samachara
www.samachara.com
ಲೋಡು ಚಿನ್ನ, ಕಂತೆ ಕಂತೆ ನೋಟು: ಸರಕಾರಿ ಅಧಿಕಾರಿಗಳೇಕೆ ಪರಮ ಭ್ರಷ್ಟರಾಗುತ್ತಿದ್ದಾರೆ?
ರಾಜ್ಯ

ಲೋಡು ಚಿನ್ನ, ಕಂತೆ ಕಂತೆ ನೋಟು: ಸರಕಾರಿ ಅಧಿಕಾರಿಗಳೇಕೆ ಪರಮ ಭ್ರಷ್ಟರಾಗುತ್ತಿದ್ದಾರೆ?

ಸಮಸ್ಯೆ ಏನು ಎಂಬುದು ಎಲ್ಲರಿಗೂ ಗೊತ್ತು. ಇದರ ಪರಿಣಾಮಗಳೇನು ಎಂಬುದು ಸಾಮಾನ್ಯ ಜ್ಞಾನ ಇದ್ದವರ ಅರಿವಿಗೆ ಬಂದಾಗಿದೆ. ಆದರೆ ಪರಿಹಾರ ಏನು ಎಂಬುದರ ಬಗ್ಗೆ ಮಾತ್ರ ಆಲೋಚನೆ ಮಾಡುವುದಿಲ್ಲ. ಯಾಕೆ?

ದಯಾನಂದ

ದಯಾನಂದ

ಸರಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ಸಂಪತ್ತು ಗಳಿಕೆಯ ದುರಾಸೆಯ ಪಟ್ಟಿಯಲ್ಲಿ ಹೊಸ ಹೊಸ ದಾಖಲೆಗಳು ದಾಖಲಾಗುತ್ತಲೇ ಇವೆ. ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಇಬ್ಬರು ಹಿರಿಯ ಅಧಿಕಾರಿಗಳ ಮನೆಗಳ ಮೇಲೆ ನಡೆಸಿದ ದಾಳಿ ವೇಳೆ ಕೆ.ಜಿ.ಗಟ್ಟಲೆ ಚಿನ್ನ, ಲಕ್ಷಾಂತರ ರೂಪಾಯಿ ನಗದು ಹಾಗೂ ಹತ್ತಾರು ನಿವೇಶನ, ಜಮೀನಿನ ದಾಖಲೆ ಪತ್ರಗಳು ಪತ್ತೆಯಾಗಿವೆ ಎಂಬುದು ಇದಕ್ಕೆ ಸಾಕ್ಷಿ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎಂಜಿನಿಯರ್‌ ಅಧಿಕಾರಿ-5 ಎನ್‌.ಜಿ. ಗೌಡಯ್ಯ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌. ಸ್ವಾಮಿ ಮನೆಗಳ ಮೇಲೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದರು. ದಾಳಿ ವೇಳೆ ಪತ್ತೆಯಾಗಿರುವ ಒಟ್ಟು ಸಂಪತ್ತಿನ ಮೌಲ್ಯವನ್ನು ಎಸಿಬಿ ಅಧಿಕಾರಿಗಳು ಇನ್ನೂ ನಿಖರವಾಗಿ ಲೆಕ್ಕಹಾಕಲು ಆಗಿಲ್ಲ.

ಗೌಡಯ್ಯ ಮನೆಯಲ್ಲಿ ಸುಮಾರು 18.2 ಕೆ.ಜಿ. ಚಿನ್ನ ಹಾಗೂ 77 ಲಕ್ಷ ರೂಪಾಯಿ ನಗದು ಹಾಗೂ ಮಲ್ಲೇಶ್ವರದ ಮಂತ್ರಿ ಅಪಾರ್ಟ್‌ಮೆಂಟ್‌ನಲ್ಲಿರುವ ಟಿ.ಆರ್. ಸ್ವಾಮಿ ಫ್ಲ್ಯಾಟ್‌ನಲ್ಲಿ 1.6 ಕೆ.ಜಿ. ಚಿನ್ನ ಪತ್ತೆಯಾಗಿತ್ತು. ಎಸಿಬಿ ಅಧಿಕಾರಿಗಳು ದಾಳಿ ನಡೆದ ಸಂದರ್ಭದಲ್ಲಿ ಸ್ವಾಮಿ ಕಿಟಕಿಯಿಂದ ಹಣ ಹಾಗೂ ದಾಖಲೆಗಳನ್ನು ಹೊರಗೆ ಎಸೆದಿದ್ದಾರೆ ಎಂದು ಎಸಿಬಿ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಕಿಟಕಿಯಿಂದ ಹಣವನ್ನು ಹೊರಗೆ ಚೆಲ್ಲಿಯೂ ಸ್ವಾಮಿ ಮನೆಯಲ್ಲಿ 4.52 ಕೋಟಿ ನಗದು ಸಿಕ್ಕಿದೆ.

