷ್ಟು ಜಾಗೃತವಾಗಲು ಬಸವಲಿಂಗಪ್ಪರ ಈ ಚೌಕಟ್ಟು ಮೀರಿದ ಪ್ರಯತ್ನ ಕಾರಣವಾಗಿದ್ದವು. ಆದರೆ, ತಾತನ ಹೆಸರಿನಲ್ಲಿ ರಾಜಕಾರಣಕ್ಕೆ ಬಂದ, ಮಾವನ ಹೆಸರಿನಲ್ಲಿ ಮತಬ್ಯಾಂಕ್‌ ಸೃಷ್ಟಿಸಿಕೊಂಡ ನಂಜನಗೂಡಿನ ಶಾಸಕ ಹರ್ಷವರ್ಧನ ಇವರಿಬ್ಬರ ಆಶಯಗಳಿಗೂ ವಿರುದ್ಧವಾಗಿ ನಡೆಯುತ್ತಿರುವ ಹಾಗೆ ಕಾಣಿಸುತ್ತಿದೆ.

ಬಿ. ಬಸವಲಿಂಗಪ್ಪ ಅವರ ಮೊಮ್ಮಗ ಹಾಗೂ ಮಾಜಿ ಸಚಿವ ವಿ. ಶ್ರೀನಿವಾಸ್‌ ಪ್ರಸಾದ್ ಅವರ ಅಳಿಯ ಹರ್ಷವರ್ಧನ ಈಗ ನಂಜನಗೂಡು ಕ್ಷೇತ್ರದ ಬಿಜೆಪಿ ಶಾಸಕ. ತಾತ ಬಸವಲಿಂಗಪ್ಪ ಹಾಗೂ ಬಿಜೆಪಿ ಸೇರುವ ಮುನ್ನಾ ವಿ. ಶ್ರೀನಿವಾಸ್‌ ಪ್ರಸಾದ್ ಯಾವೆಲ್ಲಾ ವಿಚಾರಗಳನ್ನು ವಿರೋಧಿಸುತ್ತಿದ್ದರೋ ಅವನ್ನು ಈಗ ಹರ್ಷವರ್ದನ ತಲೆಯ ಮೇಲೆ ಹೊತ್ತು ಭಕ್ತಿಯಿಂದ ಮಾಡುತ್ತಿದ್ದಾರೆ. ತಾತ ಹಿಂದೂ ದೇವತೆಗಳ ಚಿತ್ರಪಟಗಳನ್ನು ಗಟಾರಕ್ಕೆ ಎಸೆಯಿರಿ ಎಂದು ಕರೆ ನೀಡಿದರೆ, ಅವರ ಮೊಮ್ಮಗ ಬುದ್ಧಪಥ ಬಿಟ್ಟು ಹಿಂದೂ ದೇವತೆಗಳ ಹಿಂದೆ ಬಿದ್ದಿದ್ದಾರೆ ಎಂದು ನಂಜನಗೂಡು- ಚಾಮರಾಜನಗರ ಭಾಗದ ಕೆಲ ದಲಿತರು ಆಕ್ಷೇಪಿಸಿದ್ದಾರೆ.

ಹರ್ಷವರ್ಧನ ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ಹೋಗುತ್ತಿದ್ದಾರೆ ಎಂಬ ಫೋಟೊಗಳು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ. ಈ ವಿಚಾರವಾಗಿ ಒಂದಷ್ಟು ದಲಿತರು ಹರ್ಷವರ್ಧನ ಪರವಾಗಿ ನಿಂತರೆ, ಮತ್ತೊಂದಷ್ಟು ದಲಿತರು ಅವರ ವಿರುದ್ಧ ನಿಂತಿದ್ದಾರೆ. ಬಸವಲಿಂಗಪ್ಪ ಹಾಗೂ ಶ್ರೀನಿವಾಸ್‌ ಪ್ರಸಾದ್‌ ಹೆಸರು ಹೇಳಿಕೊಂಡು ದಲಿತ ರಾಜಕಾರಣದ ನೆರಳಲ್ಲಿ ಮತಬ್ಯಾಂಕ್‌ ಸೃಷ್ಟಿಸಿಕೊಂಡ ಹರ್ಷವರ್ಧನ ಈಗ ಬಿಜೆಪಿ ಓಲೈಕೆಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

