ಕೊಡಗಿನ ತಾಯಂದಿರ ಪರವಾಗಿ ಧರ್ಮಾಧಿಕಾರಿ ಹೆಗ್ಗಡೆಯವರಿಗೊಂದು ಬಹಿರಂಗ ಪತ್ರ...
ರಾಜ್ಯ

ಕೊಡಗಿನ ತಾಯಂದಿರ ಪರವಾಗಿ ಧರ್ಮಾಧಿಕಾರಿ ಹೆಗ್ಗಡೆಯವರಿಗೊಂದು ಬಹಿರಂಗ ಪತ್ರ...

ಕೊಡಗು ಜಿಲ್ಲೆಯ ತಾಯಂದಿರು ಸ್ವಸಹಾಯ ಗುಂಪುಗಳ ಹೆಸರಿನಲ್ಲಿ ಮಾಡಿರುವ ಕನಿಷ್ಟ ಒಂದು ವರ್ಷದ ಸಾಲ ಮನ್ನಾ ಮಾಡಿ. ಜನ ಪ್ರಾಮಾಣಿಕ ತುಡಿತ ಹೊಂದಿರುವ ನಿಮ್ಮಂತಹ ಒಂದು ಸಂಸ್ಥೆಯಿಂದ ಇಷ್ಟನ್ನಷ್ಟೆ ನಿರೀಕ್ಷೆ ಮಾಡುತ್ತಿದ್ದಾರೆ.

ಮಾನ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರೇ...

ಕೊಡಗು ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆ ವಿಕೋಪವನ್ನು ಸೃಷ್ಟಿಸಿರುವುದು ನಿಮಗೆ ತಿಳಿದೇ ಇದೆ. ಇಲ್ಲಿನ ತಳ ಮಟ್ಟದ ಪರಿಸ್ಥಿಯ ಮಾಹಿತಿಗಳನ್ನು ಪಡೆದುಕೊಳ್ಳಲು ತಾವು ತಂಡವೊಂದನ್ನು ಕೊಡಗಿಗೆ ಕಳುಹಿಸಿದ್ದಿರಿ. ನೀವು ಅಧ್ಯಕ್ಷರಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ)ಯ ತಜ್ಞರ ತಂಡ ಅದು. ವಿಕೋಪ ಪೀಡಿತ ಕೊಡಗಿಗೆ ಭೇಟಿ ನೀಡಿ ಪರಿವೀಕ್ಷಣೆಯನ್ನು ನಡೆಸಿತ್ತು. ಕ್ಷೇತ್ರದ ಎಲ್ಲಾ ವಿಚಾರಗಳಲ್ಲೂ ಖುದ್ದು ಆಸ್ಥೆ ವಹಿಸಿ ಮೇಲ್ವಿಚಾರಣೆ ನಡೆಸುವ ನೀವು, ಅವರು ನೀಡಿದ ಮಾಹಿತಿಗಳ ಬಗ್ಗೆ ಕಣ್ಣಾಡಿಸದೇ ಇರಲು ಸಾಧ್ಯವೇ ಇಲ್ಲ ಎಂದು ಅಂದುಕೊಂಡಿದ್ದೇವೆ. ಹೀಗಾಗಿ ಕೊಡಗಿನಲ್ಲಿ ನಡೆದ ದುರಂತದ ವಸ್ತುಸ್ಥಿತಿ ನಿಮ್ಮ ಗಮನದಲ್ಲಿದೆ ಎಂಬ ನಂಬಿಕೆ ಇದೆ.

