samachara
www.samachara.com
ರಾಘವೇಶ್ವರ ಭಾರತಿ ಸ್ವಾಮೀಜಿಯಿಂದ ‘ಹಠ ಸಂಭೋಗ’: ಸಿಐಡಿ ಆರೋಪಪಟ್ಟಿ ಹಾಗೂ ಪೀಠಕ್ಕಾಗಿ ಫೈಟ್‌!
ರಾಜ್ಯ

ರಾಘವೇಶ್ವರ ಭಾರತಿ ಸ್ವಾಮೀಜಿಯಿಂದ ‘ಹಠ ಸಂಭೋಗ’: ಸಿಐಡಿ ಆರೋಪಪಟ್ಟಿ ಹಾಗೂ ಪೀಠಕ್ಕಾಗಿ ಫೈಟ್‌!

ಗೋಕರ್ಣ ವಿಚಾರದಲ್ಲಿ ಸಮ್ಮಿಶ್ರ ಸರಕಾರ ‘ಹಿಂದೂ ವಿರೋಧಿ’ ಎಂದು ಬಿಂಬಿಸುವ ಪ್ರಯತ್ನಗಳೂ ನಡೆಯುತ್ತಿವೆ. ಹೀಗಿರುವಾಗಲೇ, ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ.

Team Samachara

ಚಾತುರ್ಮಾಸ ಮುಗಿಸಿ ಹೊಸನಗರ ಮೂಲದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ಹೊರ ಬಂದಿದ್ದಾರೆ. ಕೈತಪ್ಪಿ ಹೋಗಿರುವ ಗೋಕರ್ಣದ ಮಹಬಲೇಶ್ವರ ದೇವಸ್ಥಾನವನ್ನು ಪೀಠದ ಜತೆಗೆ ಉಳಿಸಿಕೊಳ್ಳಲು ಕಾನೂನು ಹೋರಾಟ ಆರಂಭಿಸಿದ್ದಾರೆ. ಹೆಚ್ಚು ಕಡಿಮೆಯಾದರೆ ಸಮ್ಮಿಶ್ರ ಸರಕಾರವನ್ನು ‘ಹಿಂದೂ ವಿರೋಧಿ’ ಎಂದು ಬಿಂಬಿಸುವ ಪ್ರಯತ್ನಗಳೂ ತೆರೆಮರೆಯಲ್ಲಿ ನಡೆಯುತ್ತಿವೆ. ಹೀಗಿರುವಾಗಲೇ, ‘ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ 15 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅದಕ್ಕೆ ಪೂರಕ ಸಾಕ್ಷಿಗಳು ಲಭ್ಯವಾಗಿವೆ’ ಎಂದು ಸಿಐಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.

ರಾಘವೇಶ್ವರ ಸ್ವಾಮಿಗೂ ಅತ್ಯಾಚಾರ ಆರೋಪ ಪ್ರಕರಣಗಳಿಗೆ ಹಳೆಯ ನಂಟಿದೆ. ಈ ಹಿಂದೆ ರಾಮಕಥಾ ಗಾಯಕಿಯೊಬ್ಬರ ಮೇಲೆ ನಾಲ್ಕು ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದವರು. ನಂತರ ಕೆಳಹಂತದ ನ್ಯಾಯಾಲಯದಲ್ಲಿ ಆರೋಪದಿಂದ ಖುಲಾಸೆಗೊಂಡಿದ್ದರು. ಪ್ರಕರಣವೀಗ ಹೈಕೋರ್ಟ್‌ನಲ್ಲಿದೆ. ಇದರ ನಡುವೆಯೇ 2015ರಲ್ಲಿ ಸ್ವಾಮೀಜಿ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಅದರ ದೋಷಾರೋಪ ಪಟ್ಟಿ ಈಗ ಸಾರ್ವಜನಿಕ ದಾಖಲೆಯಾಗಿದೆ. ಮೊದಲ ಅತ್ಯಾಚಾರ ಪ್ರಕರಣ ಹಾಗೂ ಅದರ ದಾಖಲೆಗಳ ಜತೆ ಈ ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿಯನ್ನು ಹೋಲಿಸಿದರೆ, ಸ್ವಾಮೀಜಿ ಗುರುತರವಾದ ಆರೋಪ ಎಂಬ ಭಾರವನ್ನು ಈ ಬಾರಿ ತುಸು ಹೆಚ್ಚೇ ಹೊತ್ತುಕೊಂಡಂತೆ ಕಾಣಿಸುತ್ತಿದೆ.