ಈ ಹೊತ್ತು ಸಂಪತ್ತಿನ ಗಳಿಕೆಯಲ್ಲಿ ಸರಕಾರದಲ್ಲಿರುವ ಯಾವ ಅಧಿಕಾರಿಗಳೂ ಹಿಂದೆ ಉಳಿದಿಲ್ಲ. ಜವಾನನಿಂದ ಹಿಡಿದು ಕಾರ್ಯದರ್ಶಿ ಮಟ್ಟದವರೆಗೆ ಬಹುಪಾಲು ಸರಕಾರಿ ನೌಕರರು ಸಾಧ್ಯವಾದಷ್ಟೂ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಇವರಿಗೆ ಹಾಗೂ ಸರಕಾರಿ ವ್ಯವಸ್ಥೆಗೇ ಅಪವಾದ ಎಂಬಂತೆ ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಪ್ರಾಮಾಣಿಕ ಅಧಿಕಾರಿಗಳು ಇದ್ದಾರೆ. ಅವರ ಸಂಖ್ಯೆ ತುಂಬಾ ಕಡಿಮೆ.

‘ಸರಕಾರದ ಕೆಲಸ ದೇವರ ಕೆಲಸ’ ಎಂಬ ಘೋಷಣೆಯನ್ನು ವಿಧಾನಸೌಧದ ಹಣೆಗೆ ಅಂಟಿಸಿರುವ ಈ ವ್ಯವಸ್ಥೆ ಜನರನ್ನು ಸುಲಿಗೆ ಮಾಡಲೇ ನಿಂತಿರುವಂತಿದೆ. ಸರಕಾರಿ ಕಚೇರಿಗಳಲ್ಲಿ ಹಣ ಬಿಚ್ಚದೆ ಯಾವ ಕೆಲಸವೂ ನಡೆಯುವುದಿಲ್ಲ. ಕೆಳಹಂತದ ಅಧಿಕಾರಿ ಕಡಿಮೆ ಭ್ರಷ್ಟನಾಗಿದ್ದರೆ, ಮೇಲಿನ ಹಂತದ ಅಧಿಕಾರಿ ಹೆಚ್ಚು ಭ್ರಷ್ಟನಾಗಿರುತ್ತಾನೆ. ಒಟ್ಟಿನಲ್ಲಿ ಎಲ್ಲರೂ ಅವರವರ ಮಟ್ಟದಲ್ಲಿ ಎಷ್ಟು ಸಾಧ್ಯವೋ ಅಷ್ಟು ಭ್ರಷ್ಟರೇ.

