ಕುಸಿದ ಕೊಡಗಿನಲ್ಲಿ ಪರಿಹಾರ ವಿಳಂಬ; ಸಂತ್ರಸ್ತರಿಗೆ ನೀಡಿದ್ದ ‘ಮಾತು ಮರೆತ’ ಸರಕಾರ
ರಾಜ್ಯ

ಕುಸಿದ ಕೊಡಗಿನಲ್ಲಿ ಪರಿಹಾರ ವಿಳಂಬ; ಸಂತ್ರಸ್ತರಿಗೆ ನೀಡಿದ್ದ ‘ಮಾತು ಮರೆತ’ ಸರಕಾರ

ಕೊಡಗಿನಲ್ಲಿ ಪುನರ್‌ ನಿರ್ಮಾಣ ಕಾರ್ಯ ಆರಂಭಿಸಲು ಸರಕಾರ ಆಸಕ್ತಿ ತೋರುತ್ತಿಲ್ಲ. ಇದಕ್ಕೂ ಕೊಡಗಿನ ಜನತೆ ಪ್ರತಿಭಟನೆಯನ್ನೇ ಮಾಡಬೇಕೆ ಎಂಬುದು ಈಗಿನ ಪ್ರಶ್ನೆ.

ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಸರಕಾರ ಮತ್ತು ಜನಪ್ರತಿನಿಧಿಗಳು ಕೂಡಲೇ ಸ್ಥಳಕ್ಕೆ ತೆರಳಿ ನೊಂದವರಿಗೆ ಸಾಂತ್ವನ ಹೇಳುವುದು, ಪರಿಹಾರ ಘೋಷಿಸುವುದು ಮತ್ತು ಭರವಸೆಗಳನ್ನು ಕೊಡುವುದು ಸಾಮಾನ್ಯ. ಹೀಗೆ ನೀಡಿದ ಭರವಸೆಗಳನ್ನು ಮರೆಯದೆ ಈಡೇರಿಸಬೇಕಾದ್ದು ಭರವಸೆ ಕೊಟ್ಟವರ ಕರ್ತವ್ಯ. ಆದರೆ, ನೀಡಿದ ಭರವಸೆಗಳನ್ನೇ ಜನಪ್ರತಿನಿಧಿಗಳು ಮರೆತರೆ?

ಮತ್ತೊಂದೆಡೆ ಮನೆ ಕಳೆದುಕೊಂಡಿರುವವರಿಗೆ ಮನೆಯನ್ನು ಶೀಘ್ರದಲ್ಲಿ ಕಟ್ಟಿ ಕೊಡುವುದಾಗಿ ಭರವಸೆ ನೀಡಿ ಹೋಗಿರುವ ಮುಖ್ಯಮಂತ್ರಿಗಳು ಮತ್ತು ಇತರ ಜನ ಪ್ರತಿನಿಧಿಗಳು ಮನೆ ಕಟ್ಟಿ ಕೊಡುವ ಆಸಕ್ತಿ ತೋರುತ್ತಿಲ್ಲ. ಜಿಲ್ಲಾಡಳಿತ ಈಗಾಗಲೇ 50 ಎಕರೆ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದೆಯಾದರೂ ನಿರ್ಮಾಣ ಕಾರ್ಯ ಮಾತ್ರ ಆರಂಭಗೊಂಡಿಲ್ಲ.

ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲೆಂದೇ ರಾಜ್ಯ ಸರ್ಕಾರ ನೇಮಕ ಮಾಡಿಕೊಂಡಿರುವ ಪುನರ್ವಸತಿ ಜಿಲ್ಲಾಧಿಕಾರಿ ಎಂ.ಕೆ. ಜಗದೀಶ್ ಅವರನ್ನು ಸಂಪರ್ಕಿಸಿದಾಗ, “ದುರಂತದಲ್ಲಿ ಮನೆಗಳನ್ನು ಕಳೆದುಕೊಂಡಿರುವ 847 ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ಮಡಿಕೇರಿ ತಾಲ್ಲೂಕಿನ ಗಾಳಿಬೀಡು, ನಿಡುಗಣೆ, ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದಲ್ಲಿ ನಿವೇಶನ ಗುರ್ತಿಸಲಾಗಿದ್ದು ಭೂಮಿಯನ್ನು ಸಮತಟ್ಟು ಮಾಡಲಾಗಿದೆ ಮತ್ತು ಮನೆ ನಿರ್ಮಾಣ ಮಾಡಲು ಪ್ರಸ್ತಾವನೆಯನ್ನೂ ಕಳಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಜಿಲ್ಲೆಯಲ್ಲಿ ಶೀಘ್ರ ಪುನರ್ವಸತಿಗಾಗಿ ಕೊಡಗು ಪುನರ್‌ ನಿರ್ಮಾಣ ಪ್ರಾಧಿಕಾರ ರಚಿಸಬೇಕೆಂಬ ಕೋರಿಕೆಗೆ ಮಡಿಕೇರಿಗೆ ಬಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದರು. ಆದರೆ, ಇನ್ನೂ ಮಂಡಳಿ ರಚನೆಯಾಗಿಲ್ಲ.

ಸರಕಾರ ಟೆಂಡರ್ ಕರೆದು ಮನೆಗಳ ನಿರ್ಮಾಣ ಕಾರ್ಯ ಮಾಡಬೇಕಿದೆ, ನಿರ್ಮಾಣ ಕಾರ್ಯಕ್ಕೆ ಕನಿಷ್ಠ ಆರು ತಿಂಗಳುಗಳಾದರೂ ಹಿಡಿಯಲಿದೆ. ಹೀಗಾಗಿ ಮುಂದಿನ ಮಳೆಗಾಲದ ಒಳಗೂ ಸಂತ್ರಸ್ತರಿಗೆ ಮನೆ ಹಂಚಿಕೆ ಮಾಡುವುದು ಅನುಮಾನವೇ.