ಇದು ಸಿಐಡಿ ಚಾರ್ಜ್‌ಶೀಟ್‌:

ಕೆಲವು ದಿನಗಳ ಹಿಂದೆಯೇ ನ್ಯಾಯಾಲಯಕ್ಕೆ ಸಲ್ಲಿಯಾಗಿರುವ ಸುಮಾರು 200 ಪುಟಗಳಲ್ಲಿ ಇಬ್ಬರನ್ನು ಆರೋಪಿಗಳನ್ನಾಗಿಸಲಾಗಿದೆ. ಕವಿತಾ( ಹೆಸರು ಬದಲಿಸಲಾಗಿದೆ) ನೀಡಿದ ದೂರಿನ ಹಿನ್ನೆಲೆಯಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಐಪಿಸಿ ಸೆಕ್ಷನ್‌ 323 (ಸ್ವಯಂ ಪ್ರೇರಣೆಯಿಂದ ಹಾನಿಯನ್ನು ಉಂಟು ಮಾಡುವುದು), 376(2)(ಎಫ್‌)(ಐ)(ಎನ್) (16 ವರ್ಷದೊಳಗಿನ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು) ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸುವಂತೆ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದಕ್ಕೆ ತನ್ನ ಬಳಿ ಸೂಕ್ತ ಸಾಕ್ಷಾಧಾರಗಳು ಇವೆ ಎಂದು ಅದು ಹೇಳಿದೆ.

ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯ ಪ್ರತಿ
ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯ ಪ್ರತಿ

ಎರಡನೇ ಆರೋಪಿ ಕವಿತಾ ಪತಿ ಮಂಜುನಾಥ್ ಹೆಬ್ಬಾರ್ ಕೂಡ ತಪ್ಪಿತಸ್ಥ ಎಂದು ಸಿಐಡಿ ಹೇಳಿದೆ. ಅವರ ವಿರುದ್ಧ 498(ಎ) (ಮಹಿಳೆಯೊಬ್ಬರನ್ನು ಆತ್ಮಹತ್ಯೆ ಅಥವಾ ಗಂಭೀರ ಗಾಯಗೊಳಸುವಂತೆ ಪ್ರೇರೇಪಿಸುವುದು), 376 (ಅತ್ಯಾಚಾರ), 376(2)(ಎಫ್‌) (16 ವರ್ಷದೊಳಗಿನ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು) ಮತ್ತು 109 ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸುವಂತೆ ಕೋರಿದೆ. ಈ ಬಗೆಗೆ ನ್ಯಾಯಾಲಯದಲ್ಲಿ ವಾದ- ವಿವಾದಗಳು ಇನ್ನಷ್ಟೆ ಆರಂಭವಾಗಬೇಕಿದೆ. ದೂರು ನೀಡಿದ ಸಮಯದಲ್ಲಿ ದಾಖಲಿಸಿಕೊಂಡಿದ್ದ ಮೂರನೇ ಆರೋಪಿ, ವಕೀಲ ಅರುಣ್‌ ಶ್ಯಾಂ ಹೆಸರನ್ನು ಆರೋಪ ಸಾಬೀತಾಗದ ಕಾರಣ ದೋಷಾರೋಪ ಪಟ್ಟಿಯಿಂದ ಕೈ ಬಿಡಲಾಗಿದೆ.