ಸರಕಾರಿ ಅಧಿಕಾರಿಗಳು ಯಾಕೆ ಇಷ್ಟೋಂದು ಭ್ರಷ್ಟರಾಗುತ್ತಾರೆ ಎಂದರೆ ಅವರು ಸರಕಾರಿ ವ್ಯವಸ್ಥೆಗೆ ಬರುವುದೇ ಭ್ರಷ್ಟಾಚಾರದ ಮಾರ್ಗದ ಮೂಲಕ. ಗುಮಾಸ್ತನ ಹುದ್ದೆಗೂ ಲಕ್ಷಾಂತರ ರೂಪಾಯಿ ಲಂಚ ಕೊಟ್ಟು ಸರಕಾರಿ ಸೇವೆಗೆ ಬರುವವರು ತಾವು ಹಾಕಿದ ಹಣವನ್ನು ಗಳಿಸಲು ಭ್ರಷ್ಟಾಚಾರದ ಹಾದಿಯನ್ನೇ ಹಿಡಿಯುತ್ತಾರೆ. ಸುಮಾರು 100 ಗುಮಾಸ್ತ ಹುದ್ದೆಗಳಿಗೆ ಅರ್ಜಿ ಕರೆದರೆ ಲಕ್ಷಾಂತರ ಜನ ಅಭ್ಯರ್ಥಿಗಳು ಅರ್ಜಿ ಹಾಕುವ ಪರಿಪಾಠ ಇಂದಿಗೂ ಇದೆ. ಪಿಎಚ್‌ಡಿ ಮಾಡಿರುವವರೂ ಜವಾನ ಹುದ್ದೆಗೆ ಅರ್ಜಿ ಹಾಕುವ ಮಟ್ಟಕ್ಕೆ ನಮ್ಮಲ್ಲಿ ಸರಕಾರಿ ಹುದ್ದೆಯ ಆಕಾಂಕ್ಷಿಗಳಿದ್ದಾರೆ. ಇದಕ್ಕೆ ಕಾರಣ ಸರಕಾರಿ ಕೆಲಸ ಸಿಕ್ಕರೆ ಹೇಗಾದರೂ ದುಡ್ಡು ಮಾಡಬಹುದು ಎಂಬುದು.

“ಕಾಯುವುದಾದರೆ ಸರಕಾರದ ಕತ್ತೆಯನ್ನೇ ಕಾಯಬೇಕು, ಗುಡಿಸುವುದಾದರೆ ಸರಕಾರದ ಕಸವನ್ನೇ ಗುಡಿಸಬೇಕು” ಎಂಬಂಥ ಮನಸ್ಥಿತಿ ಬಹುತೇಕ ಸರಕಾರಿ ಉದ್ಯೋಗಾಕಾಂಕ್ಷಿಗಳಲ್ಲಿದೆ. ಹೇಗಾದರೂ ಸರಿ ಒಮ್ಮೆ ಸರಕಾರದ ಕೆಲಸಕ್ಕೆ ಸೇರಿ ಬಿಟ್ಟರೆ ಅಧಿಕಾರ ಇರುವಷ್ಟು ದಿನ ಹಣವನ್ನು ಗುಡಿಸಿ ಗುಡ್ಡೆ ಹಾಕುವುದೇ ಸರಕಾರಿ ನೌಕರರ ಗುರಿ ಎಂಬಂತಾಗಿದೆ. ಲಂಚ ಕೊಟ್ಟು ಕೆಲಸಕ್ಕೆ ಸೇರುವವರು ಲಂಚಕ್ಕಾಗಿ ಕೈ ಒಡ್ಡುವುದು ಮಾಮೂಲು. ಸಣ್ಣ ಅಧಿಕಾರಿಗಳು ಜನಸಾಮಾನ್ಯರಲ್ಲಿ ಕೈ ಚಾಚಿದರೆ ದೊಡ್ಡ ಅಧಿಕಾರಿಗಳು ದೊಡ್ಡ ಜನರಲ್ಲಿ ಕೈ ಚಾಚುತ್ತಾರೆ.

ದುರಾಸೆ ಹಾಗೂ ಕುಠಿಲತೆಯ ಮನಸ್ಥಿತಿಯೇ ಭ್ರಷ್ಟಾಚಾರಕ್ಕೆ ಮೂಲ. ದುರಾಸೆಗೆ ಕೊನೆ ಎಲ್ಲಿದೆ?, ಹೀಗಾಗಿ ಯಾವ ಮಾರ್ಗದಲ್ಲಾದರೂ ಸರಿ ಎಷ್ಟು ಸಾಧ್ಯವೋ ಅಷ್ಟು ಹಣ, ಆಸ್ತಿ ಮಾಡಿಕೊಳ್ಳಲು ಭ್ರಷ್ಟ ಅಧಿಕಾರಿಗಳು ಮುಂದಾಗಿದ್ದಾರೆ. ಕಡು ಭ್ರಷ್ಟ ಅಧಿಕಾರಿಗಳಿಗೆ ಗಾಡ್‌ಫಾದರ್‌ಗಳು ಇರುತ್ತಾರೆ. ಆ ಗಾಡ್‌ಫಾದರ್‌ಗಳು ತಮ್ನನ್ನು ರಕ್ಷಿಸುತ್ತಾರೆ ಎಂಬ ಧೈರ್ಯದ ಮೇಲೆ ಈ ಅಧಿಕಾರಿಗಳು ಹೆಚ್ಚುಚ್ಚು ಭ್ರಷ್ಟಾಚಾರ ಮಾಡುತ್ತಾ ಹೋಗುತ್ತಾರೆ.
-ಎಸ್‌.ಆರ್‌. ಹಿರೇಮಠ್‌, ಸಾಮಾಜಿಕ ಕಾರ್ಯಕರ್ತ