Also read: ಕೊಡಗು ಮರು ನಿರ್ಮಾಣಕ್ಕೆ ಸರಕಾರದ ಮುಂದೆ 19 ಆಗ್ರಹಗಳು

ಈ ಕುರಿತು ‘ಸಮಾಚಾರ’ದೊಂದಿಗೆ ಮಾತನಾಡಿದ ಮಾದಾಪುರದ ಸಂತ್ರಸ್ತ ಜಗ್ಗಾರಂಡ ಕಾವೇರಪ್ಪ, “ನಾವು ಈಗ ತಿಂಗಳಿಗೆ 3,500 ರೂಪಯಿ ಕೊಟ್ಟು ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ಸಣ್ಣ ಕಾಫಿ ಬೆಳೆಗಾರನಾಗಿದ್ದ ನಾನು ವಿಕೋಪದಲ್ಲಿ ಮನೆ ತೋಟೆ ಎಲ್ಲವನ್ನೂ ಕಳೆದುಕೊಂಡೆ. ಈಗ ಕುಶಾಲನಗರದಲ್ಲಿ ಬಾಡಿಗೆ ಮನೆಯಲ್ಲಿದ್ದು ಚಿನ್ನದಂಗಡಿಯಲ್ಲಿ ಗನ್ ಮ್ಯಾನ್ ಆಗಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ” ಎಂದರು.

“ನೆಂಟರ ಮನೆಯಲ್ಲಿ ಎರಡು ತಿಂಗಳು ಇದ್ದೆವು. ಎಷ್ಟು ದಿನ ಅಲ್ಲಿರುವುದಕ್ಕೆ ಆಗುತ್ತದೆ. ಸರಕಾರ ಮನೆ ಕಟ್ಟಿ ಕೊಟ್ಟ ಕೂಡಲೇ ಅಲ್ಲಿಗೆ ತೆರಳುತ್ತೇವೆ. ಸರಕಾರ ಆದಷ್ಟು ಬೇಗ ಮನೆ ನಿರ್ಮಿಸಿಕೊಡಬೇಕು” ಎಂದು ಅವರ ಪತ್ನಿ ಫ್ಯಾನ್ಸಿ ಕಣ್ಣೀರಾದರು.

“ಮಕ್ಕಳಿಬ್ಬರೂ ಹೊರಗಡೆ ಓದುತಿದ್ದು ಅವರಿಗಾಗಿ ದುಡಿಯಲೇ ಬೇಕಿದೆ” ಎಂದ ಕಾವೇರಪ್ಪ ಬರುವ ಅಲ್ಪ ಸಂಬಳದಲ್ಲಿ ಬಾಡಿಗೆ ಮನೆಯಲ್ಲಿರಲು ಆಗುತ್ತಿಲ್ಲ ಸರ್ಕಾರ ಭರವಸೆ ನೀಡಿದಂತೆ ಕೂಡಲೇ ಮನೆ ಕಟ್ಟಿ ಕೊಡಲಿ ಎಂದು ಆಗ್ರಹಿಸಿದರು.

ಸೋಮವಾರಪೇಟೆಯಲ್ಲಿ ಮಾತನಾಡಿದ ಸಂಸದ ಪ್ರತಾಪಸಿಂಹ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ 200 ಕೋಟಿ ರೂಪಾಯಿ ಹರಿದು ಬಂದಿದೆ. ಇದಕ್ಕೆ ನೂರು ಕೋಟಿ ಸೇರಿಸಿ 300 ಕೋಟಿಗಳನ್ನು ಪುನರ್‌ ನಿರ್ಮಾಣ ಪ್ರಾಧಿಕಾರ ಕ್ಕೆ ನೀಡಿ ಕೂಡಲೇ ನಿರ್ಮಾಣ ಕಾರ್ಯ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ದಾನಿಗಳ ನೆರವಿನಿಂದ ತಾವೂ ಕೂಡ ತಲಾ 10 ಲಕ್ಷ ರೂಪಾಯಿ ವೆಚ್ಚದ 500 ಮನೆಗಳನ್ನು ನಿರ್ಮಿಸುವುದಾಗಿಯೂ ಭರವಸೆ ನೀಡಿದ್ದಾರೆ.

ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಅವರು 25 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮನೆ ನಿರ್ಮಿಸುವುದಾಗಿಯೂ ಹೇಳಿದ್ದಾರೆ. ದಾನಿಗಳು ಉದಾರವಾಗಿ ನೀಡಿರುವ 200 ಕೋಟಿ ರೂಪಾಯಿಯೂ ಸರ್ಕಾರದ ಬಳಿ ಇದೆ. ಆದರೆ, ಮನೆ ನಿರ್ಮಾಣ ಕಾರ್ಯ ಆರಂಭಿಸಲು ಸರಕಾರ ಆಸಕ್ತಿ ತೋರುತ್ತಿಲ್ಲ. ಇದಕ್ಕೂ ಕೊಡಗಿನ ಜನತೆ ಪ್ರತಿಭಟನೆಯನ್ನೇ ಮಾಡಬೇಕೆ ಎಂಬುದು ಈಗಿನ ಪ್ರಶ್ನೆ.