ಮೂಲ ದೂರಿನಲ್ಲಿ ಏನಿತ್ತು?:

ಆಗಸ್ಟ್‌ 29, 2015ರಲ್ಲಿ ಕವಿತಾ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಗಿರಿನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. 'ನಾನು ಹೈಸ್ಕೂಲು ವಿದ್ಯಾಭ್ಯಾಸವನ್ನು ಸಾಗರ ತಾಲೂಕಿನ ಚದುರವಳ್ಳಿಯ ಶ್ರೀ ಭಾರತೀ ವಿದ್ಯಾನಿಕೇತನದಲ್ಲಿ ಆರಂಭಿಸಿದೆ. ಈ ಸಂದರ್ಭದಲ್ಲಿ ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿದ್ದ ವಿಶೇಷ ಕಾರ್ಯಕ್ರಮಗಳಿಗೆ, ಗುರುಗಳ ದರ್ಶನ ಮತ್ತು ಸೇವೆಗ ಹೋಗುತ್ತಿದ್ದೆ’ ಎಂದು ಮಠದ ಜತೆಗಿನ ಸಂಬಂಧವನ್ನು ವಿವರಿಸಿದ್ದರು.

‘ಈ ಸಂದರ್ಭದಲ್ಲಿ ಸ್ವಾಮೀಜಿಗಳು ವಿಶೇಷ ಕಾಳಜಿ ತೋರಿಸಿ ನನ್ನಲ್ಲಿ ಪ್ರೀತಿ ವಿಶ್ವಾಸದಿಂದ ಮಾತನಾಡುತ್ತಿದ್ದರು. ಹೀಗಿರುತ್ತಾ ನಾನು 9ನೇ ತರಗತಿ ಮುಗಿಸಿ 2006ರಲ್ಲಿ ನಾನು 10ನೇ ತರಗತಿ ಪ್ರಾರಂಭದಲ್ಲಿರುವಾಗ ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಚಾತುರ್ಮಾಸ ನಡೆಯುತ್ತಿತ್ತು. ಹೀಗೆ ಒಂದು ದಿನ ಸಂಜೆ ನನ್ನನ್ನು ಅವರ ಖಾಸಗಿ ಕೊಠಡಿಗೆ ಕರೆದು ಮೈ ಕೈ ಮುಟ್ಟಿ ಮಾತನಾಡಿಸಿದರು. “ಈಗ ನಾವು ಚಾತುರ್ಮಾಸ ವ್ರತದಲ್ಲಿದ್ದೇವೆ. ಎಲ್ಲವನ್ನೂ ಶ್ರೀರಾಮನ ಪ್ರೇರಣೆಯಿಂದಲೇ ಮಾಡುತ್ತಿದ್ದೇವೆ. ನಾವು ಎಲ್ಲವನ್ನೂ ಶ್ರೀರಾಮನ ಪ್ರೇರಣೆಯಿಂದಲೇ ಮಾಡುತ್ತೇವೆ. ಶ್ರೀರಾಮನ ಅವತಾರವೇ ಆಗಿರುತ್ತೇವೆ. ಶ್ರೀರಾಮನ ಪ್ರೇರಣೆಯಂತೆ ನಾವು ನಿನ್ನನ್ನು ಇಲ್ಲಿಗೆ ಕರೆದಿದ್ದೇವೆ. ನಿನ್ನ ಜಾತಕದಲ್ಲಿ ಕೆಲವು ದೋಷಗಳಿವೆ. ಅದನ್ನು ಪರಿಹಾರ ಮಾಡಲು ಶ್ರೀರಾಮನ ಪ್ರೇರಣೆಯಂತೆ ಏನು ಮಾಡಬೇಕೋ ನಾವು ಅದನ್ನು ಮಾಡುತ್ತೇವೆ,” ಎಂದು ಹೇಳಿ ತೊಡೆಯ ಮೇಲೆ ಕೂರಿಸಿಕೊಂಡರು. ಗಾಬರಿಯಾದರೂ ‘ಶ್ರೀರಾಮನ ಪ್ರೇರಣೆಯಿಂದ ಹೀಗೆ ಮಾಡುತ್ತಿದ್ದೇನೆ’ ಎಂದಿದ್ದರಿಂದ ನಾನು ಅವರನ್ನು ಸಂಪೂರ್ಣವಾಗಿ ನಂಬಿದೆ’ ಎಂದವರು ದೂರಿನಲ್ಲಿ ಹೇಳಿದ್ದರು.