ಸದ್ಯ, ಕೊಡಗಿನ ಹಲವು ಜನ ನಿರಾಶ್ರಿತರಾಗಿ ಇನ್ನೂ ಪರಿಹಾರ ಕೇಂದ್ರಗಳಲ್ಲೇ ದಿನ ಕಳೆಯುತ್ತಿದ್ದಾರೆ. ಅವರಿಗೆ ಇರಲೊಂದು ಸೂರಿಲ್ಲ. ಹಲವರ ಮನೆ ಉಳಿದುಕೊಂಡಿದ್ದರೂ, ತೋಟಗಳು ಭೂ ಕುಸಿತದಲ್ಲಿ ಕೊಚ್ಚಿ ಹೋಗಿದೆ. ಇನ್ನು ಕೆಲವರು ಎಸ್ಟೇಟ್‌ ಮಾಲಿಕರಲ್ಲಿ ಕೂಲಿಯಾಳುಗಳಾಗಿದ್ದವರು. ಅವರ ಮಾಲಿಕರೇ ನಿರಾಶ್ರಿತರಾದಾಗ ಕೆಲಸ ಕೊಡುವವರಿಲ್ಲ. ದುಡಿಮೆ ಇಲ್ಲದೆ ಕೈಯಲ್ಲಿ ಹಣವೂ ಇಲ್ಲ. ಅಕ್ಷರಶಃ ಸಾವಿರಾರು ಜನರು ದಾರಿ ಕಾಣದಾಗಿದ್ದಾರೆ.

ಕೊಡಗಿನಲ್ಲಿ ಎಸ್‌ಕೆಡಿಆರ್‌ಡಿಪಿಯ ತಜ್ಞರ ತಂಡ
ಕೊಡಗಿನಲ್ಲಿ ಎಸ್‌ಕೆಡಿಆರ್‌ಡಿಪಿಯ ತಜ್ಞರ ತಂಡ

ಇದೇ ಸಾವಿರಾರು ಜನರಲ್ಲಿ ಹಲವರು ಮನೆ ಕಟ್ಟಲು, ಮಕ್ಕಳ ವಿದ್ಯಾಭ್ಯಾಸಕ್ಕೆ, ಮಗಳ ಮದುವೆಗೆ, ಕೃಷಿ ಚಟುವಟಿಕೆಗೆಯಂತಹ ಯಾವುದೋ ಅಗತ್ಯ ಸಂದರ್ಭದಲ್ಲಿ ನೀವು ಅಧ್ಯಕ್ಷರಾಗಿರುವ ಎಸ್‌ಕೆಡಿಆರ್‌ಡಿಪಿ ನೇತೃತ್ವದ ಸ್ವಸಹಾಯ ಸಂಘಗಳಿಂದ ಈ ಹಿಂದೆ ಸಾಲ ಪಡೆದುಕೊಂಡಿದ್ದರು. ಇದೇ ರೀತಿ ಜನರು ಬೇರೆ ಬೇರೆ ಮೈಕ್ರೋಫೈನಾನ್ಸ್‌ಗಳಿಂದ ಸಾಲ ಪಡೆದಿರುವರಾದರೂ ತಳಮಟ್ಟದ ಮಾಹಿತಿಗಳ ಪ್ರಕಾರ ಅದರಲ್ಲಿ ನಿಮ್ಮ ಸಂಸ್ಥೆಗಳದ್ದೇ ಸಿಂಹಪಾಲಿದೆ.

