samachara
www.samachara.com
ಅಂಬಿ ಸಾವಿನ ಬೆನ್ನಲ್ಲೇ ವಿಷ್ಣು ಸ್ಮಾರಕದ ಚರ್ಚೆ; ಅಭಿಮಾನ್‌, ಕಂಠೀರವ ಬೇಡವೆನ್ನಲು ಕಾರಣವೇನು?
ರಾಜ್ಯ

ಅಂಬಿ ಸಾವಿನ ಬೆನ್ನಲ್ಲೇ ವಿಷ್ಣು ಸ್ಮಾರಕದ ಚರ್ಚೆ; ಅಭಿಮಾನ್‌, ಕಂಠೀರವ ಬೇಡವೆನ್ನಲು ಕಾರಣವೇನು?

ವಿಷ್ಣುವರ್ಧನ್‌ ಮೃತಪಟ್ಟು 9 ವರ್ಷವಾಗುತ್ತಿದ್ದರೂ ಸರಕಾರ ಸ್ಮಾರಕದ ಬಗ್ಗೆ ನೀಡಿದ್ದ ಭರವಸೆ ಈಡೇರಿಸಿಲ್ಲ. ಇತ್ತ ವಿಷ್ಣು ಕುಟುಂಬಸ್ಥರು ಅಭಿಮಾನ್‌, ಕಂಠೀರವ ಸ್ಟುಡಿಯೊ ಬದಲು ಮೈಸೂರಿನಲ್ಲೇ ಸ್ಮಾರಕ ನಿರ್ಮಾಣಕ್ಕೆ ಪಟ್ಟುಹಿಡಿದಿದ್ದಾರೆ.

Team Samachara

ನಟ, ರಾಜಕಾರಣಿ ಅಂಬರೀಶ್‌ ನಿಧನದ ಬೆನ್ನಲ್ಲೇ ವಿಷ್ಣುವರ್ಧನ್‌ ಸ್ಮಾರಕದ ವಿಚಾರ ಮುನ್ನೆಲೆಗೆ ಬಂದಿದೆ. ವಿಷ್ನುವರ್ಧನ್‌ ಸಾವನ್ನಪ್ಪಿ ಮುಂದಿನ ತಿಂಗಳಿಗೆ (ಡಿ.30) 9 ವರ್ಷಗಳಾಗುತ್ತವೆ. ಹೀಗಾಗಿ ವಿಷ್ಣುವರ್ಧನ್‌ ಸ್ಮಾರಕದ ವಿಚಾರ ಅಂಬರೀಶ್ ಅಂತ್ಯಕ್ರಿಯೆಯ ಹಿಂದೆಯೇ ಚರ್ಚೆಗೆ ಬಂದಿದೆ.

ಅಂಬರೀಶ್ ಅಂತ್ಯಕ್ರಿಯೆ ನಡೆದ ಕಂಠೀರವ ಸ್ಟುಡಿಯೊದ ಆವರಣದಲ್ಲಿ ‘ಅಂಬಿ-ವಿಷ್ಣು ಸ್ಮಾರಕ’ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು. ಕಂಠೀರವ ಸ್ಟುಡಿಯೊ ಆವರಣದಲ್ಲಿ ಸ್ಮಾರಕ ನಿರ್ಮಾಣ ಬೇಡ ಎನ್ನುತ್ತಿರುವ ವಿಷ್ಣುವರ್ಧನ್‌ ಕುಟುಂಬಸ್ಥರು ಈಗ ಮೈಸೂರಿನಲ್ಲೇ ಸ್ಮಾರಕ ನಿರ್ಮಾಣವಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.

2009ರ ಡಿಸೆಂಬರ್‌ 30ರಂದು ವಿಷ್ಣುವರ್ಧನ್‌ ಮೈಸೂರಿನಲ್ಲಿ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಬೆಂಗಳೂರಿನ ಕೆಂಗೇರಿ ಬಳಿಯ ಅಭಿಮಾನ್‌ ಸ್ಟುಡಿಯೊದಲ್ಲಿ ನಡೆದಿತ್ತು. ಅಂತ್ಯಕ್ರಿಯೆ ನಡೆದ ಅಭಿಮಾನ್‌ ಸ್ಟುಡಿಯೊದಲ್ಲೇ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣಕ್ಕೆ ಸರಕಾರ ಯೋಜಿಸಿತ್ತು. ಆದರೆ, ಅಭಿಮಾನ್ ಸ್ಟುಡಿಯೊದ ಜಾಗದ ವಿಚಾರದಲ್ಲಿ ನಟ ಬಾಲಕೃಷ್ಣ ಅವರ ಕುಟುಂಬಸ್ಥರು ತಕರಾರು ತೆಗೆದ ಕಾರಣಕ್ಕೆ ಸ್ಮಾರಕ ನಿರ್ಮಾಣದ ಯೋಜನೆ ನನೆಗುದಿಗೆ ಬಿದ್ದಿತ್ತು.