“ವಿ. ಶ್ರೀನಿವಾಸ್‌ ಪ್ರಸಾದ್‌ ಬಿಜೆಪಿ ಸೇರಿದರೂ ಹಿಂದುತ್ವದ ವಿಚಾರದಲ್ಲಿ ನಿರ್ಲಿಪ್ತವಾಗಿದ್ದಾರೆ. ಆದರೆ, ಹರ್ಷವರ್ದನ ಬಿಜೆಪಿಯ ಓಲೈಕೆಗಾಗಿ ಸ್ವಾಮೀಜಿಗಳ ಕಾಲಿಗೆ ಬೀಳುವುದು, ಅಯ್ಯಪ್ಪ ಮಾಲೆ ಧರಿಸುವುದು, ಲಿಂಗಾಯತರನ್ನು ಮಾತ್ರ ಹತ್ತಿರಕ್ಕೆ ಬಿಟ್ಟುಕೊಳ್ಳುವುದನ್ನು ಮಾಡುತ್ತಿದ್ದಾರೆ. ಈ ಹಿಂದೆ ಉಪ ಚುನಾವಣೆಯಲ್ಲಿ ವಿ. ಶ್ರೀನಿವಾಸ್‌ ಪ್ರಸಾದ್ ಸೋಲಿಗೆ ದಲಿತರೇ ಕಾರಣ ಎಂದು ಕೋಪಗೊಂಡಿರುವ ಹರ್ಷವರ್ಧನ ಈಗ ದಲಿತರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಲಿಂಗಾಯತರ ಓಲೈಕೆಯಲ್ಲಿರುವ ಅವರು ಬಿಜೆಪಿಯ ಕೈಗೂಸಿನಂತೆ ನಡೆದುಕೊಳ್ಳುತ್ತಿದ್ದಾರೆ” ಎಂಬುದು ನಂಜನಗೂಡು ಭಾಗದ ದಲಿತ ಯುವಕರೊಬ್ಬರ ಮಾತು.

“ಚುನಾವಣೆಯ ಸಂದರ್ಭದಲ್ಲಿ ತಾತ ಬಸವಲಿಂಗಪ್ಪನವರ ಹೆಸರನ್ನು ಚೆನ್ನಾಗಿಯೇ ಬಳಸಿಕೊಂಡ ಹರ್ಷವರ್ಧನ ಈಗ ಅವರ ವಿಚಾರಗಳಿಗೆ ತಿಲಾಂಜಲಿ ಇಟ್ಟು ಬಿಜೆಪಿಗೆ ಹುಟ್ಟಿದವರಂತೆ ಆಡುತ್ತಿದ್ದಾರೆ. ದಲಿತರನ್ನು ಹೆಚ್ಚು ಹತ್ತಿರಕ್ಕೆ ಬಿಟ್ಟುಕೊಳ್ಳದೆ ದಲಿತ ವಿರೋಧಿಯಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ, ಇದನ್ನು ಬಹಿರಂಗವಾಗಿ ವಿರೋಧಿಸಿದರೆ ಇವರನ್ನು ರಾಜಕಾರಣಕ್ಕೆ ತಂದ ವಿ. ಶ್ರೀನಿವಾಸ್‌ ಪ್ರಸಾದ್‌ ಅವರನ್ನೂ ವಿರೋಧಿಸಿದಂತಾಗುತ್ತದೆ ಎಂಬ ಕಾರಣಕ್ಕೆ ಹೆಚ್ಚಿನ ದಲಿತರು ಈ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿಲ್ಲ” ಎನ್ನುತ್ತಾರೆ ಅವರು.

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ವಿ. ಶ್ರೀನಿವಾಸ್ ಪ್ರಸಾದ್‌ ರಾಜೀನಾಮೆ ನೀಡಿದ ಬಳಿಕ ನಡೆದ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ಆ ಸೋಲಿನಿಂದಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿಕೊಂಡ ವಿ. ಶ್ರೀನಿವಾಸ್‌ ಪ್ರಸಾದ್‌ ತಾವೂ ಕುಟುಂಬ ರಾಜಕಾರಣವನ್ನೇ ಮುಂದುವರಿಸಿದರು. ಮಗಳ ಗಂಡ ಹರ್ಷವರ್ದನ ಅವರನ್ನು ನಂಜನಗೂಡಿಗೆ ಕರೆತಂದು ಬಿಜೆಪಿ ಟಿಕೆಟ್‌ ಮೇಲೆ ಚುನಾವಣೆಗೆ ಇಳಿಸಿದರು.

ಶ್ರೀನಿವಾಸ್‌ ಪ್ರಸಾದ್‌ ಅವರ ಪ್ರಭಾವ, ಬಿಜೆಪಿಯ ಟಿಕೆಟ್‌ ಜತೆಗೆ ಹರ್ಷವರ್ಧನ ಗೆಲ್ಲಲು ಬಸವಲಿಂಗಪ್ಪ ಅವರ ಹೆಸರೂ ಕಾರಣ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಸವಲಿಂಗಪ್ಪನವರ ಹೆಸರಿನ ಮೈಲೇಜ್‌ ಅನ್ನು ಚೆನ್ನಾಗಿಯೇ ಬಳಸಿಕೊಂಡಿರುವ ಹರ್ಷವರ್ಧನ ಚುನಾವಣೆಯಲ್ಲಿ ಗೆದ್ದ ನಂತರ ಅವರ ಆಶಯಗಳನ್ನು ಪೋಸ್ಟರ್‌, ಬ್ಯಾನರ್‌ಗಳಿಗೇ ಸೀಮಿತಗೊಳಿಸಿರುವಂತಿದೆ.