ಶೇಕಡಾ 100ರಷ್ಟು ಸಾಲ ಮರು ಪಾವತಿಯ ಇತಿಹಾಸ ನಿಮ್ಮ ಸಂಘಗಳದ್ದು ಎಂದು ನೀವು ಆಗಾಗ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುತ್ತೀರಿ. ಅಂದರೆ ಇದೇ ಜನ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಸಾಲ ಕಟ್ಟಿಕೊಂಡು ಬಂದವರು ಎಂಬುದು ಗೊತ್ತಾಗುತ್ತದೆ. ಈಗ ಅವರ ಬಳಿ ದುಡಿಮೆ ಇಲ್ಲ. ಸಾಲ ಕಟ್ಟಲು ಅವರಿಂದ ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ ಬಡ್ಡಿ ಜತೆಗೆ ನಿಮ್ಮ ‘ಬಿಸಿನೆಸ್‌ ಕರೆಸ್ಪಾಂಡೆನ್ಸ್‌’ ಕಮಿಷನ್‌ ಹಣವೂ ಸೇರಿ ಅವರ ಈ ಬಾಕಿ ಸಾಲ ದಿನ ದಿನವೂ ಬೆಳೆಯುತ್ತಲೇ ಇದೆ. ಈ ಕಾರಣಕ್ಕೆ ‘ನಮ್ಮ ಒಂದು ವರ್ಷದ ಸಾಲ ಮನ್ನಾ ಮಾಡಿ’ ಎಂದು ಈ ಮಹಿಳೆಯರು ನಿಮಗೆ ಮನವಿ ಪತ್ರವನ್ನೂ ಸಲ್ಲಿದ್ದರಂತೆ. ಆದರೆ ಅದಕ್ಕೆ ಉತ್ತರ ಬರದ ಹಿನ್ನೆಲೆಯಲ್ಲಿ ಅವರುಗಳು ಸ್ವಲ್ಪ ಬೇಸರಗೊಂಡಿದ್ದರು. ಇದೇ ಆಕ್ರೋಶದಲ್ಲಿ ‘ನಮ್ಮಿಂದ ಸಾಲ ಕಟ್ಟಲು ಸಾಧ್ಯವಿಲ್ಲ’ ಏನಾದರೂ ಮಾಡಿಕೊಳ್ಳಿ ಎಂದು ಕಣ್ಣೀರು ಹಾಕುತ್ತಲೇ ಹೇಳಿದ್ದರು.

‘ಸಮಾಚಾರ’ ಗುರುವಾರ ಅದರ ವಿಡಿಯೋ ಸಹಿತ ಅಲ್ಲಿನ ಪರಿಸ್ಥಿತಿಯನ್ನು ನಿಮ್ಮ ಗಮನಕ್ಕೆ ತಂದಿತ್ತು. ಆ ಸ್ಟೋರಿಯನ್ನು ನೀವು ನೋಡಿದ್ದೀರಿ ಎಂದು ಭಾವಿಸುತ್ತೇವೆ. ಅದರಲ್ಲಿ ನಿಮ್ಮ ಸಂಸ್ಥೆಯ ನಿರ್ದೇಶಕರಾದ ಎಲ್. ಎಚ್. ಮಂಜುನಾಥ್‌ ಪ್ರತಿಕ್ರಿಯೆಯೂ ಇದೆ. ‘ನಮಗೂ ಸಾಲ ಪಡೆದವರಿಗೂ ನೇರ ಸಂಬಂಧ ಇಲ್ಲ’ ಎಂಬ ತಾಂತ್ರಿಕ ಕಾರಣವನ್ನು ಅವರು ಮುಂದಿಟ್ಟಿದ್ದರು. ಅದು ನಿಜ ಎಂಬ ಅರಿವು ನಮಗಿದೆ. ಆದರೆ ಈ ಮಾತುಗಳನ್ನು ಕೇವಲ ಕಮಿಷನ್‌ ಪಡೆಯಲು ಇರುವ ಏಜೆಂಟರುಗಳು ಮಾತನಾಡಿದರೆ ಒಪ್ಪಿಕೊಳ್ಳಬಹುದಿತ್ತು. ಆದರೆ ನೀವು ಅಷ್ಟೆ ಅಲ್ಲ ಎಂಬ ಭಾವನೆ ಜನರಲ್ಲಿದೆ.

ಸಮಾಜದ ಎಲ್ಲಾ ಜಾತಿ ವರ್ಗಗಳ ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು, ಸಮ ಸಮಾಜ ನಿರ್ಮಾಣವಾಗಬೇಕು ಎಂಬ ದೂರದೃಷ್ಟಿಯ ಕನಸು ಕಂಡು ಸ್ವಸಹಾಯ ಸಂಘಗಳ ಪರಿಕಲ್ಪನೆಯನ್ನು ಧರ್ಮಸ್ಥಳದಂಥ ಅಂದಿನ ಕಾಲದ ಕುಗ್ರಾಮದಲ್ಲಿ ಆರಂಭಿಸಿದವರು ನೀವು. ಆ ಮಾದರಿ ರಾಜ್ಯವೂ ಅಲ್ಲದೆ ಬೇರೆ ಬೇರೆ ರಾಜ್ಯಗಳಿಗೂ ಇಂದು ಹಬ್ಬಿಕೊಂಡಿದೆ. ಪರಿಣಾಮ ನಿಮ್ಮ ಸಂಸ್ಥೆಯ ಮೈಕ್ರೋಫೈನಾನ್ಸ್‌ ವಹಿವಾಟು 30 ಸಾವಿರ ಕೋಟಿ ದಾಟಿದೆ ಎಂದು ಹಿಂದೊಮ್ಮೆ ನಿಮ್ಮ ನಿರ್ದೇಶಕರೇ ನಮಗೆ ಹೇಳಿದ್ದರು.