ನನಗಾಗ 15 ವರ್ಷ ವಯಸ್ಸಾಗಿತ್ತು. “ಶ್ರೀರಾಮನ ಅನುಗ್ರಹದಿಂದ ಎಲ್ಲವೂ ಪರಿಹಾರವಾಗುತ್ತದೆ. ಅದಕ್ಕಾಗಿ ನಾವು ಏನು ಮಾಡಿದರೂ ವಿರೋಧ ವ್ಯಕ್ತಪಡಿಸಬೇಡ,” ಎಂದಿದ್ದರು. ಹೀಗೆ ನನ್ನ ಮುಗ್ಧತೆಯನ್ನು ಬಳಸಿಕೊಂಡು, ವಿವಸ್ತ್ರಳನ್ನಾಗಿ ಮಾಡಿ ತೊಡೆಯ ಮೇಲೆ ಎಳೆದುಕೊಂಡು ಎರಗಿ ಕಿರುಚದಂತೆ ಬಾಯಿ ಮೇಲೆ ಕೈಯಿಟ್ಟು ಸಂಭೋಗ ನಡೆಸಿದರು ಎಂದು ನಡೆದಿರುವುದನ್ನು ದೂರಿನಲ್ಲಿ ದಾಖಲಿಸುತ್ತಾ ಹೋಗಿದ್ದರು.

ಘಟನೆ ನಂತರ, “ಎಲ್ಲವೂ ಸರಿ ಹೋಗುತ್ತದೆ. ನೀನಿದನ್ನು ಯಾರಿಗೂ ಹೇಳಬೇಡ. ಯಾರಿಗಾದರೂ ತಿಳಿಸಿದರೆ ನಿನಗೆ ಒಳ್ಳೆಯದಾಗುವುದಿಲ್ಲ. ಶ್ರೀರಾಮನ ಶಾಪ ನಿನಗೆ ತಾಗುತ್ತದೆ,” ಎಂದು ಬಟ್ಟೆ ತೊಡಲು ಹೇಳಿ ಅವರೇ ಬಾಗಿಲು ತೆರೆದು ಕಳುಹಿಸಿದರು ಎಂದು ಆ ದಿನ ನಡೆದಿದ್ದನ್ನು ದೂರಿನಲ್ಲಿ ಉಲ್ಲೇಖಿಸಿದ್ದರು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತದ ನಂತರ ಗೊಕರ್ಣದ ಭದ್ರಕಾಳಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಾಂಗ ಮುಗುಸಿದ ಮೇಲೆ ಹದಿನೆಂಟು ವರ್ಷ ತುಂಬುತ್ತಿದ್ದಂತೆ ತಂದೆಯನ್ನು ಮಠಕ್ಕೆ ಕರೆಯಿಸಿ, “ನಿನ್ನ ಮಗಳ ವಿದ್ಯಾಭ್ಯಾಸವನ್ನು ಇದುವರೆಗೆ ಮಠವೇ ನೋಡಿಕೊಂಡಿದೆ. ಇನ್ನು ಮುಂದಿನ ವಿದ್ಯಾಭ್ಯಾಸವನ್ನೂ ನಾವೇ ನೋಡಿಕೊಳ್ಳುತ್ತೇವೆ. ಮಠದಿಂದಲೇ ಅವಳಿಗೆ ಗಂಡನ್ನು ನೋಡಿ ಮದುವೆ ಮಾಡಿಸುತ್ತೇವೆ. ನೀನವಳಿಗೆ ಮದುವೆ ಮಾಡಿಸಬೇಕು. ಖರ್ಚನ್ನೂ ನಾವೇ ನೋಡಿಕೊಳ್ಳುತ್ತೇವೆ,” ಎಂದಾಗ ತಂದೆ ಏನೂ ಪ್ರತಿಕ್ರಿಯೆ ನೀಡಲಿಲ್ಲ. ಈ ಸಂದರ್ಭ, “ಈ ಮಾತಿಗೆ ತಪ್ಪಿದರೆ ನಿನ್ನ ಕುಟುಂಬಕ್ಕೆ ಗುರುಶಾಪ ಬರುತ್ತದೆ,” ಎಂದು ಹೆದರಿಸಿದರು ಎಂಬ ಮಾಹಿತಿಯನ್ನು ಅವರು ದೂರಿನಲ್ಲಿ ತಿಳಿಸಿದ್ದರು.

