samachara
www.samachara.com
ಮುಂದುವರಿದ ಕಾಫಿ ಬೆಳೆಗಾರರ ಸಂಕಷ್ಟ; ಬಿದ್ದಿರುವ ಮರ ಸಾಗಾಟಕ್ಕೆ ನಿರ್ಬಂಧ
ರಾಜ್ಯ

ಮುಂದುವರಿದ ಕಾಫಿ ಬೆಳೆಗಾರರ ಸಂಕಷ್ಟ; ಬಿದ್ದಿರುವ ಮರ ಸಾಗಾಟಕ್ಕೆ ನಿರ್ಬಂಧ

ಕೊಡಗಿನ ಹಲವಾರು ರಸ್ತೆಗಳಿಗೆ ಮರಳಿನ ಚೀಲಗಳನ್ನು ಇಟ್ಟು ವಾಹನ ಸಂಚಾರಕ್ಕೆಅನುವು ಮಾಡಿಕೊಡಲಾಗಿದೆ. ಈ ದುರಸ್ತಿ ಕೆಲಸ ಈಗಲೂ ನಡೆಯುತ್ತಿದೆ. ಪರಿಣಾಮ ಲಾರಿಗಳ ಸಂಚಾರ ಸದ್ಯಕ್ಕೆ ಆರಂಭವಾಗುವ ಲಕ್ಷಣ ಇಲ್ಲ.

ಕೊಡಗಿನಲ್ಲಿ ಮಳೆ ಇಳಿದು ಯಾವುದೋ ಕಾಲವಾಗಿದೆ. ಬಿರು ಬಿಸಿಲು ಜನರನ್ನು ಸುಡಲು ಆರಂಭಿಸಿದೆ. ಈ ಹಂತದಲ್ಲಿ ಸಮರೋಪಾದಿಯಲ್ಲಿ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕಾಗಿದ್ದ ಸರ್ಕಾರ ಆಮೆಗತಿಯಲ್ಲಿ ಕೆಲಸ ಮಾಡುತ್ತಿದೆ. ಆದರೆ ಸಂತ್ರಸ್ಥರ ಸಂಕಷ್ಟ ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ಮಹಾಮಳೆಯ ಭೂ ಕುಸಿತದಿಂದಾಗಿ ಕೊಡಗಿನಲ್ಲಿ ಸುಮಾರು 1,000 ದಿಂದ 1,500 ಹೆಕ್ಟೇರ್ ಗಳಷ್ಟು ಕಾಫಿ ತೋಟ ನಾಶವಾಗಿದೆ ಎಂದು ಕಾಫಿ ಮಂಡಳಿ ಅಧಿಕಾರಿಗಳು ಅಂದಾಜಿಸಿದ್ದಾರೆ. ನಷ್ಟ ಪರಿಹಾರ ಕೋರಿ ಸುಮಾರು 30 ಸಾವಿರಕ್ಕೂ ಮಿಕ್ಕಿ ಅರ್ಜಿಗಳು ಸಲ್ಲಿಕೆಯಾಗಿದ್ದು ಪರಿಹಾರ ಧನವನ್ನು ಇನ್ನಷ್ಟೇ ವಿತರಿಸಬೇಕಾಗಿದೆ. ಈ ಸಂಕಷ್ಟದ ಸಮಯದಲ್ಲಿ ಭೆಳೆಗಾರರಿಗೆ ಸ್ವತಃ ಸರ್ಕಾರದಿಂದಲೇ ಇನ್ನೊಂದು ತೊಂದರೆ ಎದುರಾಗಿದೆ.

ಭೂ ಕುಸಿತದಿಂದಾಗಿ ಬೆಟ್ಟ ಗುಡ್ಡಗಳೇ ಕುಸಿದಿದ್ದು ಮಣ್ಣಿನಡಿಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಗಳೂ ಸಿಲುಕಿವೆ. ಕಾಫಿ ಗಿಡಗಳು, ಮನೆಗಳ ಸಹಿತ ಮಣ್ಣಿನಡಿಯಲ್ಲೇ ಈ ಮರಗಳೂ ಹುದುಗಿ ಹೋಗಿದ್ದು, ಇದನ್ನು ಹೊರತೆಗೆದು ಮಾರಾಟ ಮಾಡಿದರೆ ಬೆಳೆಗಾರರಿಗೆ ಅಲ್ಪ ಆದಾಯವಾದರೂ ಲಭಿಸಲಿದೆ. ಆದರೆ ಜಿಲ್ಲಾಡಳಿತ ರಸ್ತೆಗಳಲ್ಲಿ ಮರ ಸಾಗಾಟದ ಲಾರಿಗಳ ಸಂಚಾರಕ್ಕೆ ನಿರ್ಬಂಧ ಹೇರಿರುವುದರಿಂದ ಮರಗಳನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ.