ಎಸ್‌ಕೆಡಿಆರ್‌ಡಿಪಿಯ 2012-13ರ ಬ್ಯಾಲೆನ್ಸ್‌ ಶೀಟ್‌
ಎಸ್‌ಕೆಡಿಆರ್‌ಡಿಪಿಯ 2012-13ರ ಬ್ಯಾಲೆನ್ಸ್‌ ಶೀಟ್‌

ಹೀಗಿರುವಾಗ, ಕೊಡಗಿನ ಮಹಿಳೆಯರು ಹೇಳಿದಂತೆ ಸಾಲ ಮನ್ನಾ ಮಾಡಿದರೆ ವೀರೇಂದ್ರ ಹೆಗ್ಗಡೆಯವರಿಗೆ ಏನು ತಾನೆ ಕಡಿಮೆಯಾಗುತ್ತಿತ್ತು ಎಂಬುದು ಉತ್ಪ್ರೇಕ್ಷೆಯ ಮಾತಲ್ಲ. ನೀವು, ನಿಮ್ಮ ಸಂಸ್ಥೆಗಳು ತಕ್ಕಮಟ್ಟಿಗೆ ಅನುಕೂಲವಾಗಿಯೂ ಇವೆ. 2009-10 ರಲ್ಲಿ ನೀವು ಧರ್ಮಾಧಿಕಾರಿಯಾಗಿರುವ ದೇವಸ್ಥಾನದ ಆದಾಯ 127.75 ಕೋಟಿ ರೂಪಾಯಿ ಎಂದು ನೀವೇ ಹೇಳಿದ್ದೀರಿ. ನೀವು ಅದನ್ನು ನಿಮ್ಮ ಮನೆ ದೇವರು ಎಂದು ಹೊರಗೆ ಹೇಳಿಕೊಂಡರೂ ‘ದಿ ಇನ್ಸ್‌ಟ್ಯೂಷನ್‌ ಅಟ್ ಧರ್ಮಸ್ಥಳ’ ಹೆಸರಿನಲ್ಲಿ ಅದಕ್ಕೆ ತೆರಿಗೆ ವಿನಾಯಿತಿ ಪಡೆದುಕೊಳ್ಳುತ್ತಾ ಬಂದಿದ್ದೀರಿ. ಹಾಗಾಗಿ ಇದು ಜನರ ದುಡ್ಡೇ ಆಗಿರುತ್ತದೆ. ಇನ್ನು 2009-10ರ ವೇಳೆ ಸುಬ್ರಮಣ್ಯ ದೇವಸ್ಥಾನದ ಆದಾಯ 33.75 ಕೋಟಿ ರೂಪಾಯಿ ಇದ್ದಿದ್ದು, ಇವತ್ತಿಗೆ 96 ಕೋಟಿ ರೂಪಾಯಿ ಆಗಿದೆ. 2009ರ ನಂತರವೇ ನೀವು ವಿಶೇಷ ದರ್ಶನವನ್ನೂ ಆರಂಭಿಸಿ ಭಕ್ತಾದಿಗಳ ದರ್ಶನಕ್ಕೆ ಒಂದಷ್ಟು ಹಣವನ್ನೂ ಸಂಗ್ರಹಿಸುತ್ತಿದ್ದೀರಿ. ಹಾಗಿರುವಾಗ ನಿಮ್ಮ ದೇವಸ್ಥಾನದ ಆದಾಯವೂ ಮೂರು ಪಟ್ಟು ಹೆಚ್ಚಾಗಿರಬಹುದು ಎಂಬುದು ನಮ್ಮ ಸರಳ ಲೆಕ್ಕಾಚಾರ. ತಪ್ಪಾಗಿದ್ದರೆ ಕ್ಷಮಿಸಿ.