ನಂತರ ಮೇ 27, 2009ರಂದು ಮದುವೆಯಾಗಿರುವುದನ್ನು ಆ ನಂತರ ಸ್ವಾಮೀಜಿ ಜತೆ ಸಂಬಂಧ ಹೊಂದಿದ್ದ ಕಾರಣಕ್ಕೆ ಸಂಸಾರದಲ್ಲಿ ಮನಸ್ತಾಪ ಬಂದಿದ್ದನ್ನೂ ಅವರು ದೂರಿನಲ್ಲಿ ಬರೆದಿದ್ದರು. ಬಳಿಕ ಈ ಸಂಸಾರದಲ್ಲಿ ಮನಸ್ತಾಪ ಬಂದ ಸಂಬಮಧ 2012ರ ಆಗಸ್ಟ್‌ನಲ್ಲಿ ಗಿರಿನಗರದಲ್ಲಿ ಚಾತುರ್ಮಾಸ ನಡೆಯುತ್ತಿದ್ದಾಗ ಗುರುಗಳು ತಂಗಿದ್ದ ಕೊಠಡಿಗೆ ಕರೆಯಿಸಿಕೊಂಡರು. ಆಗ ಮನದ ಇಚ್ಛೆ ಕೇಳದ ಮಾಡಿದ ಮದುವೆ ಬಗ್ಗೆ ಅವರಲ್ಲಿ ಪ್ರಸ್ತಾಪಿಸಿ ಕಣ್ಣೀರಿಟ್ಟೆ. ಆಗ ಪುನಃ ಜಾತಕದಲ್ಲಿ ದೋಷವಿದೆ ಎಂದು ಹೇಳಿ ಮುದ್ದಾಡುವ ಪ್ರಯತ್ನ ಮಾಡಿದರು. ವಿರೋಧಿಸಿದಾಗ ಕಾಲಿಗೆ ಗಟ್ಟಿಯಾಗಿ ಒದ್ದು ನಾನು ಉಟ್ಟಿದ್ದ ಬಟ್ಟೆ ಎಳೆದು ಹೆದರಿಸಿ ಬಲ್ಕಾತರವಾಗಿ ಸಂಭೋಗ ಮಾಡಿದರು ಎಂದು ದೂರಿದ್ದಾರೆ. ಇದು ಎರಡನೇ ಬಾರಿ ನಡೆದ ಅತ್ಯಾಚಾರ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ನಂತರ “ನಿನಗೆ ಈಗ ಮದುವೆಯಾಗಿದೆ. ನಾವು ಕರೆದಾಗಲೆಲ್ಲಾ ಬರುತ್ತಿರಬೇಕು,” ಎಂದು ಹೇಳಿದರು. ಈ ಸಂದರ್ಭದಲ್ಲಿ ಸ್ವಾಮೀಜಿ ಸರಿಯಿಲ್ಲ ಎಂದು ಗಂಡ ಮಂಜುನಾಥ ಹೆಬ್ಬಾರ್‌ ಜತೆ ಹೇಳಿದಾಗ, “ಗುರುಗಳು ಕರೆದಾಗ ನೀನು ಅವರಲ್ಲಿಗೆ ಹೋಗಬೇಕು. ಅವರು ಏನು ಮಾಡಿದರೂ ಸಹಕರಿಸಬೇಕು,” ಎಂದು ಅವರೇ ಸೂಚಿಸಿದಾಗ ಆಘಾತಕ್ಕೆ ಒಳಗಾದೆ ಎಂದು ವಿವರಿಸಿದ್ದಾರೆ.

