samachara
www.samachara.com
ರಾಜಧಾನಿಯಲ್ಲೂ ಹೆಚ್ಚಿದೆ ಬಾಲ್ಯವಿವಾಹ; 25% ಹೆಣ್ಣು ಮಕ್ಕಳು ಶಾಲೆ ಬಿಡಲು ಈ ಪಿಡುಗೇ ಕಾರಣ!
ರಾಜ್ಯ

ರಾಜಧಾನಿಯಲ್ಲೂ ಹೆಚ್ಚಿದೆ ಬಾಲ್ಯವಿವಾಹ; 25% ಹೆಣ್ಣು ಮಕ್ಕಳು ಶಾಲೆ ಬಿಡಲು ಈ ಪಿಡುಗೇ ಕಾರಣ!

ಅದೆಷ್ಟೋ ಬಾಲಕಿಯರು ನಗರ ಪ್ರದೇಶಗಳಲ್ಲೂ ಬಾಲ್ಯವಿವಾಹಕ್ಕೆ ಬಲಿಯಾಗಿ ತಮ್ಮ ಬಾಲ್ಯ ಕಳೆಯುವ ಮುನ್ನವೇ ಸಂಸಾರದ ಜಂಜಡದಲ್ಲಿ ಬೀಳುವ ಪರಿಸ್ಥಿತಿ ಇದೆ.

ದಯಾನಂದ

ದಯಾನಂದ

ಯಾಸ್ಮಿನ್‌ ಚೆನ್ನಾಗಿ ಓದುತ್ತಿದ್ದ ಬುದ್ಧಿವಂತ ಹುಡುಗಿ (ಹೆಸರು ಬದಲಿಸಲಾಗಿದೆ). ಓದಿನಲ್ಲಿ ತರಗತಿಗೇ ಮುಂದಿದ್ದ ಬಾಲಕಿ. ಎಂಟನೇ ತರಗತಿಯ ಪರೀಕ್ಷೆ ಬರೆದು, ರಜೆಯಲ್ಲಿ ಓರಗೆಯ ಮಕ್ಕಳೊಂದಿಗೆ ಆಟವಾಡಿಕೊಂಡಿದ್ದ ಯಾಸ್ಮಿನ್‌ಗೆ ಅಂಥ ಸಂದರ್ಭ ಬರುತ್ತದೆ ಎಂಬ ನಿರೀಕ್ಷೆಯೂ ಇರಲಿಲ್ಲ. ಹಾಸಿಗೆ ಹಿಡಿದು ಸಾವಿನ ದಿನಗಳನ್ನು ಎಣಿಸುತ್ತಿದ್ದ ಅಜ್ಜಿಗೆ ಮೊಮ್ಮಗಳನ್ನು ಮದುವೆ ದಿರಿಸಿನಲ್ಲಿ ನೋಡುವ ಆಸೆಯಾಗಿತ್ತು. ಸಾವಿನಂಚಿನಲ್ಲಿರುವ ಅಜ್ಜಿಯ ಆಸೆಯನ್ನು ತಳ್ಳಿಹಾಕುವ ಸ್ಥಿತಿಯಲ್ಲಿ ಮನೆಯವರು ಇರಲಿಲ್ಲ. ಅಜ್ಜಿಯ ಆಸೆಯನ್ನು ಈಡೇರಿಸುವ ‘ಜವಾಬ್ದಾರಿ’ ಹೊತ್ತ ಮನೆಯ ಹಿರಿಯರಿಗೆ ಎಂಟನೇ ತರಗತಿಯಲ್ಲಿ ಓದುತ್ತಿರುವ ಪುಟ್ಟ ಬಾಲಕಿಗೆ ಮದುವೆ ಮಾಡುವುದು ತಪ್ಪು ಎಂದು ಅನಿಸಲೇ ಇಲ್ಲ. ಮೆಕ್ಯಾನಿಕ್‌ ಕೆಲಸ ಮಾಡುತ್ತಿದ್ದ ಸಂಬಂಧಿ ಹುಡುಗನೊಬ್ಬನನ್ನು ಕರೆತಂದು ಯಾಸ್ಮಿನ್‌ಗೆ ಗಂಟು ಹಾಕಲು ಮುಂದಾಗೇಬಿಟ್ಟರು.