ಜತೆಗೆ ಮೈಕ್ರೋಫೈನಾನ್ಸ್‌ಗಳ ಮೇಲುಸ್ತುವಾರಿ ನೋಡಿಕೊಳ್ಳುವ ಎಸ್‌ಕೆಡಿಆರ್‌ಡಿಪಿ 2012-13ನೇ ಆರ್ಥಿಕ ವರ್ಷದಲ್ಲೇ 46.19 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿತ್ತು. ಅದರ ಹಿಂದಿನ ವರ್ಷವೂ 43.63 ಕೋಟಿ ಲಾಭವನ್ನು ಇದು ಪಡೆದುಕೊಂಡಿತ್ತು. ಹೀಗೆ 2013ರ ಮಾರ್ಚ್‌ 31ರ ಅಂತ್ಯಕ್ಕೆ ಎಸ್‌ಕೆಡಿಆರ್‌ಡಿಪಿ ಬಳಿ 89.83 ಕೋಟಿ ರೂಪಾಯಿ ಲಾಭದ ಹಣ ಉಳಿಕೆಯಾಗಿತ್ತು. ಹೀಗಿರುವಾಗ ಮೂರು ತಾಲೂಕುಗಳನ್ನು ಒಳಗೊಂಡಿರುವ 5 ಲಕ್ಷ ಆಸುಪಾಸಿನ ಜನರಿರುವ ಸಣ್ಣ ಜಿಲ್ಲೆಯ ಸಂಘಗಳ ಒಂದು ವರ್ಷದ ಸಾಲವನ್ನು ಮನ್ನಾ ಮಾಡುವುದು ನಿಮಗೆ ಹೆಚ್ಚಿನ ಹೊರೆಯಾಗದು ಎಂದುಕೊಂಡಿದ್ದೇವೆ.

ಹೆಗ್ಗಡೆಯವರೇ, ಸುಂಕದವರ ಮುಂದೆ ಕಷ್ಟ ಹೇಳಿಕೊಳ್ಳಬಾರದು ಎಂಬ ಗಾದೆ ಮಾತೊಂದಿದೆ. ಆದರೆ ನೀವು ಸುಂಕದವರಲ್ಲ. ಜನ ನಿಮ್ಮನ್ನು ‘ನಡೆದಾಡುವ ದೇವರು’ ಅಂತ ಕರೆಯುತ್ತಾರೆ. ನಿಮ್ಮ ಒಂದು ಭಾವಚಿತ್ರವನ್ನು ದೇವರ ಚಿತ್ರಗಳಿಗೆ ಸರಿಸಮವಾಗಿ ಮನೆಗಳಲ್ಲಿ ಹಾಕಿಕೊಂಡಿದ್ದಾರೆ. ಇಂತಹ ಸಮಯದಲ್ಲಿ, ಕೊಡಗು ಜಿಲ್ಲೆಯ ತಾಯಂದಿರು ಸ್ವಸಹಾಯ ಗುಂಪುಗಳ ಹೆಸರಿನಲ್ಲಿ ಮಾಡಿರುವ ಕನಿಷ್ಟ ಒಂದು ವರ್ಷದ ಸಾಲ ಮನ್ನಾ ಮಾಡಿ. ನೀವು ಕೇವಲ ವ್ಯಕ್ತಿಯಲ್ಲ; ಒಂದು ವ್ಯವಸ್ಥೆ. ಜನ ಪ್ರಾಮಾಣಿಕ ತುಡಿತ ಹೊಂದಿರುವ ನಿಮ್ಮಂತಹ ಒಂದು ಸಂಸ್ಥೆಯಿಂದ ಇಷ್ಟನ್ನಷ್ಟೆ ನಿರೀಕ್ಷೆ ಮಾಡುತ್ತಿದ್ದಾರೆ.

ಧನ್ಯವಾದಗಳು.