ಮುಂದೆ ‘ರಾಮಕಥಾ’ ಗಾಯಕಿಯ ಅತ್ಯಾಚಾರ ಪ್ರಕರಣ ಹೊರ ಬಿದ್ದ ನಂತರ ತನ್ನನ್ನು ಅಪಹರಿಸಿದ್ದನ್ನೂ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ “ತಮ್ಮ ಪರವಾಗಿ ಸಾಕ್ಷ್ಯ ಹೇಳಬೇಕು ಇಲ್ಲದಿದ್ದಲ್ಲಿ ನಿನ್ನನ್ನು ಮತ್ತು ನಿನ್ನ ತಂದೆ ತಾಯಿಯರನ್ನು ಮುಗಿಸಿ ಹಾಕುತ್ತೇವೆ,” ಎಂದು ಸ್ವತಃ ರಾಘವೇಶ್ವರ ಸ್ವಾಮೀಜಿ ಬೆದರಿಕೆ ಹಾಕಿದರು ಎಂದು ತಿಳಿಸಿದ್ದಾರೆ. ಮುಂದೆಯೂ ಈ ಪ್ರಕರಣದ ವಿಚಾರಣೆ ವೇಳೆ ಬೆದರಿಕೆಯ ಕರೆ ಮೆಸೇಜುಗಳು ಬರುತ್ತಿದ್ದುದನ್ನು ಅದನ್ನು ಸಿಐಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದನ್ನು ಅವರು ದೂರಿನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ದೂರಿನ ತನಿಖೆ ನಡೆದಿದ್ದು ಹೇಗೆ?:

ಈ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಸಲ್ಲಿಸುವ ವೇಳೆ ಮೂರು ರೀತಿಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿರುವುದನ್ನು ಅದರಲ್ಲಿ ತಿಳಿಸಿದ್ದಾರೆ. ಮೊದಲನೆಯದಾಗಿ ದೂರುದಾರೆಯ ದೈಹಿಕ ಗುರುತುಗಳ ಸಾಕ್ಷ್ಯಗಳನ್ನು ವೈದ್ಯರು ಸಂಗ್ರಹಿಸಿದ್ದರೆ, ಎರಡನೆಯದಾಗಿ ಆಕೆ ನೀಡಿದ ಮೊಬೈಲ್‌ ಮತ್ತು ಪಿವಿ ಹೆಗಡೆ ಎಂಬವರು ನೀಡಿದ ಮೆಮೊರಿ ಕಾರ್ಡ್‌ ಪೊಲೀಸ್‌ ವಶದಲ್ಲಿದೆ ಎಂಬುದನ್ನು ಉಲ್ಲೇಖಿಸಲಾಗಿದೆ.

ಇದಲ್ಲದೆ ಈ ಚಾರ್ಜ್‌ಶೀಟ್‌ ಸಲ್ಲಿಕೆ ವೇಳೆ 18 ಜನರ ಸಾಕ್ಷ್ಯಗಳನ್ನು ಪಡೆದುಕೊಳ್ಳಲಾಗಿದೆ. ಇವರ ಹೇಳಿಕೆಗಳನ್ನು ಪಡೆದುಕೊಂಡಿರುವ ಸಿಐಡಿ ಅಧಿಕಾರಿಗಳು 10ನೇ ತರಗತಿಯಲ್ಲಿದ್ದಾಗ ಆರೋಗ್ಯದಲ್ಲಿ ಏರುಪೇರು ಆಗಿರುವುದನ್ನು ಸ್ವಾಮೀಜಿಯವರಿಗೆ ತಿಳಿಸಲು ದೂರುದಾರೆ ಬಂದಿರುವುದು ಹಾಗೂ ಅಪ್ರಾಪ್ತೆಯಾಗಿದ್ದ ಆಕೆಯ ಮೇಲೆ ಹಠ ಸಂಭೋಗ ಮಾಡಿರುವುದು ತನಿಖೆ ವೇಳೆ ತಿಳಿದು ಬಂದಿರುವುದಾಗಿ ಹೇಳಿದ್ದಾರೆ.