ಆದರೆ, ಯಾಸ್ಮಿನ್‌ ಅದೃಷ್ಟ ಚೆನ್ನಾಗಿತ್ತು. ಅವಳ ಮದುವೆಯ ವಿಷಯ ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯುಸಿ) ಗಮನಕ್ಕೆ ಬಂತು. ಬಾಲಕಿ ಯಾಸ್ಮಿನ್‌ಳನ್ನು ರಕ್ಷಿಸಿದ ಸಮಿತಿಯ ಸದಸ್ಯರು ಆಕೆಯ ಕುಟುಂಬ ಸದಸ್ಯರಿಗೆ ತಿಳಿಹೇಳಿ ಅವಳ ಓದನ್ನು ಮುಂದುವರಿಸಲು ಅನುವು ಮಾಡಿಕೊಟ್ಟರು. ಸದ್ಯ ಒಂದತ್ತೇ ತರಗತಿಯಲ್ಲಿ ಓದುತ್ತಿರುವ ಯಾಸ್ಮಿನ್‌ ಈಗಲೂ ತರಗತಿಗೇ ಮುಂದಿದ್ದಾಳೆ. ಬಾಲ್ಯವಿವಾಹವಾಗಿ ತಾನಿನ್ನೂ ಸರಿಯಾಗಿ ಬೆಳೆಯದ ವಯಸ್ಸಲ್ಲೇ ಮಕ್ಕಳನ್ನು ಹಡೆಯುವ ಪರಿಸ್ಥಿತಿಗೆ ಬೀಳುತ್ತಿದ್ದ ಯಾಸ್ಮಿನ್‌ ಈಗ ಶಾಲೆಯಲ್ಲಿ ತನ್ನ ಖುಷಿಯ ದಿನಗಳನ್ನು ಕಳೆಯುತ್ತಿದ್ದಾಳೆ.

ಇದು ಯಾವುದೋ ಗ್ರಾಮೀಣ ಪ್ರದೇಶದ ಹುಡುಗಿಯೊಬ್ಬಳ ಕಥೆಯಲ್ಲ. ರಾಜ್ಯ ರಾಜಧಾನಿ, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲೇ ನಡೆದಿರುವ ಪ್ರಸಂಗವೊಂದರ ತುಣುಕಿದು. ಯಾಸ್ಮಿನ್‌ಳಂಥ ಅದೆಷ್ಟೋ ಬಾಲಕಿಯರು ನಗರ ಪ್ರದೇಶಗಳಲ್ಲೂ ಬಾಲ್ಯವಿವಾಹಕ್ಕೆ ಬಲಿಯಾಗಿ ತಮ್ಮ ಬಾಲ್ಯ ಕಳೆಯುವ ಮುನ್ನವೇ ಸಂಸಾರದ ಜಂಜಡದಲ್ಲಿ ಬೀಳುವ ಪರಿಸ್ಥಿತಿ ಇದೆ. ತಲೆಯಲ್ಲಿ ಲೋಕಜ್ಞಾನ ತುಂಬಿಕೊಳ್ಳುವ ಮೊದಲೇ ಹೊಟ್ಟೆಯಲ್ಲಿ ಮಗುವನ್ನು ತುಂಬಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಇಂದು ನಗರ ಪ್ರದೇಶಗಳಲ್ಲೂ ಸಾಕಷ್ಟು ಹೆಣ್ಣು ಮಕ್ಕಳಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬರುವ ಪ್ರಕರಣಗಳನ್ನು ನೋಡಿದರೆ ಗ್ರಾಮೀಣ ಭಾಗಗಳಲ್ಲಿ ಮಾತ್ರ ಬಾಲ್ಯ ವಿವಾಹಗಳು ಹೆಚ್ಚು ನಡೆಯುತ್ತವೆ ಎಂಬ ಅಂದಾಜನ್ನೇ ಬುಡಮೇಲು ಮಾಡುವಂತಿವೆ. ಸಿಡಬ್ಲ್ಯುಸಿ ಗಮನಕ್ಕೆ ಪ್ರತಿ ತಿಂಗಳು ಸುಮಾರು ಶಾಲೆಗೆ ಮಾಹಿತಿ ನೀಡದೆ ಗೈರು ಹಾಜರಾದ ಮಕ್ಕಳ ಸುಮಾರು 80 ಪ್ರಕರಣಗಳು ಬಂದರೆ ಇವುಗಳಲ್ಲಿ 20 ಪ್ರಕರಣಗಳು ಬಾಲ್ಯ ವಿವಾಹದ ಕಾರಣಕ್ಕೆ ಶಾಲೆ ಬಿಟ್ಟ ಮಕ್ಕಳ ಪ್ರಕರಣಗಳೇ ಆಗಿವೆ. ಅಂದರೆ ರಾಜಧಾನಿಯಲ್ಲೇ ಶಾಲೆಗೆ ಗೈರಾಗುವ ಮಕ್ಕಳ ಪೈಕಿ ಶೇಕಡ 25ರಷ್ಟು ಮಕ್ಕಳು ಬಾಲ್ಯ ವಿವಾಹದ ಕಾರಣಕ್ಕೆ ಶಾಲೆಯಿಂದ ದೂರ ಉಳಿಯುತ್ತಿದ್ದಾರೆ.