ಅಭಿಮಾನ್‌ ಸ್ಟುಡಿಯೊ ಜಮೀನಿನ ತಕರಾರಿನ ಕಾರಣಕ್ಕೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರಕಾರ ಸಮ್ಮತಿಸಿತ್ತು. ಆದರೆ, ಮೈಸೂರಿನಲ್ಲೂ ಸ್ಮಾರಕ ನಿರ್ಮಾಣ ಕೇವಲ ಕಾಗದದ ಮೇಲೆ ಉಳಿದುಕೊಂಡಿದೆ. ಮೈಸೂರಿನಲ್ಲೂ ಸ್ಮಾರಕ ನಿರ್ಮಾಣದ ಜಾಗದಲ್ಲಿ ತಕರಾರು ಶುರುವಾಗಿದ್ದರಿಂದ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ಇನ್ನೂ ಕನಸಾಗಿಯೇ ಉಳಿದಿದೆ.

ವಿಷ್ಣುವರ್ಧನ್‌ ಸಾವನ್ನಪ್ಪಿ 9 ವರ್ಷವಾದರೂ ಸ್ಮಾರಕ ನಿರ್ಮಾಣ ಆಗಿಲ್ಲ ಎಂಬ ಕಾರಣಕ್ಕೆ ಈಗ ವಿಷ್ಣುವರ್ಧನ್‌ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಸ್ಮಾರಕ ನಿರ್ಮಾಣಕ್ಕೆ ಸರಕಾರದ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ. ಅಂಬರೀಶ್‌ ಸಾವಿನ ಹಿಂದೆಯೇ ಸರಕಾರ ವಿಷ್ಣುಸ್ಮಾರಕ ನಿರ್ಮಾಣ ವಿಳಂಬ ಮಾಡುತ್ತಿದೆ ಎಂಬ ದನಿ ಜೋರಾದ ಕಾರಣಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಷ್ಣುವರ್ಧನ್‌ ಕುಟುಂಬಸ್ಥರ ಮೇಲೆ ಸಿಟ್ಟಾಗಿದ್ದಾರೆ. ಆದರೆ, ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣಕ್ಕೆ ತಾವು ಬದ್ಧ ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ.

ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ಆಗುವುದಾದರೆ ಅದು ಮೈಸೂರಿನಲ್ಲೇ, ಈ ಹಿಂದೆ ತಯಾರಿಸಿರುವ ನೀಲನಕ್ಷೆಯಂತೆಯೇ ಆಗಲಿ ಎಂದು ವಿಷ್ಣುವರ್ಧನ್‌ ಪತ್ನಿ ಭಾರತಿ ಹೇಳಿದ್ದಾರೆ. ಅಭಿಮಾನ್‌ ಸ್ಟುಡಿಯೊದ ಜಾಗದ ವಿವಾದ ಸದ್ಯಕ್ಕೆ ಬಗೆಹರಿಯುವಂತಿಲ್ಲ. ಹೀಗಾಗಿ ಅವರ ಇಷ್ಟದ ಸ್ಥಳವಾದ ಮೈಸೂರಿನಲ್ಲೇ ಸ್ಮಾರಕ ನಿರ್ಮಾಣವಾಗಬೇಕು ಎಂದಿದ್ದಾರೆ ಭಾರತಿ.

“ಸರಕಾರ ಸ್ಮಾರಕ ನಿರ್ಮಾಣ ಮಾಡುವುದಾದರೆ ಮಾಡಲಿ, ಇಲ್ಲವಾದರೆ ಬೇಡ. ವಿಷ್ಣು ಅಭಿಮಾನಿಗಳ ಹೃದಯವೇ ಅವರ ಸ್ಮಾರಕ” ಎಂದಿರುವ ಭಾರತಿ ಕಂಠೀರವ ಸ್ಟುಡಿಯೊದಲ್ಲಿ ಸ್ಮಾರಕ ನಿರ್ಮಾಣಕ್ಕೆ ತಮ್ಮ ಸಮ್ಮತಿ ಇಲ್ಲ ಎಂದಿದ್ದಾರೆ. ವಿಷ್ಣುವರ್ಧನ್‌ ಅಭಿಮಾನಿಗಳ ಪೈಕಿ ಕೆಲವರು ಅಭಿಮಾನ್‌ ಸ್ಟುಡಿಯೊದಲ್ಲೇ ಸ್ಮಾರಕ ನಿರ್ಮಾಣವಾಗಲಿ ಎಂದೂ ಒತ್ತಾಯ ಮಾಡುತ್ತಿದ್ದಾರೆ. ಆದರೆ, ಇನ್ನೂ ಕೆಲ ಅಭಿಮಾನಿಗಳು ಸ್ಮಾರಕ ನಿರ್ಮಾಣ ಎಲ್ಲಾದರೂ ಆಗಲಿ, ಅಭಿಮಾನ್‌ ಸ್ಟುಡಿಯೊದಲ್ಲಿ ವಿಷ್ಣುವರ್ಧನ್‌ ಅಂತ್ಯಕ್ರಿಯೆ ನಡೆದ ಜಾಗವನ್ನು ಸರಕಾರ ಉಳಿಸಿಕೊಳ್ಳಬೇಕು ಎಂಬ ಒತ್ತಡ ತರುತ್ತಿದ್ದಾರೆ.