ನಂತರ ಮಠದ ಪರಿವಾರ ಸದಸ್ಯ ಸ್ವಾಮೀಜಿಯ ಶಿಷ್ಯ ಮಂಜುನಾಥ್‌ ಹೆಬ್ಬಾರ್‌ ಜತೆ ಮದುವೆ ಮಾಡಿಸಿದ್ದಾರೆ. ಅದಾದ ಬಳಿಕ ಸಂಸಾರದಲ್ಲಿ ಮನಸ್ತಾಪ ಬಂದಿದ್ದು, ವಿಚ್ಛೇದನ ಪಡೆದುಕೊಳ್ಳಲು ಆಕೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂದರ್ಭದಲ್ಲಿ ಬುದ್ದಿವಾದ ಹೇಳಲು ಕರೆಸಿಕೊಂಡು ಗಿರಿನಗರ ಮಠದಲ್ಲಿ ಹಠ ಸಂಭೋಗ ಮಾಡಿರುವುದು ತನಿಖೆಯಿಂದ ದೃಢ ಪಟ್ಟ ಮೇರೆಗೆ ರಾಘವೇಶ್ವರ ಸ್ವಾಮೀಜಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುತ್ತಿರುವುದಾಗಿ ಸಿಐಡಿ ಅಧಿಕಾರಿಗಳು ವಿವರಿಸಿದ್ದಾರೆ.

ಇದರ ಜತೆಗೆ ಮದುವೆಯಾಗಿ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದುದಲ್ಲದೆ ಮಠಕ್ಕೆ ಹೋಗಿ ಹಣ ಪಡೆದು ತರುವಂತೆ ಜತೆಗೆ ಸ್ವಾಮೀಜಿ ಜತೆ ಸಹಕರಿಸುವಂತೆ ಒತ್ತಾಯ ಮಾಡಿ ಪತ್ನಿಗೆ ಮಂಜುನಾಥ ಹೆಬ್ಬಾರ್‌ ತೊಂದರೆ ಕೊಟ್ಟಿರುವುದು ತನಿಖೆಯಿಂದ ದೃಡಪಟ್ಟಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.

ರಾಘವೇಶ್ವರ ಭಾರತಿ ಸ್ವಾಮೀಜಿ
ರಾಘವೇಶ್ವರ ಭಾರತಿ ಸ್ವಾಮೀಜಿ

ಪೀಠಕ್ಕಾಗಿ ಫೈಟ್‌:

ತನಿಖಾ ಸಂಸ್ಥೆಯೊಂದು ನ್ಯಾಯಾಲಯದಲ್ಲಿ ಅತ್ಯಾಚಾರ ಪ್ರಕರಣ ನಡೆದಿದೆ ಎಂದು ಹೇಳಿದೆ. ಆದರೆ ಮಠ ಅಥವಾ ಪೀಠ ಇದನ್ನು ಬೇರೆಯದೇ ಆಯಾಮದಲ್ಲಿ ನೋಡುತ್ತಿದೆ. “ಇಲ್ಲಿ ಅತ್ಯಾಚಾರದಂತಹ ಘಟನೆಯೇ ನಡೆದಿಲ್ಲ. ಕೆಲವು ಹಿತಾಸಕ್ತಿಗಳು ಪೀಠವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವ ಸಲುವಾಗಿ ಸುಳ್ಳು ಆರೋಪಗಳನ್ನು ಸೃಷ್ಟಿಸಿದ್ದಾರೆ. ಅದಕ್ಕಾಗಿ ಪೂರಕ ಸಾಕ್ಷಿಗಳನ್ನು ತಯಾರು ಮಾಡಿಕೊಂಡಿದೆ. ಹೀಗಾಗಿ ಸಿಐಡಿ ಕೂಡ ಇಷ್ಟು ಸುದೀರ್ಘ ಸಮಯ ತೆಗೆದುಕೊಂಡು ತನಿಖೆಯ ನೆಪ ಮುಂದಿಟ್ಟಿದೆ,’’ ಎನ್ನುತ್ತಾರೆ ವಕೀಲರೂ ಆಗಿರುವ ಮಠದ ವಕ್ತಾರ ಪ್ರಸನ್ನ ಮಾವಿನಕುಳಿ.