ನಗರ ಪ್ರದೇಶಗಳಲ್ಲಿ ಕಾನೂನಿನ ಕಣ್ಣಿಗೆ ಮಣ್ಣೆರೆಚಿ ಬಾಲ್ಯ ವಿವಾಹಗಳು ನಡೆಯುತ್ತಿರುವುದು ದುರದೃಷ್ಟಕರ. ಓದಬೇಕಾದ ಮಕ್ಕಳನ್ನು ಬಾಲ್ಯ ವಿವಾಹದ ಪಿಡುಗಿಗೆ ದೂಡುವುದು ಯಾವ ರೀತಿಯಿಂದಲೂ ಸಮರ್ಥನೀಯವಲ್ಲ. ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಸಾಕಷ್ಟು ಕಡಿಮೆಯಾಗಿವೆ. ಬಾಲ್ಯ ವಿವಾಹವನ್ನು ತಡೆಯಲು ಕಾನೂನು ಕ್ರಮದ ಜತೆಗೆ ಜಾಗೃತಿಯೂ ಮುಖ್ಯ. ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಒಟ್ಟಾಗಿ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಸಾಧ್ಯ.
- ಜಯಮಾಲಾ ರಾಮಚಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ.

ಶಾಲೆಗೆ ಸೂಕ್ತ ಮಾಹಿತಿ ನೀಡದೇ ಗೈರಾಗುವ ಮಕ್ಕಳನ್ನು ಪತ್ತೆ ಮಾಡಿ ಶಾಲೆಗೆ ಮರಳಿ ಕರೆತರುವ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಗಳದ್ದು. ಮಾಹಿತಿ ನೀಡದೇ ಶಾಲೆಗೆ ದೀರ್ಘಾವಧಿ ಗೈರಾದ ಮಕ್ಕಳನ್ನು ಪತ್ತೆಯ ಪ್ರಯತ್ನ ಮಾಡಿಯೂ ಮಕ್ಕಳನ್ನು ಹಚ್ಚಲು ಶಾಲಾ ಆಡಳಿತ ಮಂಡಳಿಗಳಿಗೆ ಸಾಧ್ಯವಾಗದೇ ಇದ್ದಾಗ ಆ ಮಕ್ಕಳ ಮಾಹಿತಿಯನ್ನು ಕಡ್ಡಾಯವಾಗಿ ಆಯಾ ಜಿಲ್ಲಾ ವ್ಯಾಪ್ತಿಯ ಮಕ್ಕಳ ಕಲ್ಯಾಣ ಸಮಿತಿಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕು. ಹೀಗೆ ಮಾಹಿತಿ ನೀಡಲು ವಿಫಲವಾದರೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಹೀಗಾಗಿ ಇನ್ನು ಮುಂದೆ ಶಾಲೆಗೆ ಬಾರದೆ ನಾಪತ್ತೆಯಾದ ಮಕ್ಕಳ ವಿಷಯದಲ್ಲಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ.

ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕರು ಹೊರಡಿಸಿರುವ ಆದೇಶ.
ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕರು ಹೊರಡಿಸಿರುವ ಆದೇಶ.

“ಪೂರ್ವ ಮಾಹಿತಿ ನೀಡದೇ ಶಾಲೆಗೆ ಗೈರಾಗುವ ಮಕ್ಕಳ ಪತ್ತೆಗಾಗಿ ಶಾಲಾ ಸಿಬ್ಬಂದಿ ಪ್ರಯತ್ನ ನಡೆಸಿರುತ್ತಾರೆ. ಆದರೆ, ಆ ಪ್ರಯತ್ನದ ಬಳಿಕವೂ ಮಕ್ಕಳು ಹಾಗೂ ಅವರ ಪೋಷಕರು ಪತ್ತೆಯಾಗದೇ ಇದ್ದಲ್ಲಿ ಆ ವಿಷಯವನ್ನು ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತಂದರೆ ಮಕ್ಕಳನ್ನು ರಕ್ಷಿಸಲು ಸುಲಭವಾಗುತ್ತದೆ. ಹೀಗಾಗಿ ಇಂಥ ಆದೇಶವನ್ನು ಹೊರಡಿಸುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದೆವು. ಈ ಆದೇಶದಿಂದ ಮಕ್ಕಳ ಗೈರು ಹಾಜರಿಯ ವಿಚಾರದಲ್ಲಿ ಶಾಲೆಗಳ ಜವಾಬ್ದಾರಿ ಹೆಚ್ಚಾಗುತ್ತದೆ. ಬೆಂಗಳೂರಿನಲ್ಲೇ ಹಲವು ಕಾರಣಗಳಿಗಾಗಿ ಬಾಲ್ಯವಿವಾಹಗಳು ಇಂದಿಗೂ ನಡೆಯುತ್ತಿವೆ. ನಮ್ಮ ಗಮನಕ್ಕೆ ಬರುತ್ತಿರುವುದು ಶಾಲೆ ಬಿಟ್ಟ ಮಕ್ಕಳ ಪೈಕಿ ಅಂದಾಜು ಶೇಕಡ 25. ಇನ್ನು ನಮ್ಮ ಗಮನಕ್ಕೆ ಬಾರದೆ ಅದೆಷ್ಟು ಬಾಲಕಿಯರು ಬಾಲ್ಯ ವಿವಾಹಕ್ಕೆ ಬಲಿಯಾಗುತ್ತಿದ್ದಾರೋ ಗೊತ್ತಿಲ್ಲ” ಎನ್ನುತ್ತಾರೆ ಬೆಂಗಳೂರು ನಗರ ಜಿಲ್ಲಾ ಹೆಣ್ಣು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಅಂಜಲಿ ರಾಮಣ್ಣ.