ಮಡಿಕೇರಿಯಿಂದ ಮಂಗಳೂರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹತ್ತಾರು ಕಡೆ ಭೂ ಕುಸಿತ ಉಂಟಾಗಿದ್ದು ಈ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸೋಮವಾರಪೇಟೆ -ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ 6 ಕಡೆ ರಸ್ತೆ ಕುಸಿದಿದ್ದು ಇಲ್ಲಿ ಬಸ್ ಗಳು ಸಂಚರಿಸುತ್ತಿವೆಯಾದರೂ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಹೀಗೆ ಜಿಲ್ಲೆಯಾದ್ಯಂತ ಭಾರೀ ವಾಹನಗಳ ಓಡಾಟಕ್ಕೆ ನಿರ್ಬಂಧವಿದೆ.

ಮಳೆ ಮುಗಿದ ಬಳಿಕ ಕೊಡಗಿನ ಹಲವಾರು ರಸ್ತೆಗಳಿಗೆ ಮರಳಿನ ಚೀಲಗಳನ್ನು ಇಟ್ಟು ವಾಹನ ಸಂಚಾರಕ್ಕೆಅನುವು ಮಾಡಿಕೊಡಲಾಗಿತ್ತು. ಈ ದುರಸ್ತಿ ಕೆಲಸ ಈಗಲೂ ನಡೆಯುತ್ತಿದೆ. ಪರಿಣಾಮ ಲಾರಿಗಳ ಸಂಚಾರ ಸದ್ಯಕ್ಕೆ ಆರಂಭವಾಗುವ ಲಕ್ಷಣ ಇಲ್ಲ.

“ಕಾಫಿ ಬೆಳೆ ನಾಶವಾಗಿದೆ. ಜತೆಗೆ ಕಿತ್ತಲೆ ಮತ್ತು ಕರಿಮೆಣಸೂ ನಾಶವಾಗಿದೆ. ಈ ಸಂಧಿಗ್ಧ ಸಂದರ್ಭದಲ್ಲಿ ಮಣ್ಣಿನಡಿ ಹುದುಗಿರುವ ನೂರಾರು ಮರಗಳು ಹಾಳಾಗುತ್ತಿವೆ. ಭೂಮಿ ಕುಸಿಯದಿದ್ದರೆ ಈ ಮರಗಳು ಇನ್ನಷ್ಟು ವರ್ಷ ಹಾಗೇ ಬೆಳೆದು ಬೆಳೆಗಾರ ಇಚ್ಚಿಸಿದಾಗ ಕಡಿದು ಮಾರಿ ಆದಾಯ ಗಳಿಸಬಹುದಿತ್ತು. ಆದರೆ ಮರಗಳು ಧರೆಗುರುಳಿ ಬೆಳೆಗಾರನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಹೀಗಿರುವಾಗ ಬಿದ್ದಿರುವ ಮರಗಳನ್ಣು ಸಾಗಿಸದಂತೆ ನಿರ್ಬಂಧ ಹೇರುವುದು ಎಷ್ಟು ಸರಿ,” ಎಂದು ಪ್ರಶ್ನಿಸುತ್ತಾರೆ ಸೋಮವಾರಪೇಟೆ ತಾಲೂಕು ಬಿಳಿಗೇರಿ ಗ್ರಾಮದ ಕಾಫಿ ಬೆಳೆಗಾರ ಎಂ.ಏ. ಶ್ಯಾಂ ಪ್ರಸಾದ್. ಮಣ್ಣಿನಡಿ ಇರುವ ಮರಗಳನ್ನು ತೆಗೆಯಲೂ ಜೆಸಿಬಿ ತಂದು ಸಾವಿರಗಟ್ಟಲೆ ರೂಪಾಯಿ ಖರ್ಚು ಮಾಡಬೇಕಿದೆ. ಹೀಗಿರುವಾಗ ನಿರ್ಬಂಧವನ್ನು ಕೂಡಲೇ ಹಿಂಪಡೆಯಬೇಕು ಎನ್ನುತ್ತಾರೆ ಅವರು.