ಕೊಳ್ಳೇಗಾಲ ಶಾಸಕ ಎನ್‌. ಮಹೇಶ್‌ ಅಮ್ಮ ಭಗವಾನ್‌ ಪಾದುಕೆಗಳನ್ನು ಮೈಗೆ ಸವರಿಕೊಂಡಾಗ ಹಾಗೂ ಸುತ್ತೂರು ಸ್ವಾಮೀಜಿ ಕಾಲಿಗೆ ಬಿದ್ದಾಗ ‘ದಲಿತ ಸ್ವಾಭಿಮಾನಕ್ಕೆ ಭಂಗವಾಯಿತು’ ಎಂದು ದಲಿತ ಸಮುದಾಯಕ್ಕೇ ಸೇರಿದ ಒಂದು ಪಡೆ ಬೊಬ್ಬೆ ಹಾಕಿತ್ತು. ಆ ಗುಂಪು ಇಂದು ಹರ್ಷವರ್ಧನ ನಡೆಯನ್ನು ಕಟು ಶಬ್ದಗಳಲ್ಲಿ ಟೀಕೆ ಮಾಡುವುದಿರಲಿ, ಆ ವಿಷಯದಲ್ಲಿ ಚಕಾರವನ್ನೇ ಎತ್ತುತ್ತಿಲ್ಲ. ಎನ್‌. ರಾಚಪ್ಪ, ಬಿ. ಬಸವಲಿಂಗಯ್ಯ, ಈ ಹಿಂದಿನ ಶ್ರೀನಿವಾಸ್‌ ಪ್ರಸಾದ್‌ ಅವರಂಥ ದಲಿತ ರಾಜಕಾರಣಿಗಳನ್ನು ಕೊಟ್ಟ ನಂಜನಗೂಡು, ಚಾಮರಾಜನಗರ ಭಾಗದ ಇಂದಿನ ದಲಿತ ರಾಜಕಾರಣದ ಮಾದರಿ ಸಂಪೂರ್ಣವಾಗಿ ಬದಲಾಗಿದೆ.

ಸುತ್ತೂರು ಸ್ವಾಮೀಜಿ ಮುಂದೆ ಮಂಡಿಯೂರಿರುವ ಹರ್ಷವರ್ಧನ
ಸುತ್ತೂರು ಸ್ವಾಮೀಜಿ ಮುಂದೆ ಮಂಡಿಯೂರಿರುವ ಹರ್ಷವರ್ಧನ
ಮಂತ್ರಾಲಯದಲ್ಲಿ ಸ್ವಾಮೀಜಿ ಪಕ್ಕ ಕೈಜೋಡಿಸಿ ನಿಂತಿರುವ ಹರ್ಷವರ್ಧನ
ಮಂತ್ರಾಲಯದಲ್ಲಿ ಸ್ವಾಮೀಜಿ ಪಕ್ಕ ಕೈಜೋಡಿಸಿ ನಿಂತಿರುವ ಹರ್ಷವರ್ಧನ

ಎನ್‌. ಮಹೇಶ್‌ ಅವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಮುಗಿಬಿದ್ದಿದ್ದ ದಲಿತರು ಈಗ ಹರ್ಷವರ್ಧನ ಅವರ ವಿಚಾರದಲ್ಲಿ ಜಾಣಮೌನಕ್ಕೆ ಶರಣಾಗಿದ್ದಾರೆ. ಓಲೈಕೆಯ ರಾಜಕಾರಣ ಹಾಗೂ ಸೈದ್ಧಾಂತಿಕ ಬದ್ಧತೆ ಇಲ್ಲದಿರುವುದು ನಂಜನಗೂಡು- ಚಾಮರಾಜನಗರ ಭಾಗದ ದಲಿತ ರಾಜಕಾರಣದ ಮಾದರಿಯನ್ನೇ ಅಳಿಸಿ ಹಾಕುವ ಲಕ್ಷಣಗಳು ಕಾಣುತ್ತಿವೆ. ಶ್ರೀನಿವಾಸ್‌ ಪ್ರಸಾದ್‌ ಅವರಿಗೇ ಆ ಬದ್ಧತೆ ಇದ್ದಿದ್ದರೆ ಕಾಂಗ್ರೆಸ್‌ ಬಿಟ್ಟು ಪಕ್ಷ ರಾಜಕೀಯದಿಂದಲೇ ನಿವೃತ್ತಿ ಘೋಷಿಸಿಕೊಳ್ಳಬಹುದಿತ್ತು. ಆದರೆ, ಅಳಿಯನನ್ನು ಬಿಜೆಪಿಯ ಪೂಜೆಗಿಳಿಸಿ ತಾನು ಬಿಜೆಪಿಗೆ ಬಂದು ತಪ್ಪು ಮಾಡಿದೆನೇನೋ ಎಂದು ಆಪ್ತರಲ್ಲಿ ಹೇಳಿಕೊಳ್ಳುತ್ತಿರುವುದು ಕೂಡಾ ಬೂಟಾಟಿಕೆಯಂತೆಯೇ ಕಾಣುತ್ತಿದೆ.