ಹಿರೇಮಠ್‌ ಹೇಳುವ ಇಂಥ ಗಾಡ್‌ಫಾದರ್‌ಗಳು ಹಿರಿಯ ಅಧಿಕಾರಿಗಳಾದರೂ ಆಗಿರಬಹುದು ಅಥವಾ ರಾಜಕಾರಣಿಗಳಾದರೂ ಆಗಿರಬಹುದು. ಯಾವ ಇಲಾಖೆಯಲ್ಲಿ ಹೆಚ್ಚು ಹಣ ಮಾಡಲು ಅವಕಾಶವಿದೆಯೋ ಆ ಇಲಾಖೆಗೆ ಈ ಗಾಡ್‌ಫಾದರ್‌ಗಳ ಮೂಲಕ ಎಂಟ್ರಿ ಪಡೆಯುವ ಕಡು ಭ್ರಷ್ಟ ಅಧಿಕಾರಿಗಳು ಅಲ್ಲಿ ಎಷ್ಟು ದೋಚಲು ಸಾಧ್ಯವೋ ಅಷ್ಟು ದೋಚುವುದನ್ನೇ ಉದ್ದೇಶವಾಗಿಸಿಕೊಂಡಿರುತ್ತಾರೆ.

“ಕೆಳಗಿನ ಅಧಿಕಾರಿ ಮೇಲಿನ ಅಧಿಕಾರಿಗೆ ‘ಮಾಮೂಲು’ ಕೊಡಬೇಕು, ಹಿರಿಯ ಅಧಿಕಾರಿ ಉನ್ನತ ಅಧಿಕಾರಿಗೆ ‘ಮಾಮೂಲು’ ಕೊಡಬೇಕು, ಉನ್ನತ ಅಧಿಕಾರಿ ಆಯಾ ಇಲಾಖೆಯ ಸಚಿವರಿಗೆ ಇಂತಿಷ್ಟು ‘ಮಾಮೂಲು’ ಕೊಡಬೇಕು ಎಂಬ ವ್ಯವಸ್ಥೆ ಸರಕಾರಿ ಯಂತ್ರದೊಳಗಿದೆ. ಈ ಮಾಮೂಲು ಅಲ್ಲದೆ ಗುತ್ತಿಗೆದಾರರು, ಮಧ್ಯವರ್ತಿಗಳಿಂದ ದೊಡ್ಡ ‘ಆದಾಯ’ ಅಧಿಕಾರಿಗಳು ಹಾಗೂ ರಾಜಕಾರಣಿಗಳೂ ಇರುತ್ತದೆ. ಕೆಲವು ಖಾತೆಗಳು ತಮಗೆ ಬೇಡ ಎಂದು ಸಚಿವರು ಪಟ್ಟು ಹಿಡಿದು ಕೂರುವುದೂ ಇದೇ ಕಾರಣಕ್ಕೆ. ಇಂಥದ್ದೇ ಇಲಾಖೆಯ ಇಂಥದ್ದೇ ಹುದ್ದೆಗೆ ಹೋಗಬೇಕೆಂದು ಅಧಿಕಾರಿಗಳು ಹಾಗೂ ಇಂಥದ್ಧೇ ಠಾಣೆಗೆ ಪೋಸ್ಟಿಂಗ್‌ ಆಗಬೇಕೆಂದು ಪೊಲೀಸರು ಹಣ ಚೆಲ್ಲುವುದೂ ದೊಡ್ಡ ‘ಆದಾಯ’ದ ಕಾರಣಕ್ಕಾಗಿಯೇ” ಎನ್ನುತ್ತಾರೆ ವಾಣಿಜ್ಯ ತೆರಿಗೆ ಇಲಾಖೆಯ ಹೆಸರು ಬಹಿರಂಗಪಡಿಸಲು ಇಚ್ಛಿಸದ ಗುಮಾಸ್ತರೊಬ್ಬರು.