ಮಣ್ಣಿನಡಿಯಲ್ಲಿ ಸಿಲುಕಿರುವ ಮರಗಳು. 
ಮಣ್ಣಿನಡಿಯಲ್ಲಿ ಸಿಲುಕಿರುವ ಮರಗಳು. 

ನಿರ್ಬಂಧವನ್ನು ಹಿಂಪಡೆಯುವ ಹೊತ್ತಿಗೆ ಮರಗಳು ಕುಂಬಾಗಿ ಹೋಗಲಿವೆ ಎಂಬ ಆತಂಕ ಬೆಳೆಗಾರರಲ್ಲಿದೆ. “ಮರಗಳು ಕೊಂಬೆ ಸಹಿತ ಮಣ್ಣಿನಡಿ ಹುದುಗಿರುವುದರಿಂದ ವರ್ಷದಲ್ಲಿಯೇ ಕುಂಬಾಗಿ ಹೋಗಲಿದೆ. ಇನ್ನು ಮುಂದಿನ ಮಳೆಗಾಲಕ್ಕೆ 8 ತಿಂಗಳು ಬಾಕಿ ಇದ್ದು ಅಷ್ಟರಲ್ಲಿ ಮರಗಳನ್ನು ಹೊರತೆಗೆದು ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಹೊರಜಿಲ್ಲೆಗೆ ಸಾಗಿಸಬೇಕಿದೆ. ಆದರೆ ‘ಜಿಲ್ಲೆಯಲ್ಲಿ ಟಿಂಬರ್ ಮಾಫಿಯಾ’ ಎಂದು ಪ್ರಚಾರ ನೀಡಿದ್ದರಿಂದಾಗಿ ಮರಗಳ ಸಾಗಾಟಕ್ಕೆ ನಿರ್ಬಂಧ ವಿಧಿಸಲಾಗಿದೆ,” ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ ತಾಲೂಕು ಸೌದೆ ವ್ಯಾಪಾರಿಗಳ ಸಂಘದ ಮುಖಂಡ ಎಂ. ಮಧು.

ಈ ಸಂಬಂಧ ಶುಕ್ರವಾರ ಮಡಿಕೇರಿಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರನ್ನು ಮರವರ್ತಕರ ನಿಯೋಗ ಭೇಟಿಯಾಗಿ ಮರಗಳ ಸಾಗಾಟಕ್ಕೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದೆ. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರ ಜತೆಗೆ ಸ್ವಲ್ಪ ಸಮಯದಲ್ಲೇ ಲಾರಿಗಳ ಓಡಾಟಕ್ಕೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಹೇಳಿದ್ದಾರೆ.

‘ಸಮಾಚಾರ’ದ ಜತೆ ಮಾತನಾಡಿದ ಅವರು, ಜಿಲ್ಲೆಯ ರಸ್ತೆಗಳನ್ನು ಈಗಷ್ಟೇ ರಿಪೇರಿ ಮಾಡಲಾಗುತ್ತಿದ್ದು ಅನೇಕ ಕಡೆಗಳಲ್ಲಿ ರಸ್ತೆ 12 ಅಡಿ ಮಾತ್ರ ಅಗಲವಿದೆ. ಒಂದೊಮ್ಮೆ ಇದೇ ರಸ್ತೆಗಳಲ್ಲಿ ಭಾರೀ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟರೆ ರಸ್ತೆ ಪುನಃ ಕುಸಿಯಲಿದೆ. ಹೀಗಾಗಿ ಸ್ವಲ್ಪ ಸಮಯ ಕಳೆದ ನಂತರ ರಸ್ತೆಗಳ ಸ್ಥಿತಿ ನೋಡಿ, ಅನುಮತಿ ಕೊಡಲಾಗುವುದು,” ಎಂದರು. ಎಲ್ಲಿಯಾದರು ರಸ್ತೆಗಳು ಮತ್ತೆ ಕುಸಿದರೆ ವಾರಗಟ್ಟಲೆ ಬಂದ್ ಮಾಡಬೇಕಾಗುತ್ತದೆ. ಇದರಿಂದ ಸಾವು ನೋವು ಸಂಭವಿಸುವ ಅಪಾಯವೂ ಇದೆ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಕಾಫಿ ಬೆಳೆಗಾರರು ತಾವು ನೆಟ್ಟು ಬೆಳೆಸಿ ಸಂರಕ್ಷಿಸಿದ ಮರಗಳನ್ನು ಮಾರಾಟ ಮಾಡಲೂ ಕೂಡ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.