ಕಂಠೀರವ ಸ್ಟುಡಿಯೊ ಏಕೆ ಬೇಡ?

ವಿಷ್ಣುವರ್ಧನ್‌ ಕುಟಂಬಸ್ಥರು ಸ್ಮಾರಕ ಎಲ್ಲಾದರೂ ಆಗಲಿ, ಆದರೆ, ಕಂಠೀರವ ಸ್ಟುಡಿಯೊದಲ್ಲಿ ಮಾತ್ರ ಬೇಡ ಎನ್ನುತ್ತಿದ್ದಾರೆ. ಕಂಠೀರವ ಸ್ಟುಡಿಯೊ ಜಾಗವೂ ಬೇಡ, ಅಭಿಮಾನ್‌ ಸ್ಟುಡಿಯೊ ಜಾಗವೂ ಬೇಡ, ಮೈಸೂರಿನ ಜಾಗದ ಸಮಸ್ಯೆ ಬಗೆಹರಿಸಿ ಮೈಸೂರಿನಲ್ಲೇ ಸ್ಮಾರಕ ನಿರ್ಮಾಣ ಮಾಡಿ ಎಂದು ವಿಷ್ಣುವರ್ಧನ್‌ ಪುತ್ರಿ ಕೀರ್ತಿ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ವಿಷ್ಣುವರ್ಧನ್‌ ಸ್ಮಾರಕ ಕಂಠೀರವ ಸ್ಟುಡಿಯೊದಲ್ಲಿ ಬೇಡ ಎಂದು ವಿಷ್ಣುವರ್ಧನ್‌ ಕುಟುಂಬಸ್ಥರು ಹೇಳಲು ರಾಜ್‌ ಕುಮಾರ್‌ ಸಮಾಧಿಯೂ ಕಾರಣ ಎಂಬ ಮಾತುಗಳಿವೆ. ರಾಜ್‌ ಕುಮಾರ್‌ ಅಂತ್ಯಕ್ರಿಯೆ ನಡೆದ ಕಂಠೀರವ ಸ್ಟುಡಿಯೊದಲ್ಲಿ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ವಿಷ್ಣುವರ್ಧನ್‌ ಕುಟುಂಬ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿದೆ. ರಾಜ್‌ ಕುಮಾರ್‌ ಸಮಾಧಿ ಇದ್ದ ಕಾರಣಕ್ಕೆ ಕಂಠೀರವ ಸ್ಟುಡಿಯೊದಲ್ಲಿ ವಿಷ್ಣುವರ್ಧನ್‌ ಅಂತ್ಯಕ್ರಿಯೆ ನಡೆಸುವುದೂ ಅವರ ಕುಟುಂಬದವರಿಗೆ ಇಷ್ಟವಿರಲಿಲ್ಲ ಎಂಬ ಮಾತುಗಳೂ ಇವೆ.

ಆದರೆ, ಕಂಠೀರವ ಸ್ಟುಡಿಯೊದಲ್ಲಿ ಏಕೆ ಸ್ಮಾರಕ ನಿರ್ಮಾಣ ಬೇಡ ಎನ್ನಲು ಕಾರಣವೇನು ಎಂಬುದನ್ನು ವಿಷ್ಣುವರ್ಧನ್‌ ಕುಟುಂಬಸ್ಥರು ಸ್ಪಷ್ಟಪಡಿಸುತ್ತಿಲ್ಲ. ಒಂದು ವೇಳೆ ರಾಜ್‌ ಕುಮಾರ್ ಸ್ಮಾರಕ ಇರುವ ಕಡೆ ವಿಷ್ಣುವರ್ಧನ್‌ ಸ್ಮಾರಕ ಇರುವುದು ಬೇಡ ಎಂದೇ ವಿಷ್ಣುವರ್ಧನ್‌ ಕುಟುಂಬ ಸದಸ್ಯರು ನಿರ್ಧರಿಸಿದ್ದರೆ ಮೈಸೂರಿನಲ್ಲೇ ಸ್ಮಾರಕ ನಿರ್ಮಾಣ ಮಾಡುವುದೊಂದೇ ಸರಕಾರದ ಮುಂದಿರುವ ಆಯ್ಕೆ. ಏಕೆಂದರೆ, ಅಭಿಮಾನ್‌ ಸ್ಟುಡಿಯೊ ಜಾಗದ ವಿವಾದ ಸದ್ಯಕ್ಕಂತೂ ಮುಗಿಯುವಂಥದ್ದಲ್ಲ.