“ವಾಣಿಜ್ಯ ತೆರಿಗೆ ಇಲಾಖೆಯೂ ಸೇರಿದಂತೆ ಹಣ ಹರಿದಾಡುವ ಯಾವುದೇ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರೆ ಬಹುತೇಕರು ದೋಚುವುದನ್ನೇ ಉದ್ಯೋಗವಾಗಿಸಿಕೊಳ್ಳುತ್ತಾರೆ. ದೊಡ್ಡ ಉದ್ಯಮಿಗಳು ಹಾಗೂ ಶ್ರೀಮಂತರಿಂದ ದೊಡ್ಡ ಮೊತ್ತವನ್ನು ಲಂಚವಾಗಿ ಪಡೆದರೆ ಜನಸಾಮಾನ್ಯರ ಸಣ್ಣ ಸಣ್ಣ ಕೆಲಸಕ್ಕೆ ನೂರೋ ಇನ್ನೂರೋ ಲಂಚ ಪಡೆಯುವುದು ಈಗ ಸಾಮಾನ್ಯ ಎನ್ನುವಂತಾಗಿದೆ. ಜನರಿಗೂ ಹಣ ಇಲ್ಲದೆ ಕೆಲಸ ಆಗುವುದಿಲ್ಲ ಎಂದು ಗೊತ್ತಿರುವುದರಿಂದ ಅಧಿಕಾರಿಗಳು ಕೇಳುವ ಮೊದಲೇ ಅವರಿಗೆ ಎಷ್ಟು ಕೊಡಬೇಕು ಎಂಬ ಬೇಡಿಕೆ ಮುಂದಿಡುತ್ತಾರೆ. ವ್ಯವಸ್ಥೆಯೇ ಹಾಳಾಗಿರುವಾಗ ಪ್ರಾಮಾಣಿಕ ಅಧಿಕಾರಿಗಳೇ ಸರಕಾರದೊಳಗೆ ಅನ್‌ಫಿಟ್‌ ಎನಿಸಿಕೊಳ್ಳುತ್ತಾರೆ” ಎಂದು ಬೇಸರಿಸುತ್ತಾರೆ ಅವರು.

ಎಸಿಬಿ, ಐಟಿ, ಜಾರಿ ನಿರ್ದೇಶನಾಲಯ, ಸಿಬಿಐ – ಹೀಗೆ ಯಾವುದೇ ತನಿಖಾ ಸಂಸ್ಥೆ ದಾಳಿ ನಡೆಸಿದರೂ ರಾಜಕಾರಣಿಗಳಂತೆ ಆಸ್ಪತ್ರೆಗೆ ದಾಖಲಾಗುವ ಪರಿಪಾಠವನ್ನು ಈಗ ಅಧಿಕಾರಿಗಳು ಬೆಳೆಸಿಕೊಂಡಿದ್ದಾರೆ. ಎಸಿಬಿ ದಾಳಿಯ ಬಳಿಕ ಟಿ.ಆರ್‌. ಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದರೆ, ಗೌಡಯ್ಯ ಎಲ್ಲಿದ್ದಾರೆ ಎಂಬ ಸುದ್ದಿಯಿಲ್ಲ. ಈ ನಡುವೆ ಮಂಗಳವಾರದಂದು (ಅ.9) ವಿಚಾರಣೆಗೆ ಹಾಜರಾಗುವವಂತೆ ಎಬಿಸಿ ಅಧಿಕಾರಿಗಳು ಇವರಿಬ್ಬರಿಗೂ ನೋಟಿಸ್‌ ನೀಡಿದ್ದಾರೆ. ಈ ಪ್ರಕರಣದಲ್ಲಿ ಈ ಇಬ್ಬರು ಅಧಿಕಾರಿಗಳಿಗೆ ಶಿಕ್ಷೆಯಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ, ಎಷ್ಟೇ ದಾಳಿಗಳು ನಡೆಯುತ್ತಿದ್ದರೂ ಭ್ರಷ್ಟಾಚಾರದ ಪ್ರಮಾಣ ಮಾತ್ರ ಕಡಿಮೆಯಾಗುತ್ತಿಲ್ಲದಿರುವುದು ದುರಂತ.