“ಒಳ್ಳೆಯ ಕುಟುಂಬದ ವರ ಸಿಕ್ಕ ಎಂಬ ಕಾರಣಕ್ಕೆ, ವಯಸ್ಸಾದವರು ಸಾಯುವ ಮುನ್ನಾ ಮೊಮ್ಮಕ್ಕಳ ಮದುವೆ ನೋಡಬೇಕೆಂಬ ಆಸೆ ಈಡೇರಿಸಲು, ಲೈಂಗಿಕ ಶೋಷಣೆಗೆ ಒಳಗಾಗಿ ಬಸುರಾಗಿರುವುದನ್ನು ಮುಚ್ಚಿಡಲು ಅಥವಾ ವಯೋಸಹಜ ಆಕರ್ಷಣೆಗೆ ಒಳಗಾಗಿ ಬೇರೆ ಹುಡುಗರೊಂದಿಗೆ ಮನೆ ಬಿಟ್ಟು ಹೋದ ಕಾರಣಕ್ಕೆ ಇನ್ನೂ 18 ವರ್ಷ ತುಂಬಿರದ ಹೆಣ್ಣು ಮಕ್ಕಳನ್ನು ಮದುವೆ ಮಾಡುವ ರೂಢಿ ಬೆಂಗಳೂರಿನಲ್ಲೂ ನಡೆಯುತ್ತಿದೆ. ಬೆಂಗಳೂರಿನ ಪರಿಸ್ಥಿತಿಯೇ ಹೀಗಿರುವಾಗ ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಹೇಗಿರಬಹುದು?” ಎನ್ನುತ್ತಾರೆ ಅವರು.

“ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ ಇಲ್ಲ, ಹೋಗಿ ಬರುವ ದಾರಿ ಅಸುರಕ್ಷಿತ, ಶಾಲೆಯಲ್ಲಿ ಶೌಚಾಲಯವಿಲ್ಲ ಎಂಬ ಕಾರಣಗಳಿಗಾಗಿ ಹಲವು ಹೆಣ್ಣು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ. ಆದರೆ, ನಗರ ಪ್ರದೇಶಗಳಲ್ಲಿ ಶಾಲೆಯಿಂದ ಹೊರಗುಳಿಯಲು ಬಾಲ್ಯ ವಿವಾಹವೇ ದೊಡ್ಡ ಕಾರಣವಾಗಿ ಕಾಣುತ್ತಿದೆ. ವಿದ್ಯಾವಂತರು ಎನಿಸಿಕೊಂಡವರೂ ತಮ್ಮ ಮಕ್ಕಳ ಬಾಲ್ಯ ವಿವಾಹ ಮಾಡುತ್ತಿದ್ದಾರೆ. ಬಾಲ್ಯ ವಿವಾಹವನ್ನು ತಪ್ಪಿಸಲು ಕಾನೂನಿನ ಭಯದ ಜತಗೆ ಜಾಗೃತಿ ಮೂಡಿಸುವುದೂ ಕೂಡಾ ಮುಖ್ಯ” ಎಂಬುದು ಅಂಜಲಿ ಅವರ ಅಭಿಪ್ರಾಯ.

ಶಿಕ್ಷಣ ಇಲಾಖೆ ಹೊರಡಿಸಿರುವ ಹೊಸ ಆದೇಶದ ಪ್ರಕಾರ ಹೆಣ್ಣು ಮಕ್ಕಳ ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರ ಹೊಣೆ ದೊಡ್ಡದಾಗಿದೆ. ನಗರ ಪ್ರದೇಶವೂ ಸೇರಿದಂತೆ ಎಲ್ಲಾ ಕಡೆಯೂ ಇಂದಿಗೂ ನಡೆಯುತ್ತಲೇ ಇರುವ ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕುವ ಕಾನೂನುಬದ್ಧ ಅಮೂಲ್ಯ ಅವಕಾಶ ಹಾಗೂ ಅಧಿಕಾರ ಈಗ ಶಾಲೆಗಳು ಹಾಗೂ ಶಿಕ್ಷಕರಿಗೆ ಸಿಕ್ಕಿದೆ. ಈ ಅಧಿಕಾರವನ್ನು ಶಿಕ್ಷಕರು ಸಮರ್ಥವಾಗಿ ನಿಭಾಯಿಸಿದ್ದೇ ಆದಲ್ಲಿ ಬಾಲ್ಯ ವಿವಾಹಗಳಿಗೆ ತಕ್ಕಮಟ್ಟಿಗಾಗದರೂ ನಿಯಂತ್ರಣ ಹೇರಲು ಸಾಧ್ಯವಿದೆ.