“ಪೀಠ ಯಾರ ಸ್ವತ್ತೂ ಅಲ್ಲ. ಇದು ಜನರಿಗೆ ಸೇರಿದ್ದು ಎಂದು ಸ್ವಾಮಿಗಳು ಮುಂಚಿನಿಂದ ಹೇಳಿಕೊಂಡು ಬಂದಿದ್ದಾರೆ. ಹಾಗೆಯೇ ನಡೆದುಕೊಳ್ಳುತ್ತಿದ್ದಾರೆ. ಇದು ಕೆಲವು ಹಿತಾಸಕ್ತಿಗಳಿಗೆ ಸಮಸ್ಯೆಯಾಗಿದೆ. ಹೀಗಾಗಿ ಸ್ವಾಮಿಗಳನ್ನು ಕೆಳಗೆ ಇಳಿಸಿ ಪೀಠವನ್ನು ಹತೋಟಿಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಇದನ್ನು ಮಠ ಮತ್ತು ಸಮುದಾಯ ಸಮರ್ಥವಾಗಿ ಎದುರಿಸಲಿದೆ. ಮೊದಲ ಅತ್ಯಾಚಾರ ಪ್ರಕರಣದಲ್ಲಿಯೂ ಇಂತಹದ್ದೇ ಕುತಂತ್ರಗಳು ನಡೆಸಿದ್ದನ್ನು ನೀವು ಗಮನಿಸಬೇಕು,’’ ಎನ್ನುತ್ತಾರೆ ಪ್ರಸನ್ನ.

ರಾಮಚಂದ್ರಾಪುರ ಮಠ ಪ್ರವರ್ಧಮಾನಕ್ಕೆ ಬಂದಿದ್ದೇ ಗೋ ರಕ್ಷಣೆ ವಿಚಾರದಲ್ಲಿ. ಜತೆಗೆ, ರಾಮ ಮಂದಿರದ ಮೊದಲ ಫಸಲು ಬೆಳೆದು ಬಂದ ಸಮಯದಲ್ಲಿ ರಾಮೋತ್ಸವದಂತಹ ಕಾರ್ಯಕ್ರಮಗಳ ಮೂಲಕ ತಮ್ಮ ವ್ಯಾಪ್ತಿಯನ್ನು ವಿಸ್ತಾರ ಮಾಡಿಕೊಂಡವರು ರಾಘವೇಶ್ವರ ಸ್ವಾಮೀಜಿ. ಇವತ್ತು ಅವರು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಹಿಂದೆ ಬಿದ್ದಿದ್ದಾರೆ. ಹೀಗಿರುವಾಗಲೇ ಅವರ ಮೇಲೆ 15 ವರ್ಷದ ಶಾಲಾ ಬಾಲಕಿ ಮೇಲೆ ಅತ್ಯಾಚಾರದ ಆರೋಪ ಪ್ರಬಲವಾಗಿ ಕೇಳಿಬಂದಿದೆ. ನ್ಯಾಯಾಲಯ ತೀರ್ಪು ಮಾತ್ರವೇ ಭವಿಷ್ಯವನ್ನು ಹೇಳಲು ಸಾಧ್ಯವಿದೆ. ಅದಕ್ಕಾಗಿ ಪ್ರಕರಣದ ತ್ವರಿತ ವಿಚಾರಣೆಯ ಅಗತ್ಯವಿದೆ.